Friday, 22nd November 2024

ಲಂಡನ್‌ನಲ್ಲಿ ಮೈಂಡ್ ದಿ ಗ್ಯಾಪ್…!

ವಿದೇಶವಾಸಿ

dhyapaa@gmail.com

ಇದೊಂದು ಕಿರುಚಿತ್ರ. ‘ಮೈಂಡ್ ದಿ ಗ್ಯಾಪ್’ ಎಂಬ ಸಾಲಿನ ಹೊರತಾಗಿ ಇದರಲ್ಲಿ ಒಂದೇ ಒಂದು ಸಂಭಾಷಣೆಯೂ ಇಲ್ಲವಾದದ್ದರಿಂದ ನನಗೆ ಅಷ್ಟು ಸರಿಯಾಗಿ ಅರ್ಥವಾಗಿರಲಿಲ್ಲ. ಯೂಟ್ಯೂಬ್‌ನಲ್ಲಿ ಇದೇ ಶೀರ್ಷಿಕೆಯ, ಇಂಥದೇ ಹಲವು ಕತೆಗಳಿರುವುದನ್ನು ಕಂಡು ಹುಡುಕಾಡಿದಾಗ ಇದೊಂದು ನೈಜಘಟನೆ ಎಂದು ಅರ್ಥವಾಯಿತು.

ಬೆಳಗ್ಗೆ ಐದು ಗಂಟೆ ಮೂವತ್ತು ನಿಮಿಷ. ಎಂದಿನಂತೆ ಅಲಾರಂ ಕೂಗಿಕೊಳ್ಳುತ್ತದೆ. ಆಕೆ ಕಣ್ಣು ತೆರೆದು ಎದ್ದು ಕುಳಿತುಕೊಳ್ಳುತ್ತಾಳೆ. ಹಾಗೆಯೇ ಹಾಸಿಗೆ ಯಲ್ಲಿ ತಾನು ಮಲಗಿದ ಪಕ್ಕದಲ್ಲಿರುವ ಖಾಲಿ ಜಾಗದ ಮೇಲೆ ಒಮ್ಮೆ ಕೈ ಆಡಿಸುತ್ತಾಳೆ. ಎಂದಿನಂತೆ ತಾನು ಪ್ರತಿನಿತ್ಯ ಭೇಟಿಕೊಡುವ ಲಂಡನ್‌ನ ಅಂಡರ್‌ಗ್ರೌಂಡ್ ಟ್ಯೂಬ್ ಸ್ಟೇಷನ್‌ಗೆ (ನೆಲದಡಿಯಲ್ಲಿರುವ ರೇಲ್ವೆ ನಿಲ್ದಾಣ) ಹೋಗಿ ಕುಳಿತುಕೊಳ್ಳುತ್ತಾಳೆ.

ಮುಖದಲ್ಲಿ ಮೂಡಿದ ನೆರಿಗೆ, ನಿಧಾನ ನಡಿಗೆ, ಅವಳ ವಯಸ್ಸು ೭೦ರ ಆಸುಪಾಸು ಇರಬಹುದೆಂದು ಹೇಳುತ್ತಿವೆ. ಮನೆಯಿಂದ ತಂದ ಚೀಲದಿಂದ ಒಂದು ಮಧ್ಯಮ ಗಾತ್ರದ ಮತ್ತು ಒಂದು ಸಣ್ಣ ಕಪ್‌ನಲ್ಲಿ ತುಂಬಿಕೊಂಡು ಬಂದಿದ್ದ ಕಾಫಿ ತೆಗೆದು ಪಕ್ಕದ ಆಸನದಲ್ಲಿ ಇಡುತಾಳೆ. ಅದರ ಪಕ್ಕದಲ್ಲೇ ಎರಡು ಟಿಶ್ಯೂ ಪೇಪರ್ ಇಡುತ್ತಾಳೆ. ಒಂದರ ಮೇಲೆ ಚೀಸ್ ಕ್ರೋಸೆಂಟ್, ಮತ್ತೊಂದರ ಮೇಲೆ ಚಾಕೊಲೇಟ್ ಪ- ಇಡುತ್ತಾಳೆ. ಟ್ರೇನ್ ಬರುವ ದಿಕ್ಕನ್ನೇ ನೋಡುತ್ತಾ ಕುಳಿತಿರುತ್ತಾಳೆ.

