Saturday, 14th December 2024

ಮಾಗಿದ ವಯಸ್ಸಿನಲ್ಲೊಂದು ಹಠ ಹೂಡುವ ಮನಸ್ಸು !

ಅಭಿವ್ಯಕ್ತಿ

ಚೈತ್ರ ಜಿ.ಜಿ – chaitra.amar25@gmail.com

ಸಮಾಜದಲ್ಲಿ ದಿನೇ ದಿನೇ ಏರುತ್ತಿರುವ ‘ಓಲ್ಡ ಏಜ್ ಹೋಮ’ ಅಥವಾ ವೃದ್ಧಾಶ್ರಮ ಸಂಖ್ಯೆ ನಿಜಕ್ಕೂ ಒಂದು ದಿಗಿಲು ಹುಟ್ಟಿಸಿ ಬಿಡುತ್ತದೆ. ಹುಡುಕುತ್ತ ಹೋದರೆ ಸರಳ ವಾಗಿ ಉತ್ತರಗಳು ಬಂದು ನಿಲ್ಲಲಾರವು. ಸಿಕ್ಕ ಉತ್ತರಗಳು ಏಕಮುಖ ವಾಗಿರಬಲ್ಲವು. ನಾಣ್ಯಕ್ಕೆ ಇನ್ನೊಂದು ಮುಖವೂ ಇರಬಹುದು. ಆ ವೃದ್ಧರ ಕಣ್ಣಲ್ಲಿ ಕಳೆದು ಹೋದುದನ್ನು ಹುಡುಕುತ್ತಾ ಹೋದರೆ ಇನ್ನೂ ಗೋಜಲಾಗಬಹುದು ಎನಿಸಿತು.

ಒಮ್ಮೆ ವೃದ್ಧಾಶ್ರಮಕ್ಕೆ ಭೇಟಿ ಕೊಡುವ ಅವಕಾಶ ನನ್ನದಾಗಿತ್ತು. ಮಲೆನಾಡಿನ ಹಳ್ಳಿಯಲ್ಲಿ ಅಜ್ಜ ಅಜ್ಜಿ ಎಂದರೆ ಮನೆಯ ಆಸ್ತಿ, ಮಕ್ಕಳ ಪರಮ ಪ್ರೀತಿ ಅವರ ಪಾಲು ಎನ್ನುವಂತಹ ಮನಸ್ಥಿತಿಯಲ್ಲಿ ಮನೆಯ ವಾತಾವರಣದಲ್ಲಿ ಬೆಳೆದು ಬಂದ ನನಗೆ ಅಚ್ಚರಿ,
ಸಂಕಟ, ಉದ್ವೇಗ, ಅಳುಕು ಎಲ್ಲಾ ಮಿಶ್ರ ಭಾವಗಳ ಕಲಸುಮೇಲೋಗರವಾಗಿತ್ತು.

ನನ್ನ ಅತ್ಯಂತ ಪ್ರೀತಿಯ ಅಜ್ಜಿಯ ಚಿತ್ರವೊಂದು ನನ್ನ ಅನುಮತಿಗೂ ಕಾಯದೇ ಮನಃಪಟಲದಮ್ಮೆ ಮೂಡಿತು. ಕತ್ತೆತ್ತಿ ನೋಡಿದಾಗ ಒಂದಿಷ್ಟು ಮುಖಗಳು ಚೈತನ್ಯ ಸಂತಸ ಹೊಮ್ಮಿಸುತ್ತಿದ್ದರೆ ಇನ್ನೊಂದಿಷ್ಟು ಮುಖಗಳು ಹೇಳಲಾಗದ ಕತೆಗಳನ್ನು ಬಚ್ಚಿಟ್ಟುಕೊಂಡಂತೆ ಕಂಡವು. ಇದು ಈಗಿನ ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಸ್ವಾಭಾವಿಕ, ಸಹಜವಾದದ್ದು ಮತ್ತು ವೃದ್ಧಾಶ್ರಮದ
ಪರಿಕಲ್ಪನೆ ಬದಲಾಗಿದೆ ಕೂಡ ಎಂದು ಎಷ್ಟೇ ಬುದ್ಧಿ ಹೇಳಿದರೂ ಒಂಚೂರು ಮನಸ್ಸು ಒದ್ದೆಯಾಗಿತ್ತು.

