Thursday, 12th December 2024

ಮೋದಿ ಎಂಬ ಅನಿವಾರ್ಯಕ್ಕೆ ಎಂಪಿಗಳೆಂಬ ಅನಿವಾರ್ಯ !

ಶಿಶಿರ ಕಾಲ

shishirh@gmail.com

ಚುನಾವಣೆ. ೨೦೨೪ರ ವರ್ಷದ ಜಾಗತಿಕ ಇತಿಹಾಸ ಬರೆದಿಡುವುದಾದರೆ ಅದರಲ್ಲಿ ಇರುವುದು ಎರಡೇ ಮುಖ್ಯ ವಿಷಯಗಳು. ಮೊದಲನೆಯದು ಯುದ್ಧಗಳು, ಎರಡನೆಯದು ಚುನಾವಣೆಗಳು. ನಡೆಯುತ್ತಿರುವ ಯುದ್ಧಗಳ ಬಗ್ಗೆ ನಿಮಗೆ ತಿಳಿದೇ ಇದೆ. ಇದುವೇ ಇಂದಿನ ಬಹುತೇಕ ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಸದ್ಯ ನಿರ್ದೇಶಿಸುತ್ತಿದೆ. ಇದೆಲ್ಲದರ ನಡುವೆ ಚುನಾವಣೆಗಳು. ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಮೊದಲ ಹತ್ತು ದೇಶಗಳ ಪೈಕಿ ಎಂಟರಲ್ಲಿ ಈ ವರ್ಷ ಚುನಾವಣೆ.

ಬಾಂಗ್ಲಾದೇಶ, ಬ್ರೆಜಿಲ್, ಅಮೆರಿಕ, ಇಂಡೋನೇಷ್ಯಾ, ಪಾಕಿಸ್ತಾನ, ರಷ್ಯಾ, ಮೆಕ್ಸಿಕೋ ಮತ್ತು ಭಾರತ. ಈ ಎಂಟು ದೇಶಗಳ ಜನಸಂಖ್ಯೆ ಜಗತ್ತಿನ ಅರ್ಧಕ್ಕಿಂತ ಜಾಸ್ತಿ. ಎಂದರೆ ಅರ್ಧ ಜಗತ್ತು (ಜನಸಂಖ್ಯೆ) ಈ ವರ್ಷ ಚುನಾವಣೆಯಲ್ಲಿ ಭಾಗಿಯಾಗಲಿದೆ. ಈ ಪಟ್ಟಿಯಲ್ಲಿ ರಷ್ಯಾ ಮತ್ತು ಪಾಕಿಸ್ತಾನ
ಕೂಡ ಇವೆ! ರಷ್ಯಾದಲ್ಲಿ ಪುಟಿನ್ ವಿರುದ್ಧ ಧ್ವನಿ ಎತ್ತಿದ್ದ ಅಲೆಕ್ಸಿ ನೊವಾಲ್ನಿ ಕೆಲ ವರ್ಷದ ಹಿಂದೆ ದೇಶ ಬಿಟ್ಟು ಓಡಿಹೋಗಬೇಕಾಯಿತು. ಅದಾದ ಮೇಲೆ ರಷ್ಯಾಕ್ಕೆ ವಾಪಸಾದ ಆತನ ಮೇಲೆ ವಿಮಾನ ದೊಳಗೇ ನರ್ವ್ ಏಜೆಂಟ್ ವಿಷ ಹಾಕಲಾಯಿತು. ನಂತರ ಕೋಮಾ, ಚೇತರಿಕೆ, ಜೈಲು, ಅಲ್ಲಿಯೇ ಈಗ ಕೆಲವು ದಿನಗಳ ಹಿಂದೆ ಸಾವು. ಅಂಥ ರಷ್ಯಾದಲ್ಲಿಯೇ ಆತನ ಸಾವಿಗೆ ನ್ಯಾಯ ಬೇಕೆಂದು ಜನರು ದಂಗೆಯೆದ್ದರು.

ಅಂಥ ಹೋರಾಟದ ನಾಯಕತ್ವ ವಹಿಸಿದ್ದ ಸಾವಿರಾರು ಮಂದಿಯನ್ನು ಸದ್ಯ ಬಂಧಿಸಲಾಗಿದೆ. ಅದರಲ್ಲಿ ಕೆಲವರಿಗಾದರೂ ಅಲೆಕ್ಸಿ ನೊವಾಲ್ನಿ ರೀತಿ
ಯದ್ದೇ ಸಾವಾಗಬಹುದು ಎಂಬ ಊಹೆಯಿದೆ. ಒಟ್ಟಾರೆ ಇದ್ದ ಒಬ್ಬನೇ ಒಬ್ಬ ಸಂಭಾವ್ಯ ಪ್ರತಿಸ್ಪಽಯನ್ನು ಮುಗಿಸಿ ಪುಟಿನ್ ಚುನಾವಣೆಗೆ ಸನ್ನದ್ಧ ರಾಗಿದ್ದಾರೆ. ಇನ್ನು ಎಂಟು ದಿನದಲ್ಲಿ ಅಲ್ಲಿ ಚುನಾವಣೆಯಿದೆ. ಅಲ್ಲಿನದು ಒಲಿಗಾರ್ಕಿ ಸರಕಾರ. ಎಂದರೆ ಪುಟಿನ್ ಮತ್ತು ಕೆಲವೇ ಕೆಲವು- ಸುಮಾರು ಆರೇಳು ಮಂದಿ ನಡೆಸುವ ಸರಕಾರ ಅದು. ಆದರೆ ಚುನಾವಣೆಯ ಯಾವುದೇ ಸದ್ದು, ಗದ್ದಲ, ಭಾಷಣ, ಪ್ರಚಾರ ಯಾವುದೂ ಅಲ್ಲಿಲ್ಲ.

