Saturday, 14th December 2024

ಗಂಡೆಂದ್ರೆ ಗಂಡು- ಹೆಣ್ಣೆಂದ್ರೆ ಹೆಣ್ಣು

ಶಿಶಿರ ಕಾಲ

shishirh@gmail.com

ಶ್ರೀ ಶಿವ ಸ್ತೋತ್ರದಲ್ಲಿ ಒಂದಾದ ಅರ್ಧನಾರೀಶ್ವರ ಸ್ತೋತ್ರ ಹೀಗೆ ಆರಂಭವಾಗುತ್ತದೆ. ಚಾಂಪೇಯ ಗೌರಾರ್ಧಶರೀರ ಕಾಯೈ, ಕರ್ಪೂರ ಗೌರಾರ್ಧ ಶರೀರ ಕಾಯೈ? ಧಮ್ಮಿಲ್ಲಕಾಯೈ ಚ ಜಟಾಧರಾಯ, ನಮಃ ಶಿವಾಯೈ ಚ ನಮಃ ಶಿವಾಯ.

ಅರ್ಧನಾರೀಶ್ವರ – ಇದು ಕೇವಲ ಗಂಡು ಹೆಣ್ಣಿನ ಸಮ್ಮಿಳಿತ ಎಂದು ಅದರ ವ್ಯಾಪ್ತಿಯನ್ನು ಕುಗ್ಗಿಸುವುದು ಒಂದು ಕಡೆ. ಅದರಾಚೆ ಈ ದೇಹರಚನೆಗೆ ಕೂಡ ದೈವಾರೋಪ ಮಾಡುವುದು ವಿಶೇಷ ಮತ್ತು ಬಹಳ ಚಂದ. ಇದು ದೈವತ್ವಕ್ಕೆ ಮಾತ್ರ ಸೀಮಿತವಾದದ್ದಲ್ಲ. ಅದರಾಚೆ ಈ ದೇಹ ರಚನೆಗೆ ಕೊಡಮಾಡುವ ವಿಶೇಷ ಸ್ಥಾನಮಾನದ ದ್ಯೋತಕ ಎಂದೇ ಪರಿಗಣಿಸಬೇಕು. ಏಕೆಂದರೆ ಹಾಗೆ ಸಖಾ ಸುಮ್ಮನೆ ಏನೋ ಒಂದು ಹೋಲಿಕೆ ಮಾಡಿ ಪೂಜಿಸು ವವರಲ್ಲ ನಮ್ಮ ಹಿರಿಕರು.

ಇದು ಜಗತ್ತಿನ ಯಾವ ಸಂಸ್ಕೃತಿಯಲ್ಲಿಯೂ ಇಲ್ಲದ ಸ್ಥಾನಮಾನ. ಅದು ಆ ದೈಹಿಕ ರಚನೆಯನ್ನೂ ದೈವ ಸ್ಥಾನಕ್ಕೆ ಏರಿಸಿ ನೋಡುವ ಒಂದು ಮಹತ್ವದ ವೈಚಾರಿಕ ಪ್ರಬುದ್ಧತೆ. ಇತಿಹಾಸವನ್ನು ನೋಡುವಾಗ ಭಾರತವನ್ನು ಬಿಟ್ಟರೆ, ಚೀನಾ, ಗ್ರೀಸ್ ಮತ್ತು ರೋಮನ್ ನಾಗರಿಕತೆಯನ್ನು ಒಂದು ಬೇಸ್ ಆಗಿ ಇಟ್ಟುಕೊಳ್ಳುವುದು ಸಮಂಜಸ. ಚೀನಾ ಇತಿಹಾಸ ಸಿಗುವುದೇ ಕಷ್ಟ. ಕಮ್ಯುನಿಸ್ಟರು ಬಂದ ಮೇಲಂತೂ ಅವರ ಇತಿಹಾಸವನ್ನು ಸೆಲ್ ಡಿಸ್ಟ್ರಕ್ಟ್ – ತಾವೇ ನಾಶ ಮಾಡಿಕೊಂಡು ಬಿಟ್ಟಿದ್ದಾರೆ. ಇಲ್ಲದಿದ್ದರೆ ಚೀನಾದವರದ್ದೂ ಭವ್ಯವಾದ ಇತಿಹಾಸವೇ ಇತ್ತು, ಬಿಡಿ. ಈ ತೃತೀಯ ಲಿಂಗಿಗಳ ಬಗ್ಗೆ ಗ್ರೀಸ್ ಇತಿಹಾಸ ದಲ್ಲಿ ಸಾಕಷ್ಟು ಪ್ರಸ್ತಾಪ ಇದೆ.

