Sunday, 13th October 2024

ಮೋದಿ ಹಟಾವ್ : 2014ರ ತರುವಾಯದ ರಾಜಕೀಯ ಷಡ್ಯಂತ್ರ

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

೨೦೧೪ರ ತರುವಾಯ ರಾಜಕೀಯ ಅಸ್ಥಿತ್ವವನ್ನು ಕಳೆದುಕೊಂಡು ಅತಂತ್ರವಾಗಿರುವ ಶಕ್ತಿಗಳು ನರೇಂದ್ರ ಮೋದಿಯವರ ಸರಕಾರವನ್ನು ಅಸ್ಥಿರ ಗೊಳಿಸಲು ನಾನಾ ರೀತಿಯ ರಾಜಕೀಯ ಸಂಚನ್ನು ವಿರಮಿಸದೆ ಕ್ಷಣಕ್ಷಣವು ನಡೆಸುತ್ತಲೇ ಇದ್ದಾರೆ.

೩೦ ವರ್ಷಗಳ ತರುವಾಯ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಒಂದೇ ಪಕ್ಷಕ್ಕೆ ಬಹುಮತ ಬಂದಿತ್ತು. ಮೋದಿಯವರ ನೇತೃತ್ವದಲ್ಲಿ ಬಿಜೆಪಿವೊಂದಕ್ಕೆ ೨೮೨ ಸೀಟು ಬಂದರೆ ಎನ್‌ಡಿಎ ಮೈತ್ರಿಕೂಟಕ್ಕೆ ಒಟ್ಟು ೩೩೬ ಸ್ಥಾನ ಲಭಿಸಿತು.
ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರುವುದಿಲ್ಲ.

ಸಮ್ಮಿಶ್ರ ಸರಕಾರ ಖಚಿತ ಎಂದು ನಂಬಿದ್ದ ರಾಜಕೀಯ ನಾಯಕರಿಗೆ ತೀವ್ರ ನಿರಾಸೆಯಾಗಿದ್ದು ಸುಳ್ಳಲ್ಲ. ಕಾಂಗ್ರೆಸ್ ಪಾರ್ಟಿಯು ಕೇವಲ ೪೪ ಸೀಟುಗಳಲ್ಲಿ ಗೆದ್ದು ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೂ ಅರ್ಹತೆ ಗಳಿಸಲಿಲ್ಲ. ೨೦೦೨ ಗುಜರಾತ್ ಗಲಭೆಯ ತರುವಾಯ ಜಾತ್ಯಾತೀತೆಯ ಸಂಕೇತವೆಂದರೆ ನರೇಂದ್ರ ಮೋದಿಯವರನ್ನು ಹಿಗ್ಗಾ ಮುಗ್ಗಾ ಟೀಕಿಸುವುದು.

೨೦೦೪ರಲ್ಲಿ ಯುಪಿಎ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದ ತರುವಾಯ ಮೋದಿಯವರನ್ನು ಗುಜರಾತ್ ಗಲಭೆಗೆ ಹೊಣೆ ಮಾಡಲು ಇನ್ನಿಲ್ಲದ ಸರ್ಕಸ್ ನಡೆಸಿದರೂ ಮೋದಿಯವರನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಾಗಲೇ ಇಲ್ಲ. ಕಾಂಗ್ರೆಸ್ ಮತ್ತು ವಾಮಪಂಥೀಯರು ಮೋದಿ ಯವರನ್ನು ತಮ್ಮ ರಾಜಕೀಯ ಪ್ರತಿಸ್ಪರ್ಧಿ ಎಂದು ಗುರುತಿಸುವ ಬದಲು ಶತ್ರು ಎಂಬಂತೆ
ಪರಿಗಣಿಸುತ್ತಿದ್ದಾರೆ. ತಮ್ಮ ಮತಬ್ಯಾಂಕಿನ ಬಂಧುಗಳನ್ನು ಸಂತುಷ್ಟಗೊಳಿಸಲು ಮೋದಿಯವರನ್ನು ಪಂಚಿಂಗ್ ಬ್ಯಾಗ್ ಮಾಡಿಕೊಂಡಿರುವರು.