ಅದೊಂದು ನಾಮ್-ಕೆ-ವಾಸ್ತೆ ಚುನಾವಣೆ. ಪುಟಿನ್ ಅಧಿಕಾರ ಮುಂದುವರಿಯಲಿದೆ. ಇನ್ನೊಂದೇನು ಗೊತ್ತಾ, ಪುಟಿನ್ ಒಬ್ಬ ಸ್ವತಂತ್ರ ಅಭ್ಯರ್ಥಿ. ಅವರದ್ದು ಅಂತ ರಾಜಕೀಯ ಪಕ್ಷವೇ ಇಲ್ಲ. ಸ್ವತಂತ್ರ, ಯಾವುದೇ ಪಕ್ಷದಿಂದಲ್ಲದ ಅಭ್ಯರ್ಥಿ ದೇಶದ ಚುಕ್ಕಾಣಿ ಹಿಡಿಯುವುದೆಂದರೆ ಅದು ರಷ್ಯಾದಲ್ಲಿ ಮಾತ್ರ, ಇರಲಿ. ಇನ್ನು ಹಿಂದಿನ ತಿಂಗಳು ನಡೆದ ಪಾಕಿಸ್ತಾನದ ಚುನಾವಣೆ ಬಗ್ಗೆ ಏನೆಂದು ಹೇಳೋದು? ಅಲ್ಲಿ ಸರಕಾರ ನಡೆಸುವವರು ರಾಜಕಾರಣಿ ಗಳೋ, ಸೈನ್ಯವೋ ಅಥವಾ ಭಯೋತ್ಪಾದಕರೋ ಎಂಬುದೇ ಸಾರ್ವತ್ರಿಕ ಪ್ರಶ್ನೆ.

ಬಹುತೇಕ ದೇಶಗಳಿಗೆ ಇಂದು ಪಾಕಿಸ್ತಾನದ ಜತೆ ಮಾತುಕತೆ, ವ್ಯವಹಾರ ಮಾಡಬೇಕೆಂದರೆ ಈ ಮೂವರಲ್ಲಿ ಯಾರ ಜತೆ ಮಾತನಾಡುವುದು ಎಂಬುದೇ
ಬಗೆಹರಿಯದ ಯಕ್ಷಪ್ರಶ್ನೆ. ಯಕ್ಷಪ್ರಶ್ನೆಗಾದರೂ ಉತ್ತರ ಸಿಕ್ಕೀತು, ಇದಕ್ಕಿಲ್ಲ. ಇನ್ನು ಬಾಂಗ್ಲಾದೇಶ. ಅಲ್ಲಿ ಕೂಡ ಈಗಾಗಲೇ ಚುನಾವಣೆ ಮುಗಿದಿದೆ. ಅಲ್ಲಿಯೂ ಹೆಚ್ಚು ಕಡಿಮೆ ಶೇಕ್ ಹಸೀನಾ ಅವರದ್ದು ಸರ್ವಾಽಕಾರವೇ. ಅಲ್ಲಿನ ಚುನಾವಣೆಯ ಸಮಯದ ದೊಂಬರಾಟಗಳು ಒಂದೆರಡಲ್ಲ. ಅಲ್ಲಿನ ಪ್ರಮುಖ ವಿರೋಧ ಪಕ್ಷ ಕಳೆದ ಮೂರು ಚುನಾವಣೆಯಲ್ಲಿ ಭಾಗವಹಿಸಲೇ ಇಲ್ಲ- ಅನಿವಾರ್ಯ ಬಾಯ್ಕಾಟ್ ಮಾಡಿತ್ತು. ಹೀಗಾಗಿ ಅಲ್ಲಿನದು ಹಸೀನಾರ
ಸರ್ವಾಽಕಾರವೇ ಅಥವಾ ಪ್ರಜಾಪ್ರಭುತ್ವವೇ ಎಂಬುದೇ ಅಸ್ಪಷ್ಟ. ಹೀಗಾಗಿ ಚುನಾವಣೆ ಎಂಬುದರ ಅರ್ಥವನ್ನು ಕಳೆದುಕೊಂಡ ಪಾಕಿಸ್ತಾನ, ರಷ್ಯಾ ಮತ್ತು ಬಾಂಗ್ಲಾದೇಶವನ್ನು ಇದೆಲ್ಲ ವಿಶ್ಲೇಷಣೆಯಿಂದ ಹೊರಗಿಡಬೇಕು.

