Sunday, 1st December 2024

ದರ್ಪ, ದೌರ್ಜನ್ಯ, ಅಮಾನವೀಯತೆ; ಸಭ್ಯತೆಯ ಕೊರತೆ

ನಾಡಿಮಿಡಿತ
ವಸಂತ ನಾಡಿಗೇರ

vasanth.nadiger@gmail.com

ಇದು ಹದಿನೈದು ದಿನಗಳ ಹಿಂದೆ ನಡೆದ ಘಟನೆ. ರಾಯಚೂರಿನ ಚಂದ್ರಮೌಳೇಶ್ವರ ಚೌಕದಲ್ಲಿರುವ ಮಾರುಕಟ್ಟೆಯಲ್ಲಿ ಜರುಗಿದ ಪ್ರಸಂಗ. ಲಾಕ್ ಡೌನ್ ಜಾರಿಯಲ್ಲಿ ಇದ್ದುದರಿಂದ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಅಷ್ಟರಲ್ಲೇ ನಗರದ ಸದರ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಜೀಪಿನಲ್ಲಿ ಸರ್ರನೆ ಬಂದರು. ಠಾಣೆಯ ಪಿಎಸ್‌ಐ ವಾಹನದಿಂದ ಇಳಿದವರೇ ಬೀದಿ ಬದಿಯ ವ್ಯಾಪಾರಿಗಳತ್ತ ಬಿರಬಿರನೇ ನಡೆದರು.

ಮೈಮೇಲೆ ದೆವ್ವ ಬಂದವರಂತೆ ಮಹಿಳೆಯೊಬ್ಬಳು ಇಟ್ಟುಕೊಂಡಿದ್ದ ಸೊಪ್ಪಿನ ಬುಟ್ಟಿಯನ್ನು ಬೂಟುಗಾಲಿನಿಂದ ಫುಟ್‌ಬಾಲ್ ಥರ ಒದ್ದರು. ಅದರ ರಭಸಕ್ಕೆ ಸೊಪ್ಪೆಲ್ಲ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಚೆಲ್ಲಿತು. ಆದರೆ ಆ ಪೊಲೀಸಪ್ಪನ ಆವೇಶವಿನ್ನೂ ಇಳಿದಿರಲಿಲ್ಲ. ಹಾಗೆಯೇ ರಸ್ತೆ ಬದಿ ಇರಿಸಿದ್ದ ಎಲ್ಲ ತರಕಾರಿ ಬುಟ್ಟಿಗಳನ್ನು ತುಳಿಯುತ್ತ, ಒದೆಯುತ್ತ ಹೋದರು. ಇವರ ರೌದ್ರಾವತಾರ ನೋಡಲಾರದೆ ಕೆಲವರು ಎದ್ದೆನೊ ಬಿದ್ದೆನೋ ಎಂದು ತಮ್ಮ ವಸ್ತುಗಳನ್ನು ತೆಗೆದುಕೊಂಡು ಓಡಿದರು. ಈ ದೃಶ್ಯ ಎಲ್ಲ ಕಡೆ ಪ್ರಸಾರವಾಯಿತು.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಲೇ ಆ ಎಸ್‌ಐ ಅನ್ನು ಸಸ್ಪೆಂಡ್ ಮಾಡಲಾಯಿತು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತೋರಿದ ದರ್ಪ, ದೌರ್ಜನ್ಯ,
ಪೌರುಷವನ್ನು ನೋಡಿ ಅಲ್ಲಿದ್ದ ಎಲ್ಲರೂ ದಂಗಾದರು. ಅಸಹಾಯಕರಾಗಿ ನೋಡುವುದಷ್ಟೇ ಅವರಿಗಿದ್ದ ಮಾರ್ಗ. ಇಷ್ಟಕ್ಕೂ ಆ ಅಧಿಕಾರಿ ಹಾಗೆ ಮಾಡಲು ಕಾರಣವಾದರೂ ಏನು ಗೊತ್ತೆ? ಆಗ ಲಾಕ್‌ಡೌನ್ ಇತ್ತಲ್ಲವೆ? ನಿರ್ದಿಷ್ಟ ಅವಧಿಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಇರುತ್ತದೆ. ಆ ಹೊತ್ತಿಗೆ ವಹಿವಾಟಿನ ಸಮಯ ಮೀರಿತ್ತು.

