Saturday, 14th December 2024

ಸಿಹಿ ರೋಗಕ್ಕೆ ಸಿರಿಧಾನ್ಯವೇ ಮದ್ದು: ಬಳಸಿ ನೋಡಿ ಖುದ್ದು !

ಆಲೂರು ಸಿರಿ

ಡಾ.ಅಶೋಕ್‌ ಆಲೂರು

alurashok@gmail.com

ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂದು ದಾಸರು ಹೇಳಿದ್ದಾರೆ. ಇಲ್ಲಿ ದಾಸರು ಬಳಸಿದ ‘ಸಿರಿ’ ಪದ ಕೇವಲ ಶ್ರೀಮಂತಿಕೆ
ಯದ್ದಷ್ಟೇ ಆಗಿರಲಿಕ್ಕಿಲ್ಲ. ಉತ್ತಮ ಫಸಲು ಎಂದಾಗಿರಲಿಕ್ಕೂ ಸಾಕು. ಏಕೆಂದರೆ ಆಗೆಲ್ಲ ರೈತರು ಬೆಳೆಯುತ್ತಿದ್ದುದು ಸಿರಿಧಾನ್ಯ ಗಳನ್ನೇ. ಹಾಗಾಗಿ ಸಿರಿ ಬಂದ ಅಂದರೆ, ಬೆಳೆ ಬಂದಾಗ, ಕಣಜ ತುಂಬಿದ್ದಾಗ ದಾನ ಮಾಡು ಎಂಬರ್ಥದಲ್ಲಿ ಬಳಕೆಯಾಗಿದೆ.

ಹೌದು, ಸಿರಿಧಾನ್ಯಗಳು ಹುಲ್ಲು ಜಾತಿಯ ಬೆಳೆಗಳಾಗಿದ್ದು ಪ್ರಮುಖವಾಗಿ, ಎಲ್ಲಿ ಪ್ರಮುಖ ಆಹಾರಧಾನ್ಯಗಳನ್ನು ಬೆಳೆಯಲು ಸೂಕ್ತ ಪರಿಸರ ಅಥವ ವಾತಾವರಣ ಇರುವುದಿಲ್ಲವೋ ಅಂತಹ ಪ್ರದೇಶಗಳಲ್ಲಿ ಫಲಪ್ರದವಾಗಿ ಬೆಳೆಯುತ್ತವೆ. ಮನುಕುಲಕ್ಕೆ ಅತ್ಯಂತ ಪ್ರಾಚೀನ ಕಾಲದಿಂದ ಪ್ರಮುಖವಾಗಿ ಪರಿಚಯವಿದ್ದ ಆಹಾರ ಬೆಳೆಗಳಿವು. ಇವುಗಳನ್ನು ‘ಬರದ ಬೆಳೆ’ಗಳೆಂದೇ ಕರೆಯ ಲಾಗುತ್ತದೆ.

ಇದಕ್ಕೆ ಕಾರಣಗಳು ಇಲ್ಲದಿಲ್ಲ, ಇವು ಬರಪೀಡಿತ ಪ್ರದೇಶದ ವಾತಾವರಣವನ್ನು ಸಮರ್ಥ ವಾಗಿ ಎದುರಿಸುವ ಗುಣಧರ್ಮವನ್ನು ಹೊಂದಿವೆ. ಹಸಿರು ಕ್ರಾಂತಿಯ ನಂತರ ಗೋಧಿ ಹಾಗೂ ಭತ್ತ ಬೆಳೆಯುವ ಪ್ರಮಾಣ ಹೆಚ್ಚಾಗುತ್ತ ಹೋದಂತೆ ಸಿರಿಧಾನ್ಯಗಳನ್ನು
ಬೆಳೆಯುವ ಪ್ರದೇಶದ ಪ್ರಮಾಣ ಕಡಿಮೆಯಾಗುತ್ತಲೇ ಹೋಯಿತು.

