ಶ್ವೇತಪತ್ರ
shwethabc@gmail.com
ಅದು ನಮ್ಮದೇ ಮನಸ್ಸು. ನಮ್ಮನ್ನು ಕಟ್ಟಿ ಹಾಕುವುದು, ಇಲ್ಲವೇ ಮುಕ್ತಗೊಳಿಸುವುದು. ಹೌದಲ್ಲವೇ?! ಹಾಗೇ ನಿಮ್ಮ ಕಣ್ಣುಗಳನ್ನು ಮುಚ್ಚಿ ಕಲ್ಪಿಸಿಕೊಳ್ಳುತ್ತ ಬನ್ನಿ.
ಯಾವುದೋ ಕಾರಣಕ್ಕೆ ನಿಮ್ಮ ಮನೆಯೆಲ್ಲ ಚೆಪಿಲ್ಲಿಯಾಗಿ ಹರಡಿಕೊಂಡಿದೆ. ಬೀರುವಿನ ಒಳಗೆ ಇದ್ದ ವಸ್ತುಗಳೆಲ್ಲ ನೆಲದ
ಮೇಲೆ ಚೆಲ್ಲಾಡಿವೆ. ಎಷ್ಟೋ ವರ್ಷಗಳಿಂದ ಅಟ್ಟದಲ್ಲಿ ನೀವು ಪೇರಿಸಿಟ್ಟ ಸಾಮಾನುಗಳು ನಿಮ್ಮ ಮನೆಯ ಒಂದೊಂದು ಕಡೆ ಬಿದ್ದು ಹೊರಳಾ ಡುತ್ತಿವೆ. ಬಟ್ಟೆಯ ಗಂಟಂತೂ ಎಲ್ಲ ಕಡೆ ಚೆಲ್ಲಿ ಕೂತಿದೆ. ಎಷ್ಟೋ ವರ್ಷದ ಬಟ್ಟೆಗಳ ಸಂಗ್ರಹಕ್ಕೆ ಕೊನೆಯೇ ಇಲ್ಲ ದಂತೆ ಅವುಗಳೆ ನೆಲದ ಮೇಲೆಲ್ಲ ಹರವಿವೆ.
ಅಡುಗೆ ಮನೆಯಲ್ಲಿ ಜೋಡಿಸಿಟ್ಟ ಹಳೆಯ ಪಾತ್ರಗಳೆಲ್ಲ ಮನೆಯ ಒಂದೊಂದು ಮೂಲೆಯಲ್ಲೂ ಒರಗಿ ಕುಳಿತಿವೆ. ಈಗ ನೀವು ಕಲ್ಪಿಸಿ ಕೊಂಡ ಚಿತ್ರ ನಿಮ್ಮ ಮನೆಗಿಂತ ಮನಸ್ಸನ್ನು ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕೆಂದರೆ ಎರಡು ಮೂರು ದಿನಕ್ಕಾದರೂ ಮೇಲೆ ಮೇಲಿನ ಧೂಳನ್ನು, ಕಸವನ್ನು ಗುಡಿಸಿಕೊಂಡು ಸ್ವಚ್ಛ ಮಾಡುತ್ತಿರಬೇಕಲ್ಲವೇ? ಉಪಯೋಗಿಸದ ಬಟ್ಟೆಗಳನ್ನು ಮನೆ ಕೆಲಸದವರಿಗೋ, ಆಶ್ರಮದವರಿಗೂ ಕೊಟ್ಟು ಬೀರು ವನ್ನು ಹೊಸ ಬಟ್ಟೆಗಳೊಂದಿಗೆ ನೀಟಾಗಿ ಜೋಡಿಸುತ್ತೀವಲ್ಲವೇ? ಹೀಗೆ ನಮ್ಮ ಮನಸ್ಸಿನ ಕಸವನ್ನು ಆಚೆ ಸುರಿದು ಹಗುರಾಗಬೇಕು.
