Thursday, 19th September 2024

ಮನಸ್ಸು ಮಾಡಿದರೆ ಗೆಲ್ಲಲಿಕ್ಕೆ ಸಾಧ್ಯ

ಆಶಾಕಿರಣ

ಮಿರ್ಲೆ ಚಂದ್ರಶೇಖರ

ಒತ್ತಡಮಯವಾಗಿರುವ ಇಂದಿನ ದಿನಮಾನದಲ್ಲಿ ಸಮಚಿತ್ತದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ಸಂಕಷ್ಟಕಾಲ ಯಾವಾಗ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಮೆಲ್ ಗಿಬ್ಸನ್‌ನಂತೆ ಮಾಂಸದ ಮುದ್ದೆಯಾಗಿರುವ ಮಂದಿ ಅದೆಷ್ಟೋ?

ಐವತ್ತೈದು ವರ್ಷಗಳ ಹಿಂದೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇದ್ದ ಒಂದು ಕುಟುಂಬ ಜೀವನೋಪಾಯಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿತು. ಹನ್ನೊಂದು ಮಕ್ಕಳಿದ್ದ ಆ ಕುಟುಂಬದಲ್ಲಿ ಆರನೇ ಮಗನಿಗೆ ೧೨ ವರ್ಷ. ಸುಂದರನೂ ಸಾಹಸಿಯೂ ಆಗಿದ್ದ ಆ ಹುಡುಗ ಸಿನಿಮಾ ಅಥವಾ ಸರ್ಕಸ್ ಕಲಾವಿದನಾಗಬೇಕೆಂಬ ಬಯಕೆಯುಳ್ಳವನಾಗಿದ್ದ. ಒಂದು ಸಂಜೆ, ನಿರ್ಜನವಾದ ಪ್ರದೇಶದ ಮೂಲಕ ಆತ ಮನೆಯ ಕಡೆಗೆ ನಡೆದು ಹೋಗುವಾಗ ಐದು ಜನ ಕಳ್ಳರು ಹಣಕ್ಕಾಗಿ ಅವನ ಮೇಲೆ ಮಾರಕಾಸಗಳಿಂದ ದಾಳಿ ಮಾಡಿದರು. ಹುಡುಗ ಸಾಹಸಿಗನಾಗಿದ್ದುದರಿಂದ ಹಣ ಕೊಡದೆ ಹೋರಾಡಿದ. ಆದರೆ ಕಳ್ಳರು ಮುಖಮೂತಿ ನೋಡದೆ ಆ ಹುಡುಗನ ದೇಹದೆಲ್ಲೆಡೆ ಮಾರಣಾಂತಿಕವಾಗಿ ಚಚ್ಚಿದರು, ಸತ್ತಿರಬಹುದೆಂದು ಅಲ್ಲೇ ಬಿಟ್ಟುಹೋದರು.

ಕೆಲ ಹೊತ್ತಿನ ನಂತರ ಅಲ್ಲಿಗೆ ಬಂದ ಗಸ್ತು ತಿರುಗುತ್ತಿದ್ದ ಪೊಲೀಸರು, ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಹೆಣವೆಂದು ಭಾವಿಸಿ ಶವಾಗಾರಕ್ಕೆ ತೆಗೆದುಕೊಂಡುಹೋದರು. ಸತ್ತಂತೆ ಇದ್ದ ದೇಹವನ್ನು ಪರೀಕ್ಷಿಸಿದ ವೈದ್ಯರು ಅದರಲ್ಲಿ ಅಲ್ಪಸ್ವಲ್ಪ ಪ್ರಾಣವಿರುವುದನ್ನು ಮನಗಂಡರು. ಆದರೆ ವಿರೂಪಗೊಂಡು ರಕ್ತಮಯವಾಗಿದ್ದ ಅವನ ಸ್ಥಿತಿಯನ್ನು ನೋಡಿ ಹೊಸ ನರ್ಸ್ ಒಬ್ಬಳು ಮೂರ್ಛೆ ಹೋದಳು.