ಮುಖದಲ್ಲಿ ಯಾರಿಗೋ ಕಾಯುತ್ತಿರುವ ಭಾವ. ಟ್ರೇನ್ ಬಂದು ನಿಲ್ಲುತ್ತದೆ. ಬಾಗಿಲು ತೆರೆಯುವುದಕ್ಕೂ ಮೊದಲು ಗಂಡು ದನಿಯೊಂದು ‘ಮೈಂಡ್
ದಿ ಗ್ಯಾಪ್’ (Mind the gap) ಎಂದು ಹೇಳುವ ಎಚ್ಚರಿಕೆಯ ಪ್ರಕಟಣೆ ಕೇಳುತ್ತಿದ್ದಂತೆ ಅವಳ ಮುಖದಲ್ಲಿ ಮಂದಹಾಸ ಮೂಡುತ್ತದೆ. ಟ್ರೇನ್ ತನ್ನ
ಪಾಡಿಗೆ ತಾನು ಹೊರಟುಹೋಗುತ್ತದೆ. ಅವಳು ಮತ್ತೆ ಕಾಯುತ್ತ ಕುಳಿತುಕೊಳ್ಳುತ್ತಾಳೆ. ಪ್ರತಿ ಸಲ ಟ್ರೇನ್ ಬಂದಾಗಲೂ ಇದು ಪುನರಾವರ್ತನೆ
ಯಾಗುತ್ತದೆ- ‘ಮೈಂಡ್ ದಿ ಗ್ಯಾಪ್’ ಎಂಬ ಉದ್ಘೋಷ, ಅವಳ ಮುಖದಲ್ಲೊಂದು ಮಂದಹಾಸ, ಟ್ರೇನ್ ನಿರ್ಗಮನ. ಅವಳಿಗಂತೂ ಸಮಯ
ಹೋದದ್ದೇ ಗೊತ್ತಾಗುವುದಿಲ್ಲ. ಪ್ಲಾಟ್ ಫಾರ್ಮ್ ಕಾಯುವ ರೇಲ್ವೆ ಸಿಬ್ಬಂದಿ ಅವಳ ಬಳಿ ಬಂದು ಗಡಿಯಾರ ತೋರಿಸುವವರೆಗೂ ರಾತ್ರಿಯಾಯಿತೆಂದು ಅವಳ ಗ್ರಹಿಕೆಗೇ ಬರುವುದಿಲ್ಲ. ಒಂದು ಆಶ್ಚರ್ಯಯುಕ್ತ ನಗು ಬೀರುತ್ತಾ ಅಲ್ಲಿಂದ ಹೊರಡುತ್ತಾಳೆ.

ಮನೆಗೆ ಬಂದು ಊಟದ ಟೇಬಲ್ ಮುಂದೆ ಕುಳಿತು ಸೂಪ್ ಕುಡಿಯುವಾಗಲೂ ಅಷ್ಟೇ, ಪಕ್ಕದಲ್ಲೊಂದು ಖಾಲಿ ಬಟ್ಟಲು, ಚಮಚ. ಅದನ್ನು ನೋಡಿ ಒಂದು ಸಣ್ಣ ನಗು. ಒಂದು ಗಳಿಗೆ ಟಿವಿ ನೋಡಿ, ಪುಸ್ತಕ ಕೈಯಲ್ಲಿ ಹಿಡಿದವಳಿಗೆ ನಿದ್ರೆ ಆವರಿಸಿಕೊಳ್ಳುತ್ತದೆ. ಮಾರನೆಯ ದಿನ ಮತ್ತೆ ಅದೇ ಅಲಾರಂ, ಅದೇ ಸ್ಟೇಷನ್, ಅದೇ ಕಾಫಿ ಕಪ್, ಕ್ರೋಸೆಂಟ್, ಪ-. ಎಂದಿನಂತೆ ಟ್ರೇನ್ ಬಂದು ನಿಲ್ಲುತ್ತದೆ. ಅಂದು ಬಾಗಿಲು ತೆರೆದುಕೊಳ್ಳುವ ಮೊದಲು ಬೇರೆಯದೇ ಗಂಡುದನಿ ‘ಪ್ಲೀಸ್ ಮೈಂಡ್ ದಿ ಗ್ಯಾಪ್ ಬಿಟ್ವೀನ್ ದಿ ಟ್ರೇನ್ ಆಂಡ್ ದಿ ಪ್ಲಾಟ್ ಫಾರ್ಮ್’ ಎಂದು ಹೇಳುವುದನ್ನು ಕೇಳಿ ಅವಳ ಮುಖಚರ್ಯೆ ಬದಲಾ ಗುತ್ತದೆ.

