Tuesday, 10th December 2024

ಪುರುಷರಿಗೂ ಬರಲಿದೆಯೇ ಜನನ ನಿಯಂತ್ರಕ ಪಿಲ್‌ ?

ವೈದ್ಯ ವೈವಿಧ್ಯ

drhsmohan@gmail.com

ಪುರುಷರಲ್ಲಿ ಒಂದು ಮಿ. ಲಿ. ವೀರ್ಯದಲ್ಲಿ ೧೫ ರಿಂದ 200 ಮಿಲಿಯನ್ ವೀರ್ಯಾಣುಗಳಿರುತ್ತವೆ. ಮೇಲಿನ ಜೆಲ್ ಉಪಯೋಗಿಸಿದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಒಂದು ಮಿಲಿಯನ್‌ಗಿಂತ ಕಡಿಮೆಯಾಗುತ್ತದೆ. ೧೫ ಮಿಲಿಯನ್‌ ಗಿಂತ ಕಡಿಮೆ ವೀರ್ಯಾಣುಗಳಿದ್ದರೆ ಅಂತಹ ಪುರುಷನಿಂದ ಮಕ್ಕಳನ್ನು ಪಡೆಯುವ ಸಾಧ್ಯತೆ ತೀರಾ ಕಡಿಮೆ.

ಮಕ್ಕಳಾಗುವುದನ್ನು ತಪ್ಪಿಸಲು ಮಹಿಳೆಯರು ಗರ್ಭ ನಿರೋಧಕ ಪಿಲ್‌ ಗಳನ್ನು ಬಳಸುವುದು ಹೆಚ್ಚಿನ ಎಲ್ಲರಿಗೆ ಗೊತ್ತಿದೆ. ಹಾಗೆಯೇ ಪುರುಷ ರಲ್ಲಿಯೂ ‘ಪಿಲ್’ಗಳನ್ನು ಬಳಸಿ ಜನನ ನಿಯಂತ್ರಿಸಲು ಸಾಧ್ಯವೇ ಎಂದು ವಿಜ್ಞಾನಿಗಳು ವೈದ್ಯರು ೫೦ ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ಒಂದು ಪ್ರಯತ್ನ ಆ ದಿಸೆಯಲ್ಲಿ ಗುರಿ ಮುಟ್ಟುವ ಸಾಧ್ಯತೆಗಳು ಜಾಸ್ತಿ ಇವೆ. ಜನನ ನಿಯಂತ್ರಣ ಸಾಧನಗಳು ಮಹಿಳೆಯರಿಗೆ ಹೋಲಿಸಿ ದರೆ ಪುರುಷರಲ್ಲಿ ಬಹಳ ಕಡಿಮೆ.

ಹಾಗಾಗಿ ಮಹಿಳೆಯರೇ ಹೆಚ್ಚಾಗಿ ಗರ್ಭ ನಿರೋಧಕ ವ್ಯವಸ್ಥೆಗೆ ಒಳಪಡು ತ್ತಾರೆ ಎಂದು ಇತ್ತೀಚಿನ ಜಾಗತಿಕ ಸಮೀಕ್ಷೆಯೊಂದು ತಿಳಿಸುತ್ತದೆ. ವೀರ್ಯ ನಿರೋಧಕ ಚೀಲ (ಕಾಂಡಮ) ಉಪಯೋಗಿಸುವ ಪುರುಷರು ಶೇ.೮ ಅಥವಾ ಶೇ.೯ ಮಾತ್ರ. ಕಾಂಡಮ್ ಹೊರತುಪಡಿಸಿದರೆ ಪುರುಷರಿಗೆ ಇರುವ ಮತ್ತೊಂದು ಜನನ ನಿರೋಧಕ ಸಾಧ್ಯತೆ ವ್ಯಾಸೆಕ್ಟಮಿ ಎಂಬ ಶಸ
ಕ್ರಿಯೆ.

