ಅಭಿವ್ಯಕ್ತಿ
ಬಿ.ವಿ.ನಾಗರಾಜು, ಟೊರೊಂಟೊ
ಅಳುವ ಕಣ್ಣುಗಳಲ್ಲಿ ನೀರು ಬತ್ತಿ ಹೋಗಿದೆ. ನಿತ್ಯ ಸಾಯುವವರಿಗೆ ಅಳುವವರು ಯಾರು ಎಂಬುದು ಉತ್ತರ ಅಲ್ಲವೇ? ‘ಸಾವು’ ಇಂದಿನ ದಿನಗಳಲ್ಲಿ ಎಲ್ಲಕ್ಕಿಂತಲೂ ಬಲು ‘ಅಗ್ಗ’. ವೃದ್ಧಾಪ್ಯ, ರೋಗ – ರುಜಿನ, ಅಪಘಾತ, ಇಂಥ ಘಟನೆಗಳ ಕಾರಣವಾಗಿ ಸಾವು
ಸಾಮಾನ್ಯವಾಗುತ್ತಿದೆ.
ಆದರೆ ಅವೆಲ್ಲವನ್ನು ಮೀರಿ ಪೆಡಂಭೂತವಾಗಿ ಎದ್ದು ನಿಂತಿರುವ ಕರೋನಾ ಸಾಂಕ್ರಾಮಿಕ, ಯಾರ ವಯಸ್ಸು, ಅಂತಸ್ತು, ಧರ್ಮ, ಜಾತಿ – ಕುಲಗಳ ತಾರತಮ್ಯ ಇಲ್ಲದೆ, ಕೇವಲ ‘ಸೋಂಕು’ ತಗುಲಿಸಿ ಪ್ರಾಣ ಕೊಂಡೊಯ್ಯುವ ಪೀಡೆಯಾಗಿ ವಿಶ್ವವ್ಯಾಪಿ ಕಾಡುತ್ತಲೇ ಇದೆ. ಈ ಪೀಡೆಗೆ ಬಲಿಯಾದವರನ್ನು ಅವರ ಸ್ವಂತ ಮಕ್ಕಳು, ಗಂಡ – ಹೆಂಡತಿ, ಬಂಧು – ಬಳಗ ಯಾರ ಸಂಪರ್ಕವೂ ಇಲ್ಲದೆ ನೇರ ಗುಳಿ ಸೇರಿಸುವ ಅಥವಾ ಬೆಂಕಿಯ ಕೆನ್ನಾಲಿಗೆಗೆ ಒಡ್ಡುವ ದೃಶ್ಯಗಳು ಇದ್ದೇ ಇವೆ.
ಇಂಥ ಪೀಡೆಯ ಬಲಾಢ್ಯ ಕರಿ ನೆರಳು ಇಡೀ ವಿಶ್ವದಲ್ಲಿ ಆವರಿಸಿ, ಇನ್ನೂ ಪೀಡನೆಗೆ ಒಳಗಾಗಿದ್ದರೂ ಭೇದ – ಭಾವಗಳ ರೋಗ ದಿಂದ ಮನುಕುಲ ಇನ್ನು ಬಿಡಿಸಿಕೊಂಡಿಲ್ಲ. ಧರ್ಮ -ಜಾತಿ -ಸಂಕೋಲೆಗಳಿಂದ ಬಿಡುಗಡೆ ಆಗಿಲ್ಲ. ಭ್ರಷ್ಟಾಚಾರಗಳಿಂದ ಮುಕ್ತ ಆಗಿಲ್ಲ. ಜಿದ್ದು -ದ್ವೇಷ ಆವೇಶಗಳು ಮರೆ ಆಗಿಲ್ಲ. ಎಲ್ಲವು ಹಿಂದಿನಂತೆಯೇ ಸಾಗಿವೆ. ಹಾಗಾದರೆ ಯಾವ ಜಾಡ್ಯ ಇವೆಲ್ಲವನ್ನೂ ಮರೆಸಲು ಸಾಧ್ಯ? ಇದು ಒಂದು ದೊಡ್ಡ ಪ್ರಶ್ನೆ ಅಲ್ಲವೇ!
