ತಿಳಿರುತೋರಣ
ಶ್ರೀವತ್ಸ ಜೋಶಿ
ಅಣಕವಾಡು ಎಂಬಂತೆ ಮೇಲ್ನೋಟಕ್ಕೆ ಕಾಣುವ, ಗಾಢವಾದ ಸಂದೇಶವನ್ನು ಒಡಲಲ್ಲಿ ತುಂಬಿಕೊಂಡಿರುವ ಕವಿತೆಯಿದು. ಅಮೆರಿಕನ್ನಡಿಗ ಕವಿ ಡಾ.ಮೈ.ಶ್ರೀ.ನಟರಾಜರ ಕಾವ್ಯಕಾರ್ಖಾನೆಯಲ್ಲಿ ಉತ್ಪಾದನೆಯಾದದ್ದು.
ಇದೊಂದು ದಾಸರಪದದ ಶೈಲಿಯಲ್ಲಿ ಹಾಡಬಹುದಾದ ದೇವರನಾಮ ಅಂತಲೂ, ಬಾಗೇಶ್ರೀ ರಾಗದಲ್ಲಿ ಹಾಡಬಹುದು
ಅಂತಲೂ ಅವರೇ ಸೂಚಿಸಿದ್ದರು. ಇದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ತರುವಾಯ ಇನ್ನೊಬ್ಬ ಪ್ರತಿಭಾನ್ವಿತ ಅಮೆರಿಕನ್ನಡಿಗ
ಗಾಯಕ ರಾಮಪ್ರಸಾದ್ ಇದಕ್ಕೆ ಸ್ವರಸಂಯೋಜನೆ ಮಾಡಿ ಬೆಂಗಳೂರಿನ ಶಬ್ಬೀರ್ ಅಹ್ಮದ್‌ರಿಂದ ವಾದ್ಯ ವೃಂದದ ಟ್ರ್ಯಾಕ್
ಮಾಡಿಸಿಕೊಂಡು ಹಾಡಿಯೂ ತೋರಿಸಿದ್ದರು.
ತಾಳಿ, ಇನ್ನೂ ಸ್ವಲ್ಪ ಇದೆ ಈ ಬಗ್ಗೆ ವಿವರಣೆ, ಯಾವುದಕ್ಕೂ ನೀವೊಮ್ಮೆ ಕವಿತೆಯನ್ನು ಪೂರ್ತಿಯಾಗಿ ಓದಿಕೊಳ್ಳಿ: ಉಜ್ಜು ಮನವ ಉಜ್ಜು ಮನವ ಉಜ್ಜಿತೊಳೆಯೊ ಮಾನವ ಬೊಜ್ಜು ಬೆಳೆಸಿ ಅಜ್ಜನಾಗಿ ಲಜ್ಜೆಗೆಟ್ಟು ದಣಿವ ಮುನ್ನ|| ಕರದ ಮೇಲೆ ಕರವನಿಟ್ಟು ಸುರಿವ ನೀರ ಹರಿಯಬಿಟ್ಟು ಪರಿಪರಿಯಲಿ ತಿಕ್ಕಿತೊಳೆದು ವೈರಿಅಣುವ ಕೊಲುವ ಮುನ್ನ|| ಕೆಲಸ ಬಿಟ್ಟು ಮನೆಯೊಳಿದ್ದು ವಲಸೆಯಾತ್ರೆ ತೊರೆದುಬಿಟ್ಟು ಕಲಸಿಕೊಳುವ ಕರದ ಕೆಳಗೆ ತೊಳಿಸಿಕೊಳುವ ಕರವನಿಟ್ಟು||
ಹಾಲು ತರಲು ಹೋಗಲಾರೆ ಕಾಲು ಹೊರಗೆ ಮೆಟ್ಟಲಾರೆ ಕಾಲರಾಯನ ಭಯಕೆ ನಡುಗಿ ಕಾಲ ಕಳೆವುದಕೂ ಮುನ್ನ||
ಎಷ್ಟು ವಾರ ಸೆರೆಯಲಿರುವ ಕಷ್ಟದಲ್ಲಿ ಬಾಳಬೇಕೋ ಸೃಷ್ಟಿಗೊಡೆಯ ನಟನ-ವಿಠಲ ನಷ್ಟ ಬಾಳು ಮುಗಿವ ಮುನ್ನ||
ಬಹುಶಃ ಸರಿಯಾಗಿಯೇ ಅಂದಾಜು ಮಾಡಿದಿರಿ. ‘ಕೋವಿಡ್ ಮಹಾಮಾರಿಯನ್ನು ತಡೆಗಟ್ಟಲು ಆಗಾಗ ಕೈಗಳನ್ನು ತೊಳೆದು ಸ್ವಚ್ಛಗೊಳಿಸಿ’ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಮೊದಲಾಗಿ ಅಥಾರಿಟಿಗಳೆಲ್ಲ ಜನತೆಗೆ ಕೊಟ್ಟ ಆದೇಶವೇ ಈ ಕವಿತೆಯಲ್ಲೂ ಇರುವುದು. ಡಾ.ನಟರಾಜ ಇದನ್ನು ಬರೆದದ್ದು ೨೦೨೦ರ ಮಾರ್ಚ್‌ನಲ್ಲಿ. ಕೋವಿಡ್‌ನ ಕಬಂಧಬಾಹುಗಳು ಜಗತ್ತಿನೆಲ್ಲೆಡೆಗೆ ಚಾಚತೊಡಗಿದ್ದ ಆರಂಭಿಕ ದಿನಗಳಲ್ಲಿ. ಇಂಥ ಚತುರಮತಿಯ ಚಿಂತನಾರ್ಹ ಕವಿತೆಗಳನ್ನು ಬರೆಯುವುದರಲ್ಲಿ ಅವರು ಸಿದ್ಧ ಹಸ್ತರು.
