Thursday, 12th December 2024

ಬದಲಾಗಬೇಕಿರುವುದು ಪಾಲಕರ ಮನಸ್ಥಿತಿಯೇ ಹೊರತು ಬೇರೇನಲ್ಲ !

ವಿಶ್ಲೇಷಣೆ

ಸುರೇಂದ್ರ ಪೈ, ಭಟ್ಕಳ

ಮನುಷ್ಯ ತಾನು ಮಾಡುವ ಎಲ್ಲ ತಪ್ಪುಗಳಿಗೂ ಬೇರೆಬ್ಬರನ್ನೂ ಜವಬ್ದಾರಿಯುತರಾನ್ನಾಗಿ ಮಾಡುವ ಸ್ವಭಾವವನ್ನು ಬಿಟ್ಟಿಲ್ಲ. ಅದು ಆತನ ಆಜನ್ಮಸಿದ್ಧ ಹಕ್ಕೋ ಎನೋ ಗೊತ್ತಿಲ್ಲ, ಬಹುಶಃ ಈ ಸ್ವಭಾವಕ್ಕೆ ಆತ ಪೇಟೆಂಟ್ ಪಡೆದುಕೊಂಡಿರಬೇಕು ಅನಿಸುತ್ತದೆ. ಸಮಾಜದಲ್ಲಿ ಎನಾದರೂ ತಪ್ಪು ನಡೆದರೆ ಮೊದಲು ತಪ್ಪು ಮಾಡಿದವರನ್ನು ಶಿಕ್ಷಿಸಲು ಮುಂದಾಗುತ್ತೇವೆಯೇ ವಿನಃ, ಆ ತಪ್ಪು ಮಾಡಲು ಏನು ಕಾರಣ? ಯಾವ ಸನ್ನಿವೇಶ ಪ್ರಚೋದನೆ ನೀಡಿತು? ಆತನಿಗೆ ಅಂತಹ ಕ್ರೂರ ಮನಸ್ಥಿತಿ ಬರಲು ಏನು ಮೂಲ ಕಾರಣವೆಂದು ಯಾರೊಬ್ಬರು ಚಿಂತಿಸುವುದಿಲ್ಲ.

ಅ ನಾವು ಎಡವುದು ನೋಡಿ. ನಮಗೆ ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸುವುದೇ ಮುಖ್ಯವಾಗುತ್ತದೆಯೇ ಹೊರತು, ಇನ್ನೂ ಮುಂದೆ ಅಂತಹ ಘಟನೆ ನಡೆಯದಂತೆ ಮಾಡಲು ಏನು ಮಾಡಬೇಕೆಂಬ ಯೋಚನೆ ಬರುವುದಿಲ್ಲ. ಶಿಕ್ಷೆಯೇ ಎಲ್ಲದಕ್ಕೂ ಉತ್ತರ ಎಂಬ ಮನಸ್ಥಿತಿ ನಮ್ಮದಾಗಿಬಿಟ್ಟಿದೆ. ಇನ್ನೂ ಸಮಾಧಾನವಾಗದಿದ್ದರೆ ಕೊನೆಗೆ ಭಾರತದ ದೇಶದ ಹಣೆಬರಹವೇ ಇಷ್ಟು ಎಂದು ಜಡ್ಜಮೆಂಟ್ ಪಾಸ್ ಮಾಡಿಬಿಡುತ್ತೇವೆ. ಇಲ್ಲಿ ದೇಶದ ತಪ್ಪೇನಿದೆಯೇ ಅರ್ಥವಾಗಲಿಲ್ಲ.

ಒಂದು ತಿಂಗಳಿಂದ ನೀಟ್ ಪರೀಕ್ಷಾ ಅಕ್ರಮದ ವಿಷಯದಲ್ಲಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಹೋರಾಟಗಳಲ್ಲಿ ನೋಡುತ್ತಿರುವುದು ಇದನ್ನೇ ತಾನೇ. ಪ್ರತಿಯೊಬ್ಬರು ಎನ್ ಎಟಿ, ಕೇಂದ್ರ ಸರಕಾರವನ್ನು ಜರಿಯುತ್ತಿದ್ದೇವೆ. ನಿಜ, ಜರಿಯಬೇಕಾದದ್ದೆ, ಏಕೆಂದರೆ ಪರೀಕ್ಷೆ ನಡೆಸುವ ಮಹತ್ತರವಾದ ಜವಬ್ದಾರಿ ಹೊರುವ ಮುನ್ನವೇ ಎಲ್ಲಾ ಸಾಧಕ, ಬಾಧಕಗಳ ಬಗ್ಗೆ ಯೋಚಿಸಿಬೇಕಿತ್ತು, ಈಗ ತಪ್ಪು ಮಾಡಿ, ಸರಿ ಪಡಿಸಿಕೊಳ್ಳುತ್ತೇವೆ ಎಂದರೆ ಹೇಗಾಗುತ್ತದೆ. ಆದರೆ ‘ವ್ಯವಸ್ಥೆ’ ಒಂದು ಮಾಧ್ಯಮ ಅಷ್ಟೇ ವಿನಃ ಅದು ಮೂಲ ಕಾರಣವಲ್ಲ.

