Thursday, 12th December 2024

ಮಾನಸಿಕ ಆರೋಗ್ಯ ಎಂಬುದು ಎಷ್ಟು ಮುಖ್ಯ?

ತನ್ನಿಮಿತ್ತ

ಅಕ್ಷರ ದಾಮ್ಲೆ, ಮನಶಾಸ್ತ್ರಜ್ಞ ಮತ್ತು ಮನೋಸಂವಾದ ಸ್ಥಾಪಕ

ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು. ಹೌದು, ಶುಭಾಶಯಗಳು ಅಂತಲೇ ಹೇಳುತ್ತೇನೆ. ಯಾಕೆಂದರೆ, ಒಬ್ಬ ಮನಃ ಶಾಸಜ್ಞನಾಗಿ ನಾನು ಜನರೆಲ್ಲರಿಗೂ ಉತ್ತಮ ಮಾನಸಿಕ ಆರೋಗ್ಯವಿರಲಿ ಎಂದು ಶುಭವನ್ನೇ ಆಶಿಸುತ್ತೇನೆ. ಎಷ್ಟೋ ಜನರಿಗೆ ಇದು ಸ್ವಲ್ಪ ವಿಲಕ್ಷಣ ವೆಂದೆನಿಸಬಹುದು. ಆದರೆ, ಮಾನಸಿಕ ಆರೋಗ್ಯ ಎಂಬುದು ಎಷ್ಟು ಮುಖ್ಯ ಎಂಬುದನ್ನು ಬಹುಶಃ ನಮಗೆ ಕೋವಿಡ್ ಮಹಾಮಾರಿ ತಿಳಿಸಿಕೊಟ್ಟಿದೆ.

ಲಾಕ್‌ಡೌನ್ ಆಗಿ ಹಠಾತ್ತಾಗಿ ಜನಜೀವನ ಸ್ತಬ್ಧವಾದಾಗ ಮತ್ತು ಆ ನಂತರ ಮನೆಯಿಂದ ಹೊರಗೆಯೇ ಹೋಗುವುದಕ್ಕಿಲ್ಲ ಎಂಬ ಪರಿಸ್ಥಿತಿ ಬಂದಾಗ, ಮತ್ತು ಅದು ಕೆಲವು ತಿಂಗಳುಗಳವರೆಗೆ ಮುಂದುವರಿದಾಗ ಅನೇಕರಿಗೆ ಭಯ, ಆತಂಕ, ಉದ್ವೇಗ, ಖಿನ್ನತೆ, ಕೋಪ, ಆಕ್ರೋಶ, ಹತಾಶೆ ಮುಂತಾದ ಅನೇಕ ಭಾವನೆಗಳು ಬಂದದ್ದು ಸುಳ್ಳಲ್ಲ! ಇವು ಅನೇಕರು ತಮ್ಮ ಜೀವನದಲ್ಲಿ ಕೋವಿಡ್ ‌ಗಿಂತಲೂ ಮೊದಲು ಅನುಭವಿಸುತ್ತಿದ್ದ ಭಾವನೆಗಳೇ ಆದರೂ, ಅವುಗಳನ್ನು ಗಮನಿಸುವುದಕ್ಕೂ ಸಮಯವಿರು ತ್ತಿರಲಿಲ್ಲ.

