Sunday, 15th December 2024

ಮರೆಯಾಗದೆ ಉಳಿಯುವ ಮಿಕುಮಿಯ ಸೌಂದರ್ಯ

ಸಂಡೆ ಸಮಯ

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ

ರಾತ್ರಿಯಾಗಸದಲ್ಲಿ ಕಿಕ್ಕಿರಿದು ಸೇರಿ ಮಿನುಗುತ್ತಿರುವ ನಕ್ಷತ್ರಗಳು. ಇನ್ನೇನು ನಿದಿರಾದೇವಿ ಆವರಿಸಬೇಕು, ಅಷ್ಟರಲ್ಲೇ ನಮ್ಮ ಡೇರೆಗಳ ಕಡೆಗೆ ಯಾವುದೋ ಪ್ರಾಣಿ ನಡೆದು ಬರುತ್ತಿದೆ.

ಈಗ ಪೂರ್ತಿ ಎಚ್ಚರ! ಕೇಳಿಸುತ್ತಿರುವುದು ಅದರ ಹೆಜ್ಜೆ ಸಪ್ಪಳವಲ್ಲ, ಉಸಿರಾಟ. ಸಫಾರಿ ಜೀಪಿನಲ್ಲಿ ಕೂತು ಬೇರೆ ಪ್ರಾಣಿಗಳನ್ನು ನೋಡುವ ಖುಷಿ ಬೇರೆ, ಅವುಗಳಲ್ಲೇ ಒಂದು ಹೀಗೆ ಮಲಗಿದ್ದಾಗ ಡೇರೆಯ ಬಳಿ ಬಂದರೆ, ಅದರಲ್ಲೂ ಜೊತೆಯಲ್ಲಿರುವವರೆಲ್ಲಾ ಅವರವರ ಡೇರೆಯೊಳಗೆ ಗಾಢ ನಿದ್ರೆಯಲ್ಲಿದ್ದರೆ, ಎದೆಯೊಳಗೆ ಪ್ರಾಣ ಬಡಿದುಕೊಳ್ಳುವುದು ಬೇರೆ! ಹಾಗೂ ಹೀಗೂ ಧೈರ್ಯ ಮಾಡಿ ಎದ್ದು ನಿಂತು ಸೊಳ್ಳೆಪರದೆಯಂಥ ಡೇರೆಯ ಮೇಲ್ಭಾಗದಿಂದ ಇಣುಕಿ ನೋಡಿದರೂ ಅದ್ಯಾವ ಪ್ರಾಣಿ ಎಂದು ಕಾಣುತ್ತಿಲ್ಲ.

ಸರಿ, ಪುನಃ ಮಲಗಿ ಬೆಚ್ಚಗೆ ಹೊದ್ದುಕೊಂಡು ಕಣ್ಮುಚ್ಚಿದರೆ ಎರಡು ಕ್ಷಣ ಕಳೆದ ಮೇಲೆ ಪಕ್ಕದ ಡೇರೆಗೆ ಪ್ರಾಣಿ ಮೈ  ಉಜ್ಜಿಕೊಳ್ಳು ತ್ತಿದೆ! ಆದರೂ ಅದರೊಳಗಿರುವ ಪೋಲಿಷ್ ಹುಡುಗಿಗೆ ಎಚ್ಚರವಾಗಿಲ್ಲ, ಎಂಥಾ ಸುಖ ನಿದ್ರೆ ಬರುತ್ತದೆ ಕೆಲವರಿಗೆ! ಒಂದಷ್ಟು ನಿಮಿಷ ನಮ್ಮ ಡೇರೆಗಳ ಸುತ್ತ ಸುತ್ತಾಡಿ ಅದರ ದಾರಿ ಅದು ಹಿಡಿದು ಹೋಗಿದೆ. ಕಾಡಿನ ಕತ್ತಲಲ್ಲಿ ಭಯವಾಗುತ್ತಿದ್ದರೂ ಅದ್ಯಾವ ಪ್ರಾಣಿ ತಿಳಿಯಲಿಲ್ಲವಲ್ಲಾ ಎಂಬ ಸಣ್ಣ ನೋವು.