ಆ ದೇಶಗಳನ್ನೆಲ್ಲ ಬಿಟ್ಟರೆ ಮುಖ್ಯವಾಗುವವು ಎರಡು ದೇಶಗಳ ಚುನಾವಣೆಗಳು- ಭಾರತ ಮತ್ತು ಅಮೆರಿಕ. ಎರಡೂ ಕಡೆ ಪ್ರಜಾಪ್ರಭುತ್ವ. ನಮ್ಮಲ್ಲಿ ಕೆಲವರಿಗೆ ಪ್ರಜಾಪ್ರಭುತ್ವವೆನ್ನುವುದು ಸರ್ವೇಸಾಮಾನ್ಯ ಎಂಬ ಅನಿಸಿಕೆಯಿದೆ. ಜಗತ್ತಿನಲ್ಲಿ ೧೯೫ ದೇಶಗಳಿವೆ. ಅವುಗಳಲ್ಲಿ ಪಕ್ಕಾ ಪ್ರಜಾಪ್ರಭುತ್ವ ವಿರುವವು ಕೆಲವೇ ದೇಶಗಳು. ಇಂದು ಜಗತ್ತಿನ ಶೇ.೪೫ ಜನರಷ್ಟೇ ಪ್ರಜಾಪ್ರಭುತ್ವದ ಆಡಳಿತವನ್ನು ಅನುಭವಿಸುತ್ತಿರುವುದು, ಅವರ ನಾಯಕರನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಿರುವುದು.

ಇನ್ನುಳಿದ ಶೇ.೫೫ ಜನರಿಗೆ ಪ್ರಜಾಪ್ರಭುತ್ವವಿಲ್ಲ. ಅಂತೆಯೇ ಪ್ರಜಾಪ್ರಭುತ್ವವೆಂದು ಕರೆದುಕೊಳ್ಳುವ ದೇಶಗಳೆಲ್ಲ ಪೂರ್ಣ ಪ್ರಜಾಪ್ರಭುತ್ವದ್ದಲ್ಲ. ಉದಾಹರಣೆಗೆ ಮತ್ತೆ ಪಾಕಿಸ್ತಾನ. ಅಲ್ಲಿನದು ಹೈಬ್ರಿಡ್ ಸರಕಾರ. ಅಸಲಿಗೆ ಅಲ್ಲಿನದು ಪ್ರಜಾಪ್ರಭುತ್ವವೇ ಅಲ್ಲ. ಹಾಗಾಗಿ ಈ ಶೇ.೪೫ರಲ್ಲಿಯೂ
ಅರ್ಧಕ್ಕರ್ಧ ಇಂಥ ದೇಶಗಳೇ ಇವೆ. ಇದೆಲ್ಲ ಹೊರತಾಗಿಸಿ ನೋಡಿದರೆ ಉಳಿಯುವುದು ಭಾರತ ಮತ್ತು ಅಮೆರಿಕ. ಅಮೆರಿಕ ಆರ್ಥಿಕತೆಯಲ್ಲಿ ನಂಬರ್ ಒನ್.

ಭಾರತ ಜನಸಂಖ್ಯೆಯಲ್ಲಿ ನಂಬರ್ ಒನ್. ಎರಡೂ ದೇಶಗಳು ಹತ್ತಾರು ಕಾರಣದಿಂದ ಮುಖ್ಯವಾದವು. ಇಲ್ಲಿ ಚುನಾವಣೆ ಹೇಗಾಗುತ್ತದೆ ಎಂಬುದನ್ನು ಸದ್ಯ ಜಗತ್ತೇ ತುದಿಗಾಲಲ್ಲಿ ನೋಡುತ್ತಿದೆ. ಏಕೆ ಈ ಎರಡು ದೇಶಗಳು ಮುಖ್ಯ ಎಂಬುದಕ್ಕೆ ವಿವರ ಬೇಡವೆನಿಸುತ್ತದೆ. ಈಗಾಗಲೇ ಭಾರತದಲ್ಲಿ ಚುನಾವಣೆಯ ಗಜಿಬಿಜಿಗಳು ಶುರುವಾಗಿವೆ. ಆಕಾಂಕ್ಷಿಗಳೆಲ್ಲ ಅದಾಗಲೇ ಆಕ್ಟಿವೇಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾ, ಮದುವೆ, ಉಪನಯನ,
ತಿಥಿ ಹೀಗೆ ಎಲ್ಲಿ ಜನ ಸೇರುತ್ತಾರೋ ಅಲ್ಲೆಲ್ಲ ಅಭ್ಯರ್ಥಿಗಳು, ಹಾಲಿಗಳು, ಟಿಕೆಟ್ ಆಕಾಂಕ್ಷಿಗಳು ಓಡಾಡಲು, ಹಲ್ಲು ಗಿಂಜಲು ಶುರುಮಾಡಿಯಾಗಿದೆ. ಕೆಲಸವನ್ನೇ ಮಾಡದ, ಮೋದಿ ಹೆಸರಿನಿಂದಲೇ ಕಳೆದ ಎರಡು ಬಾರಿ ಆರಿಸಿ ಬಂದ ಕೆಲವು ಎಂ.ಪಿ.ಗಳು ಚುನಾವಣೆಯ ಸೀಸನ್ ಬಂದದ್ದೇ ಅಭಿವೃದ್ಧಿಯ ಮಾತನಾಡುತ್ತಿದ್ದಾರೆ.