ಅಥವಾ ಒಂದು ವೇಳೆ ಗಮನಕ್ಕೆ ಬಂದರೂ, ಅದರ ಜತೆಗೆ ಏಗಿಕೊಂಡು ಹೋಗುವುದು ಅಭ್ಯಾಸವಾಗಿತ್ತು. ಮಾನಸಿಕವಾಗಿ
ಬಹಳವಾಗಿ ಕುಗ್ಗಿ ಹೋದ ಮೇಲೆಯೇ ಮನಃಶಾಸಜ್ಞರನ್ನು ಅಥವಾ ಮನೋವೈದ್ಯರನ್ನು ಭೇಟಿ ಮಾಡುವ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಇವೆಲ್ಲವೂ ಅನೇಕರ ಅನುಭವಕ್ಕೂ, ಅನುಭಾವಕ್ಕೂ ಬಂದವು. ಮತ್ತು ಅಲ್ಲಿಯವರೆಗೆ ಕೇವಲ ವೈಯಕ್ತಿಕ ಸಮಸ್ಯೆಯಾಗಿರುತ್ತಿದ್ದ ಮಾನಸಿಕ ಆರೋಗ್ಯ, ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿತು. ಮೊದಲು ಯಾರಾದರೂ ನನಗೆ ಭಯವಾಗುತ್ತಿದೆ ಎಂದರೆ, ಅವನಿಗೆ ಹುಚ್ಚು ಅಥವಾ ಆತ ಸೈಕೋ ಎಂದು ಕರೆಯುತ್ತಿದ್ದ ಅದೇ ಜನರು, ಆ ರೀತಿಯ ಭಾವನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಆರಂಭಿಸಿದರು.

ತನ್ಮೂಲಕ ಹೆಚ್ಚು ಹೆಚ್ಚು ಜನರು ತಮ್ಮ ಮಾನಸಿಕ ಆರೋಗ್ಯದ ಕುರಿತು ಮಾತನಾಡುವುದಕ್ಕೆ ಸಾಧ್ಯವಾಯಿತು. ಇದರ ಜೊತೆಗೆ,
ನಮ್ಮ ಆರೋಗ್ಯದ ಕುರಿತು ಮಾತನಾಡುವಾಗ ದೈಹಿಕ ಆರೋಗ್ಯದ ಕುರಿತು ಎಷ್ಟು ಮಾತನಾಡುತ್ತೇವೋ, ಅಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡುವುದು ಮುಖ್ಯ ಎಂಬ ಪರಿಕಲ್ಪನೆ ಮೂಡಿತು. ಇದೇ ನಿಟ್ಟಿನಲ್ಲಿ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯವು ಎಲ್ಲರಿಗೂ ಮಾನಸಿಕ ಆರೋಗ್ಯ ಎಂಬುದಾಗಿದೆ. ಈ ವರ್ಷ ವಿಶ್ವ ಕಂಡ ದಾರುಣ ಪರಿಸ್ಥಿತಿಗೆ ಬಹುಶಃ ಇದು ಅಗತ್ಯ ಮತ್ತು ಅನಿವಾರ್ಯವಾದಂಥ ವಿಷಯವಾಗಿದೆ.

ಮಾನಸಿಕ ಆರೋಗ್ಯವನ್ನು ನಾವು ಯಾಕೆ ಇಷ್ಟೊಂದು ಅಸಡ್ಡೆ ಮಾಡುತ್ತಿzವು? ಮಾನಸಿಕ ಆರೋಗ್ಯದ ಕುರಿತು ಭಾರತದಲ್ಲಿ
ಬಹಳ ಹಿಂದಿನಿಂದಲೇ ಕಾಳಜಿ ವಹಿಸಿzರೆ. ಪತಂಜಲಿಯ ಯೋಗಸೂತ್ರದಲ್ಲಿ ಯೋಗಃ ಚಿತ್ತ ವೃತ್ತಿ ನಿರೋಧಃ ಎಂಬುವುದು 2ನೇ ಸೂತ್ರ. ಅರ್ಥಾತ್, ಯೋಗ ಎಂಬುದು ಚಿತ್ತ ಅಥವಾ ಮನಸ್ಸನ್ನು ಇತರೆ ವೃತ್ತಿಗಳಿಂದ ಅಂದರೆ ವ್ಯಾಕುಲತೆಗಳಿಂದ ನಿರೋಧಿಸು ವುದು. ಆಯುರ್ವೇದದಲ್ಲೂ ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಾಮುಖ್ಯವನ್ನು ಕೊಡಲಾಗಿದೆ. ಇಂತಹ ಚಿಂತನೆಗಳಿದ್ದೂ ನಮ್ಮ ದೇಶದಲ್ಲಿ ಎಲ್ಲರಿಗೂ ಮಾನಸಿಕ ಆರೋಗ್ಯವನ್ನು ತಲುಪಿಸುವುದಕ್ಕೆ ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ ಸಂಗತಿ.