ಸಿರಿಧಾನ್ಯಗಳಿದ್ದೆಲ್ಲೆಲ್ಲ ಕ್ರಮೇಣವಾಗಿ ವಾಣಿಜ್ಯ ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಹಾಗೂ ಮುಸುಕಿನ ಜೋಳ ದಂತಹ ಬೆಳೆಗಳು ಆವರಿಸಿ ಕೊಂಡವು. ಈ ಬೆಳೆಗಳಿಗೆ ಸರಕಾರದ ನೀತಿಯೂ ಪೂರಕವಾದವು. ಹಲವಾರು ಪ್ರಕಾರದ ಪರಿಕರಗಳ ಸಬ್ಸಿಡಿಗಳು, ಅವುಗಳ ಖರೀದಿಗೆ ಮಾಡಲಾದ ವ್ಯವಸ್ಥೆ ಹಾಗೂ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಅವುಗಳನ್ನು ಸೇರಿಸುವ ಮುಖಾಂತರ ಸರಕಾರ ದಿಂದ ಸಿಗುವ ಎಲ್ಲ ಬೆಂಬಲ ವನ್ನು ಇಂತಹ ಬೆಳೆಗಳಿಗೆ ನೀಡಲಾಯಿತು. ಈ ಎಲ್ಲ ಕಾರಣಗಳಿಂದಾಗಿ ಸಿರಿಧಾನ್ಯಗಳು ಹಿಂದೆ ಸರಿದವು.

ಮೂಲತಃ ಸಿರಿಧಾನ್ಯಗಳು ಆಹಾರ ಧಾನ್ಯಗಳೇ. ಮೂಲತಃ ಆಫ್ರಿಕಾ, ಮಧ್ಯ ಏಷ್ಯಾ, ಯೂರೋಪ್, ಚೀನಾ ಹಾಗೂ ಭಾರತ ದೇಶಗಳಲ್ಲಿ ಪುರಾತನ ಕಾಲದಿಂದ ಬೆಳೆಯಲಾಗುತ್ತಿದ್ದ ಇವು, ನಿಖರವಾಗಿ ಯಾವ ಪ್ರಾಂತ್ಯದ್ದು ಎನ್ನುವ ಮಾಹಿತಿ ಇಲ್ಲ. ಕೆಲವು
ದಾಖಲೆಗಳು ಖಚಿತಪಡಿಸುವಂತೆ ಪ್ರಮುಖವಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಾನಾ ದೇಶಗಳಲ್ಲಿ 7 ಸಾವಿರ ವರ್ಷಗಳ ಹಿಂದೆಯೇ ಸಿರಿಧಾನ್ಯಗಳು ಬಳಕೆಯಾಗಿದ್ದವು ಎಂದು ತಿಳಿದುಬಂದಿದೆ.

ಅಂದಿನಿಂದಲೇ ಈ ಧಾನ್ಯಗಳನ್ನು ಭಾರತ ಮತ್ತು ಆಫ್ರಿಕಾದ ಹಲವು ದೇಶಗಳಲ್ಲಿ ಆಹಾರವಾಗಿ ಬಳಸಲಾಗಿತ್ತು ಎಂದೂ ದಾಖಲಿಸಲಾಗಿದೆ. ಇದೀಗ ಸಿರಿಧಾನ್ಯಗಳನ್ನು ಅಂತಾರಾಷ್ಟ್ರೀಯವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈಗಿನ ಮಾಹಿತಿ ಪ್ರಕಾರ ಜಗತ್ತಿನ ೬ನೇ ಪ್ರಮುಖ ಆಹಾರಧಾನ್ಯ ಮೂಲಗಳಿವು. ಹಾಗೆ ನೋಡಿದರೆ ಸಿರಿಧಾನ್ಯಗಳನ್ನು ಭಾರತದಲ್ಲಿ ಅತ್ಯಂತ ಹೇರಳವಾಗಿ ಬೆಳೆಯಲಾಗುತ್ತದೆ. ಸಿರಿಧಾನ್ಯಗಳಲ್ಲಿ ನೂರೆಂಟು ವಿಧಗಳಿದ್ದರೂ ನಮ್ಮ ದೇಶದಲ್ಲಿ ಬೆಳೆಯಲಾಗುವ, ಬಳಕೆಯಲ್ಲಿರುವ ಸಿರಿ ಧಾನ್ಯಗಳಲ್ಲಿ ಪ್ರಮುಖವಾದವು ಜೋಳ, ಸಜ್ಜೆ, ಬರಗು, ರಾಗಿ, ನವಣೆ, ಊದಲು, ಹಾರಕ ಸಾವೆ, ಬ್ರೌನ್‌ಟಾಪ್ ಸಾವೆಯಂಥವು ಮಾತ್ರ.

