ಆಲೂರು ಸಿರಿ
ಡಾ.ಅಶೋಕ್ ಆಲೂರು
alurashok@gmail.com
ಸಿರಿಧಾನ್ಯಗಳನ್ನು ಸಾಂಪ್ರದಾಯಿಕ ತಿನಿಸುಗಳು ಮತ್ತು ಆಹಾರ ಪದಾರ್ಥಗಳಲ್ಲಿ ಸೇರಿಸಿ ಪೌಷ್ಟಿಕ ಮೌಲ್ಯವನ್ನು ವಧಿಸುವುದರ ಜತೆಗೆ, ಅವುಗಳ ರುಚಿ ಹಾಳಾಗದಂತೆ ವಿವಿಧ ಮೌಲ್ಯವಽತ ತಿಂಡಿ-ತಿನಿಸುಗಳನ್ನೂ ತಯಾರಿಸಬಹುದು ಮತ್ತು ಕೃಷಿಕರು ತಾವಿರುವ ನೆಲೆಯಲ್ಲಿಯೇ ಇವನ್ನು ಸಂಸ್ಕರಿಸಿ ಮಾರಾಟ ಮಾಡಬಹುದು.
ನೋಡಲಿಕ್ಕೆ ಗಾತ್ರದಲ್ಲಿ ‘ಕಿರಿ’ದಾಗಿದ್ದರೂ, ಪೌಷ್ಟಿಕಾಂಶ ಮತ್ತು ಆರೋಗ್ಯ ರಕ್ಷಣೆಯ ವಿಷಯದಲ್ಲಿ ‘ಹಿರಿ’ದಾದ ಸಾಮರ್ಥ್ಯವನ್ನೇ ಹೊಂದಿವೆ ಕಿರುಧಾನ್ಯಗಳು. ಹೀಗಾಗಿ ಇವನ್ನು ‘ಸಿರಿಧಾನ್ಯಗಳು’ ಎಂದು ಕರೆದಿರುವುದು ಅತ್ಯಂತ ಸಮರ್ಪಕವಾಗಿದೆ. ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಹೊಟ್ಟು ಮತ್ತು ಅಲ್ಪಪ್ರಮಾಣದ ತೌಡನ್ನು ತೆಗೆಯಬೇಕಾದ್ದು ಅತ್ಯವಶ್ಯ. ಸಾಂಪ್ರದಾಯಿಕ ವಿಧಾನವನ್ನು ನೆಚ್ಚುವುದಾದರೆ ಇದು ಅತಿ ಶ್ರಮವನ್ನು ಬಯಸುವ ಮತ್ತು ಮಂದಗತಿಯ ಪ್ರಕ್ರಿಯೆಯೇ; ಆದರೆ ಹೊಟ್ಟು ತೆಗೆಯುವ ನಿಟ್ಟಿನಲ್ಲಿ ಈಗ ಆಧುನಿಕ ಸಾಧನಗಳು ಲಭ್ಯವಿವೆ ಎಂಬುದು ಸಮಾಧಾನಕರ ಸಂಗತಿ.