ಗ್ರೀಸಿನ ಕವಿ Sappho ಮತ್ತು ಆಕೆಯ ಸಮಕಾಲೀನರು ಬಹಳಷ್ಟು ಕಾವ್ಯಗಳಲ್ಲಿ ತೃತೀಯ ಲಿಂಗಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಆಕೆ ಜೀವಿಸಿದ್ದು ಸುಮಾರು ಎರಡೂವರೆ ವರ್ಷದ ಹಿಂದೆ. ಆಕೆಯ ಕಾವ್ಯಗಳಲ್ಲಿ ತೃತೀಯ ಲಿಂಗಿಗಳನ್ನು ವಿಜೃಂಭಿಸುವುದನ್ನು ಕಾಣಬಹುದು. ಆದರೆ ಗ್ರೀಸ್ ಇತಿಹಾಸ ವನ್ನು,  ಅಂದಿನ ಸಮಾಜದ ವಿವರಣೆಗಳನ್ನು ನೋಡಿದಾಗ ಅಲ್ಲಿ ಕೇವಲ ಶೋಷಣೆಯೇ ಜಾಸ್ತಿ ಎದ್ದು ಕಾಣಿಸು ತ್ತದೆ. ತೃತೀಯ ಲಿಂಗಿಗಳನ್ನು, ಅತ್ತ ಪೂರ್ಣ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ದೇಹರಚನೆಯನ್ನು ಅಸಹಜ ಎಂದು ಪರಿಗಣಿಸಿದ್ದೇ ಜಾಸ್ತಿ. ತೃತೀಯ ಲಿಂಗಿಗಳನ್ನು ಗ್ರೀಸಿನಲ್ಲಿ ಪ್ರಾಣಿಗಳನ್ನು ಸಂಬೋಧಿಸಿದಂತೆಯೇ ಕರೆಯುವ ಹಲವು ಉಲ್ಲೇಖಗಳು ಸುಲಭಕ್ಕೆ ಸಿಗುತ್ತವೆ.

ಇನ್ನು ರೋಮನ್ ಇತಿಹಾಸ ನೋಡುವುದಾದರೆ, ಅಲ್ಲಿ ನಮ್ಮಂತೆಯೇ ಸಾಕಷ್ಟು ವೆರೈಟಿ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬ ದೇವತೆ Cybele. ಆಕೆ ಅರ್ಧನಾರೀಶ್ವರ ಅಲ್ಲ, ಹೆಣ್ಣು ದೇವರು. ಆದರೆ ಇಚ್ಛಿಸಿದಲ್ಲಿ ಆಕೆ ಗಂಡಾಗುವ, ಗಂಡು ರೂಪ ಪಡೆಯುವ ಶಕ್ತಿಯುಳ್ಳವಳಾಗಿದ್ದಳು ಎನ್ನುವ ನಂಬಿಕೆ ಇತ್ತು. ಆ ಸೈಬೀಲ್ ದೇವರಿಗೆ ಪೂಜಿಸುವವರು ತೃತೀಯ ಲಿಂಗಿಗಳಾಗಿದ್ದರು. ಆ ದೇವತೆಯ ದೇವಸ್ಥಾನಕ್ಕೆ ಇವರೇ ಅರ್ಚಕರಾಗಿರುತ್ತಿದ್ದರು. ಅಲ್ಲಿ ಹೋಗಿ ಎಲ್ಲರೂ ಕೈ ಮುಗಿಯುತ್ತಿದ್ದರು. ಈ ಅರ್ಚಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿತ್ತು. ಆದರೆ ಆ ಅರ್ಚಕರಿಗೆ ಮಾತ್ರ ಈ ಮರ್ಯಾದೆ ಸೀಮಿತವಾಗಿತ್ತು ಮತ್ತು ಅದರಾಚೆ ತೃತೀಯ ಲಿಂಗಿಗಳನ್ನು ತೀರಾ ನಿಕೃಷ್ಟವಾಗಿ ನೋಡುವ ಪರಿಪಾಠವಿತ್ತು.

ಇನ್ನು ಈಜಿಪ್ಟ್ ಮತ್ತು ಮೆಸಪಟೋಮಿಯಾದಲ್ಲಿಯೂ ಅಷ್ಟೆ. ಅಲ್ಲಿ ತೃತೀಯ ಲಿಂಗಿಗಳಿಗೆ ರೋಗ ರುಜಿನೆಗಳನ್ನು ಶಮನ ಮಾಡುವ ಶಕ್ತಿಯಿತ್ತೆಂಬ ನಂಬಿಕೆಯಿತ್ತು. ಆದರೆ ಅವರನ್ನು ಸಮಾಜ ಎಂದೂ ತಮ್ಮವರೊಳಗೊಬ್ಬ ಎಂದು ಮಾನವೀಯ ದೃಷ್ಟಿಯಲ್ಲಿ ನೋಡುವ ಪರಿಪಾಠ ಇರಲಿಲ್ಲ. ಅವರೆಂದಿಗೂ ಅನ್ಯರಾಗಿದ್ದರು. ಹೀಗೆ ಇತಿಹಾಸದುದ್ದ ತೃತೀಯ ಲಿಂಗಿಗಳನ್ನು ಸಮಾಜದ ಅಪಸವ್ಯಗಳೆಂದು ಪರಿಗಣಿಸಿದ್ದೇ ಜಾಸ್ತಿ. ನಾನು ಬ್ರಿಟೀಷರು, ದಾಳಿಕೋರರು ಬಂದ ನಂತರದ ಭಾರತವನ್ನು ನಮ್ಮ ಪೂರ್ಣ ಇತಿಹಾಸವೆಂದು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರ ದಾಳಿಗಳು ಶುರುವಾದಾಗ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಒತ್ತಡಕ್ಕೊಳಗಾಗಿದ್ದವು. ಆ ಕಾರಣಕ್ಕೆ ಆಗ ಹೇಗಿತ್ತು ಎಂದು ವಿಶ್ಲೇಷಿಸಿದಲ್ಲಿ ಅದು ಸರಿಯಾದ ಇತಿಹಾಸದ ಪರಿಗಣನೆಯಾಗುವುದಿಲ್ಲ ಎನ್ನುವುದು ನನ್ನ ಗಟ್ಟಿ ಅನಿಸಿಕೆ.