ಮಂದಹಾಸ ಮಾಯವಾಗಿ, ದುಃಖ ಉಮ್ಮಳಿಸಿ ಬರುತ್ತದೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಅಂದು ಸಿಬ್ಬಂದಿ ಬಂದು ಸಮಯ ತೋರಿಸುತ್ತಿದ್ದಂತೆ ಅವಳು ಸರಸರನೆ ಎದ್ದು ಹೊರಟುಬಿಡುತ್ತಾಳೆ. ಅಂದು ಮನೆಗೆ ಬಂದು ತನ್ನದೊಂದೇ ಸೂಪ್ ಬಟ್ಟಲನ್ನು ಇಟ್ಟುಕೊಂಡು, ಮುಂದೆ ಕುಳಿತು ಅಳುತ್ತಾಳೆ. ಮಾರನೆಯ ದಿನದಿಂದ ಅವಳಿಗೆ ನಿಲ್ದಾಣಕ್ಕೆ ಹೋಗುವ ಉತ್ಸಾಹವೇ ಇರುವುದಿಲ್ಲ. ಆ ದಿನ ಬೆಳಗ್ಗೆ ಅವಳ ಮನೆಯ ಬಾಗಿಲಿನ ಬಳಿ
ಒಂದು ಲಕೋಟೆ ಬಿದ್ದಿರುತ್ತದೆ. ಅದನ್ನು ತೆರೆದಾಗ, ಒಳಗೆ ಒಂದು ಸಿಡಿ ಸಿಗುತ್ತದೆ. ಅದನ್ನು ಪ್ಲೇಯರ್ ನಲ್ಲಿ ಹಾಕಿದಾಗ ಅದೇ ಹಳೆಯ ‘ಮೈಂಡ್ ದಿ
ಗ್ಯಾಪ್’ ಧ್ವನಿ ಕೇಳಿಸುತ್ತದೆ. ನಂಬಲು ಅಸಾಧ್ಯವೆಂಬ ಭಾವದ ನಗು ಅವಳ ಮುಖವನ್ನು ತೋಯಿಸುತ್ತದೆ. ಆಕೆ ಆ ಊರು ಬಿಟ್ಟು ಹೊರಡುತ್ತಾಳೆ.
ಇದು ಒಂದು ಕಿರುಚಿತ್ರದ ಕತೆ. ಖಂಡಿತವಾಗಿಯೂ ನಾನು ಬರೆದದ್ದಲ್ಲ. ಸದ್ಯಕ್ಕಂತೂ ಆ ರೀತಿಯ ಯಾವ ವಿಚಾರವೂ ಇಲ್ಲ, ಅದಕ್ಕೆ ಪುರುಸೊತ್ತೂ ಇಲ್ಲ. ಇದು ಇತ್ತೀಚೆಗೆ ನಾನು ಯೂಟ್ಯೂಬ್‌ನಲ್ಲಿ ನೋಡಿದ ಕಿರುಚಿತ್ರ.

ನಿಜ ಹೇಳುತ್ತೇನೆ, ‘ಮೈಂಡ್ ದಿ ಗ್ಯಾಪ್’ ಎಂಬ ಸಾಲಿನ ಹೊರತಾಗಿ ಈ ಕಿರುಚಿತ್ರದಲ್ಲಿ ಒಂದೇ ಒಂದು ಸಂಭಾಷಣೆಯೂ ಇಲ್ಲವಾದದ್ದರಿಂದ ನನಗೆ ಅಷ್ಟು ಸರಿಯಾಗಿ ಅರ್ಥವಾಗಿರಲಿಲ್ಲ. ಪಕ್ಕದಲ್ಲೇ ಅದೇ ಶೀರ್ಷಿಕೆಯ ಇನ್ನೊಂದು ಕಿರುಚಿತ್ರ ಇತ್ತು. ಇದೇ ನಪ್ಪ, ಒಂದೇ ಶೀರ್ಷಿಕೆಯ ಇನ್ನೊಂದು ಕಿರುಚಿತ್ರವೇ? ಎಂದು ಅದನ್ನೂ ನೋಡಿದೆ. ಸ್ವಲ್ಪ ಬದಲಾವಣೆ ಬಿಟ್ಟರೆ ಎರಡರದ್ದೂ ಒಂದೇ ಕತೆ. ಇದರಲ್ಲೂ, ೭೦ ವರ್ಷದ ಮಹಿಳೆಯೊಬ್ಬಳು ಕೆಲವು ವರ್ಷ ಗಳಿಂದ ಲಂಡನ್ ನಗರದ ಅಂಡರ್ ಗ್ರೌಂಡ್ ಸ್ಟೇಷನ್‌ಗೆ ಬಂದು, ಬೆಳಗ್ಗೆಯಿಂದ ರಾತ್ರಿಯವರೆಗೂ ಒಂದೇ ಬೆಂಚಿನ ಅದೇ ಆಸನದಲ್ಲಿ ಯಾರೊಂದಿಗೂ ಮಾತು-ಕತೆಯಿಲ್ಲದೆ, ಕುಳಿತು-ಎದ್ದು ಹೋಗುವುದನ್ನು ಅಲ್ಲಿಯ ಸಿಬ್ಬಂದಿ ಗಮನಿಸುತ್ತಿರುತ್ತಾನೆ.