ಹೀಗೆ ಸಂಸ್ಕರಿಸಲ್ಪಟ್ಟ ಸಿರಿಧಾನ್ಯಗಳನ್ನು ಹಿಟ್ಟು ಮಾಡುವ, ಮೊಳಕೆಯೊಡೆಸುವ, ಅರಳು ಮಾಡುವ, ಹುದುಗು ಬರಿಸುವ, ಹುರಿಯುವ ಪ್ರಕ್ರಿಯೆಗಳಿಗೆ ಒಳಪಡಿಸಬಹುದು. ತನ್ಮೂಲಕ ಲಭ್ಯವಾಗುವ ಅವಲಕ್ಕಿ, ಅರಳು, ರವೆ, ಕಾಳುಗಳು ಮತ್ತು ಹಿಟ್ಟನ್ನು ಇಡ್ಲಿ, ದೋಸೆ, ಉಪ್ಪಿಟ್ಟು, ಪೊಂಗಲ್, ತಾಲಿಪಟ್ಟು, ಮುದ್ದೆ, ಅನ್ನ, ಪಾಯಸ, ವಡೆ, ಪಡ್ಡು, ಬಿಸ್ಕತ್ತು, ಹಪ್ಪಳ, ಸಂಡಿಗೆ, ಶ್ಯಾವಿಗೆ, ಹಲ್ವಾ ಹಾಗೂ ಕುರುಕಲು ತಿಂಡಿಗಳ ತಯಾರಿ ಯಲ್ಲೂ ಬಳಸಬಹುದು. ಇಂಥ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಮನೆಬಳಕೆಗೆ ಮಾತ್ರವಲ್ಲದೆ, ಪುಟ್ಟ ಉದ್ಯಮವಾಗಿ ಸಜ್ಜುಗೊಳಿಸಿಕೊಂಡು ಆದಾಯ ಗಳಿಕೆಗೂ ಬಳಸಿಕೊಳ್ಳಬಹುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಆಹಾರದ ರೂಪದಲ್ಲಿ ಸಿರಿಧಾನ್ಯಗಳ ಬಳಕೆ ಇಷ್ಟಕ್ಕೇ ಸೀಮಿತ ಎಂದು ಭಾವಿಸುವ ಅಗತ್ಯವಿಲ್ಲ; ಶಿಶು ಮತ್ತು ಮಕ್ಕಳ ಆಹಾರಗಳು, ಆರೋಗ್ಯ ವರ್ಧಕ ಮತ್ತು ಪಥ್ಯದ ಆಹಾರಗಳು, ದಿಢೀರ್ ಮಿಶ್ರಣಗಳು, ಗೃಹಬಳಕೆ ಮತ್ತು ವಾಣಿಜ್ಯೋದ್ದೇಶದ ಬೇಕರಿ ತಿನಿಸುಗಳು, ಶಕ್ತಿವರ್ಧಕ ಪೌಡರ್‌ಗಳ ತಯಾರಿಯಲ್ಲೂ ಇವನ್ನು ಬಳಸಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಕೇಕ್, ಬಿಸ್ಕತ್ತು, ಬನ್ನು, ರಸ್ಕ್ ಇವೇ ಮೊದಲಾದ ಬೇಕರಿ ಉತ್ಪನ್ನ ಗಳಲ್ಲಿ ಸಿರಿಧಾನ್ಯಗಳನ್ನು ಶೇ. ೪೦ರಷ್ಟು ಪ್ರಮಾಣದಲ್ಲಿ ಯಾವುದೇ ರಾಚನಿಕ ಬದಲಾವಣೆಯಿಲ್ಲದೆ ಬಳಸಬಹುದು ಎನ್ನುತ್ತಾರೆ ಖಾದ್ಯತಜ್ಞರು.
ಹೀಗೆ ಬಳಸುವುದರಿಂದ ಸದರಿ ಬೇಕರಿ ತಿಂಡಿ-ತಿನಿಸುಗಳು ಸುಲಭವಾಗಿ ಜೀರ್ಣಗೊಳ್ಳುವುದರ ಜತೆಗೆ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳನ್ನು
ಗಣನೀಯ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ. ಮಾತ್ರವಲ್ಲ, ಇಂಥ ತಿನಿಸುಗಳ ಶೇಖರಣೆ ಕಾಲಾವಧಿಯೂ ಹೆಚ್ಚಿರುತ್ತದೆ ಎಂಬುದು ಗಮನಾರ್ಹ.
ವೈದ್ಯಕೀಯ ಆಯಾಮದಲ್ಲಿ ಹೇಳುವುದಾದರೆ, ಸಿರಿಧಾನ್ಯಗಳಲ್ಲಿರುವ ನಾರಿನಂಶವು ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ದೇಹಕ್ಕೆ ಒದಗುವ ಕ್ಯಾಲೊರಿಯ ಶೇಕಡಾವಾರು ಪ್ರಮಾಣವು ಕಡಿಮೆಯಾಗುತ್ತದೆ.