ಬ್ರಿಟೀಷರು ಬರುವುದಕ್ಕಿಂತ ಮೊದಲ ಇತಿಹಾಸವನ್ನು ನೋಡಿದಾಗ ತೃತೀಯಲಿಂಗಿಗಳಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದ್ದದ್ದು ತಿಳಿಯುತ್ತದೆ. ನಮ್ಮ ಹಿಂದಿನ ಬಹುತೇಕ ಆಚರಣೆಗಳಿಗೆ ತೃತೀಯ ಲಿಂಗಿಗಳೇ ಬೇಕಿತ್ತು ಎನ್ನುವುದು ವಿಶೇಷ. ಅವರು ಕೇವಲ ದೇವಪೂಜೆ, ಆಚರೆಗಳಿಗಷ್ಟೇ ಸೀಮಿತ ವಾಗಿರಲಿಲ್ಲ. ಅವರಿಗೆ ಸಮಾಜದ ಹುದ್ದೆ ಪಡೆಯಲು ಯಾವುದೇ ತೊಡಕಿರಲಿಲ್ಲ. ಮನುಷ್ಯರಲ್ಲಿಯೇ ದೈವತ್ವವನ್ನು ಕಾಣುತ್ತಿದ್ದ ಸನಾತನ ಸಂಸ್ಕೃತಿ ಯಲ್ಲಿ ತೃತೀಯ ಲಿಂಗಿಗಳಲ್ಲಿ ಹೆಚ್ಚಿನ ದೈವತ್ವವನ್ನು ಕಾಣುತ್ತಿದ್ದೆವು. ಇವರೆಂದರೆ ಈಶ್ವರ. ಇಲ್ಲೊಂದು ಗ್ರಹಿಸಬೇಕು, ಮುಕ್ಕೋಟಿ ದೇವತೆಗಳಿದ್ದರೂ ಅವರಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಅತ್ಯುನ್ನತ ಸ್ಥಾನ.

ನಮ್ಮಲ್ಲಿ ದೈವ ದೇವತೆ ಮತ್ತು ದೇವರುಗಳಲ್ಲಿ ಹಿಂದೆ ಕ್ರಮಾನುಗತ (ಹೈರಾರ್ಕಿ) ಇದ್ದಂತಿಲ್ಲ. ಈ ದೇವರು ಮೇಲೆ, ಆ ದೇವರು ಕೆಳಗೆ ಇವೆಲ್ಲ ನಂತರದಲ್ಲಿ ಬೆಳೆದದ್ದು. ಆದರೂ ತ್ರಿಮೂರ್ತಿಗಳೆಂದರೆ ವಿಶೇಷ ಸ್ಥಾನ. ಅಂತಹ ತ್ರಿಮೂರ್ತಿಗಳಲ್ಲಿ ಒಬ್ಬನಾದ ಈಶ್ವರ ರೂಪಿಯಾಗಿ ತೃತೀಯಲಿಂಗಿಗಳನ್ನು
ಕಂಡವರು ನಾವು. ಹಾಗಂತ ಸಂಪೂರ್ಣ ತಾರತಮ್ಯವೇ ಇರಲಿಲ್ಲವೆಂದೇನಲ್ಲ. ಸ್ವಲ್ಪ ಮಟ್ಟಿಗೆ ಇದ್ದಿರಬಹುದು ಎಂದೇ ಊಹಿಸೋಣ. ಆದರೆ ಖಂಡಿತ ವಾಗಿ ಅವರಿಗೆ ಸಮಾಜದಲ್ಲಿ ಕೀಳು ಭಾವವಿರಲಿಲ್ಲ.

ಅವರಿಗೆ ಎಲ್ಲರಷ್ಟೇ ಸಮ ಮರ್ಯಾದೆಯಿರುತ್ತಿತ್ತು. ಅದೆಷ್ಟೋ ರಾಜಾಸ್ಥಾನದಲ್ಲಿ ಅವರುಗಳಿಗೆ ಅವರ ಜ್ಞಾನದ, ಚಾಣಾಕ್ಷ ಕಾರಣದಿಂದಾಗಿ ಮಂತ್ರಿ ಪದವಿಯನ್ನು ನೀಡಿದ್ದೂ ಇದೆ. ಒಟ್ಟಾರೆ ತೃತೀಯಲಿಂಗಿಗಳನ್ನು ಪ್ರತ್ಯೇಕವಾಗಿಯೇ ಕಾಣುತ್ತಿದ್ದ ಮನುಕುಲದ ಇತಿಹಾಸದಲ್ಲಿ ಭಾರತೀಯ ಇತಿಹಾಸ ವಿಶೇಷವಾಗಿಯೇ ಕಾಣಿಸುತ್ತದೆ. ಅವರನ್ನು ಪ್ರತ್ಯೇಕಿಸಿ ನೋಡುತ್ತಿದ್ದರೂ ಅವರತ್ತ ಸಮಾಜದಲ್ಲಿ ಮನುಷ್ಯರಲ್ಲ ಎಂಬ ಅನಿಸಿಕೆಯಿರಲಿಲ್ಲ. ಅವರು ಎಂದಿಗೂ ಸಮಾಜದ ಒಂದು ಭಾಗವಾಗಿಯೇ ಸ್ಥಾನಮಾನ ಗಳಿಸಿದ್ದರು.