೨೦೧೪ ಲೋಕಸಭಾ ಚುನಾವಣೆಯಲ್ಲಿ ಮೋದಿ ಯವರ ನೇತೃತ್ವ ದಲ್ಲಿ ಬಿಜೆಪಿ ದೆಹಲಿಯ ಗದ್ದುಗೆಯನ್ನು ಹಿಡಿದಿದ್ದು ವಿರೋಧಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ. ತದನಂತರ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಯಲ್ಲಿಯೂ ಬಿಜೆಪಿಯ ಬಾವುಟ ದೇಶಾದ್ಯಂತ ಹಾರಾಡ ತೊಡಗಿದ್ದು ಮೋದಿ ವಿರೋಧಿಗಳ ಅಸಹನೆ, ದ್ವೇಷ ಮತ್ತು ಅಸಹಾಯಕತೆ ತಾರಕಕ್ಕೇರಿತ್ತು.
ಚುನಾವಣೆಯ ಸೋಲನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಸೌಜನ್ಯವನ್ನು ಮರೆತು ಹತಾಶೆಯಿಂದ ಇಎಂ ಹ್ಯಾಕ್ ಮಾಡಿ ಬಿಜೆಪಿ ಚುನಾವಣೆಯನ್ನು ಗೆಲ್ಲುತ್ತಿದೆ ಎಂದು ಚುನಾವಣಾ ಆಯೋಗದ ನಿಷ್ಪಕ್ಷಪಾತ ನಡೆಯ ಬಗ್ಗೆಯೂ ಅನುಮಾನವನ್ನು ಹುಟ್ಟು ಹಾಕಲು  ಯತ್ನಿಸಿದರು.

ಚುನಾವಣೆಯಲ್ಲಿ ಹೀನಾಯವಾಗಿ ಸೋತು ಹತ್ತು ವರ್ಷಗಳ ಕಾಲ ಅನುಭವಿಸಿದ್ದ ಅಧಿಕಾರವನ್ನು ಕಳೆದುಕೊಂಡು ಕಾಂಗ್ರೆಸ್ ನೀರಿನಿಂದ ಹೊರ ಬಿದ್ದ ಮೀನಿನಂತಾಗಿತ್ತು. ಮೋದಿಯವರನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಮೋದಿ
ಯವರ ಪ್ರತಿಯೊಂದು ನಡೆಯನ್ನು ವಿರೋಧಿಸುವುದು, ಅಪಪ್ರಚಾರ ಮಾಡುವುದು ಇವರ ಒಂದಂಶದ ಕಾರ್ಯಕ್ರಮ ವಾಯಿತು. ಡೋಂಗಿ ಬುದ್ಧಿಜೀವಿಗಳು, ವಿಚಾರವಾದಿಗಳು ತಾವು ಅಕ್ರಮವಾಗಿ ನೆಲೆಯೂರಿದ್ದ ಸರಕಾರಿ ವಸತಿ ಗೃಹಗಳಿಂದ ಖಾಲಿ ಮಾಡಬೇಕಾಯಿತು.

ಪ್ರಮುಖ ಕೇಂದ್ರ ಸರಕಾರದ ಸಮಿತಿಗಳಿಂದ ಗೇಟ್‌ಪಾಸ್. ಕೇಂದ್ರ ಸರಕಾರದ ಅನುದಾನ ಮತ್ತು ವಿಶ್ವವಿದ್ಯಾಲಯ ಗಳಲ್ಲಿ ಸ್ವೇಚ್ಛಾಚಾರಕ್ಕೆ ಇತಿಶ್ರೀ, ದೇಶ ಪ್ರಯಾಣ ಮರೀಚಿಕೆ ಯಾಯಿತು ಮತ್ತು ಐಶಾರಾಮಿ ಜೀವನಕ್ಕೆ ಕತ್ತರಿ ಬಿದ್ದು ತತ್ತರಿಸಿ ಹೋದ ವಾಮಪಂಥೀಯರು ಮೋದಿಯವರನ್ನು ಮಣಿಸಲು ತುದಿಗಾಲಲ್ಲಿ ನಿಲ್ಲುತ್ತಾರೆ. ಸರಕಾರೇತರ ಸಂಸ್ಥೆಗಳ ಹೆಸರಲ್ಲಿ ನಡೆಯುತ್ತಿದ್ದ ಭಾರತ ವಿರೋಧಿ ಚಟುವಟಿಕೆಗಳ ಮೇಲೆ ಗದಾ ಪ್ರಹಾರವಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಯಾವುದೇ ಅಂಕೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ೧೪,೫೦೦ ಸರಕಾರೇತರ ಸಂಸ್ಥೆಗಳ ನೋಂದಣಿಯನ್ನು ರದ್ದು ಪಡಿಸಲಾಯಿತು ಹಾಗೂ ದೇಶಿ ವಂತಿಗೆಯನ್ನು ಸ್ವೀಕರಿಸಿ ಲೆಕ್ಕ ನೀಡದ ೨೦,೦೦೦ ಸಂಸ್ಥೆಗಳಿಗೆ ದೇಶಿ ವಂತಿಗೆ ಪಡೆಯುವುದಕ್ಕೆ ನಿರ್ಬಂಧ ಹೇರಿ
ಮಾರಣಾಂತಿಕ ಪೆಟ್ಟು ನೀಡಲಾಯಿತು.

ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಹಾಳು ಮಾಡದೆ ತಾವು ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂದು ಮನಗಂಡ ಕಾಂಗ್ರೆಸ್ ಮತ್ತು ವಾಮಪಂಥೀಯರು ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜಕೀಯ ಪ್ರೇರಿತ ಹೋರಾಟ ಗಳನ್ನು ಹಿಂಬಾಗಿಲ ಮೂಲಕ ೨೦೧೫ ರಿಂದ ೨೦೧೯ರವರೆಗೆ ನಡೆಸಿದವು. ಮಹಾರಾಷ್ಟ್ರದಲ್ಲಿ ಶೇಕಡಾ ೩೨ರಷ್ಟು ಇರುವ ಮರಾಠ ಜನಾಂಗವನ್ನು ಹಿಂದುಳಿದವರು ಎಂದು ಪರಿಗಣಿಸಿ ಮೀಸಲಾತಿ ನೀಡಬೇಕು ಎಂದು ೨೦೧೬ರಲ್ಲಿ ಹೋರಾಟ ಪ್ರಾರಂಭವಾಗುತ್ತದೆ.

ಮಹಾರಾಷ್ಟ್ರದಲ್ಲಿ ಶೇಕಡಾ ೮೦ರಷ್ಟು ಭೂಮಿಯು ಮರಾಠಿಗರ ಕೈಯಲ್ಲಿ ಇರುವುದು. ೧೦೫ ಸಕ್ಕರೆ ಕಾರ್ಖಾನೆಗಳಲ್ಲಿ ೮೬ ಮರಾಠಿಗರಿಗೆ ಸೇರಿದ್ದು ಶೇ.೭೦ ಸಹಕಾರ ಸಂಘಗಳು, ಶೇ.೫೫ ಶಿಕ್ಷಣ ಸಂಸ್ಥೆಗಳು ಮರಾಠರ ಹಿಡಿತದಲ್ಲಿ ಇರುವುದು. ಈಗಾಗಲೇ ಕುನ್‌ಬಿಸ್ ಮರಾಠ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ೨೦೧೪ರಲ್ಲಿ ಮೀಸಲಾತಿಯ ಕೂಗು ಎದ್ದಾಗ
ಯುಪಿಎ ಸರಕಾರವು ಶೇಕಡಾ ೧೬ರಷ್ಟು ಮೀಸಲಾತಿಯನ್ನು ಮರಾಠರಿಗೆ ಘೋಷಿಸಿದರು. ಆದರೆ ಬಾಂಬೆ ಹೈಕೋರ್ಟ್ ಇದನ್ನು
ವಜಾ ಮಾಡಿತ್ತು. ವಾಸ್ತವ ಇದಾಗಿದ್ದರೂ ೨೦೧೬ರಲ್ಲಿ ಬಿಜೆಪಿ ಮತ್ತು ಶಿವಸೇನೆ ಸರಕಾರದ ಅವಧಿಯಲ್ಲಿ ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡಲಾಗುತ್ತದೆ.

