Sunday, 15th December 2024

ವಿದೇಶಾಂಗ ನೀತಿಯಲ್ಲಿ ಮೋದಿ ಪವಾಡ

ವಿಶ್ಲೇಷಣೆ

ಎಂ.ಜೆ.ಅಕ್ಬರ್‌, ವಿದೇಶಾಂಗ ಖಾತೆ ಮಾಜಿ ರಾಜ್ಯ ಸಚಿವ

ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಹೇಗೆ ಬದಲಿಸಿ ದ್ದಾರೆ? ಇದನ್ನು ತಿಳಿದುಕೊಳ್ಳಲು ಮೊದಲಿಗೆ ಅಮೆರಿಕದತ್ತ ನೋಡಬೇಕು. ಅಮೆರಿಕಕ್ಕೆ ಈ ಅವಧಿಯಲ್ಲಿ ಹೆಚ್ಚಿನ ಸಮಯ ಅಧ್ಯಕ್ಷರಾಗಿದ್ದವರು ಡೊನಾಲ್ಡ್ ಟ್ರಂಪ್. ಮೋದಿಯವರಿಗೆ ಟ್ರಂಪ್ ಅತ್ಯಾಪ್ತರು.

ನಾಲ್ಕು ವರ್ಷದಲ್ಲಿ ಟ್ರಂಪ್ ಭಾರತದ ಜೊತೆಗಿನ ಸಂಬಂಧದಲ್ಲಿ ಯಾವ್ಯಾವ ಅಂಶಗಳಿಗೆ ಮಹತ್ವ ನೀಡಿದ್ದಾರೆ ಮತ್ತು ಆರು ವರ್ಷಗಳಲ್ಲಿ ಮೋದಿ ಅಮೆರಿಕದ ಜೊತೆಗಿನ ಸಂಬಂಧದಲ್ಲಿ ಯಾವ್ಯಾವ ಅಂಶಗಳಿಗೆ ಮಹತ್ವ ನೀಡಿದ್ದಾರೆಂಬುದನ್ನು ಸೂಕ್ಷ್ಮ ವಾಗಿ ಗಮನಿಸಿದರೆ ಭಾರತದ ವಿದೇಶಾಂಗ ನೀತಿ ಹೇಗೆ ಬದಲಾವಣೆಯಾಗಿದೆ ಮತ್ತು ಅದರ ಪರಿಣಾಮಗಳೇನಾಗಿವೆ ಎಂಬುದೂ ಚೆನ್ನಾಗಿ ಅರ್ಥವಾಗುತ್ತದೆ.

ವಿದೇಶಾಂಗ ನೀತಿಯ ವಿಷಯಕ್ಕೆ ಬಂದಾಗ ಒಂದು ದೇಶದ ವ್ಯೂಹಾತ್ಮಕ ದೃಷ್ಟಿಕೋನ ಏನೆಂಬುದು ಮುಖ್ಯವಾಗುತ್ತದೆ. ಭಾರತದ ವ್ಯೂಹಾತ್ಮಕ ದೃಷ್ಟಿಕೋನ ಏನು? ಭಾರತವೆಂದರೆ ಹಿಮಾಲಯದ ಕೆಳಗಿರುವ ದೇಶವೇ ಅಥವಾ ಸಮುದ್ರಕ್ಕಿಂತ ಮೇಲಿರುವ ದೇಶವೇ? ನನ್ನ ಪ್ರಕಾರ ಎರಡೂ ಹೌದು. ಭಾರತದ ಭೂಗೋಳವನ್ನು ಗಮನಿಸಿ.  ಇಂಡೋನೇಷ್ಯಾಕ್ಕೂ ಭಾರತಕ್ಕೂ ನಡುವೆ ಇರುವ ದೂರ ಎಷ್ಟೆೆಂದು ಕೇಳಿದರೆ 7 ಅಥವಾ 8 ತಾಸಿನ ವಿಮಾನ ಪ್ರಯಾಣದಷ್ಟು ದೂರ ಎನ್ನುತ್ತೇವೆ. ಆದರೆ, ವಾಸ್ತವ ವಾಗಿ ಅಂಡಮಾನ್‌ನಿಂದ ಸಮುದ್ರ ದಲ್ಲಿ ಕೇವಲ 100 ನಾಟಿಕಲ್ ಮೈಲು ದೂರದಲ್ಲಿ ಆ ದೇಶವಿದೆ. ಹಾಗಾಗಿ ಇಂಡೋ ನೇಷ್ಯಾ ನಮಗೆ ನೆರೆ ದೇಶ. ಈ ಎರಡು ದೇಶಗಳ ನಡುವೆ ಅತ್ಯಂತ ಬ್ಯುಸಿಯಾದ ಸಮುದ್ರ ಮಾರ್ಗವಿದೆ.

