ಮಿಶ್ರಾ ಕೃಷಿ
ಕವಿತಾ ಮಿಶ್ರಾ
mishraformkvt@gmail.com
ಕೃಷಿಯ ಹುಚ್ಚೇ ಹೀಗೆ. ನಮ್ಮ ಬಳಿ ಎಷ್ಟೇ ಹಣವಿದ್ದರೂ ಒಮ್ಮೆ ಆಸಕ್ತಿ ಬಂತು ಅಂದರೆ ವಜ್ರದ ವ್ಯಾಪಾರಿಯೂ ಕೃಷಿಗೆ ಮರಳುತ್ತಾನೆ ಅನ್ನುವುದಕ್ಕೆ ಸಾಕಷ್ಟು ಸಾಕ್ಷಿ ಇದೆ. ಬುದ್ಧಿವಂತಿಕೆ ಏನೆಂದರೆ ನಾವು ಯಾವುದೇ ಕೃಷಿ ಮಾಡುವುದಾದರೂ ಒಂದು ಉಪಬೆಳೆ ಇರಲೇಬೇಕು.
‘ಅಯ್ಯೋ… ಕೊನೆಗೌಡ ಬರೋ ಹೊತ್ತಾಯ್ತು! ಇನ್ನೂ ಆಸ್ರಿಗೆ (ಬೆಳಗಿನ ತಿಂಡಿ) ಮಾಡಿಲ್ಲ. ಕೊನೆಗೌಡ ಬಂದಮೇಲೆ ಯಾವ ಕೆಲಸವೂ ಆಗಲ್ಲ. ಅವನಿಗೆ
ಆಸ್ರಿಗೆ ಮಾಡೋದೇ ದೊಡ್ಡ ಕೆಲಸವಾಗಿ ಬಿಡುತ್ತೆ’ ಅನ್ನೋದು ಈ ಕೊನೆ ಕೊಯ್ಲಿನ ಸಮಯಕ್ಕೆ ಮಲೆನಾಡಿನ ಹೆಚ್ಚಿನ ಮನೆಗಳಲ್ಲಿನ ಮಹಿಳೆಯರ ಗೋಳು. ಸಾಮಾನ್ಯವಾಗಿ ಡಿಸೆಂಬರಿನಿಂದ ಪ್ರಾರಂಭವಾಗಿ ಜನವರಿ- ಫೆಬ್ರವರಿ ಸಮಯಕ್ಕೆ ಮುಗಿಯುವ ಈ ಕೊನೆ ಕೊಯ್ಲು ಮಲೆನಾಡಿಗರಿಗೆ ಒಂದು ರೀತಿಯಲ್ಲಿ ಹಬ್ಬವೇ ಊಹುಂ… ಈ ಮಾರಿಹಬ್ಬ ಅಂತ ಹೇಳುತ್ತಾರಲ್ಲ, ಹಾಗೆ.
ಅಡಕೆ ಕೊನೆಯನ್ನು ಮರದಿಂದ ಕೊಯ್ಯುವವನಿಗೆ ಕೊನೆಗೌಡ ಅಂತ ಹೇಳಲಾಗುತ್ತೆ. ಹೇಗೆ ಸೈನಿಕರಿದ್ದರೆ ಮಾತ್ರ ರಾಜ್ಯವೋ ಹಾಗೆ ಕೊನೆಗೌಡ ನಿದ್ದರೆ ಮಾತ್ರ ಕೊನೆಕೊಯ್ಲು. ಅಡಕೆ ವಾರ್ಷಿಕ ಬೆಳೆ ಅನ್ನೋದು ತಿಳಿದೇ ಇದೆ. ಆದರೆ ಈ ವಿಚಾರ ಹೇಳಲೇಬೇಕು. ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿಯೊಬ್ಬರು ಏಲಕ್ಕಿ, ಮರದಲ್ಲಿ ಬಿಡುತ್ತದೆಯೆಂದು ತಿಳಿದಿದ್ದರಂತೆ. ಅಷ್ಟೇ ಅಲ್ಲ, ಅದು ಮರದ ಮೇಲೆಯೇ ಬೆಳೆಯುತ್ತದೆ ಎಂದು ವಾದವನ್ನೂ ಮಾಡಿದ್ದರಿಂದ ಅಡಕೆ ವಾರ್ಷಿಕ ಬೆಳೆ ಅನ್ನುವುದನ್ನು ಹೇಳುವ ಅನಿವಾರ್ಯ ಎದುರಾಗಿದೆ.