ಇದರಲ್ಲಿ ಪುರುಷನ ವೃಷಣಗಳಿಂದ ಜನನಾಂಗಕ್ಕೆ ವೀರ್ಯ ಸಾಗಿಸುವ ನಾಳವನ್ನು ಕತ್ತರಿಸಿ ಸಂಪರ್ಕ ಕಡಿದು ಹಾಕಲಾ ಗುತ್ತದೆ. ಮಕ್ಕಳಾಗುವ ಸಾಧ್ಯತೆಯನ್ನು ಇದು ಶಾಶ್ವತವಾಗಿ ಇಲ್ಲವಾಗಿಸುತ್ತದೆ. ಇದನ್ನು ಹಿಂದಿರುಗಿಸಿ ಮೊದಲಿನಂತೆ ಮಾಡುವುದು ತುಂಬಾ ಕಷ್ಟ, ಕೆಲವೊಮ್ಮೆ ಹಾಗೆ ಮಾಡಿದ ಉದಾಹರಣೆಗಳು ಇವೆ. ಅದು ತುಂಬಾ ದುಬಾರಿ ಶಸ್ತ್ರಕ್ರಿಯೆ. ವ್ಯಾಸೆಕ್ಟಮಿ ಶಸ್ತ್ರ ಕ್ರಿಯೆಯನ್ನು ನಾನಾ ಕಾರಣಗಳಿಗಾಗಿ ಪುರುಷರು ಇಷ್ಟಪಡುವುದಿಲ್ಲ.

ಅಲ್ಲದೆ ಅದು ಶಸ್ತ್ರಕ್ರಿಯೆ ಆದ್ದರಿಂದ ಅದರದ್ದೇ ಆದ ಹಲವು ತೊಡಕುಗಳು, ಪಾರ್ಶ್ವ ಪರಿಣಾಮಗಳು, ಋಣಾತ್ಮಕ ಅಂಶಗಳೂ ಇವೆ. ಅದರ ಬದಲು ಪುರುಷರಿಗಾಗಿಯೇ ಪಿಲ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದು ಪರಿಣಾಮಕಾರಿ, ಸುರಕ್ಷಿತವಾಗಿರ ಬೇಕು. ಹಾಗೆಯೇ ಭವಿಷ್ಯದಲ್ಲಿ ಮಕ್ಕಳನ್ನು ಪಡೆಯುವ ಸಾಧ್ಯತೆಗೆ ತೊಂದರೆ ಕೊಡಬಾರದು. ಈ ಎಲ್ಲ ಉದ್ದೇಶದಿಂದ ಪ್ರಯತ್ನ ಸಾಗಿದೆ. ಈಗ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿರುವ  ಪಿಲ್‌ನಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಅನ್ನು ಉತ್ಪಾ ದಿಸುವ ಕ್ರಿಯೆಯನ್ನು ವೃಷಣಗಳು ನಿಲ್ಲಿಸುತ್ತವೆ.

ಪರಿಣಾಮ ಎಂದರೆ ವೀರ್ಯದ ಉತ್ಪಾದನೆ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಪುರುಷರ ಪಿಲ್ ಹೇಗೆ ಕೆಲಸ ಮಾಡುತ್ತದೆ ? ಮಹಿಳೆಯರಲ್ಲಿರುವಂತೆಯೇ ಈ ಪುರುಷರ ಪಿಲ್ ಸಹಿತ ಕೆಲಸ ಮಾಡುತ್ತದೆ. ಅಂದರೆ ಇದು ಮೆದುಳಿನಿಂದ ಸಂತಾನೋತ್ಪತ್ತಿ ವ್ಯವಸ್ಥೆಗೆ ಬರುವ ಸಂದೇಶಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತದೆ. ಅಂದರೆ ವೃಷಣಗಳಲ್ಲಿ ಉತ್ಪನ್ನವಾಗುವ ಟೆಸ್ಟೋಸ್ಟಿರೋನ್ ಹಾರ್ಮೋನುಗಳ ಉತ್ಪಾದನೆ ನಿಲ್ಲುವಂತೆ ಮೆದುಳು ಸಂದೇಶ ಕಳಿಸುತ್ತದೆ. ಈ
ಟೆಸ್ಟೋಸ್ಟಿರೋನ್ ಹಾರ್ಮೋನಿಗೆ ಹಲವಾರು ಜವಾಬ್ದಾರಿಗಳಿವೆ.