ಪಶ್ಚಿಮದಲ್ಲಿ ನಮಗೆ ಮಲಾಕ್ಕಾ ಕೊಲ್ಲಿಯಿದೆ. ಮುಂಬೈನಿಂದ ದುಬೈಗೆ ಎಷ್ಟು ದೂರ ಗೊತ್ತೆ? ಮುಂಬೈನಿಂದ ದೆಹಲಿಗೆ ಎಷ್ಟು ದೂರವೋ ಅಷ್ಟೇ ದೂರ. ಹಾಗಾದರೆ ನಿಜವಾಗಿಯೂ ನಮ್ಮ ನೆರೆ ರಾಷ್ಟ್ರಗಳು ಯಾವುವು ಎಂಬ ಪ್ರಶ್ನೆಯನ್ನು ನಾವೇ ನಮಗೆ ಕೇಳಿಕೊಳ್ಳಬೇಕು. ನೆರೆರಾಷ್ಟ್ರದ ವ್ಯಾಖ್ಯಾನ ಬದಲಿಸಿದ ಮೋದಿ ಹಿಂದಿನಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರ ದಾಯಿಕ ನೆರೆ ರಾಷ್ಟ್ರಗಳ ಕಲ್ಪನೆಯಿಂದ ಸ್ವಲ್ಪ ಹೊರಬಂದು ನೋಡಿದರೆ ನಮಗೆ ಭಿನ್ನ ದೃಷ್ಟಿಕೋನವೊಂದು ದೊರೆಯುತ್ತದೆ. ನರೇಂದ್ರ ಮೋದಿ ಇಂತಹದ್ದೊಂದು ವಿಶಿಷ್ಟ ದೃಷ್ಟಿಕೋನವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಹುದೊಡ್ಡ ಸಾಧನೆ. ಅವರು ಬಹಳ ಚಾಕಚಕ್ಯತೆ ಯಿಂದ ನೆರೆ ರಾಷ್ಟ್ರಗಳು ಎಂಬುದರ ಅರ್ಥವನ್ನೇ ಬದಲಿಸಿದ್ದಾರೆ.

ಇಲ್ಲಿಯವರೆಗೆ ನಾವು ಭೂಗೋಳದ ಆಧಾರದ ಮೇಲೆ ನೆರೆ ರಾಷ್ಟ್ರಗಳನ್ನು ಗುರುತಿಸುತ್ತಿದ್ದೆವು. ಆದರೆ, ಮೋದಿ ಅದನ್ನು ತಲುಪು ವಿಕೆಗೆ, ಅಂದರೆ ರೀಚ್‌ಗೆ ಬದಲಿಸಿದ್ದಾರೆ. ನೀವು ನಿಮ್ಮ ನೆರೆ ರಾಷ್ಟ್ರವನ್ನು ಸಂಪರ್ಕಿಸಲು ಅಥವಾ ತಲುಪಲು ಸಾಧ್ಯವಿಲ್ಲ ಅಂತಾದರೆ ಆ ರಾಷ್ಟ್ರ ಎಷ್ಟೇ ಹತ್ತಿರ ದಲ್ಲಿದ್ದರೂ ಅದನ್ನು ನೆರೆರಾಷ್ಟ್ರ ಎಂದು ಗುರುತಿಸಿ ಏನು ಪ್ರಯೋಜನ? ಇಂದು ಕೊಲ್ಲಿ ರಾಷ್ಟ್ರಗಳಿಗೆ ಭಾರತದಿಂದ 2000 ವಿಮಾನಗಳು ಹಾರುತ್ತವೆ. ಆದರೆ, ನೆರೆರಾಷ್ಟ್ರ ಎಂದು ಕರೆಸಿಕೊಳ್ಳುವ ಪಾಕಿಸ್ತಾನಕ್ಕೆ
ವಾರಕ್ಕೆರಡು ವಿಮಾನಗಳು ಹಾರುತ್ತವೆ. ಹಾಗಿದ್ದರೆ ನಿಜವಾಗಿಯೂ ನಮ್ಮ ನೆರೆರಾಷ್ಟ್ರ ಯಾವುದು? ಕೊಲ್ಲಿ ರಾಷ್ಟ್ರಗಳೋ ಅಥವಾ ಅಪಘಾತವಶಾತ್ ನಮ್ಮ ಪಕ್ಕದಲ್ಲಿ ಜನ್ಮತಾಳಿದ ರಾಷ್ಟ್ರವೋ? ಹೀಗಾಗಿ ನೆರೆರಾಷ್ಟ್ರ ಎಂಬುದರ ಕಲ್ಪನೆಯನ್ನು ಮೋದಿ ಬದಲಾವಣೆ ಮಾಡಿದ್ದಕ್ಕೆ ಬಹಳ ಮಹತ್ವವಿದೆ. ನಮಗೀಗ ಕೊಲ್ಲಿ ರಾಷ್ಟ್ರಗಳು, ಇಂಡೋನೇಷ್ಯಾ ಅಥವಾ ಸಿಂಗಾಪುರ ಕೂಡ
ನೆರೆರಾಷ್ಟ್ರಗಳೇ. ಪೋರ್ಟ್‌ಬ್ಲೇರ್‌ನಲ್ಲಿ ನಿಂತರೆ ಸಿಂಗಾಪುರದ ಲೈಟ್‌ಗಳು ಕಾಣಿಸುತ್ತವೆ ಎಂಬ ದಂತಕತೆಯಿದೆ! ಅದು ಸುಳ್ಳೇ ಇರಬಹುದು. ಆದರೆ, ಸಿಂಗಾಪುರ ನಮಗೆ ಎಷ್ಟು ಹತ್ತಿರವಾಗಿದೆ ಎಂಬುದರ ಸೂಚಕವದು.

