Wednesday, 23rd October 2024

ಅಲ್ಲಿ ಮೋದಿಯಷ್ಟೇ, ಇಲ್ಲಿ ಬಿಎಸ್’ವೈ ಅನಿವಾರ್ಯ !

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ

ಪ್ರಸ್ತುತ ರಾಜ್ಯ ಬಿಜೆಪಿ ರಾಜಕಾರಣವನ್ನು ಗಮನಿಸಿದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರ ಅವಧಿ ಯನ್ನು ಪೂರೈಸಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪನವರ ಬಗ್ಗೆ ನೂರಕ್ಕೆ ನೂರರಷ್ಟು ಪೂರಕ ಅಭಿಪ್ರಾಯ ಇಲ್ಲದಿರಬಹುದು. ಆದರೆ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಹಂಬಲ ವಂತೂ ಇದ್ದಂತಿಲ್ಲ.

ಮೊನ್ನೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ನಾಯಕರ ಮಾತು, ತೆರೆಮರೆಯ ಚಟುವಟಿಕೆ, ರಾಜ್ಯ ಉಸ್ತುವಾರಿ ನಾಯಕರ ಮಾತುಗಳನ್ನೇ ಕೇಳಿದರೆ, ಯಡಿಯೂರಪ್ಪನವರಿಗೆ ಸದ್ಯಕ್ಕೆ ಯಾವ ಅಪಾಯವೂ ಇಲ್ಲ.
ಯಡಿಯೂರಪ್ಪನವರ ಪರವಾಗಿ ಇರುವ ಪ್ರಬಲ ಕಾರಣವೆಂದರೆ, ಅವರಿಗೆ ಪರ್ಯಾಯ ನಾಯಕರಿಲ್ಲದಿರುವುದು. ಅವರನ್ನು ಪದಚ್ಯುತಗೊಳಿಸಿದರೆ, ಆ ಸ್ಥಾನ ತುಂಬಬಲ್ಲ ಸಮರ್ಥ ನಾಯಕ ಮತ್ತೊಬ್ಬನಿಲ್ಲ. ಅವರನ್ನು ಬಿಟ್ಟು ಸೂಚಿಸುವ ಹೆಸರುಗಳು, ಅವರ ಸನಿಹಕ್ಕೂ ನಿಲ್ಲುವಂಥವಲ್ಲ.

ಯಾರೂ ಸಹ ಯಡಿಯೂರಪ್ಪ ಅವರ ಸಮ-ಸಮ ಬರುವ ಮಾತಂತೂ ದೂರವೇ ಉಳಿಯಿತು. ಕೇಂದ್ರಕ್ಕೆ ಮೋದಿಯೆಷ್ಟು ಅನಿವಾರ್ಯವೋ, ರಾಜ್ಯ ಬಿಜೆಪಿಗೆ ಯಡಿಯೂರಪ್ಪನವರು ಅಷ್ಟೇ ಅನಿವಾರ್ಯ. ಯಡಿಯೂರಪ್ಪನವರು ಇಲ್ಲದೇ, ಮೋದಿ ನಾಮಬಲವೊಂದೇ ಕೆಲಸ ಮಾಡದು. ಇಬ್ಬರೂ ಇದ್ದರೆ ಮಾತ್ರ ಮ್ಯಾಜಿಕ್ ಫಿಗರ್ ತಲುಪಬಹುದು.

ಯಡಿಯೂರಪ್ಪ ಕರ್ನಾಟಕದ ಮಟ್ಟಿಗೆ ಇಂದಿಗೂ ಪ್ರಶ್ನಾತೀತ ನಾಯಕ. ಅವರನ್ನು ಬದಿಗೆ ಸರಿಸಿ, ಅವರ ಮುಂದೆ ಮತ್ತೊಬ್ಬ ರನ್ನು ತರುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಬಿಜೆಪಿ ಅಂಥ ದುಸ್ಸಾಹಸಕ್ಕೆ ಇಳಿದರೆ, ಅದಕ್ಕೆ ಅಪಾರ ಬೆಲೆ ತೆರಬೇಕಾದೀತು.
ಅಷ್ಟಕ್ಕೂ ಯಡಿಯೂರಪ್ಪನವರ ವಿರುದ್ಧವಿರುವ ಅಂಶವೆಂದರೆ, ಅವರ ವಯಸ್ಸು. ಅವರಿಗೆ ಆಗ ಎಪ್ಪತ್ತೆಂಟು ವರ್ಷಗಳಾದವು. ಬಿಜೆಪಿ ಸಿದ್ಧಾಂತದ ಪ್ರಕಾರ, ಎಪ್ಪತ್ತೈದು ವರ್ಷಗಳ ನಂತರ, ಯಾರೂ ಅಧಿಕಾರಯುತ ಸ್ಥಾನವನ್ನು ಹೊಂದಿರಬಾರದು.