ಒಂದು ರೋಗಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು ‘ರೋಗಾಣು’ ಎಲ್ಲಿಂದ ಹರಡಿತು ಎಂದು ಸಂಶೋಧನೆ ಮಾಡುವ ಹಾಗೇ ನೀಟ್ ಪರಿಕ್ಷಾ ಅಕ್ರಮ ನಡೆಯಲು ಪ್ರಾಥಮಿಕ ಪ್ರಚೋದನೆ ಎಲ್ಲಿಂದ ಬಂತು? ಅವರು ಯಾರು? ಎಂಬುದಕ್ಕೆ ಉತ್ತರ ಹುಡುಕಲು ಹೊರಟಾಗ ಸಿಗುವ ಉತ್ತರವೇ ಇಂದಿನ ಪಾಲಕರ ಮನಸ್ಥಿತಿ ಎಂದರೆ ತಪ್ಪಾಗಲಾರದು.

ಅಯ್ಯೋ! ನಮ್ಮ ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ, ಶಿಕ್ಷಣದ ಬಗ್ಗೆ ಯೋಚಿಸುವುದು ತಪ್ಪೇ ಎಂದು ಕೇಳಬಹುದು. ಖಂಡಿತವಾಗಿಯೂ ತಪ್ಪಲ್ಲ. ಆದರೆ ತಮ್ಮ ಮಕ್ಕಳ ಭವಿಷ್ಯ ನಿಂತಿರುವುದು ಕೇವಲ ನೀಟ್, ಜೆಇಇ ಅಂತಹ ಪರೀಕ್ಷೆಯ ಮೇಲೆ ಎಂದು ನಿರ್ಧಾರ ಮಾಡುವುದು ತಪ್ಪು. ಒಂದು ತರಗತಿಯಲ್ಲಿರುವ ೧೦೦ ವಿದ್ಯಾರ್ಥಿಗಳು ಸಹ ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಹೇಳಿದರೆ ಹೇಗೆ ಸಾಧ್ಯ? ಈ ಬಾರಿ ಕರ್ನಾಟಕ ದ್ವಿತೀಯ ಪಿಯುಸಿ ಸೈ ವಿಭಾಗದಲ್ಲಿ ೨,೪೯,೯೨೭ ಮಕ್ಕಳು ಉತ್ತೀರ್ಣರಾಗಿದ್ದಾರೆ.

ಇವರಲ್ಲಿ ಈ ಬಾರಿ ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ೨ ಲಕ್ಷ, ಅಂದರೆ ಶೇ.೮೦ ರಷ್ಟು ವಿದ್ಯಾರ್ಥಿಗಳು ಬರೆದಿದ್ದಾರೆ. ಹಾಗಾದರೆ ಎಲ್ಲ ಮಕ್ಕಳ ಸಾಮಥ್ಯ, ಆಸಕ್ತಿ, ಅಭಿರುಚಿ, ಗುರಿ ಒಂದೇ ರೀತಿ ಇರಬೇಕಲ್ಲವೇ? ವೈeನಿಕ ಅದು ಸಾಧ್ಯವಿಲ್ಲ, ಪ್ರತಿಯೊಬ್ಬ ವ್ಯಕ್ತಿಯು ಇನ್ಮೊಬ್ಬರಿಗಿಂತ ಹಲವು ವಿಷಯಗಳಲ್ಲಿ ಭಿನ್ನರಿರುತ್ತಾರೆ. ಪ್ರತಿಯೊಬ್ಬ ಮಗುವು ತನ್ನದೇ ಆದ ವೈಶಿಷ್ಟ್ಯತೆಯನ್ನು ಒಳಗೊಂಡಿರುತ್ತದೆ. ಒಬ್ಬ ಮಗುವಿನಲ್ಲಿ ಸಂಗೀತಗಾರನೋ, ಶಿಕ್ಷಕನೋ, ಕ್ರೀಡಾಪಟುವೋ, ಆರ್ಥಿಕ ತಜ್ಞನೋ, ಲೇಖಕನೋ, ಕವಿಯೋ ಇರಬಹುದಲ್ಲವೇ? ಆತನ ಆಸಕ್ತಿ, ಅಭಿರುಚಿಯನ್ನು ಹೊಸಕಿ ಹಾಕಿ, ವೈದ್ಯ ಅಥವಾ ಎಂಜಿನಿಯರ್ ಆಗಲೇ ಬೇಕು ಎಂದು ಹಣೆಬರಹ ಬರೆಯುವುದು ಎಷ್ಟರ ಮಟ್ಟಿಗೆ ಸರಿ.