ಹೇಗೆ ದೇವರು ಶಂಖ, ಚಕ್ರ, ಗಧೆ ಮೊದಲಾದ ಆಯುಧಗಳನ್ನು ಹಿಡಿದಿರುತ್ತಾನೋ ಹಾಗೆಯೇ ಕೊನೆಗೌಡನ ಆಯುಧಗಳು- ದೋಟಿ, ತಳೆ (ಮರವನ್ನು ಹತ್ತು ವಾಗ ಬಳಸುವ ಸುಲಭ ಸನ್ನಿ- ಉಪಕರಣ), ಕಡಕುಮಣೆ (ಮರ ಹತ್ತಿ ಕುಳಿತುಕೊಳ್ಳಲು ಬಳಸುವ ಉಪಕರಣ), ದೋಟಿ (ಕೊನೆಯನ್ನು ಕೊಯ್ಯುವ ಉದ್ದದ ಬಿದುರಿನ ಉಪಕರಣ), ಹಗ್ಗ (ಕೊನೆಯನ್ನು ಕೆಳಗೆ ಇಳಿಸುವುದಕ್ಕೆ ಬಳಸುತ್ತಾರೆ) ಚಿಕ್ಕದೊಂದು ಕತ್ತಿ. ಇಷ್ಟೂ ಉಪಕರಣ ಗಳನ್ನು ಹೊತ್ತು ಚುಮುಚುಮು ಚಳಿ ಯಲ್ಲಿ ಮರ ಹತ್ತುವ ಕೊನೆಗೌಡ ತನ್ನ ಉಪಕರಣಗಳಿಂದ ಕೊನೆ ಕೊಯ್ಯುತ್ತಾನೆ.
ಅಷ್ಟಾದರೆ ಕೊನೆಕೊಯ್ಲಿನ ಅಬ್ಬರ ಮುಗಿದೇ ಹೋಯ್ತೇ? ಹಾಗೆಂದು ಸುತಾರಾಂ ಅಂದುಕೊಳ್ಳಬೇಡಿ. ಇದು ಕೇವಲ ಬೇಸಿಕ್ ಸ್ಟೆಪ್. ಗೌಡ ಮರ ಹತ್ತಿ ಹಗ್ಗದಿಂದ
ಕೊನೆ ಇಳಿಸುತ್ತಿರುವಾಗ ಅದನ್ನು ಹಿಡಿಯಲು ಕೆಳಗೊಬ್ಬ ನಿಂತಿರುತ್ತಾನೆ. ಸಾಮಾನ್ಯವಾಗಿ ಹೇಳುವ ಒಂದು ಮಾತಿದೆ, ‘ಯಾಕೋ ತಲೆ ಮೇಲೆ ಆಕಾಶ ಬಿದ್ದಂತೆ ಕುಳಿತಿದ್ದೀಯ’ ಅಂತ. ಇಲ್ಲಿ ಸ್ವಲ್ಪ ಬೇರೆ; ಅಡಕೆ ಕೊನೆಯೇ ತಲೆಯ ಮೇಲೆ ಬಿದ್ದುಹೋಗುತ್ತೇನೋ ಅಂತ, ಮೇಲೆ ನೋಡುತ್ತ ಕೊನೆ ಹಿಡಿಯುವವನು ಹಗ್ಗ ಹಿಡಿದು ನಿಂತಿರುತ್ತಾನೆ.