ಅಂದು ಟ್ರೇನ್ ಬಂದು ನಿಂತಾಗ ಪ್ರಕಟಣೆಯ ಧ್ವನಿ ಬದಲಾಗಿದ್ದನ್ನು ಕೇಳಿದ ಅವಳು ದಿಕ್ಕು ತೋಚದವಳಂತಾಗಿ, ‘ಮೈಂಡ್ ದಿ ಗ್ಯಾಪ್’ ಎಂದು ಹಲುಬುತ್ತ ಹೊರಡುತ್ತಾಳೆ. ಪ್ರತಿನಿತ್ಯ ಅವಳನ್ನು ನೋಡುತ್ತಿದ್ದ ಸಿಬ್ಬಂದಿ, ಅವಳನ್ನು ಸಂತೈಸಿ, ಏನಾಯಿತೆಂದು ಕೇಳಿದಾಗ, ‘ಅದು ನನ್ನ ಗಂಡನ ಬಾಯಿಂದ ನಾನು ಕೇಳಿದ ಮೊದಲ ಮಾತು. ೪೦ ವರ್ಷದ ಹಿಂದೆ ನಾನು ಅವನನ್ನು ಮೊದಲು ಈ ನಿಲ್ದಾಣದಲ್ಲಿ ಭೇಟಿ ಯಾದೆ. ನಮ್ಮಿಬ್ಬರಲ್ಲಿ ಪ್ರೇಮಾಂಕುರವಾಯಿತು, ಮದುವೆಯೂ ಆಯಿತು. ಅವನ ಧ್ವನಿ ಎಷ್ಟು ಸುಂದರವಾಗಿತ್ತೆಂದರೆ ರೈಲು ನಿಲ್ಲುವುದಕ್ಕಿಂತ ಮೊದಲನೆಯ ಪ್ರಕಟಣೆಯಲ್ಲಿ ಅವನ ಧ್ವನಿಯನ್ನು ಬಳಸಿಕೊಳ್ಳಲಾಯಿತು. ಇಂದು ಆ ಪ್ರಕಟಣೆಯ ಧ್ವನಿ ಬದಲಾಗಿದೆ. ನೀವು ಮಾಡಿದ ಬದಲಾವಣೆಯನ್ನು ಪ್ರಶ್ನಿಸುವ ಅಽಕಾರ ನನಗಿಲ್ಲ, ಸಾಧ್ಯವಾದರೆ ಆ ಧ್ವನಿಮುದ್ರಣದ ಒಂದು ಪ್ರತಿ ನನಗೆ ಸಿಗಬಹುದೇ?’ ಎನ್ನುತ್ತಾಳೆ.