ಫೇಸ್‌ಬುಕ್ ಮೊದಲಾದವುಗಳಲ್ಲಿ ಒಂದಿಷ್ಟು ಸುಳ್ಳು, ಒಂದಿಷ್ಟು ಸತ್ಯ ಹದವಾಗಿ ಬೆರೆಸಿ ದೇಶದ ಅಭಿವೃದ್ಧಿಯನ್ನೆಲ್ಲಾ ತಾವೇ ಮಾಡಿಸಿದ್ದು ಎಂಬಂತೆ
ಬಿಂಬಿಸುವ ಕೆಲಸವೂ ಶುರುವಾಗಿದೆ. ನನ್ನ ಉತ್ತರ ಕನ್ನಡ ಜಿಲ್ಲೆಯ ಎಂಪಿ ಅನಂತ್ ಕುಮಾರ್ ಹೆಗಡೆಯವರನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಅವರನ್ನು ಹಿಂದೂ ಹುಲಿ, ಸಿಂಹ ಇತ್ಯಾದಿಯಾಗಿ ಕರೆಯುವುದಿದೆ. ಅವರ ಹಿಂದೂ ಪರ ಮಾತುಗಳು ಖಂಡಿತವಾಗಿ ಬಹು ಸಂಖ್ಯಾತರಿಗೆ ಕೇಳಲಿಕ್ಕೆ ಖುಷಿಕೊಡುವುದು ನಿಜ. ಅಪ್ರತಿಮ ಮಾತುಗಾರ. ಆದರೆ ಜಿಲ್ಲೆಯ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ಅವರದ್ದೆನ್ನುವ ಯಾವ ಸಾಧನೆಯೂ ಹೊರಜಗತ್ತಿಗೆ ದುರ್ಬೀನ್‌ನಲ್ಲಿಯೂ ಕಾಣಿಸುವುದಿಲ್ಲ.

ಅವರದ್ದು ಬರೀ ಗರ್ಜನೆ. ಅವರು ತೀರಾ ಎರಡು ತಿಂಗಳಿನ ಹಿಂದಿನವರೆಗೆ ತಾವು ಅಭಿವೃದ್ಧಿ ಮಾಡಿರುವುದೇನು ಎಂಬುದನ್ನು ಎಲ್ಲಿಯೂ ಹೇಳಿದ್ದೇ ಇಲ್ಲ. ಉತ್ತರ ಕನ್ನಡವೆಂಬ ಕಾಡೇ ಹೆಚ್ಚಿರುವ ಜಿಲ್ಲೆಯಲ್ಲಿ ಅಭಿವೃದ್ಧಿಯಿಂದ ಸಮೃದ್ಧ ಅರಣ್ಯ ಸಂಪತ್ತಿಗೆ ತೊಂದರೆಯಾಗಬಹುದೆನ್ನುವ ಕಳಕಳಿ ಅವರಲ್ಲಿದ್ದರೆ ಅದು ಸರಿ ಬಿಡಿ. ಈ ಜಿಲ್ಲೆಯ ಕರಾವಳಿಯ ಗುಂಟ ರಾಷ್ಟ್ರೀಯ ಹೆದ್ದಾರಿ ಊರುಗಳ ಮಧ್ಯವೇ ಹಾದುಹೋಗುತ್ತದೆ, ಊರನ್ನು ಇಬ್ಭಾಗವಾಗಿಸುತ್ತದೆ. ಕುಮಟಾ ಮತ್ತು ಭಟ್ಕಳ ಬಸ್ ಸ್ಟ್ಯಾಂಡ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಿದೆ!

ಬಸ್ ಹೊರಬಿದ್ದರೆ ‘ರಾ.ಹೆ.’. ತೀರಾ ಅವೈಜ್ಞಾನಿಕ ರಸ್ತೆಗಳು. ಊರೊಳಗೆ ಓಡಾಡುವಾಗ ರಾ.ಹೆ.ಯನ್ನು ಹತ್ತೆಂಟು ಬಾರಿ ನಿತ್ಯ ದಾಟಾಡಬೇಕು. ಆ ಕಾರಣಕ್ಕೆ ಇಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ. ಜತೆಯಲ್ಲಿ ಅಲ್ಲೆಲ್ಲೂ ಒಂದು ಸುಸೂತ್ರ ಆಸ್ಪತ್ರೆಯಿಲ್ಲ. ಅಪಘಾತವಾದರೆ ಉಡುಪಿಯ ಮಣಿಪಾಲಕ್ಕೆ
ಗಾಯಾಳುಗಳನ್ನು ಒಯ್ಯಬೇಕು. ಸುಮಾರು ಮೂರು ತಾಸು ದೂರ. ಹೀಗೆ ಮಾರ್ಗಮಧ್ಯೆ ಜೀವ ಬಿಡುವವರೇ ಜಾಸ್ತಿ. ಆ ಕಾರಣಕ್ಕೆ ಈ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ವಿಷಯದಲ್ಲಿ ಅಷ್ಟೇ ನಿರ್ಲಕ್ಷ್ಯ ಅನಂತ್ ಕುಮಾರ್ ಹೆಗಡೆಯವರದ್ದು, ಉಳಿದ
ಮಂತ್ರಿಗಳದ್ದು.