ಅಬ್ಬಾ… ಆ ಕೊನೆಗೌಡ ಒಂದೊಂದೇ ಮರ ಹತ್ತಿ ಕೊನೆಕೊಯತ್ಯುತ್ತಾನೆ ಅಂತ ಮಾಡಿದ್ರಾ?! ಊಹುಂ… ಅದೇ ಅವನ ಸ್ಪೆಷಾಲಿಟಿ, ಒಂದು ಮರವನ್ನು ಹತ್ತಿದರೆ ಅಲ್ಲೇ ಸುತ್ತಲಿರುವ ಮೂರ್ನಾಲ್ಕು ಮರಗಳಿಗೆ ಹಾರಿ, ಅಷ್ಟೂ ಕೊನೆಗಳನ್ನು ಕೊಯ್ದಿರುತ್ತಾನೆ. ಸಾಮಾನ್ಯವಾಗಿ ಒಂದು ಅಡಕೆಯ ಕೊನೆ ಹನ್ನೆರಡರಿಂದ ಹದಿ ಮೂರು ಕೆ.ಜಿ ತೂಗುತ್ತದೆ. ಒಂದು ಎಕರೆಗೆ ಸುಮಾರು ಹತ್ತರಿಂದ ಹದಿನೈದು ಕ್ವಿಂಟಾಲ್ ಬೆಳೆ ಬರುತ್ತದೆ. ತೂಕ ಮತ್ತು ಬೆಳೆ ಮಣ್ಣಿನ ಫಲವತ್ತತೆಯ ಮೇಲೆಯೂ ನಿರ್ಧರಿತವಾಗಿರುತ್ತದೆ. ಕೊನೆ ಹಿಡಿದಾತ ಕೊನೆಯನ್ನು ನೆಲಕ್ಕೆ ಇಡುತ್ತಿದ್ದಂತೆ, ತೋಟದಿಂದ ಮನೆಯವರೆಗೆ ಅದನ್ನು ಹೊತ್ತು ಹೋಗಲು ಅಲ್ಲಿಯೇ ಜನರು ತಯಾರಾಗಿರುತ್ತಾರೆ. ಈ ಕೊನೆಕೊಯ್ಲು ಒಂದು ರೀತಿ ಫ್ಯಾಕ್ಟರಿ ಇದ್ದ ಹಾಗೆ.,.. ದೊಡ್ಡ ದೊಡ್ಡ ಚೂಳಿಗಳಲ್ಲಿ(ಬಿದಿರಿನಿಂದ ಮಾಡಿದ ದೊಡ್ಡ ಬುಟ್ಟಿ) ಕೊನೆ ಯನ್ನು ಹೊತ್ತು ಮನೆಗೆ ಸಾಗಿಸಿ ಇಳಿಸುತ್ತಿದ್ದಂತೆ, ಮನೆಯಲ್ಲಿ ಅಡಕೆಯನ್ನು ಸುಲಿಯುವವರು ಮೆಟ್ಟುಗತ್ತಿ (ಮಟ್ಟಿ ಕುಳಿತುಕೊಳ್ಳುವ ಕತ್ತಿ)ಯ ಮೇಲೆ ಕುಳಿತಿರು ತ್ತಾರೆ. ಅವರ ಕೆಲಸ ಅಡಕೆಯನ್ನು ಸುಲಿಯುವುದು ಮಾತ್ರ.
ಇನ್ನೊಬ್ಬ ಹಸಿರು ಅಡಕೆ ಮತ್ತು ಕೆಂಪು ಅಡಕೆಯನ್ನು ಬೇರ್ಪಡಿಸುತ್ತಿರುತ್ತಾನೆ. ಕೊನೆಗೌಡ ಮರದಿಂದ ಇಳಿಯುವುದು ಸಂಜೆ ನಾಲ್ಕು ಗಂಟೆಯ ನಂತರ. ಅವನ ಊಟವೂ ಆಗಲೇ… ಬೆಳಗ್ಗೆಯಿಂದ ಸಂಜೆಯವರೆಗೆ ಈ ಕಾರ್ಯ ಸರಾಗವಾಗಿ ನಡೆದ ನಂತರ ಎಷ್ಟೇ ಸುಸ್ತಾಗಿದ್ದರೂ ಮನೆಯವರು, ಬೆಳಗ್ಗೆಯಿಂದ ಸುಲಿದ ಅಡಕೆ ಯನ್ನು ನೀರಿನಲ್ಲಿ ಬೇಯಿಸಿ ತೆಗೆದು ಮರುದಿನ ಬೆಳಗ್ಗೆ ಬಿಸಿಲು ಬರುತ್ತಿರುವಂತೆ ಒಣಹಾಕುತ್ತಾರೆ.
ಈ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೊನೆಕೊಯ್ಲು ಮುಗಿದ ದಿನ ‘ಕೊನೆ ಹುಲಿಕೆ’ ಅಂತ ಮಾಡಲಾಗುತ್ತೆ. ಇದು ನಿಜವಾದ ಹಬ್ಬ. ಇಷ್ಟು ದಿನಗಳ ಕಾಲ ಕೆಲಸವನ್ನು ಮಾಡಿ ದಣಿದವರಿಗೊಂದು ಪಾರ್ಟಿ. ಕೆಲಸ ಮಾಡಿದ್ದ ಎಲ್ಲರಿಗೂ ಸಿಹಿ ಊಟವನ್ನು ಉಣಬಡಿಸಿ ಊರಿನವರಿಗೆ ಸಿಹಿ ಹಂಚುತ್ತಾರೆ. ಇಲ್ಲಿಗೆ ಕೊನೆ ಕೊಯ್ಲು ಮುಕ್ತಾಯವಾಗುತ್ತದೆ.
