Sunday, 15th December 2024

ನೆನಪಿಡುವುದು ಒಂದು ಜಾಗೃತ ಪ್ರಯತ್ನ, ಯಶಸ್ಸಿನ ಅವಶ್ಯಕತೆ

ಶಿಶಿರ ಕಾಲ

shishirh@gmail.com

ನಿಮಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತದೆ ಎಂಬ ಅಂದಾಜಿರಬಹುದು. ಅಲ್ಲಿ ಗಟ್ಟಿ ಇರುವ ಪಕ್ಷಗಳು ಕೇವಲ ಎರಡು. ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್. ಇನ್ನೊಂದಿಷ್ಟಿವೆ, ಅವು ತಪ್ಪಲೆ ಭರ್ತಿಗೆ.

ಈ ಎರಡೂ ಪಕ್ಷದಿಂದ ಒಬ್ಬೊಬ್ಬ ಅಭ್ಯರ್ಥಿ ನೇರವಾಗಿ ಅಧ್ಯಕ್ಷ ಪದವಿಗೆ ಚುನಾವಣೆ ಯಲ್ಲಿ ಸ್ಪರ್ಧಿಸುವುದು. ಇಲ್ಲಿ ಜನರು ಮತಚಲಾಯಿಸುವ ಚುನಾವಣೆ ಈ ಎಲ್ಲ ಪ್ರಕ್ರಿಯೆ ಗಳ, ಸ್ಪರ್ಧೆಯ ಕೊನೆಯ ಭಾಗ, ಹಂತ. ಅದಕ್ಕಿಂತ ಮೊದಲು ಆಯಾ ಪಕ್ಷದಲ್ಲಿಯೇ ಅಧ್ಯಕ್ಷೀಯ ಉಮೇದುವಾರರು ಹಲವರಿರುತ್ತಾರೆ, ಅವರೆಲ್ಲ ಮೊದಲು ಪರಸ್ಪರ ಸ್ಪರ್ಧಿಸಬೇಕು. ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಒಬ್ಬನನ್ನು ಪಕ್ಷ ಅಧಿಕೃತವಾಗಿ ಅಧ್ಯಕ್ಷೀಯ ಅಭ್ಯರ್ಥಿ ಎಂದು ಅನುಮೋದಿಸುತ್ತದೆ. ಈ ಆಂತರಿಕ ಸ್ಪರ್ಧೆ ಚುನಾವಣೆ ಯಲ್ಲ. ಅದು ಹಣ – ಜನ ಬೆಂಬಲದ, ಚರ್ಚೆಯ ಪರೀಕ್ಷೆ, ಸ್ಪರ್ಧೆ.

ಈ ಆಂತರಿಕ ಸ್ಪರ್ಧೆ ಚುನಾವಣೆಗೆ ಎರಡು ವರ್ಷವಿರುವಾಗಲೇ ಶುರುವಾಗುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬ ಆಕಾಂಕ್ಷಿಯೂ ತಮ್ಮದೇ ಪಕ್ಷದ ಉಳಿದ ಆಕಾಂಕ್ಷಿಗಳ ವಿರುದ್ಧ ಆರೋಪ, ಕೆಸರೆರೆಚಾಟ ಇತ್ಯಾದಿ ಮಾಡಿಕೊಳ್ಳುತ್ತಾನೆ. ಈ ರೀತಿ ಆಂತರಿಕ ಸ್ಪರ್ಧೆಯ ಚರ್ಚೆಗಳನ್ನು ಮತದಾರರು ಹಿಂಬಾಲಿಸುತ್ತಿರುತ್ತಾರೆ. ಈ ಸಮಯದಲ್ಲಿಯೇ ಯಾರು ಹೇಗೆ, ಯಾರ ಅಸಲಿಯತ್ತು ಏನು, ಯಾರ ಪ್ರಣಾಳಿಕೆ ಏನು ಎಂಬುದೆಲ್ಲ ಜನರ ಗಮನಕ್ಕೆ ಬಂದಿರುತ್ತದೆ. ಜನರ ಪ್ರತಿಕ್ರಿಯೆಯನ್ನು ಗ್ರಹಿಸಿ ಒಬ್ಬರನ್ನು ಪಕ್ಷ ಕೊನೆಯಲ್ಲಿ ಚುನಾವಣೆಗೆ ಆಯ್ಕೆ ಮಾಡುತ್ತದೆ.

ಹೀಗೆ ಆಂತರಿಕವಾಗಿ ಸ್ಪರ್ಧಿಸಿ ಕೊನೆಯ ಹಂತಕ್ಕೆ ಮುಟ್ಟಿದ ಡೆಮೊಕ್ರಟಿಕ್ ಮತ್ತು ರೆಪಬ್ಲಿಕನ್ ಪಕ್ಷದ ಅಂತಿಮ ಎರಡು ಅಭ್ಯರ್ಥಿ ಗಳು ಚುನಾವಣೆಗೆ ಕೆಲ ದಿನವಿರುವಾಗ ಅಂತಿಮ ಚರ್ಚೆ ನಡೆಸುತ್ತಾರೆ. ಇದೆಲ್ಲ ನಡೆಯುವುದು ಲೈವ್ ಟಿವಿಯಲ್ಲಿ. ಚುನಾವಣೆ, ಜನರ ಆಯ್ಕೆ ಕೊನೆಯಲ್ಲಿ. ೨೦೧೧. ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯ ಗೌಜು ಗಲಾಟೆಗಳು ಆಗಲೇ ಶುರುವಾಗಿ ಉತ್ತುಂಗದಲ್ಲಿತ್ತು. ರೆಪಬ್ಲಿಕನ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಅಂದು ಗುರುತಿಸಿಕೊಂಡದ್ದು ರಿಕ್ ಪೆರ್ರ‍ಿ. ಆತ ಟೆಕ್ಸಾಸ್ ರಾಜ್ಯದ ಗವರ್ನರ್ ಆಗಿದ್ದವ. ಅಮೆರಿಕಾದಲ್ಲಿ ಗವರ್ನರ್ ಎಂದರೆ ಪಾರ್ಲಿಮೆಂಟ್ ವ್ಯವಸ್ಥೆಯ ಮುಖ್ಯಮಂತ್ರಿಗೆ ಸಮ. ಆತ ಗವರ್ನರ್
ಆಗಿ ಸುಮಾರು ಹತ್ತು ವರ್ಷದಿಂದ ಅಧಿಕಾರದಲ್ಲಿದ್ದವ.

