ವಿಶ್ಲೇಷಣೆ
ರಮಾನಂದ ಶರ್ಮಾ
ವರ್ಷಗಳ ಹಿಂದಿನ ಮಾತು. ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ. ಮುಂದಿನ ಸೀಟ್‌ನಲ್ಲಿ ಇಬ್ಬರು ಮಹಿಳೆಯರು ಬಸ್ಸುಹತ್ತಿದ ಕ್ಷಣದಿಂದ ನಿರಂತರವಾಗಿ ಹರಟುತ್ತಿದ್ದರು. ಅವರ ಮನೆ ಸುದ್ದಿ, ಇವರ ಮನೆಸುದ್ದಿ, ಅತ್ತೆ- ಸೊಸೆ ಜಗಳ, ದಾಯಾದಿ ಕಲಹ, ಅ ಹುಡುಗಿ ಇವನೊಂದಿಗೆ ಕುಚು ಕುಚು, ಈ ಹುಡುಗ ಅವಳೊಂದಿಗೆ ಕುಚು ಕುಚು, ನಿನ್ನೆ ನೋಡಿದ ಧಾರಾವಾಹಿ, ಬಡಾವಣೆಗೆ ಬಂದ ಹೊಸ ಕುಟುಂಬ, ಅವನಿಗೆ ನೌಕರಿ ಸಿಕ್ಕಿದ್ದು, ಇವಳಿಗೆ ನೌಕರಿ ಹೋಗಿದ್ದು, ದುಬಾರಿ ಡಿಪಾರ್ಟಮೆಂಟಲ್ ಸ್ಟೋರ್ಸ್, ಪರ್ಸ್‌ಗೆ ನಿಲುಕದ ಮಾಲ, ಪಕ್ಕದ ಮನೆ ಪಿಜಿಯಲ್ಲಿರುವ ಹುಡುಗ- ಹುಡುಗಿ ಯರ ಬದುಕು ಮುಂತಾದವುಗಳು ಅವರ ಪಿಸುಮಾತಿನ ಹರಟೆಯಲ್ಲಿ ಹಿಂದೆ -ಮುಂದೆ, ಅಚೆ- ಈಚೆ ಕುಳಿತವರಿಗೆ ಸರಿಯಾಗಿ ಕೇಳುವಂತೆ ಕಿವಿ ಮೇಲೆ ಬೀಳುತ್ತಿತ್ತು.
ಅವರ ಹರಟೆಯಲ್ಲಿ ಅದೆಷ್ಟೋ ಸಂಸಾರಗಳು, ಅಕ್ಕಪಕ್ಕದವರು, ಸಂಬಂಧಿಗಳು, ಅಪರಿಚಿತರು ಮತ್ತು ಮಿತ್ರರು ಮಿಂಚಿ ಮಾಯವಾದರು. ಕೊನೆಗೊಮ್ಮೆ ತಮ್ಮ ನಿಲ್ದಾಣ ಬರಲು ಈ ಮಹಿಳೆಯರು, ಇನ್ನೊಬ್ಬರ ಮನೆ ಸುದ್ದಿ ನಮಗೇಕೆ?ನಮ್ಮದನ್ನು ನಾವು ಏಗಿ ಕೊಂಡರೆ ಸಾಕು ಎನ್ನುತ್ತಾ
ಕೆಳಗಿಳಿದರು. ಇದನ್ನು ಘಂಟೆಯಿಂದ ಅಲಿಸುತ್ತಿದ್ದ ಸಹ ಪ್ರಯಾಣಿಕನೊಬ್ಬ ಈವರೆಗೆ ಮಾತನಾಡಿದ್ದು ಯಾರ ಮನೆ ಸುದ್ದಿಯಮ್ಮ ಎನ್ನಲು, ಕೆಲವರು ಘೊಳ್ಳನೆ ನಕ್ಕರು. ಅ ಮಹಿಳೆಯರು ಸ್ವಲ್ಪಮುಖ ಸೊಟ್ಟಗೆ ಮಾಡಿ ದುರುಗುಟ್ಟಿ ನೋಡಿ ಬಸ್ಸು ಇಳಿದು ಹೋದರು.
