Friday, 13th December 2024

ಧ್ಯಾನದಿಂದ ಆಧ್ಯಾತ್ಮಿಕ ಆರೋಗ್ಯ ಸಿದ್ದಿ

ಸ್ವಾಸ್ಥ್ಯ ಸಂಪದ

yoganna55@gmail.com

ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ವಿಕಾಸವಾಗಿರುವ ದೇಹ, ಆತ್ಮ ಮತ್ತು ಮನಸ್ಸುಗಳನ್ನುಳ್ಳ ಮನುಷ್ಯನನ್ನು ಸೃಷ್ಟಿಸಿದ ಸೃಷ್ಟಿಕರ್ತ, ಅವನ ಮಿದುಳು ಮತ್ತು ಆತ್ಮದಲ್ಲಿ ಸೃಷ್ಟಿಯ ಎಲ್ಲ ವೈಜ್ಞಾನಿಕ ರಹಸ್ಯಗಳನ್ನು ಹುದುಗಿಸಿಟ್ಟ. ಕಾಲಾನುಕಾಲಕ್ಕೆ ಈ ಜ್ಞಾನಗಳು ಮನಸ್ಸಿನ ಮೂಲಕ ಅನಾವರಣಗೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯನ್ನೂ ಸೃಷ್ಟಿಸಿದ.

ಈ ಜ್ಞಾನಗಳು ಶೈಕ್ಷಣಿಕ ತರಬೇತಿಯ ಮೂಲಕ ಬಹುಬೇಗ ಜಾಗೃತವಾಗಿ ಮನಸ್ಸಿನ ಮೂಲಕ ಮೇಲುಸ್ತರಕ್ಕೆ ಬರುವ ಪರ್ಯಾಯ ಮಾರ್ಗವನ್ನೂ ಆತ ಸೃಷ್ಟಿಸಿದ. ದೇಹ, ಆತ್ಮ ಮತ್ತು ಮನಸ್ಸುಗಳ ಪೈಕಿ ಮನಸ್ಸು ಅತಿ ಚಂಚಲವಾದುದು ಮತ್ತು ಹೆಚ್ಚು ಸಮಯ ಬಹಿರ್ಮುಖಿಯಾಗಿರುವಂಥದ್ದು. ದೇಹ ಮತ್ತು ಆತ್ಮ ಹೆಚ್ಚುಕಡಿಮೆ ಸ್ಥಿರ. ದೇಹ ಮತ್ತು ಆತ್ಮವನ್ನು
ಮನಸ್ಸು ಆವರಿಸಿದ್ದು, ಅದು ಚಂಚಲಹೀನವಾಗಿ ಮತ್ತು ಅಂತರ್ಮುಖಿ ಯಾಗಿ ಸ್ಥಿರವಾದಾಗ ಮಾತ್ರ ಮಿದುಳು ಮತ್ತು ಆತ್ಮದಲ್ಲಿರುವ ಪೂರ್ವ ಗರ್ಭಿತ ಸೃಷ್ಟಿಯ ಜ್ಞಾನವನ್ನು ಯಾವ ಶೈಕ್ಷಣಿಕ ತರಬೇತಿಯೂ ಇಲ್ಲದೆ ಸ್ವಯಂ ಅರಿಯಲು ಸಾಧ್ಯ.

ಇದು ವೈಜ್ಞಾನಿಕ ಸಂಗತಿಯಾಗಿದ್ದು, ಬುದ್ಧ, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸರಂಥ ಆಧ್ಯಾತ್ಮಿಕ ಸಾಧಕರು ಈ ಅಂಶವನ್ನು ಧ್ಯಾನ/ತಪಸ್ಸಿ ನಿಂದ ತಮ್ಮ ಬದುಕಿನಲ್ಲಿ ಸಾಬೀತುಪಡಿಸಿರುವ ಜ್ವಲಂತ ಉದಾಹರಣೆ ಗಳಿವೆ.