ಫಾರ್ ಬ್ರ್ಯಾಂಡ್. ಎಲ್ಲರೂ ರೆಪಬ್ಲಿಕನ್ ಪಕ್ಷದಿಂದ ಆತನೇ ಅಂತಿಮ ಅಭ್ಯರ್ಥಿಯೆಂದು ಅಂದಾಜಿಸಿದ್ದರು. ಆತನ ಪ್ರಣಾಳಿಕೆ
ವಿಭಿನ್ನವಾಗಿತ್ತು. ರಿಕ್ ಪೆರ್ರ‍ಿ ಸಮಾಜವನ್ನು ಸುಧಾರಿಸಬೇಕೆಂ ದರೆ ಮೊದಲು ಸರಕಾರಿ ವ್ಯವಸ್ಥೆಯನ್ನು ಬದಲಿಸಬೇಕು ಎಂದು ಪ್ರತಿಪಾದಿಸುತ್ತಿದ್ದ. ಅದು ಕೊನೆಯ ಹಂತಕ್ಕೆ ತಲುಪಿದ ಎಂಟು ರಿಪಬ್ಲಿಕನ್ ಅಭ್ಯರ್ಥಿಗಳ ಚರ್ಚೆಯ ಸಮಯ. ಟಿವಿಯಲ್ಲಿ ಅಸಂಖ್ಯ ಪ್ರಮಾಣದಲ್ಲಿ ಮತದಾರರು ಈ ಚರ್ಚೆಯನ್ನು ಲೈವ್ ನೋಡುತ್ತಿದ್ದರು. ರಿಕ್ ಪೆರ್ರ‍ಿ ಈ ಚರ್ಚಾ ಸಭೆಯಲ್ಲಿ ಮೂರು ಸರಕಾರಿ ಇಲಾಖೆಗಳನ್ನು ಹೆಸರಿಸಿ ಅದನ್ನು ಸಂಪೂರ್ಣ ಬದಲಿಸುವುದಾಗಿ ಘೋಷಿಸುವವನಿದ್ದ.

ರಿಕ್ ಪೆರ್ರ‍ಿಗೆ ಟಿವಿ ಆಂಕರ್ ನಿಮ್ಮ ಅಭಿವೃದ್ಧಿಯ ಯೋಜನೆಗಳೇನು ಎಂದು ಪ್ರಶ್ನಿಸಿದ. ರಿಕ್ ಮಾತು ಆರಂಭಿಸಿದ. ತಾನು
ಬದಲಿಸಬೇಕೆಂದಿದ್ದ ಮೂರು ಇಲಾಖೆಗಳನ್ನು ಒಂದರ ನಂತರ ಒಂದು ಹೇಳಲು ಶುರುಮಾಡಿದ. ಮೊದಲನೆಯದನ್ನು ಹೇಳಿದ, ಎರಡನೆಯದನ್ನೂ ಹೇಳಿದ. ನಂತರ ಮೂರನೆಯದನ್ನು ಹೇಳುವವನಿದ್ದ. ಆತನಿಗೆ ಆ ಕ್ಷಣಕ್ಕೆ ಮೂರನೆಯ ಇಲಾಖೆಯ ಹೆಸರೇ ನೆನಪಿಗೆ ಬರಲಿಲ್ಲ. ಒಂದೆರಡು ಬಾರಿ ತಡವರಿಸಿದ, ಮೊದಲ ಎರಡನ್ನು ಇನ್ನೆರಡು ಬಾರಿ ಹೇಳಿದ.

ಮೂರನೆಯದು ಜಪ್ಪಯ್ಯ ಅಂದರೂ ನೆನಪಿಗೇ ಬರಲಿಲ್ಲ. ಆ ಚರ್ಚೆಯನ್ನು ನೋಡುತ್ತಿದ್ದ ಸಭೆಗೆ ಸಭೆಯೇ ನಕ್ಕುಬಿಟ್ಟಿತು.
ಆತ ಇನ್ನಷ್ಟು ಖಿನ್ನನಾದ. ಕೊನೆಗೆ ಕ್ಷಮಿಸಿ, ನನಗೆ ಮೂರನೆಯ ಇಲಾಖೆಯ ಹೆಸರು ನೆನಪಿಗೆ ಬರುತ್ತಿಲ್ಲ ಎಂದ. ಇದನ್ನು ಅಲ್ಲಿದ್ದ ಆಂಕರ್ ಮತ್ತು ಉಳಿದ ಪ್ರತಿಸ್ಪರ್ಧಿಗಳು ಹಂಗಿಸಿ ನಕ್ಕರು. ಇದೊಂದು ಘಟನೆಯಿಂದ ಆತನಿಗೆ ಅಲ್ಲಿಂದ ಮುಂದೆ ಎಲ್ಲಿಲ್ಲದ ಹಿನ್ನಡೆಯಾಯಿತು. ಮುಂಚೂಣಿಯಲ್ಲಿದ್ದ ರಿಪಬ್ಲಿಕನ್ ಅಭ್ಯರ್ಥಿ ರಿಕ್ ಒಂದು ವೇಳೆ ಸ್ಪರ್ಧಿಸಿದಲ್ಲಿ ಅಮೆರಿಕಾದ ಅಧ್ಯಕ್ಷನಾಗವ ಎಲ್ಲ ಸಾಧ್ಯತೆಯಿತ್ತು.

