Sunday, 15th December 2024

ಮನಸ್ಸಿನ ಆರೋಗ್ಯಕ್ಕೆ ಅಳುವುದು ಒಳ್ಳೆಯದೇ ?

ವೈದ್ಯ ವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌

drhsmohan@gmail.com

ನಾವೆಲ್ಲ ಒಂದ ಒಂದು ಬಾರಿ ಈ ಭಾವನಾತ್ಮಕ ಕಣ್ಣೀರು ಹರಿಸಿಯೇ ಹರಿಸಿರುತ್ತೇವೆ. ಒಂದು ಅಂದಾಜಿನ ಪ್ರಕಾರ ಮಹಿಳೆಯರು
ಸರಾಸರಿ ಒಂದು ವರ್ಷದಲ್ಲಿ 47 ಬಾರಿ ಹಾಗೂ ಪುರುಷರು 7 ಬಾರಿ ಭಾವನೆ ಹೆಚ್ಚಾಗಿ ಅಳುತ್ತಾರೆ ಎಂದು ಹೇಳಲಾಗಿದೆ.

ನಮ್ಮ ಹತ್ತಿರದ ಸಂಬಂಧಿ ನಿಧನರಾದರೆ ನಮಗೆ ದುಃಖ ಬಂದು ಕಣ್ಣೀರು ಹಾಕುತ್ತೇವೆ. ನಮ್ಮ ಉದ್ಯೋಗದಲ್ಲಿ ನಿರಾಸೆ ಹುಟ್ಟಿಸುವಂತಹ ವಿದ್ಯಮಾನ ಘಟಿಸಿದರೆ ಆಗಲೂ ಅಳು ವ್ಯಕ್ತವಾಗುತ್ತದೆ. ಸೂಕ್ತ ಸಮಯದವರೆಗೆ ಕಣ್ಣೀರು ಹಾಕಿ ಅದನ್ನೆ ಒರೆಸಿಕೊಂಡ ಮೇಲೆ ಜಗತ್ತು ನಮಗೆ ಭಿನ್ನವಾಗಿ ಕಾಣಿಸುತ್ತದೆ. ಕಣ್ಣೀರು ನಮ್ಮ ದೇಹದಿಂದ ಬೇಡದ ರಾಸಾಯನಿಕಗಳನ್ನು ಹೊರಹಾಕಿ, ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಹಾಗಾದರೆ ಅಳುವುದು ಅಥವಾ ಕಣ್ಣೀರು ಹಾಕುವುದು ಆರೋಗ್ಯ ಕರವೇ? – ಈ ಬಗ್ಗೆ ಪರಿಶೀಲಿ ಸೋಣ.

ಈ ಪ್ರಶ್ನೆ ಸಾಮಾನ್ಯ ಜನರನ್ನು ಮಾತ್ರ ಕಾಡುತ್ತಿಲ್ಲ. ವಿಜ್ಞಾನಿಗಳು ಹಾಗೂ ವೈದ್ಯ ಸಂಶೋಧಕರನ್ನು ಸಹಿತ ತೀವ್ರವಾಗಿ ಚಿಂತೆಗೆ ಹಚ್ಚಿದೆ. ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿ ದೀರ್ಘವಾದ ಅಳು ಪ್ರಕಟವಾದ ನಂತರ ನಮ್ಮ ಮನಸ್ಸು ಶಾಂತವಾ ಗುವುದು ಒಂದು ಸಾಮಾನ್ಯ ಅನುಭವ. ಮನಸ್ಸನ್ನು ಸಡಿಲಗೊಳಿಸುವ ಈ ಅಳು ಅಥವಾ ಭಾವನಾತ್ಮಕ ಕಣ್ಣೀರು ನಮ್ಮ ದೇಹದ ಕಾಯಿಲೆಗಳು ವಾಸಿಯಾಗುವಲ್ಲಿ ಸಹಕರಿ ಸುವುದೇ? ಈ ಪ್ರಶ್ನೆ ಇಟ್ಟುಕೊಂಡು ಹಲವು ಅಧ್ಯಯನಗಳು ಜಗತ್ತಿನಾದ್ಯಂತ ನಡೆದಿವೆ, ನಡೆಯುತ್ತಲೂ ಇವೆ. ಅತ್ತ ಗಮನ ಹರಿಸುವ ಮೊದಲು ಕಣ್ಣೀರಿನ ಬಗ್ಗೆಯೇ ಕೆಲವು ಅಂಶಗಳನ್ನು ಅವಲೋಕಿಸೋಣ.