ಇದನ್ನು ಕಠಿಣವಾಗಿ ಜಾರಿಗೆ ತಂದಿದ್ದೇ ಆಗಿದ್ದರೆ, ಯಡಿಯೂರಪ್ಪನವರು ಒಂದೂವರೆ ವರ್ಷದ ಹಿಂದೆ, ಮುಖ್ಯಮಂತ್ರಿ ಆಗಲೇ ಬಾರದಿತ್ತು. ಇನ್ನು ಅವರಿಗೆ ಎರಡೂವರೆ ವರ್ಷಗಳಿವೆ. ಈ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವುದು ಉಚಿತ ವಾಗಲಾರದು. ಈಗ ವಯಸ್ಸಿನ ಕಾರಣದಿಂದಲೇ ಅವರನ್ನು ಮುಂದುವರಿಸುವುದು ವಿಹಿತ. ಚುನಾವಣಾ ತನಕ ಅವರನ್ನು ಮುಖ್ಯಮಂತ್ರಿಯಾಗಿ ಇರಲು ಅವಕಾಶ ಕಲ್ಪಿಸಿ, ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಸೆಣಸಿ, ಪಕ್ಷವನ್ನು ಅಧಿಕಾರಕ್ಕೆ
ತಂದು ಅವರೇ ಬೇರೆಯವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಿ, ಗುಡ್ ಬೈ ಎಂದು ವಿರೋಚಿತವಾಗಿ ನಿರ್ಗಮಿಸುವಂತೆ ಮಾಡಿದರೆ ಅದು ಪಕ್ಷಕ್ಕೂ, ಹೈಕಮಾಂಡಿಗೂ ಶೋಭೆ.

ಅದು ಬಿಟ್ಟು ಅವರನ್ನು ಅದಕ್ಕೂ ಮುಂಚೆ ಕೆಳಗಿಳಿಸುವ ಪ್ರಯತ್ನ ಮಾಡಿದ್ದೇ ಆಗಿದ್ದಲ್ಲಿ, ಪಕ್ಷದ ನಾಯಕರು ತಮ್ಮ ಚೊಣ್ಣ
ದಲ್ಲಿ ಚೇಳು ಬಿಟ್ಟುಕೊಂಡಂತಾಗುತ್ತದೆ. ಅಷ್ಟಕ್ಕೂ ಅದರಿಂದ ಸಾಧಿಸುವಂಥದ್ದೇನೂ ಇಲ್ಲ. ಒಂದು ಪ್ರಶ್ನೆಯನ್ನು ನೇರವಾಗಿ
ಕೇಳಲೇಬೇಕಾಗುತ್ತದೆ. ಯಡಿಯೂರಪ್ಪನವರನ್ನು ಯಾಕೆ ಕೆಳಕ್ಕಿಳಿಸಬೇಕು ? ಅವರಿಂದ ಆಗಬಾರದ ಅನಾಚಾರ ಆಗಿದೆಯಾ? ಇಲ್ಲವಲ್ಲ. ಭ್ರಷ್ಟಾಚಾರ ಪ್ರಕರಣಗಳು ಬಹಿರಂಗವಾಗಿದೆಯಾ? ಇಲ್ಲವಲ್ಲ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆಯಾ? ಇಲ್ಲವಲ್ಲ. ಏನೋ ಆಗಬಾರದ, ಮಾಡಬಾರದ ಕೆಲಸಗಳು ಆಗಿಬಿಟ್ಟಿದೆಯಾ? ಇಲ್ಲವಲ್ಲ.