ನಾವಿನ್ನೂ ಮಾನಸಿಕ ಆರೋಗ್ಯದ ಕುರಿತು ಮಾತನಾಡುತ್ತಿದ್ದೇವಷ್ಟೆ! ಆದರೆ ದಿನೇ ದಿನೇ ಮಾನಸಿಕ ಆರೋಗ್ಯದ ಸಮಸ್ಯೆಗಳು ಜಾಸ್ತಿ ಆಗುತ್ತಿವೆ. ಅನೇಕ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಇಪ್ಪತ್ತು ಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ; ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ; ವಿಶ್ವದಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ.17ರಷ್ಟು ಜನರು ಭಾರತದಲ್ಲಿದ್ದಾರೆ; ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಸುಮಾರು ಶೇ.80ರಷ್ಟು ಸಾಕ್ಷರರು; ಶೇ.7.5ರಷ್ಟು ಭಾರತೀಯರು ದೊಡ್ಡ ಅಥವಾ ಸಣ್ಣ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ; ಪ್ರತಿ ಎರಡು ಗಂಟೆಗಳಿಗೊಮ್ಮೆ ವ್ಯಕ್ತಿಯು ಮಾದಕ ದ್ರವ್ಯ ಸೇವನೆ ಯಿಂದ ಸಾಯುತ್ತಾನೆ; 27 ಜನರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಖಿನ್ನತೆಯಂತಹ ಮಾನಸಿಕ ಅಸ್ವಸ್ಥತೆಗಳಿಗೆ ಆರೈಕೆ ಪಡೆಯು ತ್ತಾನೆ; ಸುಮಾರು 150 ಮಿಲಿಯನ್ ಭಾರತೀಯರಿಗೆ ಮಾನಸಿಕ ಅಸ್ವಸ್ಥತೆಗಳ ಆರೈಕೆಯ ಅಗತ್ಯವಿರುತ್ತದೆ ಮತ್ತು ಸುಮಾರು ಶೇ.10ರಷ್ಟು ಜನರು ಖಿನ್ನತೆ, ಆತಂಕ, ಭಾವನಾತ್ಮಕ ಒತ್ತಡ ಮತ್ತು ಆತ್ಮಹತ್ಯೆ ಅಪಾಯದಂಥ ಸಾಮಾನ್ಯ ಮಾನಸಿಕ ಅಸ್ವಸ್ಥತೆ ಗಳಿಂದ ಬಳಲುತ್ತಿzರೆ, ಜೊತೆಗೆ ಮದ್ಯಪಾನ ಮತ್ತು ಮಾದಕವಸ್ತು ಬಳಕೆಯಿಂದ ಬಳಲುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಾನಸಿಕ ಮತ್ತು ನಡವಳಿಕೆಯ ಅಸ್ವಸ್ಥತೆಗಳ ಹೆಚ್ಚಿನ ಹೊರೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರಗಣ್ಯವಾಗಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಿ ನಾವು ಭಾರತದಲ್ಲಿ ಮಾನಸಿಕ ಆರೋಗ್ಯದ ಪರಿಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ. ಅದರರ್ಥ ಮಾನಸಿಕ ಆರೋಗ್ಯದ ಕುರಿತು ನಮ್ಮ ದೇಶದಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ ಎಂದಲ್ಲ. ಆದರೆ, ನಮ್ಮಲ್ಲಿರುವ ಜನಸಂಖ್ಯೆಗೆ ಹೋಲಿಸಿದರೆ, ಸರಕಾರದ ನೀತಿಗಳು ಮತ್ತು ಯೋಜನೆಗಳು ಮಾನಸಿಕ ಆರೋಗ್ಯವನ್ನು ಉನ್ನತಮಟ್ಟ ದಲ್ಲಿಡುವಲ್ಲಿ ಹಿಂದುಳಿದವು. ಹಾಗಾಗಿಯೇ,ಯುರೋಪಿನಲ್ಲಿ ಒಂದು ಲಕ್ಷ ಜನರಿಗೆ 20ರಿಂದ 40 ಜನ ಮನೋವೈದ್ಯರಿದ್ದರೆ, ಅಮೆರಿಕೆಯಲ್ಲಿ 13 ಜನರಿದ್ದಾರೆ. ಆದರೆ ಭಾರತದಲ್ಲಿ ಪ್ರತಿ ಲಕ್ಷ ಜನರಿಗೆ 0.3ಮನೋ ವೈದ್ಯರಿದ್ದಾರೆ, 0.07 ಮನಃಶಾಸಜ್ಞರಿದ್ದಾರೆ.