ಸದ್ಯ ಹೆಗಡೆಯವರು ಪಟ್ಟಿಮಾಡುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರಕಾರದಿಂದ, ಅಲ್ಲಿನ ಮೋದಿಯವರ ಬಳಗದ ಇಚ್ಛಾಶಕ್ತಿಯಿಂದ ನಡೆದವು ಗಳು. ಇವರು ಹೇಳುವ ಅಭಿವೃದ್ಧಿ, ಬಿಜೆಪಿ ಎಂಪಿ ಅಲ್ಲದ ಜಿಲ್ಲೆಗಳಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಅದನ್ನು ಆ ಅನ್ಯಪಾರ್ಟಿಯ ಎಂಪಿಗಳು ಹೇಳಿಕೊಳ್ಳುವಂತಿಲ್ಲ- ಹೇಳಿದರೆ ಶ್ರೇಯಸ್ಸು ಮೋದಿಯವರಿಗೆ ಹೋಗುತ್ತದೆಯಲ್ಲ! ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಹೈವೇ
ಅಭಿವೃದ್ಧಿ ಇತ್ಯಾದಿ ಕೇಂದ್ರದಿಂದಾದ ಅಭಿವೃದ್ಧಿಯನ್ನು ತಮ್ಮದೇ ಸಾಧನೆಯೆಂದು ಹೇಳಿಕೊಳ್ಳುವ ಹಲವು ಎಂಪಿಗಳು ನಮ್ಮಲ್ಲಿ ಇದ್ದಾರೆ. ಎಲ್ಲೋ ಪ್ರತಾಪ್ ಸಿಂಹರಂಥ ಕೆಲವರನ್ನು ಹೊರತುಪಡಿಸಿದರೆ ಉಳಿದ ಎಂಪಿಗಳದ್ದು ಇದೇ ಕಥೆ; ಮೋದಿ ನಾಮವೇ ಆಸರೆ, ಬೇರು ಇತ್ಯಾದಿ. ಇದು ನಮ್ಮ ರಾಜ್ಯದ್ದಷ್ಟೇ ಕಥೆಯಲ್ಲ. ಬರೀ ಬಾಯಲ್ಲಿ ಪಟಾಕಿ ಹೊಡೆಯುತ್ತ, ಕನಿಷ್ಠ ಸೌಜನ್ಯಕ್ಕೂ ಏನೂ ಕೆಲಸ ಮಾಡದ, ‘ಮೋದಿಯನ್ನು ನೋಡಿ ವೋಟ್ ಹಾಕುತ್ತಾರೆ ಬಿಡಿ’ ಎಂಬ ಧಾರ್ಷ್ಟ್ಯ ಹಲವು ರಾಜ್ಯಗಳ ಎಂಪಿಗಳಲ್ಲಿ ಇದ್ದಂತಿದೆ. ಅವರೆಲ್ಲರಲ್ಲಿ ಮೋದಿಯವರ ಸಾಧನೆ ಬಿಟ್ಟರೆ ಇವರದ್ದೆನ್ನುವ ಯಾವುದೇ ಸಾಧನೆ ಇಲ್ಲ.

ಜಾಸ್ತಿ ಪ್ರಶ್ನಿಸಿದರೆ ಎಂ.ಪಿ.ಯ ಕಾರ್ಯವ್ಯಾಪ್ತಿಯ ವಿಷಯ ತೆಗೆದು ಗೊಂದಲವೆಬ್ಬಿಸುವುದನ್ನು ರೂಢಿಸಿಕೊಂಡಿದ್ದಾರೆ. ಇಂಥಲ್ಲೆಲ್ಲ ಮೋದಿ ಮುಖ ನೋಡಿ ಇವರಿಗೇ ಇನ್ನೊಮ್ಮೆ ವೋಟ್ ಹಾಕಬೇಕಾದ ಅನಿವಾರ್ಯತೆ ಮತದಾರರಲ್ಲಿದ್ದಂತಿದೆ. ಹಾಗಂತ ಮೋದಿ ಸರಕಾರದ ಸಾಧನೆಯನ್ನು ಹಗುರ
ಮಾಡುವಂತಿಲ್ಲ. ಮೋದಿ ಆಡಳಿತದಲ್ಲಿ ಭಾರತ ಬದಲಾದ ರೀತಿ ನಿಜವಾಗಿಯೂ ಐತಿಹಾಸಿಕ. ಅದರಲ್ಲಿ ಎರಡು ಮಾತಿಲ್ಲ. ಆದೇ ಸಮಯದಲ್ಲಿ ಮೋದಿಗೆ ಸಮನಾದ ಇನ್ನೊಂದು ಆಯ್ಕೆ ಜನರಿಗಿಲ್ಲವಾಗಿದೆ ಎಂಬುದೂ ಅಷ್ಟೇ ಸತ್ಯ. ಮೋದಿ ಎಂಬ ಅನಿವಾರ್ಯಕ್ಕೆ ಇವರನ್ನು ಆರಿಸಬೇಕು, ಸಹಿಸಿ
ಕೊಳ್ಳಬೇಕು.