ಈಗೀಗ ಕೊನೆಕೊಯ್ಲಿನ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಹಲವರು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ದಿನಗಳು ಬದಲಾಗು ತ್ತಿರುವಂತೆ ಮಲೆನಾಡಿನ ಭಾಗಗಳಲ್ಲಿ ಕೆಲಸಗಾರರು ಸಿಗುತ್ತಿಲ್ಲ, ಪರಿಣತ ಕೊನೆಗೌಡರ ಅಭಾವವೂ ಕಾಡುತ್ತಿದೆ. ಸುಮ್ಮನೆ ಕಂಬ ಸುತ್ತಿ ಕಾಲ ಕಳೆಯುವವನೂ ದಿನಕ್ಕೆ ಸಾವಿರ ರೂಪಾಯಿಯ ಕೂಲಿಯನ್ನು ಕೇಳುತ್ತಿರುವುದು ನೋವಿನ ಸಂಗತಿ, ಕೆಲಸ ಆಗಬೇಕು- ಹೊಟ್ಟೆ ತುಂಬಬೇಕು ಅಂದರೆ ಕೇಳಿದಷ್ಟು ಹಣ ನೀಡಲೇ ಬೇಕು. ಹಾಗಾಗಿ ಮಲೆನಾಡಿನ ಭಾಗಗಳಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ ಅನಿವಾರ್ಯವಾಗಿದೆ. ಆ ವಿಚಾರ ಒಂದು ಕಡೆಯಿರಲಿ.
ಈಗ ಗಿಡ ನೆಟ್ಟು ನಾಳೆ ಬೆಳಗ್ಗೆ ಫಸಲು ಬರುವುದಕ್ಕೆ ಅದೇನು ಕೋರ್ಸ್ ಗುಳಿಗೆಯಲ್ಲ ಅನ್ನುವ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ. ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಕುರಿಸಾಕಾಣಿಕೆ ಹೀಗೆ ಎಲ್ಲವನ್ನೂ ಒಟ್ಟಿಗೇ ಮಾಡುವುದು ತುಂಬಾನೇ ಕಷ್ಟ. ಆದರೆ ರೈತನಾದವನು ಹಂತ ಹಂತವಾಗಿ ಕೃಷಿಯೊಂದಿಗೆ ಉಪ ಕಸುಬುಗಳನ್ನಾಗಿ ಸೇರಿಸುತ್ತ ಕೋಳಿ ಸಾಕಣೆ, ಜೇನು ಸಾಕಣೆಯನ್ನು ತಮ್ಮ ತೋಟದಲ್ಲಿ ಮಾಡಿಕೊಳ್ಳುತ್ತ ಹೋಗುತ್ತಿದ್ದಾನೆ. ಕೃಷಿಯ ಆರಂಭಿಕ ದಿನಗಳಲ್ಲಿ ನಾನೂ ಒಂಟಿಬೆಳೆ ಪದ್ಧತಿಯನ್ನು ಮಾಡಿ ಅದರಲ್ಲಿ ಲಾಭ ಪಡೆಯದೆಯೆ ಮೇಲಿನ ಎಲ್ಲ ಉಪಕಸುಬುಗಳನ್ನು ಹಂತಹಂತವಾಗಿ ಮಾಡಿಕೊಳ್ಳುತ್ತ ಅನುಭವ ಪಡೆಯುತ್ತಲೇ ಬಂದೆ. ಪರಿಣಾಮ ಲಾಭವೂ ನಿರಂತರವಾಗಿ ದೊರೆಯುತ್ತಿತ್ತು.
ಬಹುತೇಕವಾಗಿ ಸಣ್ಣ- ಅತೀ ಸಣ್ಣ ಹಿಡುವಳಿದಾರರು ಸಮಗ್ರ ಕೃಷಿ ಮಾಡಿಕೊಂಡಲ್ಲಿ ಸಾಲದಿಂದ ದೂರ ಉಳಿಯಬಹುದು ಎನ್ನುವುದು ನನ್ನ ಅನುಭವ.