ಸಾವರಿಸಿಕೊಳ್ಳುತ್ತ ಸುಧಾರಿಸಿಕೊಳ್ಳುತ್ತ ಅಲ್ಲಿನ ಒಬ್ಬ ವೃದ್ಧರೊಡನೆ ಮಾತಿಗಾರಂಭಿಸಿದೆ. ಮಗ, ಮಗಳು ಇಬ್ಬರೂ ಇದೇ ಊರಿನಲ್ಲಿದ್ದಾರೆ. ಇವರು ಆಶ್ರಮದಲ್ಲಿದ್ದಾರೆ. ಹಾಗೆಯೇ ಇನ್ನಿಬ್ಬರ ಪರಿಚಯ ಮಾಡಿಕೊಂಡು ಅವರೊಂದಿಗೂ ಮಾತಿಗಿಳಿದೆ.
ಹಾಗೆಯೇ ಮಾತನಾಡುತ್ತ ನನಗನ್ನಿಸಿದ್ದು ಏನೆಂದರೆ ಹತ್ತಿರದವರಿಂದ, ಮಕ್ಕಳಿಂದ ದೂರವಾಗಲು ವೃದ್ಧಾಶ್ರಮವೇ ಬೇಕು ಅಂತೇನೂ ಇಲ್ಲ! ಹಾಗೆಯೇ ವೃದ್ಧಾಶ್ರಮದಲ್ಲಿ ಇರುವವರೆಲ್ಲರೂ ತಮ್ಮವರಿಂದ ಮಕ್ಕಳಿಂದ ದೂರ ಆದವರು ಅಂತ ಕೂಡ ಅಲ್ಲ!

ಯಾಕೆ ಹೀಗೆ !?: ಸಮಾಜದಲ್ಲಿ ದಿನೇ ದಿನೇ ಏರುತ್ತಿರುವ ‘ಓಲ್ಡ್ ಏಜ್ ಹೋಮ’ ಅಥವಾ ವೃದ್ಧಾಶ್ರಮ ಸಂಖ್ಯೆ ನಿಜಕ್ಕೂ ಒಂದು ದಿಗಿಲು ಹುಟ್ಟಿಸಿಬಿಡುತ್ತದೆ. ಹುಡುಕುತ್ತ ಹೋದರೆ ಸರಳವಾಗಿ ಉತ್ತರಗಳು ಬಂದು ನಿಲ್ಲಲಾರವು. ಸಿಕ್ಕ ಉತ್ತರಗಳು ಏಕಮುಖ ವಾಗಿರಬಲ್ಲವು. ನಾಣ್ಯಕ್ಕೆ ಇನ್ನೊಂದು ಮುಖವೂ ಇರಬಹುದು. ಆ ವೃದ್ಧರ ಕಣ್ಣಲ್ಲಿ ಕಳೆದು ಹೋದುದನ್ನು ಹುಡುಕುತ್ತಾ ಹೋದರೆ ಇನ್ನೂ ಗೋಜಲಾಗ ಬಹುದು ಎನಿಸಿತು. ಹಿರಿಯರನ್ನು ತಾವಾಗಿಯೇ ತಮ್ಮ ಅನುಕೂಲ, ಕಾರಣಗಳಿಗಾಗಿ ವೃದ್ಧಾ ಶ್ರಮಕ್ಕೆ ಕಳಿಸುವ ಮಕ್ಕಳಿರುತ್ತಾರೆ. ಹಾಗಲ್ಲದೆಯೂ ಕೆಲವರು ಇಳಿ ವಯಸ್ಸಿನಲ್ಲಿ ಮಕ್ಕಳ ಮೇಲಿನ ಮುನಿಸಿಗೋ ಅವರಿಗೆ ಒಂದಷ್ಟು ಅವಮಾನಿಸಿ ಬುದ್ಧಿ ಕಲಿಸುವ ಜಿದ್ದಿಗೋ ಬಿದ್ದುಬಿಟ್ಟಿರುತ್ತಾರೆ. ಹಾಗಾದಾಗ ಮೇಲ್ನೋಟಕ್ಕೆ ಮಕ್ಕಳು ಸುಲಭವಾಗಿ ಅಪರಾಧಿಗಳಾಗಿ ಬಿಡುತ್ತಾರೆ!