ಪಿವಿಎನ್ ಶ್ರೀಕಾರ, ಮೋದಿ ವಿಸ್ತಾರ ಮೋದಿ ಇಂಡೋ – ಪೆಸಿಫಿಕ್ ಎಂಬ ಪರಿಕಲ್ಪನೆಗೆ ಬಹಳ ಒತ್ತು ನೀಡುತ್ತಿದ್ದಾರೆ. ಇಂಡೋ-ಪೆಸಿಫಿಕ್‌ನ ನೀರು ನಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸುವುದು ಅಮೆರಿಕಕ್ಕೆ. ಇದೊಂದು ವ್ಯೂಹಾತ್ಮಕ ದೃಷ್ಟಿಕೋನ.
ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧದ ಬಗ್ಗೆ ನಾವು ಇಲ್ಲಿಯವರೆಗೂ ಬ್ರಿಟಿಷರ ದೃಷ್ಟಿಕೋನದಲ್ಲೇ ಯೋಚಿಸು ತ್ತಿದ್ದೆವು. ಅದಕ್ಕೆ ನಾವು ಪಾಶ್ಚಾತ್ಯ ಹಾದಿ ಎನ್ನುತ್ತೇವೆ. ಅದು ಯಾವಾಗಲೂ ಲಂಡನ್ನಿನ ಮೂಲಕವೇ ಹಾದು ಹೋಗುತ್ತದೆ. ಆದ್ದರಿಂದಲೇ ನಾವು ನಮ್ಮ ಬಗ್ಗೆೆ ನಮಗೆ ಗೊತ್ತಿರುವುದಕ್ಕಿಂತ ಚೆನ್ನಾಗಿ ಲಂಡನ್‌ಗೆ ನಮ್ಮ ಬಗ್ಗೆ ಗೊತ್ತು ಅಂತ ನಂಬಿರಲಿಲ್ಲವೇ? ಆ ಭ್ರಮೆ ನಿಧಾನವಾಗಿ ಬದಲಾಗಲು ಆರಂಭವಾಗಿದ್ದು ಪಿ.ವಿ.ನರಸಿಂಹ ರಾವ್ ಕಾಲದಲ್ಲಿ. ಅವರು ಭಾರತ ಕೇವಲ ಪಶ್ಚಿಮದ ಕಡೆ ನೋಡಬಾರದು, ಪೂರ್ವದ ಕಡೆ ನೋಡಬೇಕು ಎಂದರು.

ಅದರಿಂದ ಇಂಡೋ – ಪೆಸಿಫಿಕ್ ಎಂಬ ವ್ಯೂಹಾತ್ಮಕ ಕಲ್ಪನೆ ಜನ್ಮತಾಳಿತು. ಈಗ ಮೋದಿ ಅದನ್ನು ಇನ್ನಷ್ಟು ಹರಿತಗೊಳಿಸಿ, ಪೂರ್ವದಲ್ಲಿ ಭಾರತದ ನೌಕಾಪಡೆಯನ್ನು ನಿಯೋಜಿಸಿ, ಎಲ್ಲಾ ರೀತಿಯಲ್ಲೂ ದೇಶದ ಅಸ್ತಿತ್ವ ಗೋಚರಿಸುವಂತೆ ಮಾಡಿದ್ದಾರೆ. ಜೊತೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆಗೆ ಮಾತುಕತೆಯನ್ನೂ ವ್ಯಾಪಾರವನ್ನೂ ವೃದ್ಧಿಸಿದ್ದಾರೆ. ತಮಾಷೆಯ ಸಂಗತಿ ಏನೆಂದರೆ, ನಾವು ಪೆಸಿಫಿಕ್ ಸಮುದ್ರದ ಮೂಲಕ ಅಮೆರಿಕಕ್ಕೆ ಹೋದರೆ ಆ ದೇಶದಲ್ಲಿ ಬೌದ್ಧಿಕವಾಗಿ ಹೆಚ್ಚು ದಕ್ಷವಾಗಿರುವ ಪ್ರದೇಶಕ್ಕೆ ಮೊದಲು ಹೋಗುತ್ತೇವೆ. ಅಮೆರಿಕದ ಅಷ್ಟೂ ಸಾಫ್ಟ್‌’ವೇರ್ ಬುದ್ಧಿಮತ್ತೆ ಇರುವುದು ಪಶ್ಚಿಮ ಕರಾವಳಿಯಲ್ಲಿ.
ಇಸ್ರೇಲ್ ಮೂಲಕ ಕೊಲ್ಲಿಗೆ ಹತ್ತಿರ ಯುಎಇಗೆ 36 ವರ್ಷಗಳಲ್ಲಿ ಮೊದಲ ಬಾರಿ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ. ಯಾಕೆ? ಹಿಂದಿನ ಪ್ರಧಾನಿಗಳ ವಿಮಾನ ಕೊಲ್ಲಿ ರಾಷ್ಟ್ರಗಳಲ್ಲಿ ಇಳಿಯದಂತೆ ಯಾರಾದರೂ ಪ್ರೋಗ್ರಾಂ ಮಾಡಿ ಟ್ಟಿದ್ದರೇ? ಕೊಲ್ಲಿ ರಾಷ್ಟ್ರಗಳ ಜೊತೆಗೆ ನಮಗಿರುವ ಸಂಬಂಧ ಐತಿಹಾಸಿಕವಾಗಿ ಹಾಗೂ ವ್ಯಾವಹಾರಿಕವಾಗಿಯೂ ಬಹಳ ಮಹತ್ವದ್ದಾಗಿತ್ತು. ಆದರೂ ನಮ್ಮ ಪ್ರಧಾನಿಗಳು ಅಲ್ಲಿಗೆ ಹೋಗುತ್ತಿರಲಿಲ್ಲ.

