ಸಿರಿಸಂಪದ
ಬಸವನಗೌಡ ಹೆಬ್ಬಳ
ಪುರಾಣದ ಕಥೆಯೊಂದು ಹೀಗಿದೆ: ರಾಕ್ಷಸನೊಬ್ಬ ಭೂಮಿಯನ್ನು ಝಾಡಿಸಿ ಒದ್ದಾಗ ಅದು ತನ್ನ ಕಕ್ಷೆಯಿಂದ ಬೀಳತೊಡಗಿತಂತೆ. ಆಗ ದೇವತೆಗಳು ಭೂಮಿ ಯನ್ನು ಕಾಪಾಡುವಂತೆ ವಿಷ್ಣುವನ್ನು ಪ್ರಾರ್ಥಿಸಿದಾಗ, ವರಾಹರೂಪ ತಳೆದ ವಿಷ್ಣುವು ಬೀಳುತ್ತಿರುವ ಭೂಮಿ ಯನ್ನು ತನ್ನ ಕೋರೆಹಲ್ಲುಗಳ ಮಧ್ಯದಲ್ಲಿ ಸ್ಥಿರೀಕರಿಸಿ ಎತ್ತು ತಂದು ಅದರ ಕಕ್ಷೆಯಲ್ಲಿ ಪುನಃ ಇರಿಸಿದನಂತೆ.
ಸಂತಸಗೊಂಡ ದೇವತೆಗಳು, ‘ನೀನು ದೇವತಾರೂಪಕ್ಕೆ ಮರಳಲು ಏನು ಮಾಡಬೇಕು?’ ಎಂದು ಕೇಳಿದಾಗ, ‘ನನಗೆ ಪ್ರಿಯವಾದ ಪ್ರಿಯಾಂಗುವಿನಿಂದ (ನವಣೆ) ಮಾಡಿದ ಭಕ್ಷ್ಯ ನೀಡಿದರೆ ಮೂಲರೂಪಕ್ಕೆ ಮರಳುವೆ’ ಎಂದನಂತೆ. ಇದು ಸಿರಿಧಾನ್ಯಕ್ಕೆ ಸೇರಿದ ನವಣೆಯ ಪುರಾತನತೆಗೊಂದು ಸಾಕ್ಷಿ. ಕಾಳಿದಾಸರ ‘ಅಭಿಜ್ಞಾನ ಶಾಕುಂತಲಾ’ದಲ್ಲಿ, ಯಜುರ್ವೇದದಲ್ಲಿ, ರುದ್ರ-ಚಮಕ ಮಂತ್ರಗಳಲ್ಲಿ ಸಿರಿಧಾನ್ಯಗಳ ಉಲ್ಲೇಖವಿದೆ. ೨೦೨೩ರ ವರ್ಷವನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಕರೆಯಲಾಗಿದೆ.
ಇತ್ತೀಚಿನ ಜಿ-೨೦ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಗಣ್ಯರಿಗೆ ಸಿದ್ಧಪಡಿಸಲಾಗಿದ್ದ ಆಹಾರದ ಮೆನುವಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯ- ಭೋಜ್ಯಗಳಿಗೆ ಪ್ರಾಮುಖ್ಯ ನೀಡಲಾಗಿತ್ತು. ಕೆಲವರು ಹಿಂದಿನ ಆಹಾರ ಪದ್ಧತಿಯ ಕಡೆಗೆ ಹೊರಳುತ್ತಿರುವುದು ಖುಷಿಯ ವಿಚಾರವಾದರೂ, ಇಂದಿನ ಅನೇಕ ಯುವಜನರು ವಿದೇಶಿ ಸಂಸ್ಕೃತಿಯ ಆಹಾರಗಳು/ಜಂಕ್ ಫುಡ್‌ಗೆ ಜೋತು ಬಿದ್ದು ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವುದು ಶೋಚನೀಯ. ‘ರಾಗಿಯನು ಉಂಡವನು ನಿರೋಗಿಯಾಗುವನು, ಜೋಳವನು ತಿಂಬುವನು ತೋಳ ದಂತಾಗುವನು, ಸಜ್ಜೆ ಯನು ಮೆದ್ದವನು ಸಜ್ಜಾಗಿ ನಿಲುವನು, ಅಕ್ಕಿಯನು ತಿಂಬು ವನು ಹಕ್ಕಿಯಂತಾಗುವನು’ ಎಂದಿದ್ದಾನೆ ಸರ್ವಜ್ಞ. ಇಲ್ಲಿ ಅಕ್ಕಿ ಎಂದರೆ ‘ಸಾಮೆ’. ಜನಪದ ಹಾಡೊಂದರಲ್ಲಿ ‘ಬಂಜೆ ಬಾಗಿಲು ಮುಂದೆ ಬಂಗಾರದೊಳಕಲ್ಲು, ಸಾಮೆ ಕುಟ್ಟೋಕೆ ಸೊಸೆಯಿಲ್ಲ ಮಾನವಮಿ ಹಬ್ಬಕ್ಕೆ ಬನ್ನಿ ಮುಡಿಯಲು ಮಗನಿಲ್ಲ’ ಎನ್ನುವ ಮೂಲಕ ಸಾಮೆ ಅಕ್ಕಿಯ ಬಗ್ಗೆ ತಿಳಿಸಲಾಗಿದೆ.