ಸಿರಿಧಾನ್ಯಗಳನ್ನು ಸಾಂಪ್ರದಾಯಿಕ ತಿನಿಸುಗಳು ಮತ್ತು ಆಹಾರ ಪದಾರ್ಥಗಳಲ್ಲಿ ಸೇರಿಸಿ ಪೌಷ್ಟಿಕ ಮೌಲ್ಯವನ್ನು ವಧಿಸುವುದರ ಜತೆಗೆ, ಅವುಗಳ
ರುಚಿ ಹಾಳಾಗದಂತೆ ವಿವಿಧ ಮೌಲ್ಯವರ್ಧಿತ ತಿಂಡಿ-ತಿನಿಸುಗಳನ್ನೂ ತಯಾರಿಸಬಹುದು ಮತ್ತು ಕೃಷಿಕರು ತಾವಿರುವ ನೆಲೆಯಲ್ಲಿಯೇ ಇವನ್ನು ಸಂಸ್ಕರಿಸಿ ಮಾರಾಟ ಮಾಡಬಹುದು. ಆದ್ದರಿಂದ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗುವಂತೆ ಮಾಡುವ ದಿಸೆಯಲ್ಲಿ ವಿವಿಧ ಆಯಾಮಗಳಲ್ಲಿ ಕಾರ್ಯೋನ್ಮುಖರಾಗಬೇಕಿದೆ.
ಮನೆಗಳಲ್ಲಿ ಮಾತ್ರವಲ್ಲದೆ ಸ್ವಸಹಾಯ ಸಂಘಗಳಲ್ಲಿ ಮೌಲ್ಯವಽತ ತಿಂಡಿ-ತಿನಿಸುಗಳನ್ನು ತಯಾರಿಸಿ, ಪರ್ಯಾಯ/ಹೆಚ್ಚುವರಿ ಆದಾಯವನ್ನು ಗಳಿಸುವ ಮಾರ್ಗೋಪಾಯವಾಗಿಯೂ ಇದನ್ನು ನೆಚ್ಚಬಹುದಾಗಿದೆ. ಈ ಕಾರಣದಿಂದ ಗ್ರಾಮೀಣ ಪ್ರದೇಶ ಮತ್ತು ಪಟ್ಟಣ-ನಗರಗಳಲ್ಲಿನ ಜನಸ ಮೂಹದ ನಡುವೆ ಸಿರಿಧಾನ್ಯಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಈ ಕ್ಷಣದ ಅಗತ್ಯವಾಗಿದೆ. ಈಗ, ಸಿರಿಧಾನ್ಯಗಳಿಂದ ತಯಾರಿಸಬ ಹುದಾದ ಒಂದೆರಡು ಖಾದ್ಯ ಪದಾರ್ಥಗಳ ಕಡೆಗೆ ಗಮನಹರಿಸೋಣ.
ರುಚಿಕಟ್ಟಾದ ಫ್ರೈಡ್ ರೈಸ್
ಬೇಕಾಗುವ ಪದಾರ್ಥಗಳು: ಸಿರಿಧಾನ್ಯದ ಅಕ್ಕಿ ೧ ಕೆ.ಜಿ., ಖಾದ್ಯತೈಲ ೫೦ ಗ್ರಾಂ, ಶುಂಠಿ ೧೦ ಗ್ರಾಂ, ಬೆಳ್ಳುಳ್ಳಿ ೧ ಗಡ್ಡೆ, ಹಸಿಮೆಣಸಿನಕಾಯಿ ೧೦, ಟೊಮೆಟೊ ಪೇಸ್ಟ್ ಅಥವಾ ಸಾಸ್ ೫೦ ಮಿ.ಲೀ., ಸೋಯಾ ಸಾಸ್ ೫೦ ಮಿ.ಲೀ., ವಿನೆಗರ್ ೩೦ ಮಿ.ಲೀ.