ಧ್ಯಾನ ಎಂದರೇನು?: ಧ್ಯಾನವೆಂದರೆ ಕಣ್ಣುಮುಚ್ಚಿ ಒಂದೆಡೆ ಕೆಲಕಾಲ ಕೂರುವ ನಿಷ್ಕ್ರಿಯ ಸ್ಥಿತಿಯಲ್ಲ. ಬಹಿರ್ಮುಖಿಯಾದ
ಚಂಚಲಶೀಲ ಮನಸ್ಸನ್ನು ಬಾಹ್ಯಾಕರ್ಷಣೆಗಳಿಂದ ವಿಮುಕ್ತ ಗೊಳಿಸಿ, ಅಂತರ್ಮುಖಿಯನ್ನಾಗಿಸಿ, ಚಂಚಲಹೀನಗೊಳಿಸಿ,
ಆತ್ಮ ಮತ್ತು ದೇಹದೊಡನೆ ಬೆಸೆದು ಅವುಗಳಲ್ಲಿರುವ ಜನ್ಮದತ್ತ ಅದಮ್ಯ ಜ್ಞಾನದ ಅರಿವು ಮೂಡಿಸಿ, ತನ್ಮೂಲಕ ತನ್ನನ್ನೂ
ಒಳಗೊಂಡಂತೆ ಇಡೀ ಸೃಷ್ಟಿಯನ್ನೇ ನಿಯಂತ್ರಿಸುವ ಅತೀತಶಕ್ತಿಯ ಪ್ರಭಾವವನ್ನು ಅರಿತು ಅದರೊಡನೆ ಅನುಸಂಧಾನಿ
ಸುವ ಕ್ರಿಯಾತ್ಮಕ, ಆಧ್ಯಾತ್ಮಿಕ, ವೈಜ್ಞಾನಿಕ ಅಭ್ಯಾಸವಿದು.

ಧ್ಯಾನ ಮಾಡುವ ಮುನ್ನ, ಧ್ಯಾನದ ಹಿಂದಿರುವ ಆಧ್ಯಾತ್ಮಿಕ- ವೈಜ್ಞಾನಿಕ ನೋಟಗಳನ್ನು ಅರ್ಥಮಾಡಿಕೊಂಡಲ್ಲಿ, ಅದರಿಂ
ದುಂಟಾಗುವ ಪರಿಣಾಮಗಳು ಶೀಘ್ರವೂ ಪರಿಣಾಮಕಾರಿಯೂ ಆಗಿರುತ್ತವೆ. ಈ ಅಂಶಗಳನ್ನು ವಿವರವಾಗಿ ತಿಳಿಯದೆ
ಆಸಕ್ತಿಯಿಂದ ಧ್ಯಾನ ಮಾಡಿದರೂ, ವೈಜ್ಞಾನಿಕ ಅಂಶಗಳು ಸ್ವಯಂಚಾಲಿತವಾಗಿ ಅವರವರ ಅರಿವಿಗೆ ನಿಧಾನವಾಗಿ
ಬರುತ್ತವೆ. ಆಹಾರವನ್ನು ಬಾಯಿಗಿಡುತ್ತಿದ್ದಂತೆಯೇ ಜೊಲ್ಲುರಸದ ಉತ್ಪತ್ತಿ, ಅಗಿಯುವಿಕೆ, ನುಂಗುವಿಕೆ, ಜಠರರಸದ ಉತ್ಪತ್ತಿ
ಇತ್ಯಾದಿ ಜೀರ್ಣಕ್ರಿಯೆಗಳು ಅನುಕ್ರಮವಾಗಿ ಸ್ವಯಂಚಾಲಿತವಾಗಿ ಜರುಗುವಂತೆ, ಕಣ್ಣುಮುಚ್ಚಿ ಮನಸ್ಸನ್ನು ಬಾಹ್ಯಸ್ಪರ್ಶ
ದಿಂದ ವಿಮುಕ್ತಿಗೊಳಿಸುತ್ತಿದ್ದಂತೆ ಧ್ಯಾನದ ಮುಂದಿನ ಸಕಾರಾತ್ಮಕ ಕ್ರಿಯೆಗಳು ಸ್ವಯಂಚಾಲಿತವಾಗಿ ಜರುಗುತ್ತವೆ.

ದೇಹದ ಕ್ರಿಯೆಗಳನ್ನು ಗಮನಿಸಿದಾಗ, ಪ್ರಾರಂಭಿಕದ ಒಂದು ಕ್ರಿಯೆ ಜರುಗಿದಲ್ಲಿ ಮುಂದಿನ ಕ್ರಿಯೆಗಳು ಸ್ವಯಂಚಾಲಿತವಾಗಿ
ಜರುಗುವ ಪೂರ್ವಯೋಜಿತ ವ್ಯವಸ್ಥೆಗಳನ್ನು ಗುರುತಿಸಬಹುದು. ಆದರೆ, ತರಬೇತಿಯ ಮೂಲಕ ಧ್ಯಾನಾಭ್ಯಾಸಗಳನ್ನು
ಕೈಗೊಂಡಲ್ಲಿ ಅವು ಹೆಚ್ಚು ಪರಿಣಾಮಕಾರಿಯಾಗುತ್ತವೆ.