ಈ ಪ್ರಶ್ನೆಗಳಿಗೆಲ್ಲ ಉತ್ತರ ಅರಸುತ್ತಲೇ ಇರಬೇಕೇನೋ! ಆದರೆ, ಭಾರಿ ಪ್ರಮಾಣದ ವೈಪರೀತ್ಯಗಳ ಬಗೆಗೆ ದೊಡ್ಡ ಉದಾಹರಣೆ ಯಾಗಿ ಇತೀಚಿನವರ ಪೈಕಿ, ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಮತ್ತು ಅದರಡಿ ನಡೆದ ಅನೇಕ ಘಟನೆಗಳು ಸಾಕ್ಷಿ ಯಾಗಿ ನಿಲ್ಲುತ್ತವೆ. ಕಳೆದ ಒಂದು ವರ್ಷದಿಂದ ಸುದ್ದಿ ಮಾಧ್ಯಮಗಳಿಗೆ ಪ್ರತಿ ಕ್ಷಣಕ್ಕೂ ತುಂಬಿ ತುಳುಕುವ ಸುದ್ದಿ ಕರೋನಾದ್ದೆ. ಅದೇ ಈ ದಿನದ ಸುದ್ದಿಯ ಜೀವಾಳ. ಕಳೆದ ವರ್ಷ ಇದ್ದಷ್ಟು ಭೀತಿ – ಆಪತ್ತಿನ ಬಗೆಗೆ ಪ್ರಜ್ಞೆ – ಕಾಳಜಿ ಜನತೆಯಲ್ಲಿ ಕ್ರಮೇಣ ಕಡಿಮೆ ಆಗಿದೆ ಅನ್ನುವ ವರ್ತನೆ ಎಡೆ ಇದೆ. ಅಂಥ ಗಂಭೀರ ಚಿಂತನೆ ಈಗ ಸ್ವಲ್ಪ ಮಟ್ಟಿಗೆ ಮಾಸಿದೆ.
ಸರಕಾರದ ಸೂಚನೆ – ಮಾರ್ಗದರ್ಶನಗಳನ್ನು ಗಾಳಿಗೆ ತೂರುವ ಪ್ರವೃತ್ತಿ ಹೆಚ್ಚಾಗಿದೆ. ಮುಖವಾಡ ಹಾಕಬೇಕು ಎನ್ನುವ ಕನಿಷ್ಠ
ರೂಢಿಗೆ ಜನ ದೂರ ಆಗುತ್ತಿದ್ದಾರೆ. ಬಹುಶಃ ಸಾವನ್ನು ಆಹ್ವಾನಿಸುವ ಅಥವಾ ಬರಮಾಡಿಕೊಳ್ಳುವ ಪ್ರಯತ್ನವೇ? ಅಥವಾ ಯಾವ ಪರಿಕರಗಳಿಲ್ಲದೆ ಸಾವನ್ನು ಓಡಿಸುವ ಮಾನಸಿಕ ಸಿದ್ಧತೆಯೇ? ಇವಕ್ಕೆಲ್ಲ ಉತ್ತರ ಹುಡುಕಲು ಈಗ ಪರ್ವ ಕಾಲ. ಇಡೀ ವಿಶ್ವದಲ್ಲಿ ಒಂದೇ ಒಂದು ಸಮಾಧಾನ ಎಂದರೆ ಅದು ಕೋವಿಡ್ ಲಸಿಕೆ. ಎಡೆ ಇದರ ಹಂಚಿಕೆ ಬಗೆಗೆ ಸುದ್ದಿ. ಕೋವಿಡ್ ಬಡಿ ದೋಡಿಸುವ ಕಾತುರ ಎಲ್ಲರಲ್ಲೂ ಇದೆ.