ಹಾಗಾದರೆ ಸಣ್ಣಪುಟ್ಟ ಲೋಪ-ದೋಷಗಳು, ಓರೆ -ಕೋರೆಗಳು ಇಲ್ಲವಾ? ಖಂಡಿತಾ ಇವೆ. ಅವು ಎಲ್ಲಾ ಸರಕಾರಗಳಲ್ಲೂ ಇರುತ್ತವೆ. ಕೇಂದ್ರ ಸರಕಾರಕ್ಕೆ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಮುಷ್ಕರವನ್ನೇ ಸ್ಥಗಿತಗೊಳಿಸಲು ಆಗಿಲ್ಲ, ಅದಕ್ಕೊಂದು ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇವೆ ಸರಕಾರವೆಂದ ಮೇಲೆ ಇದ್ದೇ ಇರುತ್ತವೆ. ಇಷ್ಟೊಂದು ದೊಡ್ಡ ವ್ಯವಸ್ಥೆಯಲ್ಲಿ ಇವೆಲ್ಲ ಸಹಜ. ಆ ರೀತಿಯ ಲೋಪ-ದೋಷಗಳು ಯಡಿಯೂರಪ್ಪನವರ ಸರಕಾರದಲ್ಲೂ ಇವೆ. ನಾಳೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಯಾರೇ ಮುಖ್ಯಮಂತ್ರಿ ಆಗಲಿ, ಇವೆ ಇದ್ದೇ ಇರುತ್ತವೆ.

ಯಡಿಯೂರಪ್ಪನವರಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಈ ಮಾತನ್ನು ಅನೇಕರು ಒಪ್ಪದಿರಬಹುದು. ಅವರನ್ನು ಬಿಟ್ಟರೆ, ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಯಾವ ನಾಯಕರಿಗೂ ಇಲ್ಲ. ಬೇರೆಯವರು ಏನೇ ಹೇಳಬಹುದು, ವಾದದ ಚೆಂದಗಟ್ಟಲು ಆ ಮಾತುಗಳು ಆಕರ್ಷಕವಾಗಿ ಕಾಣಬಹುದು, ಆದರೆ ಯಡಿಯೂರಪ್ಪನವರಿಗೆ ಬೇರೆ ಯಾರೂ ಸರಿಸಾಟಿ ಆಗಲಾರರು. ಇದನ್ನು ಅವರ ವಿರೋಧಿಗಳೂ, ಬೇರೆ ಪಕ್ಷಗಳಲ್ಲಿರುವವರೂ ಅಂತರಂಗದಲ್ಲಿ ಒಪ್ಪಿಕೊಳ್ಳು ತ್ತಾರೆ.

ಅಷ್ಟಕ್ಕೂ ಯಡಿಯೂರಪ್ಪನವರು ಕೇವಲ ಒಂದು ಸಮೂದಾಯದ ಅಥವಾ ಲಿಂಗಾಯತ ಸಮೂದಾಯದ ನಾಯಕರಾಗಿ ಉಳಿದಿಲ್ಲ. ಅವರು ಎಲ್ಲಾ ಸಮೂಹಗಳನ್ನೂ ಆವರಿಸಿರುವ ಜನನಾಯಕ ಅಥವಾ ಮಾಸ್ ಲೀಡರ್. ಅವರು ಎಲ್ಲಾ
ಕೋಮು ಗಳನ್ನೂ ತಟ್ಟಿದವರು. ಒಂದು ಪ್ರದೇಶಕ್ಕೆ ಮಾತ್ರ ಸೀಮಿತರಾದವರಲ್ಲ. ಅವರು ಇಡೀ ರಾಜ್ಯದ ಎಲ್ಲಾ ಪ್ರದೇಶಗಳನ್ನು ಮುಟ್ಟಿದವರು. ಇಂಥ ಜನಮಾನಸದ ನಾಯಕನನ್ನು ವಯಸ್ಸಿನ ಕಾರಣ ನೀಡಿ, ಕ್ರಿಕೆಟ್ ಆಟಗಾರರನ್ನು ಪೆವಿಲಿಯನ್‌ನಲ್ಲಿ ಕುಳ್ಳಿರಿಸಿದಂತೆ, ಕುಳ್ಳರಿಸುವುದು ಅಥವಾ ನಿವೃತ್ತಿ ಘೋಷಿಸುವಂತೆ ಒತ್ತಡ ಹೇರುವುದು ಸಾಧ್ಯವಾ? ಅಷ್ಟಕ್ಕೂ ರಾಜ್ಯದಲ್ಲಿ ಈ ಸರಕಾರ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಮತ್ತು ಯಡಿಯೂರಪ್ಪನವರು ಮಾತ್ರ, ಬಿಜೆಪಿ ಹೈಕಮಾಂಡ್ ಅಲ್ಲ.