ವೈಜ್ಞಾನಿಕ ದೇಹದಲ್ಲಿ ಅವೈಜ್ಞಾನಿಕ ಮನಸ್ಸು: ಪ್ರತಿಯೊಬ್ಬ ಸಹಜ ಮಾನವನ ದೇಹದ ಅಂಗಾಂಗಗಳ ರಚನೆ ಮತ್ತು
ಕಾರ್ಯಗಳು ಪ್ರಪಂಚವ್ಯಾಪಿ ಒಂದೇ ಸಮನಾಗಿರುತ್ತವೆ, ವಿಭಿನ್ನತೆಗಳಿರುವುದಿಲ್ಲ. ಹಾಗಾಗಿ ಮಾನವದೇಹ ವೈಜ್ಞಾನಿಕವಾ
ದುದು. ಆದರೆ ಮನಸ್ಸಿನ ವಿಷಯದಲ್ಲಿ ಹೀಗೆನ್ನುವಂತಿಲ್ಲ, ಪ್ರತಿಯೊಬ್ಬರ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ.

ಮನಸ್ಸು ಊಹಿಸಬಾರದ್ದೆಲ್ಲವನ್ನೂ ಊಹಿಸುತ್ತದೆ. ಒಂದೇ ವಿಷಯದಲ್ಲಿ ಒಬ್ಬ ಮನುಷ್ಯನ ಆಲೋಚನೆ-ಅಭಿಪ್ರಾಯ-
ಭಾವಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ. ಕೆಲವೊಮ್ಮೆ ಈ ಚಂಚಲತೆಗೆ ಸಮಂಜಸ ಕಾರಣಗಳೇ ಇರುವುದಿಲ್ಲ, ಇದ್ದರೂ
ಅವು ಸಾರ್ವತ್ರಿಕ ದೃಷ್ಟಿಕೋನದ ಕಾರಣಗಳಾಗಿರುವುದಿಲ್ಲ. ಈ ಭಿನ್ನತೆಗಳಿಂದಾಗಿಯೇ ಮನಸ್ಸು ಅವೈಜ್ಞಾನಿಕ. ಒಬ್ಬರ ಮನಸ್ಸೇ ವೈಜ್ಞಾ ನಿಕವಾಗಿ ವರ್ತಿಸದೆ ಇರುವಾಗ ಇನ್ನಿತರರ ಮನಸ್ಸುಗಳೂ ಅವೈಜ್ಞಾನಿಕವೇ.

ಹೀಗಾಗಿ ‘ವೈಜ್ಞಾನಿಕವಾದ ದೇಹದಲ್ಲಿ ಅವೈಜ್ಞಾನಿಕವಾಗಿ ವರ್ತಿಸುವ ಮನಸ್ಸಿದೆ’. ಮನುಷ್ಯನ ಸಮಸ್ಯೆಗಳಿಗೆ ಈ ವಿರೋಧಾ ಭಾಸವೇ ಪ್ರಮುಖ ಕಾರಣ. ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಮಾತ್ರವೇ ಅವೈಜ್ಞಾನಿಕ ಮನಸ್ಸನ್ನು ವೈಜ್ಞಾನಿಕ ಮನಸ್ಸಾಗಿ ಪರಿವರ್ತಿಸಬಹುದು, ಇನ್ನಾವುದೇ ಔಷಧಗಳಿಂದಲ್ಲ. ಆಧ್ಯಾತ್ಮಿಕ ಜ್ಞಾನ ಮತ್ತು ಯೋಗ ಧ್ಯಾನವನ್ನು ಅರ್ಥ ಮಾಡಿಕೊಳ್ಳಲು ಆಧ್ಯಾತ್ಮಿಕ ಜ್ಞಾನದ ಗ್ರಹಿಕೆ ಅತ್ಯವಶ್ಯಕ. ಧ್ಯಾನವು ಯೋಗದ ಪ್ರಮುಖ ಅಂಗಗಳಲ್ಲೊಂದು.