ಸಾಮೆ, ನವಣೆ, ಹಾರಕ, ಊದಲು, ಬರಗು, ರಾಗಿ, ಸಜ್ಜೆ, ಜೋಳ, ಕೊರಲೆ ಇವು ಸಿರಿಧಾನ್ಯಗಳ ಮಡಿಲಲ್ಲಿವೆ. ‘ಆರೋಗ್ಯವೇ ಭಾಗ್ಯ’ ಎಂದಿದ್ದಾರೆ ನಮ್ಮ ಹಿಂದಿನವರು. ಈ ಆರೋಗ್ಯವು ನಾವು ತಿನ್ನುವ ಆಹಾರದ ಮೇಲೆ ಅವಲಂಬಿತ. ‘ಆಹಾರವನ್ನು ಔಷಧ ಸ್ವರೂಪವೆಂಬಂತೆ ಭಾವಿಸಿ ಸೇವಿಸಬೇಕು, ಇಲ್ಲದಿದ್ದರೆ ಔಷಧವನ್ನು ಆಹಾರ ದಂತೆ ತಿನ್ನಬೇಕಾಗುತ್ತದೆ’, ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ನುಡಿಗಳೂ ಆರೋಗ್ಯವರ್ಧನೆಯಲ್ಲಿನ ಆಹಾರದ ಮಹತ್ವವನ್ನು ತಿಳಿಸುತ್ತವೆ. ನಮ್ಮ ದೇಶದ ಆಹಾರ ಸಂಸ್ಕೃತಿ ಯಲ್ಲಿ ಸಿರಿಧಾನ್ಯಗಳಿಗೆ ಪ್ರಾಮುಖ್ಯವಿತ್ತು, ಆದರೆ ಕಾಲಕ್ರಮೇಣ ಅವನ್ನು ಬಿಟ್ಟ ಪರಿಣಾಮವೋ ಏನೋ
ಜನರಲ್ಲಿ ರೋಗರುಜಿನಗಳು ಹೆಚ್ಚಾದವು. ದೇಹಕ್ಕೆ ಬೇಕಾದ ಕಬ್ಬಿಣ, ಪಿಷ್ಟ, ನಾರಿನ ಅಂಶಗಳು ಹೇರಳವಾಗಿರುವ ಸಿರಿಧಾನ್ಯಗಳು ನಮ್ಮ ನಿತ್ಯಾಹಾರದ ಭಾಗವಾಗಬೇಕು.