ಅಂದರೆ ನಮ್ಮಲ್ಲಿರುವ ಮಾನವ ಸಂಪನ್ಮೂಲದ ಮೂಲಕ ಪ್ರತಿಯೊಬ್ಬರಿಗೂ ವೈಯಕ್ತಿಕ ಆಪ್ತಸಮಾಲೋಚನೆಗಳಾಗಲೀ,
ಶುಶ್ರೂಷೆಯಾಗಲೀ ಸಾಧ್ಯವಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು ಸುಲಭದ ಮಾತಲ್ಲ! ಆದರೆ ಅಸಾಧ್ಯವೂ ಅಲ್ಲ! ಯಾಕೆಂದರೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ತಜ್ಞರ ಅಗತ್ಯವಿರುವುದಷ್ಟೇ ಅಲ್ಲ. ಅದಕ್ಕೆ ಸಮುದಾಯದ ಅಗತ್ಯವೂ ಅಷ್ಟೇ ಇದೆ. ಹುಚ್ಚ ಎಂಬ ಭಯ!

ಮಾನಸಿಕ ಆರೋಗ್ಯದ ಕುರಿತು ನಮ್ಮ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವ ಮನಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಒಂದಷ್ಟು ಸಿನಿಮಾ ತಾರೆಯರು ತಮಗೂ ಖಿನ್ನತೆ, ಉದ್ವೇಗ ಮುಂತಾದ ಸಮಸ್ಯೆಗಳಾಗಿದ್ದುವು ಎಂದು ಹೇಳಿದ್ದು ನಿಜವೇ ಆದರೂ, ಸಾಮಾನ್ಯರಿಗೆ ತಮ್ಮ ಮಾನಸಿಕ ಸಮಸ್ಯೆಗಳನ್ನು ಒಪ್ಪಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಬಂದ ಮೇಲೆಯೇ, ತಜ್ಞರನ್ನು ಭೇಟಿ ಮಾಡುವ ಕುರಿತು ಆಲೋಚಿಸುತ್ತಾರೆ. ಆದರೆ ಅದಕ್ಕೂ ಮೊದಲು ತಮ್ಮೊಳಗೆ ಸಹಿಸಿಕೊಂಡು ಬಳಲುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣ, ಎಲ್ಲಿ ನನ್ನನ್ನು ಹುಚ್ಚ ಎಂದು ಹೇಳುವರೋ ಅಥವಾ ನನಗಿನ್ಯಾವ ಹಣೆಪಟ್ಟಿ ಕಟ್ಟುವರೋ ಎಂಬ ಭಯ.

