Wednesday, 11th December 2024

ಆಧುನಿಕ ಕರ್ನಾಟಕದ ಋಷಿಕಲ್ಪ ಡಿವಿಜಿ

ಸ್ಮರಣೆ

ಸಂದೀಪ ಶರ್ಮ

ಕನ್ನಡದ ಆಧುನಿಕ ಸಾಹಿತ್ಯದ ನವರತ್ನಗಳಲ್ಲಿ ಒಂದಾದ ಡಿವಿಜಿಯವರು ನಮ್ಮೊಡನೆ ಇದ್ದಿದ್ದರೆ ಇದೇ ಮಾರ್ಚ್ 17ಕ್ಕೆ
134 ವರ್ಷವಾಗುತ್ತಿತ್ತು. ಕನ್ನಡ ಸಾಹಿತ್ಯಮೀಮಾಂಸಕರೆಲ್ಲರೂ ಡಿವಿಜಿ ಯವರನ್ನು ಸಾಹಿತ್ಯವನದ ಅಶ್ವತ್ಥವೆಂದೇ ಅನ್ವರ್ಥ ವಾಗಿ ಕರೆಯುತ್ತಿದ್ದದ್ದೂ ಅಕ್ಷರಶಃ ಸತ್ಯವಾದ ಮಾತು.

ಅವರು ಪ್ರತಿಪಾದಿಸಿದ ವಿಚಾರ, ನಡೆದು ಹೋದ ದಾರಿ – ಎರಡೂ ಧೀಮಂತ ಮತ್ತು ಉದಾರ. ಡಿವಿಜಿಯವರ ವ್ಯಕ್ತಿತ್ವವೇ ಅಂಥದ್ದು. ಎಲ್ಲರೊಡನೆ ಬೆರೆಯುವಂಥದು. ಅವರ ಚಿಂತನೆ ಹೇಗಿತ್ತೆಂದರೆ ಯಾವ ವಾಕ್ಯ ಸರಣಿಯಿಂದ ಕೇಳಿದವನ ಅಥವಾ ಓದಿದವನ ಹೃದಯಕ್ಕೆ ಒಂದು ಹಿತಾನುಭಾವವೂ, ಅವನ ಬುದ್ಧಿಗೆ ಒಂದು ಬೆಳಕೂ, ಅವನ ಜೀವನಕ್ಕೆ ಒಂದು ಸತ್ ಪ್ರಚೋದನೆಯೂ ಉಂಟಾಗುತ್ತದೆಯೋ ಅದು ಸಾಹಿತ್ಯ ಅವರ ಈ ಸಾಹಿತ್ಯ ವಾಕ್ಯವು ಲೋಕಚಿಂತನೆಯಿಂದ ಕೂಡಿತ್ತು ಎನ್ನುವುದಕ್ಕೆ ಈ ಮಾತೇ ಸಾಕ್ಷಿ.

ಒಮ್ಮೆ ಗುಮಾಸ್ತರಾಗಿ ವರುಷ ಕಳೆದ ನಂತರ ಬೆಂಗಳೂರಿನಲ್ಲಿ ನೆಲೆಸಿ ಫ್ಯಾಕ್ಟರಿಯೊಂದರಲ್ಲಿ ದುಡಿದುಕೊಂಡು, ಮನೆ ಪಾಠವನ್ನು ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು. ತಮ್ಮ ಹದಿನೇಳನೆ ವಯಸ್ಸಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದರು ಹಾಗೂ ಬರೆಯುತ್ತಿದ್ದರು. ಭಾರತಿ ಎಂಬ ಕನ್ನಡ ದಿನಪತ್ರಿಕೆಯನ್ನು ಆರಂಭಿಸಿ ಅನಿವಾರ್ಯ ಕಾರಣ ಗಳಿಂದ ಆ ಪತ್ರಿಕೆಯನ್ನು ನಿಲ್ಲಿಸಿ ಮೈಸೂರು ಟೈಮ್ಸ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು.