ಕಣ್ಣಿಗೆ ಹೊರಗಿನಿಂದ ಸ್ವಲ್ಪ ತೊಂದರೆಯಾದರೂ ಕಣ್ಣೀರು ಬರುವುದು ಒಂದು ಸಹಜ ಪ್ರಕ್ರಿಯೆ. ಉದಾ: ಹೊರಗಿನ ಕಸಕಡ್ಡಿಗಳು ಬಿzಗ, ಏಟು ಬಿದ್ದಾಗ, ಹೊಗೆ ಅಥವಾ ಮಲಿನ ವಾತಾವರಣದಲ್ಲಿ ಬಹಳ ಹೊತ್ತು ಇದ್ದಾಗ ಇತ್ಯಾದಿ. ಜತೆಗೆ ನಾವು ಭಾವನಾತ್ಮಕವಾಗಿ ವಿಚಲಿತ ರಾದಾಗ, ಅಳುವಾಗ ಕಣ್ಣೀರು ಹೊರಬರುವುದು ಸ್ವಾಭಾವಿಕ. ಇವೆ ತಾತ್ಕಾಲಿಕವಾಗಿ ಕೆಲವು ಸಮಯ ಬರುವ ಕಣ್ಣೀರು ಎಂದು ಗಣಿಸ ಬಹುದು. ಕಣ್ಣೀರಿನ ಚೀಲವು 3 ಬೇರೆ ಬೇರೆ ರೀತಿಯ ಕಣ್ಣೀರನ್ನು ಉತ್ಪಾದಿಸುತ್ತದೆ.

1) ಸತತವಾಗಿ ಉತ್ಪನ್ನಗೊಳ್ಳುವ ಕಣ್ಣಿನ ಮೂಲಭೂತವಾದ ಕಣ್ಣೀರು 2) ಹಲವು ಹೊರಗಿನ ವಸ್ತುಗಳ ಕಾರಣದಿಂದ ಉತ್ಪನ್ನವಾಗುವ ಪ್ರತಿಕ್ರಿಯಾ ಕಣ್ಣೀರು, ಉದಾಗೆ: ಕಣ್ಣಿಗೆ ಕಸ ಬಿದ್ದಾಗ, ಈರುಳ್ಳಿ ಕತ್ತರಿಸುವಾಗ , 3) ಭಾವನಾತ್ಮಕ ಕಾರಣಗಳಿಂದ ಉಂಟಾಗುವ ಕಣ್ಣೀರು, ನಮಗೆ ಯಾವುದೇ ಕಾರಣಕ್ಕೆ ವಿಪರೀತ ದುಃಖವಾದಾಗ ಈ ಕಣ್ಣೀರು ಉಂಟಾಗುತ್ತದೆ. ಇದರಲ್ಲಿ ಭಿನ್ನ ರೀತಿಯ ರಾಸಾಯನಿಕ ಗಳಿರುತ್ತವೆ.

ಸಸಾರಜನಕ ಮತ್ತು ಮ್ಯಾಂಗನೀಸ್ ತುಂಬಾ ಜಾಸ್ತಿ ಪ್ರಮಾಣ ದಲ್ಲಿರುತ್ತವೆ. ಜತೆಯಲ್ಲಿ ಎನ್ ಕೆಫಲಿನ್ ಎಂಬ ವಿಶೇಷ ರಾಸಾಯನಿಕ ವಿದೆ. ಇದು ಒಂದು ನೈಸರ್ಗಿಕ ನೋವು ನಿವಾರಕ. ಅಲ್ಲದೆ ಪ್ರೊಲಾಕ್ಟಿನ್ ಎಂಬ ಹಾರ್ಮೋನ್ ಇರುತ್ತದೆ. ನಮಗೆ ವಿರೀತ ಒತ್ತಡವಿದ್ದಾಗ, ಅಪಾಯದ ಮುನ್ಸೂಚನೆ ದೊರಕಿದಾಗ ಇದು ಉತ್ಪನ್ನಗೊಳ್ಳುತ್ತದೆ. ಮಹಿಳೆ ಗರ್ಭಿಣಿಯಾದಾಗ ಹಾಗೂ ಆಕೆ ಬಾಣಂತನದಲ್ಲಿ
ಇದ್ದಾಗ ಈ ಹಾರ್ಮೋನ್ ಜಾಸ್ತಿ ಇರುತ್ತದೆ. ಎದೆಹಾಲು ಮಹಿಳೆಯರಲ್ಲಿ ಉತ್ಪನ್ನಗೊಳ್ಳಲು ಇದು ಬಹು ಮುಖ್ಯ ಕಾರಣ.