ಹೀಗಾಗಿ ಆ ಸಂಬಂಧಕ್ಕೆ ಜಡ್ಡು ಹಿಡಿದಿತ್ತು. ಪರಿಣಾಮ, ಇನ್ನೊಂದು ದೇಶ ಕೊಲ್ಲಿ ರಾಷ್ಟ್ರಗಳ ಜೊತೆಗೆ ಭಾರತ ಹೊಂದಿರ ಬೇಕಾದ ಸಂಬಂಧವನ್ನು ಆಕ್ರಮಿಸಿಕೊಂಡಿತ್ತು. ಮೋದಿ ಬಹಳ ಅದ್ಭುತ ರೀತಿಯಲ್ಲಿ ಆ ಸಂಬಂಧವನ್ನು ಮರಳಿ ಗಳಿಸಿ ಕೊಂಡರು. ಅದನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಇಸ್ರೇಲ್‌ನ ಪ್ರಧಾನಿ ಬೆಂಜುನ್ ನೆತನ್ಯಾಹು ಅವರನ್ನು ಭಾರತಕ್ಕೆ ಬಹಳ ಆಪ್ತವಾಗಿ ಬರಮಾಡಿಕೊಂಡ ಮೊದಲ ಪ್ರಧಾನಿ ಮೋದಿ. ಜನವರಿಯಲ್ಲಿ ಆ ಭೇಟಿಯ ನಂತರ ಮೋದಿ
ನೇರ ವಾಗಿ ಜೋರ್ಡಾನ್‌ಗೆ ಹೋದರು. ಅಲ್ಲಿಂದ ಪ್ಯಾಲೆಸ್ತೀನ್‌ಗೆ ಹೋದರು. ಆ ದೇಶ ಮೋದಿಯವರಿಗೆ ತನ್ನ ಪರಮೋಚ್ಚ ನಾಗರಿಕ ಪ್ರಶಸ್ತಿ ನೀಡಿತು. ನಂತರ ಸೌದಿ ಅರೇಬಿಯಾಕ್ಕೆ ಹೋದರು. ಅಲ್ಲೂ ಪರಮೋಚ್ಚ ನಾಗರಿಕ ಗೌರವ ಪಡೆದರು. ನಂತರ ಯುಎಇಗೆ ಹೋದರು. ಅಲ್ಲಿ ಉತ್ತಮ ಆಡಳಿತದ ಬಗ್ಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ
ಭಾಷಣ ಮಾಡಿದರು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಇಂತಹ ಗೌರವ ಗಳು ಸುಲಭವಾಗಿ ಲಭಿಸುವುದಿಲ್ಲ. ಸಂಬಂಧ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಂಡ ನಂತರವೇ ಇಂತಹ ಗೌರವಗಳು ಹುಡುಕಿಕೊಂಡು ಬರುತ್ತವೆ. ಅಂತಹ ಕ್ರಮಗಳು ಎಲ್ಲ
ಸಲವೂ ಹೆಡ್‌ಲೈನ್‌ಗಳಲ್ಲಿ ಕಾಣಿಸುವುದಿಲ್ಲ. ಅವು ಪತ್ರಿಕೆಗಳಲ್ಲಿ ಸಣ್ಣದಾಗಿ ವರದಿ ಯಾಗಿರುತ್ತವೆ. ಆದರೆ, ಎರಡು ದೇಶಗಳ ನಡುವೆ ಬಹಳ ಗಟ್ಟಿಯಾದ ಸಂಬಂಧವನ್ನು ಬೆಸೆದಿರುತ್ತವೆ.

ಮಧ್ಯಪ್ರಾಚ್ಯದಲ್ಲಿ ಐತಿಹಾಸಿಕವಾಗಿ ಪರಮ ಶತ್ರುಗಳಾಗಿದ್ದ ದೇಶಗಳು ಇಂದು ಪರಸ್ಪರರಿಗೆ ತಮ್ಮ ಬಾಗಿಲು ತೆರೆಯುತ್ತಿವೆ. ಬಹರೇನ್, ಯುಎಇ ಯಂಥ ದೇಶಗಳು ಇಸ್ರೇಲ್ ಜೊತೆ ದ್ವಿಪಕ್ಷೀಯ ಸಂಬಂಧ ಸ್ಥಾಪಿಸಿಕೊಳ್ಳಲು ಮುಂದಾಗುತ್ತಿವೆ. ಅದಕ್ಕೂ
ಮುಂಚೆಯೇ ಈಜಿಪ್ಟ್ ಹಾಗೂ ಜೋರ್ಡಾನ್ ಕೂಡ ಇಸ್ರೇಲ್ ಜೊತೆಗೆ ಸಂಬಂಧ ಬೆಳೆಸಲು ನಿರ್ಧರಿಸಿವೆ.