ಇದು ಪುರುಷರ ಲೈಂಗಿಕ ಇಚ್ಛೆಯನ್ನು ಜಾಗೃತ ವಾಗಿಡುತ್ತದೆ, ಹೊಸ ಮೂಳೆ ಮತ್ತು ಮಾಂಸಗಳ ಬೆಳವಣಿಗೆಯನ್ನು
ಉದ್ದೀಪನಗೊಳಿಸುತ್ತದೆ. ಹಾಗೆಯೇ ಪ್ರೋಸ್ಟೇಟ್ ನಂತಹ ಸಂತಾನೋತ್ಪತ್ತಿ ವ್ಯವಸ್ಥೆಯ ಇತರ ಅಂಗಗಳನ್ನು ಬೆಂಬಲಿಸು ತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪುರುಷರ ವೀರ್ಯದ ಉತ್ಪಾದನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವೃಷಣಗಳಲ್ಲಿ ಉತ್ತಮ
ಗುಣಮಟ್ಟದ ವೀರ್ಯ ಉತ್ಪನ್ನ ಮಾಡುವಂತೆ ಪ್ರೇರೇಪಿಸುತ್ತದೆ.

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಸ್ಟಿಫಾನಿ ಪೇಜ್ ಮತ್ತು ಅವರ ತಂಡ ಈ ಅಧ್ಯಯನವನ್ನು ಕೈಗೊಂಡಿದೆ. ಈ ಪಿಲ್ ಮೂಲಕ ಟೆಸ್ಟೋಸ್ಟಿರೋನ್ ಕೊಟ್ಟಾಗ ದೇಹದಲ್ಲಿ ಬಹಳಷ್ಟು ಈ ಹಾರ್ಮೋನು ಇದೆ ಎಂದು
ಮೆದುಳು ತಿಳಿದುಕೊಂಡು ಆಗ ವೃಷಣಗಳಲ್ಲಿ ಟೆಸ್ಟೋಸ್ಟಿರೋನ್ ಉತ್ಪಾದನೆಯನ್ನು ತಡೆಹಿಡಿಯುತ್ತದೆ. ವೃಷಣಗಳಲ್ಲಿ ಟೆಸ್ಟೋಸ್ಟಿರೋನ್ ಪ್ರಮಾಣ ಜಾಸ್ತಿ ಇಲ್ಲದಿದ್ದಾಗ ಪುರುಷನ ರೇತಸ್ಸು ಅಥವಾ ವೀರ್ಯ ಉತ್ತಮ ಗುಣಮಟ್ಟ
ಹೊಂದುವುದಿಲ್ಲ.

ರಕ್ತದಲ್ಲಿರುವ ಟೆಸ್ಟೋಸ್ಟಿರೋನ್ ಹಾರ್ಮೋನಿನ ಮಟ್ಟವನ್ನು ಮೆದುಳು ಮಾನಿಟರ್ ಮಾಡುತ್ತಿರುತ್ತದೆ. ಅಗತ್ಯವಿದ್ದಾಗ ಹೆಚ್ಚು ಉತ್ಪಾದಿಸಲು ಇಲ್ಲವೇ ಉತ್ಪಾದಿಸದೆ ಇರಲು ಸೂಚನೆ ಕೊಡುತ್ತಿರುತ್ತದೆ. ಸಹಜವಾದ ಟೆಸ್ಟೋಸ್ಟಿರೋನ್ ರಕ್ತದ ಮೂಲಕ ದೇಹದಲ್ಲಿ ಚಲನೆಯಾಗುತ್ತಿರುತ್ತದೆ. ವೀರ್ಯದ ಉತ್ಪಾದನೆಗೆ ಹಾರ್ಮೋನು ಅಗತ್ಯವಿರುವುದರಿಂದ ವೃಷಣಗಳಲ್ಲಿ ತುಂಬಾ ಅಧಿಕ ಪ್ರಮಾಣದಲ್ಲಿ ಅದು ಉತ್ಪನ್ನವಾಗುತ್ತದೆ. ರಕ್ತದಲ್ಲಿನ ಟೆಸ್ಟೋಸ್ಟಿರೋನ್ ಗಿಂತ ವೃಷಣಗಳಲ್ಲಿನ ಟೆಸ್ಟೋಸ್ಟಿರೋನ್ ೧೦೦೦ ಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ.