ಇಂದು ಈ ದೃಶಾವಳಿ ಬಹುತೇಕ ಮಾಯವಾಗಿದೆ. ಇಂದು ಬಸ್ಸಿನಲ್ಲಿ, ಅದು ನಗರ ಸಾರಿಗೆ ಇರಬಹುದು ಅಥವಾ ದೂರ ಸಾರಿಗೆ ಇರಬಹುದು, ರಾತ್ರಿ ಬಸ್ಸು ಇರಹುದು ಅಥವಾ ಹಗಲಿನ ಬಸ್ಸು ಇರಬಹುದು ಸಾದಾ ಡಕೋಟಾ ಬಸ್ಸು ಇರಬಹುದು ಅಥವಾ ಆದುನಿಕ ಅವಿಷ್ಕಾರಗಳನ್ನು ಮೈಗೂಡಿಸಿ ಕೊಂಡಿರುವ ಎಕ್ಸಪ್ರೆಸ್ ಬಸ್ಸುಗಳು ಇರಬಹುದು, ಪ್ರಯಾಣಿಕರು ಒಂದು ರೀತಿಯಲ್ಲಿ ಮೌನ ವೃತ ಆಚರಿಸುವಂತೆ ಕಾಣತ್ತದೆ. ಯಾರೂ
ಅಕ್ಕಪಕ್ಕದವರೊಂದಿಗೆ ಹರಟುವುದು ಕಾಣುವುದಿಲ್ಲ. ಅವರು ಪರಿಚಿತರು ಮಿತ್ರರು, ಸಂಬಂಧಿಗಳು, ಅಪರಿಚಿತರು, ಅಣ್ಣ- ತಂಗಿ, ಅಕ್ಕ- ತಮ್ಮ, ತಾಯಿ-ತಂದೆ ಹೀಗೆ ಯಾರೇ ಇರಬಹುದು, ಎಲ್ಲರೂ ತಮ್ಮಷ್ಟಕ್ಕೆ ತಾವು ಮೊಬೈಲ್ ನೋಡುತ್ತಾ ತಮ್ಮದೇ ಲೋಕದಲ್ಲಿ ಕುಳಿತಿರುತ್ತಾರೆ.
ಅವರು ಮೊಬೈಲ್‌ನಲ್ಲಿ ಇಷ್ಟು ಮಗ್ನರಾಗಿರುತ್ತಾರೆ ಎಂದರೆ, ಅದೆಷ್ಟೋ ಪ್ರಯಾಣಿಕರು ತಾವಿಳಿಯುವ ಸ್ಥಳವನ್ನು ಮರೆತು ಮುಂದಿನ ಯಾವುದೋ
ಸ್ಟಾಪ್‌ನಲ್ಲಿ ದಿಢೀರ್ ಇಳಿಯಲು ಮುನ್ನುಗ್ಗುತ್ತಾರೆ. ತಮ್ಮ ತಪ್ಪಿಗೆ ತಮ್ಮ ಸ್ಟಾಪ್‌ನ್ನು ನಿರ್ವಾಹಕ ತಮಗೆ ನೆನಪಿಸಲಿಲ್ಲವೆಂದು ಜಗಳ ಕಾಯುತ್ತಾರೆ. ನಿಗದಿತ ಸ್ಟಾಪ್‌ನಲ್ಲಿ ಇಳಿಯದೆ ಹೆಚ್ಚುವರಿ ದೂರವನ್ನು ಅನಽಕೃತವಾಗಿ ಪ್ರಯಾಣಿಸಿದ್ದಕ್ಕೆ ಶುಲ್ಕನೀಡಲು ನಿರಾಕರಿಸಿ ಇನ್ನೊಂದು ರಾದ್ಧಾಂತ ಬೇರೆ. ಇದು ಪ್ರಯಾಣಿಕ ಅತ್ತಿತ್ತ ನೋಡದೆ ಮೊಬೈಲ್‌ನಲ್ಲಿ ಮುಳುಗಿರುವುದಿಂದಾದ ಪ್ರಮಾದ. ಅದೆಷ್ಟೋ ಪ್ರಯಾಣಿಕರು ನಿರ್ವಾಹಕನಿಂದ ಟಿಕೆಟ್ ಕೇಳಿ ಪಡೆಯಲು ಮರೆಯುತ್ತಾರೆ.