ಇದೆಲ್ಲ ಸಾಧ್ಯವಾಗಿದ್ದು ಏಕೆ? ಏಕೆಂದರೆ ಇಸ್ರೇಲ್ ಭಾರತಕ್ಕೆ ಬಹಳ ಹತ್ತಿರವಾಗುತ್ತಿದೆ. ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಗೂ ಭಾರತದ ಜೊತೆಗೆ ಸಂಬಂಧ ವೃದ್ಧಿಸಿಕೊಂಡರೆ ಏನು ಲಾಭ ಎಂಬುದರ ಅರಿವಿದೆ. ಹೊಸ ತಲೆಮಾರಿಗೆ ಜಗಳ ಬೇಕಿಲ್ಲ ಸಾಮ್ರಾಜ್ಯ ವಿಸ್ತರಣೆಯ ಕಾಲ ಈಗ ಹೋಯಿತು ಎಂದು ಮೋದಿ ಹೇಳುತ್ತಾರೆ. ಈಗೇನಿದ್ದರೂ ಸಹಕಾರಾತ್ಮಕ ಅಭಿವೃದ್ಧಿಯ ಯುಗ. ಎಲ್ಲ ದೇಶಗಳಿಗೂ ಇದು ಅನಿವಾರ್ಯ. ಇದು ಅವಧಿ ಮುಗಿದ ವೃದ್ಧರ ಹಳಹಳಿಕೆಯಲ್ಲ. ಬದಲಿಗೆ, ಈಗಿನ ಯುವಕರ
ದೃಷ್ಟಿಕೋನ. ಯುವಕರು ಜಗತ್ತಿನೆಲ್ಲೆಡೆ ಹೋಗಲು ಬಯಸುತ್ತಾರೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಬಯಸುತ್ತಾರೆ. ಎಲ್ಲೆೆಡೆ ಕೆಲಸ ಮಾಡಲು, ಎಲ್ಲೆೆಡೆಯಿಂದ ಪ್ರತಿಭೆಗಳನ್ನು ಹುಡುಕಿ ಹೊರ ತೆಗೆಯಲು ಬಯಸುತ್ತಾರೆ. ಅವರಿಗಾಗಿ ಏಕೆ ಅಂತಹದ್ದೊಂದು ಜಗತ್ತನ್ನು ಸೃಷ್ಟಿ ಮಾಡಲು ನಮ್ಮಿಂದ ಸಾಧ್ಯ ವಿಲ್ಲ? ಯಾವುದೋ ಹಳೆ ಕಾಲದ ಜಗಳಗಳಿಗೆ ಏಕೆ ನಾವು ನಮ್ಮ ಭವಿಷ್ಯದ ತಲೆಮಾರಿನ ಕನಸನ್ನು ಬಲಿ ಕೊಡಬೇಕು? ಫ್ಯಾಂಟಸಿಯ ವಿರುದ್ಧ ವಾಸ್ತವವಾದ ಗೆದ್ದಾಗ ಸಹಬಾಳ್ವೆಯ ಹೊಸ ಪರಿಕಲ್ಪನೆ ಯೊಂದು ಮೊಳೆಯುತ್ತದೆ. ಮೋದಿಯವರ ಗುರಿ ಅದೇ ಆಗಿದೆ.

ಸಾಮ್ರಾಜ್ಯ ವಿಸ್ತರಣೆಯ ಕಾಲ ಮುಗಿಯಿತು ಎಂದು ಅವರು ಹೇಳುವುದರ ಅರ್ಥವೂ ಇದೇ ಆಗಿದೆ. ಇದು ನಮ್ಮ ಕೆಲ ನೆರೆ ರಾಷ್ಟ್ರಗಳಿಗೆ ಅವರು ನೀಡುವ ಬಹಿರಂಗ ಸಂದೇಶವೂ ಹೌದು. ಸೇನೆ ಕಳಿಸಿ ಇನ್ನಾವುದೋ ದೇಶದ ಜಾಗ ಕಬಳಿಸುವ ಕಾಲವೆಲ್ಲ ಈಗಿಲ್ಲ. ಈ ವಿಷಯದಲ್ಲಿ ನಾವು ಐತಿಹಾಸಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ನಮ್ಮ ದೇಶಕ್ಕೆ ಕಾನೂನುಬದ್ಧವಾಗಿ ಸೇರಿಕೊಂಡಿದ್ದ ಭೂಭಾಗವನ್ನು 1947, 1948ರಲ್ಲಿ ಕಳೆದುಕೊಂಡಿದ್ದೇವೆ.

ಜಮ್ಮು ಕಾಶ್ಮೀರವು ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು ಎಂದು ಕಾಯ್ದೆ ರೂಪಿಸಿದ್ದೇ ಬ್ರಿಟಿಷ್ ಗವರ್ನರ್ ಜನರಲ್. ಅವರ ಸಲಹೆಯಂತೆಯೇ ಜಮ್ಮು ಕಾಶ್ಮೀರವು ಭಾರತಕ್ಕೆೆ ಸೇರ್ಪಡೆಯಾಗಿತ್ತು. ಆದರೂ ಪಾಕಿಸ್ತಾನ ಅಲ್ಲಿನ ಭೂಭಾಗ ತನ್ನದು ಎಂದು ಕಾನೂನು ಬಾಹಿರವಾಗಿ ಹೇಳಿ ಕಬಳಿಸಿಕೊಂಡಿತು. ನಂತರ ಮತ್ತೆ 1962ರಲ್ಲಿ ನಾವು ಇಂತಹುದೇ ನಷ್ಟ ಅನುಭಸಿದೆವು.
ಆಗಲೂ ನಮ್ಮ ಮೇಲೆ ದಬ್ಬಾಳಿಕೆ ನಡೆಯಿತು ಮತ್ತು ನಮಗೆ ಒಂದಷ್ಟು ಭೂಭಾಗ ನಷ್ಟವಾಯಿತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮೋದಿಯವರ ನಾಯಕತ್ವದಲ್ಲಿ ಯಾವ ದೇಶಕ್ಕೂ ನಮ್ಮ ಒಂದೇ ಒಂದು ಇಂಚು ಜಾಗ ಕಬಳಿಸಲು ಆಗುತ್ತಿಲ್ಲ.