ಜಜ್ಜಿಹೋಗಿದ್ದ ಅವನ ಮುಖವು ಮುಖವಾಗಿರಲಿಲ್ಲ, ಸೋರುತ್ತಿದ್ದ ರಕ್ತದಿಂದ ಕೂಡಿದ ಮಾಂಸದ ಮುದ್ದೆಯಾಗಿತ್ತು. ಮೂಗು ನೇತಾಡುತ್ತಿತ್ತು, ಹಲ್ಲುಗಳೆಲ್ಲ ಉದುರಿಹೋಗಿ ದವಡೆಯು ಬುರುಡೆಯಿಂದ ಬೇರ್ಪಟ್ಟಿತ್ತು. ಒಂದು ಕಣ್ಣು ಸಂಪೂರ್ಣವಾಗಿ ನಾಶವಾಗಿ ಗೂಡಿನಿಂದ ಹೊರಬಂದಿತ್ತು. ಕೈಕಾಲುಗಳ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ನುರಿತ ವೈದ್ಯರಿಂದ ವರ್ಷಗಟ್ಟಲೆ ಚಿಕಿತ್ಸೆ ಪಡೆದ ತರುವಾಯ, ಆತನ ಸ್ಥಿತಿ ಸುಧಾರಿಸಿತು. ಆದರೆ ನೋಡಲು ಕುರೂಪಿಯಾಗಿ ಮಾರ್ಪಟ್ಟಿದ್ದ. ಅವನಿಗೆ ಒಂದುಕಣ್ಣಿರಲಿಲ್ಲ, ಹಲ್ಲುಗಳಿರಲಿಲ್ಲ. ಅವನೊಂದು ಚಲಿಸುವ ಮಾಂಸದ ಮುದ್ದೆಯಂತಿದ್ದ.

ಕುರೂಪಿಯಾಗಿದ್ದ ಅವನನ್ನು ನೋಡಲು ಜನರು ಹೆದರುತ್ತಿದ್ದರು, ಅವನ ಭಯಂಕರ ಆಕೃತಿಯು ನೋಡುಗರಲ್ಲಿ ಮೈನಡುಕವನ್ನು ಹುಟ್ಟಿಸುತ್ತಿತ್ತು. ಈ ಕಾರಣದಿಂದಾಗಿ ಅವನಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ಬಾಲ್ಯ ದಲ್ಲಿ ಆಸೆ ಪಟ್ಟಿದ್ದಂತೆ ಸರ್ಕಸ್ ಒಂದರಲ್ಲಿ ಅವನಿಗೆ ಆಶ್ರಯ ಸಿಕ್ಕಿತು; ಅಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ದಿನದೂಡತೊಡಗಿದ. ಪ್ರೇಕ್ಷಕರಿಗೆ ಅವನನ್ನು A Man with no face ಎಂದು ಪರಿಚಯಿಸುತ್ತಿದ್ದರು, ಅಲ್ಲಿ
ಮನುಷ್ಯನೆಂದು ಯಾರೂ ಗುರುತಿಸುತ್ತಿರಲಿಲ್ಲ. ತಿನ್ನಲು ಸರಿಯಾದ ಊಟವಿರಲಿಲ್ಲ, ಸಿಕ್ಕರೂ ಅದನ್ನು ತಿನ್ನಲು ಬಾಯಲ್ಲಿ ಹಲ್ಲುಗಳಿರಲಿಲ್ಲ. ಹಲ್ಲುಗಳನ್ನು ಕಟ್ಟಿಸಿಕೊಳ್ಳಲು ಅವನ ಬಳಿ ಹಣವಿರಲಿಲ್ಲ.