ಟೆಸ್ಟೋಸ್ಟಿರೋನ್ ಅನ್ನು ಬಾಯಿಯ ಮೂಲಕ ಕೊಟ್ಟಾಗ ಅದು ರಕ್ತದ ಮೂಲಕ ದೇಹದ ಎಲ್ಲ ಕಡೆ ಚಲಿಸುತ್ತದೆ. ದೇಹದಲ್ಲಿ ರುವ ಸಹಜವಾದ ಟೆಸ್ಟೋಸ್ಟಿರೋನ್ ಎಂದು ಇದನ್ನು ಮೆದುಳು ಗ್ರಹಿಸುತ್ತದೆ. ಪುರುಷರ ಜನನ ನಿರೋಧಕ ಪಿಲ್‌ನಲ್ಲಿ ಟೆಸ್ಟೋಸ್ಟಿರೋನ್‌ನ ಮಟ್ಟ ಅಽಕವಾಗಿದ್ದು ರಕ್ತದಲ್ಲಿ ಅದು ಚಲಿಸುತ್ತಿರುವಾಗ ಮೆದುಳು ದೇಹದ ಎಲ್ಲ ಕಡೆಯಂತೆಯೇ ವೃಷಣಗಳಲ್ಲಿ ಕೂಡ ಹಾರ್ಮೋನಿನ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚನೆ ಕಳಿಸುತ್ತದೆ. ಆದರೆ ಅದರ ಬಹಳ ಕಡಿಮೆ ಅಂಶ ವೃಷಣಗಳ ಒಳಗೆ ಪ್ರವೇಶ ಪಡೆಯುತ್ತದೆ. ದೇಹವು ಟೆಸ್ಟೋಸ್ಟಿರೋನ್ ಉತ್ಪಾದನೆ ಮಾಡದೇ ವೃಷಣಗಳ ಒಳಗೆ ಈ ಹಾರ್ಮೋನು ಪ್ರವೇಶ ಪಡೆಯದ ಸ್ಥಿತಿಯಲ್ಲಿ ಉತ್ತಮ ಗುಣಮಟ್ಟದ ವೀರ್ಯವು ಉತ್ಪನ್ನವಾಗುವುದಿಲ್ಲ, ಬೆಳವಣಿಗೆಯಾಗುವು ದಿಲ್ಲ. ಬಾಯಿಯ ಮೂಲಕ ಟೆಸ್ಟೋಸ್ಟಿರೋನ್ ಕೊಟ್ಟಾಗ ಅದು ಬಹಳ ಬೇಗ ವಿಭಜನೆಯಾಗುತ್ತದೆ.

ಅಂದರೆ ವ್ಯಕ್ತಿಯು ದಿವಸದಲ್ಲಿ ಎರಡು ಅಥವಾ ಮೂರು ಪಿಲ್ ತೆಗೆದುಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಮೊದಲು ತಿಳಿಸಿದ ಡಾ.ಸ್ಟಿಫಾನಿ ಪೇಜ್ ಮತ್ತು ಆಕೆಯ ಸಹೋದ್ಯೋಗಿಗಳು ಡೈಮಿಥಂಡ್ರೊಲೋನ್ ಅಂಡೆಕ್ಯಾನೋಯೇಟ್ (DMAU) ಎಂಬ ಬೇರೆಯ ಔಷಧವನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ವೃಷಣಗಳಲ್ಲಿನ ಟೆಸ್ಟೋಸ್ಟಿರೋನ್ ಉತ್ಪಾದನೆ ಯನ್ನು ನಿಲ್ಲಿಸುತ್ತದೆ, ಹಾಗೆಯೇ ದೇಹದಲ್ಲಿ ೨೪ ಗಂಟೆಗಳ ಕಾಲ ಇರಬಲ್ಲದು. ಹಾಗಾಗಿ ಮಹಿಳೆಯರ ಪಿಲ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆ.