ಕಣ್ಣೀರು ಹಾಕುವ ಹತ್ತರಲ್ಲಿ 9 ಜನರು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಕಣ್ಣೀರು ನಮ್ಮ ಮಾನಸಿಕ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಎಲ್ಲರಿಗೂ ಉಚಿತವಾಗಿ ದೊರೆಯುತ್ತದೆ. ಅಧಿಕವಾದ ಪಾರ್ಶ್ವ ಪರಿಣಾಮಗಳಿಲ್ಲ. ಕಣ್ಣೀರು ಬಹಳ ದೊಡ್ಡ ಜನಪ್ರಿಯ ಔಷಧ ಅಲ್ಲದಿರಬಹುದು. ಆದರೆ ಇತ್ತೀಚಿನ ಹಲವಾರು ಸಂಶೋಧನೆಗಳ ಪ್ರಕಾರ ದೇಹದ ಹಲವು ಕಾಯಿಲೆಗಳನ್ನು ಗುಣಪಡಿಸುವಲ್ಲಿ ತುಂಬಾ ಪರಿಣಾಮಕಾರಿ. ಭಾವನಾತ್ಮಕ ಕಣ್ಣೀರು ಹಾಕುವ ಶೇಕಡಾ 89 ಜನರಲ್ಲಿ ಇದು ಮೂಡ್ ಅನ್ನು ಉತ್ತೇಜಿಸುತ್ತದೆ.

ಭಾವನಾತ್ಮಕ ಕಣ್ಣೀರು ದೇಹಕ್ಕೆ ಯಾವ ರೀತಿ ಒಳ್ಳೆಯದನ್ನು ಮಾಡುತ್ತದೆ? ಕಣ್ಣೀರು ನಮ್ಮ ದೇಹದ ಕೆಟ್ಟ ರಾಸಾಯನಿಕಗಳನ್ನು ಶುದ್ಧ ಗೊಳಿಸುತ್ತದೆ. ಮೂಡ್ ಉತ್ತೇಜಿಸಿ ಮನಸ್ಸನ್ನು ಹಗುರಗೊಳಿಸುತ್ತದೆ. ಎಲ್ಲರಿಗೂ ಗೊತ್ತಿರುವಂತೆ ದೈಹಿಕ ಕಾಯಿಲೆಗಳಾದ ಹೃದಯದ ಕಾಯಿಲೆಗಳು, ಏರು ರಕ್ತದೊತ್ತಡ, ಡಯಾಬಿಟಿಸ್, ಸ್ಥೂಲಕಾಯಗಳ ಮೇಲೆ ಮಾನಸಿಕ ಒತ್ತಡವು ಗಮನಾರ್ಹವಾದ ಪರಿಣಾಮ ಹೊಂದಿದೆ. ಸೂಕ್ತ ಸಮಯದಲ್ಲಿ ಸೂಕ್ತ ಅವಧಿಯವರೆಗೆ ಅಳು ವ್ಯಕ್ತಪಡಿಸಿದರೆ ಮನಸ್ಸು ಹಗುರವಾಗುವುದು ಹೇಗೆ? ಭಾವನಾತ್ಮಕ ಕಣ್ಣೀರಿನಲ್ಲಿ ಅಡ್ರಿನೋಕಾರ್ಟಿಕೋಟ್ರೋಪಿಕ್ ಹಾರ್ಮೋನು ಜಾಸ್ತಿ ಇರುತ್ತದೆ.