ಕೊನೆಗೆ ಈ ಒಂದು ಚಿಕ್ಕ ಮರೆವಿನ ಘಟನೆಯಿಂದಾಗಿ ಆಂತರಿಕ ಸ್ಪರ್ಧೆಯಲ್ಲಿಯೇ ಸೋತುಬಿಟ್ಟ. ಆತ ೨೦೧೬ ರಲ್ಲಿ ಮತ್ತೆ ಸ್ಪರ್ಧೆಗಿಳಿದರೂ ಈ ಘಟನೆಯನ್ನು ಯಾರೂ ಮರೆತಿರಲಿಲ್ಲ. ಹೀಗಾಗಿ ಎರಡನೇ ಬಾರಿ ಸ್ಪರ್ಧಿಸಿದಾಗಲೂ ಪಕ್ಷದೊಳಗೇ ಸೋತು
ಕ್ರಮೇಣ ನೇಪಥ್ಯಕ್ಕೆ ಸರಿಯಬೇಕಾಯಿತು. ಒಂದು ಚಿಕ್ಕ ಮರೆವು ಆತ ಮತ್ತು ಅಮೆರಿಕಾದ ಅಧ್ಯಕ್ಷ ಗಾದೆಯ ನಡುವೆ ಎರಡು ಬಾರಿ ಅಡ್ಡ ಬಂದು ಆತನನ್ನು ಸಂಪೂರ್ಣ ಸೋಲಿಸಿ ಬಿಟ್ಟಿತ್ತು. ಆತನನ್ನು ಇದು ಎಷ್ಟು ಕಾಡಿತು ಎಂದರೆ ನಂತರದಲ್ಲಿ
ಖಿನ್ನತೆ ಆತನನ್ನು ಸಂಪೂರ್ಣ ಆವರಿಸಿಬಿಟ್ಟಿತು.

ಈ ರೀತಿಯ ಘಟನೆಗಳನ್ನು ಆಗೀಗ ನೋಡುತ್ತಲೇ ಇರುತ್ತೇವೆ. ತೀರಾ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಒಂದು ಸಭೆಯಲ್ಲಿ ಮಾತನಾಡುತ್ತಿದ್ದರು. ಅವರು ಕಾಶ್ಮೀರದಲ್ಲಿ ನಡೆದ ಘಟನೆಯೊಂದನ್ನು, ಮತ್ತು ಒಬ್ಬನ ಹೆಸರನ್ನು ಯಾರೂ ಮರೆಯಬಾರದು ಎಂದು ಭಾಷಣ ಮಾಡುತ್ತಿದ್ದರು. ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ಒಂದು ದೊಡ್ಡ ಅವಘಡವನ್ನು ಅಲ್ಲಿನ ಗೂಡಂಗಡಿಯವನು ಹೇಗೆ ಶತ್ರು ಸೈನ್ಯದ ದಾರಿ ತಪ್ಪಿಸಿ ತಪ್ಪಿಸಿದ್ದ ಎನ್ನುವ ವಿವರಣೆಯನ್ನು ಅವರು ಸಭೆಗೆ ಒಪ್ಪಿಸುತ್ತಿದ್ದರು. ಅವರು ಅಂತಹ ವ್ಯಕ್ತಿಯ ಹೆಸರನ್ನು ನಾವು ಯಾರೂ ಮರೆಯಬಾರದು ಎಂದು ಹೇಳುತ್ತಿರುವಾಗಲೇ ಅವನ ಹೆಸರನ್ನು ಮರೆತಿದ್ದರು.

ಅವರಿಗೆ ನೆನಪು ಕೈ ಕೊಟ್ಟಿತ್ತು. ನಂತರ ಸಭೆಯಲ್ಲಿರುವವರು ತಕ್ಷಣ ಇಂಟರ್‌ನೆಟ್ಟಿನಲ್ಲಿ ಹುಡುಕಿ ಹೇಳುವಲ್ಲಿಯವರೆಗೆ ಇವರು ತಡವರಿಸುತ್ತಲೇ ಇದ್ದರು. ಈ ರೀತಿ ತೀರಾ ಅವಶ್ಯವಿರುವಾಗ ಅದೆಂದೂ ಮರೆಯಲು ಸಾಧ್ಯವೇ ಇಲ್ಲದ ವಿಷಯ, ಹೆಸರು ಮರೆತು ಹೋಗಿಬಿಡುವುದು ಇದೆಯಲ್ಲ, ಇದು ನಾವೆಲ್ಲ ಒಂದಿಲ್ಲೊಂದು ಸಮಯದಲ್ಲಿ ಅನುಭವಿಸಿಯೇ ಇರುತ್ತೇವೆ. ಸಭೆಯಲ್ಲಿ ಅಥವಾ ಇನ್ನೆಲ್ಲಿಯೋ ಮಾತನಾಡುವಾಗ ನಮಗೆ ನಮ್ಮ ನೆನಪು ಹಠಾತ್ ಕೈಕೊಟ್ಟುಬಿಡುತ್ತದೆ.