ಇದನ್ನು ಹೋಗಲಾಡಿಸಬೇಕಿರುವುದು ನಮ್ಮ ಸಮಾಜ. ಮಾನಸಿಕ ಅನಾರೋಗ್ಯವೂ ಕೂಡಾ ದೈಹಿಕ ಅನಾರೋಗ್ಯದಂತೆಯೇ
ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಬಳಲುತ್ತಿರುವವರಿಗೆ ಕುಟುಂಬ ಸಮೇತವಾಗಿ ಸಮುದಾಯ ಒಂದು ಉತ್ತಮ
ಬೆಂಬಲವನ್ನು ಕೊಡಬೇಕು. ಆವಾಗ ಗುಣಮುಖರಾಗುವ ವೇಗ ಹೆಚ್ಚುತ್ತದೆ.

ಹೆಚ್ಚುತ್ತಿರುವ ಆತ್ಮಹತ್ಯೆ ಹಾಗೂ ಮಾದಕ ವಸ್ತುಗಳ ವ್ಯಸನ: ಆತ್ಮಹತ್ಯೆ ಎನ್ನುವುದು ಇತ್ತೀಚಿಗೆ ಬಹಳವಾಗಿ ಕಾಣಿಸಿಕೊಳ್ಳುತ್ತಿದೆ.
ತಳಮಟ್ಟದ ಜನರಿಂದ ಉದ್ಯಮಿಗಳು, ನಟ ನಟಿಯರು ಮತ್ತು ಯುವಜನರು ಹತಾಶೆಯ ಎ ಮೀರಿ ಆತ್ಮಹತ್ಯೆಗೆ ಶರಣಾಗು ತ್ತಿದ್ದಾರೆ. ಕೆಲವೊಂದು ಆತ್ಮಹತ್ಯೆಗೆ ಕೋವಿಡ್‌ನಿಂದಾದ ಏಕತಾನತೆ, ಏಕಾಂಗಿತನ ಮತ್ತು ನಿರುದ್ಯೋಗದಂಥ ಪರಿಸ್ಥಿತಿಗಳೂ ಕಾರಣವಿರಬಹುದು. ಆದರೆ ಇವುಗಳ ಅರ್ಥ, ನಾವು ಒಂದು ಸಮಾಜವಾಗಿ ದುರ್ಬಲರಾಗಿರುವವರಿಗೆ ಬೆಂಬಲವನ್ನು ಕೊಡು ವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು.

ಇತ್ತೀಚಿಗೆ ಸುದ್ದಿಯಲ್ಲಿರುವ ಮಾದಕ ವಸ್ತುಗಳ ವ್ಯಸನಿಗಳು ಮತ್ತು ಅದನ್ನು ಮಾರುವವರು ಯುವಜನರು ಎಂಬುದು ಚಿಂತನೆ
ಹಾಗೂ ಚಿಂತೆಗೀಡುಮಾಡಬೇಕಾದ ಸಂಗತಿ. ಪಂಜಾಬ್‌ನಂಥ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮಾದಕ ವ್ಯಸನವು
ಯುವಜನರಲ್ಲಿ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆದರೂ, ಅದು ನಮ್ಮ ನೆರೆಹೊರೆಯಲ್ಲೂ
ನಡೆಯುತ್ತಿರಬಹುದು ಎಂಬ ಕಟು ಸತ್ಯ ತಿಳಿದಾಗ, ಮೈ ಜುಮ್ಮೆನಿಸುತ್ತದೆ. ಇವೆಲ್ಲವನ್ನೂ ಮೆಟ್ಟಿನಿಲ್ಲಬೇಕಾದರೆ, ಮಾನಸಿಕ
ಆರೋಗ್ಯದ ಮಟ್ಟವನ್ನು ಎತ್ತರಿಸಬೇಕು. ಮತ್ತು ಇದು ಕೇವಲ ವೈಯಕ್ತಿಕ ನೆಲೆಗೆ ಸೀಮಿತವಾಗದೆ, ಕುಟುಂಬ, ಸ್ನೇಹಿತರು ಮತ್ತು
ಸಮಾಜ ಎಲ್ಲರೂ ಒಟ್ಟಾಗಬೇಕು.