ಎಲ್ಲಿ ತಪ್ಪಾಗುತ್ತದೆ?: ಮೊದಲನೆಯದಾಗಿ ಪ್ರತಿ ವ್ಯಕ್ತಿ ಕೂಡ ವೃದ್ಧಾಪ್ಯವನ್ನು ಪ್ಲಾನ್ ಮಾಡಿರಲೇ ಬೇಕು. ಇದು ತಮಗಾಗಿ ತಾವು ಮಾಡಿಕೊಳ್ಳಲೇಬೇಕಾದ ಕರ್ತವ್ಯ. ಮಕ್ಕಳೇ ಆಗಿದ್ದರೂ ಕೂಡ ಕೊಟ್ಟು ಖಾಲಿಯಾಗಬಾರದು. ಹಾಗೆಯೇ ಇಟ್ಟುಕೊಂಡೂ
ಒಂಟಿಯಾಗಬಾರದು! ಹಾಗಾದಾಗ ಸ್ವತಂತ್ರ, ಸಮೃದ್ಧ, ವೃದ್ಧಾಪ್ಯ ಆನಂದಿಸಬಹುದು ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆ ಅನ್ನುವುದು ವೃದ್ಧಾಪ್ಯದ ಅರ್ಧ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ.

ಸಹಜ ಮಾನಸಿಕ ಅಭದ್ರತೆಗಳು: ಒಂದಿಷ್ಟು ಸಮಸ್ಯೆಗಳು ಅದಾಗಿಯೇ ಒದಗಿ ಬರುವಂಥವು. ಹತ್ತಿರದವರ ಅದರಲ್ಲೂ ಮಕ್ಕಳ ಅನಾದರ ಮುಕ್ಕಾಲು ಆಯುಷ್ಯವನ್ನು ಮುಗಿಸಿದವರಲ್ಲಿ ಆತಂಕ ಮತ್ತು ದಿಗಿಲು ಮೂಡಿಸುತ್ತದೆ. ಅಭದ್ರತೆ ಎನ್ನುವುದು ಬಿಟ್ಟೂ ಬಿಡದೆ ಕಾಡಿಸಿಬಿಡುತ್ತದೆ. ನಮ್ಮ ಪ್ರೀತಿ – ಮಕ್ಕಳು, ನಾವು ಅವರ ಭವಿಷ್ಯ ರೂಪಿಸಲು ನಮ್ಮ ಭವಿಷ್ಯ ಅಡವಿಟ್ಟ ನಮ್ಮದೇ ಮಕ್ಕಳು, ಯಾಕೋ ನಮ್ಮನ್ನು ಪ್ರೀತಿಸಲಾರರು ಎನ್ನುವಂತಹ ಪರಿಸ್ಥಿತಿಯನ್ನು, ಭಾವವನ್ನು ಎಲ್ಲರೂ ಭರಿಸಲಾರರು.

ಕೆಲವರು ಮಾತ್ರ ಜೀವನದ ದೊಡ್ಡ ಜಾತ್ರೆಯಲ್ಲಿ ಅನುಭವದ ಬುತ್ತಿಗೆ ಎಲ್ಲವನ್ನು ತುಂಬಿಸಿ, ಭರಿಸಿ, ಧಾರಿಸಿ ಆ ಭಾವದಿಂದ ಮುಂದೆ ಹೆಜ್ಜೆ ಎತ್ತಿಡಬಲ್ಲರು. ಮತ್ತೇನೂ ಅಲ್ಲ, ಒಂದು ಸ್ವಸ್ಥ, ನೆಮ್ಮದಿಯುತ ಬದುಕಿನ ಮುಸ್ಸಂಜೆ ನಮಗೆ ಬೇಕಿದ್ದಲ್ಲಿ! ಅವರು
ಯಾಕೆ ಹಾಗೆ ಮಾಡಿದರು. ಹೀಗೆ ಮಾಡಬಹುದಿತ್ತು. ಅದು ಹಾಗಿರಬಾರದಿತ್ತು. ಹೀಗೆಯೇ ಇರಬೇಕಿತ್ತು ಎನ್ನುವ ಸಾವಿರ ಪ್ರಶ್ನೆಗಳಿಗೆ ಮನಸ್ಸು ಗೋಜಲಾಗುವ ಬದಲು, ಸಾವಿರ ಭಾವಗಳ ಹೊಡೆತಕ್ಕೆ ಸಿಲುಕಿ ನಲುಗುವ ಬದಲು, ಇತರರನ್ನು ಸರಿ ದಾರಿಗೆ ತರುವ ವ್ಯರ್ಥ ಪ್ರಯತ್ನ ಬಿಟ್ಟು ಬದುಕು ಸಮಯ ಅವರಾಚೆಗೂ ಚಂದವಿದೆ, ನೆಟ್ಟ ಬಳ್ಳಿಗೆ ನೀರು ಹಾಕುವ ಸಮಯ, ಹೂ ನಗುವಾಗ ಸಂತಸ ಅರಳುವ ಸಮಯ , ಅವರಾಚೆಗೂ ಸುಂದರ ಮನಸ್ಸಿನ ವ್ಯಕ್ತಿಗಳು ನಮ್ಮ ಸುತ್ತಲೂ ಇರಬಹುದು.