ಬೆಳಿಗ್ಗೆ ಎದ್ದು ಡೇರೆಯ ಹೊರಗೆ ಬಂದರೆ ಆಕಾಶದಲ್ಲಿ ಸೂರ್ಯ ಕೇಸರಿ ಚೆಂಡಿನಂತೆ ಹೊಳೆಯುತ್ತಿದ್ದಾನೆ. ರಾತ್ರಿ ಬಂದಿದ್ದ ಬೇರೆ ಪ್ರಾಣಿಯೊಂದರ ಬಗ್ಗೆ ಯಾರಾದರೂ ಮಾತಾನಾಡುತ್ತಾರಾ ನೋಡುತ್ತಿದ್ದೇನೆ, ಎಲ್ಲರೂ ತಮ್ಮ ಪಾಡಿಗೆ ತಾವು ನಿದ್ರೆಗಣ್ಣಿನಲ್ಲೇ
ಈ ದಿನ ಸಫಾರಿಯಲ್ಲಿ ಏನೇನು ನೋಡಲು ಸಿಗುತ್ತದೆ ಎಂದು ಚರ್ಚಿಸುತ್ತಿದ್ದಾರೆ, ನಮ್ಮ ಗೈಡ್ ಸೇರಿದಂತೆ! ಕಡೆಗೂ ಅವರನ್ನು ರಾತ್ರಿ ನಿಮಗೆ ಎಚ್ಚರವಾಯ್ತಾ ಎಂದು ಕೇಳಿದರೆ ಈ ಉತ್ತರ: ಅದು ಬಹುಷಃ ಕಾಡುಹಂದಿ ಇರಬೇಕು.

ನಾವೂ ಪ್ರಾಣಿಗಳೇ, ಆದರೆ ನಾವು ಕ್ಯಾಂಪ್ ಮಾಡುವ ಕಡೆ ಬೇರೆ ಪ್ರಾಣಿಗಳು ಸುಳಿಯುವುದಿಲ್ಲ. ನೀವು ಹೆದರದೇ, ಚೀರದೇ ಇದ್ದುದೇ ಒಳ್ಳೆಯದಾಯ್ತು. ಧೈರ್ಯ ಜಾಸ್ತಿ ಇರಬೇಕು! ಈ ಮನುಷ್ಯ ಛೇಡಿಸುತ್ತಿದ್ದಾನೇನೋ, ಯಾರಿಗೆ ಗೊತ್ತು, ಆದರೆ ಭಯ ವಾಗಿದ್ದು ಮಾತ್ರ ನಿಜ ಎಂದು ಒಪ್ಪಿಕೊಂಡರೆ, ಮುಗುಳ್ನಕ್ಕು ಸುಮ್ಮನಾಗಿದ್ದಾರೆ. ನನ್ನ ಜೊತೆಗಿದ್ದ ಮಹಾನುಭಾವರಿಗೆಲ್ಲಾ ಈಗ ಪೂರ್ತಿ ಎಚ್ಚರವಾಯ್ತು ಅನ್ನಿ! ಹೌದಾ? ಎಷ್ಟು ಹೊತ್ತಿಗೆ? ನಮಗೆ ತಿಳಿಯಲೇ ಇಲ್ಲವಲ್ಲಾ? ಎಂಬ ಉದ್ಗಾರಗಳು! ಈಗ
ಮುಗುಳ್ನಕ್ಕು ಸುಮ್ಮನಾಗುವ ಸರದಿ ನನ್ನದು.

ಬೆಳಗಿನ ಸಫಾರಿಗೆ ಕ್ಯಾಂಪ್ ಮಾಡಿದ್ದ ಜಾಗದಿಂದ ಒಂದೆರಡು ಕಿಲೋಮೀಟರ್ ದೂರ ಬರುತ್ತಿದ್ದಂತೆ ಯೇ ಒಂದು ಸಿಂಹ
ದಾರಿಯಲ್ಲಿ ಕೂತಿದ್ದಾನೆ! ಗಾಳಿಯ ರಾಗಕ್ಕೆ ಮುಖದ ಸುತ್ತ ಅವನ ಕೂದಲು ತೇಲುತ್ತಿದೆ. ಅವನು ದಾರಿ ಬಿಡುವವರೆಗೂ
ಕಾಯಬೇಕು, ಆದರೆ ಕಣ್ತುಂಬ ಅವನನ್ನು ನೋಡುತ್ತಲೇ ಇರಬಹುದು. ಎಲ್ಲಿಂದಲೋ ಬಬೂನ್ ಒಂದರ ಕೂಗು ಕೇಳುತ್ತಿದೆ. ಸ್ವಲ್ಪ ಸಮಯ ಹೀಗೇ ಕಾಡಿನ ಬೇರೆಬೇರೆ ಸದ್ದುಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.