ನಮ್ಮೆಲ್ಲರ ಮನಸ್ಸಿನಲ್ಲಿ ಅದೆಷ್ಟೋ ಕಥೆಗಳಿವೆ, ನಂಬಿಕೆಗಳಿವೆ, ಹೊರೆಗಳಿವೆ. ಅವೆಲ್ಲ ನಾವು ಇಂದು ಹೇಗೆ ಬದುಕಬೇಕು ಎಂಬ ವಿಚಾರದ ಮೇಲೆ ನಿರಂತರ ಪರಿಣಾಮ ಬೀರುತ್ತಿರುತ್ತವೆ. ಅದಕ್ಕೇ ಹೇಳಿದ್ದು ನಮ್ಮ ಮನಸ್ಸುಗಳನ್ನು ತೊಳೆದು ಒಪ್ಪ ಓರಣವಾಗಿ ಜೋಡಿಸಿಟ್ಟುಕೊಳ್ಳಬೇಕೆಂದು. ಹಾಗಂತ ಮೊಬೈಲ್ ಫೋನ್‌ನಿಂದ ಯಾವುದೋ ಧ್ಯಾನದ ಆಪ್ ಒಂದನ್ನು ಡೌನ್ ಲೋಡ್ ಮಾಡಿ ಬಿಡುವು ಮಾಡಿಕೊಂಡು ಕುಳಿತು ಮನಸ್ಸಿನೊಳಗೆ ಸಂವಾದಿಸುವುದಷ್ಟೇ ಅಲ್ಲ.
ನಮ್ಮಲ್ಲಿ ಅನೇಕರಿಗೆ ಮನಸ್ಸಿನ ರೀ-ಸೈಕ್ಲಿಂಗ್ ಎಂದರೆ ಅದೊಂದು ವ್ಯಾಯಾಮ ಎಂಬ ಭಾವವೇ ಇರುತ್ತದೆ. ಚಿಂತಿಸಬೇಡಿ
ಮನಸ್ಸನ್ನು ಡಿ ಟಾಕ್ಸ್ (ನಿರ್ವಿಷೀಕರಣ) ಮಾಡುವುದೆಂದರೆ ಮನಸ್ಸನ್ನು ಮುಕ್ತಗೊಳಿಸುತ್ತ ಮತ್ತೆ ಮತ್ತೆ ಪುನಃ ಶ್ಚೇತನ ಗೊಳಿಸುವುದು. ನಮ್ಮ ಬೆನ್ನಿಗಂಟಿದ ಬ್ಯಾಗಿನ ಹೊರೆಯನ್ನು ಕೆಳಗಿಳಿಸಿದಂತೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಅಧ್ಯಾತ್ಮಿಕ ಬುದ್ಧಿಮತ್ತೆ.
ಏನಿದು ಅಧ್ಯಾತ್ಮಿಕ ಬುದ್ಧಿಮತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಮ್ಮ ಇಂಟೆಲಿಜೆಂಟ್ ಕೋಶೆಂಟ್ (ಬುದ್ಧಿಮತ್ತೆ)
ಹಾಗೂ ಭಾವನಾತ್ಮಕ ಅರಿವಿನ ಅನುಭಾವವೇ ಅಧ್ಯಾತ್ಮಿಕ ಬುದ್ಧಿಮತ್ತೆ, ಇದೊಂದು ಬದಲಾವಣೆ. ಹೊರಗಿನ ಶಬ್ದವನ್ನು
ನಿಶಬ್ದಗೊಳಿಸುತ್ತ ನಮ್ಮೊಳಗಿನ ಸಂವೇದನೆಗಳ ಭಾರವನ್ನು ಹೇರುವ ಕಥೆಗಳನ್ನು ಹೊರ ಚೆಲ್ಲುತ್ತ ಸಾಗುವ ಒಂದು ಪ್ರಕ್ರಿಯೆ. ಅಧ್ಯಾತ್ಮಿಕತೆ ಎಂದರೆ ವಿಷಕಾರಿ ಆಲೋಚನೆಯುಳ್ಳ ಜನರ ಹಾಗೂ ವಿಷಕಾರಿ ಸಂದರ್ಭಗಳಲ್ಲೂ ಪರಿಣಾಮಕಾರಿಯಾಗಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಒಂದು ಕಲಿಕೆ. ಇಲ್ಲಿ ನಾವು ಅರ್ಥೈಸಬೇಕಾದ ಮುಖ್ಯ ಸಂಗತಿ ಏನು ಗೊತ್ತೇ? ನಾವು ಏನನ್ನು ತಿನ್ನುತ್ತೇವೆಯೋ ಅದು ಹೇಗೆ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆಯೋ ಹಾಗೆಯೇ ನಾವು ಏನು ಆಲೋಚಿಸುತ್ತೇವೆ ಎಂಬುದು ನಮ್ಮ ಮನಸ್ಸಿನ ಮೇಲೂ ಪರಿಣಾಮವನ್ನು ಬೀರುತ್ತದೆ.