ಒಂದು ಸರಕಾರವನ್ನು ಅಧಿಕಾರದಿಂದ ತೆಗೆಯುವ ಮತ್ತು ಸರಕಾರ ಅಧಿಕಾರಕ್ಕೆ ತರುವ ತಾಕತ್ತಿರುವುದು ಯಡಿಯೂರಪ್ಪ ನವರಿಗೆ ಮಾತ್ರ. ಕುಮಾರಸ್ವಾಮಿ ಸರಕಾರವನ್ನು ಪತನಗೊಳಿಸಲು ಯಡಿಯೂರಪ್ಪನವರಲ್ಲದೇ ಬೇರೆಯವರಿಗೆ ಸಾಧ್ಯವಿತ್ತಾ? ಇಂಪಾಸಿಬಲ. ಒಂದಂತೂ ಸತ್ಯ. ಯಾವುದೇ ದೃಷ್ಟಿಕೋನದಿಂದ ನೋಡಿದರೂ, ಸ್ಪಷ್ಟವಾಗುವುದೇನೆಂದರೆ, ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಮುಂದುವರಿದರೆ ಬಿಜೆಪಿ ಕಳೆದುಕೊಳ್ಳುವುದೇನಿಲ್ಲ.

ಇಲ್ಲದಿದ್ದರೆ ಅದು ಎಲ್ಲವನ್ನೂ ಕಳೆದುಕೊಳಬೇಕಾಗುತ್ತದೆ. ಒಂದೆಡೆ ಪಕ್ಷದಲ್ಲಿರುವ ಯಡಿಯೂರಪ್ಪನವರ ವಿರೋಧಿಗಳು ಸರಕಾರ ಇನ್ನೂ ಟೇಕಾ- ಆಗಿಲ್ಲ ಎಂದು ಹೇಳುತ್ತಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಹೇಳುತ್ತಾರೆ. ಇದಕ್ಕೆ ಯಾರು ಕಾರಣರು? ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಂದಿನಿಂದ ಒಂದಿಂದು ಕಾರಣದಿಂದ ಅವರ ಕೈ ಕಟ್ಟಿ ಹಾಕಿದವರು ಯಾರು? ಪದೇ ಪದೆ ನಾಯಕತ್ವ ಬದಲಾವಣೆ ಗಾಳಿಸುದ್ದಿ ಸದಾ ಬೀಸುತ್ತಲೇ ಇರುವಂತೆ ಮಾಡಿದವರು ಯಾರು? ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರು ಹರಸಾಹಸಪಡುವಂತೆ ಮಾಡಿದವರು ಯಾರು?
ಯಡಿಯೂರಪ್ಪನವರಿಗೆ ಸರಿಯಾಗಿ ಆಡಳಿತ ನಡೆಸಲು ಬಿಡದಿದ್ದರೆ, ಸರಕಾರವಾದರೂ ಹೇಗೆ ಟೇಕಾ- ಆಗುತ್ತದೆ? ಪ್ರತಿ ಹದಿನೈದು ದಿನಗಳಿಗೊಮ್ಮೆ, ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹ ಹಬ್ಬಿಸಿದರೆ, ಅವರಾದರೂ ಹೇಗೆ ನಿಶ್ಚಿಂತೆಯಿಂದ ಅಧಿಕಾರ ನಡೆಸಬಹುದು? ಮುಖ್ಯಮಂತ್ರಿಗಳ ಎರಡೂ ಕಾಲನ್ನು ಕಟ್ಟಿ ಹಾಕಿ ವೇಗವಾಗಿ ಓಡು ಅಂದರೆ ಅವರಾದರೂ ಏನು ಮಾಡುತ್ತಾರೆ? ಅವರು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಅವರನ್ನು ಮುಜುಗರಕ್ಕೆ ಈಡು ಮಾಡುತ್ತಿರುವ ಪ್ರಯತ್ನ ಗಳು ನಡೆಯುತ್ತಿವೆ.