ಹೀಗೆ ಸಮಸ್ಯೆಗಳು ಹೇರಳವಾಗಿದ್ದರೂ ಆತ ಚಿಕ್ಕಂದಿನ ಅಭ್ಯಾಸಗಳನ್ನು ಬಿಡದೆ ಪಾಲಿಸಿಕೊಂಡು ಬರುತ್ತಿದ್ದ. ಬಿಡುವು ಸಿಕ್ಕಾಗಲೆಲ್ಲಾ ಚರ್ಚ್‌ಗೆ ಹೋಗಿ ಗಂಟೆಗಟ್ಟಲೆ ಕುಳಿತು ಧ್ಯಾನದಲ್ಲಿ ತಲ್ಲೀನನಾಗುತ್ತಿದ್ದ. ತಾನು ದುಡಿದಿದ್ದ ರಲ್ಲಿ ದಾನ-ಧರ್ಮಗಳನ್ನು ಮಾಡುತ್ತಿದ್ದ. ಒಂದೆರಡು ವರ್ಷ ಹೀಗೆಯೇ ಅವನ ಜೀವನ ಕಳೆಯಿತು. ನಿತ್ಯವೂ ಬರುತ್ತಿದ್ದ ಚರ್ಚ್‌ನ ಫಾದರ್‌ರವರು ಅವನ್ನು ನೋಡುತ್ತಿ ದ್ದರು; ಮನುಷ್ಯ ಸ್ವರೂಪವನ್ನು ಕಳೆದುಕೊಂಡರೂ ಕಷ್ಟ ದಿಂದ ಬದುಕು ಸಾಗಿಸುತ್ತಿದ್ದ ಅವನ ಮೇಲೆ ಅವರಿಗೆ ಅನುಕಂಪ ಹುಟ್ಟಿತು. ಆವನಿಗೆ ಏನಾದರೂ ಸಹಾಯ ಮಾಡಬೇಕೆಂಬ ಮನಸ್ಸಾಯಿತು. ಇದರನ್ವಯ ಆಸ್ಟ್ರೇಲಿಯಾದ ಪ್ರತಿಭಾವಂತ ಪ್ಲಾಸ್ಟಿಕ್ ಸರ್ಜನ್ ಹಾಗೂ ಡೆಂಟಿಸ್ಟ್ ರಿಂದ ಅವನಿಗೆ ಚಿಕಿತ್ಸೆ ಕೊಡಿಸಿದರು.

ಆರು ತಿಂಗಳ ಕಾಲ ಎಂಟು ಆಪರೇಷನ್ ನಡೆಯಿತು. ಕಳಚಿ ಬಿದ್ದಿದ್ದ ಕಣ್ಣಿಗೆ ಬದಲಾಗಿ ವೈದ್ಯರು ಗಾಜಿನ ಕಣ್ಣನ್ನು ಅಳವಡಿಸಿದರು. ದವಡೆಯ ವಕ್ರತೆಯನ್ನು ಸರಿಪಡಿಸಿ ಮನುಷ್ಯಮುಖದ ರೂಪವನ್ನು ನೀಡಿದರು. ದಿನಗಳೆದಂತೆ ಅವನ ಒಟ್ಟಾರೆ ದೇಹಕ್ಕೆ ಮನುಷ್ಯನ ಆಕಾರ ಬಂತು. ಬದುಕಿನಲ್ಲಿ ಆಗಬೇಕಿರುವ ಮದುವೆ-ಮಕ್ಕಳೂ ಆದವು. ಚರ್ಚ್‌ನ -ದರ್‌ರವರ ಹೃದಯವೈಶಾಲ್ಯದಿಂದ ಮರುರೂಪ ಪಡೆದ ಆ ಮನುಷ್ಯನನ್ನೇ ಕಥಾನಾಯಕ ನನ್ನಾಗಿಸಿ, ಅವನದೇ ಕಥೆಯನ್ನಾಧರಿಸಿ A Man without a face ಎಂಬ ಹೆಸರಿನ ಸಿನಿಮಾವನ್ನು ತೆಗೆಯಲಾಯಿತು. ಅದು ಆ ಕಾಲಕ್ಕೆ ಸೂಪರ್‌ಹಿಟ್ ಆಯಿತು. ನಂತರ ಒಂದರ ಹಿಂದೆ ಒಂದರಂತೆ ಸಾಲಾಗಿ ಸೂಪರ್-ಡ್ಯೂಪರ್ ಹಿಟ್ ಸಿನಿಮಾಗಳು ಬಂದವು.

