ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಪ್ರತಿ ಸಂಜೆ ಗುರುಗಳು ನಡೆಸುತ್ತಿದ್ದ ಸತ್ಸಂಗದಲ್ಲಿ ಓರ್ವ ವ್ಯಕ್ತಿ ಭಾಗವಹಿಸುತ್ತಿದ್ದ. ಆತನಿಗೆ ಗುರುಗಳ ಮಾತುಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಶ್ರದ್ಧೆ, ಭಕ್ತಿ, ಆಸಕ್ತಿ. ಆ ವ್ಯಕ್ತಿಯ ಮನೆಯಲ್ಲಿ ಒಂದು ಬುದ್ಧಿವಂತ ಗಿಳಿ ಇತ್ತು. ಒಂದು ದಿನ ಅದು ವ್ಯಕ್ತಿಯನ್ನು ಕೇಳಿತು ‘ಪ್ರತಿ ದಿನ ಸಂಜೆ ನೀನು ಎಲ್ಲಿಗೆ ಹೋಗುತ್ತಿರುವುದು?’ ‘ಗುರುಗಳು ನಡೆಸುತ್ತಿರುವ ಸತ್ಸಂಗಕ್ಕೆ ಹೋಗುತ್ತೇನೆ, ತುಂಬಾ ಚೆನ್ನಾಗಿ ಮಾತನಾಡು ತ್ತಾರೆ. ಸತ್ಸಂಗದ ಕೊನೆಯಲ್ಲಿ ನಮ್ಮ ಯಾವುದೇ ಸಮಸ್ಯೆಗಾದರೂ ಅವರು ಪರಿಹಾರ ನೀಡುತ್ತಾರೆ’ ಎಂದು ಆತ ಹೇಳಿದ.
‘ಹಾಗಾದರೆ ನನಗೊಂದು ಸಹಾಯ ಮಾಡುತ್ತೀಯಾ? ಗುರುಗಳಿಗೆ ಒಂದು ಪ್ರಶ್ನೆ ಕೇಳಿ ಉತ್ತರ ತಿಳಿಸು’ ಎಂದಿತು ಗಿಳಿ. ‘ಏನದು ನಿನ್ನ ಪ್ರಶ್ನೆ?’ ‘ನನಗೆ ಯಾವಾಗ ಸ್ವಾತಂತ್ರ್ಯ ದೊರೆಯುತ್ತದೆ?’ ಮರುದಿನ ಸತ್ಸಂಗ ಮುಗಿದ ನಂತರ, ಆ ವ್ಯಕ್ತಿಯು ‘ಗುರುಗಳೆ, ನಮ್ಮ ಮನೆಯಲ್ಲಿ ಒಂದು ಗಿಳಿ ಇದೆ. ಅದಕ್ಕೆ ಯಾವಾಗ ಸ್ವಾತಂತ್ರ್ಯ ದೊರೆಯುತ್ತದೆ ಎಂದು ಕೇಳಿಕೊಂಡು ಬರಲು ಆ ಗಿಳಿ ನನ್ನ ಬಳಿ ಹೇಳಿದೆ’ ಎಂದ. ಈ ಪ್ರಶ್ನೆಯನ್ನು ಕೇಳಿದ ಕೂಡಲೇ ಗುರುಗಳು ಸ್ಮೃತಿ ತಪ್ಪಿ ಬಿದ್ದರು. ಇದನ್ನು ಕಂಡ ಆ ವ್ಯಕ್ತಿಯು ಗಾಬರಿ ಗೊಂಡ.
ಏನು ಮಾಡುವುದು ಎಂದು ಆತನಿಗೆ ಹೊಳೆಯಲಿಲ್ಲ. ಅದಾಗಲೇ ಸತ್ಸಂಗಕ್ಕೆ ಬಂದವ ರೆಲ್ಲರೂ ಹೊರಟುಹೋಗಿದ್ದರು. ಈತ ಗುರುಗಳಿಗೆ ಒಂದೆರಡು ನಿಮಿಷ ಗಾಳಿಹಾಕಿದ. ತಣ್ಣನೆಯ ಗಾಳಿಯಿಂದಾಗಿ, ಗುರುಗಳು ಎದ್ದು ಕುಳಿತು, ಮೌನವಾಗಿ ತಮ್ಮ ಪಾಡಿಗೆ ಧ್ಯಾನ ಮಾಡ ತೊಡಗಿದರೇ ಹೊರತು, ಆತನ ಬಳಿ ಮಾತನಾಡಲೂ ಇಲ್ಲ. ಆ ವ್ಯಕ್ತಿಯು ಸ್ವಲ್ಪ ಸಮಯ ಅಲ್ಲೇ ಇದ್ದು, ನಂತರ ತನ್ನ ಪಾಡಿಗೆ ತಾನು ಮನೆಗೆ ಹೋದ.