ಅದಕ್ಕಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲು ಪೊಲೀಸರು ಆಗಮಿಸಿದ್ದರು. ಕಾನೂನು ರಕ್ಷಕರು ಆ ಕೆಲಸ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಆ ಪರಿಯ
ರೋಷಾವೇಶ, ದರ್ಪ, ದೌರ್ಜನ್ಯ ತೊರುವ ಅಗತ್ಯವೇನಿತ್ತು ಎಂಬುದು ಪ್ರಶ್ನೆ. ಅದಾಗಲೇ ವ್ಯಾಪಾರದ ಸಮಯ ಮೀರಿರಬಹುದು. ಸಮಯ ಮೀರಿಯೂ ವಹಿವಾಟು ನಡೆದಿರಲೂಬಹುದು. ಆದರೆ ಇದಕ್ಕೆ ಕಾರಣವೂ ಇರುತ್ತದೆ. ಸಾಮಾನ್ಯವಾಗಿ ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರಕ್ಕೆ ಕಡಿಮೆ ಕಾಲಾವಕಾಶ ಇರುವುದರಿಂದ ಇರುವ ಅವಧಿಯಲ್ಲೇ  ಮಾರುಕಟ್ಟೆಗೆ ಜನರು ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ಅಲ್ಲದೆ ವಹಿವಾಟಿನ ಸಮಯ
ಮುಗಿಯುವ ಹೊತ್ತಿಗೆ ಧಾವಿಸಿ ಬರುವ ರೂಢಿಯೂ ಇರುತ್ತದೆ. ವ್ಯಾಪಾರವಿಲ್ಲದೆ ಕಂಗೆಟ್ಟಿರುವ ವ್ಯಾಪಾರಿಗಳು ಸಾಧ್ಯವಾದ ಮಟ್ಟಿಗೆ ನಾಲ್ಕು ಕಾಸು ಹೆಚ್ಚಿಗೆ ಗಳಿಸಲು ಪ್ರಯತ್ನಿಸುವುದು ಸಹಜ. ಇವೆಲ್ಲ ಮನುಷ್ಯ ಸಹಜವಾದ ವರ್ತನೆಗಳು.

ಮಹಾಪರಾಧವೇನೂ ಅಲ್ಲ. ಆದರೆ ಸಿಕ್ಕಿದ್ದೇ ಅವಕಾಶವೆಂದು ಈ ರೀತಿ ದುರ್ವರ್ತನೆ ಹಾಗೂ ದುಂಡಾವರ್ತಿ ತೋರುವ ಹರಕತ್ತು ಮತ್ತು ಅವಶ್ಯಕತೆ ಆ
ಪೊಲೀಸಪ್ಪನಿಗೆ ಏನಿತ್ತು ಎಂದು ಕೇಳಿದರೆ ಬಹುಶಃ ಅದಕ್ಕೆ ಸ್ಪಷ್ಟ ಉತ್ತರ ಸಿಗಲಿಕ್ಕಿಲ್ಲ. ಏಕೆಂದರೆ ತನಗಿರುವ ಅಧಿಕಾರ ಎಂಥದ್ದು ಎಂಬುದನ್ನು ಪ್ರದರ್ಶಿಸುವುದೇ ಅವರ ಉದ್ದೇಶವಾಗಿರುತ್ತದೆ. ಆದರೆ ಈ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು? ಯಾರೂ ಇಲ್ಲ. ಅವರೇ ಸ್ವತಃ ತೆಗೆದುಕೊಂಡಿದ್ದು.

ಮತ್ತೊಂದು ಪ್ರಕರಣ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯಲ್ಲಿ. ಗ್ರಾಮದ ಯುವಕನೊಬ್ಬನ್ನು ಕೇಸ್ ಒಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಠಾಣೆಗೆ ಕರೆತಂದಿರುತ್ತಾರೆ. ತನ್ನನ್ನು ಮನಬಂದಂತೆ ಥಳಿಸಲಾಯಿತು ಎಂಬುದು ಈ ದಲಿತನ ಆರೋಪ. ಹೀಗೆ ಹಿಂಸೆ ನೀಡಿದ್ದರಿಂದ ಹೈರಾಣಾದ ಯುವಕ ನೀರು ಬೇಕೆಂದು ಕೇಳುತ್ತಾನೆ. ಅದಕ್ಕೆ ಪೊಲೀಸರು ಮಾಡಿದ್ದೇನು ಗೊತ್ತೆ? ಅದೇ ಲಾಕಪ್‌ನಲ್ಲಿದ್ದ ಮತ್ತೊಬ್ಬನಿಗೆ ಇವನ ಮುಖದ ಮೇಲೆ ಮೂತ್ರ ವಿಸರ್ಜಿಸುವಂತೆ ಹೇಳುತ್ತಾರೆ. ಮೊದ ಮೊದಲು ಹಿಂಜರಿದ ಆತ ಮತ್ತೆ ತನಗೂ ಒದೆ ಬೀಳಬಹುದೆಂಬ ಅಂಜಿಕೆಯಿಂದ ಅವರು ಹೇಳಿದಂತೆ ಮಾಡುತ್ತಾನೆ. ಆಗ ದಲಿತನ ಕಡೆ ತಿರುಗಿದ ಪೊಲೀಸರು ಆ ಮೂತ್ರವನ್ನು ಕುಡಿದರೆ ಬಿಡುಗಡೆ ಮಾಡುತ್ತೇವೆ ಎನ್ನುತ್ತಾರೆ. ಅಷ್ಟು ಮಾತ್ರವಲ್ಲದೆ ನೆಲದ ಮೇಲೆ ಚೆಲ್ಲಿದ್ದ ಉಚ್ಚೆಯನ್ನು ನೆಕ್ಕುವಂತೆ ರಚ್ಚೆ ಹಿಡಿಯುತ್ತಾರೆ.