Summer City, Tim, The Hero, Mad Max, Brave Heart, Lethal Weapon ಹೀಗೆ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಆತ ನಾಯಕನಾಗಿ ನಟಿಸಿದ. The Passion of Christ ಅವನೇ ನಿರ್ದೇಶಿಸಿದ ಸಿನಿಮಾ. Brave Heart ಸಿನಿಮಾದಲ್ಲಿ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನಟ ಎಲ್ಲವೂ ಇವನೇ. ಈಗ ಬಹುಶಃ ಕೆಲವರಿಗೆ ಈ ನಾಯಕನಾರೆಂದು ಗೊತ್ತಾಗಿರಬೇಕು; ಹೌದು, ಇವನೇ ಹಾಲಿವುಡ್‌ನ ಪ್ರತಿಷ್ಠಿತ ನಟರುಗಳ ಸಾಲಿನಲ್ಲಿ ಹೆಸರುಗಳಿಸಿ ಮುಂಚೂಣಿಯಲ್ಲಿದ್ದ ಮೆಲ್ ಗಿಬ್ಸನ್. ಪ್ರಸ್ತುತ ಇವನ ಆಸ್ತಿಯ ಅಂದಾಜುಮೌಲ್ಯ ೪೨೫ ಮಿಲಿಯನ್ ಡಾಲರ್ (೩,೨೩೭ ಕೋಟಿ ರುಪಾಯಿ).

ಮೆಲ್ ಗಿಬ್ಸನ್‌ಗೆ ಈಗ ಅರವತ್ತೇಳು ವರ್ಷ. ಗಳಿಕೆಯಲ್ಲಿ ಕುಬೇರನಾಗಿರುವ ಇವನು ಹಿಂದಿನಂತೆ ಈಗಲೂ ಚರ್ಚ್ ಹತ್ತಿರ ದಾನ-ಧರ್ಮಗಳನ್ನು ಮಾಡು ತ್ತಿರುತ್ತಾನೆ. ಅಮೆರಿಕದ ನ್ಯೂಯಾರ್ಕ್‌ನ ಪೀಕ್‌ಸ್ಕಿಲ್‌ನಲ್ಲಿ ೧೯೫೬ರ ಜನವರಿ ೩ರಂದು ಹುಟ್ಟನ್ ಗಿಬ್ಸನ್ ಮತ್ತು ಆನ್ನೆ ಪ್ಯಾಟ್ರಿಷಿಯಾ ದಂಪತಿಯ ಮಗನಾಗಿ ಹುಟ್ಟಿ, ತನ್ನ ೧೨ನೇ ವಯಸ್ಸಿಗೆ ಹೆತ್ತವರೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದ ಇವನಿಗೆ ೯ ಮಕ್ಕಳು. ಇವರಲ್ಲಿ ಮಿಲೋ ಗಿಬ್ಸನ್ ಎಂಬ ಮಗನೂ ಇದ್ದು, ಈತನೂ ತಂದೆಯಂತೆಯೇ ಸಿನಿಮಾ ನಟ. ಸಹೋ ದರಿಯ ಒತ್ತಾಸೆಯಿಂದ ಮೆಲ್ ಗಿಬ್ಸನ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡ್ರಾಮಾಟಿಕ್ ಆರ್ಟ್‌ನಲ್ಲಿ ಕಲಿತವನಾಗಿದ್ದರಿಂದ ನಟನೆ ಸಲೀಸಾಯಿತು.

ಮೆಲ್ ಗಿಬ್ಸನ್‌ಗೆ ಗಣ ನೀಯ ಸಂಖ್ಯೆಯಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ; ಅವನ್ನು ಪಟ್ಟಿಮಾಡುತ್ತಾ ಹೋದರೆ ಲೇಖನದ ಬದಲಾಗಿ ಪುಸ್ತಕವನ್ನೇ ಬರೆಯಬೇಕಾದೀತು. ಇಲ್ಲಿ ಹೆಸರಿಸಬಹುದಾದ ಹಾಗೂ ಯಾರೂ ಊಹಿಸಲಾಗದಿದ್ದ ಒಂದು ಪ್ರಶಸ್ತಿಯೆಂದರೆ ೧೯೮೫ರಲ್ಲಿ ದಕ್ಕಿದ ‘Sexiest Man
Alive’  ಎಂಬ ಗೌರವ. ಜನರೇ ಇದನ್ನು ನೀಡಿದ್ದು. ದೇಹವೆಲ್ಲ ಛಿದ್ರಛಿದ್ರವಾಗಿ ಮಾಂಸದ ಮುದ್ದೆಯಂತಾಗಿದ್ದ ಕುರೂಪಿ ಮನುಷ್ಯನೊಬ್ಬ ಮುಂದೆ ಹಾಲಿವುಡ್ ಅನ್ನು ಪ್ರವೇಶಿಸಿ ಹೀಗೆ ‘ಸೆಕ್ಸಿಯೆಸ್ಟ್ ಮ್ಯಾನ್’ ಎಂದು ಜನರಿಂದ ಕರೆಸಿಕೊಳ್ಳುವುದು ಸುಲಭದ ಸಾಧನೆಯೇನಲ್ಲ. ಎಂಥದ್ದೇ ಕಷ್ಟದ ಪರಿಸ್ಥಿತಿಗಳು ಬರಲಿ, ಅವುಗಳನ್ನು ಮೆಲ್ ಗಿಬ್ಸನ್ ನಂತೆ ಎದುರಿಸಿ ನಿಲ್ಲುವುದೇ ‘ಮನೋಧೈರ್ಯ’.