ಅಷ್ಟಾಗಿ ಇದು ಹಸ್ತಗಳ ಬಗ್ಗೆಯೇ, ನಿರ್ದಿಷ್ಟವಾಗಿ ಹೇಳಬೇಕೆಂದರೆ ಹಸ್ತಪ್ರಕ್ಷಾಲನದ ಬಗ್ಗೆಯೇ ಇರುವುದು! ಕೊನೆಯಲ್ಲಿ ಬರುವ ‘ಎಷ್ಟು ವಾರ ಸೆರೆಯಲಿರುವ ಕಷ್ಟದಲ್ಲಿ ಬಾಳಬೇಕೋ…’ ಸಾಲನ್ನು ಗಮನಿಸಿ. ಕೆಲ ವಾರಗಳೊಳಗೆ ಎಲ್ಲವೂ ಸರಿಯಾಗಬಹುದು ಎಂಬ ಆಶಾಭಾವ ಇದ್ದದ್ದು. ಈಗ ವಾರಗಳು ಐವತ್ತೆರಡಕ್ಕಿಂತ ಹೆಚ್ಚಾದುವು, ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ.
ಸ್ಯಾನಿಟೈಸರ್ ನಲ್ಲಿರುವ ಆಲ್ಕೋಹಾಲ್‌ನ ಅಂಶವನ್ನು ಹೀರಿಹೀರಿ ಕೈಗಳು ‘ಗುಂಡಿನ ಮತ್ತೇ ಗಮ್ಮತ್ತು…’ ಎಂದು ಕುಡುಕನಂತೆ ಹಾಡತೊಡಗಿವೆಯೆಂದು ವಾಟ್ಸಪ್‌ನಲ್ಲಿ ಯಾರೋ ಒಂದು ಜೋಕ್ ಬೇರೆ ತೇಲಿಬಿಟ್ಟಿದ್ದರು. ಅಂದಹಾಗೆ ನಟರಾಜರ ಈ ಕವಿತೆ ಯಲ್ಲಿ ಉತ್ಕೃಷ್ಟತೆ ಎಲ್ಲಿದೆಯೆಂದು ಕೇಳಿದಿರಾದರೆ ಅದು ‘ಉಜ್ಜು ಮನವ ಉಜ್ಜು ಮನವ ಉಜ್ಜಿ ತೊಳೆಯೊ ಮಾನವ’ ಎಂಬ ಮೊದಲ ಸಾಲಿನಲ್ಲೇ ಇದೆ.
ಅಣಕವಾಡಿನಂತಿರುವುದನ್ನು ಅಧ್ಯಾತ್ಮಗೀತೆಯಾಗಿಸಿರುವುದೂ ಇದೇ. ಕೈಗಳನ್ನು ಉಜ್ಜಿ ತೊಳೆಯುವ ನೆಪದಲ್ಲಿ ಮನಸ್ಸನ್ನೂ ಉಜ್ಜಿ ತೊಳೆಯಿರಿ ಎಂಬ ಸಂದೇಶ ಹಗುರದ್ದಲ್ಲ, ಯೋಚಿಸಿದಂತೆಲ್ಲ ನಿಜವಾಗಿಯೂ ಬಹಳ ಆಳದ್ದು, ಬಹಳ ಎತ್ತರದ್ದು. ಕಳೆದ ವರ್ಷ ಕೋವಿಡಾಯಣ ಆರಂಭವಾದಾಗ ಪ್ರಧಾನಿ ಮೋದಿ ಭಾರತದ ಪ್ರಜೆಗಳೆಲ್ಲರಿಂದ ಶಂಖ ಊದಿಸಿ ಜಾಗಟೆ ಬಾರಿಸಿ ದೀಪ ಹಚ್ಚಿಸಿದ್ದರಷ್ಟೇ? ಹಾಗೆ ಮಾಡುವುದರಿಂದ ವೈರಸ್ ಓಡಿಹೋಗುತ್ತದೆಯೇ ಎಂದು ಮೋದಿದ್ವೇಷಿಗಳೆಲ್ಲ ಕುಹಕವಾಡಿದ್ದರು.
ಬುದ್ಧಿಗೇಡಿಗಳಿಗೆಲ್ಲಿ ಅರ್ಥವಾಗಬೇಕು, ಮೋದಿ ಅದನ್ನು ಮಾಡಿಸಿದ್ದು ಜನರ ಮನಸ್ಸನ್ನು ಉಜ್ಜಿ ಉಜ್ಜ್ವಲನಗೊಳಿಸುವುದಕ್ಕೆ. ತನ್ಮೂಲಕ ವೈರಸ್ ಅನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದಕ್ಕೆ. ಅಂದರೆ ಈ ಕವಿತೆಯ ‘ಉಜ್ಜು ಮನವ ಉಜ್ಜು ಮನವ ಉಜ್ಜಿ ತೊಳೆಯೊ ಮಾನವ’ ಸಾಲನ್ನೇ ಭಾರತದ ಪ್ರಧಾನಿಯೂ ಅರಿವಿಲ್ಲದೆಯೇ ಅಳವಡಿಸಿಕೊಂಡಂತಿತ್ತು!