ಇದರಿಂದ ತೀವ್ರ ನೊಂದ, ಘಾಸಿಗೊಂಡ ಮತ್ತು ಅವಮಾನಿತನಾದ ಆ ಯುವಕ ಬಿಡುಗಡೆಯಾಗಿ ಹೊರಬಂದ ಬಳಿಕ ಮೇಲಧಿಕಾರಿಗಳಿಗೆ ಪತ್ರ ಬರೆದು ಈ ವಿಷಯವನ್ನು ಅವರ ಗಮನಕ್ಕೆ ತರುತ್ತಾನೆ. ಇದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಟಿವಿಗಳಲ್ಲಿ ಪ್ರಸಾರವಾಗುತ್ತದೆ. ಯಥಾಪ್ರಕಾರ ಸದ್ದ ಎಸ್‌ಐ ಅನ್ನು
ಅಮಾನತು ಮಾಡಲಾಗುತ್ತದೆ. ಆದರೆ ಆ ಅಧಿಕಾರಿಗೆ ನಿರೀಕ್ಷಣಾ ಜಾಮೀನು ನೀಡಲು ಸ್ಥಳೀಯ ನ್ಯಾಯಾಲಯ ನಿರಾಕರಿಸುತ್ತದೆ. ಇದು ಅತ್ಯಂತ ಹೇಯ, ಅಮಾನವೀಯ ಕೃತ್ಯ. ಇಂಥ ಕೃತ್ಯ ಎಸಗಿದವರು ಜಾಮೀನಿಗೆ ಅರ್ಹರಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತದೆ.

ಇವೆರಡೂ ಪ್ರಕರಣಗಳು ಪೊಲೀಸ್ ಅತಿರೇಕಕ್ಕೆ ಉದಾಹರಣೆಗಳಷ್ಟೆ. ಈ ರೀತಿಯ ಪೊಲೀಸ್ ದರ್ಪ, ದೌರ್ಜನ್ಯಗಳು ಹಿಂದೆಯೂ ನಡೆದಿವೆ. ಈಗಲೂ
ನಡೆಯುತ್ತಿವೆ. ಮುಂದೆಯೂ ನಡೆಯಬಹುದು. ಏಕೆಂದರೆ ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಅಂಥದೊಂದು ದರ್ಪ ಸಂಸ್ಕೃತಿ ಮನೆಮಾಡಿರುವಂತಿದೆ. ಅಲ್ಲದೆ ಇದು ನಮ್ಮ ರಾಜ್ಯಕ್ಕೆ ಸೀಮಿತವಾದುದೂ ಅಲ್ಲ. ಹಾಗೆ ನೋಡಿದರೆ ಉತ್ತರದ ರಾಜ್ಯಗಳಲ್ಲಿ ಇದು ತುಸು ಹೆಚ್ಚೇ ಇರಬಹುದು. ಆದರೆ ಕೋವಿಡ್ ಕಾಲಘಟ್ಟದಲ್ಲಿ ಪೊಲೀಸ್ ಅತಿರೇಕಗಳು ಅತಿರೇಕಕ್ಕೆ ಹೋಗಿರುವಂತಿದೆ. ಅಥವಾ ನಮಗೆ ಹಾಗೆ ಭಾಸವಾಗುತ್ತಿರಲೂಬಹುದು.

ನಾವು ಮನೆಯಲ್ಲಿ ನಮ್ಮ ಪಾಡಿಗೆ ಇರುತ್ತೇವೆ. ಆದರೆ ಹೊರಗೆ, ಅದೂ ನಮ್ಮ ವಾಹನದಲ್ಲೆ ಹೋದರೂ ನಾವೆಲ್ಲ ಬೇರೆ ಬೇರೆ. ಅಥವಾ ಪೊಲೀಸರ ದೃಷ್ಟಿಯಲ್ಲಿ ಹಾಗೆ. ಏಕೆಂದರೆ ಹೊರಗೆ ಹೋದಾಗ ನಾವು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಪ್ಪೋಣ. ಆದರೆ ಕಾರಿನಲ್ಲೂ ಇದು ಕಡ್ಡಾಯ. ಇಲ್ಲದಿದ್ದರೆ ಮಾರ್ಷಲ್
ಗಳು ಹಿಡಿದು ದಂಡ ಜಡಿದೇ ಬಿಡುತ್ತಾರೆ. ಯಾವ ವಿವರಣೆಯನ್ನು ನೀಡುವಂತಿಲ್ಲ. ಅವರು ಕೇಳುವುದೂ ಇಲ್ಲ. ಈ ವಿಷಯದಲ್ಲಿ ಅವರು ಕಟ್ಟುನಿಟ್ಟು.