ಮಾಡುವ ವಿಧಾನ: ೧ ಭಾಗದಷ್ಟು ಸಿರಿಧಾನ್ಯದ ಅಕ್ಕಿಗೆ ೨ ಭಾಗದಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ಅನ್ನದಂತೆ ಬೇಯಿಸಿ. ಶುಂಠಿ, ಹಸಿಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿಗಳನ್ನು ಜಜ್ಜಿಟ್ಟುಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಒಗ್ಗರಣೆಗೆ ಬೇಕಾಗುವಷ್ಟು ಎಣ್ಣೆ ಹಾಕಿ, ಜಜ್ಜಿದ ಮಸಾಲೆ ಹಾಕಿ ಹುರಿಯಿರಿ. ಇದಕ್ಕೆ ಟೊಮೆಟೊ ಮತ್ತು ಸೋಯಾ ಸಾಸ್ ಹಾಕಿ ಬೆರೆಸಿ. ನಂತರ ಬೆಂದಿರುವ ಸಿರಿಧಾನ್ಯದ ಅನ್ನವನ್ನು ಒಗ್ಗರಣೆಯೊಂದಿಗೆ ಬೆರೆಸಿ, ೧೦ ನಿಮಿಷ ಗಳವರೆಗೆ ಸಣ್ಣ ಉರಿಯ ಮೇಲಿರಿಸಿ. ನಂತರ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಉರಿಯಿಂದ ಕೆಳಗಿಳಿಸಿ. ರುಚಿಕಟ್ಟಾದ ಫ್ರೈಡ್ ರೈಸ್ ಈಗ ಸವಿಯಲು ರೆಡಿ!
ಬಾಯಲ್ಲಿ ನೀರೂರಿಸುವ ಮಸಾಲಾ ರೊಟ್ಟಿ
ಬೇಕಾಗುವ ಪದಾರ್ಥಗಳು: ನವಣೆ ಪೂರ್ಣಧಾನ್ಯದ ಹಿಟ್ಟು ೧೫೦ ಗ್ರಾಂ, ರಾಗಿಹಿಟ್ಟು ೧೫೦ ಗ್ರಾಂ, ಹೆಚ್ಚಿದ ಸಬ್ಬಸಿಗೆ ಸೊಪ್ಪು ೩೦ ಗ್ರಾಂ, ಕೆಂಪು ಮೆಣಸಿನಕಾಯಿ ಪುಡಿ ೧೦ ಗ್ರಾಂ, ಜೀರಿಗೆ ೫ ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೇಯಿಸಲು ಖಾದ್ಯತೈಲ.
ಮಾಡುವ ವಿಧಾನ: ಮೇಲೆ ಉಲ್ಲೇಖಿಸಿರುವ ಎಲ್ಲ ಪದಾರ್ಥಗಳನ್ನೂ ಮಿಶ್ರಮಾಡಿಕೊಳ್ಳಿ. ಅಗತ್ಯವಿರುವಷ್ಟು ನೀರನ್ನು ಬಳಸಿಕೊಂಡು ಮೃದುವಾಗಿ ನಾದಿಕೊಳ್ಳಿ. ಅಗತ್ಯವಿರುವಷ್ಟು ಕಣಕವನ್ನು ತೆಗೆದುಕೊಂಡು ಎಣ್ಣೆ ಸವರಿದ ಬಾಳೆಎಲೆಯ ಮೇಲೆ ರೊಟ್ಟಿಯಂತೆ ತಟ್ಟಿಕೊಳ್ಳಿ. ಚೆನ್ನಾಗಿ ಕಾದಿರುವ ಹೆಂಚಿಗೆ ಎಣ್ಣೆ ಸವರಿ, ತಟ್ಟಿಟ್ಟುಕೊಂಡಿರುವ ರೊಟ್ಟಿಯನ್ನು ಅದರ ಮೇಲೆ ಹಾಕಿ ಎರಡೂ ಕಡೆಯಲ್ಲಿ ಹದವಾಗಿ ಬೇಯಿಸಿ. ರೊಟ್ಟಿಯ ಬಣ್ಣ ಕಂದು ಬಣ್ಣಕ್ಕೆ ತಿರುಗಿ ಪರಿಮಳ ಹೊಮ್ಮಲು ಶುರುವಾದಾಗ ಹೆಂಚಿನಿಂದ ತೆಗೆದು ಬಿಸಿಬಿಸಿಯಾಗಿ ಸೇವಿಸಿ. ಇದು ಮಕ್ಕಳ ಊಟದ ಡಬ್ಬಿಗೆ ಹೇಳಿ ಮಾಡಿಸಿದ ರುಚಿಕಟ್ಟಾದ ತಿನಿಸೂ ಹೌದು, ಆರೋಗ್ಯಕರವೂ ಹೌದು.