ಟಿಕೆಟ್ ಚೆಕಿಂಗ್‌ಗೆ ಬಂದಾಗ ನಿರ್ವಾಹಕನನ್ನೇ ದೂರುವುದು ಮತ್ತು ತರಾಟೆಗೆ ತೆಗೆದುಕೊಳ್ಳುವುದು ತೀರಾ ಮಾಮೂಲು. ಹಾಗೆಯೇ ಟಿಕೆಟ್ ಪಡೆಯು ವಾಗ ಇಳಿಯುವ ಸ್ಥಳವನ್ನು ಸರಿಯಾಗಿ ಹೇಳದೇ ಕೊನೆಗೆ ಇಳಿಯುವಾಗ ನಿರ್ವಾಹಕನನ್ನೇ ತಪ್ಪುಗಾರರನ್ನಾಗಿ ಮಾಡಿ ಸಂಘರ್ಷಕ್ಕೆ ಇಳಿಯುತ್ತಾರೆ. ನಿರ್ವಾಹಕರು ಅದೆಷ್ಟೋ ಬಾರಿ ಪ್ರಯಾಣಿಕರನ್ನು ಮೊದಲು ಟಿಕೆಟ್ ಪಡೆಯಿರಿ, ಆ ಮೇಲೆ ಮೊಬೈಲ್ ನೋಡಿ ಎಂದು ಗದರಿಸುವ ಪ್ರಮೇಯಗಳೂ ಇಲ್ಲದಿಲ್ಲ.
ಅದಕ್ಕೂ ಮಿಗಿಲಾಗಿ ಈ ಮೊಬೈಲ್‌ಗಳಿಂದಾಗಿ ಅದೆಷ್ಟೋ ಜನರು ತಮ್ಮ ಕೈ ಚೀಲ ಮತ್ತು ಇತರ ಸಾಮಾನುಗಳನ್ನು ಬಸ್ಸಿನಲ್ಲಿಯೇ ಮರೆತು ಇಳಿದು ಅಮೇಲೆ ಪರಿತಪಿಸುವವರು ಇದ್ದಾರೆ. ಹಾಗೆಯೇ ಮೊಬೈಲ್‌ನಲ್ಲಿ ಮುಳುಗಿರುವಾಗ ತಮ್ಮ ಕಿಸೆಗೆ ಕತ್ತರಿ ಬಿದ್ದರೂ ಗಮನಿಸದೆ ಕಳೆದುಕೊಂಡವರ ಸಂಖ್ಯೆ ಸಾಕಷ್ಟು ಇದೆ. ದಶಕಗಳ ಹಿಂದೆ ಮೊಬೈಲ್ ಕೇವಲ ಟೆಲಿಫೋನ್‌ಗೆ ಬದಲಿಯಾಗಿತ್ತು. ಈಗ ಇದು ಅಂಗೈಯಲ್ಲಿ ಅರಮನೆಯಾಗಿದ್ದು ಕೇಳುವುದಕ್ಕಿಂತ ಹೆಚ್ಚು ನೋಡುವುದಕ್ಕೆ ಹೆಚ್ಚು ಬಳಕೆಯಾಗುತ್ತಿದ್ದು ಇಂತಹ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತದೆ.