ಕೇವಲ ಒಂದೇ ವರ್ಷದಲ್ಲಿ ಈ ಲಸಿಕೆ ತಯಾರಾಗಿ ಈಗ ಜನರ ದೇಹ ಸೇರಿಕೊಳ್ಳುತ್ತಿದೆ. ಆದರೆ, ಇದು ಇಡೀ ಮನುಜ ಕುಲಕ್ಕೆ
ಸಿಕ್ಕಿ, ಈ ಸೋಂಕಿನಿಂದ ಪರಿಹಾರಕ್ಕೆ ಇನ್ನು ಸಮಯ ಬೇಕು. ಸದ್ಯಕ್ಕೆ ಕೋವಿಡ್ ಜನರ ಬದುಕಿನ ಜತೆಗೆ ಅಂಟಿಕೊಂಡಿದೆ. ಒಟ್ಟಿನಲ್ಲಿ ಕೋವಿಡ್ ಮುಕ್ತ ಸಮಾಜಕ್ಕೆ ಒಂದೆರಡು ವರ್ಷಗಳಾದರೂ ಬೇಕಲ್ಲ!
ಅಥವಾ ಬದುಕಿನ ಉದ್ದಕ್ಕೂ ಅಂಟಿಕೊಂಡಿರುತ್ತದೆಯೇ? ಮುಂದಿನ ದಿನಗಳು ಉತ್ತರಿಸುತ್ತವೆ. ಈ ಹೊತ್ತಿನವರೆಗೆ (ಏಪ್ರಿಲ್ 2) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತ್ತವರು 2848936 ಮಂದಿ. ಕಳೆದ ಒಂದು ವರ್ಷದಲ್ಲಿ ಕೇವಲ ಈ ಸೋಂಕಿನಿಂದ ಸತ್ತ
ಅಮಾಯಕರು ಇವರೆಲ್ಲ. ಎಂಥ ಭೀಕರ ಅನಾಹುತ. ಈ ಸಾವನ್ನು ಏನೆಂದು ಕರೆಯಬೇಕು? ಸತ್ತವರಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ದಾದಿಯರು, ಈ ಸೋಂಕಿನಿಂದ ಬಳಲುತ್ತಿದ್ದವರ ಸೇವೆ ಮಾಡುತ್ತಿದ್ದವರು, ಸೋಂಕಿನ ಬಗೆಗೆ ಎಚ್ಚರದಿಂದ
ಇದ್ದವರು, ಇಲ್ಲದವರು, ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಬಲಿಯಾದವರೇ… ಇಷ್ಟೊಂದು ಜನ ಪ್ರಾಣ ಕಳೆದುಕೊಳ್ಳಲು ಜನತೆ ಕಾರಣವೇ ಅಥವಾ ಸರಕಾರಗಳೇ ಕಾರಣವೇ? ಈ ಪ್ರಶ್ನೆಗೆ ಥಟ್ಟನೆ ಉತ್ತರ ಅಸಾಧ್ಯ.
ಆದರೆ ಇಬ್ಬರೂ ಕಾರಣಕರ್ತರೆ ಎನ್ನುವುದು ಕೊನೆಗೆ ಸಿಗುವ ಉತ್ತರ. ಕಳೆದ ವರ್ಷ ಅಂದರೆ 2020ರಲ್ಲಿ ಸೋಂಕಿನ ಬಗ್ಗೆ ಮೆಲ್ಲ ಮೆಲ್ಲನೆ ಸುದ್ದಿ ಹರಡುತ್ತಿದ್ದಂತೆ ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಅದು ಪ್ರಚಾರಕ್ಕೆ – ಪ್ರಸಾರಕ್ಕೆ ಸಿಗಲು ಹೆಚ್ಚಿನ ಸಮಯ ತೆಗೆದು ಕೊಳ್ಳಲಿಲ್ಲ. ವಿಶ್ವದ ದೊಡ್ಡಣ್ಣಂತೆ ಇರುವ ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಅತಿ ವೇಗದಲ್ಲಿ ಹರಡಲು ಪ್ರಾರಂಭವಾಯಿತು. ಪಕ್ಕದ ಕೆನಡಾ ರಾಷ್ಟ್ರಕ್ಕೂ ಅದರ ಬಿಸಿ ತಟ್ಟುತ್ತಿದ್ದ ಆರಂಭದ ದಿನಗಳು.