ಸಿಬ್ಬಂದಿ, ‘ಇಂದಿನಿಂದ ಎಲ್ಲಕಡೆಯೂ ಪ್ರಕಟಣೆಯ ವ್ಯವಸ್ಥೆ, ಧ್ವನಿ ಬದಲಾಗಿದೆ. ಇದರಲ್ಲಿ ನಾನು ಏನೂ ಮಾಡಲು ಸಾಧ್ಯವಿಲ್ಲ, ಕ್ಷಮಿಸಿ’ ಎನ್ನುತ್ತಾನೆ. ಅವಳೂ ಅಲ್ಲಿಂದ ಹೊರಟು, ಹಳೆಯ ನೆನಪಿನಲ್ಲಿ ಇಳಿಯುತ್ತಾಳೆ. ಕೆಲವು ದಿನದ ನಂತರ ಅವಳು ಈ ಊರನ್ನೇ ಬಿಟ್ಟು ಹೊರಡಲು ನಿರ್ಧರಿಸಿ, ಅದೇ ನಿಲ್ದಾಣಕ್ಕೆ ಬಂದಾಗ, ಪುನಃ ತನ್ನ ಗಂಡನ ಧ್ವನಿ ಕೇಳಿ ಖುಷಿ ಪಡುತ್ತಾಳೆ. ಆಗ ಅದೇ ಸಿಬ್ಬಂದಿ ಬಂದು ‘ಎಲ್ಲ ನಿಲ್ದಾಣಗಳಲ್ಲಿ ಅಲ್ಲದಿದ್ದರೂ, ಈ ನಿಲ್ದಾಣದಲ್ಲಿ ನಾವು ನಿಮ್ಮ ಗಂಡನ ಧ್ವನಿಯಲ್ಲಿದ್ದ ಪ್ರಕಟಣೆಯನ್ನೇ ಬಳಸಲು ನಿರ್ಧರಿಸಿದ್ದೇವೆ. ನಿಮಗೆ ಆತನ ಧ್ವನಿಯನ್ನು ಉಡುಗೊರೆಯಾಗಿ ಕೊಡುತ್ತಿದ್ದೇವೆ’ ಎಂದು ಒಂದು ಪೆನ್‌ಡ್ರೈವ್ ಅವಳ ಕೈಯಲ್ಲಿಡುತ್ತಾನೆ.

ನನಗೆ ಕತೆ ಅರ್ಥವಾಗಿತ್ತು. ಆದರೆ ಯೂಟ್ಯೂಬ್‌ನಲ್ಲಿ ಇದೇ ಶೀರ್ಷಿಕೆಯ, ಇದೇ ರೀತಿಯ ಹಲವು ಕತೆಗಳಿರುವುದನ್ನು ಕಂಡು ಇನ್ನಷ್ಟು ಹುಡುಕಾಟಕ್ಕೆ ತೊಡಗಿದೆ. ಆಗ ಅರ್ಥವಾಗಿದ್ದೇನೆಂದರೆ, ಇದು ನಿಜವಾಗಿಯೂ ನಡೆದ ಘಟನೆ.

‘ಮೈಂಡ್ ದಿ ಗ್ಯಾಪ್’, ನೀವು ಎಷ್ಟು ಬಾರಿ ಕೇಳಿದ್ದೀರೋ ಗೊತ್ತಿಲ್ಲ. ನೀವು ನಾಟಕಪ್ರಿಯರಾದರೆ, ಚಲನಚಿತ್ರ ನೋಡುವ ಹವ್ಯಾಸ ಉಳ್ಳವರಾಗಿದ್ದರೆ ಈ ಸಾಲನ್ನು ಕೇಳಿರುತ್ತೀರಿ. ನೀವು ಸಂಗೀತ ಇಷ್ಟಪಡುವವರಾಗಿದ್ದರೆ, ಕಾದಂಬರಿ ಓದುವವರಾಗಿದ್ದರೂ ಇದನ್ನು ಕೇಳಿರುತ್ತೀರಿ. ವಿಡಿಯೋ ಗೇಮ್ ಆಡುವ ಮಕ್ಕಳೂ ಇದನ್ನು ಕೇಳಿರುತ್ತಾರೆ. ಏಕೆಂದರೆ, ಈ ಹೆಸರಿನ ನಾಟಕ, ಚಲನಚಿತ್ರ, ಕಾದಂಬರಿ, ಸಾಕಷ್ಟು ಹಾಡುಗಳು, ೨ ಮ್ಯೂಸಿಕ್ ಅಲ್ಬಂ ಇದೆಯಲ್ಲದೆ, ಹತ್ತಾರು ವಿಡಿಯೋ ಗೇಮ್‌ಗಳಲ್ಲೂ ಈ ಸಾಲನ್ನು ಬಳಸಿಕೊಳ್ಳಲಾಗಿದೆ. ಕಾಲು ಒರೆಸಿಕೊಳ್ಳುವ ಡೋರ್ ಮ್ಯಾಟ್‌ನಿಂದ ಹಿಡಿದು, ಮುಷ್ಕರಕ್ಕಿಳಿದ ಕಾಲೇಜು ವಿದ್ಯಾರ್ಥಿಗಳೂ ಈ ಸಾಲನ್ನು ಬಳಸಿಕೊಳ್ಳುತ್ತಾರೆ ಎಂದರೆ ಇನ್ನೂ ಹೇಳಬೇಕೆ? ಬಹುಶಃ ಲಂಡನ್ ನಗರದಲ್ಲಿ ಅತಿಹೆಚ್ಚು ಕೇಳಿಬರುವ ಪದ ಯಾವುದು ಎಂದರೆ, Thanks, sorry ಎಂದು ನೀವು ಹೇಳಬಹುದು.