ಮರಾಠ ಕ್ರಾಂತಿ ಮೋರ್ಚಾ ಹೆಸರಲ್ಲಿ ರಾಜ್ಯಾದ್ಯಂತ್ಯ ಚಳವಳಿ ಹುಟ್ಟು ಹಾಕುತ್ತಾರೆ. ಮೀಸಲಾತಿ ಹೋರಾಟವು ಹಿಂಸಾಚಾರಕ್ಕೆ ತಿರುಗಿ ಹೋರಾಟಗಾರ ನೊಬ್ಬನ ಆತ್ಮಾಹುತಿ ಮಾಡಿಕೊಂಡಾಗ ಮರಾಠ ಕ್ರಾಂತಿ ಮೋರ್ಚಾ ತನ್ನ ಹೋರಾಟವನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ. ರಾಜ್ಯದ ಶಾಂತಿಯುತ ವಾತಾವರಣಕ್ಕೆ ಕೊಳ್ಳಿ ಇಟ್ಟು ಈ ಹೋರಾಟಕ್ಕೆ ಕಾಂಗ್ರೆಸ್ ಮತ್ತು ವಾಮಪಂಥೀ ಯರು ಬೆಂಬಲ ನೀಡಿದ್ದು ಗುಟ್ಟಾಗೇನು ಇಲ್ಲ.

೨೦೧೫ರಲ್ಲಿ ಗುಜರಾತಿನ ಪಾಟೀದಾರ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಚಳವಳಿಯು ಆರಂಭ ವಾಗುತ್ತದೆ. ಹಾರ್ದಿಕ್ ಪಟೇಲ್ ಎಂಬ ಪಡ್ಡೆ ಹುಡುಗನ ನೇತೃತ್ವದಲ್ಲಿ ಈ ಹೋರಾಟವು ಗುಜರಾತಿನಲ್ಲಿ ಬಿರುಗಾಳಿ ಯನ್ನು ಎಬ್ಬಿಸುತ್ತದೆ. ಆಡಳಿತ ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋದಿಯವರನ್ನು ಪಟೇಲ್ ಸಮುದಾಯ ವಿರೋಽ ಎಂದು ಬಿಂಬಿಸಲು ಈ ಹೋರಾಟದ ದಾಳವನ್ನು ಉರುಳಿಸಲಾಗಿತ್ತು.

ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲ ವಾಗಿರುವ ಪಟೇಲ್ ಸಮುದಾಯದವರು ರಾಜ್ಯವ್ಯಾಪಿ ಹೋರಾಟವನ್ನು
ಕೈಗೊಳ್ಳುತ್ತಾರೆ. ಹೋರಾಟವು ಹಿಂಸಾರೂಪ ಪಡೆಯುತ್ತದೆ. ೧೪ ಜನರ ಬಲಿಯಾಗಿ ಕೋಟ್ಯಂತರ ರುಪಾಯಿ ಸಾರ್ವಜನಿಕ ಆಸ್ತಿಯು ನಷ್ಟವಾಗುತ್ತದೆ.

ಚಳವಳಿಗೆ ಗುಜರಾತ್ ಸರಕಾರ ಮಣಿದು ೨೦೧೫ರಲ್ಲಿ ಶೇಕಡಾ ೧೦ರಷ್ಟು ಮೀಸಲಾತಿಯನ್ನು ಪಾಟೀದಾರ ಸಮಾಜಕ್ಕೆ ಘೋಷಿಸುತ್ತದೆ.ಆದರೆ ಈ ಮೀಸಲಾತಿಯನ್ನೂ ನ್ಯಾಯಾಲಯ ರದ್ದು ಪಡಿಸುತ್ತದೆ. ಗುಜರಾತಿನ ವಿಧಾನ ಸಭಾ ಚುನಾವಣೆಯವರೆಗೂ ಈ ಮೀಸಲಾತಿ ಹೋರಾಟವನ್ನು ಕಾಯ್ದುಕೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದ ತರುವಾಯ ಇಡಿ ಚಳುವಳಿಯು ಸ್ತಬ್ಧವಾಗುತ್ತದೆ.