ಅದೇ ರೀತಿ ಲಾಕ್‌ಡೌನ್ ಕಾಲದಲ್ಲಿ ಹೊರಗೆ ಓಡಾಡುವಂತಿಲ್ಲ. ಒಮ್ಮೆ ಹಾಗೆ ಮಾಡಿದರೆ ನಮ್ಮ ವಾಹನಗಳಿಗೆ ಜಪ್ತಿ ಭಾಗ್ಯ. ದಂಡ ಕಟ್ಟಿ ಕೋರ್ಟ್‌ನಲ್ಲಿ
ಬಿಡಿಸಿಕೊಂಡು ಬರಬೇಕು. ಆ ವೇಳೆಗೆ ಅವು ಮಳೆಯಲ್ಲಿ ನೆಂದು, ಬಿಸಿಲಲ್ಲಿ ಬೆಂದು, ಬಣ್ಣಹೋಗಿ ಭೂತಾಕಾರವಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ ಗುಜರಿಗೆ ಹೋಗುವ ಸ್ಥಿತಿಯಲ್ಲಿ ಇದ್ದರೂ ಅಚ್ಚರಿ ಇಲ್ಲ. ಆದರೆ ಕಾನೂನು ಅಂದರೆ ಕಾನೂನು. ತುರ್ತು ಕೆಲಸ ಇತ್ತು, ಆಸ್ಪತ್ರೆಗೆ ಹೋಗಬೆಕಿತ್ತು, ಔಷಧ ತರಬೇಕಿತ್ತು ಎಂದು ಏನೇ ಹೇಳಿದರೂ ಬಹುತೇಕ ಸಂದರ್ಭಗಳಲ್ಲಿ ಅವರಿಗೆ ಅವೆಲ್ಲ ನೆಪದಂತೆಯೇ ತೋರುತ್ತದೆ.

ಇಷ್ಟು ಮಾತ್ರವಲ್ಲದೆ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರಿಂದ ಬಯ್ಗುಳ ಕೇಳಬೇಕು. ಹೊಡೆತ ತಿನ್ನಬೇಕು. ಇಲ್ಲವೆ ಪಾಠ ಕೇಳಬೇಕಾದ ಶಿಕ್ಷೆ ಬೇರೆ. ಈ ಕರೋನಾ ಕಾಲದಲ್ಲಿ ದೇಶಾದ್ಯಂತ ಪೊಲೀಸ್ ದೌರ್ಜನ್ಯದಿಂದ ಡಜನ್ ಗೂ ಹೆಚ್ಚು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಬಂದಿದೆ. ಇನ್ನು ಪೆಟ್ಟು ತಿಂದು ನರಳಿದವರೆಷ್ಟೋ. ಬೇರೆ ಬೇರೆ ರೀತಿಯ ಶಿಕ್ಷೆ ಅನುಭವಿಸಿದವರೆಷ್ಟೋ. ಇನ್ನು ಈ ಪೊಲೀಸ್ ಮಹಾನುಭಾವರು ಬೀದಿ ಬದಿ ವ್ಯಾಪಾರಿಗಳ ಮೇಲೆ ತೋರುವ ದರ್ಪ ನೋಡಬೇಕು.

ಪೊಲೀಸ್ ವಾಹನ ಎಲ್ಲಿಂದಲೋ ಬಂದರೆ ಸಾಕು. ಅಲ್ಲಿದ್ದ ಸಣ್ಣಪುಟ್ಟ ವ್ಯಾಪಾರಿಗಳಿಗೆ ನಡುಕ. ಕ್ಷಣಮಾತ್ರದಲ್ಲಿ ಇಡೀ ವಾತಾವರಣವನ್ನು ಬದಲಾಗಿಬಿಡುತ್ತದೆ. ರಸ್ತೆಪಕ್ಕ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದವರನ್ನೆಲ್ಲ ಕ್ಕಲೆಬ್ಬಿಸಿಬಿಡುತ್ತಾರೆ. ಅಥವಾ ಆ ವ್ಯಾಪಾರಿಗಳೇ ಸುರಕ್ಷಿತ ಸ್ಥಳವನ್ನು ಹುಡುಕಿ ಓಡಿಹೋಗುತ್ತಾರೆ. ಇಲ್ಲದಿದ್ದರೆ ಇವರು ವಸ್ತುಗಳನ್ನು ಹಾಳುಮಾಡಲೂ ಹೇಸುವುದಿಲ್ಲ. ಏಕೆಂದರೆ ಅದು ಅವರದೂ ಅಲ್ಲ, ಅವರಪ್ಪನದು ಆಗಿರುವುದಿಲ್ಲ. ಇನ್ನೂ ತಮಾಷೆಯ ವಿಷಯ ಏನೆಂದರೆ, ಅಲ್ಲಿ ವ್ಯಾಪಾರ ನಿಷೇಧ ಎಂದೇ ಇಟ್ಟುಕೊಳ್ಳೋಣ. ಆದರೆ ವ್ಯಾಪಾರ ಮಾಡಲು ಮೊದಲು ಬಿಟ್ಟಿದ್ದೇಕೆ? ಅನಂತರ ಬಂದು ಎಬ್ಬಿಸುವುದೇಕೆ? ಇದು ‘ಮುಂದೆ ಓಡು, ಹಿಂದೆ ಹಿಡಿ’ ಎನ್ನುವ ಮಾತಿನಂತೆ ಅಷ್ಟೆ.