ಮದುವೆ-ಮುಂಜಿಗಳು ಬಹುತೇಕ ಬಂಧುಗಳು, ನೆಂಟರಿಷ್ಟರು, ಹಿತೈಷಿಗಳು ಮತ್ತು ಸ್ನೇಹಿತರು ದೊಡ್ಡಪ್ರಮಾಣದಲ್ಲಿ ಸೇರುವ ಸ್ಥಳವಾಗಿದ್ದು, ಬಹುದಿನ ಗಳ ಮೇಲೆ ಪರಸ್ಪರ ಭೇಟಿ ಅಗುತ್ತಿರುವುದಿಂದ ಸಂತಸದಿಂದ ಹಳೆಯದನ್ನುಮೆಲುಕು ಹಾಕುತ್ತಾ ಲೋಕಾಭಿರಾಮವಾಗಿ ಮತ್ತು ಅತ್ಮೀಯವಾಗಿ
ಮಾತನಾಡುವುದು, ಹರಟುವುದು ತೀರಾ ಇತ್ತೀಚಿನವರೆಗೆ ಕಾಣುತ್ತಿತ್ತು. ಈಗ ಈ ದೃಶ್ಯಾವಳಿಯಲ್ಲಿ ಭಾರೀ ಬದಲಾವಣೆ ಯಾಗಿದೆ. ಎದುರಿಗೆ ಕಾಣಿಸಿದಾಗ, ಹಾಯ್ ಹೇಗಿದ್ದೀರಿ.. ಚೆನ್ನಾಗಿದ್ದೀರ? ಎಂದು ಮುಂ ಜಾನೆ ಎದುರಿಗೆ ಕಂಡವರಿಗೆ ಗುಡ್ ಮಾರ್ನಿಂಗ ಅಥವಾ ರಾಮ್ ರಾಮ್ ಹೇಳುವಂತೆ ಯಾಂತ್ರಿಕ ವಾಗಿ ಹೇಳಿ ಮೊಬೈಲ್‌ನಲ್ಲಿ ತಲ್ಲೀನರಾಗುತ್ತಾರೆ.
ಮಾತುಕತೆ ಮತ್ತು ಇನ್ನಿತರ ಉಭಯ ಕುಶಲೋಪರಿಗಳು ಒಂದೆರಡು ಶಬ್ದಗಳನ್ನು ದಾಟಿ ಮುಂದೆ ಹೋಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಸಾಮಾನ್ಯ ವಾಗಿ ಹವಾಮಾನ, ಪರಸ್ಪರ ಅರೋಗ್ಯ ಕ್ರಿಕೆಟ್, ರಾಜಕೀಯ, ಬಾಲಿವುಡ್, ಮ ಳೆ -ಬೆಳೆ, ಬೆಲೆ ಏರಿಕೆ, ಮಕ್ಕಳ ಮದುವೆ,ಅವರ ವಿದ್ಯಾಭ್ಯಾಸ, ಉದ್ಯೋಗ
ಮುಂತಾದವುಗಳು ಅನೌಪಚಾರಿಕವಾಗಿ ತೀರಾ ಇತ್ತೀಚಿನ ವರೆಗೆ ಬರುತ್ತಿದ್ದವು. ಕೆಲವರು ತಮ್ಮ ಆತ್ಮೀರೊಂದಿಗೆ ತಮ್ಮ ಸುಖ-ದುಃ ಖಗಳನ್ನು ಸಂಕ್ಷಿಪ್ತ ವಾಗಿ ಹಂಚಿಕೊಳ್ಳುತ್ತಿದ್ದರು. ಈಗ ಮೊಬೈಲ್ ಕೃಪೆಯಿಂದಾಗಿ ಇವಲ್ಲವೂ ನೇಪಥ್ಯಕ್ಕೆ ಸರಿದಿದ್ದು, ಪ್ರತಿಯೊಬ್ಬರು ಖುರ್ಚಿ ಹಿಡಿದು ಕುಳಿತು ತಮ್ಮಷ್ಟಕ್ಕೆ ತಾವೇ ತಮ್ಮ ಮೊಬೈಲ್ ಲೋಕದಲ್ಲಿ ಮುಳುಗಿರುತ್ತಾರೆ.