ಗಿಳಿ ಕೇಳಿತು ‘ಗುರುಗಳ ಬಳಿ ನನ್ನ ಪ್ರಶ್ನೆ ಕೇಳಿದೆಯಾ?’ ‘ಕೇಳಿದೆ. ಆದರೆ ನಾನು ಆ ಪ್ರಶ್ನೆ ಕೇಳಿದ ತಕ್ಷಣ ಗುರುಗಳು ಸ್ಮೃತಿ ತಪ್ಪಿ ಬಿದ್ದು ಬಿಟ್ಟರು. ನಿನಗೆ ಇದು ಒಂದು ಒಳ್ಳೆಯದೋ ಅಥವಾ ಕೆಟ್ಟದ್ದೋ ಸೂಚನೆ ಇರಬಹುದು!’ ಎಂದು ವ್ಯಕ್ತಿಯು ಉತ್ತರಿಸಿದ. ಮರುದಿನ ಸತ್ಸಂಗಕ್ಕೆ ಹೊರಡುವ ಸಮಯದಲ್ಲಿ, ಪಂಜರವನ್ನು ನೋಡಿದರೆ, ಗಿಳಿಯು ಸತ್ತು ಹೋದಂತೆ ನಿಶ್ಚಲವಾಗಿ ಬಿದ್ದು ಕೊಂಡಿತ್ತು.
ವ್ಯಕ್ತಿಯು ಗಾಬರಿಯಿಂದ, ಪಂಜರದ ಬಾಗಿಲು ತೆಗೆದು, ಗಿಳಿಯನ್ನು ಕೈಗೆತ್ತಿಕೊಂಡು ಅದು ಉಸಿರಾಡುತ್ತಿದೆಯೇ ಎಂದು ಪರೀಕ್ಷಿಸ ತೊಡಗಿದ. ಗಿಳಿಯು ತಕ್ಷಣ ರೆಕ್ಕೆ ಕೊಡವಿಕೊಂಡು ಹಾರಿ ಹೋಯಿತು. ವ್ಯಕ್ತಿಯು ಸತ್ಸಂಗಕ್ಕೆ ಹೋಗಿ ಗುರುಗಳ ಬಳಿ ತನ್ನ ಗಿಳಿಯ ವಿಚಾರ ಹೇಳಿದ. ‘ಸ್ವಾಮಿಗಳೇ, ಇವತ್ತು ಬೆಳಿಗ್ಗೆ ನನ್ನ ಗಿಳಿಯು ಕಪಟ ನಾಟಕ ಮಾಡಿ, ಅಲ್ಲಾಡದೇ ಬಿದ್ದುಕೊಂಡಿತ್ತು. ತಾನು ಸ್ಮೃತಿ ತಪ್ಪಿದಂತೆ ಮಲಗಿತ್ತು.