ವೈವಿಧ್ಯತೆ ಬಯಸುವವರು ಹಿಟ್ಟಿನಲ್ಲಿ ತಮಗಿಷ್ಟವಾದ ಹಸಿರು ಸೊಪ್ಪು ಮತ್ತು ತರಕಾರಿ ಸೇರಿಸಿಕೊಳ್ಳಬಹುದು. ಪ್ರೋಟೀನು ಅಂಶವನ್ನು ಮತ್ತಷ್ಟು ಹೆಚ್ಚಿಸಬೇಕೆಂದರೆ ೫೦ ಗ್ರಾಂ.ನಷ್ಟು ಬೇಳೆ ಹಿಟ್ಟನ್ನು ಜತೆಗೆ ಸೇರಿಸಿಕೊಳ್ಳಬಹುದು.
ತಾಲಿಪಟ್ಟನ್ನು ತಟ್ಟಿನೋಡಿ!
ಬೇಕಾಗುವ ಪದಾರ್ಥಗಳು: ಸಿರಿಧಾನ್ಯದ (ಪೂರ್ಣಧಾನ್ಯ) ಹಿಟ್ಟು ೧೦೦ ಗ್ರಾಂ, ಅಕ್ಕಿಹಿಟ್ಟು ೧೦೦ ಗ್ರಾಂ, ಹೆಚ್ಚಿದ ಈರುಳ್ಳಿ ೨೫ ಗ್ರಾಂ, ಹೆಚ್ಚಿದ ಕರಿಬೇವು ೫ ಗ್ರಾಂ, ಹೆಚ್ಚಿದ ಕೊತ್ತಂಬರಿ ಸೊಪ್ಪು ೫ ಗ್ರಾಂ, ಮೆಣಸಿನಕಾಯಿ ಪುಡಿ ೫ ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಲು ಖಾದ್ಯತೈಲ.
ಮಾಡುವ ವಿಧಾನ: ಮೇಲೆ ಉಲ್ಲೇಖಿಸಿರುವ ಎಲ್ಲ ಪದಾರ್ಥಗಳನ್ನೂ ಮಿಶ್ರಮಾಡಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಬೇಕಿರುವಷ್ಟು ಹಿಟ್ಟಿನ ಕಣಕವನ್ನು ತೆಗೆದುಕೊಂಡು ಎಣ್ಣೆ ಸವರಿದ ಬಾಳೆ ಎಲೆಯ ಮೇಲೆ ತಟ್ಟಿಕೊಳ್ಳಿ. ನಂತರ ಕಾದ ಹೆಚ್ಚಿನ ಮೇಲೆ ಹಾಕಿ, ಎಣ್ಣೆ ಸವರಿ ಎರಡೂ ಕಡೆಗಳಲ್ಲಿ ಹದವಾಗಿ ಬೇಯಿಸಿ ತೆಗೆಯಿರಿ. ಯಾವುದೇ ಚಟ್ನಿಯ ಜತೆಗೆ ತಾಲಿಪಟ್ಟನ್ನು ಬಿಸಿಬಿಸಿಯಾಗಿ ಸೇವಿಸಿದರೆ ಸ್ವರ್ಗಕ್ಕೆ
ಮೂರೇ ಗೇಣು!