ಆದರೆ ಟ್ಯೂಬ್ (ನೆಲಮಾರ್ಗದಲ್ಲಿ ಚಲಿಸುವ ರೈಲು) ನಲ್ಲಿ ಪ್ರಯಾಣಿಸುವವರು ಅದಕ್ಕಿಂತಲೂ ಹೆಚ್ಚು ಕೇಳುವ ಪದ ಎಂದರೆ ’Mind the gap! ರೈಲಿನ ಬೋಗಿ ಮತ್ತು ಕಟ್ಟೆ (ಪ್ಲಾಟ್ ಫಾರ್ಮ್) ನಡುವೆ ಇರುವ ಅಂತರವನ್ನು ಗಮನಿಸಲು ಎಚ್ಚರಿಸುವ ಪ್ರಕಟಣೆ ಅದು. ನಾನು ಲಂಡನ್ ನಗರದ ಟ್ಯೂಬ್‌ ನಲ್ಲಿ ಓಡಾಡುವಾಗ ‘ಅಂತರವನ್ನು ಗಮನಿಸಿ’ಯ ಜತೆಗೆ ‘ಬಾಗಿಲು ಮುಚ್ಚಿಕೊಳ್ಳುತ್ತಿದೆ’ ಎಂಬ ಎಚ್ಚರಿಕೆಯ ಉದ್ಘೋಷವನ್ನೂ ನೂರಾರು ಸಲ ಕೇಳಿದ್ದೇನೆ.

ಆಗೆಲ್ಲ ಅದರ ಹಿಂದೆ ಈ ರೀತಿಯ ಕತೆ ಇದ್ದಿರಬಹುದು ಎಂದು ಖಂಡಿತ ಊಹಿಸಿರಲಿಲ್ಲ. ಹಿಂದಿರುಗಿ ಬಂದ ನಂತರ ಲಂಡನ್ ನಗರದ ನೆಲದಡಿಯಲ್ಲಿ ಚಲಿಸುವ ರೈಲಿನ ಕುರಿತು ಬರೆಯ ಬೇಕೆಂದು ಇನ್ನಷ್ಟು ಮಾಹಿತಿ ಹುಡುಕುತ್ತಿದ್ದಾಗ ಈ ಎಲ್ಲ ವಿಷಯ ತಿಳಿಯಿತು. ನೀವೇನಾದರೂ ಲಂಡನ್‌ನ ಟ್ಯೂಬ್‌ ನಲ್ಲಿ ಪ್ರಯಾಣಿಸಿದರೆ, Northern Line ನ (ಟ್ಯೂಬ್ ಚಲಿಸುವ ಹತ್ತು ಮಾರ್ಗಗಳಲ್ಲಿ ಒಂದು) Embankment ನಿಲ್ದಾಣಕ್ಕೆ ಹೋದರೆ ಅಲ್ಲಿಯ ಪ್ರಕಟಣೆಯನ್ನು ಗಮನವಿಟ್ಟು ಕೇಳಿ.

ಏಕೆಂದರೆ ಮೇಲೆ ಹೇಳಿದ ಕತೆಯಲ್ಲಿ ಈ ನಿಲ್ದಾಣದದ್ದೇ ಪ್ರಮುಖ ಪಾತ್ರ. ಓಸ್ವಾಲ್ಡ್ ಲಾರೆನ್ಸ್ ವೃತ್ತಿಯಲ್ಲಿ ನಟ, ಗಾಯಕ. ೧೯೬೯ರಲ್ಲಿ ಅವನ ಧ್ವನಿ ಯನ್ನು ‘ಮೈಂಡ್ ದಿ ಗ್ಯಾಪ್’ ಪ್ರಕಟಣೆಗೆ ಬಳಸಿಕೊಳ್ಳಲಾಯಿತು. ಅವನ ಹೆಂಡತಿ ಡಾ.ಮಾರ್ಗರೇಟ್ ಮೆಕಲ್ಲಮ್. ಅವರಿಬ್ಬರೂ ಮೊದಲಬಾರಿ ಭೇಟಿಯಾದದ್ದು ಅದೇ ಎಂಬಾಂಕ್‌ಮೆಂಟ್ ನಿಲ್ದಾಣದಲ್ಲಿ. ಅವಳು ಅಲ್ಲಿಂ ದಲೇ ತನ್ನ ಕೆಲಸಕ್ಕೆ ಹೋಗುತ್ತಿದ್ದಳಾದ್ದರಿಂದ, ಅವನ ಧ್ವನಿಯ ಪ್ರಕಟಣೆ ಯನ್ನು ಮೊದಲ ದಿನದಿಂದ ಹಿಡಿದು ನಿವೃತ್ತಳಾಗುವವರೆಗೆ ಪ್ರತಿನಿತ್ಯ ಕೇಳಿಸಿಕೊಳ್ಳುತ್ತಿದ್ದಳು.