ನನಗೆ ಗಾಬರಿಯಾಯಿತು. ನಾನು ಕನಿಕರದಿಂದ ಅದನ್ನು ಪಂಜರದಿಂದ ಹೊರಗೆ ತಂದು ಪರೀಕ್ಷಿಸತೊಡಗಿದೆ. ಅಲ್ಲೇ ಪಕ್ಕದಲ್ಲಿ ಅದನ್ನು ಮಲಗಿಸಿದೆ. ತಕ್ಷಣ ಅದು ರೆಕ್ಕೆ ಬಡಿಯುತ್ತಾ ಹಾರಿ ಹೋಯಿತು’ ಇದನ್ನು ಕೇಳಿ ಗುರುಗಳು ನಸುನಕ್ಕು, ಹೇಳಿದರು ‘ನೀನು ಕಳೆದ ಒಂದೆರಡು ವರ್ಷಗಳಿಂದ ಪ್ರತಿದಿನ ಸತ್ಸಂಗಕ್ಕೆ ಬರುತ್ತಿರುವೆ. ಆದರೆ ಅದನ್ನು ಯಾಂತ್ರಿಕವಾಗಿ ಮಾಡುತ್ತಿದ್ದೀಯಾ. ಗಾಣದ ಸುತ್ತ ಸುತ್ತುತ್ತಿರುವ ಎತ್ತಿನ ರೀತಿ ನಿನ್ನ ಸತ್ಸಂಗ ನಡೆಯುತ್ತಿದೆ. ಈ ದಿನಗಳಲ್ಲಿ ನೀನು ಏನನ್ನೂ ಕಲಿತಂತೆ ಕಾಣುವುದಿಲ್ಲ. ಆದರೆ ಆ ಗಿಳಿಯನ್ನು ನೋಡು- ಅದು ಸತ್ಸಂಗಕ್ಕೆ ಬರುತ್ತಿಲ್ಲ. ಆದರೂ ನಾನು ಸೂಚಿಸಿದ ದಾರಿಯನ್ನು ನಿನ್ನ ಮೂಲಕ ಕೇಳಿ, ಅರ್ಥ ಮಾಡಿಕೊಂಡು, ಸ್ವಾತಂತ್ರ್ಯವನ್ನು ಪಡೆಯಿತು, ಮೋಕ್ಷವನ್ನು ಹುಡುಕುತ್ತಾ ಹೊರಟಿತು.’
ವ್ಯಕ್ತಿಯು ತಲೆ ತಗ್ಗಿಸಿ, ಗುರುಗಳಿಗೆ ನಮಸ್ಕರಿಸಿ ‘ನನಗೂ ಒಂದು ಉತ್ತಮ ಉಪಾಯ ಹೇಳಿಕೊಡಿ ಗುರುಗಳೇ’ ಎಂದ. ಗುರುಗಳು ‘ನಾನು ಪ್ರತಿ ದಿನ ಸತ್ಸಂಗದಲ್ಲಿ ಹೇಳುತ್ತಿರುವ ಪ್ರವಚನದಲ್ಲಿ ಹತ್ತಾರು ಅಂತಹ ಮಾರ್ಗಗಳು ಅಡಕವಾಗಿವೆ. ಅದನ್ನು ಅರ್ಥ ಮಾಡಿ ಕೊಳ್ಳುವುದಕ್ಕೆ ಪ್ರಯತ್ನಿಸು. ಸತ್ಸಂಗದ ಸಮಯದಲ್ಲಿ ಮನಸ್ಸನ್ನು ಹಗುರಗೊಳಿಸು. ದಿನ ನಿತ್ಯದ ಜಂಜಡಗಳ ಭಾರ ವನ್ನು ತೊಡೆದು ಹಾಕು. ನನ್ನ ಮಾತುಗಳೆಂದರೆ ಅದು ಕೇವಲ ನನ್ನ ಚಿಂತನೆ ಅಲ್ಲ, ಅದರಲ್ಲಿ ನಮ್ಮ ಪರಂಪರೆಯ ಸಾರ ಅಡಗಿದೆ. ಅದರ ಒಳಾರ್ಥವನ್ನು ಅರಿಯಲು ಪ್ರಯತ್ನಿಸು. ಸತ್ಸಂಗದ ಆ ಸಂಕ್ರಮಣದ ಸಮಯದಲ್ಲಿ ಮನಸ್ಸು ಹಕ್ಕಿಯಂತೆ ಹಾರಲು ಸಿದ್ಧವಿರಬೇಕು, ತಿಳಿಯಾಗಿರಬೇಕು. ಮನಸ್ಸು ವಿಭಿನ್ನವಾಗಿ ಯೋಚಿಸಲು ಆಗಿ ಸಿದ್ಧವಾಗುತ್ತದೆ.
ಚಿಂತೆ ಇಲ್ಲದೇ ಇರುವಾಗ ಮಾತ್ರ ಸರಳವಾದ ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯ. ಇದನ್ನು ಗಮನದಲ್ಲಿಟ್ಟು ಕೊಂಡು ಸತ್ಸಂಗದಲ್ಲಿ ಭಾಗವಹಿಸು’ ಎಂದು ನಸುನಕ್ಕರು.