ಸರಿ, ಇದಿಷ್ಟೂ ಪೀಠಿಕೆಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಈಗ ‘ಕೈಗಳನ್ನು ತೊಳೆದುಕೊಂಡರೆ ಮನಸ್ಸನ್ನು ತೊಳೆದು ಕೊಂಡಂತೆಯೇ’ ಎಂಬೊಂದು ಥಿಯರಿಯನ್ನು ಅರಿತುಕೊಳ್ಳೋಣ. ಮನಃಶಾಸ್ತ್ರಜ್ಞರು, ವಿeನಿಗಳು, ವೈದ್ಯರು ಎಲ್ಲ ಸೇರಿ
ಅನುಮೋದಿಸಿರುವ ಈ ಥಿಯರಿ ಕೋವಿಡ್‌ಗೆ ಸಂಬಂಧಿಸಿದ್ದಲ್ಲ. ನಾಲ್ಕೈದು ದಶಕಗಳ ಹಿಂದೆಯೇ ಈ ಬಗ್ಗೆ ಅಧ್ಯಯನಗಳು,
ಸಂಶೋಧನೆಗಳು, ಪ್ರಯೋಗಗಳು ನಡೆದು ಇದು ರೂಪುಗೊಂಡಿರುವುದು.
ಕೋವಿಡ್ ಬಾರದಂತೆ ಕೈಗಳನ್ನು ಉಜ್ಜಿ ತೊಳೆದುಕೊಳ್ಳಿ ಎಂದು ಸೂಚನೆ ಕೊಡುವ ಕವಿತೆಗೆ ‘ಉಜ್ಜು ಮನವ ಉಜ್ಜು ಮನವ ಉಜ್ಜಿ ತೊಳೆಯೊ ಮಾನವ’ ಸಾಲು ಕಿರೀಟದಂತೆ ಶೋಭಿಸುತ್ತಿದೆ ಎಂದು ಅನಿಸಿದ್ದರಿಂದ ಕವಿತೆಯನ್ನೂ ಈ ಥಿಯರಿಯನ್ನೂ ನಾನಿಲ್ಲಿ ತಳುಕುಹಾಕಿದ್ದೇನೆ ಅಷ್ಟೇ. ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ… ಮಡಿ ಮಾಡುವ ಬಗೆ ಬೇರುಂಟು… ಎಂದಿದ್ದಾರೆ ಪುರಂದರದಾಸರು.
ಉದಯ ಕಾಲದೊಳೆದ್ದು ಗಡಗಡ ನಡುಗುತ ನದಿಯಲಿ ಮಿಂದೆವೆಂದು ಹಿಗ್ಗುವವರನ್ನು ಕಂಡು ಅವರು ಲೇವಡಿ ಮಾಡುತ್ತಾರೆ. ಅವರ ಪ್ರಕಾರ ಮಡಿಯೆಂದರೆ ಶಾರೀರಿಕ ಶುದ್ಧಿ ಅಲ್ಲ. ತನುವೆಂಬ ಭಾಂಡವನ್ನು ತೊಳೆದ ಮಾತ್ರಕ್ಕೆ ಅದು ಶುದ್ಧವಾಗುವುದಿಲ್ಲ. ಅದರೊಳಗಿನ ಕೆಟ್ಟ ಮನದ ಚಂಚಲವೆಂಬ ಮುಸುರೆಯನ್ನೂ ಕಳೆಯಬೇಕು, ತೊಳೆಯಬೇಕು.
ಬಸವಣ್ಣನ ವರಂತೂ Prevention is better than cure ಎನ್ನುವಂತೆ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿ
ರಂಗ ಶುದ್ಧಿ’ ಎಂದು ಸಾರಿದ್ದಾರೆ. ಅಂದರೆ, ಕೆಟ್ಟದನ್ನು ಮಾಡಿ ಆಮೇಲೆ ಸರ್ವಾಂಗಶುದ್ಧಿಗಾಗಿ ಚಡಪಡಿಸುವುದಕ್ಕಿಂತ ಅದನ್ನೆಲ್ಲ
ಮಾಡದೆ ಶುದ್ಧನಾಗಿಯೇ ಉಳಿದುಕೊಳ್ಳುವ ಬಗೆಯನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿ ಹೇಳಿದ್ದಾರೆ. ಶುದ್ಧತೆ ಅಥವಾ ನೈರ್ಮಲ್ಯವನ್ನು ಮನುಷ್ಯ ಎರಡು ದೃಷ್ಟಿಯಿಂದ ನೋಡುತ್ತಾನೆ.