೨೦೦೭ರಲ್ಲಿ ಲಾರೆನ್ಸ್ ತೀರಿಹೋದ ನಂತರ ೫ ವರ್ಷ ಅವನ ಧ್ವನಿಯನ್ನು ಕೇಳುವುದಕ್ಕಾಗಿಯೇ ಆ ನಿಲ್ದಾಣಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದಳು. ೨೦೧೨ರಲ್ಲಿ ಹೊಸ ಸಾರ್ವಜನಿಕ ಪ್ರಕಟಣೆಯ ವ್ಯವಸ್ಥೆ ಬಂದಾಗ ಇದಕ್ಕೆ ಬೇರೆಯವರ ಧ್ವನಿಯನ್ನು ಬಳಸಿಕೊಳ್ಳಲಾಯಿತು. ಲಾರೆನ್ಸ್ ಧ್ವನಿ ಬದಲಾದದ್ದನ್ನು ಗಮನಿಸಿದ ಮಾರ್ಗರೇಟ್ Transport for London ಗೆ (ಟಿಎ-ಎಲ್) ಗಂಡನ ಧ್ವನಿಮುದ್ರಣವನ್ನು ಕೊಡುವಂತೆ ಕೇಳಿಕೊಂಡಿದ್ದಳು. ಟಿಎ-ಎಲ್ ಅಧಿಕಾರಿಗಳು ಮಾರ್ಗರೇಟ್ ಬೇಡಿಕೆಯನ್ನು ಈಡೇರಿಸುವುದರೊಂದಿಗೆ, ಆ ನಿಲ್ದಾಣದಲ್ಲಿ ಲಾರೆನ್ಸ್ ಧ್ವನಿಯ ಪ್ರಕಟಣೆಯನ್ನು ಪುನಃ ಅಳವಡಿಸಿದರು.

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಇಂಟರೆಸ್ಟಿಂಗ್ ಕತೆಯಿದೆ. ಲಂಡನ್‌ನಲ್ಲಿ ‘ಪಿಕಾಡಿಲಿ ಸರ್ಕಸ್’ (ಪಿಕಾಡಿಲಿ ಸರ್ಕಲ್) ಹೆಸರಿನ ಪ್ರಮುಖ
ನಿಲ್ದಾಣವಿದೆ. ಅಲ್ಲಿ ೧೯೯೦ರಿಂದ ಸುಮಾರು ೧೫ ವರ್ಷಗಳ ಕಾಲ ನಟ ಟಿಮ್ ಬೆಂಟಿಂಕ್‌ನ ಧ್ವನಿ ಯನ್ನು ಸೂಚನೆಯ ಪ್ರಕಟಣೆಗೆ ಬಳಸಿಕೊಳ್ಳ ಲಾಗಿತ್ತು. ಆ ಕಾಲದಲ್ಲಿ ಆತನಿಗೆ ಧ್ವನಿಮುದ್ರಣ ಕ್ಕೆಂದು ೨೦೦ ಪೌಂಡ್ ನೀಡಿದ್ದರಂತೆ. ಬೆಂಟಿಂಕ್ ಕೂಡ ಅದೇ ಟ್ರೇನ್‌ನಲ್ಲಿ ಓಡಾಡುತ್ತಿದ್ದನಂತೆ.
ಯಾರಾದರೂ ತಪ್ಪು ಮಾಡಿದರೆ ‘ನಾನು ಮೊದಲೇ ಎಚ್ಚರಿಸಿದ್ದೆ, ನೀನು ಕೇಳಲಿಲ್ಲ’ ಎಂದು ಹೇಳಬೇಕೆಂದು ಕಾಯುತ್ತಿದ್ದನಂತೆ.