ಇದ್ದಕ್ಕಿದ್ದಂತೆ ಸಿಂಹ ಎದ್ದುನಿಂತ ತಕ್ಷಣ ಎಲ್ಲರೂ ಒಂದು ಕ್ಷಣ ಉಸಿರು ಬಿಗಿಹಿಡಿದಿದ್ದೇವೆ. ಸೀದಾ ನಮ್ಮ ಸಫಾರಿ ಜೀಪಿನೆಡೆಗೆ ನಡೆದು ಬರುತ್ತಿದ್ದಾನೆ, ನಾನು ಕ್ಯಾಮೆರಾ ತೆಗೆದುಕೊಂಡು ಆ ರಾಜಗಾಂಭೀರ್ಯವನ್ನು ಸೆರೆಹಿಡಿಯಲು ತಯಾರಾಗುತ್ತಿದ್ದೇನೆ. ಜೀಪಿನ ಮುಂದೆಯೇ ನಿಂತಾಗ ಒಂದು ಚಿತ್ರ ಅಚ್ಚಳಿಯದೇ ನನ್ನ ಕ್ಯಾಮೆರಾದಲ್ಲಿ ಜೋಪಾನಮಾಡಿಕೊಂಡು ಅವನನ್ನೇ ದಿಟ್ಟಿಸುತ್ತಾ ಕೂತಿದ್ದೇನೆ. ಜೀಪಿನ ಪಕ್ಕದಲ್ಲೇ ನಡೆದು ಹಿಂದೆ ಹಿಂದೆ ಹೋಗಿ ಪೊದೆಗಳ ಹಿಂದೆ ಮರೆಯಾಗಿಬಿಟ್ಟ ಆ ಸಿಂಹದ ಚಹರೆ ಸ್ಮತಿಪಟಲದಲ್ಲಿ ಸದಾ ಹೊಸತಾಗಿಯೇ ಉಳಿಯುತ್ತದೆ. ದೊಡ್ಡ ಮಾರ್ಜಾಲಗಳ ಗತ್ತೇ ಹಾಗೆ, ಒಮ್ಮೆ ನೋಡಿದರೆ ಮತ್ತೆ ಮತ್ತೆ ಅವುಗಳನ್ನು ನೋಡುವ ಸೆಳೆತಕ್ಕೆ ಸಿಲುಕಿದಂತೆಯೇ.

ಸ್ವಲ್ಪ ದೂರದಲ್ಲೇ ಮತ್ತೊಂದು ಸಿಂಹ ಮತ್ತು ಸಿಂಹಿಣಿ. ಸ್ವಲ್ಪ ಹೊತ್ತು ಕೂತಿದ್ದಾರೆ, ಸ್ವಲ್ಪ ಹೊತ್ತು ಪೊದೆಗಳ ಸುತ್ತ ಓಡಾಡಿ ಕೊಂಡು ಒಬ್ಬರ ಮೇಲೆ ಒಬ್ಬರು ಹೊರಳಾಡಿ ಅವರ ಸಂಭೋಗ ಪ್ರಕ್ರಿಯೆಯನ್ನೂ ನೋಡುವ ಅವಕಾಶ… ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿ ನೋಡುವುದು, ಅವುಗಳ ದಿನಚರಿ, ವರ್ತನೆಯನ್ನು ಗಮನಿಸುತ್ತಾ ಕೂತರೆ ಹೊತ್ತು ಕಳೆಯುವುದು ತಿಳಿಯುವುದೇ ಇಲ್ಲ. ಪ್ರಾಣಿಗಳೇ ಆದ ನಾವು ಮನುಷ್ಯರು ಪ್ರಕೃತಿಯ ಸಹಜ ಪ್ರಕ್ರಿಯೆಗಳಿಂದ ಎಷ್ಟು ದೂರ ಬಂದು ಏನೇನೋ ಗೊಂದಲಗಳಲ್ಲಿ ಕಳೆದುಹೋಗಿದ್ದೆವಲ್ಲ ಎಂದು ಒಮ್ಮೊಮ್ಮೆ ಖೇದವಾಗುತ್ತದೆ.