ಯೋಗವೆಂದರೆ ಕೇವಲ ಆಸನಗಳಲ್ಲ, ಆಧ್ಯಾತ್ಮಿಕ ಸ್ಥಿತಿಯನ್ನು ತಲುಪಲು ಇರುವ ದೈವದತ್ತವಾದ ಜೀವನಶೈಲಿಯಿದು. ಮನುಷ್ಯ, ಸೃಷ್ಟಿಕರ್ತ (ಅತೀತಶಕ್ತಿ), ಸೃಷ್ಟಿಯ ಅಂತಿಮಸತ್ಯಗಳು, ಮನುಷ್ಯನ್ಯಾರು (ಅವನ ರಚನೆ, ಕ್ರಿಯೆ, ವಿಕಾಸ, ಹುಟ್ಟು, ಸಾವು, ಸೃಷ್ಟಿ ಮತ್ತು ಅತೀತಶಕ್ತಿಯೊಂದಿಗೆ ಅವನಿಗಿರುವ ಅನುಬಂಧ), ಬದುಕಿನ ಮೂಲೋದ್ದೇಶ, ನಿರಂತರ ಸಂತೋಷವಾಗಿ ಬದುಕುವ ರೀತಿನೀತಿಗಳನ್ನೊಳಗೊಂಡ ಜೀವನಶೈಲಿ, ವ್ಯಕ್ತಿತ್ವ ನಿರ್ಮಾಣ ಇತ್ಯಾದಿಗಳ ಬಗೆಗಿನ
ಜ್ಞಾನವೇ ಆಧ್ಯಾತ್ಮಿಕ ಜ್ಞಾನ. ಈ ಜ್ಞಾನದ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಸ್ಥಿತಿಯನ್ನು ಗಳಿಸಲು ರೂಪುಗೊಂಡಿರುವ ಜೀವನ ಶೈಲಿಯೇ ಯೋಗ.

ಆಧ್ಯಾತ್ಮಿಕ ಜ್ಞಾನದ ಮಾಹಿತಿಯನ್ನೊಳಗೊಂಡ ‘ಜ್ಞಾನಯೋಗ’, ಬದುಕಿನಲ್ಲಿ ಜರುಗುವ ಮತ್ತು ಕೈಗೊಳ್ಳಬೇಕಾದ ಕ್ರಿಯೆ ಗಳನ್ನೊಳಗೊಂಡ ‘ಕರ್ಮಯೋಗ’, ಸೃಷ್ಟಿಯ ಉಗಮ ಮತ್ತು ಮನುಷ್ಯನ ಇರುವಿಕೆಗೆ ಕಾರಣಕರ್ತನಾದ ಅತೀತಶಕ್ತಿಗೆ
(ಸೃಷ್ಟಿಕರ್ತನಿಗೆ) ಕೃತಜ್ಞತೆ ಸಮರ್ಪಿಸುವ ವಿಽವಿಧಾನಗಳನ್ನೊಳಗೊಂಡ ‘ಭಕ್ತಿಯೋಗ’ ಮತ್ತು ದೇಹ-ಮನಸ್ಸು-ಆತ್ಮಗಳನ್ನು
ಮನಸ್ಸಿನ ನಿಯಂತ್ರಣದ ಮೂಲಕ ಪರಸ್ಪರ ಸಂಯೋಜಿಸಿ ಅಂತಿಮಹಂತದಲ್ಲಿ ಅತೀತಶಕ್ತಿಯೊಡನೆ (ಪರಮಾತ್ಮನೊಡನೆ)
ಅನುಸಂಧಾನಿಸುವ ‘ರಾಜಯೋಗ’ ಎಂಬ ೪ ಪ್ರಮುಖ ಪ್ರಕಾರಗಳನ್ನು ಯೋಗ ಒಳಗೊಂಡಿದೆ.

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂಬ 8 ಮಾರ್ಗಗಳನ್ನು ರಾಜಯೋಗವು ಒಳಗೊಂಡಿದ್ದು, ಇದನ್ನು ‘ಅಷ್ಟಾಂಗಯೋಗ’ ಎಂದೂ ಕರೆಯಲಾಗುತ್ತದೆ.