ಒಂದು, ಶಾರೀರಿಕ ಶುದ್ಧತೆ; ಸ್ನಾನಾದಿಗಳಿಂದ ಶುಚಿರ್ಭೂತನಾಗಿರುವುದು. ಇನ್ನೊಂದು ಚಾರಿತ್ರ್ಯ ಶುದ್ಧತೆ. ಅಂದರೆ ಸದ್ಗುಣ ಸಂಪನ್ನನಾಗಿ, ಸುಶೀಲನಾಗಿ ಇರುವುದು. ‘ಆತನದು ಮಿಸ್ಟರ್ ಕ್ಲೀನ್ ಇಮೇಜ್’ ಎನ್ನುತ್ತೇವಲ್ಲ, ಅಲ್ಲಿ ಕ್ಲೀನ್ ಎಂಬ ವಿಶೇಷಣ ವ್ಯಕ್ತಿಯ ದೇಹಕ್ಕಲ್ಲ, ಗುಣ ಸ್ವಭಾವಕ್ಕೆ. ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಎರಡೂ ಬೇರೆ ಬೇರೆ ಎಂದು ಗೊತ್ತಿದ್ದರೂ, ಶಾರೀರಿಕ ಶುದ್ಧಿಯಿಂದಲೇ ಮನಸ್ಸನ್ನೂ ಚಾರಿತ್ರ್ಯವನ್ನೂ ಶುದ್ಧಗೊಳಿಸಿಕೊಂಡಂತೆಯೇ ಎಂದುಕೊಳ್ಳುತ್ತೇವೆ ನಮ್ಮಲ್ಲಿ ಹೆಚ್ಚಿನವರು. ದಾಸರು, ದಾರ್ಶನಿಕರು, ಧರ್ಮಗುರುಗಳು ಏನು ಬೇಕಾದರೂ ಬೋಧಿಸಲಿ.
ಸ್ವಾರಸ್ಯವೆಂದರೆ, ಬರೀ ಕೈ ತೊಳೆದುಕೊಳ್ಳುವ ಪ್ರಕ್ರಿಯೆಯಿಂದಲೇ ನಮ್ಮ ಮನಸ್ಸು ಕೂಡ ನಿರ್ಮಲಗೊಳ್ಳುತ್ತದೆ, ನಾವು
ಸುಶೀಲರೆನಿಸಿಕೊಳ್ಳುತ್ತೇವೆ ಎಂಬ ಭ್ರಮೆಯ ಹಿಂದಿನ ತಥ್ಯವನ್ನು ಇತ್ತೀಚಿನ ಕೆಲವು ವೈeನಿಕ ಅಧ್ಯಯನಗಳು ಅನಾವರಣ ಗೊಳಿಸಿವೆ. ಮೊದಲಿಗೆ, ಕೈ ತೊಳೆದುಕೊಳ್ಳುವ ಪ್ರಕ್ರಿಯೆಯ ಕುರಿತು ಒಂದಿಷ್ಟು ವಿಚಾರ. ಇದು ಮೇಲ್ನೋಟಕ್ಕೆ ಭಾಸವಾಗುವು ದಕ್ಕಿಂತಲೂ ವಿಸ್ತಾರವಾದ ಅರ್ಥವುಳ್ಳದ್ದು. ಪಾವಿತ್ರ್ಯದ ದೃಷ್ಟಿಯಿಂದ ನೋಡಿದರೆ ಕೈ ತೊಳೆದುಕೊಳ್ಳುವುದಕ್ಕೆ ಧಾರ್ಮಿಕ ಮಹತ್ತ್ವವೂ ತುಂಬ ಇದೆ. ಹಿಂದೂ, ಕ್ರೈಸ್ತ, ಇಸ್ಲಾಂ, ಬಹಾಯ್, ಜುಡಾಯಿಸಂ ಮುಂತಾದ ಎಲ್ಲ ಧರ್ಮಗಳಲ್ಲೂ ಧಾರ್ಮಿಕ ವಿಧಿ ವಿಧಾನಗಳು ಏನಿದ್ದರೂ ಕೈಗಳನ್ನು ತೊಳೆದುಕೊಂಡ ಬಳಿಕವೇ ಆರಂಭವಾಗುತ್ತವೆ.
ಇನ್ನೊಂದು ಅರ್ಥದಲ್ಲಿ ‘ಕೈ ತೊಳೆದುಕೊಳ್ಳುವುದು’ ಎಂದರೆ ಒಪ್ಪಿಕೊಂಡ ಕೆಲಸವನ್ನು ಒಪ್ಪವಾಗಿ ಮಾಡಿ ಮುಗಿಸುವುದು. ವಹಿಸಿಕೊಂಡ ಜವಾಬ್ದಾರಿಯನ್ನು ಹೇಗಾದರೂ ನಿಭಾಯಿಸಿ ಅದರಿಂದ ಬಿಡುಗಡೆ ಹೊಂದುವುದು. ‘ಕಡಲೆ ತಿಂದು ಕೈತೊಳೆದು ಕೊಂಡಂತೆ’ ಎಂಬ ಗಾದೆಮಾತಿನ ಇಂಗಿತವೂ ಅದೇ. ಅಲ್ಲಿ ನಿಜವಾಗಿ ಕೈಗಳನ್ನು ನೀರಿನಿಂದ ತೊಳೆದುಕೊಳ್ಳುವ ಪ್ರಕ್ರಿಯೆ
ನಡೆದಿರುವುದಿಲ್ಲ. ಕೆಲವರು ಮಾತನಾಡುವಾಗಲೂ ಹಾವಭಾವ (body language) ದಿಂದಲೇ ಕೈ ತೊಳೆದುಕೊಳ್ಳುವ
ಕ್ರಿಯೆಯನ್ನು ಸೂಚಿಸುವುದನ್ನೂ ನೀವು ಗಮನಿಸಿರಬಹುದು.