ಈ ಪಿಲ್‌ನ ಹಿಂದಿನ ಇತಿಹಾಸ: ಡಿಎಂಏಯ ವಿಧಾನವನ್ನು ಉಪಯೋಗಿಸಿ 2018ರಲ್ಲಿ ಒಂದು ಅಧ್ಯಯನ ನಡೆಸ ಲಾಯಿತು. ನೂರು ಜನರಲ್ಲಿ ಇದನ್ನು ಪ್ರಯೋಗಿಸಿದಾಗ ಟೆಸ್ಟೋಸ್ಟಿರೋನ್ ಮಟ್ಟವನ್ನು ಈ ಪಿಲ್ ಗಮಮನಾರ್ಹವಾಗಿ ಕಡಿಮೆ ಮಾಡಿತು. ಸದ್ಯ ಈ ಔಷದವು ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದೆ. ಅದರಲ್ಲಿ ವಿವಿಧ ಡೋಸ್ ಗಳು, ಪಾರ್ಶ್ವ ಪರಿಣಾಮಗಳು, ವೀರ್ಯಾಣುಗಳ ಸಂಖ್ಯೆಯ ಬಗ್ಗೆ ವಿವರವಾದ ಅಧ್ಯಯನ – ಇವುಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಆರಂಭದ ಸುರಕ್ಷಿತ ಪರೀಕ್ಷೆಯ ನಂತರ ಕೆಲವು ದಂಪತಿಗಳಲ್ಲಿ ಇದನ್ನು ಪರೀಕ್ಷಿಸುವ ಬಗ್ಗೆ ಸಂಶೋಧಕರು ಯೋಜನೆ
ಹಾಕಿಕೊಂಡಿದ್ದಾರೆ.

ಪಿಲ್‌ನ ಹೊರತಾಗಿಯೂ ಹಾರ್ಮೋನಲ್ ಜೆಲ್ ವಿಧಾನವನ್ನು ಪೇಜ್ ಮತ್ತು ಸಂಗಡಿಗರು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿದಿನ ಈ ಜೆಲ್ ಅನ್ನು ಪುರುಷರ ಭುಜಗಳಿಗೆ ಹಚ್ಚಿಕೊಳ್ಳಬೇಕು. ಅದು ದೇಹಕ್ಕೆ ಮತ್ತು ರಕ್ತಕ್ಕೆ ಟೆಸ್ಟೋಸ್ಟಿರೋನ್ ಅನ್ನು ರವಾನಿಸುತ್ತದೆ. ಹಾಗೆಯೇ ವೃಷಣಗಳಿಗೆ ಸಂದೇಶಗಳನ್ನು ಕೊಡುವುದನ್ನು ನಿಲ್ಲಿಸುತ್ತದೆ. ಈ ಜೆಲ್ ಈಗಾಗಲೇ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದೆ.