ಸಾಪ್ರದಾಯಿಕ ಗ್ರಾಮೀಣ ಭಾರತದಲ್ಲಿ ಈ ಸಿರಿ ಧಾನ್ಯಗಳ ಬಳಕೆ ಬಹುತೇಕವಾಗಿ ಗೃಹ ಮಟ್ಟಕ್ಕಷ್ಟೇ ಸೀಮಿತವಾಗಿತ್ತು. ಮುದ್ದೆ ಮತ್ತು ರೊಟ್ಟಿ ತಯಾರಿಕೆಗೆ ಮಾತ್ರವೇ ಬಳಸಲಾಗುತ್ತಿತ್ತು. ರಾಗಿಯೊಂದನ್ನು ಮಾತ್ರ ಮಾಲ್ಟ್, ಹುರಿಹಿಟ್ಟು, ಪಾನೀಯ, ಸಿಹಿ ತಿಂಡಿ ಹಾಗೂ ಕೆಲವೇ ಬೇಕರಿ ಪದಾರ್ಥಗಳಲ್ಲಿ ಬಳಸಲಾಗುತ್ತಿತ್ತು. ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ಆಯ್ದು ಹುದುಗಿದ ಪದಾರ್ಥಗಳಾದ ಗಂಜಿ, ಬ್ರೆಡ್ ಸ್ಪ್ರೆಡ್ಸ್ ಮತ್ತು ಪಾನಿಯಗಳನ್ನು ನಿಗದಿತ ಸೂಕ್ಷ್ಮಾಣುಗಳನ್ನು ಬಳಸಿ ಸಂಸ್ಕರಿಸಿ ಬಳಸ ಲಾಗುತ್ತಿತ್ತು.