ಅಮೆರಿಕದಲ್ಲಿ ಈಗಾಗಲೇ ಅಧ್ಯಕ್ಷೀಯ ಚುನಾವಣಾ ರಂಗೇರುತ್ತಿದೆ, ಕೆಸರೆರೆಚಾಟ ಶುರುವಾಗಿಯಾಗಿದೆ. ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್, ಡೆಮೋಕ್ರಾಟಿಕ್ ಪಕ್ಷದಿಂದ ಜೋ ಬೈಡನ್ ಸ್ಪರ್ಧೆ ಎಂದು ಈಗ ಅಂತಿಮ ವಾಗಿದೆ. ಇದು ನಾಲ್ಕು ವರ್ಷದ ಹಿಂದೆ ನಡೆದದ್ದೇ ಸ್ಪರ್ಧೆ, ಈಗ ಇನ್ನೊಮ್ಮೆ. ದೇಶ, ಪ್ರಾಪಂಚಿಕ ಸ್ಥಿತಿ ಎಲ್ಲವೂ ಬದಲಾಗಿರುವುದರಿಂದ ಅಮೆರಿಕದ ಚುನಾವಣೆ ಹೊಸ ರೂಪ ಪಡೆದುಕೊಂಡಿದೆ. ಇಂದಿನ ಅಧ್ಯಕ್ಷ ಬೈಡನ್‌ರನ್ನು ಅಮೆರಿಕನ್ನರು ಆರಿಸಿ ತಂದದ್ದೇ ಟ್ರಂಪ್‌ರನ್ನು ಸೋಲಿಸಲಿಕ್ಕೆ ಎಂಬಂತೆ ಹಿಂದಿನ ಚುನಾವಣೆ ನಡೆಯಿತು.

ಈಗ ನಾಲ್ಕು ವರ್ಷದ ನಂತರ ‘ಬೈಡನ್ ಬೇಡ, ಟ್ರಂಪ್ ವಾಸಿ’ ಎಂಬ ನಿರ್ಧಾರಕ್ಕೆ ಅಮೆರಿಕ ಬಂದಂತಿದೆ. ಇಲ್ಲಿ ಬೈಪಾರ್ಟಿಸನ್- ಎರಡೇ ಪಕ್ಷ.
ಹೀಗಾಗಿ ಅಮೆರಿಕನ್ನರ ಮುಂದೆ ಮೂರನೇ ಆಯ್ಕೆಯಿಲ್ಲ. ಅಮೆರಿಕ ಮತ್ತು ಭಾರತ ಎರಡೂ ಕಡೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಷಯ ಅಭಿವೃದ್ಧಿ. ಆದರೆ ಅದರಷ್ಟೇ ಮುಖ್ಯವಾಗುವುದು ಧರ್ಮರಕ್ಷಣೆ. ಯಾವುದೇ ಸಂಭಾವಿತ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಧರ್ಮ ಮತ್ತು ಸರಕಾರ ಪ್ರತ್ಯೇಕವಾಗಿರಬೇಕು, ಜತೆಯಲ್ಲಿ ಕೆಲಸಮಾಡಬೇಕು. ಅಮೆರಿಕದಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರು.

ಇಲ್ಲಿನ ಅಧ್ಯಕ್ಷರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ಶೇ.೬೨ ರಷ್ಟು ಇರುವ ಬಿಳಿಯ ಕ್ರಿಶ್ಚಿಯನ್ನರದ್ದು. ಭಾರತದಲ್ಲಿ ಬಹು ಸಂಖ್ಯಾತರು ಹಿಂದೂ ಗಳು, ಸುಮಾರು ಶೇ.೭೫ರಷ್ಟು. ಹಿಂದು ವಾಗಲಿ, ಕ್ರಿಶ್ಚಿಯನ್ ಆಗಲಿ ಧಾರ್ಮಿಕ ವಿಷಯ ಬಂದಾಗ ಯಾರ ಬಳಿ ಹೋಗಬೇಕು? ಹಿಂದೂ ಧರ್ಮದಲ್ಲಿ ಧರ್ಮ ರಕ್ಷಣೆ, ಪೋಷಣೆಯ ಕೆಲಸವನ್ನು ಇಲ್ಲಿನ ಮಠ, ಪೀಠ, ಸ್ವಾಮೀಜಿಗಳು ಮಾಡಬೇಕು. ಅಂತೆಯೇ ಅಮೆರಿಕದಲ್ಲಿ ಕ್ರಿಶ್ಚಿಯನ್ ಚರ್ಚುಗಳು, ಪಾದ್ರಿಗಳು, ಬಿಷಪ್‌ಗಳು. ಆದರೆ ಅಮೆರಿಕದ ಕ್ರಿಶ್ಚಿಯನ್ ಸಮೂಹ ಇಂದು ಧಾರ್ಮಿಕ ವಿಷಯ ರಕ್ಷಣೆಯ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಬೆನ್ನಿಗೆ ನಿಲ್ಲುತ್ತವೆ.