ನಮ್ಮ ದೇಶದಲ್ಲಿ ರಕ್ಷಣಾ ಪಡೆ ಇದೆಯೇ ಹೊರತು ದಾಳಿ ನಡೆಸುವ ಪಡೆ ಇಲ್ಲ. ನಾವಾಗಿಯೇ ಯಾರ ಮೇಲೂ ದಾಳಿ ನಡೆಸುವು ದಿಲ್ಲ. ಆದರೆ, ಯಾರಾದರೂ ಭಾರತದ ಮೇಲೆ ದಾಳಿ ನಡೆಸಲು ಮುಂದಾದರೆ ಅದರಿಂದ ರಕ್ಷಿಸಿಕೊಳ್ಳಲು ತಕ್ಕ ಉತ್ತರ ನೀಡು ತ್ತೇವೆ. ಮಧ್ಯಪ್ರಾಾಚ್ಯದಲ್ಲಿ ಮೋದಿ ಮ್ಯಾಜಿಕ್ ಇವೆಲ್ಲದರ ನಡುವೆ ಮೋದಿಯವರು ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಏಕೆ ಇಷ್ಟೊಂದು ಒತ್ತು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಬಹಳ ಜನರ ಮನಸ್ಸಿನಲ್ಲಿ ಏಳಬಹುದು. ಅದಕ್ಕೆ ಪ್ರಮುಖ ಕಾರಣವೆಂದರೆ ಜಾಗತಿಕ ಶಕ್ತಿಗಳಲ್ಲಿ ಸಮತೋಲನ ಸಾಧಿಸುವುದು. ಮೋದಿಯವರು ಜಾಗತಿಕ ಮಟ್ಟದಲ್ಲಿ ಸಮತೋಲಿತ
ಅಧಿಕಾರದ ರಾಜಕಾರಣ ವನ್ನು ಅಧಿಕಾರದ ಸಮತೋಲನದಿಂದಲೇ ನಿಭಾಯಿಸಲು ಯತ್ನಿಸುತ್ತಿದ್ದಾರೆ.

ವಿದೇಶಾಂಗ ನೀತಿ ಅಥವಾ ಅನ್ಯ ರಾಷ್ಟ್ರಗಳ ಜೊತೆಗಿನ ಸಂಬಂಧ ಸುಧಾರಣೆಯ ಪ್ರಶ್ನೆ ಬಂದಾಗ ಪ್ರಧಾನಿಯ ಬೆಂಬಲ ಇಲ್ಲದಿದ್ದರೆ ಯಾವ ವಿದೇಶಾಂಗ ಸಚಿವರೂ ಏನೂ ಮಾಡಲು ಸಾಧ್ಯವಿಲ್ಲ. ವಿದೇಶಾಂಗ ನೀತಿಗಳನ್ನು ರೂಪಿಸುವುದೇ ಪ್ರಧಾನ ಮಂತ್ರಿಗಳು. ಕೊಲ್ಲಿ ರಾಷ್ಟ್ರಗಳ ಜತೆಗಿನ ಸಂಬಂಧ ಸುಧಾರಣೆಗೆ ಭೂಮಿ ಹದ ಮಾಡಿ ಗೊಬ್ಬರ ಹಾಕಿದ್ದು ಮೋದಿಯವರೇ. ಅವರೇ ನೇಗಿಲು ಹಿಡಿದು ಹೊಲಕ್ಕೆ ಹೋಗಿ ಉಳುಮೆ ಮಾಡಿದ್ದರು ಕೂಡ. ಅದಕ್ಕೆ ಆ ವೇಳೆ ವಿದೇಶಾಂಗ ಖಾತೆ ರಾಜ್ಯ ಸಚಿವ ನಾಗಿದ್ದ ನಾನು ಕೂಡ ಸಾಥ್ ನೀಡಿದ್ದೆ.