ಆದರೆ ಇಂದು ಹಲವಾರು ರೀತಿಯ ಉತ್ಪನ್ನಗಳನ್ನು ತಯಾರಿಸಿ ಉಪಯೊಗಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಯು (IFL) ಇತ್ತೀಚೆಗೆ ಹೊರತಂದಿರುವ ಆರೋಗ್ಯಕ್ಕೆ ಸಂಬಂಧಿಸಿದ ಅಂಕಿ ಸಂಖ್ಯೆಗಳ ಪ್ರಕಾರ, 21ನೇ ಶತಮಾನದ ಅಂತ್ಯ ದೊಳಗೆ, ಮುಂದುವರಿದ ಬೆಳೆಯುತ್ತಿರುವ ರಾಷ್ಟ್ರಗಳು ಸಾಂಕ್ರಾಮಿಕವಲ್ಲದ, ಜೀವನ ಶೈಲಿಯ ಪ್ರಭಾವದಿಂದ ಉದ್ಭವಿ ಸುವ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಶೇ.70ರಷ್ಟು ಮಧುಮೇಹ ಸ್ಥಿತಿಯು ಪ್ರಮುಖವಾಗಿ ಮಧ್ಯಮ ವರ್ಗದವರನ್ನು ಆವರಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಸುಮಾರು 50.8 ಮಿಲಿಯನ್ ಭಾರತೀಯರು ಮಧುಮೇಹಿಗಳಾಗಿದ್ದು, ಅಂತಾರಾಷ್ಟ್ರೀಯ ಅಂಕಿಅಂಶಗಳನ್ನು ಗಮನಿಸಿದರೆ, ಭಾರತದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಮಧುಮೇಹಿಗಳಿದ್ದಾರೆ. ಇದರ ನಂತರ ಎರಡನೇ ಸ್ಥಾನದಲ್ಲಿ ಚೀನಾದಲ್ಲಿ 43.2
ಮಿಲಿಯನ್ ಮಧುಮೇಹಿಗಳಿದ್ದಾರೆ. ಪ್ರಮುಖವಾಗಿ ೪೦-೫೯ ವರ್ಷದೊಳಗಿನ ಪ್ರಜೆಗಳೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಾಧಿಗೆ ತುತ್ತಾಗುತ್ತಿದ್ದಾರೆ. ೨೦೩೦ರ ಹೊತ್ತಿಗೆ ಈ ಸಂಖ್ಯೆಯು ಇನ್ನು ೬೦-೭೯ ವರ್ಷದ ವಯಸ್ಸಿನವರನ್ನು ಆವರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಮಧುಮೇಹಕ್ಕೆ ರಾಮಬಾಣ: ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ 2005-2015 ರ ಅಧ್ಯಯನ ಆಧಾರಿತ ವರದಿಯ ಪ್ರಕಾರ ಭಾರತದಲ್ಲಿ ಕೇವಲ ಮಧುಮೇಹ ಮತ್ತು ಹೃದ್ರೋಗ ತೊಡಕುಗಳಿಂದಲೇ 336.6 ಬಿಲಿಯನ್ ನಷ್ಟವಾಗುವುದೆಂದು ತಿಳಿಸಿತ್ತು. ಇಂದಿನ ನವೀನ ಜೀವನ ಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಮಾಹಿತಿ ಸರಬರಾಜು ವಿಧಾನವು ವ್ಯಕ್ತಿಯ ಆಹಾರ ಅಭ್ಯಾಸದ ಮೇಲೆ ಪ್ರಭಾವ ಬೀರುತ್ತದೆ.

ಸಾಮಾನ್ಯವಾಗಿ ‘ಫಾಸ್ಟ ಫುಡ್’ ಬಹಳ ರುಚಿಕರವಾಗಿದ್ದರೂ, ಅದರಲ್ಲಿ ಘನ ಕೊಬ್ಬಿನಂಶ ಅಧಿಕವಾಗಿರುತ್ತದೆ. ಅತೀ ಕಡಿಮೆ ತರಕಾರಿ ಹಣ್ಣುಗಳ ಬಳಕೆಯಿರುವುದರ ಕಾರಣ ನಾರಿನಂಶವೇ ಇರುವುದಿಲ್ಲ. ಇನ್ನು ಅರೆ ಸಂಸ್ಕರಿಸಿದ ಹಾಗೂ ದಿಢೀರ್ ಬಳಕೆ
ಮಿಶ್ರಣಗಳು ನೇರವಾಗಿ ಸೇವಿಸಬಹುದಾದ ತಿನಿಸುಗಳು (SUC) ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ನಗರೀಕರಣದ ಪ್ರಭಾರದಿಂದ ಶೇ. ೨೦ರಷ್ಟು ಅಧಿಕ ಬಳಕೆಗೊಳಗಾಗಿದೆ.