ಇದುವರೆಗೆ ಪರೀಕ್ಷಿಸಿದ ಒಂದು ನೂರು ದಂಪತಿಗಳಲ್ಲಿ ಆಶಾದಾಯಕ ಫಲಿತಾಂಶ ನೀಡಿದೆ. ಈ ಜೆಲ್ ಗರ್ಭನಿರೋಧಕವು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಎಂದು ಈವರೆಗಿನ ಸಂಶೋಧನೆ ತಿಳಿಸು ತ್ತದೆ. ಆರೋಗ್ಯವಂತ ಪುರುಷರಲ್ಲಿ ಒಂದು ಮಿ. ಲಿ. ವೀರ್ಯದಲ್ಲಿ ೧೫ ರಿಂದ 200 ಮಿಲಿಯನ್ ವೀರ್ಯಾಣು ಗಳಿರುತ್ತವೆ. ಮೇಲಿನ ಜೆಲ್ ಉಪಯೋಗಿಸಿದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಒಂದು ಮಿಲಿಯನ್‌ಗಿಂತ ಕಡಿಮೆಯಾಗುತ್ತದೆ. ೧೫ ಮಿಲಿಯನ್‌ಗಿಂತ ಕಡಿಮೆ ವೀರ್ಯಾಣುಗಳಿದ್ದರೆ ಅಂತಹ ಪುರುಷನಿಂದ ಮಕ್ಕಳನ್ನು ಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆ ಮೇಯೋ ಕ್ಲಿನಿಕ್ ಗುಣಮಟ್ಟವನ್ನು ನಿಗದಿಪಡಿಸಿದೆ.

ಇದು ಈಗ ಉಪಯೋಗದಲ್ಲಿರುವ ಮಹಿಳೆಯರ ಗರ್ಭ ನಿರೋಧಕ ಪಿಲ್‌ಗಳಿಗೆ ಸರಿಸಮ ಅಥವಾ ಅದಕ್ಕಿಂತ ಉತ್ತಮ ಎಂದು ಡಾ ಪೇಜ್‌ರ ಅಭಿಮತ. ಈ ಗರ್ಭ ನಿರೋಧಕ ಸಾಧನಗಳ ಪಾರ್ಶ್ವ ಪರಿಣಾಮಗಳ ಬಗ್ಗೆ ಅದರಲ್ಲಿಯೂ ಹಾರ್ಮೋನ್ ಬಳಕೆ
ಯಾಗಿದ್ದರಿಂದ ಹಲವು ಪುರುಷರು ಇದರ ಬಳಕೆ ಮಾಡುವ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಈ ಕ್ಲಿನಿಕಲ್ ಟ್ರಯಲ್‌ನಲ್ಲಿ ಸೇರಿದ್ದ ಹೆಚ್ಚಿನ ಪುರುಷರು ಇದರಿಂದ ಉಂಟಾಗಬಹುದಾದ ಸಣ್ಣ ಪುಟ್ಟ ಪಾರ್ಶ್ವ ಪರಿಣಾಮಗಳ ಬಗ್ಗೆ ತಾವು ಹೆಚ್ಚು ಗಮನ
ಕೊಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆಂದು ಕ್ಲಿನಿಕಲ್ ಟ್ರಯಲ್‌ನಲ್ಲಿ ಒಳಗೊಂಡ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕೆರ್ ವೈದ್ಯಕೀಯ ಕಾಲೇಜಿನ ಸ್ತ್ರೀ ರೋಗ ಶಾಸ್ತ್ರದ ಪ್ರೊಫೆಸರ್ ಡಾ ಬ್ರಯಾನ್ ಗುಯೆನ್ ನುಡಿಯು ತ್ತಾರೆ.

ಇವರು ಡಿಎಂಎಯು ಅಧ್ಯಯನದಲ್ಲಿ ಡಾ ಪೇಜ್ ಅವರೊಡನೆ ಕೆಲಸ ಮಾಡಿದ್ದರು. ಈ ಜನನ ನಿಯಂತ್ರಕ ಪಿಲ್ ಅಥವಾ ಜೆಲ್ ನಮಗೆ ಕೊಡುವ ಮನಃ ಶಾಂತಿಯ ಎದುರು ಸಣ್ಣ ಪುಟ್ಟ ತೊಂದರೆಗಳು ಗೌಣ ಎಂದು ಅವರಲ್ಲಿ ಹೆಚ್ಚಿನವರ ಅಭಿಮತ.
ಪಾರ್ಶ್ವ ಪರಿಣಾಮಗಳು: ಕೆಲವರಲ್ಲಿ ಮೂಡ್‌ನಲ್ಲಿ ವೈಪರೀತ್ಯ ಕಾಣಬಹುದು, ಕೆಲವರಲ್ಲಿ ಸ್ವಲ್ಪ ಚರ್ಮದ ಸಮಸ್ಯೆ ಕಾಣಿಸಿ ಕೊಳ್ಳಬಹುದು, ಕೆಲವರಲ್ಲಿ ತೂಕ ಜಾಸ್ತಿ ಆಗಬಹುದು ಮತ್ತೆ ಕೆಲವರಲ್ಲಿ ಲೈಂಗಿಕ ಪ್ರೇರಕ ಶಕ್ತಿ ಕಡಿಮೆಯಾಗಬಹುದು. ಇದೇ ರೀತಿಯ ಹಲವು ಪಾರ್ಶ್ವ ಪರಿಣಾಮಗಳು ಮಹಿಳೆಯರು ಉಪಯೋಗಿಸುವ ಹಾರ್ಮೋನ್ ಒಳಗೊಂಡ ಗರ್ಭ ನಿರೋಧಕ ಪಿಲ್‌ನಲ್ಲೂ ಇವೆ.