ನಿದ್ರೆಗಣ್ಣಿನಲ್ಲಿ ಕೇಳಿದರೂ ನೆನಪಿರುವ ವಿಷಯ ತೀರಾ ಬೇಕೆನ್ನುವಾಗ, ಆ ಕ್ಷಣಕ್ಕೆ ನೆನಪಿಗೇ ಬರುವುದಿಲ್ಲ. ಅದೆಷ್ಟೇ ಪ್ರಯತ್ನಿಸಿ ದರೂ, ತಡಬಡಾಯಿಸಿದರೂ ನೆನಪಾಗುವುದಿಲ್ಲ. ಸಭೆಯಲ್ಲಿ ಒಂದು ವಿಚಾರವನ್ನು ಹೇಳುವಾಗ ಅದಕ್ಕೆ ಅವಶ್ಯವೆನಿಸುವ ವ್ಯಕ್ತಿಯ, ಪುಸ್ತಕದ, ಊರಿನ ಹೆಸರೇ ನೆನಪಿಗೆ ಬರುವುದಿಲ್ಲ. ಇದರಿಂದ ಬಹಿರಂಗವಾಗಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇದು ನಮ್ಮಲ್ಲಿನ ವಿಷಯ, ವಿಚಾರದ ಗಂಭೀರತೆಯನ್ನೇ ಪ್ರಶ್ನಿಸಿಬಿಡುತ್ತದೆ. ಇಷ್ಟು ದೊಡ್ಡ ದೊಡ್ಡ ಮಾತನಾಡುವವನಿಗೆ ಮುಖ್ಯವಾದದ್ದೇ ನೆನಪಿರಲಿಲ್ಲವಲ್ಲ ಎಂದು ಎಲ್ಲರ ಮನಸ್ಸಿನಲ್ಲಿ ಆ ಘಟನೆ ಮಾತ್ರ ಅಚ್ಚಳಿಯದೇ ಉಳಿದುಬಿಡುತ್ತದೆ. ಇದು ನಮ್ಮ ಬದ್ಧತೆಯನ್ನು ಪ್ರಶ್ನಿಸಿಬಿಡುತ್ತದೆ. ಇನ್ನು ಕೆಲವೊಮ್ಮೆ ಇದು ದೊಡ್ಡ ಸೋಲಿಗೆ ಕಾರಣವಾಗಿ ಬಿಡುತ್ತದೆ.

ಸಭೆಯಲ್ಲಿ, ಮೀಟಿಂಗ್‌ಗಳಲ್ಲಿ, ಪ್ರೆಸೆಂಟೇಷನ್‌ಗಳಲ್ಲಿ ಮೂರು ನಾಲ್ಕು ವಿಷಯಗಳನ್ನು ಹೇಳುವವರಿರುತ್ತೇವೆ. ಅದರಲ್ಲಿ ಬಹು ಮುಖ್ಯವಾದ ವಿಚಾರವೇ ಮರೆತುಹೋಗಿರುತ್ತದೆ. ಇದು ಬಹಿರಂಗ ಅವಮಾನಕ್ಕೆ ಎಡೆ ಮಾಡಿಕೊಡುತ್ತದೆ. ಹಿಂದೊಮ್ಮೆ ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ಸಭೆಯಲ್ಲಿ ತನ್ನ ಕೆಳಗೆ ಕೆಲಸ ಮಾಡುವ ಆತನ ಕಂಪನಿಯ ಅತ್ಯಂತ ಹಿರಿಯ ಅಧಿಕಾರಿಯ ಹೆಸರನ್ನೇ ಮರೆತುಬಿಟ್ಟಿದ್ದ. ಬಿಲ್ ಗೇಟ್ಸ್ ಆತನೊಡನೆ ದಿನವಿಡೀ ವ್ಯವಹರಿಸುತ್ತಿದ್ದ, ಮಾತನಾಡುತ್ತಿದ್ದ.

ಆದರೆ ಸಭೆಯೊಂದರಲ್ಲಿ ಎಷ್ಟೇ ಪ್ರಯತ್ನಿಸಿದರೂ ತನ್ನ ನಿಕಟ ಸಹೋದ್ಯೋಗಿಯ ಹೆಸರು ನೆನಪಿಗೇ ಬರಲಿಲ್ಲ. ಇದೆಲ್ಲ ಸಭಾಕಂಪನವಲ್ಲ. ಇನ್ನು ಕೆಲವೊಮ್ಮೆ ಹಿಂದೆ ಅತ್ಯಂತ ಒಳ್ಳೆಯ ಸ್ನೇಹಿತನಾಗಿದ್ದವನ ಅಥವಾ ಹತ್ತಿರದ ಸಂಬಂಧಿಕರ ಹೆಸರು ಮರೆತುಹೋಗುತ್ತದೆ. ಕ್ಷಣ ಕಳೆದು ಮೂರನೇ ವಾಕ್ಯ ಮಾತಾಡುವಾಗ ಅವರ ಹೆಸರು ಮರೆತಿರುತ್ತೇವೆ. ಎಷ್ಟೇ ಕಷ್ಟಪಟ್ಟರೂ ವ್ಯಕ್ತಿಯ ಹೆಸರು ನಂತರದಲ್ಲಿ ನೆನಪಾಗುವುದಿಲ್ಲ. ಅದೆಲ್ಲಿಯೋ ತೀರಾ ಅವಶ್ಯವಿರುವಾಗ ಸಹಾಯ ಮಾಡಿದ, ಜೀವ ಉಳಿಸಿದ ವ್ಯಕ್ತಿಯ ಹೆಸರು ಕೂಡ ಮರೆತುಹೋಗುತ್ತದೆ, ಕೃತಘ್ನನೆನಿಸಿಬಿಡುತ್ತೇವೆ.