ನೀವೇನೋ ಆಗಲು ಬಯಸಿರುತ್ತೀರಿ. ಈ ಆಗುವಿಕೆ ನಿಮ್ಮೊಳಗಿನ ಒಂದು ವೈಯಕ್ತಿಕ ಸಾಹಸವೇ ಆಗಿರುತ್ತದೆ. ಈ ಸಾಹಸಕ್ಕೆ ಮುಖ್ಯವಾಗಿ ಬೇಕಿರುವುದು ಮನಸ್ಸಿನ ಕೊಳೆ ತೊಳೆಯುವ ಕೆಲಸ. ಕೊಳೆ ತೊಳೆಯುವ ಕ್ರಿಯೆ ನಮ್ಮ ಜಿಜ್ಞಾಸೆಯನ್ನು ಬೇಡುತ್ತದೆ; ಮತ್ತೆ ನಾವು ಮಗುವಾಗಬೇಕಾಗುತ್ತದೆ. ಏನು ಆಗಬೇಕೆಂಬ ತುಡಿತ ನಮ್ಮಲ್ಲಿ ಜಾಸ್ತಿಯಾಗಬೇಕಾಗುತ್ತದೆ. ನಮ್ಮ ನಂಬಿಕೆಗಳಾಚೆ ನಮ್ಮ ಕುತೂಹಲ ತೆರೆದುಕೊಳ್ಳಬೇಕಾಗುತ್ತದೆ. ಎಲ್ಲ ಸಾಹಸಗಳಂತೆ ಇದು ಕೂಡ ಮೊದ ಮೊದಲಿಗೆ
ಸವಾಲಿನದ್ದೇ ಆಗಿರುತ್ತದೆ. ಏಕೆಂದರೆ ಮನಸ್ಸನ್ನು ವಿಷಮುಕ್ತಗೊಳಿಸುವುದೆಂದರೆ ಮನಸ್ಸಿನಾಳಕ್ಕೆ ಇಳಿಯಬೇಕಿರುತ್ತದೆ.
ಇದೊಂದು ಸಂಯಮ ಬೇಡುವ ಕೆಲಸ. ಸ್ವಲ್ಪ ಧೈರ್ಯದಿಂದ ಆಳಕ್ಕಿಳಿದರೆ ಮನಸ್ಸಿಗೊಂದು ಮುಕ್ತ ಸ್ವಾತಂತ್ರ್ಯ ದೊರಕುತ್ತದೆ. ಮನಸ್ಸನ್ನು ಡಿಟಾಕ್ಸ್ ಮಾಡುವುದೆಂದರೆ ನಮ್ಮ ನೋವುಗಳಿಗೆ, ನಮ್ಮ ಹಿಂದಿನ ಬದುಕಿಗೆ ಸುಣ್ಣ ಹೊಡೆದು ಬಿಳಿ ಮಾಡಿ ಬದುಕುವುದಲ್ಲ ಅಥವಾ ಏನು ಆಗಿಯೇ ಇಲ್ಲವೆನ್ನುವಂತೆ ಇದ್ದುಬಿಡುವುದಲ್ಲ. ಹಿಂದೆ ಆದದ್ದನ್ನು ನಿಯಂತ್ರಿಸಲು ಎಂದಿಗೂ ಆಗದ ಸಂಗತಿ. ಆದರೆ ಮುಂದೆ ಆಗುವ ಕಥೆಯ ಆಯ್ಕೆ ನಮ್ಮ ಕೈಯಲ್ಲಿರುತ್ತದೆ, ಅದು ನಮ್ಮನ್ನು ರೂಪಿಸುತ್ತಾ ಸಾಗುತ್ತದೆ.