ಮೊಟ್ಟೆ ಮತ್ತು ಮಾಂಸಕ್ಕಾಗಿಯೇ ಕೆಲವರು ಕೋಳಿ ಸಾಕಾಣಿಕೆಯನ್ನು ಮಾಡುತ್ತಾರೆ. ನಾನು ಇವೆರಡರ ಜತೆಗೆ ಡ್ರ್ಯಾಗನ್ ಫೈಟರ್ ಹುಂಜಗಳ ಸಾಕಣೆಯನ್ನು ಪ್ರಾರಂಭ ಮಾಡಿದ್ದೆ. ಕೋಳಿ ಸಾಕಣೆಯನ್ನು ಮಾಡುವ ಉತ್ತರ ಕರ್ನಾಟಕ ಬಹುತೇಕ ರೈತರು ಅಕ್ಟೋಬರ್ ನಂತರ ಕೋಳೀ ಕಾಳಗದಲ್ಲಿ ಸಕ್ರಿಯರಾಗುತ್ತಾರೆ. ಕಾನೂನಿಗೆ ರೀತಿಯಲ್ಲಿ ಇದು ನಿಷಿದ್ಧ ಅನ್ನುವುದು ಬೇರೆಯ ಮಾತಾದರೂ ಇಲ್ಲಿಯ ರೈತರಿಗಿದೊಂದು ಹವ್ಯಾಸ. ಈ ತಳಿಗಳಲ್ಲಿ ಕಕ್ಕೇರಾ ಬೆರಸಾ, ಸೇಲಂ ಬೆರಸಾ, ಹೊಂಗೋಲ ಬೆರಸಾ ಅತಿ ಮುಖ್ಯವಾದದ್ದು. ಈ ತಳಿಗಳು, ಮಾಂಸ ಮೊಟ್ಟೆಗಳಿಂದ ಬರುವ ಆದಾಯಕ್ಕಿಂತಲೂ ಹೆಚ್ಚಿನ ಆದಾಯ ನೀಡುತ್ತದೆ.
ಕೃಷಿ ಕಾಯಕದ ಪೂರ್ವದಲ್ಲಿ ನಾನು ಗೃಹಿಣಿಯಾಗಿ ಊರಿನಲ್ಲಿದ್ದೆ. ಹಳ್ಳಿ ಅಂದರೆ ಅಲ್ಲಿ ಎಲ್ಲ ರೀತಿಯ ಮಹಿಳೆಯರೂ ಇದ್ದೇ ಇರುತ್ತಾರೆ. ಕೆಲಸವಿಲ್ಲದಾಗ ಪಕ್ಕದ ಮನೆಯ ಕಥೆ, ಇನ್ನೊಬ್ಬರ ಕಥೆ, ನಿನ್ನೆಯ ಧಾರವಾಹಿಯಲ್ಲಿ ಏನಾಯ್ತು? ಅನ್ನುವ ಕುತೂಹಲಕಾರೀ ಕಥೆಗಳು, ಅವರ ಮನೆಯ ಅತ್ತೆ ಬೈದಿದ್ದು, ಗಂಡ ಗಲಾಟೆ ಮಾಡಿದ್ದು…. ಹೀಗೆ ಎಲ್ಲ ಕಥೆಗಳನ್ನೂ ಕೇಳಬೇಕಾದ ಪರಿಸ್ಥಿತಿಯಿತ್ತು.
ವಲ್ಲದ ಮನಸ್ಸಿನಿಂದ ಕೇಳಬೇಕಾದ್ದು ಹಣೆಬರಹವಾಗಿತ್ತು. ಇಂತಹಾ ವಿಚಾರಳಿಂದ ಬೇಸತ್ತು ಸಹವಾಸವೇ ಬೇಡ ಅಂತ ನಿರ್ಧಾರ ಮಾಡಿ ತೋಟದಲ್ಲೊಂದು ಮನೆಯನ್ನು ಮಾಡಿದ್ದೆ. ಮೊದಮೊದಲು ಈ ಪರಿಸರ ಕಷ್ಟ ಅಂತ ಅನಿಸುತ್ತಿದ್ದರೂ ನಂತರದ ದಿನಗಳಲ್ಲಿ ಇದಕ್ಕೇ ಹೊಂದಿಕೊಂಡಿದ್ದೆ. ಇಲ್ಲಿ ಊರಿನ ಸುದ್ದಿಯನ್ನು, ಮನೆಹಾಳು ವಿಚಾರಗಳನ್ನು ಕಿವಿಯಲ್ಲಿ ಊದುವವರು ಇರಲಿಲ್ಲ. ಮಾತನಾಡಬೇಕೆಂದರೆ ನನ್ನ ಹಸುಗಳಿದ್ದವು, ಏನಾದರೂ ಹೇಳಿಕೊಳ್ಳಬೇಕೆಂದರೆ ನನ್ನ ಸುತ್ತಲಿನ ಪರಿಸರ ಕಿವಿಯಾಗುತ್ತಿತ್ತು. ಇವುಗಳ ನಿರಂತರ ಸಂಪರ್ಕ- ಕೃಷಿಯ ಸತತ ಅಧ್ಯಯನದಿಂದ ಕೃಷಿಯಲ್ಲಿ ಒಂದು ಸ್ಥಾನ ಸಿಗಲು ಸಾಧ್ಯವಾಯಿತು.