ಆ ದಿನಗಳಲ್ಲಿ ಅಂದರೆ, ಮಾರ್ಚ್ ತಿಂಗಳಲ್ಲಿ ಅದರ ಕಾವು ಭಾರತಕ್ಕೆ ಬೀಸತೊಡಗಿತು. ಆದರೆ, ಆ ಕಾವನ್ನು ತಡೆಯಲು ಅಲ್ಲಿಯ ಕೇಂದ್ರ ಸರಕಾರ ಕೂಡಲೇ ಲಾಕ್‌ಡೌನ್ ಕ್ರಮವನ್ನು ತೆಗೆದುಕೊಂಡಿದ್ದು ಸೂಕ್ತ ಆದರೂ ಆ ಲಾಕ್‌ಡೌನ್ ಎದುರಿಸುವ ಅಮಾಯಕ ಜನ, ಕಾರ್ಮಿಕ ವರ್ಗ , ಬಡ ಜನತೆಯ ಹಣಕಾಸಿನ ಹಾಗು ಹೊಟ್ಟೆ ಪಾಡಿನ ಬಗೆಗೆ ತೆಗೆದುಕೊಂಡ ಮುಂಜಾಗರೂ ಕತೆ ಕ್ರಮಗಳು ಶೂನ್ಯ ಎಂಬುದು ಜಾಗತಿಕವಾಗಿ ಪ್ರತಿಬಿಂಬಿಸಿತು. ಆ ನರಕ ದರ್ಶನವನ್ನು ವಿಶ್ವ ಕಂಡಿತು.
ಅವೆಲ್ಲ ಹಳೆಯ ಕಥೆ, ಅವೆಲ್ಲ ನಡೆದೇ ಇಲ್ಲವೇನೋ ಅನ್ನುವ ರೀತಿಯಲ್ಲಿ ಈ ಹೊತ್ತಿನ ಜನತೆಯ ನಡವಳಿಕೆ ಆಗಿದೆ. ಇದಕ್ಕೇ ಇರಬೇಕು ಇಂಗ್ಲಿಷ್ ಆಡುಮಾತಿನಲ್ಲಿ Public memory is very short ಎನ್ನುವುದು ಹುಟ್ಟಿಕೊಂಡಿದ್ದು. ಅಂದರೆ, ಜನತೆಯ ಅಥವಾ ಸಾರ್ವಜನಿಕರ ನೆನಪುಗಳು ಬಹಳ ಕಾಲ ಉಳಿಯುವುದಿಲ್ಲ ಅಥವಾ ಅವು ಬೇಗ ಸಾಯುತ್ತವೆ ಅನ್ನುವುದು. ಈ ಮರೆವಿಗೆ ನಾನಾ ಕಾರಣಗಳಿರಬಹುದು.
ಬಹುಶಃ ವ್ಯಕ್ತಿಗಳ ದೈನಂದಿನ ಬದುಕು ಬದಲಾಗುತ್ತ, ಅವರವರ ಕಷ್ಟ ಕಾರ್ಪಣ್ಯಗಳು ಅವೆಲ್ಲವನ್ನು ಅಂದರೆ, ನೆನಪುಗಳನ್ನು ನುಂಗಿ ಹಾಕಬಹುದು. ಒಟ್ಟಾರೆ ವಿಶ್ವದ ನಾನಾ ದೇಶಗಳು ಅವುಗಳದೇ ಕಟ್ಟುಪಾಡುಗಳನ್ನು ಹಾಕಿಕೊಂಡು ಸೋಂಕು
ನಿಯಂತ್ರಿಸಲು ಪಟ್ಟ ಪಡಿಪಾಟಲು ಈ ದಿನದ ಚರ್ಚೆಗೆ ಗ್ರಾಸವಾದರೂ, ಇದರಲ್ಲಿ ಗೆದ್ದವರು ಕೆಲವರೇ. ಉದಾಹರಣೆಗೆ ತೈವಾನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಲ್ಲಿ ಈವರೆಗೆ ಕೇವಲ ದೇಶದಾದ್ಯಂತ 955 ಪ್ರಕರಣಗಳು ದಾಖಲಾಗಿ ಸತ್ತವರು ಕೇವಲ 9 ಮಂದಿ. ಎರಡನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್.