ಈ ರೀತಿಯ ಬೆಳವಣಿಗೆಯಾಗುತ್ತಿರುವಾಗ, ರಕ್ತದಲ್ಲಿ ಗ್ಲೊಕೋಸ್ ಪ್ರಮಾಣ ಏರದಂತೆ ನಿಯಂತ್ರಿಸುವ ‘ಹೈಪೋಗ್ಲೈಸೆಮಿಕ್’, ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನಿಯಂತ್ರಿಸುವ ಪ್ರಾಂತೀಯ ಹಾಗೂ ರೈತ ಸ್ನೇಹಿಯಾಗಿರುವ ಮೂಲ ಆಹಾರ ಧಾನ್ಯಗಳನ್ನು
ಗುರುತಿಸಿ ಜೀವನ ಶೈಲಿಗೆ ತಕ್ಕಂತೆ ಹೊಂದಾಣಿಕೆ ಮಾಡಲು ಸಾಧ್ಯತೆಯಿರುವಂತಹ ಧಾನ್ಯಗಳನ್ನು ಪ್ರಚುರಪಡಿಸುವ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಚಾರಿತ್ರಿಕ ಹಿನ್ನೆಲೆಯ ಸೊಗಡು ಹೊತ್ತಿರುವ ‘ಸಿರಿ ಧಾನ್ಯಗಳು’ ಆರೋಗ್ಯ ರಕ್ಷಕಗಳ ಆಗರ. ಸಹಜ ವಾಗಿಯೇ ಆರೋಗ್ಯಕ್ಕೆ ಪೂರಕ ಶರ್ಕರ ಪಿಷ್ಪ, ಖನಿಜಾಂಶಗಳು ಹಾಗೂ ಳ್ಳೆಯ ಮೇದಾಮ್ಲಗಳನ್ನು ಹೊಂದಿರುವುದರಿಂದ ಎಲ್ಲ ವಯಸ್ಕ ರಿಗೂ ಸೂಕ್ತವಾಗಿವೆ.

ವೈಜ್ಞಾನಿಕವಾಗಿ ಹೇಳುವುದಾದರೆ, ಸಿರಿಧಾನ್ಯಗಳು ಮೂರು ವಿಧದ ನಾರಿನಾಂಶಗಳನ್ನು ಹೊಂದಿವೆ. ಕರಗದ ಎಳೆಯಂತಹ ನಾರಿನಂಶ, ಕರಗಬಹುದಾದ ನಾರಿನಂಶ ಮತ್ತು ಸಂಸ್ಕರಣೆಗೆ ಒಳಗೊಂಡಾಗ ‘ಪ್ರತಿರೋಧಕ ಗುಣ’ ಹೊಂದುವ ನಾರಿನಾಂಶ-ಈ
ಮೂರೂ ಇವೆ. ಕರಗದ ನಾರಿನಾಂಶವು ಸುಲಭದಲ್ಲಿ ಪಚನವಾಗದೇ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರುವುದನ್ನು ತಡೆಯು ತ್ತದೆ. ಜೀರ್ಣಾಂಗದಲ್ಲಿ ಚಲಿಸುತ್ತಿರುವ ಹಂತಹಂತದಲ್ಲಿ ನೀರಿನಂಶವನ್ನು ಹೀರಿಕೊಂಡು ಮುಂದುವರಿಯುತ್ತದೆ.

ಈ ಕಾರಣ ದಿಂದಾಗಿ ಸೇವಿಸಿದ ಆಹಾರವನ್ನು ನಿರಂತರ ಜೀರ್ಣಾಂಗದಲ್ಲಿ ಮುಂದೆ ಚಲಿಸುವಂತೆ ನೆರವಾಗುತ್ತದೆ. ಈ ಕಾರಣ ದಿಂದಲೇ ಈ ರೀತಿಯ ನಾರಿನಾಂಶವು ಭೌತಿಕ ಬಲ ಹೆಚ್ಚಿಸಿ, ಕರುಳಿನಲ್ಲಿ ಅನುಪಯುಕ್ತ ಆಹಾರ ಭಾಗಾಂಶವನ್ನು ಮಲಬದ್ಧತೆ ಯಾಗದಂತೆ ಹೊರಹಾಕಲು ನೆರವಾಗುತ್ತದೆ. ಇದರಿಂದಾಗಿ ಕರುಳಿನ ನಾನ ಭಾಗಗಳಲ್ಲಿ ಉಂಟಾಗಬಹುದಾದ ವೃಣ ಮತ್ತು ಕ್ಯಾನ್ಸರ್ ತಡೆಯುತ್ತದೆ ಎಂಬುದೂ ಅಧ್ಯಯನಗಳಿಂದ ಸಾಬೀತಾಗಿದೆ.