ನನ್ನೊಬ್ಬ ಸಹೋದ್ಯೋಗಿ, ವೆನಿಜುವೆಲಾ ದೇಶದವನಿದ್ದಾನೆ. ತುಂಬ ಚುರುಕಿನ ಆಸಾಮಿ. ಅವನು ನಮ್ಮ ಟೀಮ್ ಮೀಟಿಂಗ್
ಗಳಲ್ಲಿ Yes we can do it easily and finish our task ಎಂದು ಹೇಳುತ್ತ ‘ಹಾಥ್ ಸಫಾಯಿ’ ಮಾಡುವ ಭಂಗಿಯನ್ನು ಒಮ್ಮೆಯಾ ದರೂ ಪ್ರದರ್ಶಿಸಲೇಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೂ ಕೈ ತೊಳೆದುಕೊಳ್ಳುವುದು ಎನ್ನುವುದಿದೆ. ‘ಅಪಘಾತದಲ್ಲಿ ಸತ್ತವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರುಪಾಯಿ ಪರಿಹಾರ ಘೋಷಿಸಿ ಸರಕಾರ ಕೈ ತೊಳೆದುಕೊಂಡಿತು’ ಎಂಬಂಥ ಸುದ್ದಿಗಳು.
ಮಹಾಭಾರತ ಕಥೆಯಲ್ಲಿ ಕರ್ಣನ ಜನನ ಸನ್ನಿವೇಶದಲ್ಲಿ ಕುಂತಿ ಮಾಡಿದ್ದೇನು? ಕನ್ಯೆಯಾಗಿರುವಾಗಲೇ ಹುಟ್ಟಿದ ಮಗುವನ್ನು
ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿಬಿಟ್ಟು ಕೈ ತೊಳೆದುಕೊಂಡದ್ದು! ಕೆಲವೊಮ್ಮೆ ಕಾಟಾಚಾರ ಎಂಬರ್ಥದಲ್ಲೂ ‘ಕೈ
ತೊಳೆದುಕೊಂಡರು’ ಪದಪುಂಜ ಬಳಕೆಯಾಗುತ್ತದೆ. ಉದಾಹರಣೆಗೆ: ಕನ್ನಡ ನಾಡು-ನುಡಿ ವೈಭವದ ಮಹತ್ವದ ಸುದ್ದಿಯೇ
ನಾದರೂ ಇದ್ದರೆ ಅದನ್ನು ಒಳಗಿನೊಂದು ಪುಟದ ಮೂಲೆಯಲ್ಲಿ ಪ್ರಕಟಿಸಿ ಕೈ ತೊಳೆದುಕೊಳ್ಳುತ್ತವೆ ಬೆಂಗಳೂರಿನ
ಉಡಾಫೆ ಇಂಗ್ಲಿಷ್ ಪತ್ರಿಕೆಗಳು.
ಪಶ್ಚಾತ್ತಾಪ ಅಥವಾ ಪಾಪವಿಮೋಚನೆಯ ಆಶಯವೂ ‘ಕೈ ತೊಳೆದುಕೊಳ್ಳುವ’ ಕ್ರಿಯೆಯ ಹಿಂದೆ ಇರುತ್ತದೆ. ಏಸುಕ್ರಿಸ್ತನನ್ನು
ಶಿಲುಬೆಗೇರಿಸಿದ ಸಂದರ್ಭ. ನಿರಪರಾಧಿಯೆಂದು ಗೊತ್ತಿದ್ದರೂ ಜನರ ಒತ್ತಾಯದಿಂದಾಗಿ ಏಸುವಿಗೆ ಘನಘೋರ ಶಿಕ್ಷೆ ವಿಧಿಸಿದವನು ಪಾಂಟಿಯಸ್ ಪಿಲೇಟ್ ಎಂಬಾತ. ಏಸುವಿನ ಪ್ರಾಣಪಕ್ಷಿ ಹಾರಿಹೋದ ಮೇಲೆ ಪಿಲೇಟ್ ಐ wash my hands
off the issue ಎನ್ನುತ್ತಾನಂತೆ. ಅಷ್ಟೇಅಲ್ಲ, ನಿಜವಾಗಿಯೂ ತನ್ನೆರಡೂ ಕೈಗಳನ್ನು ನೀರಿನಲ್ಲಿ ತೊಳೆದುಕೊಂಡು ‘ಈ
ಮನುಷ್ಯನ ರಕ್ತ ಚೆಲ್ಲಿದ ಪಾಪಕರ್ಮದಿಂದ ನಾನೀಗ ಮುಕ್ತನಾಗಿದ್ದೇನೆ’ ಎಂದು ಬಿಕ್ಕಳಿಸುತ್ತಾನಂತೆ.
ಹಾಗೆಯೇ, ಶೇಕ್ಸ್ ಪಿಯರ್‌ನ ಮ್ಯಾಕ್‌ಬೆತ್ ನಾಟಕದಲ್ಲಿ ಲೇಡಿ ಮ್ಯಾಕ್‌ಬೆತ್‌ಳು ಅರಸ ಡಂಕನ್‌ನ ಹತ್ಯೆಗೆ ನೆರವಾಗುತ್ತಾಳೆ. ತಾನೂ ತನ್ನ ಗಂಡನೂ ಸೇರಿ ರಾಜ್ಯಭಾರ ನಡೆಸಬೇಕೆಂಬ ದುರಾಸೆ ಅವಳದು. ಆದರೆ ಆಮೇಲೆ ರಾತ್ರಿಗಳಲ್ಲಿ ನಿದ್ದೆಯಿಂದೆದ್ದು ಅರಮನೆಯ ಹಜಾರಗಳಲ್ಲಿ ಅತ್ತಿಂದಿತ್ತ ಓಡಾಡುತ್ತ, ತನ್ನ ಕೈಗಳಲ್ಲಿ ಇದೆಯೆಂದು ಭ್ರಮಿಸಿದ ರಕ್ತವನ್ನು ತೊಳೆದುಕೊಳ್ಳುವ
ಭಂಗಿಯಲ್ಲಿ Out, damn spot! Out, I say ಎಂದು ಕಿರುಚಿಕೊಳ್ಳುವ ದೃಶ್ಯಗಳು ನಾಟಕದಲ್ಲಿ ಬರುತ್ತವೆ.
ಮನಃಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿವಿಧ ಅಧ್ಯಯನಗಳಿಂದ ತಿಳಿದುಬಂದಿರುವ ಅಂಶವೊಂದಿದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ
ತಾನು ಏನೋ ತಪ್ಪು ಮಾಡಿದ್ದೇನೆಂದು (ನಿಜವಾಗಿ ಏನೂ ಮಾಡಿರದಿದ್ದರೂ) ಮನಸ್ಸಿನಲ್ಲಿ ಗುಂಗಿಹುಳ ಹೊಕ್ಕರೆ ಸಾಕು,
ತಾನು ಗಲೀಜಾಗಿದ್ದೇನೆ, ಸ್ನಾನ ಮಾಡಿಕೊಳ್ಳಬೇಕು, ಕೈ ತೊಳೆದುಕೊಳ್ಳಬೇಕು ಎಂದೆಲ್ಲ ಅನಿಸಲಾರಂಭಿಸುತ್ತದೆ. ಮಾನಸಿಕ
ಅಸ್ವಸ್ಥತೆಯಿದ್ದವರು ತುಂಬಾ ಹೊತ್ತು ಸ್ನಾನ ಮಾಡಬಯಸುವುದನ್ನೂ ನೀವು ಗಮನಿಸಿರಬಹುದು. ಒಮ್ಮೆ ಸ್ನಾನ ಮಾಡಿದರೆ,
ಇಲ್ಲ ಕೈ ತೊಳೆದುಕೊಂಡರೂ ಸಾಕು, ಪಾಪಪ್ರಜ್ಞೆ ಒಂದೊಮ್ಮೆಗೆ ಕಡಿಮೆಯಾಗುತ್ತದೆ ಅವರಿಗೆ.
ಇದು ಹೇಗೆ ಸಾಧ್ಯ? ಬರೀ ಕೈ ತೊಳೆದುಕೊಳ್ಳುವ ಪ್ರಕ್ರಿಯೆಗೆ ಮನಸ್ಸನ್ನೂ ಹಗುರಗೊಳಿಸುವ ಶಕ್ತಿ ಎಲ್ಲಿಂದ ಬರುತ್ತದೆ? ಭೌತಿಕ ವಾಗಿಯೂ ನೈತಿಕವಾಗಿಯೂ ನಮ್ಮ ಅನುಭವಕ್ಕೆ ಬರುವ ಭಾವನೆಗಳ ಪೈಕಿ ‘ಅಸಹ್ಯ’ ಅಥವಾ ‘ಹೇಸಿಗೆ’ ಎಂಬ ಭಾವನೆಯನ್ನೇ ತೆಗೆದುಕೊಳ್ಳೋಣ. ಅಸಹ್ಯವಾದದ್ದೇನಾದರೂ ಕಣ್ಣಿಗೆ ಕಾಣಿಸಿಕೊಂಡರೆ ನಾವೇನು ಮಾಡುತ್ತೇವೆ? ವಾಕರಿಕೆಯ ಭಾವ ನಮ್ಮ ಮುಖದಲ್ಲಿ ಮೂಡುತ್ತದೆ. ಅಸಹ್ಯ/ಹೇಸಿಗೆ ತೀವ್ರವಾಗಿದ್ದರೆ ವಾಂತಿಯೂ ಬರಬಹುದು.
ಅದೇ ರೀತಿ ಹೇಸಿಗೆಯೆನಿಸುವ ಕೃತ್ಯದ ಬಗ್ಗೆ ಓದಿದಾಗ/ಕೇಳಿದಾಗಲೂ ನಮ್ಮ ಪ್ರತಿಕ್ರಿಯೆ ವಾಕರಿಕೆಯ ರೂಪದಲ್ಲೇ ಇರುತ್ತದೆ. ಇದಕ್ಕೆ ಕಾರಣವೆಂದರೆ ಹೇಸಿಗೆ ಎಂಬ ಭಾವನೆಗೆ- ಅದು ಭೌತಿಕವಾದದ್ದಿರಲಿ ನೈತಿಕವಾದದ್ದಿರಲಿ- ಪ್ರತಿಕ್ರಿಯಿಸುವ ಮೆದುಳಿನ ಭಾಗ ಒಂದೇ. ಆದ್ದರಿಂದಲೇ ಭೌತಿಕ ಶುದ್ಧೀಕರಣದಿಂದ ಭೌತಿಕ ಅಸಹ್ಯ ನಿವಾರಣೆಯಾದಾಗ ತನ್ನಿಂತಾನೇ ಮಾನಸಿಕ ಅಸಹ್ಯವೂ ಕಡಿಮೆಯಾಯ್ತು ಅಂತನಿಸುತ್ತದೆ. ಒಮ್ಮೆ ಒಂದು ಅಧ್ಯಯನದಲ್ಲಿ ಕೆಲವು ಜನರನ್ನು ಸೇರಿಸಿ, ಅವರ ಜೀವನದಲ್ಲಿ ಹಿಂದೆ ನಡೆದ ಯಾವುದಾದರೂ ಕೆಟ್ಟ ಅಥವಾ ಒಳ್ಳೆಯ ಘಟನೆಯನ್ನು ಸವಿಸ್ತಾರವಾಗಿ ನೆನಪಿಸಿಕೊಳ್ಳುವಂತೆ ಕೇಳಿಕೊಳ್ಳ ಲಾಯಿತು.