ಒಮ್ಮೆ ಮಹಾರಾಷ್ಟ್ರದ ಲಾತೂರು ಜಿಲ್ಲೆಯಿಂದ ಗ್ರೋಯಾ ಹೆಸರಿನ ವಜ್ರದ ವ್ಯಾಪಾರಿಯೊಬ್ಬರು ಬಂದಿದ್ದರು. ಆತನಿಗೆ ತನ್ನ ದಿನನಿತ್ಯದ ವಹಿವಾಟಿನಲ್ಲೇ ಲಕ್ಷಾಂತರ ಲಾಭವಾಗುತ್ತಿತ್ತು. ಆದರೆ ಆತ ನಿಗೆ ಅದೇಕೋ ಕೃಷಿ ಮಾಡುವ ಹುಚ್ಚು. ಇದಕ್ಕಾಗಿ ಲಾತೂರಿನ ಸುತ್ತಮುತ್ತ ಸಮೀಕ್ಷೆ ಮಾಡಿ ಒಂದಷ್ಟು ಜಮೀನು ಗಳನ್ನು ಆಯ್ಕೆ ಮಾಡಿ ನನ್ನನ್ನು ಬರಹೇಳಿದ್ದ. ನಾನು ಜಮೀನನ್ನು ಪರಿಶೀಲನೆ ಮಾಡಿ ಒಂದೆರಡು ಜಮೀನುಗಳು ಶ್ರೀಗಂಧಕ್ಕೆ ಸೂಕ್ತವಾಗಿದೆ ಎಂದು ಸಲಹೆ ನೀಡಿದ್ದೆ. ಆ ಜಮೀನುಗಳನ್ನು ರೈತರು ಮಾರಾಟ ಮಾಡುವುದಕ್ಕೆ ಒಪ್ಪದಿದ್ದಾಗ 15 ವರ್ಷಕ್ಕೆ 25ಎಕರೆಗಳನ್ನು ಲೀಜ್ ಪಡೆದಿದ್ದರು.
ಅಲ್ಲಿ ಶ್ರೀಗಂಧದ ಜತೆಗೆ ಕೇಸರ ತಳಿಯ ಮಾವನ್ನು ನಾಟಿ ಮಾಡಲಾಯಿತು. ಶ್ರೀಗಂಧಕ್ಕೆ ಆಶ್ರಯ ಸಸ್ಯವಾಗಿ ಮಾವಿನ ಜತೆಗೆ ಸರ್ವೆ ಸಸ್ಯಗಳನ್ನೂ ನಾಟಿ ಮಾಡಲಾಗಿತ್ತು. ಈಗ ಈ ಮರಗಳು ಅದ್ಭುತವಾಗಿ ಬೆಳೆದು ನಿಂತಿವೆ. ಮೊದಲು ಆತನಿಗೆ ಶ್ರೀಗಂಧದ ಬೆಳೆಯ ಬಗ್ಗೆ ಅನುಮಾನವಿದ್ದರೂ ಉತ್ತಮವಾಗಿ ಮರಗಳನ್ನು ಬೆಳೆಸಿದ್ದರು. ಈಗಲೂ ನಾನು, ಪ್ರತೀ ಆರು ತಿಂಗಳಿಗೊಮ್ಮೆ ಆತನ ಕೃಷಿಭೂಮಿಗೆ ಹೋಗಿ ಮಾರ್ಗದರ್ಶನವನ್ನು ಮಾಡಿ ಬರುತ್ತಿದ್ದೇನೆ. ಅವರೂ ಅಷ್ಟೆ ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಕೃಷಿಯಲ್ಲಿ ಆವರು ಹೆಸರು ಫೇಮಸ್ ಆಗಿ ಆತನ ತೋಟವನ್ನು ನೋಡುವು ದಕ್ಕೆಂದೇ ಜನರು ಬರುತ್ತಾರೆ.