ಇದೆಲ್ಲ ಬದಲಾದದ್ದು ದಾಳಿಕೋರರು ಸಮಾಜದ ಕತ್ತು ಹಿಸುಕಿದಾಗ, ಬ್ರಿಟೀಷರು ಅವರ ಕೀಳು ವಿಚಾರ ಇಲ್ಲಿ ಪ್ರತಿಷ್ಠಾಪಿಸಿದಾಗ. ಅನಂತರದಲ್ಲಿ ಸಾಕಷ್ಟು ದೌರ್ಜನ್ಯಗಳಾದವು. ಇಂದಿಗೂ ಆ ಪ್ರತ್ಯೇಕತೆ ಮುಂದುವರಿದುಕೊಂಡೇ ಬಂದಿದೆ, ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ತೀರಾ ಇತ್ತೀಚೆಗೆ
ಇದೆಲ್ಲ ಬದಲಾಗುವ ಮುನ್ಸೂಚನೆಗಳಂತೆ ಕೆಲವು ಬೆಳವಣಿಗೆಗಳಾಗಿವೆ. ಇದು ಅವಶ್ಯವಿತ್ತು. ಸೂರ್ಯಮುಳುಗದ ಸಾಮ್ರಾಜ್ಯದಿಂದಲೇ ತೃತೀಯ ಲಿಂಗಿಗಳನ್ನು ಮನುಷ್ಯರೆಂದು ಒಪ್ಪದ ಸಂಸ್ಕೃತಿ ಬೆಳೆದದ್ದು.

ಇದು ತೀರಾ ಬ್ರಿಟೀಷ್ ವಿಚಾರ. ಅವರೇ ಜಗತ್ತನ್ನು ಆಳಿದ್ದರಿಂದ ಮತ್ತು ಅವರೇ ಬಹುತೇಕ ದೇಶದ ಕಾನೂನನ್ನು ರಚಿಸಿ, ಎಂಜಲು ಸಂವಿಧಾನವನ್ನು ಬಿಟ್ಟು ಹೋಗಿರುದರಿಂದ ತೃತೀಯ ಲಿಂಗಿಗಳು ಅಲ್ಲೆಲ್ಲೂ ಸ್ಥಾನವನ್ನೇ ಪಡೆಯಲಿಲ್ಲ. ನಂತರದಲ್ಲಿ ಸಂಪೂರ್ಣ ವ್ಯವಸ್ಥೆಯೇ ಹಾಗೆ ಬೆಳೆಯಿತು. ಈ
ಮಟ್ಟಿಗೆ ಅಮೆರಿಕಾವನ್ನು ನಾವು ಹೊಗಳಲೇಬೇಕು. ಬ್ರಿಟೀಷ್ ಸಾಮ್ರಾಜ್ಯದ ಅವನತಿಯಾದ ನಂತರ ಮೊದಲ ಬಾರಿ ತೃತೀಯ ಲಿಂಗಿಗಳು ಪ್ರಾಣಿಗಳಲ್ಲ, ಮನುಷ್ಯರು ಎಂದು ಕಾಣುವ ಬದಲಾವಣೆಗೆ ನಾಂದಿಯಾಗಿದ್ದು ಅಮೆರಿಕ. ಅದು ಬಹಳ ಒಳ್ಳೆಯ ಬೆಳವಣಿಗೆ ಎಂದೇ ಹೇಳಬೇಕು.

ಮನುಷ್ಯರನ್ನು ಮನುಷ್ಯರಂತೆ ಕಾಣಲು ಅಮೆರಿಕಾಕ್ಕೆ ಸ್ವಾತಂತ್ರ್ಯ ಬಂದಾದ ನಂತರ ನೂರೈವತ್ತು ವರ್ಷ ಬೇಕಾಯಿತು ಎಂದು ಮೂಗು ಮುರಿಯುವು ದಕ್ಕಿಂತ ಅಲ್ಲಿ ಆ ಬದಲಾವಣೆಯ ಬೀಜ ಚಿಗುರೊಡೆದದ್ದು ಎಂದು ಖುಷಿಪಡಬೇಕು. ಆ ಕೆಲಸ ಮೊದಲು ಮಾಡಿದ್ದು ಸೆಕ್ಸೋಲಾಜಿಸ್ಟ್ ಹ್ಯಾರಿ ಬೆಂಜಮಿನ್, ೧೯೫೨ ರಲ್ಲಿ. ಆತನೇ ಮೊದಲು transsexual ಎಂಬ ಶಬ್ದವನ್ನು ಬಳಸಿದ್ದು. ಇದನ್ನು ಅಂದಿನ ಕಾಲದಲ್ಲಿ ಒಬ್ಬ ಸೆಕ್ಸೋಲಾಜಿಸ್ಟ್ ಮಾತ್ರ ಮಾಡಬಹುದಿತ್ತು. ಆತ The Transsexual Phenomenon ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದ. ಇದರಿಂದಾಗಿ ಆತ ಕ್ರಿಶ್ಚಿನ್ ಮಿಷಿನರಿ ಗಳಿಂದ, ಚರ್ಚಿನಿಂದ ಸಾಕಷ್ಟು ಒತ್ತಡ ಎದುರಿಸಬೇಕಾಯಿತು. ಆತನ ಮನೆಗೆ ಕಲ್ಲು ಹೊಡೆಯುವ ಕೆಲಸವೆಲ್ಲ ಅಂದು ನಡೆದಿತ್ತು.