ಅವರು ಆ ಲೋಕದಿಂದ ಹೊರಜಗತ್ತಿಗೆ ಬರುವುದು ಊಟಕ್ಕೆ ಎಲೆ ಹಾಕಿದಾಗ ಅಥವಾ ಉಡುಗೊರೆಗೆ ಸಿದ್ದವಾದಾಗ. ಕೆಲವರು ಊಟ ಮಾಡುವಾಗ
ಕೂಡಾ ಮೊಬೈಲ್‌ನಲ್ಲಿ ಮಾತನಾಡುತ್ತ ಲೇ ಇರುತ್ತಾರೆ. ಮೊಬೈಲ್ ಗೀಳು ಇಷ್ಟು ಹೆಚ್ಚಿದೆಯೆಂದರೆ ಇತ್ತೀಚಿನ ಒಂದು ಮದುವೆ ಸಮಾರಂಭದಲ್ಲಿ ಪುರೋಹಿತರು ಮಧುಮಕ್ಕಳನ್ನು ಮೊಬೈಲ್ ಆಫ್ ಮಾಡದಿದ್ದರೆ ತಾವು ಮದುವೆ ಶಾಸ್ತ್ರವನ್ನು ಮುಂದುವರೆಸುವುದಿಲ್ಲ ಎಂದು ಎಚ್ಚರಿಸಿದ್ದರಂತೆ. ಮೊಬೈಲ್ ನಿಂದಾಗಿ ಕಾರ್ಯಗಳು ಸಮಯ ಪರಿಮಿತಿಯೊಳಗೆ ಮುಗಿಯುವದಿಲ್ಲವೆಂದು ಮನೆ ಹಿರಿಯರು ಅಲವತ್ತುಕೊಳ್ಳುವುದು ಸಾಮಾನ್ಯ ದೃಶ್ಯ.
ಇಂದು ಬಹುತೇಕ ಕಚೇರಿಗಳಲ್ಲಿ ಶೀಘ್ರ ಸೇವೆ ನೀಡಲು ಸಿಬ್ಬಂದಿಗಳಿಗೆ ಮೊಬೈಲ್‌ನ್ನು ನೀಡಲಾಗುತ್ತಿದೆ ಅಥವಾ ಮೊಬೈಲ್ ಶುಲ್ಕವನ್ನು ಅವರಿಗೆ ಮರುಪೂರಣ ಮಾಡಲಾಗುತ್ತದೆ.
ಇಂದು ಯಾವುದೇ ಕಚೇರಿಗೆ ಬೇಟಿ ನೀಡಿದರೂ ಸಿಬ್ಬಂದಿಗಳು ಮೊಬೈಲ್ ನಲ್ಲಿ ಬ್ಯುಜಿ ಇರುವುದನ್ನು ನೋಡಬಹುದು. ಅವರು ಕಚೇರಿ ಕೆಲಸದಲ್ಲಿ ಇರುತ್ತಾರೋ ಅಥವಾ ಕಚೇರಿ ಕೆಲಸದ ಹೆಸರಿನಲ್ಲಿ ವೈಯಕ್ತಿಕ ಕೆಲಸದಲ್ಲಿ ಮಗ್ನರಾಗಿರುತ್ತಾರೋ ಎನ್ನುವುದು ಹೊರಗಿನವರಿಗೆ ತಿಳಿಯದು. ಒಂದು ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಸಮಯ ಪರಿಮಿತಿ ಮೀರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿ ತನ್ನ ಕೆಲಸ ವಿಳಂಬವಾಗುವುದನ್ನು ಸಹಿಸದ ಕಚೇರಿಗೆ ಯಾವುದೋ ಕೆಲಸಕ್ಕೆ ಬಂದಿರುವ ಸಾರ್ವಜನಿಕರೊಬ್ಬರು ಅ ಸಿಬ್ಬಂದಿಯ ಮೊಬೈಲ್‌ಅನ್ನು ಕಿತ್ತು ಎಸೆದಿದ್ದರಂತೆ.
ಎಷ್ಟೋ ಬಾರಿ ಸಿಬ್ಬಂದಿಗಳು ತಮ್ಮ ಖುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿರುತ್ತಾರೆ ಎನ್ನುವ ದೂರು ಕೇಳುತ್ತಿರುತ್ತದೆ. ಯಾವುದೇ ಅವಿಷ್ಕಾರ ಅಥವಾ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ನಾವು ಭಾರತೀಯರು ಮುಂದೆ ಎಂಬುದರಲ್ಲಿ ಭಿನ್ನಮತ ಇಲ್ಲ. ಅಂತೆಯೇ ಮೊಬೈಲ್ ಕೂಡಾ. ಶೀಘ್ರ ಸಂವಹನ, ಮನರಂಜನೆ ಮತ್ತು ಸಂಪರ್ಕಕ್ಕೆ ಎಂದೇ ರೂಪಿಸಲಾದ ಮೊಬೈಲ್ ಈ ಹಿಂದಿನ ಎಲ್ಲ ಇಂಥಹ ಅವಿಷ್ಕಾರ ಗಳನ್ನು ನಿವಾಳಿಸಿ ತೆಗೆದಿದೆ. ಗ್ರಾಮಾ ಫೋನ್, ರೇಡಿಯೋ, ಟ್ರಾನ್ಸಿಸ್ಟರ್, ಪಾಕೆಟ್ ರೇಡಿಯೋ, ಟೇಪ್ ರೆಕಾರ್ಡರ್, ಸಿಡಿ, ಇವು ಕಾಲಘಟ್ಟದಲ್ಲಿ ಆ ಕಾಲಕ್ಕೆ ತಕ್ಕಂತೆ ಜನರ ಮನ ಗೆದ್ದ ಅವಿಷ್ಕಾರಗಳು.
ಅದರೆ, ಇವು ಕೆಲವು ಅನಿವಾರ್ಯವಾದ ಅಪವಾದಗಳನ್ನು ಹೊರತು ಪಡಿಸಿದರೆ, ಸಾರ್ವಕಾಲಿಕ ಉಪಯೋಗವನ್ನು ಮರೆತು ಟೀಕೆಗೆ ಒಳಗಾಗಿಲ್ಲ ಮತ್ತು ಮೊಬೈಲ್ ಎಬ್ಬಿಸಿದಂತ ಧೂಳನ್ನು ಎಬ್ಬಿಸಿರಲಿಲ್ಲ. ಇಂದು ಯಾವುದೇ ಸಮಾರಂಭಗಳು ನಡೆಯಲಿ, ಭಾಷಣ ಮಾಡುವವರನ್ನು ಬಿಟ್ಟು,
ವೇದಿಕೆಯಲ್ಲಿರುವವರೂ ಸೇರಿ ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ. ಅವರು ಮೊಬೈಲ್ ವೀಕ್ಷಿಸುತ್ತಿರುತ್ತಾರೆ ಅಥವಾ ಕ್ಷಣಕ್ಕೊಮ್ಮೆ ಅದನ್ನು ತೆಗೆದುನೋಡುತ್ತಿರುತ್ತಾರೆ.
ಕಚೇರಿಗಳಲ್ಲಿ ಮೀಟಿಂಗ್ ಕರೆದಾಗ ಸಿಬ್ಬಂದಿಗಳು ಕಲಾಪದಲ್ಲಿ ಲಕ್ಷಕೊಡದೆ ಮೊಬೈಲ್‌ನಲ್ಲಿ ತಲ್ಲೀನರಾಗುತ್ತಾರೆ ಎಂದು ಎಷ್ಟೋ ಕಚೇರಿಗಳಲ್ಲಿ ಸಭೆಗೆ ಮೊಬೈಲ್ ಬಿಟ್ಟು ಬರುವಂತೆಯೋ ಅಥವಾ ಮೊಬೈಲ್ ಸ್ವಿಚ್ ಅ- ಮಾಡುವಂತೆ ಕೇಳಲಾಗುತ್ತದೆಯಂತೆ. ಕಲಾಪದ ಮದ್ಯೆಯೂ ಮೊಬೈಲ್ ಬಳಸಿದ್ದಕ್ಕೆ ಕೆಲವು ಸಿಬ್ಬಂದಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಿದ ಉದಾಹರಣೆಗಳು ಇವೆಯಂತೆ. ಮೊಬೈಲ್ ಇಂದು ಸರ್ವಾಂತರವ್ಯಾಮಿಯಾಗಿದೆ.
ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು. ಆದರೆ ಮೊಬೈಲ್ ಇಲ್ಲದ ಮನೆಯನ್ನು ಹುಡುಕಲಾಗದು ಎನ್ನುವುದು ದಿಟ.
ಮನೆಗೊಂದು ಅಥವಾ ಎರಡು ಮೊಬೈಲ್ ಅದರೆ ಅದು ಬೇರೆ ಮಾತು. ಅದರೆ ಇಂದು ಪ್ರತಿಯೊಬ್ಬರಿಗೂ ಮೊಬೈಲ್ ಅನಿವಾರ್ಯವಾದ ಸಂಗಾತಿ ಯಾಗಿದೆ. ಕೆಲವರು ಎರಡೆರಡು ಮೊಬೈಲ್‌ಗಳನ್ನು ಇಟ್ಟು ಕೊಳ್ಳುವುದು ಉತ್ಪ್ರೇಕ್ಷೆಯಲ್ಲ. ಮೊಬೈಲ್ ಇಲ್ಲದ ಬದುಕೂ ಬದುಕೇ? ಏನ್ನುವಷ್ಟು ಅದು ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಪಾಲಕರು ಮೊಬೈಲ್ ಕೊಡಿಸಲಿಲ್ಲವೆಂದು ಮಕ್ಕಳು ಅತ್ಮಹತ್ಯೆ ಮಾಡಿಕೊಂಡ, ಮನೆ ಬಿಟ್ಟು ಹೋದ ಎಂಬ ಉದಾಹರಣೆಗಳು ಎಷ್ಟೊಂದಿದೆ. ಮಕ್ಕಳು ಯಾವಾಗಲೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ, ಓದಿನ ಕಡೆ ಮತ್ತು ಇತರ ಚಟುವಟಿಕೆಗಳ ಬಗೆಗೆ ಅವರಿಗೆ ಗಮನವಿಲ್ಲ ಎನ್ನುವುದು ಪ್ರತಿ ಮನೆಯ, ಪ್ರತಿ ತಾಯಂದಿರ ಅಳಲು.
ಶಾಲೆ ಮುಗಿದ ಮೇಲೆ ಸಂಜೆ ಮನೆಯ ಎದುರುಗಡೆ ರಸ್ತೆಯ, ಪಕ್ಕದ ಮೈದಾನದ ಅಥವಾ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟನ ಮೊದಲಿನಂತೆ
ಕ್ರಿಕೆಟ್ ಮತ್ತು ಇತರ ಆಟಗಳನ್ನು ಅಡದೇ ಮೊಬೈಲ್‌ನಲ್ಲಿ ಬೆರಳಾಡಿಸುತ್ತಾರೆ ಎಂದು ಮನೆಯ ಹಿರಿಯರು ಗೋಗರೆಯುತ್ತಾರೆ. ತಮ್ಮ ಮಕ್ಕಳು ಶೌಚಾಲಯಕ್ಕೆ ಹೋಗುವಾಗ, ಸ್ನಾನದ ಮನೆಯಲ್ಲಿರುವಾಗ ಮತ್ತು ಊಟ ಮಾಡುವಾಗ ಕೂಡಾ ಪಕ್ಕದಲ್ಲಿ ಮೊಬೈಲ್ ಇರಿಸಿಕೊಳ್ಳುತ್ತಾರೆ ಎನ್ನುವುದು ಇನ್ನೊಂದು ತೀರಾ ಸಾಮಾನ್ಯವಾದ ಗೊಣಗು. ವರ್ಷದಾಟಿರದ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿ ಮಕ್ಕಳನ್ನು ಸುಧಾರಿಸುವುದು ಜೋಕ್ ಅಗಿರದೆ, ವಾಸ್ತವವಾಗಿರುವುದು ಸತ್ಯ. ಇದು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ತೀರಾ ಇತ್ತೀಚಿನ ಪರಿಣಾಮಕಾರಿ ಕರಾಮತ್ತು ಎನ್ನಬಹುದು.