ಬೇರೆ ಪ್ರಾಣಿಗಳ ಸ್ವಚ್ಛಂದ, ಸರಳ ಜೀವನದ ಮುಂದೆ ನಮ್ಮ ನಾಟಕಗಳೆಲ್ಲಾ ಎಷ್ಟು ಕ್ಷುಲ್ಲಕ ಎನಿಸಿಬಿಡುತ್ತದೆ. ಒಣಗಿದ ಹುಲ್ಲುಗಾವಲುಗಳಿಂದ ಮುಂದೆ ಬಂದರೆ ಒಂದು ಕೊಳದೊಳಗೆ ಮೂಗಿನವರೆಗೂ ಮುಳುಗಿ ನಿಂತ ದೊಡ್ಡ ನೀರಾನೆಗಳ ಹಿಂಡು! ಆಹಾ, ಯಾವುದಕ್ಕೂ ಅವಸರವೇ ಇಲ್ಲದ, ಬೇಕಾದಷ್ಟು ಹೊತ್ತು ಸುಮ್ಮನೆ ನೀರಿನಲ್ಲಿ ನಿಂತುಕೊಂಡಿರುವ ಅಥವಾ ಬಿದ್ದುಕೊಂಡಿರುವ ಸುಖ. ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಹುಡುಕಿಕೊಳ್ಳುವುದೇ ದೊಡ್ಡ ಸವಾಲು.

ಅಷ್ಟರಮಟ್ಟಿಗೆ ಅವುಗಳಿಗೆ ಬೇರೆ ಚಿಂತೆಗಳ ಗೊಡವೆಯಿಲ್ಲ, ನಮ್ಮ ದೃಷ್ಟಿಯಿಂದಲಾದರೂ. ಹೊಟ್ಟೆ ತುಂಬಿದರೆ ವೈರಾಗ್ಯದ ಸುಖ, ಅದು ಈ ನೀರಾನೆಗಳಲ್ಲಿ ಹೇರಳವಾಗಿ ಕಾಣಿಸುತ್ತಿದೆ. ನೀರಾನೆಗಳನ್ನು ನೋಡಿದ ಮೇಲೆ ಒಂದಷ್ಟು ದೂರ ಸಫಾರಿ ಜೀಪಿನಲ್ಲಿ ಹುಲ್ಲುಗಾವಲು, ಕುರುಚಲು ಕಾಡುಗಳ ಆಳಕ್ಕೆ ಬಂದಿದ್ದೇವೆ. ಇಲ್ಲಿ ಒಂದು ಕಡೆ ಸತ್ತ ಕಾಡೆಮ್ಮೆಯ ಪಕ್ಕವೇ ಬೇಟೆ ಯಾಡಿ ದಣಿವಾರಿಸಿಕೊಳ್ಳುತ್ತಿರುವ ಸಿಂಹ. ದೂರದಲ್ಲಿ ಮತ್ತಷ್ಟು ಕಾಡೆಮ್ಮೆಗಳು ನೋಡುತ್ತಾ ನಿಂತಿವೆ, ಅವರಲ್ಲೊಬ್ಬನ ಕಾಲ ಮುಗಿದಿದೆ. ಪ್ರಕೃತಿಯ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಬಲಿಪ್ರಾಣಿಯೊಂದು ಸತ್ತು ಬಿದ್ದಿದ್ದಾರೆ ಮರುಗು ತ್ತೇವೆ, ಆದರೆ ಪ್ರಕೃತಿಯೇ ಬೇಟೆಪ್ರಾಣಿಗಳಿಗೆ ಆ ದಾರಿ ಬಿಟ್ಟು ಬೇರೆ ದಾರಿ ತೋರಿಸಿಲ್ಲವಲ್ಲಾ.