ದೇಹಕ್ಕೆ ಲೇಪಿಸುವ ಅಥವಾ ಬಾಯಿಯ ಮೂಲಕ ಕೊಡುವ – ಹೀಗೆ ಯಾವ ರೀತಿಯ ಗರ್ಭ ನಿರೋಧಕ ವಿಧಾನವನ್ನು ಅಳವಡಿಸಿಕೊಂಡರೂ ಅವು ದೇಹದ ಆಂತರಿಕ ಕೆಲಸದ ವಿಧಾನವನ್ನು ಬದಲಿಸುತ್ತವೆಯಾದ್ದರಿಂದ ಸ್ವಲ್ಪ ಪ್ರಮಾಣದ ಪಾರ್ಶ್ವ ಪರಿಣಾಮಗಳು ಇದ್ದೇ ಇರುತ್ತವೆ ಎಂದು ಡಾ ಗುಯೆನ್‌ರ ಅಭಿಮತ. ಹಾಗೆಯೇ ಹಾರ್ಮೋನ್ ಒಳಗೊಳ್ಳದ ಹಲವು ಗರ್ಭ ನಿರೋಧಕ ವಿಧಾನಗಳು ಅಧ್ಯಯನದ ನಾನಾ ಹಂತದಲ್ಲಿವೆ. ಪುರುಷರ ಜನನಾಂಗಕ್ಕೆ ಇಂಜೆಕ್ಷನ್ ಕೊಡುವುದು ಒಂದು ವಿಧಾನ. ಇದು ವೃಷಣದಿಂದ ವೀರ್ಯವು ಸಾಗುವ ನಾಳವನ್ನು ತಾತ್ಕಾಲಿಕವಾಗಿ ಮುಚ್ಚುತ್ತದೆ.

ಅಂದರೆ ಇದು ವ್ಯಾಸೆಕ್ಟಮಿ ಶಸ್ತ್ರಕ್ರಿಯೆಯಂತೆಯೇ ಕೆಲಸ ಮಾಡುತ್ತದೆ. ಗರ್ಭನಿರೋಧಕ ಔಷಧಗಳನ್ನು ಒಳಗೊಂಡ ಇಂಪ್ಲಾಂಟ್‌ಗಳನ್ನು ಕೆಲವು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ. ಇವು ದೇಹದಲ್ಲಿ ನಿಧಾನವಾಗಿ ಔಷಧ ಶ್ರವಿಸುವು ದಲ್ಲದೆ ಅದರ ಪರಿಣಾಮ ದೀರ್ಘಕಾಲ ಇರುತ್ತದೆ. ಆದರೆ ಹಾರ್ಮೋನ್ ಒಳಗೊಂಡ ಪಿಲ್ ಅಥವಾ ಜೆಲ್ – ಇವುಗಳೇ ಉತ್ತಮ ಎಂದು ಡಾ. ಗುಯೆನ್‌ರ ಅಭಿಮತ. ಮುಖ್ಯವಾಗಿ ಅವುಗಳ ಪರಿಣಾಮ ತಾತ್ಕಾಲಿಕವಾಗಿರುತ್ತದೆ. ಅಗತ್ಯ ಬಿzಗ
ಅವುಗಳನ್ನು ನಿಲ್ಲಿಸಿದರೆ ಮಕ್ಕಳನ್ನು ಪಡೆಯುವ ಸಾಧ್ಯತೆ ಇದ್ದೇ ಇದೆ. ಅಲ್ಲದೆ ವೀರ್ಯದ ಉತ್ಪಾದನೆಯ ವ್ಯವಸ್ಥೆಯನ್ನು ಯಾವುದೇ ಹಂತದಲ್ಲಿಯೂ ಕೆಡಿಸುವುದಿಲ್ಲ ಎಂದು ತಜ್ಞರ ಅಭಿಪ್ರಾಯ.