ಇದು ಶೈಕ್ಷಣಿಕ ಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಮುಂದೊಂದು ದಿನ ನಾವೆಲ್ಲ ಅನುಭವಿಸಲೇಬೇಕು. ಇದನ್ನೇ ಅಲ್ಲವೇ ಹಿಂದಿಯ ತ್ರಿ ಇಡಿಯಟ್ಸ ಚಲನಚಿತ್ರದಲ್ಲಿ ನಾವು ನೋಡಿ ಅರ್ಥ ಮಾಡಿಕೊಂಡು ಮೆಚ್ಚಿರುವುದು. ಮೂರು ದಶಕದ ಹಿಂದೆ ಹೋಗಿ ನೋಡಿದರೆ ಅಂದಿನ ಪಾಲಕರ ಮನಸ್ಥಿತಿಗೂ, ನಮ್ಮ ಇಂದಿನ ಪಾಲಕರ ಮನಸ್ಥಿತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ಹಿಂದೆ ಪಾಲಕರು ನಮ್ಮ ಮಕ್ಕಳು ವೈದ್ಯ, ಎಂಜಿನಿಯ ರಿಂಗ್ ಆಗಬೇಕೆಂದು ಹಪಹಪಿಸುತ್ತಿರಲಿಲ್ಲ.

ಮಕ್ಕಳ ಮೇಲೆ ಯಾವ ಹೆಚ್ಚಿನ ಒತ್ತಡವನ್ನು ಹಾಕುತ್ತಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಲಿಸುತ್ತಿರಲಿಲ್ಲ.
ಆದರೆ ತಮ್ಮ ಮಕ್ಕಳು ವಿದ್ಯಾವಂತರಾವಬೇಕು, ಚೆನ್ನಾಗಿ ಓದಬೇಕು, ಸುಸಂಸ್ಕೃತನಾಗಿ ಸಮಾಜದಲ್ಲಿ ನೆಮ್ಮದಿಯ ಜೀವನ ಸಾಗಿಸುವಂತಾಗಲಿ ಎಂದಷ್ಟೇ ಬಯಸುತ್ತಿದ್ದರು. ಆದರೆ ಇಂದು ಮಕ್ಕಳು ಹುಟ್ಟುವಾಗಲೇ ವೈದ್ಯ, ಎಂಜಿನಿಯರಿಂಗ್ ಎಂದು ಹಣೆಪಟ್ಟಿ ಕಟ್ಟಿ, ಕನ್ನಡ ಮಾಧ್ಯಮ ಕಲಿತರೆ ಭವಿಷ್ಯವಿಲ್ಲ, ಆಂಗ್ಲ ಮಾಧ್ಯಮ ಶಿಕ್ಷಣವೇ ಬೇಕೆಂದು ನಿರ್ಣಯಿಸಿ, ಹತ್ತನೇ ತರಗತಿ ಇನ್ನೂ ಮುಗಿದಿರುವುದಿಲ್ಲ, ಅಷ್ಟರ ಮುಂದೆ ಯಾವ ಕಾಲೇಜಿನಲ್ಲಿ ಸೀಟ್ ಬುಕಿಂಗ್ ಮಾಡಬೇಕು, ಯಾವ ಕೋಚಿಂಗ್ ಸೆಂಟರ್‌ಗೆ ಸೇರಿಸಬೇಕೆಂದು ನಿರ್ಧರಿಸುತ್ತೇವೆ.