ಉತ್ತರ ಭಾರತದಲ್ಲಿ ಜಾಟರು ಅತ್ಯಂತ ಪ್ರಬಲ ಸಮುದಾಯದವರು. ಉತ್ತರಪ್ರದೇಶ, ರಾಜಾಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಇವರ ಶಕ್ತಿ ಗಣನೀಯವಾಗಿದೆ. ಹರಿಯಾಣದಲ್ಲಿ ಒಟ್ಟು ಜನಸಂಖ್ಯೆಯ ೩೦ರಷ್ಟು ಜಾಟರಿದ್ದಾರೆ. ಜಾಟ್ ಸಮುದಾಯಕ್ಕೆ ಸೇರದ ಮನೋಹರ ಲಾಲ್ ಖಟ್ಟರ್‌ರವರು ಹರಿಯಾಣದ ಮುಖ್ಯಮಂತ್ರಿ ಯಾದ ತರುವಾಯ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹೋರಾಟ ಆರಂಭವಾಗುತ್ತದೆ.

೨೦೧೭ರಲ್ಲಿ ಈ ಚಳವಳಿಯು ತೀವ್ರ ಸ್ವರೂಪವನ್ನು ಪಡೆಯುತ್ತದೆ. ರಾಜ್ಯದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆದು ೩೦ ಜನ ಬಲಿಯಾಗು ತ್ತಾರೆ. ಸಾವಿರಾರು ಅಂಗಡಿ ಗಳಿಗೆ ಬೆಂಕಿ, ಶಾಲಾ ಕಟ್ಟಡಗಳಿಗೆ ಅಪಾರ ಹಾನಿಯಾಗುತ್ತದೆ. ಹೋರಾಟವು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಅಂದಾಜು ೩೪ ಸಾವಿರ ಕೋಟಿ ಸಾರ್ವಜನಿಕರ ಆಸ್ತಿ ನಷ್ಟ ವಾಗುತ್ತದೆ. ಕೋಟಿ ಜಾಟ್ ಸಮುದಾಯವನ್ನು ಬಿಜೆಪಿ ಮತ್ತು ಮೋದಿ ಸರಕಾರದ ವಿರುದ್ಧ ಎತ್ತಿ ಕಟ್ಟಲು ನಡೆದ ಮತ್ತೊಂದು ಅನಾಹುತ ಇದಾಗಿತ್ತು.

ಇದರ ನಡುವೆ ೨೦೧೭ರಲ್ಲಿ ಮತ್ತೇ ರಾಜಸ್ಥಾನದಲ್ಲಿ ಗುಜ್ಜರ್‌ಗಳಿಗೆ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟು ಕೊಂಡು ಉಗ್ರ ಸ್ವರೂಪದ ಚಳುವಳಿಯು ನಡೆಯುತ್ತದೆ. ೨೦೧೮ರಲ್ಲಿ ಲಿಂಗಾಯಿತರನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು ಎಂದು ಹೋರಾಟ ಆರಂಭವಾಗುತ್ತದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸನ್ಮಾನದ ಕಾರ್ಯಕ್ರಮವೊಂದರಲ್ಲಿ ಲಿಂಗಾಯಿತರು ಪ್ರತ್ಯೇಕ ಧರ್ಮದ ಪ್ರಸ್ತಾವನೆ ತಂದರೆ ಅದನ್ನು ಒಪ್ಪಿಕೊಳ್ಳಲಾಗುವುದು ಎಂದು ಘೋಷಿಸಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ನಾಂದಿ ಹಾಡುತ್ತಾರೆ.

ಸಿದ್ದರಾಮಯ್ಯನವರ ನಿಕಟವರ್ತಿ ಎಂ.ಬಿ. ಪಾಟೀಲರು ಈ ಹೋರಾಟದ ರುವಾರಿಗಳು ಇವರೊಂದಿಗೆ ವಿನಯ್ ಕುಲಕರ್ಣಿ
ಬಸವರಾಜ ರಾಯರೆಡ್ಡಿಯವರು ಕೈ ಜೋಡಿಸು ವರು. ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ ನೀಡುವ ಯಾವುದೇ ಇರಾದೆಯಿಂದ ಈ ಹೋರಾಟಕ್ಕೆ ಬೆಂಕಿ ಹಚ್ಚಿದ್ದಲ್ಲ. ವೀರಶೈವ ಲಿಂಗಾಯಿತರ ಪ್ರಶ್ನಾತೀತ ನಾಯಕರಾದ ಬಿ.ಎಸ್. ಯಡಿಯೂರಪ್ಪನವರನ್ನು ಮಣಿಸಲು ಹಾಗೂ ಅವರಿಗೆ ಮುಜುಗರವನ್ನುಂಟು ಮಾಡುವ ತಂತ್ರಗಾರಿಕೆಯಾಗಿತ್ತು.