ಪ್ರೀತಿ ಸ್ವೀಕರಿಸುವ ಕಿರಿಯರಿಗೆ ಅದನ್ನು ಹಂಚಬಹುದು. ಇನ್ನೂ ಅಂದರೆ, ಹೊಟ್ಟೆಯಲ್ಲಿ ಹುಟ್ಟಿದವರೇ ಮಕ್ಕಳು ಅಂತೇನೂ ಇಲ್ಲ. ಹಾಗೆಯೇ ರಕ್ತ ಹಂಚಿಕೊಂಡವರೆಲ್ಲರೂ ಹತ್ತಿರದವರು ಅಂತಲೂ ಅಲ್ಲ. ಪ್ರೀತಿಗೆಲ್ಲಿ ಸೀಮೆ?

ಅಂತಹ ಮಕ್ಕಳೂ ಇರುತ್ತಾರೆ!

ಅರವತ್ತೈದು ಮತ್ತೊಂದಿಷ್ಟು ಮಳೆಗಾಲವನ್ನು ಕಂಡ ಮನಸ್ಸು ಕಷ್ಟ, ಸುಖ, ಜೀವಗಳ ಅಗಲಿಕೆ, ಹೊಸ ಕುಡಿಗಳ ಆಗಮನ, ಏರಿಳಿತ ಎಲ್ಲವನ್ನೂ ನೋಡಿ ಅನುಭವಿಸಿ ಮನಸು ಮಾಗಿರುತ್ತದೆ. ಕಾಲನ ಚಕ್ರದಲ್ಲಿ ಸ್ಥಿತ ಪ್ರಜ್ಞೆ ತಾನಾಗಿ ಮೂಡಿರುತ್ತದೆ.
ಮೂಡಬೇಕು ಕೂಡ. ಇಂತಹ ಹಿರಿಯರನ್ನು ದೂರ ಮಾಡುವ ಮಕ್ಕಳು ಇದ್ದಾರೆಯೇ? ಇದ್ದರೆ ಮಕ್ಕಳ ದುರದೃಷ್ಟ ಎನ್ನಬಹುದು ಮತ್ತು ಕಾಲಚಕ್ರ ಸುತ್ತುತ್ತಲೇ ಇರುತ್ತದೆ. ನೆನಪಿಗೆ ಇರಲಿ ಅಂತಲೂ ಅನ್ನಬಹುದು.

ಇದು ಹಿರಿಯರಿಗೆ ತಾನಾಗಿಯೇ ಬರುವ ಸಮಸ್ಯೆಯಾದರೆ, ಇನ್ನೊಂದಿಷ್ಟು ಅವರಾಗಿಯೇ ತಂದುಕೊಳ್ಳುವಂಥ ಸಮಸ್ಯೆಗಳ ಪರಿಗಳು!

ಹಠ ಹೂಡುವ ಮನಸ್ಸು!