ಇವೆಲ್ಲವನ್ನೂ ಸಹಿಸಿಕೊಂಡು, ಈ ಕೋವಿಡ್ ಸಂಕಷ್ಟದ ಸಮಯದಲ್ಲೂ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಕೈಕಟ್ಟಿ ಹಾಕುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ನಾಯಕತ್ವ ಬದಲಾವಣೆಯ ತೂಗುಗತ್ತಿ ಸದಾ ನೇತಾಡುತ್ತಿದ್ದರೆ ಯಾವ ನಾಯಕನೂ ನಿಶ್ಚಿಂತೆಯಿಂದ ಆಡಳಿತ ನಡೆಸಲಾರ. ನಿಮ್ಮ ಅವಧಿ ಮುಗಿಯುವ ತನಕ ನಿಮ್ಮನ್ನು ಮುಟ್ಟುವುದಿಲ್ಲ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ನೀವು ಮುನ್ನಡೆಯಿರಿ ಎಂಬ ಅಭಯಹಸ್ತವನ್ನು ಪಕ್ಷದ ದಿಲ್ಲಿ ನಾಯಕರೇ ನಾದರೂ ನೀಡಿದ್ದರೆ, ಯಡಿಯೂರಪ್ಪ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಯಾರಿಗೆ ಸಾಧ್ಯವಾಗುತ್ತಿತ್ತು? ಯಡಿಯೂರಪ್ಪನವರ ವಿಷಯದಲ್ಲಿ ಹೈಕಮಾಂಡ್ ಸ್ವಲ್ಪ ಉದಾರವಾಗಿ ನಡೆದುಕೊಳ್ಳಬೇಕಿತ್ತು.

ಅದರಿಂದ ಹೈಕಮಾಂಡ್ ನಾಯಕರ ಕಿಮ್ಮತ್ತು ಜಾಸ್ತಿಯಾಗುತ್ತಿತ್ತು. ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರವಾಗಿರುವುದು ಕರ್ನಾಟಕದಲ್ಲೊಂದೇ. ಈ ಭದ್ರ ಕೋಟೆಗೆ ಬುನಾದಿ ಹಾಕಿದವರು ಯಡಿಯೂರಪ್ಪನವರು ಎಂಬುದನ್ನು ಮರೆಯುವಂತಿಲ್ಲ. ಕಳೆದ ನಾಲ್ಕು ದಶಕಗಳ ರಾಜ್ಯ ಬಿಜೆಪಿ ವಿದ್ಯಮಾನಗಳೆ ಅವರ ಸುತ್ತವೇ ಸುತ್ತುತ್ತಿವೆ ಎಂಬುದು ಗಮನಾರ್ಹ. ಇಂಥ ನಾಯಕನಿಗೆ ಯಥೋಚಿತ ಗೌರವ ನೀಡಬೇಕಾದುದು ದಿಲ್ಲಿ ನಾಯಕರ ಕರ್ತವ್ಯ.

ಮೋದಿಯವರಿಂದಾಗಿ ಕರ್ನಾಟಕದಲ್ಲಿ ಪಕ್ಷ ಇಪ್ಪತ್ತೈತೈದು ಮತ್ತೊಂದು ಸ್ಥಾನವನ್ನು ಗಳಿಸಿಲ್ಲ. ಅದರಲ್ಲಿ ಯಡಿ
ಯೂರಪ್ಪನವರ ದೊಡ್ಡ ಕೊಡುಗೆಯೂ ಇದೆ. ಅವೆ ಹೋಗಲಿ, ಸಚಿವ ಸಂಪುಟವನ್ನು ವಿಸ್ತರಿಸುವ ವಿಷಯಕ್ಕೆ ಸಂಬಂಧಿಸಿ ದಂತೆ, ಕಳೆದ ಮೂರು ತಿಂಗಳುಗಳಿಂದ ಗೊಂದಲಗಳು ಏಳುತ್ತಲೇ ಇವೆ. ರಾಜ್ಯ ಸಂಪುಟವನ್ನು ವಿಸ್ತರಿಸಲು ಇಷ್ಟೆ ಹರಸಾಹಸ ಪಡಬೇಕಾ? ಇದು ರಾಜ್ಯವನ್ನು ಆವರಿಸಿದ ಗಹನವಾದ ಸಮಸ್ಯೆಯಾಗಿ ಕಾಡಬೇಕಾ? ಕೇಂದ್ರ ಸರಕಾರ ರಚನೆ ಬಗ್ಗೆ ಈ ಯಾವ ವಿವಾದಗಳೂ ಉದ್ಭವಿಸುವುದೇ ಇಲ್ಲ. ಅಂಥ ಜಾಣ್ಮೆಯನ್ನು ಹೈಕಮಾಂಡ್ ನಾಯಕರು ರಾಜ್ಯದ ವಿಷಯದಲ್ಲೂ ಏಕೆ ತೆಗೆದು ಕೊಳ್ಳುವುದಿಲ್ಲ? ಇದರಿಂದ ಹರಾಜಾಗುವುದು ಹೈಕಮಾಂಡ್ ನಾಯಕರ ಮರ್ಯಾದೆಯೇ.