ಅಲ್ಲಿ 2378 ಪ್ರಕರಣಗಳು ದಾಖಲಾಗಿ ಸತ್ತವರು 26 ಮಂದಿ. ಮೂರನೇ ಸ್ಥಾನದಲ್ಲಿ ಐಸ್ಲ್ಯಾಂಡ್‌ನಲ್ಲಿ 6049 ಪ್ರಕರಣಗಳು
ದಾಖಲಾಗಿ ಸತ್ತವರು 29 ಮಂದಿ. ನಾಲ್ಕನೇ ಸ್ಥಾನದಲ್ಲಿ ಸಿಂಗಾಪುರ 59936 ಪ್ರಕರಣಗಳ ಜತೆಗೆ 29 ಸಾವಿನ ಪ್ರಕರಣಗಳು. ಐದನೇ ಸ್ಥಾನದಲ್ಲಿ ವಿಯೆಟ್ನಾಮ್. ಅಲ್ಲಿ 2448 ಪ್ರಕರಣಗಳು ದಾಖಲಾದರೆ, ಸತ್ತವರು 35 ಮಂದಿ. ಆದರೆ ಕೆನಡಾದಲ್ಲಿ ಸತ್ತವರ ಸಂಖ್ಯೆ 23002 ಮಂದಿ.
ಭಾರತದಲ್ಲಿ 162000 ಮಂದಿ ಸತ್ತಿದ್ದಾರೆ. ಅಮೆರಿಕದಲ್ಲಿ ಸತ್ತವರು 547296 ಮಂದಿ. ಆಯಾ ದೇಶಗಳ ಕಟ್ಟುನಿಟ್ಟಿನ ಕ್ರಮಗಳು, ಅಷ್ಟೇ ಗಂಭೀರವಾಗಿ ಆ ಸಮಸ್ಯೆಯನ್ನು ಜನತೆ ಅಚ್ಚುಕಟ್ಟಾಗಿ ಪಾಲನೆ ಮಾಡಿದ್ದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾವನ್ನು ಹತೋಟಿಯಲ್ಲಿ ಇಟ್ಟಿದ್ದು ಪ್ರಶಂಸನೀಯ. ಆದರೆ, ಸರಕಾರದ ಕಟ್ಟುನಿಟ್ಟು ಕ್ರಮಗಳು ಜಾಳು ಗೊಂಡಾಗ ಪರಿಸ್ಥಿತಿ ಏನಾಗ ಬಹುದು. ಇದಕ್ಕೆ ಭಾರತವನ್ನು ಉದಾಹರಣೆಗೆ ತೆಗೆದುಕೊಂಡಾಗ, ಜನಸಮೂಹ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಲ್ಲಿ ಎಡವಿದ್ದು ವೈಫಲ್ಯಕ್ಕೆ ಪ್ರಮುಖ ಕಾರಣ ಆಯಿತು.
ಅದೇ ಹಾದಿಯಲ್ಲಿ ಆಮೆರಿಕ ಸಾಗಿದ್ದು. ಆದರೆ, ಅಲ್ಲಿನ ಸ್ವಚ್ಛತೆ, ಪರಿಸರ ಹಾಗೂ ಓಡಾಟಕ್ಕೆ ಕಾರುಗಳ ಬಳಕೆಯಿಂದಾಗಿ ಸತ್ತವರ ಸಂಖ್ಯೆ ಕಡಿಮೆಯೇ ಎಂದು ಹೇಳಬಹುದು. ಅಲ್ಲಿಯ ಪರಿಸ್ಥಿತಿಗೆ ವಿರುದ್ಧ ಭಾರತ ನಡೆದುಕೊಳ್ಳುತ್ತಲೇ ಇದೆ. ಆದರೆ, ಜನ್ಮತಃ ರೋಗನಿರೋಧಕ ಶಕ್ತಿ ಭಾರತೀಯರಿಗೆ ಇದೆ, ಆದ್ದರಿಂದಾಗಿ ಆ ಶಕ್ತಿ ಕಾಪಾಡಿರಬೇಕು ಎನ್ನುವ ಮಾತುಗಳು ಕೇಳಿಬರುತ್ತವೆ. ಅದು ಒಂದು ತರ್ಕ.