ಈಗ ಕಳೆದ ನೂರಿನ್ನೂರು ವರ್ಷದಿಂದೀಚೆಗೆ ನಾವೆಲ್ಲ ವ್ಯವಹರಿಸುವ ರೀತಿ ಬದಲಾಗಿದೆ. ಅದರಲ್ಲಿಯೂ ಈಗ ಕೆಲವು
ದಶಕ ದಿಂದೀಚೆಗೆ ಹೊಸ ತಲೆಮಾರಿನ ಉದ್ಯೋಗಗಳು ಜಾರಿಗೆ ಬಂದಾದ ನಂತರ ನಾವು ವ್ಯವಹರಿಸುವ ರೀತಿಗಳು ಬದಲಾಗಿವೆ. ಇಂದು ಕಚೇರಿಗಳಲ್ಲಿ, ಸಮಾಜದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಹೀಗೆ ನಾವು ವ್ಯವಹರಿಸುವ ಜನರ ಸಂಖ್ಯೆ ತೀರಾ ಜಾಸ್ತಿ. ಅದೆಂದೂ ಮುಖತಹ ಭೇಟಿಯಾಗದ ಸುಮಾರು ಮಂದಿಯ ಜೊತೆ ಎಲೆಕ್ಟ್ರಾನಿಕ್ ಸಂಬಂಧವೇರ್ಪಟ್ಟಿರುತ್ತದೆ. ನೀವು ಕಾರ್ಪೊರೇಟ್‌ಗಳಲ್ಲಿ ಕೆಲಸ ಮಾಡುವವರಾದಲ್ಲಿ ಅದೆಷ್ಟೋ ಮಂದಿಯನ್ನು ದಿನಬೆಳಗಾದರೆ -ನ್‌ನಲ್ಲಿ ಸಂಧಿಸಿರುತ್ತೀರಿ, ಅವರ ಮುಖವನ್ನು ಎಂದೂ ನೋಡಿಯೇ ಇರುವುದಿಲ್ಲ.

ನೀವು ವ್ಯವಹಾರಸ್ಥರಾಗಿದ್ದಲ್ಲಿ ಅದೆಷ್ಟೋ ಗ್ರಾಹಕರನ್ನು ಸಂಧಿಸಿರುತ್ತೀರಿ. ಕೆಲವೊಮ್ಮೆ ದೊಡ್ಡ ವ್ಯವಹಾರ ಹಲವರ ಜೊತೆ ನಡೆಸಿರುತ್ತೀರಿ. ಕೆಲವು ದಿನಗಳ ಕಾಲ ಅವರು ತೀರಾ ಆಪ್ತವಾಗಿರುತ್ತಾರೆ. ಇಂದು ವ್ಯವಹಾರ, ವ್ಯಾಪಾರವಿರಬಹುದು ಅಥವಾ ಯಾವುದೇ ಉದ್ಯೋಗವಿರಬಹುದು, ಅಥವಾ ಹವ್ಯಾಸವಿರಬಹುದು, ಒಬ್ಬ ವ್ಯಕ್ತಿ ಏನಿಲ್ಲವೆಂದರೂ ಸುಮಾರು ನೂರರಿಂದ ಸಾವಿರ ಮಂದಿಯ ಜೊತೆ ಏಕಕಾಲದಲ್ಲಿ ಸಂಧಿಸುತ್ತಿರುತ್ತಾನೆ. ಇದು ಹೊಸ ತಲೆಮಾರಿನ, ಸರ್ವೇ ಸಾಮಾನ್ಯ ಬದುಕು. ಈಗ ಕೆಲವೇ ವರ್ಷದ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿಗೆ ಇಷ್ಟೊಂದು ನೆನಪಿಡುವ ಅವಶ್ಯಕತೆಯೇ ಇದ್ದಿರಲಿಲ್ಲ.

ಆದರೆ ಈಗ ಹಾಗಲ್ಲ. ಈಗಿನ ಬಹುತೇಕ ವೃತ್ತಿಯಲ್ಲಿ ನೆನಪಿನ ಶಕ್ತಿಗೆ ಎಲ್ಲಿಲ್ಲದ ಆದ್ಯತೆ, ಮಹತ್ವ. ಇಂದು ಯಾವುದೇ ಫೀಲ್ಡ್‌ನಲ್ಲಿ ನೆನಪಿನ ಶಕ್ತಿಯುಳ್ಳವನು ಅತ್ಯಂತ ಪ್ರಭಾವಿಯೆನಿಸುತ್ತಾನೆ. ನೆನಪಿನ ಶಕ್ತಿ ಅದೆಷ್ಟೋ ಬಾರಿ ಉಳಿದೆಲ್ಲ ಗುಣಗಳಿಗಿಂತ ಮಹತ್ವ ವನ್ನು ಪಡೆಯುತ್ತದೆ. ನೆನಪು ಎಂದರೆ ಅದರ ವ್ಯಾಪ್ತಿ ತೀರಾ ದೊಡ್ಡದು. ಇಂದಿನ ಕಾಲಕ್ಕೆ ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲವುದೂ ಅಷ್ಟೇ ಮಹತ್ವದ್ದೆನ್ನುವಂತಿಲ್ಲ. ನೆನಪಿಡುವ ವಿಷಯಕ್ಕೆ ಬಂದಾಗ ಇಂದಿನ ಅವಶ್ಯಕತೆ ಎರಡು. ಮೊದಲನೆಯದು ವ್ಯಕ್ತಿಯ ಹೆಸರು ನೆನಪಿಡುವುದು. ಎರಡನೆಯದು ಘಟನೆಯೊಂದನ್ನು ನೆನಪಿಟ್ಟುಕೊಳ್ಳುವುದು.

ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹಿಂದೊಮ್ಮೆ ಕೇಂದ್ರ ಸಚಿವರಾಗಿದ್ದ ಅನಂತ್‌ಕುಮಾರ್ ಅವರ ನೆನಪಿನ ಶಕ್ತಿಯ
ಕುರಿತಾಗಿಯೇ ಒಂದು ಸುದೀರ್ಘ ಲೇಖನವನ್ನು ಬರೆದಿದ್ದರು. ಅವರ ಜೊತೆ ಸಂಽಸಿದ ಯಾವುದೇ ವ್ಯಕ್ತಿಯ ಹೆಸರು, ಅವರು ಪರಿಚಯವಾದ ಸ್ಥಳ, ಸಮಯವನ್ನು ಅನಂತ್ ಕುಮಾರ್ ಎಂದೂ ಮರೆಯುತ್ತಲೇ ಇರಲಿಲ್ಲವಂತೆ. ನೀವು ಯಾವುದೇ ಯಶಸ್ವೀ ವ್ಯಕ್ತಿಯನ್ನೇ ತೆಗೆದುಕೊಳ್ಳಿ, ಅವರಿಗೆಲ್ಲ ಅಸಾಮಾನ್ಯ ನೆನಪಿನ ಶಕ್ತಿಯಿರುತ್ತದೆ. ವಿಶ್ವೇಶ್ವರ ಭಟ್ಟರೂ ಕೂಡ ಹಾಗೆಯೇ. ಅವರಿಗೆ ಜನರ ಹೆಸರು ಮರೆತು ಹೋಗುವುದೇ ಇಲ್ಲ.

ಪೂರ್ಣ ಹೆಸರು ನೆನಪಿಟ್ಟುಕೊಂಡಿರುತ್ತಾರೆ. ದಶಕದ ಹಿಂದೆ ಹೋಗಿ ಬಂದ ಊರಿನ ಹೆಸರು ಅವರ ಬಾಯ್ತುದಿಯಲ್ಲಿರುತ್ತದೆ. ಇತ್ತೀಚೆ ಅವರ ಜೊತೆ ಮಾತನಾಡುವಾಗ ಒಂದನ್ನು ಗ್ರಹಿಸಿದ್ದೇನೆ. ಅವರು ಯಾವುದೋ ಒಂದು ಘಟನೆ, ವಿಷಯ ಹೇಳುವಾಗ ಅಲ್ಲಿನ ಪಾತ್ರದ ಪೂರ್ಣ ಹೆಸರು ಹೇಳಿಯೇ ಸುದ್ದಿ ಹೇಳುವುದು. ಬಹಳಷ್ಟು ಬಾರಿ ಈ ಇಡೀ ಸುದ್ದಿಯಲ್ಲಿ ವ್ಯಕ್ತಿಯ ಹೆಸರು ಮುಖ್ಯವಾಗಿರುವುದಿಲ್ಲ. ಹೀಗಿರುವಾಗ ಹೆಸರು ಏನೋ ಒಂದು ಇತ್ತು ಎಂದು ಸುದ್ದಿ ಮುಂದುವರಿಸುವವರು ಜಾಸ್ತಿ. ಆದರೆ ಭಟ್ಟರು ಹಾಗಲ್ಲ. ಮೊನ್ನೆ ಮಾತನಾಡುತ್ತ ಕುಳಿತ್ತಿದ್ದಾಗ ಸುಮಾರು ಇಪ್ಪತ್ತು ವರ್ಷದ ಹಿಂದೆ ಅವರು ವಿಜಯ ಕರ್ನಾಟಕದ ಸಂಪಾದಕರಾಗಿದ್ದಾಗಿನ ಒಂದು ಘಟನೆಯನ್ನು ಹೇಳುತ್ತಿದ್ದರು.