ಇದು ದೇಹದಿಂದ ಕಣ್ಣೀರಿನ ರೂಪದಲ್ಲಿ ಹೆಚ್ಚು ಹೊರಕ್ಕೆ ಹೋದಷ್ಟೂ ಒಳ್ಳೆಯದು. ಏಕೆಂದರೆ ಆಗ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್ ) ಎಂಬ ಸ್ಟೀರಾಯ್ಡ್ ದೈಹಿಕವಾಗಿ ಉತ್ಪನ್ನವಾಗುವಂತೆ ಮೊದಲಿನ ಹಾರ್ಮೋನು ಏ.ಸಿ.ಟಿ.ಹೆಚ್. ನೋಡಿಕೊಳ್ಳುತ್ತದೆ.
ಈ ಒತ್ತಡದ ಹಾರ್ಮೋನ್ ಸಹಿತ ದೇಹದಲ್ಲಿ ಅಧಿಕವಾಗಿ ಶೇಖರವಾದರೆ ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳನ್ನು ತರಬಹುದು. ದೇಹಕ್ಕೆ ಬೇಡವಾದ ಇನ್ನೂ ಹಲವಾರು ರಾಸಾಯನಿಕಗಳು ದೇಹದಲ್ಲಿ ಶೇಖರಗೊಳ್ಳುತ್ತವೆ. ಅವುಗಳನ್ನು ಹೊರ ಹಾಕಲೂ ಈ ಭಾವನಾತ್ಮಕ ಕಣ್ಣೀರು ತುಂಬಾ ಸಹಕಾರಿ ಎಂದು ಮಿನ್ನೆಸೋಟಾದಲ್ಲಿ ಅಧ್ಯಯನ ಕೈಗೊಂಡ ಮನಃಶಾಸಜ್ಞರು ಅಭಿಪ್ರಾಯ
ಪಡುತ್ತಾರೆ.

ಹೆಚ್ಚಿನ ನಾವೆಲ್ಲ ಒಂದ ಒಂದು ಬಾರಿ ಈ ಭಾವನಾತ್ಮಕ ಕಣ್ಣೀರು ಹರಿಸಿಯೇ ಹರಿಸಿರುತ್ತೇವೆ. ಒಂದು ಅಂದಾಜಿನ ಪ್ರಕಾರ ಮಹಿಳೆಯರು ಸರಾಸರಿ ಒಂದು ವರ್ಷದಲ್ಲಿ 47 ಬಾರಿ ಹಾಗೂ ಪುರುಷರು 7 ಬಾರಿ ಭಾವನೆ ಹೆಚ್ಚಾಗಿ ಅಳುತ್ತಾರೆ ಎಂದು ಹೇಳಲಾಗಿದೆ. ಅಳಲು ನಿಜ ವಾದ ಕಾರಣವೇನು? ಅತ್ತಾಗ ಆಗುವ ವೈಜ್ಞಾನಿಕ ಬದಲಾವಣೆಗಳೇನು? ಎಂಬುದು ಒಂದು ರಹಸ್ಯವೇ ಸರಿ. ಈ ಭಾವನಾತ್ಮಕ ಕಣ್ಣೀರು ಜೀವ ವಿಕಾಸದ ಹಲವಾರು ಹಂತಗಳನ್ನು ದಾಟಿ ಮಾನವನ ಪೀಳಿಗೆಗೆ ಮಾತ್ರ ಸೀಮಿತವಾಗಿದೆ. ಹಾಗಿದ್ದಾಗ ಅದಕ್ಕೆ ಒಂದು ನಿರ್ದಿಷ್ಟ ಕಾರಣವಿರಲೇಬೇಕು ಎಂಬುದು ಒಂದು ವಾದ.