ನಿವೃತ್ತ ನ್ಯಾಯಾಧೀಶರಾದ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಭ ಜನರ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ
ಲಿಂಗಾಯತ ಧರ್ಮ ರಚನೆಯ ಬಗ್ಗೆ ವರದಿ ನೀಡಲು ಗಡುವು ನೀಡಲಾಗುತ್ತದೆ. ರ‍್ಯಾಕೆಟ್ ವೇಗದಲ್ಲಿ ನಾಗಮೋಹನದಾಸ್ ತಂಡ
ದವರು ಪ್ರತ್ಯೇಕ ಧರ್ಮ ರಚನೆಗೆ ಶಿಫಾರಸು ಮಾಡಿ ವರದಿ ಸಲ್ಲಿಸುತ್ತಾರೆ. ನಾಗಮೋಹನದಾಸ್ ವರದಿಯನ್ನು ರಾಜ್ಯ ಸರಕಾರ
ಅನುಮೋದಿಸಿ ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕೇಂದ್ರ ಸರಕಾಕ್ಕೆ ರವಾನಿಸುತ್ತಾರೆ.

ಇವರ ಉದ್ದೇಶ ರಾಜ್ಯ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆಯನ್ನು ಮೋದಿ ಸರಕಾರಕ್ಕೆ ಸಲ್ಲಿಸಿದ್ದರೂ ಅದನ್ನು ಅನುಮೋದನೆ ಮಾಡುತ್ತಿಲ್ಲ ಎಂದು ತಮಟೆ ಹೊಡೆಯಬೇಕಿತ್ತು. ಇವರ ದುರಾದೃಷ್ಟಕ್ಕೆ ಜಾಗೃತ ಲಿಂಗಾಯಿತ ಸಮಾಜವು ಕಾಂಗ್ರೆಸ್ ಪಾರ್ಟಿಯ ರಾಜಕೀಯ ಸಂಚನ್ನು ಅರಿತು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡುತ್ತದೆ.

೨೦೧೮ರ ಜನವರಿ ರಂದು ಭೀಮಾ ಕೋರೆಗಾಂವ್‌ನಲ್ಲಿ ೨೦೦ನೇ ವರ್ಷದ ಕೋರೆಗಾಂವ್ ಯುದ್ಧದ ನೆನಪಿಗೆ ದಲಿತರ ಬೃಹತ್
ವಿಜಯದ ರ‍್ಯಾಲಿ ನಡೆಯುತ್ತದೆ. ೧೯೨೮ರಲ್ಲಿ ಡಾ.ಅಂಬೇಡ್ಕರ್‌ರವರು ಇದನ್ನು ಆರಂಭಿಸುತ್ತಾರೆ. ತದನಂತರ ಪರಂಪರೆಯ ರೀತಿ ಈ ವಿಜಯದ ರ‍್ಯಾಲಿ ನಡೆದುಕೊಂಡು ಬಂದಿದೆ. ಆದರೆ ೨೦೧೮ರಲ್ಲಿ ಈ ರ‍್ಯಾಲಿಯ ವೇಳೆ ದಲಿತರ ಮತ್ತು ಮರಾಠಿಗರ ನಡುವೆ ದೊಡ್ಡ ಮಟ್ಟದ ಗಲಭೆ ಮತ್ತು ಹಿಂಸಾಚಾರ ನಡೆಯುತ್ತದೆ.