ಇನ್ನು ಕರಗುವ ನಾರಿನಾಂಶವೂ ಇದ್ದು, ಸಾಮಾನ್ಯವಾಗಿ ಇದು ದೊಡ್ಡ ಕರುಳಿನಲ್ಲಿ ನೈಸರ್ಗಿಕವಾಗಿರುವ ಕೆಲವು ಸೂಕ್ಷ್ಮಾಣು ಗಳ ಪ್ರಭಾವದಿಂದ ಹುದುಗುವಿಕೆಗೆ ಒಳಗಾಗುವುದರಿಂದ ಅಲ್ಪ ಪ್ರಮಾಣದ ಗ್ಲೂಕೋಸ್ ಉತ್ಪಾದನೆ ತೋರುತ್ತದೆ. ಆಹಾರ ಜೀರ್ಣಕ್ರಿಯೆ ಹಂತದಲ್ಲಿ ಕರಗುವ ನಾರಿನಾಂಶವು ರಾಸಾಯನಿಕ ಅಣುಗಳ ಹೊಂದಾಣಿಕೆಗೆ ಒಳಗಾಗುವ ಮುಖಾಂತರ
ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಅನ್ನು ಹಿಡಿದಿಟ್ಟುಕೊಂಡು ನಿರಂತರವಾಗಿ ಸಾಗಿಸಲು ನೆರವಾಗುತ್ತವೆ.

ಸಿರಿಧಾನ್ಯಗಳಲ್ಲಿರುವ ಪ್ರತಿರೋಧಕ ಪಿಷ್ಟಗಳು ದೊಡ್ಡ ಕರುಳನ್ನು ತಲುಪುವವರೆಗೂ ಯಾವುದೇ ಜೀರ್ಣಕ್ರಿಯೆಯ ಪ್ರಭಾವ ಕ್ಕೂ ಒಳಗಾಗುವುದಿಲ್ಲ. ದೊಡ್ಡ ಕರುಳಿನಲ್ಲಿ ಸೂಕ್ಷ್ಮಾಣುಗಳು ಮೇದಾಮ್ಲ ಉತ್ಪಾದನೆ ಮಾಡುವಂತೆ ಪ್ರಚೋದಿಸುತ್ತದೆ. ಇಂಥ ಮೇದಾಮ್ಲಗಳು ಸುಲಭದಲ್ಲಿ ಗ್ಲೂಕೋಸ್ ಹೀರಿಕೊಳ್ಳದಂತೆ ತಡೆಯುತ್ತದೆ. ಸಿರಿಧಾನ್ಯಗಳು ಮೂಲತಃ ವಿಶೇಷ ವೈವಿಧ್ಯಮಯ ಶರ್ಕಪಿಷ್ಟ ಹೊಂದಿದ್ದರೂ, ಭೌತಿಕ ಗಾತ್ರ ಹೆಚ್ಚಳವಾಗಿರುವುದರಿಂದ ‘ಗ್ಲೂಕೋಸ್ ಪ್ರಮಾಣ’ವನ್ನು ನಿಯಂತ್ರಿಸುವುದು ಸಾಬಾತಾದ ಸಂಗತಿ. ಹೀಗಾಗಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರ.

ಹಿಮಾಲಯದ ತಪ್ಪಲಿನ ಗಿರಿಜನರ ಜನರ ಆಹಾರ ಪದ್ಧತಿಯಲ್ಲಿ ಒಗ್ಗೂಡಿದ್ದ ಈ ಸಿರಿಧಾನ್ಯಗಳ ಬಳಕೆ ಮತ್ತು ಆರೋಗ್ಯ ಫಲ ಮಾಹಿತಿಯು ಅನೇಕ ಅಧ್ಯಯನಗಳಲ್ಲಿ ದಾಖಲಾಗಿರುವುದನ್ನು ಕಾಣ ಬಹುದು. ಸಿರಿಧಾನ್ಯವು ಕ್ಷಾರೀಯಗುಣ ಹೊಂದಿದ್ದು, ನಿಧಾನವಾಗಿ ಜೀರ್ಣಗೊಳ್ಳುತ್ತವೆ, ಜೀರ್ಣಾಂಗವನ್ನು ಸುರಕ್ಷಿತವಾಗಿ ನಿರಂತರವಾಗಿ ತೇವವಾಗಿಡುತ್ತದೆ. ಈ ಕಾರಣದಿಂದ ಮಲಬದ್ಧತೆಯನ್ನು ತಡೆಯುತ್ತದೆ ಎಂಬುದೂ ದಾಖಲಾಗಿದೆ.