ಒಂದು ಆಫ್ರಿಕನ್ ಫಿಶ್ ಈಗಲ್ ಮತ್ತು ಹೇರಳವಾಗಿ ಕಾಣಸಿಗುವ ಹೆಸರಗತ್ತೆಗಳ ದರ್ಶನ ಪುನಃ ಸಿಕ್ಕಿದೆ. ಮುಂದೆ ಮುಂದೆ ಬಂದರೆ ಎತ್ತರೆತ್ತರಕ್ಕೆ ಬೆಳೆದ ಮುಳ್ಳುಗಳ ಮರಗಳು ಆಕಾಶದ ಚರ್ಮವನ್ನು ಗೀರುತ್ತಿವೆ. ಅರೆರೇ, ಅಲ್ಲೇ ಹಿಂದೆ ಜಿರಾಫ್‌ಗಳ ಹಿಂಡು. ಆಹಾ, ತಮ್ಮ ಉದ್ದನೆಯ ಕತ್ತು ಬಳುಕಿಸುತ್ತಾ ನಡೆಯುವ ಅವುಗಳ ಬೆಡಗು ನಡೆಯುತ್ತಿರುವ ಕವಿತೆಯಂತೆ! ಜಿರಾಫ್‌ಗಳು ನೀರು ಕುಡಿಯುವಾಗಲೇ ಬೇಟೆಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ನಾವು ನೋಡಿ ಖುಷಿ ಪಡುವ ಅವುಗಳ ಎತ್ತರ, ಆ ಬಳುಕುವ ಕತ್ತು ಇವುಗಳೇ ಒಮ್ಮೊಮ್ಮೆ ಅವುಗಳಿಗೆ ಕುತ್ತು ತರುವ ಕಾರಣವೂ ಹೌದು. ಆದರೆ ಸೌಮ್ಯತೆ ಅವತಾರ ತಳೆದರೆ ಅದು ಈ ಜಿರಾಫ್, ನೀವು ಒಮ್ಮೆ ಜಿರಾಫ್ ಒಂದನ್ನು ಮೃಗಾಲಯದಲ್ಲಲ್ಲ, ಅದರ ಆವಾಸಸ್ಥಾನದಲ್ಲಿ ಸ್ವತಂತ್ರವಾಗಿ ಮೈಲಿಗಟ್ಟಲೆ ಓಡಾಡಿಕೊಂಡಿರುವುದನ್ನು ನೋಡಿದರೆ ಈ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎನ್ನುತ್ತೀರಿ. ಅವುಗಳ ಫೋಟೋ ಗಳನ್ನು ಬದಲಾಗುವ ಆಕಾಶದ ಬಣ್ಣಗಳ ಹಿನ್ನೆಲೆಯಲ್ಲಿ ತೆಗೆಯುವುದೊಂದು ತಪಸ್ಸಿದ್ದಂತೆ.

ಅವುಗಳನ್ನು ಸುಮ್ಮನೇ ನೋಡುವುದೇ ಕಣ್ಣು ತೆರೆದು ಧ್ಯಾನ ಮಾಡಿದಂತೆ. ಮಿಕುಮಿಯ ಹರಹನ್ನು ಜೀಪಿನಲ್ಲಿ ಅಲೆಯುತ್ತಾ ಮುಂದೆ ಮುಂದೆ ಬಂದರೆ ಈಗ ಹೊಸ ಕನಸು ನನಸಾಗುತ್ತಿದೆ. ಆಫ್ರಿಕನ್ ಆನೆಗಳ ಸಾಲು! ಗಂಡಾನೆ, ಹೆಣ್ಣಾನೆ, ಮರಿ ಆನೆಗಳ
ಹಿಂಡು! ನೋಟ ಹಾಯುವಷ್ಟು ಉದ್ದಕ್ಕೂ ಕಾಣುವ ಆಕಾಶ, ಅದರ ಕೆಳಗೆ ಚಾಚಿಕೊಂಡ ಒಣಗಿನಿಂದ ಹುಲ್ಲುಗಾವಲಿನ ಮೇಲೆ ಚಲಿಸುವ ಕಪ್ಪುು ಚುಕ್ಕೆಗಳಂತೆ ನಡೆಯುತ್ತಿವೆ. ಆ ವಿಶಾಲ ತೆರವಿನಲ್ಲಿ, ಆ ಬೃಹತ್ ಪ್ರಾಣಿಗಳ ಮುಂದೆ ನಾವು, ನಮ್ಮ ಜೀಪ್ ಆಟಿಕೆಗಳಂತೆ!