ಪತ್ರಿಕಾ ಧರ್ಮದ ವಿರುದ್ಧ ಪತ್ರಿಕೆ ನಡೆದುಕೊಂಡಾಗ ಅದನ್ನು ವಿರೋಧಿಸಿದ ಡಿವಿಜಿ ಮೈಸೂರು ಟೈಮ್ಸ ಪತ್ರಿಕೆಗೆ ರಾಜೀನಾಮೆ ನೀಡಿ ಕರ್ಣಾಟಕ ಎಂಬ ಆಂಗ್ಲ ಪತ್ರಿಕೆಯನ್ನು ತಾವೇ ಆರಂಭಿಸಿದರು. ಈ ಪತ್ರಿಕೆ ಬಹು ಬೇಗನೇ ಪ್ರಸಿದ್ದವಾಯಿತು. ಡಿವಿಜಿ ಈ ಪತ್ರಿಕೆಯಲ್ಲಿ ನಿಷ್ಪಕ್ಷಪಾತವಾಗಿ ವರದಿಗಳನ್ನು ಪ್ರಕಟಿಸುತ್ತಿದ್ದರು. ವಿಶ್ವೇಶ್ವರಯ್ಯನವರು ಡಿವಿಜಿಯವರ ಈ ಕಾರ್ಯವೈಖರಿ ಯನ್ನು ಪ್ರಶಂಸಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು.

ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ನಂತರ ಉಮರನ ಒಸಗೆ, ವಸಂತ ಕುಸುಮಾಂಜಲಿ ಮುಂತಾದ ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿಯೂ ಸಹ ಡಿವಿಜಿ ಶ್ರಮಿಸಿದ್ದರು. ಡಿವಿಜಿ ಕೂಡ ಅಂಥ ಬದಲಾಗದ ಬೆಟ್ಟ. ಮೌಲ್ಯ ವರ್ಧಕ ಧಾತುಗಳಿಂದ ಕಂಗೊಳಿಸುವ ಪರ್ವತ ಅವರು. ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗಗಳೆರಡೂ ಡಿವಿಜಿ ಯವರ ಲೋಕ ಚಿಂತನೆಯ ಬೃಹತ್ ಫಲಗಳು ಮತ್ತು ಹೊಸಗನ್ನಡದ ಭಗವದ್ಗೀತೆಗಳು.

ಅವರ ಸಾಹಿತ್ಯವು ಹೇಗಿತ್ತೆಂದರೆ ಪ್ರತಿಕ್ಷಣವೂ ಬಗೆಬಗೆಯ ಹೂವು – ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಅವರೇ ನಮ್ಮೆದುರು ಹಾಯಾಗಿ ಕುಳಿತು ವಿಚಾರಗಳನ್ನು ಸವಿನಯವಾಗಿ ವಿವಿರಿಸುತ್ತಿರುವರೋ ಎಂದು ಭಾಸವಾಗುವ ಮಟ್ಟಿಗೆ ಮನಸ್ಸಿಗೆ ಆಪ್ತವಾದ ಬರೆವಣಿಗೆಯದು. ಅದರಲ್ಲಿ ಸಮನ್ವಯದ ಹದವಿದೆ, ಆದರೆ ವಾಚಕರನ್ನು ಒಪ್ಪಿಸಲೇಬೇಕೆಂಬ ಹಠವಿಲ್ಲ; ಇನ್ನೆಲ್ಲಿಯೂ ಕಾಣಸಿಗದ ಅನನ್ಯವಾದ ಕಾಂತಿಯಿದೆ, ಆದರೆ ಅದು ಕಣ್ಣುಕೋರೈಸುವಂಥದ್ದಲ್ಲ; ಅಽಕೃತತೆಗೆ ಕೊರತೆಯಿಲ್ಲ, ಆದರೆ ಅಧಿಕಾರದ ಧಾರ್ಷ್ಟ್ಯವಿಲ್ಲ; ಪಾಂಡಿತ್ಯದ ಪುಷ್ಟಿಯಿದೆ, ಆದರೆ ಅದನ್ನು ಮೆರೆಸಬೇಕೆಂಬ ಹಂಬಲವಿಲ್ಲ; ಭಾವತೀವ್ರತೆಯಿದೆ, ಆದರೆ ಅದೆಂದೂ ಭಾರವೆನಿಸುವುದಿಲ್ಲ ಹಾಗು ಭ್ರಮನಿರಸನವೆನಿಸುವುದಿಲ್ಲ.

ಡಿವಿಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿzರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು ಡಿವಿಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ ಎಂದಿzರೆ. ಡಿವಿಜಿಯವರ ಚಿಂತನೆಯ ಕ್ರಮ ಆರೋಗ್ಯಶೀಲವಾದದ್ದು. ಅವರು ಯಾವುದನ್ನೂ ಗೌಣವೆಂದು ತಿಳಿದವರಲ್ಲ. ಎಲ್ಲವೂ ಅಗತ್ಯ ಹದದಲ್ಲಿ ಬೆರೆತು ಆತ್ಮದ ಬೆಳವಣಿಗೆಗಾಗಿ ದುಡಿಯಬೇಕು ಎಂಬ ಆರೋಗ್ಯಕರ ದೃಷ್ಟಿ ಹೊಂದಿರುವುದನ್ನು ಅವರ ಜೀವನ ಧರ್ಮಯೋಗ ಕೃತಿಯಲ್ಲಿ ಹಾಗು ಕಗ್ಗಗಳಲ್ಲಿ ಕಂಡಿದ್ದೇವೆ.

ಡಿವಿಜಿಯವರ ಜೀವನವೇ ಅವರು ಬರೆದ ಎಲ್ಲ ಕೃತಿಗಳನ್ನು ಮೀರಿಸುವಂತದ್ದು. ತಾವು ಬದುಕಿದಷ್ಟು ದಿನವೂ ಯಾವುದೇ ಹಣ, ಅಽಕಾರಗಳಿಗೆ ಆಸೆಪಡದೆ ಬರೆದಂತೆಯೇ ಬದುಕಿದವರು. ಅವರು ಕಣ್ಮರೆಯಾದರೂ ಅವರ ಶ್ರೇಷ್ಠ ವ್ಯಕ್ತಿತ್ವ ಕನ್ನಡಿಗರ ನೆನಪಿನ ಬುತ್ತಿಯಲ್ಲಿ ಆಡಗಿದೆ. ನಮ್ಮ ತಾಯ್ನುಡಿ ಅದೆಂತು ಅನೇಕ ರೀತಿಯ ಕಾರ್ಯಭಾರಗಳನ್ನು ಅವಲೀಲೆಯಿಂದ ಸಾಗಿಸಬಲ್ಲ ದೆಂಬುದಕ್ಕೆ ನಿದರ್ಶನವಾದ ಈ ಮಹನೀಯರ ಬರಹಗಳು ಸಾಹಿತ್ಯಶರೀರಕ್ಕೆ ಹೊಸ ಕಾಂತಿಯನ್ನು ತುಂಬಬಲ್ಲವು.

ಕನ್ನಡವು ಓಜಸ್ಸನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಸಾಹಿತ್ಯಕ್ಕೆ ಗಮನವೀಯದ ಈ ಹೊತ್ತಿನಲ್ಲಿ ಡಿವಿಜಿಯವ ರಂಥ ಧೀಮಂತರ ಮಾರ್ಗದರ್ಶನವು ನಮಗೆ ತುಂಬ ಸ್ವೀಕಾರಾರ್ಹ ಮತ್ತು ಅವಶ್ಯ. ಈ ನಿಟ್ಟಿನಲ್ಲಿ ಮತ್ತು ಅವರ ಸ್ಮರಣಿಕೆಯಲ್ಲಿ ಸದ್ಯದ ಪ್ರಯತ್ನವು ದಿಕ್ಸೂಚಿಯಾದೀತು ಎಂಬುದು ನಮ್ಮೆಲ್ಲರ ಆಶಾಭಾವ.