ತಮ್ಮ ಪಕ್ಷದ ಆಂತರಿಕ ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಲು ಪರದಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುವು ದಿಲ್ಲವೇ? ಒಂದು ವಿಷಯವನ್ನು ಮೂರ್ನಾಲ್ಕು ತಿಂಗಳುಗಳ ಕಾಲ ಚರ್ಚೆಗೆ ಬಿಡುವುದು ಅಭಿವೃದ್ಧಿಯ ದೃಷ್ಟಿಯಿಂದ ಕಂಟಕ ವಲ್ಲವೇ? ಹಾಗಾದರೆ ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಗೂ ಬಿಜೆಪಿ ಹೈಕಮಾಂಡ್ ಸಂಸ್ಕೃತಿಗೂ ಏನು ವ್ಯತ್ಯಾಸ ? ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಮತ್ತು ಜೆಡಿಎಸ್ ವಲಸಿಗ ಶಾಸಕರ ಕೊಡುಗೆಯಿದೆ.

ನೂರಾ ಐದು ಇದ್ದಿದ್ದು ನೂರಾ ಇಪ್ಪತ್ತು ಆಗಲು ವಲಸಿಗರೇ ಕಾರಣ. ಅವರೇನು ಬಿಜೆಪಿಯನ್ನು ಉದ್ಧಾರ ಮಾಡಲು ಬಂದವ  ರಲ್ಲ. ಅಧಿಕಾರದ ಆಸೆಯಿಂದ ಬಂದಿzರೆ ಎಂಬುದು ಎಂಥವರಿಗೂ ಗೊತ್ತು. ಸರಕಾರವನ್ನು ಅಸ್ತಿತ್ವಕ್ಕೆ ತರುವ ಹೊತ್ತಿನಲ್ಲಿ
ಬಿಜೆಪಿ ನಾಯಕರು ಅವರ ಮನೆ ಮುಂದೆ ಭಿಕ್ಷುಕರಂತೆ ನಿಂತಿದ್ದರು. ರಾಜೀನಾಮೆ ಕೊಟ್ಟು ಬರುವಂತೆ ಇನ್ನಿಲ್ಲದ ಆಮಿಷ ಗಳನ್ನು ಒಡ್ಡಿದರು. ತಮ್ಮ ಸರಕಾರ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮಂತ್ರಿ ಮಾಡುತ್ತೇವೆ ಎಂದು ಕೆಲವರಿಗೆ ಆಮಿಷ ವನ್ನೊಡ್ಡಿದರು. ಇವೆಲ್ಲವುಗಳ ಫಲವಾಗಿ, ಅವರು ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದರು.

ಎಂಟಿಬಿ ನಾಗರಾಜ ಅವರಂತೂ ಮಂತ್ರಿಯಾಗಿದ್ದರು. ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರು. ಇಂಥವರನ್ನು ಬಿಜೆಪಿ
ಮರ್ಯಾದೆಯಿಂದ ನಡೆಸಿಕೊಳ್ಳಬೇಕಾದುದು ಧರ್ಮ. ತಮ್ಮನ್ನೂ ಮಂತ್ರಿ ಮಾಡಿ ಎಂದು ಅವರು ಅಷ್ಟೆ ಗೋಗರೆಯಬಾರದು.
ರಾಜರಾಜೇಶ್ವರಿನಗರ ಕ್ಷೇತ್ರದ ಟಿಕೆಟ್ ಪಡೆಯಲು ಮುನಿರತ್ನ ಪಟ್ಟ ಪಡಿಪಾಟಲು ಅವರ ವೈರಿಗೂ ಬೇಡ. ಅವರನ್ನು ಆ ರೀತಿ ಗೋಳು ಹುಯ್ದುಕೊಂಡರು. ಅವೆಲ್ಲವನ್ನೂ ಮೀರಿ, ಅವರು ಶಾಸಕರಾಗಿ ಆರಿಸಿ ಬಂದರು.