ಇಲ್ಲಿ ನಮ್ಮೆಲ್ಲರಿಗೂ ಆಗಬೇಕಿರುವ ಮುಖ್ಯ ಅರಿವು ಆಗಿ ಹೋದದ್ದಕ್ಕಿಂತ ಅದನ್ನು ಕಥೆಯಾಗಿ ಹೆಣೆದು ಹೆಣೆದು ನಮ್ಮ ಮನಸ್ಸು
ನೋಯುತ್ತಿದೆ ಸೋಲುತ್ತಿದೆ. ಈ ಸಾಕ್ಷಾತ್ಕಾರ ನಮ್ಮೊಳಗೆ ಒಡಮೂಡಿದ ದಿನ ನಮ್ಮೊಳಗೊಂದು ದಿವ್ಯ ಬದಲಾವಣೆ ಸಾಧ್ಯ.
ಆಗಿಹೋದ ಒಂದು ಘಟನೆಯನ್ನು ಹೇಗೆ ನೋಡುತ್ತೇವೆ ಎಂಬುದು ಸಂಪೂರ್ಣ ನಮ್ಮ ನಿಯಂತ್ರಣದಲ್ಲಿರುತ್ತದೆ. ಇಲ್ಲಿ
ಘಟನೆಗಿಂತ ಅದನ್ನು ನಿರೂಪಿಸುತ್ತ ನಾವು ಹೆಣೆದಿರುವ ಯೋಚನೆಗಳೇ ಹೆಚ್ಚು ವಿಜೃಂಭಿಸುವುದು. ಹೀಗೆ ವಾಸ್ತವದಲ್ಲಿ
ಅದು ಘಟನೆಯ ಕುರಿತಾಗಿ ನಮ್ಮ ವಿವರಣೆಯಷ್ಟೇ.
ನಮ್ಮೆಲ್ಲರಿಗೂ ಖುಷಿಯ ಬದುಕು ಬೇಕು. ಯಾರಿಗೂ ಬಳಲಿಕೆ ಬದುಕಿನ ಭಾಗವಾಗಿ ಬೇಡ. ನಮ್ಮ ಬಳಲಿಕೆಗಳನ್ನು
ನಿರ್ದೇಶಿಸಿಕೊಳ್ಳುವುದು ನಾವೇ ಎಂಬ ಆತ್ಮದ ಅರಿವು ನಮಗಾದ ದಿನ ಬದುಕಿನ ಆಟದ ಓಘ ಬದಲಾಗುತ್ತದೆ. ಈಗ ನೀವೇ ಹೇಳಿ ಬಳಲಿಕೆ ನಮ್ಮ ಆಯ್ಕೆ ಅಷ್ಟೇ ಅಲ್ಲವೇ..? ಆಲೋಚನೆಗಳು ನಮ್ಮ ಮನಸ್ಸನ್ನು ನಿಯಂತ್ರಿಸುವಲ್ಲಿ, ನಿರ್ದೇಶಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇಳಿಸಿ ಸಾಗಿಬಿಡಬೇಕಾದ ಯೋಚನೆಗಳ ಹೊರೆಯನ್ನು ಹೊತ್ತು ಸಾಗುತ್ತ ನಾವುಗಳು ಮನಸ್ಸಿನ ಭಾರವನ್ನು ಜತೆಗೆ ಬದುಕಿನ ಭಾರವನ್ನು ದ್ವಿಗುಣಗೊಳಿಸಿಕೊಂಡುಬಿಟ್ಟಿದ್ದೇವೆ ಅಲ್ಲವೇ? ನಮ್ಮ ಮನಸ್ಸಿನಲ್ಲಿರುವ ಈ ತೆರನಾದ ಭಾರದ ಕಥೆಗಳನ್ನ ಆಗಾಗೆ ಆಚೆ ಸುರಿದು