ಆನೆಗಳು ಸಫಾರಿ ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದು ಹೋಗುವುದನ್ನು ಕಣ್ತುಂಬಿಸಿಕೊಂಡು ಸ್ವಲ್ಪ ಮುಂದೆ ಬಂದರೆ ಮತ್ತೊಂದು ಕೆರೆ. ಮೊದಲನೆಯದಕ್ಕೆ ಹೋಲಿಸಿದರೆ ಬಹಳ ದೊಡ್ಡದು. ಅದರ ದಡದಲ್ಲಿ ಎರಡು  ಇಂಪಾಲಾ ಗಳು ತಮ್ಮ ಕೊಂಬುಗಳನ್ನು ಮಿಲಾಯಿಸಿ ಜಗಳವಾಡುತ್ತಿದ್ದಾವೆ. ಮತ್ತೊಂದಷ್ಟು ಇಂಪಾಲಾಗಳು ಕೆರೆಯ ಸುತ್ತಲೂ ತಮ್ಮ ಪಾಡಿಗೆ ತಾವು ಸ್ವಲ್ಪ ಹಸಿ ಇರುವ ಹುಲ್ಲನ್ನು ಮೇಯುತ್ತಿವೆ.

ನಮ್ಮ ಸಫಾರಿ ಸಮಯ ಮುಗಿಯುತ್ತಿದೆ, ಆದರೆ ಮಿಕುಮಿಯ ಸೌಂದರ್ಯವನ್ನು ಮತ್ತಷ್ಟು ಕಣ್ತುಂಬಿಸಿಕೊಳ್ಳುವ ಹಸಿವು, ದಾಹ ತೀರುತ್ತಿಲ್ಲ. ನಮ್ಮ ಜೊತೆ ಭೂಮಿ ಹಂಚಿಕೊಳ್ಳುವ ಈ ಪ್ರಾಣಿಗಳನ್ನು ನೋಡಿದಷ್ಟೂ ನೋಡುತ್ತಲೇ ಇರಬೇಕು ಅನಿಸುತ್ತಿದೆ. ಆದರೆ ಇಂಪಾಲಾಗಳನ್ನು ಹಿಂದೆ ಬಿಟ್ಟು ಗೇಟ್ ಬಳಿ ಬಂದಾಗಲೇ ಮಿಕುಮಿ ಎಂಬ ಕನಸಿನಿಂದ ಎಚ್ಚರವಾಗುತ್ತಿರುವುದು. ಸಫಾರಿ ಜೀಪ್ ಇಳಿದು ನಮ್ಮ ಕಾರಿನೊಳಗೆ ಕೂತು ರಸ್ತೆಗೆ ಬರುತ್ತಿದ್ದಂತೆ ನಮ್ಮ ಬಲಬದಿಗೆ ಅಪರೂಪವಾಗಿ ಕಾಣಿಸಿಕೊಳ್ಳುವ ಈಲ್ಯಾಂಡ್ ನಿಂತಿದೆ!

ಗೇಟಿನ ಹೊರಗೆ ಬಂದಮೇಲೂ ವನ್ಯಜೀವಿಗಳಿಗೆ ನಮ್ಮ ಮೇಲೆ ಕರುಣೆಯಿದ್ದಂತಿದೆ. ಆಫ್ರಿಕಾ ನಮ್ಮೆಲ್ಲರ ತವರು, ನಮ್ಮ ಗಡಿ – ಸೀಮೆ – ಎಲ್ಲೆಗಳೆಲ್ಲವನ್ನೂ ಮೀರಿದ ಈ ಸತ್ಯ ಹಿಂದೆಂದಿಗಿಂತಲೂ ಹತ್ತಿರವಾಗಿದೆ.