ಈಗ ಅಲ್ಲಿ ಅಂದರೆ ಭಾರತದಲ್ಲಿ ಸೋಂಕಿಗೆ ಎರಡನೇ ಪಾಳಿ. ದಕ್ಷಿಣ ಭಾರತದಲ್ಲಿ ವಿಪರೀತ ಸೋಂಕು ಹರಡುತ್ತಿದೆ. ಕರ್ನಾಟಕ ದಲ್ಲಿ ಇದರ ವೇಗ ಇನ್ನೂ ಹೆಚ್ಚಾಗುತ್ತಿದೆ. ಕೆನಡಾದಲ್ಲಿ ಫೆಡರಲ್ ಸರಕಾರ ಹಾಗೂ ಪ್ರಾಂತ್ಯ ಸರಕಾರಗಳ ಕಳಕಳಿ ಹಾಗೂ ವ್ಯವಸ್ಥಿತ ಹೊಂದಾಣಿಕೆಯಿಂದ ಜನತೆಗೆ ಹಣಕಾಸಿನ ನೆರವು ಸಿಗುತ್ತಿದೆ. ಸರಕಾರ ಪ್ರತಿ ವ್ಯಕ್ತಿಗೆ ಅಂದರೆ, ತಾನು ಸೂಚಿಸಿದ ಕಟ್ಟು ಪಾಡುಗಳಿಗೆ ಒಳಪಟ್ಟವರಿಗೆ ತಿಂಗಳಿಗೆ 2000 ಡಾಲರುಗಳ ಚೆಕ್ ಪಾವತಿಸುತ್ತಿದೆ. ಇದೆ ಮಾದರಿಯಲ್ಲಿ ಸಣ್ಣ – ದೊಡ್ಡ ವ್ಯಾಪಾರಸ್ಥರಿಗೆ ಬೆಂಬಲ ಹಣ ನೀಡುವಲ್ಲಿ ಉದಾರತೆ ತೋರಿದೆ.
ಹೀಗಾಗಿ ಜನತೆ ಕಷ್ಟದಲ್ಲಿ ನಲುಗಿ ಹೋಗುವುದನ್ನು ತಪ್ಪಿಸಿ ಕಾಪಾಡಿದೆ. ಹಾಗೆಯೇ ಆರೋಗ್ಯ ಇಲಾಖೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ. ಆದರೂ, ಇತ್ತೀಚೆಗೆ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಜನತೆಯಲ್ಲಿ ಗಾಭರಿ ಹುಟ್ಟು ಹಾಕಿದೆ. ಜನತೆ ತಮ್ಮ ಜವಾಬ್ದಾರಿ ಅರಿತು, ಸರಕಾರ ಸೂಚಿಸಿರುವ ಕಟ್ಟುಪಾಡಿಗಳಿಗೆ ತಲೆಬಾಗಬೇಕು ಎನ್ನುವ ಒತ್ತಾಸೆ ಹೆಚ್ಚಾಗುತ್ತಿದೆ.
ಭಾರತದ ಹಣಕಾಸಿನ ನೀತಿಯ ಬಗೆಗಿನ ಚರ್ಚೆ ಈ ಸಮಯದಲ್ಲಿ ಅನಗತ್ಯ, ಅಲ್ಲಿ ಆರ್ಥಿಕ ಸಮಸ್ಯೆಗಳು ಬಹಳ. ಇನ್ನು ಮುಂದೆ ಅಂದರೆ ಮುಂಬರುವ ದಿನಗಳಲ್ಲಿ ಅಲ್ಲಿ ಭಾರಿ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಈ ಮಧ್ಯೆ ಕೋವಿಡ್ -19ಕ್ಕೆ ಲಸಿಕೆಯಲ್ಲಿ ಮುಂದಿರುವ ಭಾರತ ಅದರ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಇತರ ರಾಷ್ಟ್ರಗಳಿಗೂ ರಫ್ತು ಮಾಡುತ್ತಿರುವುದು ವಿಶ್ವವ್ಯಾಪಿ ಮೆಚ್ಚಿಗೆಗೆ ಪಾತ್ರವಾಗಿದೆ.