* ಧ್ಯಾನ ಮಾಡುವುದು ಹೇಗೆ?: ಮನಸ್ಸನ್ನು ದೇಹದ ಒಂದು ಭಾಗಕ್ಕೋ, ಒಂದು ಆಧ್ಯಾತ್ಮಿಕ ಚಿಂತನೆಗೋ, ಒಂದು ಶಬ್ದಕ್ಕೋ, ಚಿತ್ರಕ್ಕೋ, ವಸ್ತುವಿಗೋ, ವಿಗ್ರಹಕ್ಕೋ, ಅತೀತಶಕ್ತಿಯ ಮೇಲೋ ಕೇಂದ್ರೀಕರಿಸಿ ಅದನ್ನು ಬಾಹ್ಯಚಿಂತನೆಗಳಿಂದ
ವಿಮುಕ್ತಗೊಳಿಸುವುದು ಧ್ಯಾನದ ಪ್ರಮುಖ ಅಂಶ.

ಸಾಮಾನ್ಯವಾಗಿ ಕಣ್ಣನ್ನು ಮುಚ್ಚಿಕೊಂಡು ಮನಸ್ಸಿನ ಮೇಲೆ ಪರಿಸರದ ಪ್ರಭಾವವನ್ನು ಇಲ್ಲದಂತಾಗಿಸಲಾಗುತ್ತದೆ. ಕೇವಲ
ಕಣ್ಣುಗಳನ್ನು ಮುಚ್ಚಿ, ಮನಸ್ಸನ್ನು ಉಸಿರಿನ ಅಥವಾ ಮೂಗಿನ ತುದಿಯ ಮೇಲೆ, ಎರಡು ಹುಬ್ಬುಗಳ ನಡುವಿನ ಆಜ್ಞಾಚಕ್ರದ
ಮೇಲೆ ಕೇಂದ್ರೀಕರಿಸುವುದರಿಂದ ಮನಸ್ಸು ಅವರವರ ಹಿಡಿತಕ್ಕೆ ಬರುತ್ತದೆ. ಪ್ರಾರಂಭದಲ್ಲಿ, ಕೇಂದ್ರೀಕರಿಸಲ್ಪಟ್ಟ ಸ್ಥಳದಿಂದ
ಮನಸ್ಸು ಪದೇಪದೆ ಪಲ್ಲಟಗೊಳ್ಳುತ್ತಿರುತ್ತದೆ. ಆಗ ಅದನ್ನು ತಕ್ಷಣ ಕೇಂದ್ರೀಕರಿಸಲಾದ ಸ್ಥಳಕ್ಕೆ ಮತ್ತೆ ಮತ್ತೆ ಎಳೆದು ತರಬೇಕು.

ಕ್ರಮೇಣ ಅಭ್ಯಾಸವಾದಂತೆ, ಅದು ಸ್ಥಿರೀಕರಿಸಲಾದ ಸ್ಥಳದಲ್ಲೇ ಉದ್ದೇಶಿತ ಸಮಯದವರೆಗೆ ಇರುತ್ತದೆ. ಈ ಹಂತ ತಲುಪಿದ
ಮನಸ್ಸನ್ನು ಮಾತ್ರವೇ ‘ಧ್ಯಾನಯುಕ್ತ ಮನಸ್ಸು’ ಎನ್ನಲಾಗುತ್ತದೆ. ಈ ಹಂತದಲ್ಲಿ ಮನಸ್ಸು ಆಲೋಚನೆಗಳಿಂದ ಸಂಪೂರ್ಣ
ವಿಮುಕ್ತವಾಗಿ ಶಾಂತಸ್ಥಿತಿಯನ್ನು ತಲುಪುತ್ತದೆ. ಆತ್ಮಸ್ಪರ್ಶ ಮತ್ತು ಅಂತಿಮ ಹಂತದಲ್ಲಿ ಅತೀತಶಕ್ತಿಯ ಅನುಸಂಧಾನ ವಾಗುತ್ತದೆ.