‘ದೇವರ ದಯೆಯಿಂದ ೧೫ ವರ್ಷದಲ್ಲಿ ಆ ರೀತಿಯ ಯಾವ ಘಟನೆಯೂ ನಡೆಯಲಿಲ್ಲ’ ಎಂದು ಅವನೇ ಒಂದು ಕಡೆ ಹೇಳಿಕೊಂಡಿದ್ದಾನೆ. ಲಾರೆನ್ಸ್‌ನ ಕತೆ ಖ್ಯಾತವಾದದ್ದು ನಿಜವಾದರೂ, ಆ ಪ್ರಕಟಣೆಗೆ ಧ್ವನಿ ನೀಡಿದವರಲ್ಲಿ ಲಾರೆನ್ಸ್ ಮೊದಲಿಗನೇನೂ ಆಗಿರಲಿಲ್ಲ. ೧೯೬೮ರ ವೇಳೆಗೆ ಟ್ರೇನ್ ಚಾಲಕರು ಅಥವಾ ನಿಲ್ದಾಣದ ಸಿಬ್ಬಂದಿಗಳು ಪ್ರತಿ ಬಾರಿ ರೈಲು ಬರುವಾಗಲೂ ಎಚ್ಚರಿಕೆ ಪ್ರಕಟಿಸುವುದು ಅಸಾಧ್ಯವಾಗಿತ್ತು. ಅದಕ್ಕಾಗಿ ಸ್ವಯಂಚಾಲಿತ ಧ್ವನಿ ಮುದ್ರಣವನ್ನು ಬಳಸಿಕೊಳ್ಳಲು ನಿರ್ಧರಿಸಿದ ರೇಲ್ವೆ ಅಧಿಕಾರಿಗಳು Redan Recording ಸಂಸ್ಥೆಗೆ ಈ ಜವಾಬ್ದಾರಿ ನೀಡಿದರು. ಒಬ್ಬ ನಟನ ಧ್ವನಿಯನ್ನು ಇದಕ್ಕೆ ಬಳಸಿಕೊಳ್ಳಲು ರೆಕಾಡಿಂಗ್ ಸಂಸ್ಥೆ ನಿರ್ಧರಿಸಿತ್ತು.

ಆದರೆ ಆ ನಟ ಹೆಚ್ಚಿನ ರಾಯಧನ (ರಾಯಲ್ಟಿ) ಕೇಳಿದ್ದರಿಂದ ಅದು ಸಾಧ್ಯವಾಗಲಿಲ್ಲ. ರೆಕಾಡಿಂಗ್ ಸಂಸ್ಥೆಯ ಮುಖ್ಯಸ್ಥನಾಗಿದ್ದ ಪೀಟರ್ ಲಾಡ್ಜ್
ಮೈಕ್ ಟೆಸ್ಟ್ ಮಾಡುವಾಗ ‘ಹಲೋ, ಟೆಸ್ಟಿಂಗ್’ ಎಂದು ಹೇಳುವ ಬದಲು ‘ಮೈಂಡ್ ದಿ ಗ್ಯಾಪ್’ಎಂದು ಹೇಳಿ ಮೈಕ್ ಪರೀಕ್ಷಿಸಿದ್ದ. ಆ ಧ್ವನಿಯ ಮುದ್ರಣ ವನ್ನೇ ಕೆಲವು ದಿನ ಪ್ರಕಟಣೆಗೆ ಬಳಸಿಕೊಳ್ಳಲಾಯಿತು. ಒಂದು ಪ್ರಕಟಣೆಯ ಹಿಂದೆ ಎಷ್ಟೊಂದು ಕತೆಗಳು, ಎಷ್ಟೊಂದು ನೆನಪುಗಳು, ಅಲ್ಲವೇ? ಸಮಯ ಯಾವತ್ತೂ ನೆನಪುಗಳ ಹೊರತಾಗಿ ಇನ್ನೇನನ್ನೂ ಬಿಟ್ಟು ಹೋಗುವುದಿಲ್ಲ. ಅಂದಹಾಗೆ ನಿಮಗೇನಾದರೂ ಮೈಕ್ ಟೆಸ್ಟ್ ಮಾಡುವ ಅವಕಾಶ ಸಿಕ್ಕರೆ ‘ಹಲೋ, ಮೈಕ್ ಟೆಸ್ಟಿಂಗ್’ ಎನ್ನಬೇಡಿ. ಇನ್ನೇನಾದರೂ ಹೇಳಿ. ಯಾರಿಗೆ ಗೊತ್ತು? ನಿಮ್ಮ ಆ ಮಾತೇ ಜನಪ್ರಿಯವಾಗಬಹುದು, ಆ ಮೂಲಕ ನೀವೂ ಜನರ ಮನದಲ್ಲಿ ಉಳಿಯಬಹುದು!