ವಿದೇಶಾಂಗ ನೀತಿಯೆಂಬುದು ಒನ್‌ವೇ ರಸ್ತೆಯಲ್ಲ. ಅಲ್ಲಿ ಎರಡೂ ದೇಶಗಳ ಪರಸ್ಪರ ಸಹಕಾರ ಬಹಳ ಮುಖ್ಯ. ಎರಡೂ ದೇಶಗಳಿಗೆ ಲಾಭವಾಗುವ ವಿಷಯಗಳನ್ನು ಮೊದಲು ಗುರುತಿಸಬೇಕು. ಎರಡೂ ದೇಶಗಳಿಗೆ ಲಾಭವಾಗುವ ಕ್ಷೇತ್ರಗಳನ್ನು ಗುರುತಿಸಿದ ಮೇಲೂ ಪರಸ್ಪರರಲ್ಲಿ ನಂಬಿಕೆಯಿಲ್ಲದಿದ್ದರೆ ಸಹಕಾರ ದೊರೆಯುವುದಿಲ್ಲ. ಭಾರತದ ಬಗ್ಗೆ ಈ ನಂಬಿಕೆ ಹುಟ್ಟಿದ್ದ ರಿಂದಲೇ ಬಹಳಷ್ಟು ದೇಶಗಳ ಜೊತೆಗೆ ನಮ್ಮ ಸಂಬಂಧ ಹೊಸ ಎತ್ತರಕ್ಕೆೆ ಹೋಗಿದೆ. ವ್ಯೂಹಾತ್ಮಕ ತೈಲ ಮೀಸಲು ಸಾಧ್ಯ ವಾಗಿದ್ದು ಕೂಡ ಇಂತಹ ನಂಬಿಕೆಯಿಂದಲೇ. ಆರ್ಥಿಕ ಅಪರಾಧಿಗಳು ಹಾಗೂ ಭಯೋತ್ಪಾದಕರು ಯಾವತ್ತೂ ಭಾರತದ ಕೈಗೆ ಸಿಗದಂತೆ ಒಂದಷ್ಟು ದೇಶಗಳಲ್ಲಿ ಶಾಶ್ವತವಾಗಿ ರಕ್ಷಣೆ ಪಡೆಯುತ್ತಿದ್ದರು. ಆದರೆ, ಆ ದೇಶಗಳ ಜೊತೆಗೂ ಈಗ ಭಾರತ ವ್ಯೂಹಾ ತ್ಮಕ ಸಹಕಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಹೀಗಾಗಿ ಯಾರೂ ಭಾರತಕ್ಕೆ ಸಿಗದ ರೀತಿಯಲ್ಲಿ ತಲೆಮರೆಸಿಕೊಳ್ಳಲು ಸಾಧ್ಯ ವಿಲ್ಲ. ಹಾಗೆ ಮಾಡಿದವರನ್ನೆಲ್ಲ ಆ ದೇಶಗಳ ಪೊಲೀಸರೇ ಹಿಡಿದು ಭಾರತಕ್ಕೆ ಕಳಿಸುತ್ತಿದ್ದಾರೆ. ಇದು ಹಿಂದೆಂದಾದರೂ ನಡೆದಿತ್ತೇ? ಇಲ್ಲ.

ಏಕೆಂದರೆ ಆ ಮಟ್ಟದ ವಿಶ್ವಾಸ ಗಳಿಸಲು ಯಾರೂ ಕಷ್ಟಪಟ್ಟು ಕೆಲಸ ಮಾಡಿರಲಿಲ್ಲ. ಆ ಮಟ್ಟದ ಪರಸ್ಪರ ಸಹಕಾರ ಗಳಿಸಲು ಭಾರತದ ಯಾವ ನಾಯಕರೂ ಶ್ರಮಿಸಿರಲಿಲ್ಲ. ಯುಎಇ ನಾಯಕರ ದೂರದೃಷ್ಟಿ ಅರಬ್ ದೇಶಗಳು, ಇಸ್ರೇಲ್ ಹಾಗೂ ಭಾರತದ
ನಡುವಿನದು ದ್ವಿಪಕ್ಷೀಯ ಸಂಬಂಧವಲ್ಲ, ತ್ರಿಪಕ್ಷೀಯ ಸಂಬಂಧ. ಈ ಸಂಬಂಧ ವೃದ್ಧಿಗೆ ಬಹಳ ಹಿಂದಿನಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ, ಯುಎಇ ಸರಕಾರದ ದೂರದೃಷ್ಟಿ ಮತ್ತು ಮೋದಿ ಯವರ ಪ್ರಯತ್ನದಿಂದ ಈಗ ಅದು ಸಾಧ್ಯವಾಗಿದೆ. ಮುಸ್ಲಿಂ ರಾಷ್ಟ್ರಗಳ ಪೈಕಿ ಯುಎಇಗೆ ಬದಲಾವಣೆಗೆ ತೆರೆದುಕೊಳ್ಳುವ ಧೈರ್ಯವಿದೆ. ಅಲ್ಲಿನ ನಾಯಕರು ರಾಷ್ಟ್ರೀಯ ಹಿತಾಸಕ್ತಿ
ಮತ್ತು ಮಧ್ಯಪ್ರಾಚ್ಯದ ಒಳಿತಿಗೆ ಏನು ಮಾಡಬೇಕು ಎಂಬುದನ್ನು ಸಾಕಷ್ಟು ಲೆಕ್ಕಾಚಾರ ಹಾಕಿಯೇ ಮುಂದಡಿ ಇಡುತ್ತಿದ್ದಾರೆ. ಅವರು ಆತ್ಮಾಭಿಮಾನಿ ಅರಬ್ಬರು.