ಹಾಗೆಯೇ ನಗುವುದು, ಕೋಪ- ಈ ಎರಡು ರೀತಿಯ ಭಾವನೆಗಳಿಂದಲೂ ಮನುಷ್ಯನಿಗೆ ಲಾಭವಿದೆ. ಉದಾಹರಣೆಗೆ ನಾವು ನಕ್ಕಾಗ ರಕ್ತಚಲನೆ ಜಾಸ್ತಿಯಾಗುತ್ತದೆ. ಒತ್ತಡದ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗುತ್ತದೆ. ಪ್ರತಿರೋಧ ವ್ಯವಸ್ಥೆಯನ್ನು ವೃದ್ಧಿ ಗೊಳಿಸು ತ್ತದೆ ಹಾಗೂ ಕಾಯಿಲೆಗಳ ಜತೆಗೆ ಹೋರಾಡುವ ವಸ್ತುಗಳನ್ನು ಹೆಚ್ಚು ಉತ್ಪನ್ನ ಗೊಳಿಸುತ್ತದೆ. ಹಾಗಿದ್ದಾಗ ಅತ್ತಾಗ ಏನಾಗುತ್ತದೆ? ಭಾವನಾತ್ಮಕ ಕಣ್ಣೀರು ಕಣ್ಣೀರಿನ ಗ್ರಂಥಿಗಳಿಂದ ಉತ್ಪನ್ನಗೊಂಡರೂ ಮೊದಲೇ ತಿಳಿಸಿದಂತೆ ಅದರಲ್ಲಿರುವ ರಾಸಾಯನಿಕಗಳು ಉಳಿದ ಎರಡು ರೀತಿಯ ಕಣ್ಣೀರುಗಳಿಗಿಂತ ಭಿನ್ನ.

ಇದಕ್ಕೆ ಕಾರಣಗಳ ಶೋಧದಲ್ಲಿರುವ ವಿಜ್ಞಾನಿಗಳು ಚೇತರಿಸಿಕೊಳ್ಳುವ ವಿಚಾರಸರಣಿಯನ್ನು ಮುಂದಿಡುತ್ತಾರೆ. ಅದರಂತೆ ಒತ್ತಡಕ್ಕೆ ಒಳಗಾದ ದೇಹವನ್ನು ಪುನಃ ಸಹಜ ಸ್ಥಿತಿಗೆ ತರಲು ಈ ಭಾವನಾತ್ಮಕ ಕಣ್ಣೀರು ಒಂದು ಮಾಧ್ಯಮ ಎಂಬ ಭಾವನೆಯಿದೆ. ಈ ವಿಚಾರ ಸರಣಿಗೆ ಹಲವಾರು ಪುರಾವೆಗಳಿವೆ. ಇದರಲ್ಲಿ ಹೆಚ್ಚಾಗಿರುವ ಮ್ಯಾಂಗನೀಸ್ ತುಂಬಾ ಅಗತ್ಯವಾದ ಪೋಷಕಾಂಶ. ಇದರ  ಕೊರತೆ ಯಾದರೆ ರಕ್ತ ಹೆಪ್ಪುಗಟ್ಟುವುದು ನಿಧಾನವಾಗುತ್ತದೆ, ಚರ್ಮದ ಸಮಸ್ಯೆ ಬರುತ್ತದೆ. ಕೊಲೆಸ್ಟ್ರಾಲ್ ಮಟ್ಟ ತೀರಾ ಕಡಿಮೆಯಾಗ ಬಹುದು. ಹಾಗೆಂದು ಮ್ಯಾಂಗನೀಸ್ ಅಧಿಕವಾದರೆ ಸಹಿತ ಹಲವು ರೀತಿಯ ಆರೋಗ್ಯ ಸಮಸ್ಯೆ ತರಬಹುದು. ಪೊಟ್ಯಾಸಿಯಂ ಲವಣಾಂಶವು ನರಗಳ ಆರೋಗ್ಯಕ್ಕೆ, ಮಾಂಸಖಂಡಗಳನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ಸ್ಥಿಮಿತದಲ್ಲಿಡಲು ಅವಶ್ಯಕವಾಗಿ ಬೇಕು.