ತೋಟಕ್ಕೆ ನೀರು ಹಾಯಿಸಲು ದೊಡ್ಡ ಹೊಂಡ ಮಾಡಿರುವುದನ್ನು ನೋಡಿ ಅದರಲ್ಲಿ ಮೀನು ಸಾಕಣೆಯನ್ನೂ ಮಾಡಬಹುದಲ್ಲ ಅಂತ ಹೇಳಿದ ತಕ್ಷಣವೇ ಅದರ ಕುರಿತು ಕ್ರಮ ತೆಗೆದುಕೊಂಡು ಅಲ್ಲಿ ಮೀನು ಕೃಷಿಯನ್ನೂ ಪ್ರಾರಂಭಿಸಿದ್ದರು. ಅವರ ಆಸಕ್ತಿ ನೋಡಿ ಮೀನುಗಾರಿಕಾ ತಜ್ಞರ ನೆರವನ್ನೂ ಕೊಡಿಸಿದ್ದೆ. ಈಗ ಉತ್ತಮ ರೀತಿಯಲ್ಲಿ ಮೀನುಗಾರಿಕಾ ಕೃಷಿ ನಡೆಸುತ್ತಿದ್ದು ಲಾಭದ ನಿರೀಕ್ಷೆಯಲ್ಲಿಯೂ ಇದ್ದಾರೆ. ಕೃಷಿಯ ಹುಚ್ಚೇ ಹೀಗೆ. ನಮ್ಮ ಬಳಿ ಎಷ್ಟೇ ಹಣವಿದ್ದರೂ ಒಮ್ಮೆ ಆಸಕ್ತಿ ಬಂತು ಅಂದರೆ ವಜ್ರದ ವ್ಯಾಪಾರಿಯೂ ಕೃಷಿಗೆ ಮರಳುತ್ತಾನೆ ಅನ್ನುವುದಕ್ಕೆ ಇವರೇ ಸಾಕ್ಷಿ.
ಒಮ್ಮೆ ಭಾರತೀಯ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಶ್ರೀಗಂಧದ ಕೃಷಿ ಹಾಗೂ ನರ್ಸರಿ ಪ್ರಾಕ್ಟೀಸ್‌ನ ಬಗ್ಗೆ ತರಬೇತಿಯಲ್ಲಿದ್ದಾಗ ದೇಶದ ಹಲವಾರು ಭಾಗಗಳಿಂದ ತರಬೇತಿಗಾಗಿ ಬಂದಿದ್ದರು. ಆಶ್ಚರ್ಯವೆಂದರೆ ಕರ್ನಾಟಕದಿಂದ ಅಲ್ಲಿ ನಾನು ಮಾತ್ರ. ತರಬೇತಿಗೆ ನಾಗಪುರದಿಂದ ದಂಪತಿ ಬಂದಿದ್ದರು. ವಿಶೇಷ ವೆಂದರೆ ಅಲ್ಲಿ ಶ್ರೀಗಂಧದ ಬೆಳೆಯನ್ನು ಮಾಡುತ್ತಿದ್ದುದು ನಾನು ಮಾತ್ರ. ಎಂಟು ದಿನಗಳ ಆ ತರಬೇತಿ ಉತ್ಕೃಷ್ಟ ಮಟ್ಟದ್ದಾಗಿದ್ದು ತುಂಬಾ ಚೆನ್ನಾಗಿ ಕಲಿಸು ತ್ತಿದ್ದರು. ಅಲ್ಲಿ ಕಲಿಯಲು ಬಂದವರಲ್ಲಿ ಬಹುತೇಕರು ನನ್ನ ತೋಟಕ್ಕೆ ಭೇಟಿ ನೀಡಿದ್ದರು.
ಹೀಗೆ ಬಂದ ಹಲವರಲ್ಲಿ ನಾಗಪುರದ ದಂಪತಿ ನನ್ನಿಂದ ಎರಡು ಸಾವಿರ ಸಸಿಗಳನ್ನು ಕೊಂಡುಹೋಗಿದ್ದರು. ಸುಮಾರು 700 ಕಿಲೋಮೀಟರ್ ದೂರದ ಪ್ರಯಾಣ ಅವರದ್ದಾದ್ದರಿಂದ ನನ್ನ ಕಾರ್ಮಿಕರನ್ನೇ ಅವರೊಟ್ಟಿಗೆ ಕಳುಹಿಸಿ ಸಸಿಗಳನ್ನು ನಾಟಿ ಮಾಡಿಸಿದ್ದೆ. ನಾನು ಅವರಿಗೆ ಕೇವಲ ಶ್ರೀಗಂಧವನ್ನು ಬೆಳೆಸುವ ಬಗೆಯನ್ನು ಮಾತ್ರವೇ ತಿಳಿಸಿದ್ದರೂ ಅವರು ಅಂತರ ಬೆಳೆಯಾಗಿ ಕೊತ್ತಂಬರಿಯನ್ನು ಬೆಳೆದು ಲಕ್ಷಾಂತರ ರೂಪಾಯಿಗಳನ್ನು ಗಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆಯೆ ಕೊತ್ತಂಬರಿಗೆ ಕೆಜಿಗೆ 60 ರೂಪಾಯಿಗಳ ಬೆಲೆ ನಿಗದಿ ಮಾಡಿ ಮುಂಬಯಿ ಮಾರುಕಟ್ಟೆಗೆ ರವಾನಿಸುತ್ತಿದ್ದರು.