ಅಂತೆಯೇ ಭಾರತದಲ್ಲಿ ಮೋದಿ. ಪ್ರಭುತ್ವ ಯಾವ ಪಕ್ಷದ್ದು ಎಂಬುದರ ಮೇಲೆ ಧರ್ಮದ ಗಟ್ಟಿತನ, ಉಳಿವು, ಹಾನಿ ನಿರ್ಧಾರವಾಗುತ್ತವೆ, ಎರಡೂ ದೇಶಗಳಲ್ಲಿ. ಜನರಿಗೆ ಎಲ್ಲಕ್ಕಿಂತ ಹತ್ತಿರವಾಗುವುದು ಮೊದಲು ಧರ್ಮ, ಆಮೇಲೆ ದೇಶ. ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಧರ್ಮಕ್ಕೆ ಒಂದು ಪಕ್ಷ,
ನಾಯಕ ಅನಿವಾರ್ಯವಾಗುವುದು, ಅದಕ್ಕೆ ತಕ್ಕಂತೆ ರಾಜಕಾರಣಿ, ನಾಯಕ ತಾಳ ಕುಟ್ಟುವುದು ವ್ಯವಸ್ಥೆಯ ಅನಿವಾರ್ಯ ಭಾಗವೆಂದೇ ಒಪ್ಪಿಕೊಂಡು ಬಿಡುವುದು ಒಳ್ಳೆಯದೆನ್ನಿಸುತ್ತದೆ.

ಅಮೆರಿಕ ಮತ್ತು ಭಾರತದ ಆಂತರಿಕ ರಾಜಕೀಯ, ದೊಂಬರಾಟಗಳು, ಸ್ವರೂಪ ಸಂಪೂರ್ಣ ವಿಭಿನ್ನ. ಇಲ್ಲಿ ಪ್ರಜಾಪ್ರಭುತ್ವ ಕೇವಲ ಅಧ್ಯಕ್ಷರು, ಉಪಾಧ್ಯಕ್ಷರು, ಗವರ್ನರ್, ಶಾಸಕರನ್ನು ಜನರು ಆಯ್ಕೆಮಾಡುವುದಕ್ಕಷ್ಟೇ ಸೀಮಿತವಲ್ಲ. ಇಲ್ಲಿನ ಕೆಲವು ಜಡ್ಜ್‌ಗಳನ್ನು ಸರಕಾರ ನೇಮಿಸಿದರೆ ಇನ್ನುಳಿದ ನ್ಯಾಯಾಽಶರನ್ನು ಜನರೇ ವೋಟ್ ಮಾಡಿ ಆಯ್ಕೆ ಮಾಡುತ್ತಾರೆ. ಹಾಗಾಗಿ ನ್ಯಾಯಾಧೀಶರೂ ರಾಜಕೀಯ ಲೇಪಿತರೇ ಆಗಿರುತ್ತಾರೆ. ಅವರ ನ್ಯಾಯಪರತೆ
ಗಿಂತ ಹಿನ್ನೆಲೆ, ಧರ್ಮ, ಧಾರ್ಮಿಕ ಮತ್ತು ರಾಜಕೀಯ ನಿಲುವು, ದೃಷ್ಟಿಕೋನ ನೋಡಿ ಅವರನ್ನು ಜನರು ಆರಿಸುವುದು.

ಹಾಗಾಗಿ ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗಲೂ ಧರ್ಮ, ಜಾತಿ, ಬಣ್ಣ ಇತ್ಯಾದಿ ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಅಷ್ಟೇ ಅಲ್ಲ ಶೆರಿಫ್  (ಪೊಲೀಸ್ ನಿರ್ದೇಶಕ ಎಂದಿಟ್ಟುಕೊಳ್ಳಿ) ಆಯ್ಕೆಯೂ ಜನರಿಂದ ನೇರ ವಾಗಿ ಆಗುತ್ತದೆ. ಜಿಲ್ಲಾ ಮತ್ತು ಹೈಕೋರ್ಟ್ ನ್ಯಾಯಾಧೀಶರು, ಶಾಲಾ ಬೋರ್ಡ್ ಸದಸ್ಯರನ್ನೂ ಜನರೇ ನೇರವಾಗಿ ಆರಿಸುವುದು. ಅದೇ ರೀತಿ ಸರಕಾರಿ ಮುಖ್ಯ ಅಧಿಕಾರಿಗಳನ್ನು. ಆದರೆ ಅಧ್ಯಕ್ಷರು ಇಂಥವರಾಗಬೇಕೆಂದು ಬಯಸುವ
ಪ್ರಜೆಗಳು ಇನ್ಯಾರೋ ಮಂತ್ರಿಗೆ ವೋಟ್ ಹಾಕಿ ಆಯ್ಕೆ ಮಾಡುವ ಅನಿವಾರ್ಯತೆ ಭಾರತದಂತೆ ಅಮೆರಿಕದಲ್ಲಿ ಇಲ್ಲ. ಅದು ಇಲ್ಲಿಗೂ, ನಮ್ಮಲ್ಲಿನ ಪಾರ್ಲಿಮೆಂಟರಿ ವ್ಯವಸ್ಥೆಗೂ ಇರುವ ವ್ಯತ್ಯಾಸ.