ಚಂಚಲರಹಿತ, ಆಲೋಚನಾರಹಿತ, ಶಾಂತ, ಸ್ಥಿರ ಮಾನಸಿಕ ಸ್ಥಿತಿಯನ್ನು ಗಳಿಸುವುದು ಧ್ಯಾನದ ಪ್ರಮುಖ ಉದ್ದೇಶ. ಈ ಸ್ಥಿತಿಯಲ್ಲಿ ಮನಸ್ಸು ಅತೀತಶಕ್ತಿಯನ್ನು ಗಳಿಸುತ್ತದೆ. ವ್ಯಕ್ತಿಗೆ ತನ್ನ ದೇಹದ, ಆತ್ಮದ ಮತ್ತು ಇಡೀ ಸೃಷ್ಟಿಯ ಸಮಗ್ರ ಅರಿವುಂಟಾಗಿ ವಿಶ್ವಪ್ರಜ್ಞೆ ಉದಯಿಸುತ್ತದೆ ಮತ್ತು ನಿರಂತರ ನಿರಾಳಸ್ಥಿತಿ ಮೈದಳೆಯುತ್ತದೆ. ಈ ಹಂತದಲ್ಲಿ ದೇಹ-
ಮನಸ್ಸಿನ ಆರೋಗ್ಯಗಳು ಸುಸ್ಥಿತಿಯಲ್ಲಿರುತ್ತವೆ. ಸಂಗೀತ, ಕಲೆ, ನೃತ್ಯ, ಮಂತ್ರಜಪ, ಪೂಜೆ-ಪುನಸ್ಕಾರಗಳೂ ಧ್ಯಾನದ ವಿವಿಧ ಪ್ರಕಾರಗಳೇ.

ಧ್ಯಾನ ಮೈಗೂಡಿದಂತೆ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಧ್ಯಾನದ ಪ್ರಭಾವ ಮೂಡುತ್ತದೆ, ನಿಯೋಜಿತ ಕಾರ್ಯವನ್ನು ಪ್ರೀತಿಯಿಂದ ಮಾಡುವ ಮನೋವೃತ್ತಿ ಬೆಳೆಯುತ್ತದೆ. ‘ಕಾಯಕವೇ ಕೈಲಾಸ’ ಎಂಬ ಭಾವ ಮೈದಳೆಯುತ್ತದೆ. ಬದುಕೇ ಧ್ಯಾನಮಯವಾದಾಗ ಮನಸ್ಸು ಸಕಾರಾತ್ಮಕವಾಗಿ ನಿಯಂತ್ರಿತವಾಗುತ್ತದೆ. ಯೋಗದ ಎಲ್ಲ 4 ಪ್ರಕಾರಗಳಲ್ಲೂ ಧ್ಯಾನದ ಮನಸ್ಥಿತಿ ಅತ್ಯವಶ್ಯಕ. ಜೀವನಶೈಲಿಯೇ ಧ್ಯಾನಯುಕ್ತವಾದಲ್ಲಿ ನಿರಂತರ ನಿರಾಳಸ್ಥಿತಿ ಕಟ್ಟಿಟ್ಟಬುತ್ತಿ.

ಅಧ್ಯಾತ್ಮ ಎಂದರೇನು?: ‘ಅಧ್ಯಾತ್ಮ’ ಎಂಬುದು ಸಂಸ್ಕೃತದ ಪದವಾಗಿದ್ದು, ಇದನ್ನು ‘ಅಧಿ’ + ‘ಆತ್ಮ’ ಎಂದು ಬಿಡಿಸಿ
ವಿಶ್ಲೇಷಿಸಬೇಕಾಗುತ್ತದೆ. ಅಂದರೆ ‘ಆತ್ಮದ ಕುರಿತಾದ’ ಅಥವಾ ‘ಪರಮಾತ್ಮನ ಕುರಿತಾದ’ ವಿಷಯ ಎಂದರ್ಥ. ಸಂಸ್ಕೃತ ದಲ್ಲಿ ಆತ್ಮ ಎಂದರೆ ‘Self’ ಎಂಬ ಅರ್ಥವೂ ಇದೆ. ಹೀಗಾಗಿ ‘ಅಧ್ಯಾತ್ಮ’ ಎಂದರೆ ‘ತನ್ನನ್ನು ತಾನು ಅರಿಯುವುದು’ ಎಂದೂ
ಆಗುತ್ತದೆ. ಸ್ಥೂಲವಾಗಿ ಹೇಳುವುದಾದರೆ, ಅಧ್ಯಾತ್ಮ ಎಂದರೆ ಅತೀತಶಕ್ತಿಯನ್ನು ಮತ್ತು ಅದರ ಪರಿಣಾಮಗಳನ್ನು ಅರಿಯು ವುದು ಎಂದರ್ಥ.