ಕೆಲವು ಹಿರಿಯರ ಅತಿ ದೊಡ್ಡ ಸಮಸ್ಯೆ ಅಂದರೆ ಅವರು ಕಾಲಕ್ಕೆ ತಕ್ಕಂತೆ ಸ್ವಲ್ಪ ಕೂಡ ಹೊಂದಿಕೊಳ್ಳಲಾರರು. ಎಲ್ಲವನ್ನೂ ಕೂಡ ತಮ್ಮ ಕಾಲಕ್ಕೆ ಅಂದರೆ ೪೦ – ೫೦ ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗಿ ಅಳೆದು ತೂಗಿ ಗುಣಿಸಿ ಭಾಗಿಸಿ ಯೋಚಿಸಿ ಯೋಜಿಸಲು ಹೋಗುತ್ತಾರೆ.

ಸಾಮ್ಯ ಹೇಗೆ ಸಾಧ್ಯ? ಕೆಲವರು ಮಕ್ಕಳನ್ನು ನಂಬಲಾರರು. ಎಲ್ಲವೂ ತಮ್ಮ ಇಷ್ಟಕ್ಕೆ, ಅಭಿಪ್ರಾಯಕ್ಕೆ ತಕ್ಕ ಹಾಗೆ ಎಲ್ಲವೂ ಎಲ್ಲರೂ ನಡೆಯಬೇಕು. ಮನೆಯ ಸದಸ್ಯರು, ಅದರಲ್ಲೂ ಮಕ್ಕಳು ಎದುರಿಗೆ ನಿಂತು ಮಾತನಾಡಬಾರದು. ಅದು ಎದುರು ವಾದಿಸಿದ ಹಾಗೆ ಎನ್ನುವಂಥ ಅಸಂಬದ್ಧ ಅನಿಸಿಕೆಗಳು. ಹಳೆಯದು ಎಲ್ಲವೂ ಒಳ್ಳೆಯದು, ಹೊಸತು ಅನ್ನುವುದು ಎಲ್ಲವೂ ಕೆಟ್ಟದ್ದು ಎನ್ನುವಂತಹ ವಿಪರೀತಗಳು. ಒಬ್ಬೊಬ್ಬರಲ್ಲಿ ಎಷ್ಟು ಅಭದ್ರತೆ ಮನೆಯನ್ನು ಮಾಡಿ ಕುಳಿತಿರುತ್ತದೆ ಎಂದರೆ
ತಮ್ಮ ಸ್ವಂತ ಮಕ್ಕಳ ಜೀವನಕ್ಕೆ ಸಂಗಾತಿಯಾಗಿ ಬಂದವರನ್ನು ಒಪ್ಪಿಕೊಳ್ಳಲು ಆಗದೆ, ಬಿಡಲೂ ಆಗದೆ ಅವರಿಬ್ಬರ ಹೊಂದಾಣಿಕೆಯಲ್ಲೂ ತಮ್ಮ ಮಾನಸಿಕ ಭದ್ರತೆಗೆ ಬೀಳುವ ಪೆಟ್ಟನ್ನು ಅವರು ಕಾಣುತ್ತಾ ಕೊರಗುತ್ತಿದ್ದರೆ, ಅದು ಅವರಾಗಿಯೇ
ಸೃಷ್ಟಿ ಮಾಡಿಕೊಳ್ಳುವ ಮಾನಸಿಕ ಅವಾಂತರಗಳು!

ಇಂತಹ ಮನಸ್ಥಿತಿಯ ಹಿರಿಯರು ಮಕ್ಕಳಿಗೆ ತಂದಿಡುವ ಪರಿಸ್ಥಿತಿ ಕೆಟ್ಟದ್ದಾಗಿರುತ್ತದೆ. ಏನೇ ಆದರೂ ಮಕ್ಕಳು ತಮ್ಮನ್ನು ಅಗಲಲಾರರು ಎನ್ನುವ ನಂಬಿಕೆ, ಮಕ್ಕಳ ಮೇಲಿನ ತಮ್ಮ ಭದ್ರ ಮುಷ್ಟಿಯ ಹಿಡಿತವನ್ನು ಸಡಿಲಿಸಲಾಗದ ಹಿಂಜರಿತ, ಮಕ್ಕಳು ತನ್ನ ಅಂಕೆಯಲ್ಲಿಯೇ ಇರಬೇಕು ಎನ್ನುವ ಭಯಕ್ಕೆ, ಹಾಗಿಲ್ಲ ಎನ್ನುವ ಅಸಹಾಯಕತೆ ಎಲ್ಲವೂ ಸೇರಿ ಅವರ ಮನಸ್ಸನ್ನು ಪ್ರಕ್ಷುಬ್ಧಗೊಳಿಸುತ್ತದೆ.