ಅಮೆರಿಕದ ‘ಜರ್ನಲ್ ಆಫ್ ಗ್ಯಾಸ್ಟ್ರೊ ಎಂಟಿರಾಲಜಿ’ಯು, ‘ಸಿರಿಧಾನ್ಯಗಳನ್ನು ಸಂಪೂರ್ಣವಾಗಿ ಉಪಯೋಗಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದಿಲ್ಲ’ ಎಂದಿದ್ದರೆ, ‘ನಿರಂತರವಾಗಿ ಸಿರಿಧಾನ್ಯಗಳನ್ನು ಉಪಯೋಗಿಸುವುದ ರಿಂದ ಸ್ತನ ಕ್ಯಾನ್ಸರ್ ಬರುವುದಿಲ್ಲ’ ಎಂದು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿ ಅಭಿಪ್ರಾಯಪಟ್ಟಿದೆ. ‘ಸಿರಿಧಾನ್ಯಗಳು ಮುಂದಿನ ಜನಾಂಗದ ಆರೋಗ್ಯದ ಬಟ್ಟಲುಗಳು’ ಎಂದು ಜಗ್ಗಿ ವಾಸುದೇವ್
ಅಭಿಪ್ರಾಯಪಟ್ಟಿದ್ದಾರೆ. ‘ಮಿಲೆಟ್ ಮ್ಯಾನ್’ ಎಂದೇ ಹೆಸರಾದ ಡಾ. ಖಾದರ್‌ರವರು, ‘ಇಂದಿನ ಮುಖ್ಯ ಸಮಸ್ಯೆ ಗಳಾದ ನಪುಂಸಕತ್ವ, ವೀರ್ಯಾಣುಗಳ ಕೊರತೆ, ಹೆಣ್ಣು ಮಕ್ಕಳ ಋತುಚರ್ಯೆ ಸಮಸ್ಯೆಗಳು, ಮಲೇರಿಯಾ,
ಡೆಂ, ಟೈಫಾಯ್ಡ್, ಮಲಬದ್ಧತೆ, ಜಾಂಡೀಸ್, ಬೊಜ್ಜು, ಅತಿತೂಕ, ಕ್ಯಾನ್ಸರ್ ಇಂಥ ಬಹುತೇಕ ಸಮಸ್ಯೆಗಳಿಗೆ ಸಿರಿಧಾನ್ಯಗಳ ಆಹಾರಗಳೇ ಔಷಧಗಳು. ಸಿರಿಧಾನ್ಯಗಳೇ ನಮ್ಮ ಮೂಲ ಆಹಾರ’ ಎನ್ನುತ್ತಾರೆ. ಮಾನಸಿಕ ಖಿನ್ನತೆಯಿಂದ ಹೊರಬರಲು, ಮನೋಸ್ಥೈರ್ಯ ಬೆಳೆಸಿಕೊಳ್ಳಲು ಸಿರಿಧಾನ್ಯಗಳು ಉತ್ತಮ ಎಂಬುದು ಆಹಾರತಜ್ಞರ ಅಭಿಪ್ರಾಯ. ಜಗತ್ತಿನ ಅತ್ಯಽಕ ಮಧುಮೇಹಿಗಳನ್ನು ಹೊಂದಿದ ದೇಶವೆಂದು ಭಾರತವನ್ನು ಗುರುತಿಸಲಾಗಿದೆ. ರಕ್ತದಲ್ಲಿನ
ಸಕ್ಕರೆ ಮಟ್ಟದಲ್ಲಿ ಹೆಚ್ಚಳವಾಗುವುದು ಮಧುಮೇಹದ ಲಕ್ಷಣ. ಇದು ಆಹಾರದ ಗ್ಲೈಸಿಮಿಕ್ ಇಂಡೆಕ್ಸ್ (ಜಿಐ) ಮೇಲೆ ನಿಂತಿದೆ. ಅಂದರೆ ಸೇವಿಸಿದ ಆಹಾರವು ಜೀರ್ಣವಾಗಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಈ ಗ್ಲೂಕೋಸ್ ಪ್ರಮಾಣವನ್ನು ‘ಜಿಐ’ ನಿರ್ಧರಿಸುತ್ತದೆ.
‘ಜಿಐ’ ಪ್ರಮಾಣ ಕಮ್ಮಿಯಿದ್ದರೆ ಒಳ್ಳೆಯದು. ಉದಾಹರಣೆಗೆ ಸಕ್ಕರೆಯುಕ್ತ ಆಹಾರ ಸೇವಿಸಿದಾಗ ಗ್ಲೂಕೋಸ್ ಮಟ್ಟ ೧೦೦ಕ್ಕೆ ಏರುತ್ತದೆ ಎಂದಾದರೆ, ಸಕ್ಕರೆಯ ಗ್ಲೈಸಿಮಿಕ್ ಇಂಡೆಕ್ಸ್ ೧೦೦ ಎಂದರ್ಥ. ಆದರೆ ಸಿರಿಧಾನ್ಯಗಳಲ್ಲಿ ಇದರ ಪ್ರಮಾಣ ತುಂಬಾ ಕಮ್ಮಿ ಇರುತ್ತದೆ. ಆದ್ದರಿಂದ ಮಧುಮೇಹ ನಿಯಂತ್ರಣಕ್ಕೆ ಸಿರಿಧಾನ್ಯಗಳು ಒಳ್ಳೆಯ ಆಹಾರವಾಗಿವೆ. ಕಟ್ಟುಮಸ್ತು ದೇಹವನ್ನು ರೂಪಿಸಿಕೊಳ್ಳಬಯಸುವವರಿಗೆ ಹೆಚ್ಚೆಚ್ಚು ಪ್ರೋಟೀನ್ ಸೇವಿಸುವಂತೆ ವೈದ್ಯರು ಸೂಚಿಸುತ್ತಾರೆ.