ಅಮೆರಿಕಾದಲ್ಲಿ ತೃತೀಯಲಿಂಗಿಗಳ ಮೇಲಿನ ದೌರ್ಜನ್ಯಕ್ಕೆ ಬ್ರಿಟೀಷರಷ್ಟೆ ಇತಿಹಾಸ. ಅವರಿಂದಲೇ ರಚಿಸಲ್ಪಟ್ಟ, ನಂತರದಲ್ಲಿ ಮುಂದುವರಿದುಕೊಂಡು ಬಂದ ಪೊಲೀಸ್ ವ್ಯವಸ್ಥೆಯ ಮೇಲೆ ಈ ಅಲ್ಪ ಸಂಖ್ಯಾತರು ಮೊದಲ ಬಾರಿ ದಂಗೆಯೆದ್ದದ್ದು. ಅಲ್ಲಿಯವರೆಗೆ ಅಮೆರಿಕಾದಲ್ಲಿ ಕೂಡ ಇವರಿಗೆ
ಕಾನೂನಿನಲ್ಲಿ ಸ್ಥಾನವೇ ಇರಲಿಲ್ಲ. ಅವರ ಮೇಲೆ ದೌರ್ಜನ್ಯವಾದರೆ ಅದಕ್ಕೆ ಕಾನೂನು ರಕ್ಷಣೆ ನೀಡುತ್ತಿರಲಿಲ್ಲ, ಪೊಲೀಸ್ ಕೇಸ್ ಮಾಡುವಂತಿರಲಿಲ್ಲ. ಖುದ್ದು ಪೊಲೀಸರೇ ಅವರನ್ನು ಕಂಡಕಂಡಲ್ಲಿ ಲಾಠಿಯಿಂದ ಥಳಿಸುತ್ತಿದ್ದರು.

ಸಭ್ಯರು ಬರುವಲ್ಲಿ ನೀವು ಬರುವಂತಿಲ್ಲ ಎಂಬುದೇ ಅಲಿಖಿತ, ಒಪ್ಪತ ಕಾನೂನಾಗಿತ್ತು. ಹೋಟೆಲ್ಲುಗಳಲ್ಲಿ ತಿಂಡಿ ತಿನ್ನಲು, ಒಂದು ಲೋಟ ಕಾಫಿ ಕುಡಿಯಲೂ ಅವರಿಗೆ ಅವಕಾಶವಿರಲಿಲ್ಲ. ಇಂತಹ ಅಮೆರಿಕಾದಲ್ಲಿ ಮೊದಲ ಬಾರಿ ತೃತೀಯ ಲಿಂಗಿಗಳು ದಂಗೆಯೆದ್ದದ್ದು ಸ್ಯಾನ್ರಾನ್ಸಿಸ್ಕೋ ಹೋಟೆಲ್
ಒಂದರಲ್ಲಿ. ಅವರಲ್ಲಿ ಒಂದಿಬ್ಬರು ಸೇರಿ ಪೊಲೀಸರ ವಿರುದ್ಧ ಎದೆ ತಟ್ಟಿ ನಿಂತಿದ್ದರು. ಅನಂತರ ನ್ಯೂಯಾರ್ಕ್ ನಲ್ಲಿಯೂ ದಂಗೆಗಳಾದವು. ಈ ದಂಗೆ ಗಳಾಗದಿದ್ದಲ್ಲಿ ಬದಲಾವಣೆಯೇ ಆಗುತ್ತಿರಲಿಲ್ಲವೇನೋ. ಅಲ್ಲಿಂದ ನಂತರ ೧೯೭೫ ರಲ್ಲಿ ಅದೇ ಸ್ಯಾನ್ರಾನ್ಸಿಸ್ಕೋದಲ್ಲಿ ಮೊದಲ ಬಾರಿ ಅವರಿಗೆಂದೇ ಒಂದು ಪ್ರತ್ಯೇಕ ಆಸ್ಪತ್ರೆ ಶುರುವಾಯಿತು.

ಇದೊಂದು ಅಭೂತ ಪೂರ್ವ ಬದಲಾವಣೆ. ಆದರೆ ಇದೆಲ್ಲ ಇನ್ನಷ್ಟು ಮುನ್ನೆಲೆಗೆ ಬಂದದ್ದು ೧೯೮೦ ರಲ್ಲಿ. ಅದು HIV – ಏಡ್ಸ್ ಬಂದ ಸಮಯ. ಏಡ್ಸ್ ಲೆಕ್ಕಮೀರಿ ಬಾಧಿಸಿದ್ದು ಇವರಿಗೆ. ಇದರಿಂದ ಎಲ್ಲಿಲ್ಲದ ಜಾಗೃತಿ, ಅವರ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಅವರನ್ನು ಒಂದು ಸೆಕ್ಸ್ ಸ್ಲೇವ್ ರೀತಿಯಲ್ಲಿ ಸಮಾಜ ಬಳಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಹೀಗೆ ನಿಧಾನಕ್ಕೆ ಅವರೂ ಮನುಷ್ಯರು ಎನ್ನುವ ಬದಲಾವಣೆ ಸಮಾಜದಲ್ಲಿ ಕಾಣಿಸ ತೊಡಗಿದವು.