ಪ್ರಜಾಪ್ರಭುತ್ವದಲ್ಲಿ ಇಷ್ಟು ವ್ಯತ್ಯಾಸವಿದ್ದರೂ ಎರಡೂ ದೇಶಗಳಲ್ಲಿ ರಾಜಕೀಯವು ಸಾಮಾನ್ಯ ಪ್ರಜೆಗಳಲ್ಲಿ ಹಲವು ಸೂಕ್ಷ್ಮ ಒಡಕುಗಳನ್ನು ತಂದಿರು ವುದು ಸಾಮಾನ್ಯ ವಿಷಯ. ಮೊನ್ನೆಯಷ್ಟೇ ನನ್ನ ಹತ್ತಿರದ ಸಂಬಂಧಿಯೊಬ್ಬರ ಮನೆಯಲ್ಲಿ ಇದು ನಡೆಯಿತು. ನಿಶ್ಚಯಿಸಲ್ಪಡುವ ಮದುವೆಯ ಮಾತುಕತೆ ನಡೆದಿತ್ತು. ಗಂಡು ಹೆಣ್ಣು ಒಬ್ಬರನ್ನೊಬ್ಬರು ನೋಡುವ ಶಾಸ್ತ್ರ ಮುಗಿದಿತ್ತು. ಇಬ್ಬರಿಗೂ ಪರಸ್ಪರ ಒಪ್ಪಿಗೆಯಾಗಿತ್ತು. ಆದರೆ ಈ ಸಂಬಂಧ ಮುಂದುವರಿಯಲಿಲ್ಲ. ಅದಕ್ಕೆ ಕಾರಣ ಗಂಡಿನ ತಂದೆಯದ್ದು ಒಂದು ರಾಜಕೀಯ ಪಕ್ಷ, ಹೆಣ್ಣಿನ ತಂದೆಯದು ಇನ್ನೊಂದು ರಾಜಕೀಯ ಪಕ್ಷ, ನಿಲುವು. ನಾನು ಹೇಳುತ್ತಿರುವ ಈ ವಿಷಯ ಒಂದೇ ಮದುವೆಯ ಕಥೆಯೆಂದೇ ಇಟ್ಟುಕೊಳ್ಳೋಣ. ವಿಷಯ ಅದಲ್ಲ. ಈ ರೀತಿ ರಾಜಕೀಯ ಪಕ್ಷದ ಒಲವಿನ ಕಾರಣಕ್ಕೆ ಸಂಬಂಧ, ಸ್ನೇಹ, ಪ್ರೀತಿ ಇವೆಲ್ಲ ಕೊನೆಯಾಗುವ, ಆರಂಭದಲ್ಲಿಯೇ ಸತ್ತುಹೋಗುವ ಸ್ಥಿತಿ ನಮ್ಮಲ್ಲಿ ಇರುವುದಂತೂ ನಿಜ. ಅವನು ಬಿಜೆಪಿ, ಇವನು ಕಾಂಗ್ರೆಸ್, ಇನ್ನೊಬ್ಬ ಜೆಡಿಎಸ್ ಎಂಬ ಕಾರಣಕ್ಕೆ ಸ್ನೇಹ- ಸಂಬಂಧ ಬೆಳೆಯುವುದೇ ಇಲ್ಲ.

ಮಾತೆತ್ತಿದರೆ ಅಲ್ಲಿ ವಾಗ್ಯುದ್ಧವೇ. ಅಮೆರಿಕದಲ್ಲಿಯೂ ಹಾಗೆಯೇ. ಇಲ್ಲಿ ಅರೇಂಜ್ಡ್ ಮದುವೆಗಳಿಲ್ಲ. ಆದರೆ ಮದುವೆಯಾಗುವಾಗ ಒಂದು ಕಡೆ ರಿಪಬ್ಲಿಕನ್, ಇನ್ನೊಂದು ಕಡೆ ಡೆಮೊಕ್ರಾಟಿಕ್ ಪಕ್ಷದವರಾದರೆ ಆ ಸಂಬಂಧಕ್ಕೆ ಕುಟುಂಬಗಳು ಅಡ್ಡವಾಗಿ, ನಂತರ ಈ ಜೋಡಿ ಪ್ರತ್ಯೇಕವಾಗಿ ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದು ಇಲ್ಲಿದೆ. ಇವಷ್ಟೇ ಅಲ್ಲ, ರಾಜಕೀಯ ಕಾರಣಕ್ಕೆ ಊರು-ಕೇರಿಗಳಲ್ಲಿನ ಅಕ್ಕ ಪಕ್ಕ ಬದುಕಿ ಬಾಳು ವವರು ಒಬ್ಬರನ್ನೊಬ್ಬರು ಕಂಡರಾಗದಂತೆ ಬದುಕು ವುದು ