ಅಭಿಮತ
ಶ್ರೀವತ್ಸ ಬಲ್ಲಾಳ, ಫಿಲಡೆಲ್ಫಿಯಾ, ಅಮೆರಿಕ
ವ್ಯಕ್ತಿಪೂಜೆ ಎನ್ನುವುದನ್ನು ಅತ್ಯಂತ ಆಳವಾದ ನೆಲೆಯಲ್ಲಿ ಕಾಣಬಹುದಾದ ಸಮಾಜದ ಮೂರು ಮಗ್ಗುಲುಗಳೆಂದರೆ ಅದು ಧರ್ಮ-ರಾಜಕೀಯ-
ಸಿನೆಮಾದ ಸಂಯೋಜನೆಯಡಿಲ್ಲಿಯೇ ಇರಬೇಕು. ಅದೂ ಭಾರತದ ಅಷ್ಟೂ ಜನಸಂಖ್ಯೆಯ ಬಹುತೇಕ ಭಾಗ ಈ ಸಂಯೋಜನೆಯ ಪರವಾಗಿದ್ದು ಕೊಂಡು ಒಂದಿಂದು ರೀತಿಯಲ್ಲಿ ವ್ಯಕ್ತಿಪೂಜೆಯ ಸಮರ್ಥನೆಯನ್ನು ಕಂಡಾಗ ನಮ್ಮ ದೇಶದಲ್ಲಿ ನಡೆಯುವ ವೈಪರೀತ್ಯಗಳು ಯಾರಿಗೂ ಆಶ್ಚರ್ಯ ವೆನಿಸದು.
ಹಾಗಾಗಿ ಧರ್ಮ-ರಾಜಕೀಯ- ಸಿನೆಮಾದ ಸಂಯೋಜನೆ ಒಂದು ರೀತಿಯಲ್ಲಿ ಸಮಾಜದ ಭಾವನೆಗಳನೆಲ್ಲ ಹಿಡಿದಿಟ್ಟಿರುವ ಕಳ್ಳು ಅಥವಾ ಕಳ್ಳಭಟ್ಟಿ
ಎಂದರೂ ಉತ್ಪ್ರೇಕ್ಷೆಯಾಗಲಾರದು. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ವ್ಯಕ್ತಿಪೂಜೆ ಸಿನೆಮಾ ನಾಯಕ-ನಾಯಕಿಯರಿಗೆ ಸಿಗುವ ಒಂದು ಬಹುದೊಡ್ಡ ಗೌರವ ಎನ್ನುವುದು ಸುಮಾರು ಎಂಬತ್ತು-ನೂರು ವರುಷಗಳಿಂದ ದಕ್ಷಿಣ ಭಾರತದ ಅಭಿಮಾನಿಗಳನ್ನು ಗಮನಿಸಿ ನೋಡಿದರೆ ಗೊತ್ತಾಗುತ್ತದೆ. ಅಂಥಾ ವ್ಯಕ್ತಿಪೂಜೆಯ ಫಲಾನುಭವಿಗಳೇ ತಮಿಳುನಾಡು, ಆಂಧ್ರಪ್ರದೇಶದಂಥ ರಾಜ್ಯಗಳನ್ನು ಮೂರು-ನಾಕು ದಶಕಗಳಿಗೂ ಮೀರಿ
ಮುನ್ನಡೆಸಿದ್ದು ಕೂಡ ಸಹಜವೇ. ಯಾಕೆಂದರೆ ನಮ್ಮಲ್ಲಿನ (ದುರ)ಅಭಿಮಾನಿಗಳ ಮತಯಾಚನೆಗೆ ಈ ನಾಯಕ- ನಾಯಕಿಯರು ಎಳ್ಳಷ್ಟೂ ಶ್ರಮ ಪಡಬೇಕಾಗಿರಲಿಲ್ಲ ಹಾಗಾಗಿ ಚುನಾವಣಾ ಪ್ರಚಾರ ಮತ್ತು ಫಲಿತಾಂಶ ಎನ್ನುವುದು ಹೂವೆತ್ತಿದಷ್ಟೇ ಸುಲಭವಾಗಿ ಆಗಿಹೋಗುತ್ತಿದ್ದ ಒಂದು
ಪ್ರಕ್ರಿಯೆಯಾಗಿತ್ತು.
ಆದರೆ ಇಷ್ಟರವರೆಗೂ ಕರ್ನಾಟಕದ ಸಿನೆಮಾ- ರಾಜಕೀಯದ ನಂಟು ಯಾರಾದರೂ ಒಬ್ಬ ಮೇರುನಟ ಮುಖ್ಯಮಂತ್ರಿ ಸ್ಥಾನದವರೆಗೂ ತಲುಪಿ ರಾಜ್ಯವನ್ನು ಮುನ್ನಡೆಸುವ ಮಟ್ಟಕ್ಕೆ ಏರಿರಲಿಲ್ಲ. ಆಗಿದ್ದಿದ್ದರೆ ಬಹುಶಃ ಡಾ.ರಾಜಕುಮಾರ್ ಮಾತ್ರ ಅಂಥಾ ಸ್ಥಾನಕ್ಕೆ ಏರಬಹುದಾಗಿತ್ತು ಮತ್ತು ವ್ಯಕ್ತಿಗತವಾಗಿ ಅವರು ಅದಕ್ಕೆ ಅರ್ಹರೂ ಇದ್ದರು ಎಂದೆನಿಸುತ್ತದೆ. ಅವರನ್ನು ಹೊರತುಪಡಿಸಿ ಹಲವು ಖ್ಯಾತ ನಟರು ಶಾಸಕರಾಗಿ, ಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ರಾಜಕೀಯದಲ್ಲಿ ಸಕ್ರಿಯರಾದದ್ದು ನಾವು ಕಂಡಿದ್ದೇವೆ.
ಹಾಗಾಗಿ ಕರ್ನಾಟಕದ ಚಿತ್ರಣ ನೆರೆಯ ರಾಜ್ಯಗಳಿಗಿಂತ ಸ್ವಲ್ಪ ಭಿನ್ನವೇ ಆದರೂ ಇಲ್ಲಿನ ಬಹುತೇಕ ಚಲನಚಿತ್ರ ರಸಿಕರು ಇಪ್ಪತ್ತು-ಮೂವತ್ತು ವರುಷಗಳ ಹಿಂದೆ ಡಾ.ರಾಜ್ ಅಭಿಮಾನಿ ಬಳಗ, ವಿಷ್ಣು ಅಭಿಮಾನಿ ಬಳಗ, ಅಂಬರೀಷ್ ಅಭಿಮಾನಿ ಬಳಗ, ಶಂಕರ್ ನಾಗ್ ಅಭಿಮಾನಿ ಬಳಗ
ಎಂದೆ ಸಂಘಟನೆಗಳನ್ನು ಒಟ್ಟು ಹಾಕಿಕೊಂಡು ತಮ್ಮ ಅಭಿಮಾನ ಮೆರೆಯುವುದರ ಜೊತೆಗೆ ಅಲ್ಲಲ್ಲಿ ಸಮಾಜ ಸೇವೆ, ರಾಜ್ಯೋತ್ಸವ, ಹಬ್ಬ-ಹರಿದಿನ ಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಿದ್ದರೆ ಇಂದಿನ ಕಳೆದ ಹತ್ತು-ಹದಿನೈದು ವರುಷಗಳ ಅವಧಿಯಲ್ಲಿ ಮಾರ್ಪಾಟುಗೊಂಡ ಈ (ದುರ)ಅಭಿಮಾನಿ ಬಳಗಗಳನ್ನು ಕಾಣುವಾಗ ವ್ಯಕ್ತಿಪೂಜೆಯ ಅಮಲು ಪರಾಕಾಷ್ಠೆಗೆ ಏರಿದೆ ಎನ್ನುವುದನ್ನು ಅರಿಯಲು ಯಾವ ವಿಶೇಷ ಜ್ಞಾನವೂ ಬೇಕಾಗಿಲ್ಲ.
ಕಳೆದಿಪ್ಪತ್ತು ವರುಷಗಳ ಚಲನಚಿತ್ರ ಮಾದರಿಯನ್ನು ಸ್ವಲ್ಪವೇ ಸೂಕ್ಷ್ಮವಾಗಿ ಗಮನಿಸಿದರೂ ನಾವು ಕಾಣುವುದು ಮಿತಿಮೀರಿದ ಹಿಂಸಾಚಾರ, ಸದ್ದು, ಗದ್ದಲ, ಅತಿರೇಕದ ಸಡಗರ, ಪ್ರೀತಿ-ಪ್ರೇಮ, ದ್ವೇಷ-ದಳ್ಳುರಿ, ಧರ್ಮ- ರಾಜಕೀಯ-ಸಮಾಜದ ಕಪೋಲಕಲ್ಪಿತ ಕಥೆಗಳನ್ನು ಆಧಾರಿಸಿ ನಿರ್ಮಾಣಗೊಂಡ ಚಿತ್ರಗಳೇ. ಮೊದಲಿನಿಂದಲೂ ಭಾರತದ ಜನಸಂಖ್ಯೆ ಅದರಲ್ಲೂ ದಕ್ಷಿಣಭಾರತದ ಸಿನಿರಸಿಕರು ತಮ್ಮ ತಮ್ಮ ಆರಾಧ್ಯದೈವಗಳೆಂದೇ ಜನಪ್ರಿಯರಾದ ನಟ- ನಟಿಯರನ್ನು ಬೆಳ್ಳಿತೆರೆಯ ಮೇಲೆ ಕಂಡು, ಸಂಭ್ರಮಿಸಿ ನಿಜಜೀವನಕ್ಕೂ ಸಿನೆಮಾಕ್ಕೂ ಯಾವುದೇ ಅಂತರವಿಲ್ಲವೆಂದು ಭ್ರಮಿಸಿಕೊಂಡು
ಅವರಂತೆಯೇ ಬಾಳಿ-ಬದುಕಿ ತಮ್ಮತಮ್ಮ ಸಂಸಾರವನ್ನೂ ತಮಗಿಷ್ಟವಾದ ಚಿತ್ರಗಳಲ್ಲಿ ಕಂಡಂತೆ ಮುನ್ನಡೆಸಿಕೊಂಡು ಹೋದದ್ದನ್ನು ಕಂಡಿದ್ದೇವೆ, ಕೇಳಿದ್ದೇವೆ.
ಕೆಲವರು ಅಂಥಾ ಒಂದು ಪ್ರಯತ್ನದಲ್ಲಿ ಯಶಸ್ವಿಯಾದರೆ ಬಹುತೇಕ ಮಂದಿ ಅತ್ತ ತಮ್ಮ ನೆಚ್ಚಿನ ನಾಯಕ-ನಾಯಕಿರ ಬೆಳ್ಳಿತೆರೆಯ ಮೇಲಿನ ಜೀವನಸುಖವನ್ನು ಅನುಭವಿಸಲಾರದೇ ಇತ್ತ ಜೀವನದಲ್ಲಿ ತಮಗಿದ್ದ ಕೆಲವೇ ಕೆಲವು ಅವಕಾಶಗಳನ್ನೂ ಚೆಲ್ಲಿ ಪಶ್ಚಾತ್ತಾಪ ಪಟ್ಟುದ್ದನ್ನೂ ಕಂಡಿದ್ದೇವೆ, ಕೇಳಿದ್ದೇವೆ. ಅಂಥಾ ನಿದರ್ಶನಗಳೇ ಸಮಾಜದೆದುರು ಸಾಕಷ್ಟಿರುವಾಗ ಇಂದಿನ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಮಾಹಿತಿ
ತಂತ್ರeನದ ಆವಿಷ್ಕಾರಗಳಿಂದ ಇನ್ನೆನ್ನಿಲ್ಲದಂತೆ ಮುನ್ನಡೆಯುತ್ತಿರುವ ಸಮಾಜದ ಒಂದು ಭಾಗ ನಮ್ಮದಾದರೆ ಅದರ ಇನ್ನೊಂದು ಮಗ್ಗುಲು ಈ
ಸಾಮಾನ್ಯ ಚಲನಚಿತ್ರ ನಟ-ನಟಿಯರ (ದುರ)ಅಭಿಮಾನಿ ಬಳಗ. ಈ ಇನ್ನೊಂದು ಮಗ್ಗುಲು ಇಂದು ಸಮಾಜದ ಒಂದು ಬಹು ದೊಡ್ಡ ಹೊರೆಯೆಂದರೆ ಖಂಡಿತಾ ತಪ್ಪಾಗಲಾರದು. ಅದಕ್ಕೆ ಪೂರಕವೆನ್ನುವಂತೆ ಸರಕಾರದ ಹಲವಾರು ಯೋಜನೆಗಳು ಬಹುತೇಕ ಯುವ ಜನಾಂಗವನ್ನು ಆಲಸಿಗಳನ್ನಾಗಿ, ಸರಕಾರದ ಉಚಿತ ಯೋಜನೆಗಳ ಫಲಾನುಭವಿಗಳನ್ನಾಗಿಸಿ ಕೊನೆಯಲ್ಲಿ ಇಂಥಾ (ದುರ)ಅಭಿಮಾನಿಗಳ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವತ್ತ ಪ್ರೇರಣೆ ನೀಡುತ್ತಿದೆ ಎನ್ನುವುದೂ ಸತ್ಯ.
ಕೊನೆಯಲ್ಲಿ ವ್ಯಕ್ತಿಪೂಜೆಗೆ ಒಳಪಡುವ ಸಾಮಾನ್ಯ ಮನುಷ್ಯರೂ ವ್ಯಕ್ತಿಪೂಜೆಯನ್ನು ಮಾಡುವ ಯುವಜನಾಂಗವೂ ಒಟ್ಟಾಗಿಯೇ ಹಳ್ಳಕ್ಕೆ ಬೀಳುತ್ತಿರುವುದು ಕೂಡಾ ಅಷ್ಟೇ ಸತ್ಯ. ಭಾರತ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ ಯುವ ಪ್ರಜೆಗಳನ್ನು ಹೊಂದಿರುವ ದೇಶ ಮತ್ತು ಮುಂದಿನ
ಮೂವತ್ತು-ನಲವತ್ತು ವರುಶಗಳವರೆಗೂ ಅದರ ಲಾಭಭಾರತಕ್ಕಲ್ಲದೆ ಇನ್ನ್ಯಾವ ದೇಶಕ್ಕೂ ಲಭಿಸಲಿಕ್ಕಿಲ್ಲ, ಲಭಿಸಲು ಸಾಧ್ಯವೂ ಇಲ್ಲ. ಒಂದು ದೇಶದ ಪ್ರಗತಿ, ಸಂಪತ್ತು, ಜಾಗತಿಕ ನಾಯಕತ್ವವೆಲ್ಲವೂ ನಿರ್ಧಾರವಾಗುವುದು ಆ ದೇಶದ ಒಟ್ಟೂ ಉತ್ಪಾದನಾ ಸೂಚ್ಯಂಕದ ಮಾಪನದಿಂದ. ಅಂಥಾ ಸೂಚ್ಯಂಕದ ಪಟ್ಟಿಯಲ್ಲಿ ಮೇಲೇರಲು ಇಂದಿನ ಯುವ ಜನಾಂಗದ ಕೊಡುಗೆಯನ್ನು ಎಷ್ಟು ನಿರೀಕ್ಷಿದರೂ ಕಡಿಮೆಯೇ. ಅಂಥಾ ಒಂದು ಸುವರ್ಣ ಘಳಿಗೆಯಲ್ಲಿ ಈ ದೇಶ ಮುನ್ನಡೆಯುತ್ತಿರುವಾಗ ಯಾವುದೇ ಒಂದು ಮೌಲ್ಯಾಧಾರಿತ ಜೀವನವನ್ನು ನಡೆಸಲು ಅನರ್ಹರೇ ಆಗಿರುವ ಬಹುತೇಕ
ಧರ್ಮ-ರಾಜಕೀಯ-ಸಿನಿತಾರೆಯರ ಅಭಿಮಾನಿಗಳೆಂದು ದುರಭಿಮಾನ ಮೆರೆಯುತ್ತಾ, ಬೆಳ್ಳಿತೆರೆಯ ಮೇಲೆಯೋ ಅಥವಾ ಭಾಷಣ, ಬರಹಗಳಲ್ಲಿ ಕಂಡು ಬರುವ ಕ್ರೌರ್ಯ, ಅಟ್ಟಹಾಸ, ಹಿಂಸೆ, ಅತ್ಯಾಚಾರಗಳೆಲ್ಲವನ್ನೂ ನಿಜಜೀವನದಲ್ಲಿ ಅದೂ ಇದೇ ವ್ಯಕ್ತಿಪೂಜೆಯ ಫಲಾನುಭವಿಗಳಾದ ನಾಯಕ-
ನಾಯಕಿಯರೆದುರೇ ನಡೆಸುವುದು ಕಾಣುವಾಗ ನಿಜಕ್ಕೂ ನಮ್ಮ ಸಮಾಜದ ಮನಸ್ಥಿತಿ ಏನೆಂದು ನಿಚ್ಚಳವಾಗುತ್ತದೆ.
ಅದಕ್ಕೆ ಹೇಳಿದ್ದು ಎಲ್ಲದಕ್ಕೂ ಮೂಲಕಾರಣ ವ್ಯಕ್ತಿಪೂಜೆಯ ಮನೋ ಭಾವನೆಯೇ. ಅದು ಮೋದಿಯೇ ಆಗಿರಲಿ ಅಥವಾ ಇನ್ನ್ಯಾವ ಧಾರ್ಮಿಕ ನಾಯಕರೇ ಇರಲಿ ಅಥವಾ ಸಿನಿಮಾ ತಾರೆಯರೇ ಇರಲಿ ಕೊನೆಯಲ್ಲಿ ಈ ಜೀವನವನ್ನು ನಡೆಸಿ ಬಾಳನ್ನು ಹಸನುಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಮನುಷ್ಯನ ಕೈಯಲ್ಲಿ ಮಾತ್ರ ಇರುವಂಥಾದ್ದು. ಯಾವುದೇ ಸಾಮಾನ್ಯ ಪ್ರಜೆಯೂ ಇನ್ನೋರ್ವ ವ್ಯಕ್ತಿಪೂಜೆಯ ಫಲದಿಂದ ತಾನು ಏರಬಲ್ಲ ಜೀವನದೆತ್ತರಕ್ಕೆ ಏರಲು ಸಾಧ್ಯವೇ ಇಲ್ಲ ಎನ್ನುವುದನ್ನು ಮನಗಾಣಬೇಕು. ಅದೆಷ್ಟೇ (ದುರ)ಅಭಿಮಾನ, (ಅ)ಗೌರವ, ಇತ್ಯಾದಿಗಳೇ ಇರಲಿ ಅದ್ಯಾವುವೂ ತಂತಮ್ಮ ಜೀವನದ ಯಶಸ್ಸಿಗೆ ಮತ್ತು ಪ್ರಗತಿಗೆ ಕಾರಣವಾಗಲು ಸಾಧ್ಯವೇ ಇಲ್ಲ ಎನ್ನುವುದು ಈ ಎಲ್ಲಾ (ದುರ)ಅಭಿಮಾನಿ ಬಳಗಗಳಿಗೆ ಗೊತ್ತಾಗಲೇಬೇಕು.