ಈ ಸ್ವಭಾವದಿಂದಲೇ ಶಿಕ್ಷಣ ಇಂದು ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ. ಸೈ ಹಾಗೂ ನೀಟ್‌ಗೆ ಹೆಚ್ಚು ಆದ್ಯತೆ ನೀಡಲು ಕಾರಣವಿಷ್ಟೇ, ಪಾಲಕರ ಸ್ವ
ಪ್ರತಿಷ್ಠೆ ಮತ್ತು ಬೇರೆಯವರ ಜತೆ ಹೋಲಿಕೆ ಮಾಡುಕೊಳ್ಳುವ ಪ್ರವೃತ್ತಿ ಹಾಗೂ ಬೇಗ ಶ್ರೀಮಂತನಾಗಬೇಕೆಂಬ ಈರ್ಷೆಯೇ ಹೊರತು ಮತ್ತೇನು ಅಲ್ಲ.
ಇನ್ನೂ ಪಾಲಕರ ಮೀತಿ ಮೀರಿದ ಒತ್ತಡದಿಂದ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ೨೦೧೭ ರಲ್ಲಿ, ೯,೯೦೫ ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

೨೦೧೮ ರಲ್ಲಿ ಇದು ೧೦,೧೫೯ ಕ್ಕೆ ಏರಿತು, ೨೦೧೯ ರಲ್ಲಿ, ಈ ಸಂಖ್ಯೆ ೧೦,೩೩೫ ಆಗಿತ್ತು. ಎನ್ಸಿಆಬಿರ್ ಡೇಟಾ ಪ್ರಕಾರ, ೨೦೨೦ ರಲ್ಲಿ ೧೨,೫೨೬
ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರೆ, ೨೦೨೧ ರಲ್ಲಿ ಈ ಸಂಖ್ಯೆ ೧೩,೦೮೯ ಕ್ಕೆ ಏರಿದೆ. ಅವರಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ೧೦,೭೩೨ ಯುವಕರಲ್ಲಿ ೮೬೪ ಮಂದಿ ‘ಪರೀಕ್ಷೆಯಲ್ಲಿ ವಿಫಲತೆ’ಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ. ಇನ್ನೂ ಅಧಿಕೃತ
ವರದಿ ಪ್ರಕಾರ ಕೋಟಾ ಒಂದರಲ್ಲಿ ೨೦೧೫ ರಿಂದ ೨೦೨೪ ರ ತನಕ ೧೫೦ ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ದತ್ತಾಂಶವು ೨೦೨೦ ರಲ್ಲಿ ಪ್ರತಿ ೪೨ ನಿಮಿಷಗಳಿಗೊಮ್ಮೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳುತ್ತದೆ, ಅಂದರೆ ದಿನಕ್ಕೆ ಸರಾಸರಿ ೩೪ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೀಟ್ ಕೋಚಿಂಗ್‌ಗೆ ಹೆಸರಾದ ಕೋಟಾವನ್ನು ಆತ್ಮಹತ್ಯಾ ಕೇಂದ್ರವೆಂದು ಬೊಬ್ಬಿಡುವವರು ತಮ್ಮ ಮಕ್ಕಳನ್ನು ಅಲ್ಲಿ ಏಕೆ ಸೇರಿಸಬೇಕು ಹೇಳಿ. ಕೋಟಾ
ದಂತಹ ಕೋಚಿಂಗ್ ಸೆಂಟರ್‌ಗಳಿಗೆ ಮೌಲ್ಯ ಹೆಚ್ಚಾಗಲು ಕಾರಣ ಯಾರು? ಆರ್‌ಟಿಐ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ೨೦೧೮-೨೨ರಲ್ಲಿ ಒಟ್ಟು ೬೪ ಎಂಬಿಬಿಎಸ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ೧೫೩ ಎಂಬಿಬಿಎಸ್ ಮತ್ತು ೧೧೧೭ ಪಿಜಿ ಡ್ರಾಪ್‌ಔಟ್‌ಗಳಾಗಿದ್ದಾರೆ. ವಿಶ್ವ ಆರೋಗ್ಯ
ಸಂಸ್ಥೆ ವರದಿಯ ಪ್ರಕಾರ, ವಿಶ್ವದ ೧೦-೧೯ ವರ್ಷ ವಯಸ್ಸಿನ ಪ್ರತಿ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರು ತಮ್ಮ ಶೈಕ್ಷಣಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಈ ಸಂಖ್ಯೆಯು ಮಾನಸಿಕ ಆರೋಗ್ಯ ಕಾಯಿಲೆಗಳ ಜಾಗತಿಕ ಹೊರೆಯ ಶೇಕಡಾ ೧೩ ರಷ್ಟಿದೆ. ಪೋಷಕರ ಒತ್ತಡದಿಂದ ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಮತ್ತೊಂದು ಆಘಾತಕಾರಿ ಸಂಗತಿಯನ್ನು ಅದು ಬಹಿರಂಗಪಡಿಸಿದೆ.