ಇದಕ್ಕಿಂತಳು ಗಮನಾರ್ಹ ಸಂಗತಿಯೆಂದರೆ, ಶರ್ಕರದ ಹಾಗೂ ಅವಶ್ಯಕ ಅಮಿನೋ ಆಮ್ಲದ ಪ್ರಭಾವದಿಂದ ಮೆದುಳಿನಲ್ಲಿ ಉತ್ಪಾದನೆಯಾಗುವ ‘ಸೆರಟೋನಿನ್’ ಪ್ರಮಾಣ ಹೆಚ್ಚಿಸಿ, ಮನಸ್ಸು ಹಾಗೂ ಆಲೋಚನೆಗಳನ್ನು ಶಾಮತವಾಗಿಸಿ, ಮನೋ ಒತ್ತಡವನ್ನು ತಡೆಯುತ್ತದೆ. ಸಿರಿಧಾನ್ಯಗಳಲ್ಲಿರುವ ವಿಶೇಷ ಖನಿಜಾಂಶವಾದ ಮೆಗ್ನೀಷಿಯಂ ಆಹಾರದ ಮುಖಾಂತರ ದೇಹ ಸೇರಿ
ಮೈಗ್ರೇನ್ (ಅರೆತಲೆಶೂಲೆ) ತಡೆಯುತ್ತದೆ. ಜೀವಸತ್ವ ನಿಯಾಸಿನ್ (ಬಿ೩) ಯು ಟ್ರೈಗ್ಲಿಸರೈಡ್, ಹಾನಿಕಾರಕ ಕೊಲೈಸ್ಟಿರಾಲ್ (ವಿಎಲ್‌ಡಿಎಲ್) ಪ್ರಮಾಣ ಏರದಂತೆ ತಡೆಯುವುದರಿಂದ ಹೃದ್ರೋಗ ತಡೆದು ಜತೆಗೆ ದಿಢೀರ್ ಮುಪ್ಪು ಬರದಂತೆ ನೆರವಾಗು ತ್ತದೆ.

ನಾನಾ ಅಧ್ಯಯನಗಳಲ್ಲಿ ದಾಖಲಾಗಿರುವಂತೆ ಸಿರಿಧಾನ್ಯಗಳಲ್ಲಿ ‘ಆಂಟಿಆಕ್ಸಿಡೆಂಟ್ಸ್’ (ಆಮ್ಲಜನಕ ಸಂಯೋಜನೆ ವಿರೋಧಿ) ಹೊಂದಿರುವುದರಿಂದ ಬಹಳ ಉತ್ತಮ ಆರೋಗ್ಯ ರಕ್ಷಕ ಧಾನ್ಯಗಳೆಂದೇ ಸಾಬೀತಾಗಿದೆ. ಅಷ್ಟೇ ಅಲ್ಲದೆ ಸಿರಿಧಾನ್ಯಗಳಲ್ಲಿರುವ ಪೃಟೀನು ಗ್ಲೊಟೆನ್ ಹೊಂದಿರುವ ಕಾರಣ, ಕೆಲವರಲ್ಲಿ ಕಾಣಬಹುದಾದ ‘ಗ್ಲೂಟೆನ್ ಅಲರ್ಜಿ’ ಹಂತದಲ್ಲಿ ಅತ್ಯಂತ ಸಹಾಯಕ ಆಹಾರಧಾನ್ಯವಾಗುತ್ತದೆ. ಸಿರಿಧಾನ್ಯಗಳು ಕಬ್ಬಿಣಾಂಶ ಹಾಗೂ ಫಾಸರಸ್ ಖನಿಜಾಂಶಗಳ ಆಗರವಾಗಿವೆ. ಸಿರಿಧಾನ್ಯಗಳ
ಪ್ರೋಟೀನಿನಂಶವು ಸುಮಾರು ಶೇ.೭ ರಿಂದ ೧೨ಇದ್ದು. ಉಪಯುಕ್ತ ಆವಶ್ಯಕ ಆಮಿನೋ ಆಮ್ಲಗಳನ್ನು ಹೊಂದಿವೆ.