ನಮ್ಮ ಮನೆಯ ಬಳಿ ಇರುವ ಕಿರಾಣಿ ಅಂಗಡಿಯವನ ಕಥೆ ಕೇಳಿದರೆ ನಗಬೇಕೊ ಅಳಬೇಕೊ ಗೊತ್ತಾಗುವುದಿಲ್ಲ. ಕೋವಿಡ್ ನಿಯಮಗಳನ್ನು ಅಂಗಡಿಗಳವರು ಪಾಲಿಸಬೇಕು ಎಂಬುದೇನೊ ಸರಿ. ಸಾಮಾಜಿಕ ಅಂತರ ಕಾಪಾಡಲು ಒಂದಷ್ಟು ವ್ಯವಸ್ಥೆ ಮಾಡಬಹುದು. ಆದರೆ ವ್ಯಾಪಾರ ವಹಿವಾಟಿಗೆ ಸೀಮಿತ ಅವಧಿ ನಿಗದಿ ಮಾಡಿರುವಾಗ ಗ್ರಾಹಕರು ಮುತ್ತುವುದು ಸಹಜ. ಅವರ ನಿಯಂತ್ರಣ ಕಷ್ಟ. ಪೊಲೀಸರು ಪರಿಶೀಲನೆಗೆ ಬಂದಾಗ ಗ್ರಾಹಕರು ಮಾಸ್ಕ್ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಅಂಗಡಿಯನ್ನೇ ಕೆಲವು ದಿನಗಳ ಕಾಲ ಮುಚ್ಚಿಸಿಬಿಡುವುದೇ? ಜನರು ಮಾಸ್ಕ್ ಹಾಕದಿದ್ದರೆ ಪಾಪ ಅಂಗಡಿಯವನೇನು ಮಾಡಬೇಕು. ಯಾರದೋ
ತಪ್ಪಿಗೆ ಯಾರಿಗೋ ಶಿಕ್ಷೆ. ಹೋಟೆಲ್‌ನವರದೂ ಅದೇ ಕಥೆ.

ಅಲ್ಲಿ ಆರೋಗ್ಯ, ನೈರ್ಮಲ್ಯ ಕಾಪಾಡಬೇಕು ಎಂಬುದು ನಿಜ. ಆದರೆ ಮರದ ಮೇಲಿಂದ ಎಲೆ ಬಿದ್ದಿತು, ಧೂಳು ಹಾರಿತು ಎಂಬ ಕಾರಣ ನೀಡಿ ಸಿಕ್ಕಾಪಟ್ಟೆ ದಂಡ ವಿಽಸುವುದು, ಮುಚ್ಚಿಸುವುದೇ ಮೊದಲಾದ ಬಗೆಯ ಕಿರುಕುಳ ನೀಡಿದರೆ ಏನು ಮಾಡಬೇಕು. ಈ ಸಹವಾಸವೇ ಬೇಡ ಎಂದು ಅನೇಕ ಹೋಟೆಲ್‌ಗಳವರು ಬಾಗಿಲೆಳೆದುಬಿಟ್ಟಿರುವುದೂ ಉಂಟು. ಇವೆಲ್ಲ ಕಿರುಕುಳ, ಕಿರಿಕಿರಿಯಿಂದ ಪಾರಾಗಲು ಕೆಲವರು ಒಳದಾರಿ ಕಂಡುಕೊಳ್ಳುತ್ತಾರೆ. ಅದೆಂದರೆ ಪೊಲೀಸರ ಕೈಬೆಚ್ಚಗೆ
ಮಾಡುವುದು. ಅನೇಕ ಬಾರಿ ಹಲವು ಪೊಲೀಸರ ಹಣ ಸುಲಿಯುವ ತಂತ್ರವೂ ಇದಾಗಿರಬಹುದು. ಲಂಚ ಎಂಬ ಮತ್ತೊಂದು ಲೋಕ ತೆರೆದುಕೊಳ್ಳುವುದು ಹೀಗೆ. ಅಂಗಡಿ ಮುಚ್ಚಿಸುವ ನಾಟಕ, ಕೆಲವು ಅಂಗಡಿಗಳು ಅವಧಿ ಮೀರಿ ತೆರೆದಿರುವುದರ ಒಳಮರ್ಮ ಇದು. ಹೀಗಾಗಿಯೇ ಇವರ ಕಿರುಕುಳದಿಂದ ಬೇಸತ್ತು ಕೆಲವು ಅಂಗಡಿಗಳವರು ಬಹಳ ಸಮಯದಿಂದ ಅಂಗಡಿಯನ್ನು ತೆರೆಯುವ ಗೋಜಿಗೇ ಹೋಗಿಲ್ಲ.