ಗಲಭೆಗೆ ೧೬ ವರ್ಷದ ಹುಡುಗನೊಬ್ಬ ಬಲಿಯಾಗುತ್ತಾನೆ. ಇಡಿ ಮಹಾರಾಷ್ಟ್ರಕ್ಕೆ ಭೀಮಾ ಕೋರೆಗಾಂವ್ ಚಳವಳಿ ಹರಡುತ್ತದೆ. ವ್ಯಾಪಕವಾದ ಹಿಂಸಾಚಾರ ರಾಜ್ಯದೆಲ್ಲೆಡೆ ನಡೆಯುತ್ತದೆ. ಮಾವೋವಾದಿಗಳಾದ ಗೌತಮ್ ನವ್ಲೇಕರ್, ವರವರ ರಾವ್,
ಸುಧಾ ಭಾರದ್ವಾಜ್ ಮುಂತಾದವರು ಮಾಡಿದ ಸಂಚಿನ ಫಲವಾಗಿ ದಲಿತರು ಮರಾಠಿಗರ ನಡೆದ ಗಲಭೆಗೆ ಕಾರಣ ಎಂದು ತನಿಖೆಯಲ್ಲಿ ಬಯಲಾಗುತ್ತದೆ. ದಲಿತ ಸಮಾಜವನ್ನು ಬಿಜೆಪಿಯಿಂದ ದೂರ ಸೆಳೆದು ಮೋದಿ ವಿರುದ್ಧ ಎತ್ತಿ ಕಟ್ಟುವ ರಾಜಕೀಯ ಸಂಚಿನ ಭಾಗವಾಗಿರುತ್ತದೆ.

ಮಹಾರಾಷ್ಟ್ರದಲ್ಲಿ ಮರಾಠರನ್ನು ಮತ್ತು ದಲಿತರನ್ನು, ಹರಿಯಾಣದಲ್ಲಿ ಜಾಟರನ್ನು, ಗುಜರಾತಿನಲ್ಲಿ ಪಾಟೀದಾರರನ್ನು ಕರ್ನಾಟಕದಲ್ಲಿ ಲಿಂಗಾಯಿತರನ್ನು ರಾಜಸ್ಥಾನದಲ್ಲಿ ಗುಜ್ಜರ್‌ಗಳನ್ನು ಮೋದಿಯವರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದ ಫಲವೆ ಮೀಸಲಾತಿ ಹೋರಾಟಗಳು ನಡೆದಿದ್ದು. ೨೦೧೪ರಿಂದ ೨೦೧೯ರವರೆಗೆ ಸರಕಾರವನ್ನು ಅಸ್ಥಿರಗೊಳಿಸಲು ಮತ್ತು ಮೋದಿ ಯವರ ಜನಪ್ರಿಯತೆಯನ್ನು ಕುಗ್ಗಿಸಲು ಮೋದಿ ವಿರೋಧಿಗಳು ಒಂದಲ್ಲಾ ಒಂದು ಪಿತೂರಿಗಳನ್ನು ರಚಿಸುತ್ತಲೇ ಇದ್ದಾರೆ.

ತಮ್ಮ ರಾಜಕೀಯ ಸ್ವಾರ್ಥಕ್ಕೆ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಗೆಡವಿ ಗಲಭೆ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಪಿತೂರಿಗಳು ನಡೆಯುತ್ತದೆ. ಇವರ ದುರಾದೃಷ್ಟಕ್ಕೆ ಎಲ್ಲಾ ಪಿತೂರಿ ಮತ್ತು ಒಳಸಂಚುಗಳನ್ನು ಮೋದಿಯವರು ಸಮರ್ಥವಾಗಿ ಎದುರಿಸಿ ಇವರ ಉದ್ದೇಶಕ್ಕೆ ತಣ್ಣೀರೆರಚುತ್ತಾರೆ. ಇವರ ಬಂಡವಾಳಗಳನ್ನು ಜನರ ಮುಂದೆ ಬಟ್ಟಾ ಬಯಲು ಮಾಡುತ್ತಾರೆ. ಅಪಾರವಾದ ಜನಬೆಂಬಲದಿಂದ ಹಾಗೂ ತಮ್ಮ ಜನಪರ, ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಸಂಚು ಕೋರರಿಗೆ ಬಲವಾದ ತಿರುಗೇಟನ್ನು ನೀಡಿದ ನರೇಂದ್ರ ಮೋದಿಯವರು ೨೦೧೯ರ ಚುನಾವಣೆಯಲ್ಲಿ ಮತ್ತೇ ಭರ್ಜರಿ ಗೆಲುವನ್ನು ಸಾಧಿಸುತ್ತಾರೆ.