ಮೊಬೈಲ್ ನಿಸ್ಸಂಶಯವಾಗಿ ಅಂಗೈಯಲ್ಲಿ ಅರಮನೆ ಎನ್ನುವಂತೆ ಬಹುಉಪಯೋಗಿ ಅವಿಷ್ಕಾರ. ಕೇವಲ ಫೋನ್‌ಗೆ ಬದಲಾಗಿ ಅವತರಿಸಿದ ಈ ಅವಿಷ್ಕಾರ ಜನಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತದೆ. ಮತ್ತು ಬದುಕಿನ ವೈಖರಿಯನ್ನು ಅಮೂಲಾಗ್ರವಾಗಿ ಈ ರೀತಿ ಬದಲಿಸಿಬಿಡುತ್ತದೆ ಎಂದೂ
ಯಾರೂ ಊಹಿಸಿರಲಿಲ್ಲವೇನೋ? ಅಪರಾಧ ಶೋಧನೆಯಲ್ಲಿ, ಸಂಪರ್ಕ ಸಾಧಿಸುವಲ್ಲಿ, ಹೊರ ಜಗತ್ತಿನ ಜ್ಞಾನವನ್ನು ಒಂದು ಬಟನ್ ಒತ್ತುವ ಮೂಲಕ ಪಡೆಯುವಲ್ಲಿ, ಜನಸಾಮಾನ್ಯನ ದಿನನಿತ್ಯದ ಬಹುತೇಕ ವ್ಯವಹಾರಗಳನ್ನು, ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ವ್ಯವಹಾರವನ್ನು ಬೆರಳ ತುದಿಯ
ಮೂಲಕ ನಿರ್ವಹಿಸುವಲ್ಲಿ ಮೊಬೈಲ್ ಮಾಡಿದ ಕ್ರಾಂತಿ ಸ್ಮರಣೀಯ.
ಒಂದು ವ್ಯವಸ್ಥೆ ಅವತರಿಸಿದಾಗ ಸಂಪೂರ್ಣವಾಗಿ ನೂರಕ್ಕೆ ನೂರರಷ್ಟು ಅನು ಕೂಲತೆಯನ್ನು ನಿರೀಕ್ಷಿಸಲಾಗದು. ಈ ನಿಟ್ಟಿನಲ್ಲಿ ಮಾರ್ಜಿನ ಅನಿವಾರ್ಯ. ಹಾಗೆಯೇ ಅನಪೇಕ್ಷಣೀಯವಾದುದನ್ನು ಹತ್ತಿಕ್ಕಿ, ಎದುರಿಸಿ, ಸಮುದ್ರ ಮಥನದಲ್ಲಿ ಹಾಲಾಹಲವನ್ನು ನಿರ್ಲಕ್ಷಿಸಿ ಅಮೃತವನ್ನು
ಚಪ್ಪರಿಸಿದಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು.
(ಲೇಖಕರು: ಆರ್ಥಿಕ ಮತು ರಾಜಕೀಯ ವಿಶ್ಲೇಷಕರು)