ಆದರೆ, ಕೆನಡಾ ರೀತಿಯಲ್ಲಿ ಭಾರತಕ್ಕೆ ಕೆಳದರ್ಜೆ ವರ್ಗಕ್ಕೆ ಹಣಕಾಸು ನೆರವು ಸಾಧ್ಯವಾಗದು ಎಂಬುದಕ್ಕೆ ಇಲ್ಲಿವರೆಗಿನ ವ್ಯವಸ್ಥೆಯೇ ಸಾಕ್ಷಿ. ಸರಕಾರದ ಹಣ ಕಾಸಿನ ನೆರವಿಲ್ಲದೆ ಭಾರತದಲ್ಲಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ತಳವರ್ಗದ ಜನತೆ ಬಹಳಷ್ಟು ನಲುಗಿ ಕಂಗೆಟ್ಟು ಹೋಗಿzರೆ. ಒಂದುಕಡೆ ಕೆಲಸಗಳಿಲ್ಲದೆ, ಜೀವನಾಧಾರ ಇಲ್ಲದೆ ನಲುಗುತ್ತಿರುವ
ಜನ, ಮತ್ತೊಂದೆಡೆ ಸರಕಾರದ ಇತ್ತೀಚಿನ ಜಾಳು – ಜಾಳು ನಿಲುವುಗಳು ಅಲ್ಲಿನ ಪರಿಸ್ಥಿತಿಯನ್ನು ಕೆಡಿಸುತ್ತಿದೆ.
ಒಟ್ಟಿನಲ್ಲಿ ಸಮಗ್ರ – ವ್ಯಾಪಕ ಶಿಸ್ತಿನ ಕಾರ್ಯಕ್ರಮಗಳಲ್ಲಿ ಸರಕಾರ ಎಡವುತ್ತಿದೆ. ಈಗಂತೂ ಯಾರು ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ, ಜಾತ್ರೆ, ಮೇಳ, ಚುನಾವಣೆಗಳು, ರಾಜಕೀಯ ವ್ಯಕ್ತಿಗಳ ಹಿಂದೆ ಓಡಾಡುವ ಜನ, ಚಿತ್ರನಟರ ಜಿಲ್ಲಾವಾರು ಪ್ರವಾಸಗಳು ಅಲ್ಲಿ ಯಥೇಚ್ಛವಾಗಿ ನಡೆಯುತ್ತಿವೆ. ಎಲ್ಲವು ಅವರವರ ಅನುಕೂಲಕ್ಕೆ ತಕ್ಕಂತೆ ಆದೇಶಗಳು – ನಿರ್ಧಾರಗಳು ಇಂದಿನ ಪರಿಸ್ಥಿತಿಗೆ ಜನತೆಯನ್ನು ದೂಡುತ್ತಿದೆ.
ಅಂದರೆ ಎಲ್ಲದಕ್ಕೂ ಸರಕಾರವೇ ಕಾರಣ ಎಂದರೆ ತಪ್ಪಾದೀತು, ಜನತೆಯ ನಡವಳಿಕೆಗಳೂ ಕಾರಣ ಆಗುತ್ತವೆ. ಜನತೆ ಜೀವದ
ಹಂಗು ತೊರೆದು ಜನಜಂಗುಳಿಯಲ್ಲಿ ಸೇರಿಹೋಗುತ್ತಾರೆ. ಯಾರಿಗೆ ಯಾರು ತಿಳಿ ಹೇಳಬೇಕು ಎಂಬುದೇ ಮರೆತು ಹೋಗುತ್ತದೆ.
ಒಟ್ಟಿನಲ್ಲಿ ಈಗ ಸಾವಿಗೆ ಗೆಲುವು. ಇದಕ್ಕೆ ಬೇಲಿ ಹಾಕುವವರು ಜನವೋ – ಸರಕಾರವೋ? ಇದೆ ಪ್ರಶ್ನೆ ಕಾಡುತ್ತದೆ. ಕಾಡು ನೋಡೋಣ. ನಾವೆ ಆಶಾವಾದಿಗಳಲ್ಲವೇ.