ಖಾಲಿಯಾಗಿಸುತ್ತ ಬಂದರೆ ಮನಸ್ಸಿಗೂ ಹಗುರ, ಬದುಕೂ ಸುಂದರ. ಇಲ್ಲಿ ಬಸವಣ್ಣನವರ ವಚನವೊಂದು ನೆನಪಾಗುತ್ತಿದೆ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲೊಳು ಹುಲ್ಲುಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆ ಒಡೆಯನಿದ್ದಾನೋ ಇಲ್ಲವೋ? ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ! ನಮ್ಮ ಮನಸ್ಸಿನ ಸ್ವಚ್ಛತೆಗೆ ನಾವೇ ಮುಖ್ಯ ಕಾರಣರು. ನಮ್ಮದೇ ಆಲೋಚನೆ, ಅಭಿಪ್ರಾಯ, ತೀರ್ಪುಗಳಿಂದ ಹೊರಬರಬೇಕಿದೆ. ನಮ್ಮದೇ ಬದುಕಿಗೆ ಬಣ್ಣಗಳನ್ನು ತುಂಬುವ ಕಲಾವಿದರು ನಾವೇ
ಆಗಬೇಕು. ಇದಕ್ಕೆ ಬೇಕಿರುವುದು ಒಂದು ಪುಟ್ಟ ಶಿಸ್ತು. ಈ ಶಿಸ್ತೇ ನಮ್ಮ ಸ್ವಾತಂತ್ರ್ಯ.
ತೊಂದರೆಗೊಳಗಾದ ನಾವುಗಳು ನಮ್ಮ ಮನಸ್ಸನ್ನು ಏಕೆ ಪ್ರಶ್ನೆ ಮಾಡಿಕೊಳ್ಳುವುದಿಲ್ಲವೆಂದರೆ; ನಾವಂದುಕೊಂಡಿರುತ್ತೇವೆ ನಾವೇ ನಮ್ಮ ಮನಸ್ಸು ಎಂದು. ನಾವು ಮತ್ತು ನಮ್ಮ ಮನಸ್ಸು ಎರಡು ಒಂದೇ ಎಂಬ ಭಾವ ನಮ್ಮದು. ಆದರೆ, ಇಲ್ಲಿ ನಾವೆಲ್ಲ ಮುಖ್ಯವಾಗಿ ಗಮನಿಸಬೇಕಾಗಿರುವುದು ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹಾಗೂ ನಮ್ಮ ಮನಸ್ಸನ್ನು ನಾವು ಪ್ರತ್ಯೇಕಿಸಿ ನೋಡಬೇಕಿದೆ. ನಮ್ಮ ಆಲೋಚನೆಗಳು ನಮ್ಮ ಮನಸ್ಸಲ್ಲ. ಆಲೋಚನೆಗಳು ನಾವಲ್ಲ ಮತ್ತು ಈ ಆಲೋಚನೆ ಗಳನ್ನು ಪ್ರಶ್ನಿಸದೆ ನಾವು ಒಳಗೆ ಬಿಟ್ಟುಕೊಳ್ಳುವಂತಿಲ್ಲ.