ಹೀಗಾಗಿ ಅಮಿನೊ ಆಮ್ಲಗಳಾದ ಮಿಥಿಯೋನಿನ್, ಸಿಸಟೀನ್ ಮತ್ತು ಲೈಸಿನ್ ಹೇರಳವಾಗಿ ಒದಗಿಸುತ್ತವೆ. ಸಿರಿಧಾನ್ಯಗಳಲ್ಲಿ ಕೊಬ್ಬಿನಂಶವು ಸುಮಾರು ಶೇ.೧-೫ ರಷ್ಟಿದ್ದು ಮೂಲತಃ ಒಮೆಗಾ ಮೇದಾಮ್ಲಗಳನ್ನು ಒದಗಿಸುವ ಮೂಲಕ ‘ಹೃದಯ ರಕ್ಷಕ’ ಎನಿಸಿವೆ. ಒಟ್ಟಾರೆ ಸಿರಿಧಾನ್ಯಗಳು ಅನೇಕ ಆರೋಗ್ಯದ ದೃಷ್ಟಿಯಿಂದ ಅನೇಕ ಗುಣಾತ್ಮಕ ಸಂಗತಿಗಳನ್ನು ಹೊಂದಿರುವು ದರಿಂದ ದೈನಂದಿನ ಪ್ರಮುಖ ಆಹಾರವಾಗಿ ಬಳಕೆಗೆ ಅತಿ ಪ್ರಶಸ್ತ. ಆರೋಗ್ಯಕಾರಿ ಆಹಾರ, ಆರೋಗ್ಯವಂತ ಮನಸಿನ ಮೂಲ.
ಸಮಾಧಾನ ಹಾಗೂ ನಿರಂತರ ಮನೋಲ್ಲಾಸಕ್ಕೆ ಕಾರಣವೇ ನಾವು ಸೇವಿಸುವ ಆಹಾರ. ಈ ಎಲ್ಲ ಶ್ರೇಷ್ಠ ಗುಣಗಳನ್ನು ಗಮನಿಸಿ ಪ್ರಾಚೀನ ಭಾರತದಲ್ಲಿ ಧಾನ್ಯದ ಗಾತ್ರದ ಆಧಾರದ ಮೇಲೆ ‘ಕಿರುಧಾನ್ಯ’ ಹಾಗೂ ‘ತೃಣಧಾನ್ಯ’ ಎಂದು ಪ್ರತ್ಯೇಕಿಸಿ ಅದಕ್ಕೆ
‘ಸಿರಿ’ ಧಾನ್ಯವೆಂದು ಹೆಸರಿಸಿ ಬಳಕೆಗೆ ತಂದಿದ್ದರು ನಮ್ಮ ಪೂರ್ವಜರು.

ವೀಜ್ಞಾನಿಕ ಹೆಸರಲ್ಲಿ  ‘ಮಿರಾಕಲ್ ಗ್ರೇನ್” ಅಥವಾ ‘ವಂಡರ್ ಗ್ರೇನ್’ ಎನ್ನಲಾಗುತ್ತದೆ. ಕ್ರಿ. ಪೂ.೭೦೦೦ ವರ್ಷಗಳ ಆದಿ ಮಾನವರ ದೀರ್ಘಾಯುಷ್ಯ ಹಾಗೂ ಆರೋಗ್ಯ ಜೀವನದ ಆಧಾರದ ಮೇಲೆ ‘ಸಿರಿಧಾನ್ಯ’ ಹಾಗೂ ‘ಪುಷ್ಟಿಧಾನ್ಯ’ (ನ್ಯೂಟ್ರಿಸೀರಿ ಯಲ್) ಎಂದು ಕರೆಯುವ ಹಂತಬಂದಿದೆ.

Read E-Paper click here