ದೊಡ್ಡ ಅಂಗಡಿಗಳವರದು ಈ ಕಥೆಯಾದರೆ ಈ ಮೊದಲು ಪ್ರಸ್ತಾಪಿಸಿದಂತೆ ಸಣ್ಣ ವ್ಯಾಪಾರಿಗಳದು ಬೇರೆಯದೇ ವ್ಯಥೆ. ಪೊಲೀಸರು ಬಂದ ಕೂಡಲೇ ಅವರು
ತಮ್ಮ ಸರಂಜಾಮುಗಳನ್ನು ಎತ್ತಿಕೊಂಡು ಓಡಬೇಕು. ಇಲ್ಲವೆ ಕೆಲವು ಸಂದರ್ಭಗಳಲ್ಲಿ ಅಲ್ಲಿಗೆ ಬರುವ ಪೊಲೀಸಪ್ಪನ ಕೈಗೆ ಇಪ್ಪತ್ತೋ, ನಲವತ್ತೋ ಹಣವನ್ನು ತುರುಕಬೇಕು. ಇವರೊಂಥರ ಅನಽಕೃತ ಪಿಗ್ಮಿ ಏಜೆಂಟರಿದ್ದರಂತೆ. ಕೆಲವು ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಮಾರುಕಟ್ಟೆಯಲ್ಲಿ ಒಂದು ಸುತ್ತು ಹೊಡೆದರೆ ಸಾಕು. ಮನೆಗೆ ಬೇಕಾದ ತರಕಾರಿ, ಹಣ್ಣು, ಹೂವು ಎಲ್ಲವೂ ಅವರ ಚೀಲಕ್ಕೆ ಬಂದು ಬೀಳುತ್ತವೆ.

ತಾವೇ ಕೈಹಾಕಿ ತೆಗೆದುಕೊಳ್ಳುವುದಕ್ಕೂ ಕೆಲವರು ಸಂಕೋಚಪಡುವುದಿಲ್ಲ. ಅಷ್ಟು ಮಾತ್ರವಲ್ಲದೆ ಹತ್ತಿರದಲ್ಲಿ ಹೋಟೆಲ್ ಇದ್ದರೆ ಪುಕ್ಕಟೆಯಾಗಿ ಹಸಿವನ್ನು
ನೀಗಿಸಿಕೊಳ್ಳುವವರೂ ಉಂಟು. ಸಾಲದ್ದಕ್ಕೆ ಉಂಡೂ ಹೋದ ಕೊಂಡೂ ಹೋದ ಎಂಬ ಮಾತಿನಂತೆ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೊಗುವ ಭೂಪರೂ ಇದ್ದಾರೆ. ಇವರ ಮುಂದೆ ಪಾಪ ಆ ಬಡ ವ್ಯಾಪಾರಿಗಳು, ಭಿಕ್ಷುಕರೇ ವಾಸಿ. ಇವರು ಆ ಲೆಕ್ಕದಲ್ಲಿ ಅವರಿಗಿಂತ ಕಡೆ.