ಅಧ್ಯಾತ್ಮವು ವೈಜ್ಞಾನಿಕ ಮತ್ತು ತತ್ತ್ವಶಾಸಗಳನ್ನು ಒಳಗೊಂಡಿದೆ. ಅಧ್ಯಾತ್ಮದ ಅರಿವುಂಟಾಗುತ್ತಿದ್ದಂತೆ ಮನುಷ್ಯ ತನ್ನನ್ನು ಅತೀತಶಕ್ತಿ ಮತ್ತು ಸೃಷ್ಟಿಯ ಎಲ್ಲವುಗಳೊಡನೆ ಜೋಡಿಸಿಕೊಂಡು, ಮೇಲು-ಕೀಳೆಂಬ ಭಾವನೆಗಳಿಲ್ಲದೆ ಎಲ್ಲರೊಡನೆ ಪ್ರೀತಿ ಮತ್ತು ಸಹಕಾರ ಭಾವಗಳಿಂದ ಬದುಕುವ ಸಮಗ್ರ ದೃಷ್ಟಿಕೋನದ ಮೌಲ್ಯಯುತ ವ್ಯಕ್ತಿತ್ವ ತನಗೆ ತಾನೇ ಉಂಟಾಗುತ್ತದೆ. ಇದು ನೆಮ್ಮದಿಯ ಜೀವನಕ್ಕೆ ನಾಂದಿಹಾಡುತ್ತದೆ.

ಆಧ್ಯಾತ್ಮಿಕ ಆರೋಗ್ಯ ಎಂದರೇನು?: ವಿಶ್ವ ಆರೋಗ್ಯ ಸಂಸ್ಥೆಯು ಆಧ್ಯಾತ್ಮಿಕ ಆರೋಗ್ಯವನ್ನು ಆರೋಗ್ಯದ ಪ್ರಮುಖ
ಪ್ರಕಾರ ಎಂದು ಒಪ್ಪಿಕೊಂಡಿದ್ದು, ಅಧ್ಯಾತ್ಮವು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಆರೋಗ್ಯ ಎಂದರೆ ಸ್ವಾಸ್ಥ್ಯ
(ನೆಮ್ಮದಿ, ನಿರಾಳತೆ, ಸಂತೋಷ) ಎಂಬುದಾಗಿದೆ. ನಿರಾಳಸ್ಥಿತಿ ತಲುಪಲು ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ,
ಸಾಮಾಜಿಕವಾಗಿ ಸುಸ್ಥಿತಿಯಲ್ಲಿರಬೇಕು.

ಇವನ್ನು ಬಹು ಅಂಶಗಳು ನಿಯಂತ್ರಿಸುವುದರಿಂದ, ನಿರಾಳಸ್ಥಿತಿ ಪಡೆಯಲು ಈ ಎಲ್ಲ ಅಂಶಗಳನ್ನು ಅರಿತು ಅವನ್ನು ನಿಯಂತ್ರಿಸಿಕೊಳ್ಳುವ ಸಮಗ್ರ ದೃಷ್ಟಿಕೋನದ ಜೀವನಶೈಲಿಯಿಂದ ಮಾತ್ರ ಮನುಷ್ಯ ಸದಾಕಾಲ ಸಂತೋಷವಾಗಿರಲು ಸಾಧ್ಯ. ಈ ಅರಿವಿನ ಅನುಷ್ಠಾನವೇ ಆಧ್ಯಾತ್ಮಿಕ ಆರೋಗ್ಯ.

ಧ್ಯಾನ ಧರ್ಮಾತೀತವಾದುದು: ಧ್ಯಾನವು ಯಾವುದೊಂದು ಧರ್ಮಕ್ಕೆ ಸೀಮಿತವಾದುದಲ್ಲ. ವೇದಗಳು ಧ್ಯಾನ ಮತ್ತು ಯೋಗದ ಮೂಲವಾಗಿರುವುದರಿಂದ ನಂತರ ಉಗಮಿಸಿದ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಧರ್ಮಗಳಲ್ಲಿ ಯೋಗದ ವಿವಿಧ ಪ್ರಕಾರಗಳ ಅನುಕರಣೆಯಾಗಿರುವುದನ್ನು ಕಾಣಬಹುದು. ಹಿಂದೂಧರ್ಮದ ಪೂಜೆ-ಪುನಸ್ಕಾರಗಳು, ಇಸ್ಲಾಂ ಧರ್ಮದ ನಮಾಜ್, ಕ್ರೈಸ್ತಧರ್ಮದ ಪ್ರಾರ್ಥನೆ ಇವೆಲ್ಲವೂ ಧ್ಯಾನದ ವಿವಿಧ ಪ್ರಕಾರಗಳೇ. ಧರ್ಮಗಳು ಮಾನವಸ್ಥಾಪಿತ. ಆಧ್ಯಾತ್ಮಿಕ ಸ್ಥಿತಿಯನ್ನು ತಲುಪಲು ಮನುಷ್ಯ ಕಂಡುಕೊಂಡ ವಿಭಿನ್ನ ಮಾರ್ಗಗಳಿವು. ಅವುಗಳಿಗೆ ಅಂಟಿರುವ ಕೆಲವು ಅವೈಜ್ಞಾನಿಕ ಆಚರಣೆಗಳನ್ನು ಕಿತ್ತುಹಾಕಿ ಧರ್ಮಗಳನ್ನು ಅಧ್ಯಾತ್ಮಯುಕ್ತವಾಗಿಸಬೇಕಾಗಿದೆ.