ಅಸ್ವಸ್ಥತೆಯ ತಡೆಗಟ್ಟುವಿಕೆ: ಮಾನಸಿಕ ಅಸ್ವಸ್ಥತೆಯನ್ನು ಶುಶ್ರೂಷೆ ಮಾಡುವುದು ಒಂದು ಲಕ್ಷವಾಗಿದ್ದರೆ, ಅದನ್ನು ತಡೆಗಟ್ಟುವುದು ಇನ್ನೊಂದು ಮುಖ್ಯ ಗುರಿಯಾಗಬೇಕು. ಇದಕ್ಕೆ ಮುಖ್ಯವಾಗಿ ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ಅನೇಕರಿಗೆ ತಮ್ಮ ಭಾವನೆಗಳೇನು ಎಂಬ ಪ್ರಶ್ನೆಗೆ ಏನೂ ಇಲ್ಲ ಎಂಬ ಉತ್ತರ ಬರುತ್ತದೆ. ಆದರೆ
ನಿಜವಾಗಿ ನೋಡಿದರೆ, ಅವರು ತಮ್ಮ ಭಾವನೆಗಳನ್ನು ಗುರುತಿಸುವುದನ್ನೇ ನಿಲ್ಲಿಸಿರುತ್ತಾರೆ. ಜೀವನದ ಓಟದಲ್ಲಿ ಓಡುತ್ತಾ
ಓಡುತ್ತಾ ತಮ್ಮನ್ನು ತಾವು ಕಳೆದುಕೊಂಡಿರುತ್ತಾರೆ. ಯಾವಾಗ ನಾವು ನಮ್ಮ ಭಾವನೆಗಳನ್ನು ಸರಿಯಾಗಿ ಗುರುತಿಸುವುದಕ್ಕೆ ಮತ್ತು ಹಾಗೆಯೇ ಅನುಭವಿಸುವುದಕ್ಕೆ ಕಲಿಯುತ್ತೇವೆಯೋ, ಆವಾಗ ಸಹಜವಾಗಿಯೇ ನಮ್ಮ ಮನಸ್ಸು ಜಾಗೃತವಾಗಿರುತ್ತದೆ. ಜತೆಗೆ, ನಮ್ಮ ಭಾವನೆಗಳ ಕುರಿತು ಅರಿವು ಹೆಚ್ಚಿದಂತೆ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ.

ಉತ್ತಮ ಮಾನಸಿಕ ಆರೋಗ್ಯಕ್ಕೆ ನಾವು ಏನೆ ಮಾಡಬಹುದು? ದೇಹ ಮತ್ತು ಮನಸ್ಸು ಬೇರೆ ಬೇರೆ ಅಲ್ಲ! ಹಾಗಾಗಿ ದೈಹಿಕ
ಸಮಸ್ಯೆಗಳು ಮನಸ್ಸಿನ ಮೇಲೆ ಹಾಗೆಯೇ ಮಾನಸಿಕ ಸಮಸ್ಯೆಗಳು ದೇಹದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ,
ಅತಿಯಾದ ಒತ್ತಡವನ್ನು ಎದುರಿಸುತ್ತಿದ್ದ ಒಬ್ಬ ಮಹಿಳೆಗೆ ಕತ್ತಿನ ಹಿಂಭಾಗದಲ್ಲಿ ವಿಪರೀತ ನೋವು ಇರುತ್ತಿತ್ತು. ಅದಕ್ಕೆ ಬೇರೆ ಬೇರೆ ವೈದ್ಯರುಗಳನ್ನು ಭೇಟಿ ಮಾಡಿದರೂ, ಬೇರೆ ರೀತಿಯ ಔಷಧಿ ತೆಗೆದುಕೊಂಡ ಮೇಲೂ ಕಡಮೆಯಾಗದಿದ್ದಾಗ, ಮನಃಶಾಸ್ತ್ರ

ಸ್ಞರ ಬಳಿ ಹೋಗುವುದಕ್ಕೆ ಒಬ್ಬರು ವೈದ್ಯರು ಸಲಹೆಯನ್ನು ನೀಡಿದರು. ಅವರ ನಡುವಿನ ಸಮಾಲೋಚನೆಯಲ್ಲಿ ಅನೇಕ ವಿಚಾರಗಳನ್ನು  ಕುರಿತು ತೀವ್ರವಾದ ಒತ್ತಡವಿರುವುದು ಕಂಡುಬಂತು.