ನಮ್ಮ ಪೊಲೀಸರನೇಕರ ವರ್ತನೆ ಹೆಚ್ಚೂ ಕಡಿಮೆ ಹೀಗೆಯೇ ಇರುತ್ತದೆ. ಒಂದು ಕಡೆ ದರ್ಪ, ದೌಲತ್ತು. ಇನ್ನೊಂದು ಕಡೆ ದೌರ್ಜನ್ಯ, ಕಿರುಕುಳ, ಹಿಂಸೆ. ಮತ್ತೊಂದೆಡೆ ಲಂಚಾವತಾರ, ಭ್ರಷ್ಟಾಚಾರ. ಮತ್ತೆ ಕೆಲವರು ಇದು ಸಾಲದೆಂಬಂತೆ ದುಷ್ಟರೂ, ಗರ್ವಿಷ್ಟರೂ ಆಗಿರುತ್ತಾರೆ. ತಾವು ಪೊಲೀಸರಾಗಿರುವುದೇ ಅಽಕಾರ ಚಲಾಯಿಸಲು ಎಂದು ಭಾವಿಸುವ ಇವರಲ್ಲಿ ವಿಶ್ವಾಸ ಇಡುವುದೆಂತು? ಇವರು ಜನರಿಗೆ ಹೇಗೆ ರಕ್ಷಣೆ ಕೊಟ್ಟಾರು ಎಂಬ ಪ್ರಶ್ನೆ ಉದ್ಭವಿಸುವುದು
ಸಹಜ. ಹಾಗೆಂದು ಎಲ್ಲ ಪೊಲೀಸರೂ ಹೀಗೇ ಇರುತ್ತಾರೆ ಎಂದು ಸಾರಾಸಗಟಾಗಿ ಹೇಳಲು ಬರುವುದಿಲ್ಲ. ಜನಸ್ನೇಹಿ, ಜನಾನುರಾಗಿ, ಜನರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ, ಪೊಲೀಸ್ ಠಾಣೆಗಳಲ್ಲಿ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆ ತಂದಿರುವ ಪೊಲೀಸರ ಹೇರಳ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.

ಆದರೆ ಪೊಲೀಸರೆಂದ ತಕ್ಷಣ ನಮ್ಮ ಕಣ್ಣೆದುರಿಗೆ ಬರುವುದೇ ಮೇಲೆ ವಿವರಿಸಿದಂಥ ಚಿತ್ರಣಗಳು. ಆ ಕಾರಣಕ್ಕಾಗಿಯೇ ಜನರು ಪೊಲೀಸ್ ಠಾಣೆಗೆ ಹೋಗುವು ದಕ್ಕೆ ಹೆದರುತ್ತಾರೆ. ನ್ಯಾಯ ಗುವುದಕ್ಕಿಂತ ಹೆಚ್ಚಾಗಿ ದೌರ್ಜನ್ಯ, ದರ್ಪದಿಂದ ಪಾರಾಗಿ ಬಂದರೆ ಸಾಕಪ್ಪ ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಇದಕ್ಕೆ ಪೊಲೀಸ್ ಇಲಾಖೆಯಲ್ಲಿರುವ ಕೆಲವು ಲೋಪದೋಷಗಳು, ಕೊರತೆಗಳು ಇತ್ಯಾದಿಗಳ ಕಾರಣಗಳನ್ನು ನೀಡುವುದುಂಟು. 2016ರ ಅಂಕಿ ಅಂಶಗಳ ಪ್ರಕಾರ, (ಇದರಲ್ಲಿ ಈಗ ಒಂದಷ್ಟು ಬದಲಾವಣೆ ಆಗಿರಬಹುದು) ನಮ್ಮ ರಾಜ್ಯದಲ್ಲಿ ಒಟ್ಟು ಮಂಜೂರಾದ ಪೊಲೀಸ್ ಸಿಬ್ಬಂದಿಯ ಸಂಖ್ಯೆ 110210. ಆದರೆ ಈಗ ಇರುವುದು 70934. ಅಂದರೆ 39276 ಸಿಬ್ಬಂದಿಯ ಕೊರತೆ ಇದೆ.

ಇದು ಒಟ್ಟು ಖಾಲಿ ಹುದ್ದೆಗಳ ಶೇ.36ರಷ್ಟು. ಉತ್ತರಪ್ರದೇಶದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಎರಡನೇ ಸ್ಥಾನದಲ್ಲಿ
ಕರ್ನಾಟಕವಿದೆ. ಹೀಗಾಗಿ ಪೊಲೀಸರ ಮೇಲೆ ಕೆಲಸದ ಒತ್ತಡ ವಿಪರೀತವಾಗಿದೆ. ಇದೇ ಕಾರಣಕ್ಕಾಗಿ ಅವರು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ, ರಜೆ ಇಲ್ಲದೆ ದುಡಿಯಬೇಕಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಅವರ ದಕ್ಷತೆ, ಕಾರ್ಯಕ್ಷಮತೆ ಕುಗ್ಗುತ್ತದೆ ಎಂಬುದೇನೊ ಸರಿ. ಆದರೆ ಅವರ ಆಕ್ಷೇಪಾರ್ಹ ಹಾಗೂ ಅನುಚಿತ, ಅಸೌಜನ್ಯದ ನಡವಳಿಕೆಗೆ ಇದು ಕಾರಣವಾಗಬೇಕಿಲ್ಲ. ಅದು ಸೂಕ್ತ ಸಮರ್ಥನೆಯೂ ಆಗದು.