ಜನರು ಒಂದಿಷ್ಟು ತಾಕತ್ತು ಪಡೆಯುವುದೇ ಸಂಘಟನೆಯಲ್ಲಿ. ೧೯೯೦ ರಿಂದೀಚೆ ತೃತೀಯ ಲಿಂಗಿಗಳ ಸಂಘಟನೆ ಎಲ್ಲಿಲ್ಲದ ರೀತಿ ಬೆಳೆದವು. ತೀರಾ ಇತ್ತೀಚೆ, ೨೦೦೩ ರಲ್ಲಿ – ಅವರ ಗುಂಪಿಗೆ, ಪ್ರತೀಕವಾಗಿ ಒಂದು ಧ್ವಜವನ್ನು ರಚಿಸಲಾಯಿತು. ಅದನ್ನು ಪ್ರೈಡ್ -ಗ್ ಎಂದು ಕರೆಯೋದು. ಅವರನ್ನು
ಕಾರ್ಯಕ್ಷೇತ್ರಗಳಲ್ಲಿ ಪ್ರತ್ಯೇಕಿಸಿ ನೋಡುವುದು, ತಾರತಮ್ಯ ಮಾಡುವುದು ಕಾನೂನು ಬಾಹಿರ ಎಂದು ಅಮೆರಿಕಾದ ಸುಪ್ರೀಂ ಕೋರ್ಟ್ ತೀರ್ಪು ಕೊಡುವಷ್ಟು ಬದಲಾವಣೆಯಾದದ್ದು ಈಗ ಮೂರು ವರ್ಷದ ಹಿಂದೆ – ೨೦೨೦ ರಲ್ಲಿ. ಇಷ್ಟು ಕಾಲ, ಬರೋಬ್ಬರಿ ೫೬ ವರ್ಷ ಇದೆಲ್ಲದಕ್ಕೆ ಹಿಡಿದ ಸಮಯ. ಅದು ಅಮೆರಿಕಾದಲ್ಲಿ ಹುಟ್ಟಿದ ಬದಲಾವಣೆಯ ಅಲೆ. ಈ ಗುಂಪು ಅದೆಷ್ಟು ಬೆಳೆಯಿತೆಂದರೆ ಕ್ರಮೇಣ ಈ ವಿಚಾರ, ಹೋರಾಟಗಳು ಜಗತ್ತಿ ನಾದ್ಯಂತ ಪಸರಿಸಿತು ಅಥವಾ ಹರಡುವಂತೆ ಅಮೆರಿಕಾದ ಸಂಘಟನೆಗಳು ನೋಡಿಕೊಂಡವು. ಇವರು ಪ್ರತ್ಯೇಕ ಆದರೆ ಮನುಷ್ಯರು ಎಂದು ಈಗೀಗ ಬಹಳಷ್ಟು ದೇಶ ಕಾನೂನಾತ್ಮಕವಾಗಿ ಒಪ್ಪಿಕೊಳ್ಳುತ್ತಿದೆ.

ಆದರೆ ಅವರು ಅಲ್ಪ ಸಂಖ್ಯಾತರು, ಬಹುಸಂಖ್ಯಾತರಂತಲ್ಲ. ಹಾಗಾಗಿ ಈ ಎಲ್ಲ ಹೋರಾಟಗಳಿಲ್ಲದೆ ಈ ಬದಲಾವಣೆ ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಚರ್ಚೆಗಳು ಇಂದು ಭಾರತವನ್ನೂ ತಲುಪಿವೆ. ಇದು ಅತ್ಯುತ್ತಮ ಬೆಳವಣಿಗೆ. ಮನುಷ್ಯರನ್ನು ಮನುಷ್ಯರಂತೆ ಕಾಣುವ, ಸಮಾಜದಲ್ಲಿ ಸಮ ಸ್ಥಾನಮಾನ ನೀಡುವ ಬದಲಾವಣೆ. ಆದರೆ ಈ ಬದಲಾವೆಣೆಯ ಜೊತೆಯಲ್ಲಿ ಒಂದಿಷ್ಟು ಅಸಡ್ಡಾಳವು, ಯಡವಟ್ಟುಗಳೂ ಒಳಕ್ಕೆ ಬಂದಿದೆ, ಬರುತ್ತಲಿವೆ. ಇಂದು ಇದೆಲ್ಲ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಯಾರೇ ಆಗಲಿ, ಅವರು ತಾವು ಗಂಡು ಅಥವಾ ಹೆಣ್ಣು ಎಂದು ಕರೆದುಕೊಳ್ಳುವ, ಸಮಾಜ ಹಾಗೆಯೇ ಒಪ್ಪಿಕೊಳ್ಳಬೇಕು ಎನ್ನುವ ಕೂಗು ಈಗಿನದು. ತೃತೀಯ ಲಿಂಗಿಗಳು ತಾವು ಗಂಡು ಅಥವಾ ಹೆಣ್ಣು ಎಂದು ಹೇಳಿಕೊಂಡರೆ ಅದನ್ನು ಸಮಾಜ ಒಪ್ಪಬೇಕು, ಅದು ವೈಯಕ್ತಿಕ ಎನ್ನುವ ವಾದ ಒಪ್ಪಬಹುದಾದದ್ದು. ಆದರೆ ಈ ಕಾನೂನು ತೃತೀಯ ಲಿಂಗಿಗಳಿಗಷ್ಟೇ ಸೀಮಿತ ಗೊಳಿಸುವುದು ಕಾನೂನಿನಲ್ಲಿ ಅಸಾಧ್ಯ.