ಮನೋಚಿಕಿತ್ಸೆಯ ನಂತರ ಒತ್ತಡ ನಿವಾರಣೆಯಾದ ಮೇಲೆ ಕತ್ತುನೋವು ತನ್ನಿಂತಾನೇ ಮಾಯವಾಯ್ತು. ಹಾಗಾಗಿ ಉತ್ತಮ
ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದು ಬಹಳ ಮುಖ್ಯ. ಒಂದು ಒಳ್ಳೆಯ ದಿನಚರಿ ನಮ್ಮ ಶಾರೀರಿಕ ಹಾಗೂ ಮಾನಸಿಕ
ಆರೋಗ್ಯಕ್ಕೆ ಬಹಳ ಮುಖ್ಯ. ಒಂದು ನಿರ್ಧರಿತವಾದ ಸಮಯಕ್ಕೆ ಮಲಗುವುದು ಮತ್ತು ಏಳುವುದು ಅಭ್ಯಾಸವಾದಾಗ ನಿದ್ದೆಯ
ಗುಣಮಟ್ಟ ಹೆಚ್ಚುತ್ತದೆ. ಉತ್ತಮ ನಿz ಆದಾಗ ನಮ್ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ. ಅಥವಾ ಸಿಡಿಮಿಡಿಗೊಳ್ಳುವುದು, ಸಣ್ಣ ಸಣ್ಣ ವಿಚಾರಕ್ಕೂ ಕೋಪಬರುವುದು ಮುಂತಾದ ಸಮಸ್ಯೆಗಳು ದೂರವಾಗುತ್ತದೆ.

ಅಷ್ಟೇ ಅಲ್ಲದೆ, ದೈಹಿಕ ಹಾಗೂ ಮಾನಸಿಕ ವ್ಯಾಯಾಮಗಳಿಗೆ ಸಮಯ ಸಿಗುತ್ತದೆ. ತಮಗೋಸ್ಕರ ಒಂದಷ್ಟು ಸಮಯ ಪ್ರತಿದಿನ ವ್ಯಯಿಸುವುದು ಬಹಳ ಉತ್ತಮ. ಧ್ಯಾನ ಮಾಡುವ ಮೂಲಕವೂ ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು. ಪ್ರತಿನಿತ್ಯವೂ ಮೇಲೆ ಹೇಳಿದಂತೆ ನಿಮ್ಮ ಭಾವನೆಗಳನ್ನು ನೀವು ಗಮನಿಸಿ ಅದನ್ನು ಒಂದು ಪುಸ್ತಕದಲ್ಲಿ ದಾಖಲಿಸತೊಡಗಿದರೆ ಅದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಂದು ಕನ್ನಡಿಯಾಗುತ್ತದೆ. ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವೂ ನಿಮ್ಮನ್ನು ನೀವು ಧನಾತ್ಮ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇವೆಲ್ಲವುಗಳ ಜತೆಗೆ ಉತ್ತಮ ಆಹಾರ ಹಾಗೂ ನೀರಿನ ಸೇವನೆ ಮುಖ್ಯ. ಇವಿಷ್ಟನ್ನು ಮಾಡಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಾಗ, ನಮ್ಮ ಜೀವನದಲ್ಲಿ ಏನೇನು ಸಾಧಿಸಬೇಕು ಅದೆಲ್ಲವನ್ನೂ ಸಾಧಿಸುವುದಕ್ಕೆ ಸಾಧ್ಯ.