ಕೆಟ್ಟ ಘಟನೆ ನೆನಪಿಸಿಕೊಂಡವರೆಲ್ಲ ಆಮೇಲೆ ಶೌಚಾಲಯಕ್ಕೆ ಹೋಗಿಬರುವ ಅಥವಾ ವಾಷ್‌ಬೇಸಿನ್‌ನಲ್ಲಿ ಕೈತೊಳೆದು ಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದರಂತೆ. ಮತ್ತೊಂದು ಸಮೀಕ್ಷೆಯಲ್ಲಿ ಎಲ್ಲರಿಗೂ ಕೆಟ್ಟ ಘಟನೆಯನ್ನೇ ನೆನಪಿಸಿಕೊಳ್ಳಲಿಕ್ಕೆ ಹೇಳಲಾಯ್ತು. ಬಳಿಕ ಅರ್ಧದಷ್ಟು ಮಂದಿಗೆ ಕೈತೊಳೆದುಕೊಳ್ಳುವ ಅವಕಾಶ ಕೊಡಲಾಯ್ತು, ಇನ್ನುಳಿದವರಿಗೆ ನಿರಾಕರಿ ಸಲಾಯ್ತು. ಕೈ ತೊಳೆದುಕೊಂಡವರಲ್ಲಿ ಮನಸ್ಸಿನ ಖಿನ್ನತೆ, ಹೇಸಿಗೆ ಕಡಿಮೆಯಾಗಿದ್ದನ್ನು ಗಮನಿಸಲಾಯ್ತು.
ಪಾಪಪ್ರe, ಹೇಸಿಗೆಯಂಥ ಭಾವನೆಗಳಲ್ಲಷ್ಟೇ ಅಲ್ಲ, ಕಷ್ಟದ ಪರಿಸ್ಥಿತಿಯಲ್ಲಿ ತುಮುಲ-ಗೊಂದಲಗಳಿಲ್ಲದೆ ತಿಳಿಯಾದ
ಮನಸ್ಸಿನಿಂದ ನಿರ್ಧಾರಗಳನ್ನು ಮಾಡುವ (decision making) ಸಾಮರ್ಥ್ಯವೂ ‘ಕೈ ತೊಳೆದುಕೊಳ್ಳುವ’ ಪ್ರಕ್ರಿಯೆಯಿಂದ ಸುಲಭವಾಗುತ್ತದೆ. ಅಮೆರಿಕದ ಮಿಷಿಗನ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಬ್ಬರು ಇದನ್ನು ಒಂದು ಪ್ರಯೋಗದ ಮೂಲಕ ಪ್ರಸ್ತುತಪಡಿಸಿದ್ದಾರೆ.
ಪ್ರಯೋಗಕ್ಕೆ ಅವರು ಬಳಸಿಕೊಂಡದ್ದು ಮನುಷ್ಯಸಹಜ ಗುಣವಾದ ‘ಆಯ್ಕೆಯ ಸಮರ್ಥನೆ’ ಯಾವ ರೀತಿಯಲ್ಲಿ ವ್ಯತ್ಯಾಸ ವಾಗುತ್ತದೆ ಎನ್ನುವುದರ ಮೌಲ್ಯಮಾಪನ. ಆಯ್ಕೆಯ ಸಮರ್ಥನೆಯನ್ನು ನಾವೆಲ್ಲರೂ ನಮ್ಮನಮ್ಮ ಜೀವನದಲ್ಲಿ ಎಷ್ಟೋಸರ್ತಿ
ಮಾಡುತ್ತಿರುತ್ತೇವೆ, ನಮಗೆ ಗೊತ್ತಿರುವುದಿಲ್ಲ ಅಷ್ಟೇ. ಸಮಾನವಾಗಿ ಆಕರ್ಷಕವಾಗಿರುವ ಎರಡು ವಸ್ತುಗಳ ಪೈಕಿ ಒಂದನ್ನಷ್ಟೇ ಆಯ್ಕೆ ಮಾಡಬಹುದಾದ ಸಂದರ್ಭವನ್ನು ಊಹಿಸಿ. ಆಯ್ಕೆಯ ಬಳಿಕ ನಮ್ಮ ಮನಸ್ಸು, ಆಯ್ದುಕೊಂಡ ವಸ್ತುವಿನದೇ
ಗುಣಗಾನವನ್ನು ನಮ್ಮಿಂದ ಮಾಡಿಸುತ್ತದೆ.