ಮೌಲ್ಯಯುತ ಶಿಕ್ಷಣ ಅತ್ಯವಶ್ಯಕ: ಭಾರತದ ಪ್ರಾಚೀನ ಪರಂಪರೆಯಲ್ಲಿದ್ದ ಗುರುಕುಲ ಪದ್ಧತಿಯಲ್ಲಿ ಮೌಲ್ಯಯುತ
ವ್ಯಕ್ತಿತ್ವ ನಿರ್ಮಿಸುವ ಆಧ್ಯಾತ್ಮಿಕ ಶಿಕ್ಷಣವೇ ಪ್ರಧಾನವಾಗಿದ್ದ ಕಾರಣ, ಮೌಲ್ಯಯುತ ಸಮಾಜ ನಿರ್ಮಾಣವಾಗಿ ಬದುಕು
ಶಾಂತಿಯುತವಾಗಿತ್ತು. ಭಾರತದ ಮೇಲೆರಗಿದ ಆಂಗ್ಲರು ಗುರುಕುಲ ವ್ಯವಸ್ಥೆಯನ್ನು ನಿರ್ನಾಮ ಮಾಡಿ, ವೈಜ್ಞಾನಿಕ ಚಿಂತನೆಯ ನೆಪದಲ್ಲಿ ಭೌತಿಕ/ಐಹಿಕ ಸುಖಾಕರ್ಷಣೆ ಪ್ರಧಾನವಾದ ಶಿಕ್ಷಣವನ್ನು ಅನುಷ್ಠಾನಗೊಳಿಸಿದ್ದರ ಫಲವಾಗಿ
ಆಧುನಿಕ ಸಮಾಜದಲ್ಲಿ ಅಶಾಂತಿ ತಾಂಡವವಾಡಿ, ಆಧ್ಯಾತ್ಮಿಕ ಅನಾರೋಗ್ಯದ ಸ್ಥಿತಿ ಉಂಟಾಗಿದೆ.

ಸಾಮಾಜಿಕ ಶಾಂತಿ ಹದಗೆಡುತ್ತಿರುವುದರ ಜತೆಜತೆಗೆ ಮಧುಮೇಹ, ಹೃದಯಾಘಾತ, ಕ್ಯಾನ್ಸರ್, ಮನೋರೋಗದಂಥ ಸೋಂಕೇತರ ಕಾಯಿಲೆಗಳು ಹೆಚ್ಚಾಗಿ ಸಮಾಜವನ್ನೇ ತಲ್ಲಣಗೊಳಿಸಿವೆ. ಆದ್ದರಿಂದ, ಮೌಲ್ಯಯುತ ವ್ಯಕ್ತಿತ್ವ ನಿರ್ಮಿಸುವ ಆಧ್ಯಾತ್ಮಿಕ ಶಿಕ್ಷಣದ ಜತೆಜತೆಗೆ, ಭೌತಿಕ ವಿಷಯಗಳಿಗೆ ಸಂಬಂಧಿಸಿದ ವೈಜ್ಞಾನಿಕ ಶಿಕ್ಷಣವನ್ನು ಸಂಯೋಜಿಸಿದ ‘ಸಮಗ್ರ ಶಿಕ್ಷಣ’ದಿಂದ ಮಾತ್ರವೇ ಮನಶ್ಶಾಂತಿ, ತನ್ಮೂಲಕ ವಿಶ್ವಶಾಂತಿ ಸಾಧ್ಯ. ಅಲ್ಲವೇ?