ನಾವು ಆಲೋಚಿಸುವ ಕಾರಣಕ್ಕೆ ಆಲೋಚನೆಗಳು ನಮ್ಮನ್ನು ಮುತ್ತುತ್ತವೆ. ಹಾಗಂದ ಮಾತ್ರಕ್ಕೆ ಅವೆಲ್ಲವುಗಳನ್ನು ನಾವು ನಂಬಬೇಕಾಗಿಲ್ಲ. ಆಲೋಚನೆ ಒಂದೇ ವಾಸ್ತವವನ್ನು ಸತ್ಯವನ್ನು ನಿರೂಪಿಸುವುದಿಲ್ಲವಲ್ಲ. ಇದನ್ನು ವಿವರಿಸುವ ಪುಟ್ಟದೊಂದು ಮನಸ್ಸಿನ ವ್ಯಾಯಾಮವಿದೆ – ಹಾಗೆ ಯೋಚಿಸಿ ವಿಶಾಲವಾದ ಆಕಾಶದಲ್ಲಿ ಗಿಡುಗವೊಂದು ವೃತ್ತಾಕಾರದಲ್ಲಿ ತಿರುಗುತ್ತ ಇರುತ್ತದೆ. ಈಗ ಶುಭ್ರ ಆಕಾಶದಲ್ಲಿ ರಾತ್ರಿಯ ಚಂದಿರ ಮೂಡಿರುವ ಯೋಚನೆ ನಿಮ್ಮ ಕಣ್ಣ ಮುಂದೆ ಬರಲಿ. ನಂತರ ಒಂದು ಪ್ರಕಾಶಮಾನವಾದ ಹೊಳೆಯುವ ಚಿನ್ನದ ತ್ರಿಭುಜ ಒಂದನ್ನು ಕಲ್ಪಿಸಿಕೊಳ್ಳಿ. ವಿಶಾಲ ಆಕಾಶದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿರುವ ಗಿಡುಗ, ರಾತ್ರಿಯಲ್ಲಿ ಮಿನುಗುವ ಚಂದಿರ, ಹೊಳೆಯುವ ಚಿನ್ನದ ತ್ರಿಭುಜ ಈ ಮೂರನ್ನು ಕಲ್ಪಿಸಿಕೊಳ್ಳುತ್ತ ಆಲೋಚಿಸುತ್ತಿದ್ದ ವ್ಯಕ್ತಿ ನೀವೊಬ್ಬರೇ ಆಗಿದ್ದೀರಲ್ಲವೇ? ಇಲ್ಲಿ ಗಿಡುಗ ವೃತ್ತಾಕಾರವಾಗಿ ಸುತ್ತುತ್ತಲಿತ್ತ ಲ್ಲವೇ? ಅದು ಹೊರಗೂ ಒಳಗೂ ಸುತ್ತಬಹುದಿತ್ತಲ್ಲವೇ? ಯಾಕಾಗಲಿಲ್ಲ? ಯಾಕೆಂದರೆ ನಾವು ನಮ್ಮ ಮನಸ್ಸಿಗೆ ವೃತ್ತಾಕಾರವಾಗಿ ಸುತ್ತುತ್ತಿರುವ ಗಿಡುಗ ಎಂಬ ಸೂಚನೆಯನ್ನು ಕೊಟ್ಟುಕೊಂಡಿದ್ದೆವು.
ಈ ಪ್ರಜ್ಞಾಪೂರ್ವಕವಾದ ಎಚ್ಚರಿಕೆ ನಮ್ಮ ಆಲೋಚನೆಯನ್ನು ನಿಯಂತ್ರಿಸುತ್ತಲಿತ್ತು. ನಮಗೂ ಹಾಗೂ ನಮ್ಮ ಆಲೋಚನೆ ಗಳಿಗೂ ಒಂದು ಪುಟ್ಟ ಜಾಗವನ್ನು ನಾವು ಒದಗಿಸಿ ಕೊಡಬೇಕಾಗುತ್ತದೆ. ಹೆಚ್ಚು ಜಾಗ ಕೊಟ್ಟುಬಿಟ್ಟರೆ ಆಲೋಚನೆಗಳು
ನಮ್ಮ ಕೈತಪ್ಪಿ ಹೋಗಿಬಿಡುತ್ತವೆ. ಕಡಿಮೆ ಜಾಗ ಕೊಟ್ಟರೆ ಅವುಗಳೊಳಗೆ ಕಳೆದುಹೋಗುವಂತೆ ಮಾಡಿಬಿಡುತ್ತವೆ ನೆನಪಿರಲಿ!