ಪುಟ್ಟ ಆಟಿಕೆ, ಎಲೆಕ್ಟ್ರಾನಿಕ್ಸ್ ಉಪಕರಣ, ಅಥವಾ ಸ್ವಂತ ವಾಹನ ಖರೀದಿಯಿಂದ ಹಿಡಿದು ಮದುವೆಯಾಗಲು ಹೆಣ್ಣು/ಗಂಡು ಹುಡುಕಿಕೊಳ್ಳುವ ಸನ್ನಿವೇಶದವರೆಗೂ ಈ ಆಯ್ಕೆಯ ಸಮರ್ಥನೆ ಇದ್ದದ್ದೇ.
ಮಿಷಿಗನ್‌ನ ವಿದ್ಯಾರ್ಥಿಗಳು ಮಾಡಿದ ಪ್ರಯೋಗ ಇಷ್ಟೇ: ಒಂದಿಷ್ಟು ಸಹಪಾಠಿಗಳನ್ನು ಒಟ್ಟು ಸೇರಿಸಿ ಪ್ರತಿಯೊಬ್ಬರ ಮುಂದೆಯೂ ೩೦ ಸಿಡಿಗಳನ್ನು ಹರಡಿ ಅದರಲ್ಲಿ ಅವರು ತಮ್ಮಿಷ್ಟದ ಟಾಪ್ ೧೦ ಸಿಡಿಗಳನ್ನು ಪ್ರತ್ಯೇಕಿಸಬೇಕೆಂದು ಕೇಳಿಕೊಳ್ಳ ಲಾಯ್ತು. ಪ್ರಯೋಗದಲ್ಲಿ ಭಾಗವಹಿಸಿದ್ದಕ್ಕೆ ಉಡುಗೊರೆಯಾಗಿ ಟಾಪ್ ೧೦ ಸಿಡಿಗಳ ಪೈಕಿ ಐದನೆಯ ಅಥವಾ ಆರನೆಯ
ಸ್ಥಾನದ ಸಿಡಿಯನ್ನು ಪ್ರಯೋಗಾರ್ಥಿಗಳಿಗೇ ಕೊಡಲಾಗುತ್ತದೆಂದು ಪ್ರಕಟಿಸಲಾಯ್ತು.
ಈಗ ಗುಂಪನ್ನು ಎರಡು ಭಾಗಗಳಾಗಿಸಿ ಒಂದು ಭಾಗದವರು ತಮ್ಮ ಕೈಗಳನ್ನು ತೊಳೆದುಕೊಂಡು ಬರುವಂತೆಯೂ ಇನ್ನುಳಿದವರು ಸುಮ್ಮನಿರುವಂತೆಯೂ ಕೇಳಿಕೊಳ್ಳಲಾಯ್ತು. ಅದಾದ ಮೇಲೆ ಎಲ್ಲರಿಂದಲೂ ಮತ್ತೊಮ್ಮೆ ಸಿಡಿಗಳ ಟಾಪ್ ೧೦ ಲಿಸ್ಟ್ ಮಾಡುವಂತೆ ಕೋರಲಾಯ್ತು. ಆಶ್ಚರ್ಯವೆಂಬಂತೆ, ಕೈ ತೊಳೆದುಕೊಂಡು ಬಂದವರ ಆಯ್ಕೆ ಮೊದಲಿನಂತೆಯೇ ಇತ್ತು. ಕೈ ತೊಳೆಯದಿದ್ದವರು, ತಮಗೆ ಉಡುಗೊರೆಯಾಗಿ ಸಿಕ್ಕಿದ್ದ ಸಿ.ಡಿಗೆ ಟಾಪ್ ೧ನೆಯ ಸ್ಥಾನ ಕೊಟ್ಟಿದ್ದರು! ಅಂದರೆ, ಕೈ ತೊಳೆದುಕೊಂಡವರ ಮನಸ್ಸಿನಲ್ಲಿ ಮೂಡದ ಪೂರ್ವಗ್ರಹ, ಕೈ ತೊಳೆದುಕೊಳ್ಳದವರ ಮನಸ್ಸುಗಳಲ್ಲಿ ‘ಆಯ್ಕೆಯ ಸಮರ್ಥನೆ’ ರೂಪದಲ್ಲಿ ಮೂಡಿತ್ತು.
ಅರ್ಥಾತ್, ಕೈ ತೊಳೆದುಕೊಂಡವರ ಮನಸ್ಸು ಯಾವುದೇ ಪೂರ್ವಗ್ರಹವಿಲ್ಲದೆ ನಿರ್ಮಲವೂ ನಿಶ್ಚಲವೂ ಆಗಿತ್ತು! ಅದಕ್ಕೇ
ಇರಬಹುದು ಇಂಗ್ಲಿಷ್‌ನಲ್ಲಿ Cleanliness is next to godliness ಎಂಬ ನುಡಿಗಟ್ಟು ಇರುವುದು. ಥಿಯರಿ ನಿಜವಾಗಿಯೂ ತುಂಬ ಆಸಕ್ತಿಕರವಾಗಿ ಇದೆಯಲ್ಲವೇ? ಈಗ, ಈ ಥಿಯರಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನಟರಾಜರ ಕವಿತೆಯನ್ನು ಇನ್ನೊಮ್ಮೆ ಓದಿ. ಅದರ ಅರ್ಥ, ಅಧ್ಯಾತ್ಮ ಇನ್ನಷ್ಟು ಆಳವಾಗಿ ನಿಮ್ಮ ಮನಸ್ಸಿನೊಳಕ್ಕಿಳಿಯಬಹುದು!