ಗೋಕಾಕ ತಾಲೂಕಿನ ಘಟಸಭಾದಲ್ಲಿ ಅಮರೇಶ ನೆಂಬ ಹುಡುಗ ಎರಡು ಎಕರೆಗಳಲ್ಲಿ ಶ್ರೀಗಂಧವನ್ನು ಬೆಳೆಯುತ್ತಿದ್ದಾನೆ. ಅದರಲ್ಲಿ ಆಶ್ರಯ ಸಸ್ಯವಾಗಿ
ಸೀಬೆ ಬೆಳೆದು ಇನ್ನೂ ಮುಂದೆಹೋಗಿ ಅಂತರ ಬೆಳೆಯಾಗಿ ನೇಪಿಯಾರ್ ಹುಲ್ಲನ್ನೂ ಬೆಳೆಸುತ್ತಿದ್ದಾನೆ. ನಾನೇನು ಅವನಿಗೆ ಹುಲ್ಲನ್ನು ಬೆಳೆಯಲು ಹೇಳಿರಲಿಲ್ಲ. ಅದು ಆತನದ್ದೇ ಐಡಿಯಾ. ಎರಡು ಎಕರೆಯಲ್ಲಿ ಹುಲ್ಲನ್ನು ಬೆಳೆದು ಕುರಿ ಸಾಕಾಣಿಕೆ ಯನ್ನೂ ಪ್ರಾರಂಭ ಮಾಡಿಕೊಂಡಿದ್ದು, ಸ್ಟಾಲ್ ಫೀಡಿಂಗ್ ವಿಧಾನವನ್ನು ಅಳವಡಿಸಿಕೊಂಡಿದ್ದಾನೆ.
ಕುರಿ ಗೊಬ್ಬರವನ್ನು ತನ್ನ ತೋಟಕ್ಕೆ ಮರುಬಳಕೆ ಮಾಡಿಕೊಳ್ಳುತ್ತಿದ್ದಾನೆ. ಹೀಗೆ ಮಾಡುತ್ತ ಕುರಿಗೆ ಮಾಡಿದ ಬಂಡವಾಳವನ್ನು ದ್ವಿಗುಣಗೊಳಿಸಿಕೊಳ್ಳುತ್ತಿ
ದ್ದಾನೆ. ನಿಮಗೊಂದು ವಿಚಾರ ತಿಳಿದಿರಲಿ… ಜಗತ್ತಿನ ಯಾವ ಬ್ಯಾಂಕುಗಳೂ ಒಂದು ಲಕ್ಷವನ್ನು ಎರಡು ಲಕ್ಷವಾಗಿ ಮಾಡಿ ಆರು ತಿಂಗಳುಗಳಲ್ಲಿ ನೀಡುವುದಿಲ್ಲ. ಅದು ಕುರಿ ಸಾಕಾಣಿಕೆಯಲ್ಲಿ ಮಾತ್ರವೇ ಸಾಧ್ಯ. ಹಾಗಾಗಿಯೇ ಕುರಿ ಸಾಕಾಣಿಕೆಯನ್ನು ಕುಬೇರ ಅಂತ ಹೇಳಲಾಗುತ್ತದೆ.
ನಾವು ಯಾವುದೇ ಕೃಷಿ ಮಾಡುವುದಾದರೂ ಯಾವುದಾದರೂ ಒಂದು ಉಪಬೆಳೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವ ಕೃಷಿಗೆ ಯಾವಾಗ ದರ ಬರುತ್ತದೆ? ಯಾವಾಗ ಇಳಿಯುತ್ತದೆಯೆಂದು ಯಾರೂ ಹೇಳುವುದಕ್ಕೆ ಸಾಧ್ಯವಿಲ್ಲ. ಮಿಶ್ರಕೃಷಿಯಾದರೆ ಒಂದು ಬೆಳೆಗೆ ಬೆಲೆ ಇಳಿದರೆ ಇನ್ನೊಂದು ಅನ್ನುವ ಮನಸ್ಥಿತಿ
ನಮ್ಮದಾಗುತ್ತದೆ. ಆರ್ಥಿಕ ಭದ್ರತೆಯೂ ನಮ್ಮದಾಗುವುದರಲ್ಲಿ ನಿಸ್ಸಂಶಯ.