ಮಹಿಳೆಯರು ಅಳುವುದು ಜಾಸ್ತಿಯೇ?: ಒತ್ತಡದ ಸನ್ನಿವೇಶದಲ್ಲಿ ಪ್ರೊಲ್ಯಾಕ್ಟಿನ್ ಹಾರ್ಮೋನು ಉತ್ಪನ್ನವಾಗುತ್ತದೆ. ಇದು ದೇಹದ
ಪ್ರತಿರೋಧ ಶಕ್ತಿ ಹೆಚ್ಚಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ಮಹಿಳೆಯರಲ್ಲಿ ಪುರು ಷರಿಗಿಂತ ಈ ಹಾರ್ಮೋನಿನ ಪ್ರಮಾಣ ಜಾಸ್ತಿ ಇರುತ್ತದೆ. ಹಾಗಾಗಿ ಸೀಯರು ಅಳುವುದು ಜಾಸ್ತಿ ಎನ್ನಲಾಗಿದೆ. ಅಳುವುದರಿಂದ ನೋವು ಕಡಿಮೆಯಾಗುತ್ತದೆ ಎಂಬ ಒಂದು ವಿಚಾರ ಸರಣಿಯು ಇದೆ. ಆದರೆ ಈ ವಿಚಾರದಲ್ಲಿ ತುಂಬಾ ಸಂಶೋಧನೆಗಳು ಆಗಿಲ್ಲ.

ಸಮಾಧಾನಪಡಿಸುವ ಬೇರೊಬ್ಬ ವ್ಯಕ್ತಿಯ ದೈಹಿಕ ಸಂಪರ್ಕದಿಂದ ಒಂದು ರೀತಿಯ ಒಳ್ಳೆಯ ಭಾವನೆ ಮೂಡಿ ಈ ಪರಿಣಾಮ ಆಗಬ ಹುದು ಎಂದು ಒಂದು ಊಹೆ. ಹಾಲೆಂಡಿನ ಟಲ್ ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಒಂದು ಅಧ್ಯಯನ ಕೈಗೊಳ್ಳಲಾಯಿತು. ನಿರ್ದಿಷ್ಟ ಕಾರಣಗಳಿಗೆ ಕಣ್ಣೀರು ಹಾಕುವ ಯಾವುದೇ ವ್ಯಕ್ತಿಗೆ ಪುರುಷರಾಗಲಿ ಮಹಿಳೆಯರಾಗಲಿ ಭಾವನಾತ್ಮಕ ಭರವಸೆಗೆ ಕೊಡಲು ಮುಂದೆ ಬರುತ್ತಾರೆ- ಎಂದು ಇದರಲ್ಲಿ ಕಂಡುಕೊಳ್ಳಲಾಯಿತು. ಅಮೆರಿಕದಲ್ಲಿ ಕೈಗೊಂಡ ಇನ್ನೊಂದು ಅಧ್ಯಯನದಲ್ಲಿ- ಕೆಲವು ವ್ಯಕ್ತಿಗಳಲ್ಲಿ
ಒತ್ತಾಯಪೂರ್ವಕವಾಗಿ ಅಳು ಬರುವಂತೆ ಮಾಡಿದರೆ ಅವರ ಹಲವು ವ್ಯಾಽಗಳಿಗೆ ಚಿಕಿತ್ಸೆಯ ರೂಪದಲ್ಲಿ ಅನುಕೂಲವಾಗಬಹುದು ಎಂಬ ಅಂಶ ವ್ಯಕ್ತವಾಗಿದೆ.