ತಮ್ಮ ಮಗುವಿನ ಶೈಕ್ಷಣಿಕ ಅರ್ಹತೆಯ ಬಗ್ಗೆ ತಿಳಿದಿರುವ ಪಾಲಕರು ಹೇಗಾದರೂ ಮಾಡಿ ತನ್ನ ಮಗುವನ್ನು ಟಾಪ್ ರ್ಯಾಂಕ್ ಬರುವಂತೆ ಮಾಡಿ ಎಷ್ಟು ಲಕ್ಷ ಖರ್ಚಾದರೂ ಪರವಾಗಿಲ್ಲ ಎಂದು ಕೋಚಿಂಗ್ ಸೆಂಟರ್ ನಡೆಸುವವರ ಬಳಿ ಗೋಗರೆಯುವುದರಿಂದಲೇ ಸಮಸ್ಯೆಯ ಮೂಲ ಉದ್ಭವಿಸು ವುದು. ಪಾಲಕರ ಸಮ್ಮತಿ ಇಲ್ಲದೇ ಅಕ್ರಮ ಹೇಗೆ ನಡೆಯಲು ಸಾಧ್ಯ ಯೋಚಿಸಿ. ಹಣವಿಲ್ಲದಿದ್ದರೂ ಸಾಲ ಮಾಡಿಯಾದರೂ ನೀಡುವ ಮನಸ್ಥಿತಿ ಏಕೆ ಬಂತು? ಏಕೆಂದರೆ ತಾವು ಶಿಕ್ಷಣಕ್ಕಾಗಿ ಹಾಕಿದ ಪೂರ್ಣ ಬಂಡವಾಳವನ್ನು ಬಡ್ಡಿ ಸಮೇತ ವೈದ್ಯರಾದ ಬಳಿಕ ಬಡರೋಗಿಗಳಿಂದ ವಸೂಲಿ ಮಾಡಲು ಸಾಧ್ಯ ಎಂಬ ಪಕ್ಕಾ ಭರವಸೆ.

ಇದೇ ಮನಸ್ಥಿತಿ ಉದ್ಯೋಗ ನೇಮಕಾತಿ ವಿಷಯದಲ್ಲೂ ಮುಂದುವರಿಯುತ್ತದೆ. ಇದರಿಂದಲೇ ಭ್ರಷ್ಟಾಚಾರ ಹುಟ್ಟುಕೊಳ್ಳುವುದು. ‘ಎಲ್ಲ ಅನಿಷ್ಟಕ್ಕೂ ಶನೈಶ್ಚರ’ನೇ ಕಾರಣ ಎನ್ನುವ ನಾವು, ಇಂದಿನ ಅಕ್ರಮ (ಮಾಫಿಯಾ)ದಂತಹ ವ್ಯವಸ್ಥೆ ನಿರ್ಮಾಣಕ್ಕೆ ಬೇರೆಯವರನ್ನೂ ದೂರುವ ಮುನ್ನ, ನಮ್ಮ
ಮನಸ್ಥಿತಿಯ ಬಗ್ಗೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಒಳಿತು. ನಮ್ಮ ಯೋಚನೆ ಸರಿಯಿದ್ದರೆ, ನಾವು ನೋಡುವ ಪ್ರತಿ ನೋಟವು ಸುಂದರ ವಾಗಿಯೇ ಕಾಣುತ್ತದೆ ಅಲ್ಲವೇ? ಮೊದಲೆಲ್ಲ ನಾವು ಪದವಿಯ ತನಕ ನಮ್ಮೂರಿನ ವ್ಯಾಸಂಗ ಮಾಡುತ್ತಿದ್ದೇವು. ಆದರೆ ಈಗ ೮ನೇ ತರಗತಿಯಿಂದಲೇ ಬೋರ್ಡಿಂಗ್ ಸ್ಕೂಲ್‌ಗೆ ಲಕ್ಷಾನುಗಟ್ಟಲೇ ಶುಲ್ಕ ನೀಡಿ ಸೇರಿಸುತ್ತಿದ್ದೇವೆ. ಮೇಲ್ನೋಟಕ್ಕೆ ಉತ್ತಮ ಶಿಕ್ಷಣ ನೀಡುವ ಉದ್ದೇಶವೆಂದು ಹೇಳಿದರು ಸಹ, ವಾಸ್ತವದಲ್ಲಿ ಇಂದಿನ ಪಾಲಕರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಸಮಯ, ವ್ಯವದಾನವಿಲ್ಲ.