ವ್ಯಕ್ತಿ ತೃತೀಯ ಲಿಂಗಕ್ಕೆ ಸೇರಿದವ ಎಂದು ಮೊದಲು ಒಪ್ಪಿದಲ್ಲಿ ಆ ವ್ಯಕ್ತಿ ತಾನು ಗಂಡೋ ಹೆಣ್ಣೋ ಎಂದು ನಿರ್ಧರಿಸಬಹುದು. ಆದರೆ ಈ ಎಲ್ಲ ಕಾನೂನನ್ನು ದೈಹಿಕವಾಗಿ ತೃತೀಯ ಲಿಂಗಗಿಗಳಲ್ಲದವರಿಗೂ ಲಾಗುವಾಗುತ್ತದೆ ಎನ್ನುವ ರೀತಿ ಪರಿಭಾವಿಸುವ ಕಾನೂನು ಇತ್ತೀಚೆಗೆ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಮತ್ತು ಸದನದಲ್ಲಿ ಒಪ್ಪಿಗೆಯಾಗಿದೆ. ಇದರರ್ಥ ಒಬ್ಬ ವ್ಯಕ್ತಿ ಬಯಾಲಾಜಿಕಲ್ ಗಂಡಾಗಿದ್ದಲ್ಲಿ, ಅಥವಾ ಹೆಣ್ಣಾಗಿದ್ದಲ್ಲಿ ಆತ / ಅವಳು ತಾನು ಇನ್ನೊಂದು ಲಿಂಗದವನು(ಳು) ಎಂದು ಘೋಷಿಸಿಕೊಳ್ಳಬಹುದು. ಎಂದರೆ ಗಂಡು, ನಾಳೆಯಿಂದ ತಾನು ಹೆಣ್ಣು ಎಂದರೆ ಅದನ್ನು ಸಮಾಜ ಒಪ್ಪಿಕೊಳ್ಳಬೇಕೆನ್ನುವ ವಿತಂಡವಾದ.

ಹಿಂದಿನ ವಾರದಿಂದ ನ್ಯೂಯಾರ್ಕ್‌ನಲ್ಲಿ ಇದರದ್ದೇ ಚರ್ಚೆ ಉತ್ತುಂಗದಲ್ಲಿದೆ. ಈ ವಾದವನ್ನು ಒಪ್ಪಬೇಕೇ, ಬೇಡವೇ ಎನ್ನುವುದೇ ಇಂದಿನ ಚರ್ಚೆ. ಗಂಡು ತಾನು ಹೆಣ್ಣು ಎಂದು ತನ್ನಷ್ಟಕ್ಕೆ ತಾನೇ ಘೋಷಿಸಿಕೊಂಡು ಹೆಂಗಸರ ಟಾಯ್ಲೆಟ್ ಬಳಸಬಹುದು, ಹೆಣ್ಣಷ್ಟೇ ಹೋಗುವ ಜಾಗಗಳಿಗೆ ಹೋಗ ಬಹುದು ಇತ್ಯಾದಿ. ಇದೆಲ್ಲ ತಲೆಬಿಸಿಯೇ ಬೇಡ ಎಂದು ಕ್ಯಾಲಿಫೋರ್ನಿಯಾ ಮೊದಲಾದವುಗಳಲ್ಲಿ ಮೂರು ಟಾಯ್ಲೆಟ್‌ಗಳ ವ್ಯವಸ್ಥೆ ಈಗೀಗ ಮಾಡ ಲಾಗುತ್ತಿದೆ. ಇನ್ನು ಕೆಲವೆಡೆ ಗಂಡು, ಹೆಣ್ಣು, ತೃತೀಯ ಎಲ್ಲ ಲಿಂಗಕ್ಕೂ ಒಂದೇ ಟಾಯ್ಲೆಟ್ ಇದ್ದದ್ದೂ ಅಮೆರಿಕಾದಲ್ಲಿ ಕೆಲವೆಡೆ ನೋಡಿದ್ದೇನೆ.
ಆದರೆ ಸಾಮಾನ್ಯವಾಗಿ ಟಾಯ್ಲೆಟ್ ಎಂದರೆ ಅದು ಗಂಡು ಅಥವಾ ಹೆಣ್ಣಿಗೆ ಎಂದು ಎರಡೇ ಇರುತ್ತದೆಯಲ್ಲ.

ಅಂತಹ ಸಂದರ್ಭದಲ್ಲಿ ಗಂಡೊಬ್ಬ ಹೆಂಗಸರ ಟಾಯ್ಲೆಟ್‌ಗೆ ಹೊಕ್ಕಲು ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಇದೆಲ್ಲ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೆ, ಒಬ್ಬ ಗಂಡು ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿ ಜೈಲು ಸೇರಿದನೆಂದುಕೊಳ್ಳಿ, ಆತ ತಾನು ಹೆಣ್ಣು ಎಂದು ವಾ
ದಕ್ಕೆ ಇಳಿಯಲು, ಆ ಮೂಲಕ ತಾನು ಮಾಡಿದ್ದು ಗಂಡೊಬ್ಬ ಹೆಣ್ಣಿನ ಮೇಲೆ ನಡೆಸಿದ ಅತ್ಯಾಚಾರವಲ್ಲ, ಬದಲಿಗೆ ಹೆಣ್ಣೊಬ್ಬಳು ಹೆಣ್ಣಿನೊಡನೆ ನಡೆಸಿದ ದೌರ್ಜನ್ಯ ಎಂದು ಶಿಕ್ಷೆಯನ್ನು ತಗ್ಗಿಸಿಕೊಳ್ಳುವುದಕ್ಕೆ ಕೂಡ ಇದರಿಂದ ಅವಕಾಶವಾಗುತ್ತದೆ. ಅಲ್ಲದೆ, ರೇಪಿಸ್ಟ್ ಗಂಡು ತಾನು ಹೆಣ್ಣೆಂದು ಘೋಷಿಸಿಕೊಂಡರೆ ಆತ ಹೆಂಗಸರಿಗೆ ಕಲ್ಪಿಸಲ್ಪಟ್ಟ ಜೈಲಿನಲ್ಲಿಡುವಂತೆ ಕೋರಿಕೆ ಸಲ್ಲಿಸಬಹುದು.