ಡಿಸೆಂಬರ್ ೨೦೧೯-೨೦೨೨ರ ಅವಧಿಯಲ್ಲಿ ಕೊರೊನಾ ಪಿಡುಗಿನ ಕರ್ಕಶ ಸದ್ದು ವಿಶ್ವದ ಮೂಲೆಮೂಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದು ಗೊತ್ತಿರು ವಂಥದ್ದೇ. ಟಿವಿ ನೋಡಲಿ, ಪತ್ರಿಕೆಗಳನ್ನು ಓದಲಿ, ಸ್ನೇಹಿತರೊಟ್ಟಿಗೆ ಮಾತನಾಡಲಿ ಎಲ್ಲರಲ್ಲೂ ಕೊರೊನಾ… ಕೊರೊನಾ ಎಂಬ ವಿಷಯವೊಂದೇ! ಇದು ಕೇಳುವುದಕ್ಕೆ ಹೊಸದಾಗಿದ್ದರೂ ಪ್ರಪಂಚದ ೮೦೦ ಕೋಟಿ ಮಂದಿ ಬೆಚ್ಚಿ ಬೀಳುವ ಶಬ್ದವಾಗಿತ್ತು. ಸದ್ಯ ವಾಹಿನಿಗಳಲ್ಲಿ ಕೊರೊನಾ ಸುದ್ದಿಗಳು ಸತ್ತಿವೆ, ವೈಭವೀಕರಿಸಿ ಬಿತ್ತರಿಸಲು ಇತರೆ ವಿಷಯಗಳಿವೆ; ಒಂದೊಮ್ಮೆ ಇಲ್ಲದಿದ್ದರೆ ರೋಚಕ ವಿಷಯಗಳನ್ನು ಹುಡುಕಿ ಪ್ರಸಾರ ಮಾಡಲಾಗುತ್ತದೆ.

ಅಪಘಾತಗಳು ಹಾಗೂ ಅವುಗಳಿಂದ ಆಗುವ ಸಾವು-ನೋವುಗಳ ಸುದ್ದಿಗಳು ಮಾಧ್ಯಮಗಳಲ್ಲಿ ಇಲ್ಲದ ದಿನವೇ ಇಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ
ಉದ್ಭವಿಸುವ ಸಮಸ್ಯೆಗಳನ್ನು ಎದುರಿ ಸಲು ಸಾಧ್ಯವಾಗದೆ ಜೀವನವನ್ನೇ ಅಂತ್ಯಗೊಳಿಸಿಕೊಳ್ಳು ವವರ ಉದಾಹರಣೆಗಳೂ ಇದರಲ್ಲಿ ಸೇರಿರುತ್ತವೆ. ಬದುಕಿನಲ್ಲಿ ನೊಂದು-ಬೆಂದ ಇಂಥವರಿಗೆ, ಮತ್ತೆ ಮೇಲೇಳಲಾಗದ ಸ್ಥಿತಿಯಲ್ಲಿ ಇರುವ ವರಿಗೆ ಮೆಲ್ ಗಿಬ್ಸನ್‌ನ ಬದುಕು ಪ್ರೇರೇಪಣೆ ನೀಡಬಲ್ಲದು. ಬದುಕಿ ಏನನ್ನಾದರೂ ಸಾಧಿಸಬಹುದು ಎಂಬ ಆಸೆಯನ್ನು ಚಿಗುರಿಸಬಲ್ಲದು. ಕಿಡಿಗೇಡಿಗಳಿಂದ ದಾಳಿಗೊಳಗಾಗಿ ಅಕ್ಷರಶಃ ಮಾಂಸದ ಮುದ್ದೆಯೇ ಆಗಿಬಿಟ್ಟಿದ್ದ ಮೆಲ್ ಗಿಬ್ಸನ್, ಯಾರೂ ಊಹಿಸದ ಮಟ್ಟಕ್ಕೆ ಏರಿದನೆಂದರೆ ನಾವೇಕೆ ಸಣ್ಣಪುಟ್ಟ ಸಂಗತಿಗಳಿಗೆ ಹೆದರಬೇಕು? ಬಹುತೇಕ ಸಂದರ್ಭಗಳಲ್ಲಿ, ನಮಗೆದುರಾಗುವ ಕಷ್ಟಗಳಿಗೆ ಅಥವಾ ರೋಗಗಳಿಗೆ ನಮ್ಮ ಮನೆಗಳಲ್ಲೇ, ನಮ್ಮ ಕೈಗಳಲ್ಲೇ ಔಷಧವಿರುತ್ತದೆ. ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನಾವು ಅರಿಯಬೇಕಷ್ಟೇ. ಅಂಥ ಅರಿವಿನ ಕೊರತೆಯಿದ್ದವರಿಗೆ, ತಳಮಟ್ಟದಿಂದ ಎದ್ದು ನಿಂತ ಸಾಧಕರ ಜೀವನವು ತಿಳಿವಳಿಕೆ ನೀಡುತ್ತದೆ.