ಹೇಳುವುದಕ್ಕೆ ಶುರುಮಾಡಿದಾಗ ಆ ವ್ಯಕ್ತಿಯ ಹೆಸರು ಒಂದು ಕ್ಷಣ ಅವರಿಗೆ ನೆನಪಿಗೆ ಬರಲಿಲ್ಲ. ಅವರ ಮಾತು ಅಲ್ಲಿಗೇ ನಿಂತು
ಬಿಟ್ಟಿತು. ಒಂದೈದು ಕ್ಷಣ ಯೋಚಿಸಿ, ಹೆಸರನ್ನು ನೆನಪಿಸಿಕೊಂಡೇ ಅವರು ಮಾತು ಮುಂದುವರಿಸಿದ್ದು. ಅಷ್ಟಕ್ಕೇ ಬಿಡಲಿಲ್ಲ. ಆ ಸುದ್ದಿ ಮುಗಿದ ತಕ್ಷಣ ಆ ವ್ಯಕ್ತಿಗೆ ಕರೆ ಮಾಡಿದರು, ಆ ಘಟನೆಯನ್ನು ನೆನಪಿಸಿಕೊಂಡರು, ನಕ್ಕರು, ಹೇಗಿದ್ದೀರಿ ಎಂದು ಕೇಳಿ ಫೋನ್ ಇಟ್ಟರು. ಅಲ್ಲಿಗೆ ಅವರಿಬ್ಬರಿಗೂ ಆ ಘಟನೆಯ ನೆನಪು ಮತ್ತೆ ತಾಜಾ ಆಯಿತು. ಭಟ್ಟರು ಯಾರೇ ಹೊಸಬರನ್ನು ಭೇಟಿಯಾದಾಗಲೂ ಅಷ್ಟೆ. ಅವರ ಹೆಸರನ್ನು ಕೇಳಿದಾಕ್ಷಣ ಮುಂದಿನ ನಾಲ್ಕೈದು ವಾಕ್ಯವನ್ನು ವ್ಯಕ್ತಿಯ ಪೂರ್ಣ ಹೆಸರನ್ನು ಹೇಳಿಯೇ ಮಾತಾಡುವುದು. ಕೊನೆಯಲ್ಲಿ ಬೇರ್ಪಡುವಾಗ ಕೂಡ ಹೆಸರು ಹಿಡಿದು ಮಾತನಾಡಿಸಿಯೇ ಕಳಿಸುವುದು.

ಈ ಘಟನೆ ಮತ್ತು ಮೇಲಿನ ವಿವರ ನಿಮ್ಮ ಮುಂದೆ ಇಡುವುದಕ್ಕೆ ಒಂದು ಕಾರಣವಿದೆ. ಹೆಸರನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂದು ಸುಮಾರು ಪುಸ್ತಕಗಳೇ ಇವೆ. ಅದೆಲ್ಲದರಲ್ಲಿ ವಿಸ್ತರಿಸಿ ಹೇಳುವುದು ಅರಿವಿನ ವಿಜ್ಞಾನಿ ಡೇನಿಯಲ್ ವಿಲ್ಲಿಂಗ್ಹ್ಯಾಮ್ ಪ್ರತಿಪಾದಿಸಿದ ಕಲಿಕೆಯ ಸಿದ್ಧಾಂತವನ್ನು. ಅದೆಲ್ಲ ದರ ಸಾರಾಂಶ ಇದು. ಮೊದಲನೆಯದು ಪರಿಚಯವಾದಾಗ ಒಂದೆರಡು ಬಾರಿ ಅವರ ಹೆಸರು ಹೇಳಿಯೇ ಮಾತನಾಡುವುದು. ಎರಡನೆಯದು, ಆಗೀಗ ವ್ಯಕ್ತಿಯ ಜೊತೆ ನಡೆದ ಘಟನೆಯನ್ನು ಮೆಲುಕು ಹಾಕುವುದು ಮತ್ತು ಆ ಸಂದರ್ಭದಲ್ಲಿ ಹೆಸರನ್ನು ಮರೆತು ಕಡೆಗಣಿಸದೇ ಇರುವುದು.

ನಮ್ಮಲ್ಲಿ ಬುದ್ಧಿವಂತಿಕೆಗೆ ಮತ್ತು ನೆನಪಿನ ಶಕ್ತಿಗಿರುವ ಸಂಬಂಧವನ್ನು ಕಡೆಗಣಿಸುವ ಪರಿಪಾಠವಿದೆ. ಬಾಯಿಪಾಠ
ಹೊಡೆಯುವುದು ಬುದ್ಧಿವಂತಿಕೆಯಲ್ಲ ಎಂದು ಹಲವಾರು ಕಡೆ ಮಾತನಾಡಿಕೊಳ್ಳುತ್ತೇವೆ. ಅಸಲಿಗೆ ನೆನಪಿಟ್ಟುಕೊಳ್ಳುವುದಕ್ಕೂ ಬಾಯಿಪಾಠಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ನೆನಪಿಡುವುದು ಒಂದು ನಿರಂತರ ಎಚ್ಚರಿಕೆಯ ಪ್ರಯತ್ನ. ನೀವು ಯಾವುದೇ ಯಶಸ್ವೀ ವ್ಯಕ್ತಿಯನ್ನೇ ತೆಗೆದುಕೊಳ್ಳಿ, ಅವರೆಲ್ಲ ಈ ನೆನಪಿಡುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡೇ ಬಂದಿರುತ್ತಾರೆ. ಹೆಸರು, ಘಟನೆಗಳನ್ನು ನೆನಪಿಟ್ಟುಕೊಳ್ಳುವುದು ಜನ್ಮದತ್ತ ಪಡೆದುಕೊಂಡು ಬರುವ ಒಂದು ಗುಣವೆನ್ನುವ ಸಾರ್ವಜನಿಕ ನಂಬಿಕೆಯಿದೆ.