ಈ ವಿಚಾರ ಋಣಾತ್ಮಕ ಭಾವನೆಗಳ ವಿಚಾರದಲ್ಲಂತೂ ಇನ್ನೂ ಹೆಚ್ಚು ಸತ್ಯ. ನಾವು ನಕಾರಾತ್ಮಕ ಭಾವನೆಗಳ ಒಳಗೆ ಮುಳುಗಿ ಹೋಗುತ್ತೇವೆ – ನನಗೆ ಕೋಪ ಬಂದಿದೆ, ನನಗೆ ಆತಂಕವಾಗುತ್ತಿದೆ, ನನಗೆ ದುಃಖವಾಗಿದೆ. ಮುಂದೆ ನಿಮ್ಮ
ಬದುಕಲ್ಲಿ ಈ ತರಹದ ಆಲೋಚನೆಗಳು ಬಂದೊಡನೆ ಒಂದು ಅಂತರವನ್ನು ಕಾಯ್ದುಕೊಳ್ಳಿ.
ನಿಮ್ಮ ಹಾಗೂ ನಿಮ್ಮ ಭಾವನೆಗಳ ನಡುವೆ ಅಂತರವಿರಲಿ. ಅಮೆರಿಕ ಮೂಲದ ಜಾನಪದ ಕಥೆಯೊಂದು ಇಲ್ಲಿ ನೆನಪಾಗುತ್ತಿದೆ. ಅಜ್ಜನೊಬ್ಬ ಬೆಂಕಿ ಕಾಯಿಸಿಕೊಳ್ಳುತ್ತ ತನ್ನ ಮೊಮ್ಮಗನಿಗೆ ಹೇಳಿದ ಕಥೆ ಇದು. ನಮ್ಮ ಮನಸ್ಸಿನೊಳಗೆ ಎರಡು ತೋಳಗಳಿವೆ. ಅವು ಸದಾ ಕಾದಾಟ ನಡೆಸುತ್ತಲೇ ಇರುತ್ತವೆ. ಮೊದಲನೆಯ ತೋಳ ಧೈರ್ಯ, ಆತ್ಮವಿಶ್ವಾಸ, ದಯೆಯ ಗುಣಗಳನ್ನು ಹೊಂದಿದ್ದರೆ ಮತ್ತೊಂದು ತೋಳ, ಭಯ, ಆತಂಕ, ಜುಗುಪ್ಸೆಯ ಗುಣಗಳನ್ನು ಹೊಂದಿರುತ್ತದೆ. ಒಂದು ಕ್ಷಣ ಯೋಚಿಸಿದ ಮೊಮ್ಮಗ ಅಜ್ಜನನ್ನು ಪ್ರಶ್ನಿಸುತ್ತಾನೆ.
ಹಾಗಿದ್ದರೆ ಯಾವ ತೋಳ ಗೆಲ್ಲುತ್ತದೆ ಎಂದು? ಯಾವ ತೋಳಕ್ಕೆ ನಾವು ಆಲೋಚನೆ ಎಂಬ ಊಟವನ್ನು ಹೆಚ್ಚು ಹಾಕುತ್ತೇವೆ ಯೋ, ಆ ತೋಳ ಗೆಲ್ಲುತ್ತದೆ ಎಂದು ಮಾರ್ವಿಕವಾಗಿ ಉತ್ತರಿಸುತ್ತಾನೆ ಅಜ್ಜ. ನಮ್ಮ ಬದುಕಗುವ ಎಲ್ಲ ವಿಷಯಗಳನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವುಗಳಿಂದ ಕುಗ್ಗದಿರುವಂತೆ ನೋಡಿಕೊಳ್ಳಲು ಖಂಡಿತ ಸಾಧ್ಯವಿದೆ, ಪ್ರಯತ್ನಿಸ ಬೇಕಷ್ಟೇ. ಇಡೀ ಪ್ರಪಂಚವೇ ಕಥೆಗಳ ಒಂದು ರೂಪಕ. ಅಥವಾ ಕಥೆಗಳೇ ನಮ್ಮ ಇರುವಿಕೆಯ ಪ್ರಪಂಚ. ನಾವು ಬದುಕಿಗೆ ಹತ್ತಿರವಾಗುವುದೇ ನಮ್ಮ ಕಥೆಗಳ ಮೂಲಕ. ಅಮೂರ್ತ ಪ್ರಪಂಚದಲ್ಲಿ ನಮ್ಮ ಇರುವಿಕೆಯನ್ನು ಗಟ್ಟಿಗೊಳಿಸುವುದೇ ನಮ್ಮ ಕಥೆಗಳು.