ಒತ್ತಡಮಯವಾಗಿರುವ ಇಂದಿನ ದಿನಮಾನದಲ್ಲಿ ಸಮಚಿತ್ತದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ಸಂಕಷ್ಟಕಾಲ ಯಾವಾಗ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಮೆಲ್ ಗಿಬ್ಸನ್‌ನಂತೆ ಮಾಂಸದ ಮುದ್ದೆಯಾಗಿರುವ ಮಂದಿ ಅದೆಷ್ಟೋ? ವಿಶ್ವದ ಜನರು ಆಯುಧಗಳು, ಮದ್ದುಗುಂಡುಗಳು, ಬಾಂಬುಗಳನ್ನು ಬಳಸದೆ ಮತ್ತು ಜಾತಿ-ಧರ್ಮದ ಭೇದವಿಲ್ಲದೆ ಶಾಂತಿ
ಯುತವಾಗಿ ನೆಲೆಸುವ ಕಾಲ ಬರುವ ಸೂಚನೆಗಳು ಕಾಣುತ್ತಿಲ್ಲ. ಇಂದಿನ ವೇಗದ ಜೀವನದಲ್ಲಿ ಅಶಾಂತಿ ತಾಂಡವ ವಾಡುತ್ತಿರುವುದು ಸತ್ಯ.

ಒಟ್ಟಾರೆಯಾಗಿ ನೋಡಿದರೆ, ನೆಮ್ಮದಿಯಿಂದ ಬದುಕುತ್ತಿರುವವರ ಸಂಖ್ಯೆ ಕಮ್ಮಿಯೇ. ನಮ್ಮೆಲ್ಲರ ಅನುಭವಕ್ಕೆ ಬಂದ ಸಂಗತಿಯೆಂದರೆ, ಇರುವ ದಿನಗಳೇ ಒಳ್ಳೆಯ ದಿನಗಳು, ಬರುವ ದಿನಗಳೇ ಕಷ್ಟದ ದಿನಗಳು. ಹಾಗಾಗಿ ವರ್ತಮಾನದಲ್ಲಿ ಸಂತೋಷದಿಂದ ಇರೋಣ. ಬದುಕಿನಲ್ಲಿ ಚಿಂತನೆ ಇರಲಿ; ಆದರೆ ಚಿಂತಿಸಿ ನೆಮ್ಮದಿ ಕಳೆದುಕೊಳ್ಳುವುದು ಎಷ್ಟು ಸರಿ?

(ಲೇಖಕರು ನಿವೃತ್ತ ಸಹಾಯಕ
ಕಾರ್ಯಪಾಲಕ ಎಂಜಿನಿಯರ್)

Leave a Reply

Your email address will not be published. Required fields are marked *