ಆದರೂ ಯಾಕೆ ಹೀಗಾಗುತ್ತಿದೆ? ಇತ್ತೀಚೆಗೆ ನಡೆದ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಪೊಲೀಸ್ ಅಽಕಾರಿ ರವಿ ಚನ್ನಣ್ಣವರ ಅವರು ಹೇಳಿದ್ದು ‘ನಮ್ಮ ಪೊಲೀಸ್ ಇಲಾಖೆ ಈಗ ಕಾರ್ಯ ನಿರ್ವಹಿಸುತ್ತಿರುವುದು ಓಬಿರಾಯನ ಕಾಲದ ನಿಯಮಗಳ ಪ್ರಕಾರ. ಇದರಲ್ಲಿ ದಮನ ಮಾಡುವ ನೀತಿಗೇ ಹೆಚ್ಚು ಒತ್ತಿದೆ.
ಆದ್ದರಿಂದ ಪೊಲೀಸ್ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾದ ಅಗತ್ಯವಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿ ಅಲ್ಲಿ ೨೦೦೬ರಲ್ಲಿ ತೀರ್ಪು ಬಂದಿದೆ. ಪೊಲೀಸ್ ಇಲಾಖೆಗಳಲ್ಲಿ ಸುಧಾರಣೆಗೆ ಹತ್ತು ಹಲವು ಶಿಫಾರಸುಗಳನ್ನು ಮಾಡಲಾಗಿದೆ.

ಮಾದರಿ ಪೊಲೀಸ್ ಕಾಯಿದೆಯನ್ನು ರೂಪಿಸಲಾಗಿದೆ. ಪೊಲೀಸ್ ನೇಮಕ, ಅವರ ಜವಾಬ್ದಾರಿಗಳು, ಉತ್ತರದಾಯಿತ್ವ, ಸೇವಾ ನಿಯಮಗಳು ಇತ್ಯಾದಿಗಳನ್ನು
ಇದು ಒಳಗೊಂಡಿದೆ. ಆದರೆ ಈ ನಿಯಮ ಆದಷ್ಟು ಬೇಗ ಜಾರಿಗೆ ಬಂದರೆ ಈ ಸಮಸ್ಯೆಗಳು ಬಹುತೇಕವಾಗಿ ಬಗೆಹರಿಯಬಹುದು. ಆದರೆ ಗ್ಯಾರಂಟಿ ಇಲ್ಲ.
ಒಟ್ಟಾರೆಯಾಗಿ ಪೊಲೀಸರ ಕಾರ್ಯವೈಖರಿ, ಮನಸ್ಥಿತಿ, ಮನೋಭಾವ ಬದಲಾಗಬೇಕು. ಯಾವುದೇ ಕಾರಣದಿಂದ ಪೊಲೀಸ್ ಠಾಣೆಗೆ ಹೋದರೆ ಸೌಜನ್ಯದ ನಡವಳಿಕೆ ಮೊದಲು ಕಂಡುಬರಬೇಕು. ಪೊಲೀಸರೆಂದರೆ ಜನರ ಮನದಲ್ಲಿ ಗಾಬರಿ, ಭಯಭೀತಿ, ಅವಿಶ್ವಾಸ, ತಾತ್ಸಾರ, ತಿರಸ್ಕಾರದ ಭಾವನೆ ಮೊದಲು ಹೋಗಬೇಕು. ಆದರೆ ಇದು ಏಕಾಏಕಿ ಆಗುವುದೂ ಅಲ್ಲ. ಒಬ್ಬರು ಮಾಡುವ ಕೆಲಸವೂ ಇದಲ್ಲ.

ಸರಕಾರ, ಪೊಲೀಸ್ ಇಲಾಖೆ, ಸ್ವತಃ ಪೊಲೀಸ್ ಸಿಬ್ಬಂದಿ ಎಲ್ಲರೂ ಒಟ್ಟಾಗಿ ಈ ಕೆಲಸ ಮಾಡಬೇಕು. ಪೊಲೀಸರ ಕಾರ್ಯವೈಖರಿ, ಧೋರಣೆ, ಮನಸ್ಥಿತಿ ಯಂತೂ ಖಂಡಿತವಾಗಿ ಬದಲಾಗಲೇಬೇಕು.

ನಾಡಿಶಾಸ್ತ್ರ
ಪೋಲಿ, ಪೊಲೀಸ್‌ಗೆ ಒಂದು ದೀರ್ಘದ ಅಂತರ
ಅರಿಯಬೇಕಲ್ಲವೆ ಅವರು ಈ ಮಾತನ್ನು ನಿರಂತರ
ಆರಕ್ಷಕರು ಶಿಷ್ಟರಕ್ಷಕರು, ದುಷ್ಟಶಿಕ್ಷಕರಾಗುವ ಬದಲು
ಭಕ್ಷಕರಾದರೆ ಯಾರಿಗೆ ಕೊಡುವುದು ಅಹವಾಲು?