ಅರಬ್ಬರ ಹಿತಾಸಕ್ತಿಯನ್ನು ಅವರು ಯಾವತ್ತೂ ಮರೆತಿಲ್ಲ. ಅದನ್ನು ರಕ್ಷಿಸಿಕೊಂಡೇ ಜಾಗತಿಕ ಸಂಬಂಧವನ್ನೂ ವೃದ್ಧಿಸಿಕೊಳ್ಳು ತ್ತಿದ್ದಾರೆ. ಸಂಘರ್ಷದಿಂದ ಆಗುವ ಮೊದಲ ಕೆಟ್ಟ ಪರಿಣಾಮವೆಂದರೆ ಮಾತುಕತೆ ನಿಂತುಹೋಗುತ್ತದೆ. ಮಾತುಕತೆ ನಿಂತರೆ ಸಂಬಂಧ ಬೆಳೆಯುವುದಿಲ್ಲ. ಆದರೆ, ಒಂದು ಕೈಲಿ ಶೇಕ್‌ಹ್ಯಾಂಡ್ ಮಾಡುತ್ತಾ ಇನ್ನೊಂದು ಕೈಲಿ ಗನ್ ಹಿಡಿದುಕೊಂಡಿ ರುವ ದೇಶದ ಜೊತೆಗೆ ಮಾತುಕತೆ ನಡೆಸುವುದರಿಂದಲೂ ಪ್ರಯೋಜನವಿಲ್ಲ. ಹೀಗಾಗಿ ಇನ್ನೊಂದು ಕೈಲಿ ಗನ್ ಇಲ್ಲ ಎಂಬ ವಿಶ್ವಾಸ ಪರಸ್ಪರರಲ್ಲಿ ಮೊಳೆಯುವುದು ಅತ್ಯಂತ ಅವಶ್ಯಕ. ಒಳಗೊಳಗೇ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವಂಥ ಚಟುಟಿಕೆ ಗಳನ್ನು ನಡೆಸುತ್ತಿದ್ದರೆ ವಿಶ್ವಾಸ ವೃದ್ಧಿಸುವುದು ಹೇಗೆ? ಇಂತಹ ವಿಶ್ವಾಸಘಾತಕ ಚಟುವಟಿಕೆಗಳನ್ನು ಒಂದು ದೇಶ ನಡೆಸುವು ದಿಲ್ಲ ಎಂಬ ವಿಶ್ವಾಸ ಒಮ್ಮೆ ಮೂಡಿದರೆ ನಂತರ ಸಂಬಂಧ ವೃದ್ಧಿಗೆ ವೇದಿಕೆ ಸಿದ್ಧಗೊಳ್ಳುತ್ತದೆ. ಮುಂದಿನದು ಆಯಾ ದೇಶದ ಮುಖ್ಯಸ್ಥರ ಕೈಲಿರುತ್ತದೆ.

ಈಗಿನದು ಇತಿಹಾಸದ ದೀರ್ಘ ಯುದ್ಧ ಇಂದು ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿವೆ. ಆದರೆ ಇವು ಮೊದಲ ಅಥವಾ ಎರಡನೇ ವಿಶ್ವ ಮಹಾಯುದ್ಧದಂತೆ ನಿರಂತರವಾಗಿ ನಡೆಯುವ ಯುದ್ಧಗಳಲ್ಲ. ಅಥವಾ ಈಗ ನಡೆಯುತ್ತಿರುವ ಯುದ್ಧದಿಂದ ಮಹಾ ಯುದ್ಧದ ನಂತರ ದೊರೆತಂಥ ಫಲಿತಾಂಶಗಳೂ ಹೊರಹೊಮ್ಮುವುದಿಲ್ಲ. ಈಗಿನ ಯುದ್ಧಗಳು ಬಹಳ ಕಾಲ ನಡೆಯುವ, ಆದರೆ ಮಧ್ಯೆ ಮಧ್ಯೆ ನಿಂತು ಮುಂದುವರಿಯುವ ಯುದ್ಧಗಳು. ನನ್ನ ಪ್ರಕಾರ ಇವು ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಡೆದ
ಯುದ್ಧಗಳೆಂದು ಹೆಸರು ಪಡೆಯಲಿವೆ. 1947ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಶುರು ಮಾಡಿದ ಯುದ್ಧ 1965ರಲ್ಲೂ ಮುಂದು ವರಿದು, ಮತ್ತೆ 1971ರಲ್ಲೂ ಒಂದಷ್ಟು ಕಾಲ ನಡೆಯಿತು. ನಂತರ ಭಯೋತ್ಪಾದನೆಯ ರೂಪದಲ್ಲಿ ಜನರಲ್ ಜಿಯಾ ಮತ್ತವರ ಉತ್ತರಾಧಿಕಾರಿಗಳು ಆ ಯುದ್ಧವನ್ನು ಮುಂದುವರಿಸಿದರು.

ಅದು ಇಂದಿಗೂ ನಡೆಯುತ್ತಿದೆ. 7 ದಶಕಕ್ಕಿಂತ ಹೆಚ್ಚು ಕಾಲ ನಡೆದ ಈ ಯುದ್ಧ ಜಾಗತಿಕ ಇತಿಹಾಸದ ಅತಿ ದೀರ್ಘ ಯುದ್ಧ. ಇದನ್ನು ನಿಲ್ಲಿಸುವುದು ಹೇಗೆ? ಪರಸ್ಪರ ಮಾತುಕತೆಯ ಮೂಲಕವೇ ನಿಲ್ಲಿಸಬೇಕು. ಮೊದಲಿಗೆ ಮಾತುಕತೆಯ ಟೇಬಲ್‌ನಿಂದ ಬಂದೂಕು ತೆಗೆದು ಕೆಳಗಿರಿಸಲು ನಾಯಕರು ಒಪ್ಪಿಕೊಳ್ಳಬೇಕು. ನಂತರದ ದಾರಿ ಕಷ್ಟಕರವೇ ಆಗಿದ್ದರೂ ಪರಿಹಾರ ಸಾಧ್ಯವಿದೆ.