ಇದರರ್ಥ, ಕಾಮುಕ ರೇಪಿಸ್ಟ್ ಗಂಡಸೊಬ್ಬ ಹೆಂಗಸರ ಜೈಲು ಸೇರಿ ಇನ್ನಷ್ಟು ಅವಾಂತರಕ್ಕೆ ಕಾರಣವಾಗಬಹುದು. ಹೀಗೆ ಒಬ್ಬ ಬಯೋಲಾಜಿಕಲ್
ಕ್ರೋಮೋಸೋಮ್ ಗಂಡಸು ಅಥವಾ ಹೆಂಗಸು ಇದೆಲ್ಲದನ್ನು ನೂರಾರು ರೀತಿಯಲ್ಲಿ ದುರ್ಬಳಸಿಕೊಳ್ಳಲು ಕೂಡ ಈ ಕಾನೂನು ಅವಕಾಶ ಮಾಡಿ ಕೊಡುತ್ತದೆ. ಇದೆಲ್ಲ ಹಿನ್ನೆಲೆಯ ಮಧ್ಯೆ ಭಾರತದ ಚೀಫ್ ಜಸ್ಟಿಸ್ There is no such thing as an absolute concept of biological man and woman ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ.

ನಾನು ಇದನ್ನು ಕಂಟೆಂಪ್ಟ್ ಆಫ್ ಕೋರ್ಟ್ ಆಗುವ ಹೆದರಿಕೆಯಿಂದಲೇ ವಿಶ್ಲೇಷಿಸಲು ಹೋಗುವುದಿಲ್ಲ. ಅವರು ಹೇಳಿದ್ದು ಸೇಮ್ ಸೆಕ್ಸ್ – ಸಲಿಂಗ ಮದುವೆಗೆ ಸಂಬಂಧಿಸಿ. ಆದರೆ ಈ ಹೇಳಿಕೆ,  ವಿಚಾರ ಇಷ್ಟಕ್ಕೆ ಸೀಮಿತವಾಗುವುದಿಲ್ಲ. ಅಂತೆಯೇ ಈ ಒಂದು ವಿಚಾರವನ್ನು ಹೀಗೆಯೇ ಒಪ್ಪಿಸಿಕೊಳ್ಳಲು,
ಚರ್ಚಿಸಲು ನಮ್ಮ ಸಮಾಜ ಎಷ್ಟು ಪ್ರಬುದ್ಧತೆಯನ್ನು ಹೊಂದಿದೆ ಎನ್ನುವ ಪ್ರಶ್ನೆಯೇಳುತ್ತದೆ. ನಾನು ಗಂಡೆಂದರೆ ಗಂಡು, ಹೆಣ್ಣೆಂದರೆ ಹೆಣ್ಣು, ಅದನ್ನು ಕಾನೂನಾತ್ಮಕವಾಗಿ ಸಮಾಜ ಒಪ್ಪಬೇಕು ಎನ್ನುವುದನ್ನು ತೃತೀಯ ಲಿಂಗಿಗಳ ಬದಲಿಗೆ ಒಬ್ಬ ಗಂಡು ಅಥವಾ ಹೆಣ್ಣು ಹೇಳಿದರೆ ಅದನ್ನು ಒಪ್ಪುವುದು ಹೇಗೆ ಎಂಬಿತ್ಯಾದಿ.

ಇದು ಇಂದು ಅಮೆರಿಕಾದ ವ್ಯವಸ್ಥೆಯಲ್ಲಿ ದುರ್ಬಳಕೆಯಾಗುವಂತೆ ಇಲ್ಲಿಯೂ ಆಗುವ ಸ್ಥಿತಿ ನಿರ್ಮಾಣವಾಗಬಹುದು. ಹಾಗಂತ ಈ ಕಾರಣವಿಟ್ಟು
ತೃತೀಯಲಿಂಗಿಗಳ ತಾರತಮ್ಯವನ್ನು ಒಪ್ಪುವಂತೆಯೂ ಇಲ್ಲವಲ್ಲ. ಅವರೂ ಮನುಷ್ಯರೇ, ಅವರಿಗೂ ಬದುಕಲು ಎಲ್ಲ ರೀತಿಯ ಹಕ್ಕೂ ಇರಲೇಬೇಕು. ನಮ್ಮದು ಎಲ್ಲರಲ್ಲಿಯೂ ದೈವತ್ವ ಕಾಣುವ ಸಂಸ್ಕಾರ. ಅಂತಹ ಏಕೈಕ ಇತಿಹಾಸವುಳ್ಳ ನಾವು, ಭಾರತೀಯರು ಇದೆಲ್ಲವನ್ನು ಇಂದಿನ ಕಾಲದಲ್ಲಿ ಕಾನೂನಾತ್ಮಕವಾಗಿ ಹೇಗೆ ನಿಭಾಯಿಸಬಹುದು ಎನ್ನುವ ಸಹಜ ಕುತೂಹಲವಿದೆ. ಕೇವಲ ಕಾನೂನು ಮಾಡಿದರಷ್ಟೇ ಮುಗಿಯುವ ವಿಚಾರವಲ್ಲ ಇದು.
ವ್ಯವಸ್ಥೆಯನ್ನೂ ನಿರ್ಮಿಸಿಕೊಳ್ಳಬೇಕು. ನೋಡೋಣ.ಗ