ಮಾಂಸ, ಮೊಟ್ಟೆ, ಹಾಲು-ಹಣ್ಣುಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಆದರೆ ಸಿರಿಧಾನ್ಯಗಳಲ್ಲಿ ಹೆಚ್ಚು ಆರೋಗ್ಯಕರ ಪ್ರೋಟೀನ್ ಇದೆ ಮತ್ತು ಜೀರ್ಣವಾಗದ ಯಾವುದೇ ಅಂಶ ದೇಹದಲ್ಲಿದ್ದರೆ ಅದನ್ನು ಹೊರಹಾಕುವಲ್ಲಿ ಅವು ಸಹಾಯ ಮಾಡುತ್ತವೆ. ಇತರೆ ಧಾನ್ಯಗಳಿಗಿಂತ ಸಿರಿಧಾನ್ಯಗಳಲ್ಲಿ ಹೆಚ್ಚು ನಾರಿನಂಶ ವಿರುತ್ತದೆ. ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಬಹಳ ಮುಖ್ಯ. ಕ್ಯಾಲ್ಸಿಯಂ ಕೊರತೆಯಂದ ನಿಶ್ಶಕ್ತಿ ಮತ್ತು ದಣಿವು ಉಂಟಾದರೆ, ಕಬ್ಬಿಣಾಂಶದ
ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಸಿರಿಧಾನ್ಯ ಗಳಾದ ರಾಗಿ, ಜೋಳ, ಸಜ್ಜೆ, ನವಣೆಗಳಲ್ಲಿ ಅತಿಹೆಚ್ಚು ಕಬ್ಬಿಣಾಂಶವಿದೆ.
ಸಿರಿಧಾನ್ಯಗಳು ಪ್ರಾಣಿ-ಪಕ್ಷಿಗಳಿಗೂ ಪ್ರಿಯವಾದ ಆಹಾರ ವಂತೆ. ಭತ್ತದ ಜತೆಗೆ ಎಲ್ಲಾ ಸಿರಿಧಾನ್ಯಗಳನ್ನೂ ಬೆರೆಸಿ ಪಕ್ಷಿ ಗಳು ಬರುವ ಕಡೆ ಹಾಕಿದರೆ ಅವು ಮೊದಲು ಆಯ್ಕೆಮಾಡು ವುದೇ ಸಿರಿಧಾನ್ಯಗಳನ್ನಂತೆ! ಲವ್‌ಬರ್ಡ್‌ಗಳಿಗೆ, ಕೆಲವೊಂದು ಬಣ್ಣದ ಪಕ್ಷಿಗಳಿಗೆ ಸಿರಿಧಾನ್ಯಗಳನ್ನೇ ಬಳಸುವುದನ್ನು ಈಗಲೂ ಕಾಣಬಹುದು. ದನಗಳಿಗೂ ಭತ್ತದ ಹುಲ್ಲಿಗಿಂತ ಸಿರಿಧಾನ್ಯದ ಮೇವು ತುಂಬಾ ಇಷ್ಟವಾಗುತ್ತದೆ ಎನ್ನುತ್ತಾರೆ ಬಲ್ಲವರು. ಇನ್ನು, ಬೆಳೆ ಬೆಳೆಯುವ ವಿಷಯಕ್ಕೆ ಬಂದರೆ, ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗಿ ಅಂತರ್ಜಲದ ಮಟ್ಟ ಕುಸಿಯುತ್ತಿರುವ ಪ್ರಸಕ್ತ ದಿನಮಾನದಲ್ಲಿ, ಅತಿಕಡಿಮೆ ನೀರು ಬಯಸುವ ಸಿರಿಧಾನ್ಯ ಗಳನ್ನು ಬೆಳೆಯುವುದು ಉತ್ತಮ.