ಎಷ್ಟೇ ಪ್ರೀತಿಯಿಂದ ಕಾಣುವ ಕಿರಿಯರು ಇದ್ದಾಗಿಯೂ ಸದಾ ಕಿರಿಕಿರಿಯನ್ನೇ ಅನುಭವಿಸುತ್ತಾ ಕೊರಗುವ ಹಿರಿಯರೂ ಇರುತ್ತಾರೆ. ಇಂತಹ ಹಿರಿಯರನ್ನು ಕಾಣುವಾಗೆಲ್ಲ ಇರುವ ಒಂದೇ ಒಂದು ಪುಟ್ಟದಾದ ಬದುಕನ್ನು ಪಟ್ಟಾಗಿ ಹಿಡಿದು ಉಸಿರು ಗಟ್ಟಿಸುವ ಬದಲು ಸುಖವಾಗಿ ನೆಮ್ಮದಿಯಾಗಿ ಬದುಕಿನ ಸಂಜೆಯನ್ನು ಸುಂದರವಾಗಿಸಿಕೊಳ್ಳಬಾರದೇ ಎನಿಸದೆ ಇರಲಾರದು!

ಮಾಗಲಿ ಮನಸ್ಸೂ!
ಮಾಗುವುದು ಎಂದರೆ ಬರಿಯ ದೇಹವಷ್ಟೇ ಆಗಿರದೆ ಅದು ಮನಸ್ಸಿಗೂ, ವ್ಯಕ್ತಿತ್ವಕ್ಕೂ ಅನ್ವಯ ವಾದಲ್ಲಿ ಅಂತಹವರ ಎದುರಿನಲ್ಲಿ ಗೌರವದಿಂದ ತಲೆ ತಾನಾಗಿಯೇ ಬಾಗುತ್ತದೆ. ಸಂಬಂಧಗಳು ಬೀಗುತ್ತವೆ! ಹಿರಿಯರು ಸಂಪೂರ್ಣವಾಗಿ ತಮ್ಮ ಯೋಚನೆಯ ಚೌಕಟ್ಟಿನಿಂದ ಬದಲಾಗುವುದು ಸಾಧ್ಯವಿಲ್ಲ, ಬೇಕಾಗಿಯೂ ಇಲ್ಲ.

ಆದರೆ ಸ್ವಲ್ಪ ಸ್ವಲ್ಪ ಸ್ಥಿತಪ್ರಜ್ಞತೆ, ಚೂರೇ ಚೂರು ಉದಾರತೆ, ವಿಶಾಲ ಮನೋಭಾವ, ಸ್ವಲ್ಪವೇ ‘ಲೆಟ್ ಇಟ್ ಗೋ’ ಸ್ವಭಾವ ವನ್ನು ಅಳವಡಿಸಿಕೊಂಡದ್ದೇ ಆದರೆ ಅಂತಹ ಮನೆ ಮೂಲಭೂತವಾಗಿ ಬೇಕಾಗಿರುವ ನೆಮ್ಮದಿಗೆ ಜಾಗ ಮಾಡಿಕೊಡುತ್ತದೆ. ಬದುಕು ಸಕಾರಾತ್ಮಕತೆಯ ಬಣ್ಣದಿಂದ ತುಂಬಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನೇ ನೋಡುತ್ತಾ ಗಮನಿಸುತ್ತಾ ಬೆಳೆ ಯುವ ಮುಂದಿನ ಪೀಳಿಗೆಗೂ ಅದೇ ಸಕಾರಾತ್ಮಕ ಭಾವ, ಕುಟುಂಬ ಭದ್ರತೆಯನ್ನು ಉಡುಗೊರೆಯಾಗಿ ನೀಡುತ್ತೇವೆ. ಈಗಿನ ಸಾಮಾಜಿಕ ಪರಿಸ್ಥಿತಿಗೆ ಅದು ಅವಶ್ಯ.

ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನಜೀವನಕೆ – ಮಂಕುತಿಮ್ಮ

ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂದು ಅದಕ್ಕೆ ಅಲ್ಲವೇ ಕವಿ ಡಿವಿಜಿಯವರು ಹೇಳಿರುವುದು.