ನಾಲಿಗೆಯನ್ನು ತಣಿಸುವ ಪಡ್ಡು ಬೇಕಾಗುವ ಪದಾರ್ಥಗಳು: ಸಿರಿಧಾನ್ಯದ ಹಿಟ್ಟು ೨ ಬಟ್ಟಲು, ಉದ್ದಿನ ಹಿಟ್ಟು ಅರ್ಧ ಬಟ್ಟಲು, ಮೆಂತ್ಯದ
ಹಿಟ್ಟು ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಯೀಸ್ಟ್ ೧ ಟೀ ಚಮಚ, ಸಾಸಿವೆ ೧ ಟೀ ಚಮಚ, ಹೆಚ್ಚಿದ ಈರುಳ್ಳಿ ೨, ೧ ಕ್ಯಾರೆಟ್‌ನ ತುರಿ, ಹೆಚ್ಚಿದ ೩ ಹಸಿಮೆಣಸಿನಕಾಯಿಗಳು, ಕರಿಬೇವಿನ ಎಸಳು ೨, ಕಡಾಯಿಗೆ ಸವರಲು ಖಾದ್ಯತೈಲ.
ಮಾಡುವ ವಿಧಾನ: ಪೂರ್ಣ ಸಿರಿಧಾನ್ಯಗಳನ್ನು ೩-೪ ಗಂಟೆ ನೆನೆಸಿಟ್ಟು ನಂತರ ನುಣ್ಣಗೆ ರುಬ್ಬಿಕೊಳ್ಳಿ. ಉಪ್ಪು ಸೇರಿಸಿ ೮-೧೦ ಗಂಟೆ ಹುದುಗಲು ಬಿಡಿ. ಹಿಟ್ಟುಗಳಾದರೆ ಒಟ್ಟಿಗೆ ಬೆರೆಸಿಡಿ. ಒಂದು ಬಟ್ಟಲಿನಲ್ಲಿ ಬೆಚ್ಚನೆ ನೀರಿಗೆ ಅರ್ಧ ಟೀ ಚಮಚ ಸಕ್ಕರೆ ಕಲಸಿ ಅದರಲ್ಲಿ ಯೀಸ್ಟ್ ಬೆರೆಸಿ ನೊರೆ ಬಂದಂತಾದ ಕೂಡಲೆ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ. ಅಗತ್ಯವಿರುವಷ್ಟು ನೀರು ಬಳಸಿ ಹದವಾಗಿ ಕಲಸಿಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಉಳಿದೆಲ್ಲ ಒಗ್ಗರಣೆ ವಸ್ತುಗಳನ್ನು ಒಂದೊಂದಾಗಿ ಹಾಕುತ್ತ, ಪರಿಮಳ ಬಂದ ನಂತರ ಅದಕ್ಕೆ ಹುದುಗು ಬಂದ ಹಿಟ್ಟಿನ ಮಿಶ್ರಣ ಸೇರಿಸಿ ಚೆನ್ನಾಗಿ ಕದಡಿ. ಇದೇ ರೀತಿ ಒಗ್ಗರಣೆ ಯನ್ನು ರುಬ್ಬಿದ ವಿಧಾನದಲ್ಲಿಯೂ ಬಳಸಬೇಕು.
ಪಡ್ಡು ಕಡಾಯಿಗೆ ಎಣ್ಣೆ ಸವರಿ. ಅದು ಚೆನ್ನಾಗಿ ಕಾದ ಮೇಲೆ ಒಂದೊಂದೇ ತಗ್ಗಿನಲ್ಲಿ ಮಿಶ್ರಮಾಡಿದ ಹಿಟ್ಟಿನ ಕಣಕ ಹಾಕಿ, ಮೇಲೆ ಒಂದು ತಟ್ಟೆ ಮುಚ್ಚಿ. ನಂತರ ಒಂದೊಂದೇ ಪಡ್ಡು ತಿರುಗಿಸಿ ಮೇಲ್ಭಾಗ ಬೇಯಿಸಿ ತೆಗೆಯಿರಿ. ನಂತರ ಬೇಕಾದ ಚಟ್ನಿಯೊಂದಿಗೆ ಸೇವಿಸಿ.