ಅಸಲಿಗೆ ಇದೊಂದು ದೊಡ್ಡ ತಪ್ಪು ತಿಳುವಳಿಕೆ. ಅಗಾಧ ನೆನಪಿನ ಶಕ್ತಿಯವರನ್ನು ಇದೆಲ್ಲ ಹೇಗೆ ಸಾಧ್ಯವೆಂದು ಕೇಳಿದರೆ ಸಾಮಾನ್ಯವಾಗಿ ಅವರಿಗೆ ಉತ್ತರಿಸುವುದು ಕಷ್ಟವಾಗುತ್ತದೆ. ಏಕೆಂದರೆ ಅದೊಂದು ನಿರಂತರ ಪ್ರಯತ್ನದಿಂದ ಸಿದ್ಧವಾದದ್ದು. ಪ್ರಯತ್ನಿಸಿದರೆ ನಿಮಗೂ ಸಾಧ್ಯವೆನ್ನುವ ಉತ್ತರ ಸಾಮಾನ್ಯ. ವ್ಯಕ್ತಿ ಮತ್ತು ಘಟನೆಗಳನ್ನು ಆಗೀಗ ನೆನಪಿಸಿಕೊಳ್ಳುತ್ತಿದ್ದರೆ ಮಾತ್ರ ಅದು ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿಸಿಕೊಳ್ಳಲು ಸಾಧ್ಯ.

ಸ್ವಗತ ನೆನಪಿನ ಅವಶ್ಯಕತೆ. ಇದರ ಜೊತೆ ಘಟನೆಯನ್ನು ಕಥೆಯಂತೆ ಕಾಣುವುದು ಇಲ್ಲಿರುವ ಹಿಕ್ಮತ್ತು. ನಿಮಗೆ ನಿನ್ನೆ, ವರ್ಷದ ಹಿಂದೆ ನೋಡಿದ ಸಿನೆಮಾ ಕಥೆ ಇಂದು ಕೇಳಿದರೆ ಮರೆತಿದ್ದೇನೆ ಎಂದು ಯಾರಾದರೂ ಹೇಳುತ್ತಾರೆಯೇ? ಇಲ್ಲವಲ್ಲ. ಹಾಗೆಯೇ ಘಟನೆಗಳನ್ನು ನೆನಪಿಡುವಾಗ ಅದನ್ನು ಫಿಕ್ಷನಲ್ (ಕಲ್ಪನಾ) ಕಥೆಯಂತೆ ನೆನಪಿಡುವುದು ಕೂಡ ಪಾಲಿಸಬಹುದಾದ ಅಭ್ಯಾಸ.
ನಾನು ಕಂಡಂತೆ ಇಂದಿನ ಕೊರ್ಪೊರೇಟ್ ಜಗತ್ತಿನಲ್ಲಿ ಅಥವಾ ರಾಜಕಾರಣ ಮೊದಲಾದ ಸಾರ್ವಜನಿಕ ಜೀವನದಲ್ಲಿ ಯಶಸ್ಸು ಎನ್ನುವುದು ನಿರ್ಧರಿತವಾಗುವುದೇ ನೆನಪಿನ ಶಕ್ತಿಯಿಂದ.

ಸ್ಮೃತಿಯಿಂದ ಹಳೆಯದನ್ನು ಎಳೆದು ತರುವುದು ಒಂದು ಪ್ರಯತ್ನದ ಕಲೆ. ನಿರಾತಂಕವಾಗಿ ನೆನಪಿಗೆ ಬಂದರೆ ಉಳಿದದ್ದು, ಯಶಸ್ಸು ಸುಲಭವಾಗುತ್ತದೆ. ಸೃಜನಶೀಲತೆಗೆ ಮತ್ತು ನೆನಪಿನ ಶಕ್ತಿಗೆ ನೇರವಾದ ಸಂಬಂಧವಿದೆ. ನೆನಪಿಡುವುದು ಇಂದಿನ ಅವಶ್ಯಕತೆ. ಮರೆವು ಒಂದು ವೈಕಲ್ಯ. ಇದೆಲ್ಲದರ ಜೊತೆ ಡೇನಿಯಲ್ ವಿಲ್ಲಿಂಗ್ಹ್ಯಾಮ್ ವ್ಯಕ್ತಿಯ ಬದುಕಿನ ಶಿಸ್ತು ಮತ್ತು ಸ್ವಚ್ಛತೆ ಇವೆರಡು ನೆನಪಿನ ಶಕ್ತಿಗೆ ನೇರವಾಗಿ ಸಂಬಂಧಿಸಿದ್ದು ಎಂದು ಪ್ರತಿಪಾದಿಸುತ್ತಾನೆ.

ಅಲ್ಲದೆ ನಮ್ಮ ಮೆದುಳು ಹೋಲಿಕೆಯ ಮೂಲಕ ವಿಚಾರ ಮಾಡುವುದರಿಂದ ಕಥೆಗಳನ್ನು, ಅದರಲ್ಲಿಯೂ ಎಲ್ಲ ರೀತಿಯ
ಪಾತ್ರವಿರುವ ಮಹಾಭಾರತದಂತಹ ಗ್ರಂಥವನ್ನು ಓದುವುದು ನೆನಪಿನ ಶಕ್ತಿಗೆ ಸಹಾಯಕವಾಗುತ್ತದೆ ಎನ್ನುವುದು. ಗುಮ್ಮನ
ಗುಸ್ಕನಂತಿರುವವರಿಗೆ ಕ್ರಮೇಣ ನೆನಪು ಕಡಿಮೆಯಾಗುತ್ತ ಹೋಗುತ್ತದೆ. ನೆನಪು ಜನ್ಮದತ್ತ ವಿಶೇಷತೆಯಲ್ಲ, ಅದು ಒಂದು
ನಿರಂತರ ಜಾಗೃತ ಪ್ರಯತ್ನ. ಯಶಸ್ಸಿಗೆ ಅದು ಬೇಕೇಬೇಕು.