ಅದರಲ್ಲಿಯೂ ತಮ್ಮ ಮಾನಸಿಕ ತುಮುಲ, ಭಾವನೆಗಳನ್ನು ಹೆಚ್ಚು ವ್ಯಕ್ತಪಡಿಸದ ವ್ಯಕ್ತಿಗಳಲ್ಲಿ ಇದು ತುಂಬಾ ಸಹಾಯಕ ಎನ್ನಲಾಗಿದೆ. ಮೇಲಿನ ಎಲ್ಲಾ ಅಂಶಗಳನ್ನು ಗಮನ ದಲ್ಲಿಟ್ಟುಕೊಂಡು ತಮ್ಮ ಮಾನಸಿಕ ಅಭಿಪ್ರಾಯಗಳನ್ನು ಹೆಚ್ಚು ವ್ಯಕ್ತಪಡಿಸದ ವ್ಯಕ್ತಿಗಳಲ್ಲಿ ಹಾಗೂ ಸಂತೋಷ ಕೊಡುವ ವಸ್ತು ಅಥವಾ ಅನುಭವಗಳಿಂದಲೂ ಹರ್ಷ ವ್ಯಕ್ತಪಡಿಸದ ವ್ಯಕ್ತಿಗಳಲ್ಲಿ ಕಣ್ಣೀರು ಬರುವಂತೆ ಮಾಡುವುದನ್ನು ಚಿಕಿತ್ಸೆಯ ರೂಪದಲ್ಲಿ ಕೈಗೊಳ್ಳಬಹುದು- ಎಂದು ವಿವಿಧ ಅಧ್ಯಯನ ಕೈಗೊಂಡ ಮೇಲೆ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಅಳುವಿನ ಬಗ್ಗೆ ವಿಜ್ಞಾನಿಗಳು ಕಲೆಹಾಕಿದ ಸ್ವಾರಸ್ಯಕರ ಅಂಕಿಅಂಶಗಳು ಹೀಗಿವೆ: ದೀರ್ಘ ಅವಧಿಯ ಅಳು ಶೇಕಡ 20ರಷ್ಟು
ಬಾರಿ ಮತ್ತು 30 ನಿಮಿಷಕ್ಕಿಂತಲೂ ಹೆಚ್ಚಿನ ಅವಧಿಯದ್ದಾಗಿರುತ್ತದೆ. ಅಳು ಒಂದು ಗಂಟೆಗಿಂತಲೂ ಜಾಸ್ತಿಯಾಗುವುದು ಶೇಕಡಾ 8 ಬಾರಿ. ಅಳು ವ್ಯಕ್ತಪಡಿಸುವ ಶೇಕಡಾ 70 ಜನರು ತಮ್ಮ ಅಳುವನ್ನು ಮುಚ್ಚಿಡಲು ಪ್ರಯತ್ನಿಸುವುದಿಲ್ಲ.

ಮನೆಯಲ್ಲಿ ಪ್ರಕಟವಾಗುವ ಅಳುವಿನ ಪ್ರಮಾಣ ಶೇಕಡ 77. ಕೆಲಸದ ಸ್ಥಳದಲ್ಲಿ ಅಥವಾ ಕಾರಿನಲ್ಲಿ ವ್ಯಕ್ತವಾಗುವ ಪ್ರಮಾಣ ಶೇಕಡಾ 15. ಶೇಕಡಾ 40 ಜನರು ತಾವೊಬ್ಬರೇ ಕಣ್ಣೀರು ಹಾಕುತ್ತಾರೆ. ಸಂಜೆಯ ವೇಳೆ ವ್ಯಕ್ತವಾಗುವ ಅಳು ಶೇಕಡಾ 39 ( 6 ರಿಂದ 8 ಗಂಟೆಯ ಅವಧಿ). ಅಳುವಿನ ನಂತರ ಶೇಕಡಾ 90 ಜನರು ಒಳ್ಳೆಯ ಮೂಡ್‌ಗೆ ಬರುತ್ತಾರೆ. ಮೊದಲು ತಿಳಿಸಿದ ಕಣ್ಣೀರು ಮಾಡುತ್ತದೆ ಎನ್ನಲಾದ ಉಪಶಮನದ ಪರಿಣಾಮ ಎಲ್ಲರಲ್ಲಿಯೂ ಇರಲು ಸಾಧ್ಯವಿಲ್ಲ. ಹಲವು ರೀತಿಯ ಮೂಡ್‌ಗೆ ಸಂಬಂಧಪಟ್ಟ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಳು ಬಂದ ನಂತರ ಅವರ ಮೂಡ್ ಸರಿಯಾಗುವುದಿಲ್ಲ.

ಭಾವನಾತ್ಮಕ ಕಣ್ಣೀರು ಅಳುವಿನ ಬಗ್ಗೆ ಈಗ ಪ್ರಸ್ತುತ ಅಧ್ಯಯನಗಳಿಂದ ಇನ್ನೂ ಬಹಳಷ್ಟು ಮಾಹಿತಿಗಳು ಭವಿಷ್ಯದಲ್ಲಿ ಲಭ್ಯವಾಗ ಬಹುದು. ಆಗ ಇದರ ಎಲ್ಲಾ ಆಯಾಮಗಳು ಸ್ಪಷ್ಟವಾಗಬಹುದು ಎಂದು ಆಶಿಸೋಣ.