ಏಕೆಂದರೆ, ಇವು ಬರಗಾಲದ ಬೆಳೆಗಳು ಮತ್ತು ಕನಿಷ್ಠ ಪ್ರಮಾಣದ ಮಳೆ ಬೀಳವ ಪ್ರದೇಶದಲ್ಲಿ ಬೆಳೆಯುವಂಥವು. ಬರಗಾಲ ಈಗ ಮಾತ್ರವಲ್ಲ, ಹಿಂದೆಯೂ ಇತ್ತು. ಆದರೆ ಹಿಂದಿನವರು ಅದನ್ನು ಎದುರಿಸುತ್ತಿದ್ದ ರೀತಿ ಮಾತ್ರ ವಿಭಿನ್ನ. ‘ಮೂರು ತೆಕ್ಕೆ ಸಜ್ಜೆಮೇವು ಇದ್ದರೆ, ಮೂರು ಚೀಲ ನವಣೆ ಇದ್ದರೆ, ಮೂರು ಬರಗಾಲ ಕಳೀತೀವಿ’ ಎಂಬುದು ಹಿಂದಿನ ರೈತರ ವಾಡಿಕೆಯ ಮಾತಾಗಿತ್ತು. ಧಾನ್ಯವಾರು ಉಪಯೋಗ ತಿಳಿಯುವುದಾದರೆ, ಹೃದಯಾಘಾತವಾಗದಂತೆ ತಡೆಯಲು ನವಣೆ, ವೀರ್ಯಾಣು ಕೊರತೆ ಮತ್ತು ಹೆಣ್ಣುಮಕ್ಕಳ ಅಂಡಾಶಯದ ಅನಾರೋಗ್ಯ ತಡೆಯಲು ಸಾಮೆ, ದೇಹದಲ್ಲಿನ ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಊದಲು, ರಕ್ತಶುದ್ಧಿಗೆ ಹಾರಕ, ಬೊಜ್ಜು ಕರಗಿಸಲು ಕೊರಲೆ, ಕಬ್ಬಿಣಾಂಶದ ಹೆಚ್ಚಳಕ್ಕೆ ಬರಗು, ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ರಾಗಿ, ಕಣ್ಣಿಗೆ ಬೇಕಾದ ಕ್ಯಾರೋಟಿನ್ ಹೆಚ್ಚಿಸಿಕೊಳ್ಳಲು ಸಜ್ಜೆಯನ್ನು ಬಳಸಬೇಕು.
ಇಂದು ಜೀವನಶೈಲಿ ಬದಲಾದಂತೆ ಆಹಾರದ ಶೈಲಿಯೂ ಬದಲಾಗುತ್ತಿದೆ. ನಾವಿಂದು ಬರೀ ಬಾಯಿರುಚಿಗೆ ಆದ್ಯತೆ ಕೊಟ್ಟು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಮ್ಮ ಘನ ಸರಕಾರವು ಸಿರಿಧಾನ್ಯಗಳಿಗೆ ಪ್ರಾಮುಖ್ಯ ನೀಡುತ್ತಿರುವುದು ಸಂತಸದ ಸಂಗತಿ. ಬೆಂಗಳೂರಿನಂಥ ಮಹಾನಗರಗಳಲ್ಲಿಂದು ಅಲ್ಲಲ್ಲಿ ಸಿರಿ ಧಾನ್ಯದ ಮೇಳಗಳ ಆಯೋಜನೆಯಾಗುತ್ತಿರುವುದು, ಸಿರಿ ಧಾನ್ಯದ ಖಾದ್ಯಗಳ ಹೋಟೆಲ್‌ಗಳು ಪ್ರವರ್ಧಮಾನಕ್ಕೆ ಬರು
ತ್ತಿರುವುದು ಖುಷಿಯ ವಿಚಾರ. ಇಷ್ಟು ಸಾಲದು, ಮನೆ ಮನೆಯಲ್ಲೂ ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸುವಂತಾಗ ಬೇಕು. ಇವನ್ನು ಹೆಚ್ಚೆಚ್ಚು ಬೆಳೆಯುವಂತಾಗಲು ರೈತರಿಗೆ ಸೂಕ್ತ ಮಾರ್ಗದರ್ಶನ, ಬಿತ್ತನೆ ಬೀಜ ಒದಗಿಸಿ ಉತ್ತೇಜಿಸಬೇಕು.
(ಲೇಖಕರು ಪ್ರೌಢಶಾಲಾ ಶಿಕ್ಷಕರು)