ಒಂದೇ ತೆರನಾದ ಮನಸುಗಳಿಗೆ ನಮ್ಮನ್ನು ಕನೆಕ್ಟ್ ಆಗುವಂತೆ ಮಾಡುವುದು ಇದೇ ಕಥೆಗಳು. ನಮ್ಮ ಹುಟ್ಟು, ನಮ್ಮ ಬದುಕು, ಬದುಕುವ ರೀತಿ, ನಂಬಿಕೆ ಎಲ್ಲಕ್ಕೂ ಕಥೆಗಳದ್ದೇ ಚೌಕಟ್ಟು. ಈ ಕಥೆಗಳೇ ನಮ್ಮನ್ನು ಅನೇಕ ಬಾರಿ ಪ್ರೇರೇಪಿಸಿದ್ದು, ವಾಸ್ತವವನ್ನು ಅರಿಯುವಂತೆ ಮಾಡಿದ್ದು ಇವೆ ಕಥೆಗಳು. ನಮ್ಮ ಬದುಕಿಗೆ ಅರ್ಥ ತುಂಬುವ ಚಿನ್ನದ ಎಳೆಗಳು. ನಮ್ಮ ಮನಸ್ಸಿನದ್ದು ಒಂದು ಕಥೆಯೇ. ಏಕೆಂದರೆ ನಮ್ಮ ವರ್ತನೆಗಳೆಲ್ಲ ಕಲಿತಂತಹವು. ಅವು ಯಾವುವೂ ಹುಟ್ಟಿದಾಗಿನಿಂದ ಬಂದ ಪ್ರತಿವರ್ತಗಳಲ್ಲ. ಪ್ರಯತ್ನ ಪೂರ್ವಕವಾಗಿ ಅಭ್ಯಾಸಬಲದಿಂದ ಕಲಿತಂತಹವು. ಹೇಗೆ ಪ್ರತಿಕ್ರಿಸಬೇಕು, ಹೇಗೆ ನಡೆದುಕೊಳ್ಳ ಬೇಕು, ಹೇಗೆ ಯೋಚಿಸ ಬೇಕು, ಹೇಗೆ ಸಂಬಾಳಿಸಬೇಕು, ಹೇಗೆ ಹೊಂದಿಕೊಳ್ಳಬೇಕು, ಹೇಗೆ ಕೊರಗಬೇಕು, ಮರುಗಬೇಕು, ದುಃಖಿಸಬೇಕು ಬಳಲ ಬೇಕು… ಹೀಗೆ ಅದಕ್ಕೆ ಹೇಳಿದ್ದು ಬದುಕಿನ ಕಥೆಯನ್ನು ಹೆಣೆಯುವಾಗ ಸೂಕ್ಷ್ಮತೆಯ ಅರಿವಿರಲಿ. ಒಂದೇ ಸಲಕ್ಕೆ ಊಹೆಯೊಳಗೆ ಧುಮುಕಬಾರದು. ಕಣ್ಣು ತೆರೆದು ನಮ್ಮೊಳಗೆ ಇಣುಕಿ ನೋಡಿಕೊಳ್ಳಬೇಕು ನಾವು ಬದುಕುತ್ತಿರುವ ಬದುಕು ನಮಗೆ ತೃಪ್ತಿದಾಯಕವಾಗಿದೆಯೇ ಕೇಳಿಕೊಳ್ಳಬೇಕು..!
Read E-Paper click here