ನ್ಯಾಯಸಮ್ಮತವಾಗಿ ಅವರನ್ನು ತಕ್ಷಣ ಮಂತ್ರಿಯನ್ನಾಗಿ ಮಾಡಬೇಕಿತ್ತು. ಆದರೆ ಒಂದಿಂದು ಕಾರಣ ನೀಡಿ, ಅದನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಬಿಹಾರ ಚುನಾವಣೆಗೂ, ಮುನಿರತ್ನ ಅವರನ್ನು ಮಂತ್ರಿ ಮಾಡುವುದಕ್ಕೂ ಯಾವ ಸಂಬಂಧ? ಈ ಎಲ್ಲಾ ತಂತ್ರಗಳ ಹಿಂದೆ ಯಡಿಯೂರಪ್ಪನವರನ್ನು ದುರ್ಬಲಗೊಳಿಸುವ ಹುನ್ನಾರವಿದೆ. ಇದರಿಂದ ದುರ್ಬಲ ವಾಗುವುದು ಬಿಜೆಪಿಯೇ ಎಂದು ಹೈಕಮಾಂಡ್ ನಾಯಕರಿಗೆ ಯಾಕೆ ಅರ್ಥವಾಗುತ್ತಿಲ್ಲ? ರಾಜಕಾರಣದಲ್ಲಿ ಯಾವತ್ತೂ ಒಂದೇ ಪಕ್ಷದ ಮೇಲುಗೈ ಆಗಿರುವುದಿಲ್ಲ. ಹೇಗಿದ್ದ ಕಾಂಗ್ರೆಸ್ ಹೇಗಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ.

ಇದು ಬಿಜೆಪಿ ನಾಯಕರಿಗೆ ಪಾಠವಾಗಬೇಕು. ಇತಿಹಾಸದಿಂದ ಪಾಠ ಕಲಿಯದಿದ್ದರೆ, ಇತಿಹಾಸ ಪಾಠ ಕಲಿಸುತ್ತದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದರೆ, ಇನ್ನುಳಿದಿರುವ ಅವಧಿಯಲ್ಲಿ ಉತ್ತಮ ಆಡಳಿತ ನೀಡಬೇಕು. ಅದಕ್ಕೆ ಯಡಿಯೂರಪ್ಪ ನವರಿಗೆ ಫ್ರೀ ಹ್ಯಾಂಡ್ ಕೊಡಬೇಕು. ಅವರ ಕೈ ಕಾಲು ಕಟ್ಟಿ ಹಾಕಿ, ಅವರು ಓಡುತ್ತಾ ಮುಗ್ಗರಿಸಿ ಬೀಳುವ ಚೆಂದ ನೋಡುವು ದನ್ನು ಬಿಡಬೇಕು. ಇದರಿಂದ ನಷ್ಟ ಅನುಭವಿಸುವವರು ಯಡಿಯೂರಪ್ಪನವರಲ್ಲ, ಬಿಜೆಪಿ.

ಹೇಗಿದ್ದರೂ ಯಡಿಯೂರಪ್ಪನವರ ರಾಜಕೀಯ ಅವಽ ಸೀಮಿತವಾದುದು. ಆದರೆ ಅವರ ಮನಸ್ಸನ್ನು ನೋಯಿಸಿದರೆ, ಆ
ನೋವನ್ನು ಅವರೊಂದೇ ಅನುಭವಿಸುವುದಿಲ್ಲ ಎಂಬ ಕಟು ಸತ್ಯವನ್ನು ದಿಲ್ಲಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ತಮ್ಮ ಪಕ್ಷದ ರಾಜ್ಯ ನಾಯಕರ ಜತೆ ’ಶಾಡೋ ಬಾಕ್ಸಿಂಗ್’ ಮಾಡುವುದನ್ನು ಇನ್ನಾದರೂ ಬಿಡಬೇಕು. ಅಷ್ಟಕ್ಕೂ ಬಿಜೆಪಿ ವೈರಿ ಕಾಂಗ್ರೆಸ್ಸೇ ಹೊರತು, ಯಡಿಯೂರಪ್ಪನವರಲ್ಲ, ಗೊತ್ತಿರಲಿ.