ಸರಕಾರವೂ ಸಮಾಜದ ಈ ತರಹದ ದೋಷಗಳನ್ನು ಕಾನೂನಾತ್ಮಕವಾಗಿ ಹತ್ತಿಕ್ಕಲು ಇಂಥಾ ಸಂಘಟನೆಗಳ ಬಹಿಷ್ಕಾರವನ್ನೇಕೆ ಆಲೋಚಿಸಬಾರದು?
ಸಮಾಜಸೇವೆಯ ಹೆಸರಿನಲ್ಲಿ (ದುರ)ಅಭಿಮಾನ ಮೆರೆದುಕೊಂಡು ಒಂದು ರೀತಿಯ ರೌಡಿ ಗ್ಯಾಂಗ್ ಗಳನ್ನೂ ಕಟ್ಟಿಕೊಂಡು ಮುನ್ನಡೆ ಯುವ ಎಲ್ಲಾ ಧರ್ಮ-ರಾಜಕೀಯ- ಸಿನೆಮಾ ಪ್ರೇರಿತ ಸಂಘಟನೆಗಳೂ ಬಹಿಷ್ಕಾರಗೊಂಡರೆ ಮಾತ್ರ ದೇಶದ ಯುವಜನಾಂಗ ಈ ಒಂದು ಅಮಲೇರಿದ ಮನಸ್ಥಿತಿಯಿಂದ
ಪಾರಾಗಬಹುದೇನೋ? ಇಲ್ಲವಾದಲ್ಲಿ ಭಾರತದಷ್ಟು ಹಿಂಜರಿಯುವ ದೇಶ ಮುಂದಿನ ಎರಡು-ಮೂರು ದಶಕಗಳಲ್ಲಿ ಇನ್ನ್ಯಾವುದೋ ಇರಲಿಕ್ಕಿಲ್ಲ.
ದಂಡಂ ದಶಗುಣಂ ಭವೇತ್ ಎನ್ನುವ ಮಾತಿನಂತೆ ಸಮಾಜದ ಹಿತಚಿಂತಕರು ಇರುವಂಥಾ ನಾಯಕತ್ವ ಇಂದಿನ ಯುವ ಸಮಾಜವನ್ನು ವ್ಯಕ್ತಿಪೂಜೆ ಯಿಂದ ಮೇಲೇರುವಂತೆ ಪ್ರೇರಿಸಿ, ಸಾಮಾನ್ಯ ಧರ್ಮ-ರಾಜಕೀಯ- ಸಿನೆಮಾ ನಾಯಕ-ನಾಯಕಿಯರ ಮೇಲಿನ ಅತಿರೇಕಕ್ಕೇರಿದ (ದುರ)ಅಭಿಮಾನ
ಪ್ರದರ್ಶನದ ಪರಾಕಾಷ್ಠೆಯನ್ನು ಕೆಳಕ್ಕಿಳಿಯುವಂತೆ ಮಾಡಲು ಮುಂದಾಗುತ್ತಾರೆಯೇ? ಅದಕ್ಕೆ ಕೆಲವಾದರೂ ಸದ್ಗುಣ-ಸಚ್ಚಾರಿತ್ರ್ಯ -ಸದ್ವಿಚಾರವುಳ್ಳ ಧರ್ಮ- ರಾಜಕೀಯ- ಸಿನೆಮಾ ನಾಯಕ ನಾಯಕರು ಬೆಂಬಲ ನೀಡುತ್ತಾರೆಯೇ? ಕನಿಷ್ಠ ಮುಂದಿನ ಪೀಳಿಗೆಯ ಮನೋಸ್ವಾಸ್ಥ್ಯದ ದೃಷ್ಟಿಯಿಂದಲಾ ದರೂ?
(ಲೇಖಕರು: ಹವ್ಯಾಸಿ ಬರಹಗಾರರು)