ಪಾಲಕರಿಂದ ದೂರವಾದ ಮಕ್ಕಳು ಇಂದು ಸರಿಯಾದ ಅರೈಕೆ ಇಲ್ಲದೇ ಚಿಕ್ಕ ವಯಸ್ಸಿನ ಮಾದಕ ದ್ರವ್ಯಗಳಿಗೆ ದಾಸರಾಗಿ ಜೀವನವನ್ನೇ ಹಾಳು ಮಾಡಿಕೊಳ್ಖುತ್ತಿದ್ದಾರೆ. ಅಷ್ಟು ಚಿಕ್ಕ ವಯಸ್ಸಿನ ಮನೆಯ ವಾತಾವರಣದಿಂದ, ತಂದೆ-ತಾಯಿ ಪ್ರೀತಿಯಿಂದ ದೂರವಾದ ಮಗು ಹೇಗೆ ತಾನೇ ಮಾನವೀಯ ಸಂಬಂಧಗಳ ಬಗ್ಗೆ ಕಲಿಯಲು ಸಾಧ್ಯ. ತಮ್ಮ ಊರು, ನಮ್ಮ ನೆಲ-ಜಲ, ಭಾಷೆ ಸಂಸ್ಕೃತಿಯ ಪರಿಚಯವಿಲ್ಲದೇ ನಮಗೂ ಸಮಾಜಕ್ಜೂ ಸಂಬಂಧವೇ ಇಲ್ಲವೆಂಬಂತೆ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಮೌಲ್ಯ (ಬ್ರ್ಯಾಂಡ್) ಹೆಚ್ಚಾಗಬೇಕಾದರೆ ಗ್ರಾಹಕರ ಬೇಡಿಕೆಯೇ ಮಹತ್ವದ ಪಾತ್ರ ವಹಿಸುತ್ತದೆ ಎಂಬ ವಾಸ್ತವ ಗೊತ್ತಿದ್ದರೆ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕಂತೆ. ಇದು ನೀಟ್ ವಿಷಯದಲ್ಲಿ ಮಾತ್ರವಲ್ಲ, ಪ್ರತಿಯೊಂದು ಮೂಲಭೂತ ಸಮಸ್ಯೆಗಳಲ್ಲೂ ಕಾಣ ಸಿಗುತ್ತದೆ. ನಮ್ಮ ಆಸೆ-ಆಮಿಷಗಳಿಗೆ ಸ್ವಲ್ಪ ಲಂಗು-ಲಗಾಮು ಹಾಕಿಕೊಂಡರೆ, ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸಾಧ್ಯ.
ಕೊನೆಯದಾಗಿ, ಶಿಕ್ಷಣದ ಮೂಲ ಗುರಿ eನವನ್ನು ಪಡೆಯುವುದೇ ಹೊರತು ಹೆಚ್ಚು ಅಂಕ ಗಳಿಸುವುದಲ್ಲ.

ಆದರೆ ಇಂದು ನಾವೆಲ್ಲರೂ ಅಂಕಗಳ ಹಿಂದೆ ಓಡುತ್ತಿದ್ದೇವೆ. ಈ ಬಾರಿ ನೀಟ್ ಪರೀಕ್ಷೆ ಚೆನ್ನಾಗಿ ಆಗಿಲ್ಲ, ನಿಮ್ಮ ಅಪೇಕ್ಷೆಯನ್ನು ನನ್ನಿಂದ ತಲುಪಲು ಸಾಧ್ಯವಾಗಿಲ್ಲ ಕ್ಷಮಿಸಿ, ಇಂತಿ ನಿಮ್ಮ ಮಗ ಎಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳತ್ತಲೇ ಇರುವ ಮುಗ್ಧ ಮಕ್ಕಳ ಮನಸ್ಥಿತಿ ಪಾಲಕರಿಗೇಕೆ ಅರ್ಥವಾಗುತ್ತಿಲ್ಲವೋ ಕಾಣೆ? (ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)