ಗರ್ಭನಿರೋಧಕ ವಿಧಾನವನ್ನು ನಿಲ್ಲಿಸಿ ೮ ರಿಂದ ೧೨ ವಾರಗಳಲ್ಲಿ ವೀರ್ಯಾಣುಗಳ ಸಂಖ್ಯೆ ಮೊದಲಿನ ಸಹಜ ಅಂಕಿಗಳಿಗೆ
ಹಿಂದಿರುಗುತ್ತದೆ. ಈ ವ್ಯವಸ್ಥೆಯನ್ನು ಉಪಯೋಗಿಸಿ ನಂತರ ನಿಲ್ಲಿಸಿದಾಗ ಪುರುಷರ ಮಕ್ಕಳನ್ನು ಪಡೆಯುವ ಶಕ್ತಿ ಮೊದಲಿ ಗಿಂತ ಭಿನ್ನ ವಾಗುತ್ತದೆಯೋ ಇಲ್ಲವೋ ಎಂದು ಖಚಿತವಾಗಿ ನುಡಿಯಲು ಇನ್ನೂ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ ಎಂದು ಡಾ. ಪೇಜ್ ಅಭಿಪ್ರಾಯ ಪಡುತ್ತಾರೆ.

ಅಮೆರಿಕದ ಎಫ್ಡಿಎಯ ರೆಗ್ಯುಲೇಟರಿಯ ಕಠಿಣ ನಿಯಮಗಳ ಕಾರಣ ಎಷ್ಟು ಜನರಲ್ಲಿ ಎಷ್ಟು ದಿನಗಳ ಕಾಲ ಅಧ್ಯಯನ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಧ್ಯಯನಕಾರರ ಅಭಿಪ್ರಾಯ. ಹಾಗಾಗಿ ಈ ಅಧ್ಯಯನಕ್ಕೆ ಬಂಡವಾಳ
ಹೂಡಲು ಹಲವು ಕಂಪನಿಗಳು ಹಿಂಜರಿಯುತ್ತಿವೆ. ಹಾಗಾಗಿ ಈ ಪಿಲ್ ಮತ್ತು ಜೆಲ್ ಮಾರುಕಟ್ಟೆಗೆ ಬರುವುದು ನಿರೀಕ್ಷೆಗಿಂತ ತಡವಾಗಬಹುದು. ಅದಕ್ಕೆ ಉತ್ತಮ ಉದಾ: ಕೋವಿಡ್ ವ್ಯಾಕ್ಸಿನುಗಳು. ಕರೋನ ವೈರಸ್ ವಿರುದ್ಧದ ವ್ಯಾಕ್ಸೀನುಗಳಿಗೆ ಹೆಚ್ಚಿನ ಎಲ್ಲ ದೇಶಗಳಲ್ಲಿ ಹಣಕಾಸಿನ ಕೊರತೆಯಾಗಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಪಿಲ್ ಮತ್ತು ಜೆಲ್ ಮಾರುಕಟ್ಟೆಗೆ
ಬರುವುದು ಏಳರಿಂದ ಎಂಟು ವರ್ಷಗಳ ಆಗಬಹುದೆಂದು ಸಂಶೋಧಕರ ಅಭಿಪ್ರಾಯ.

Read E-Paper click here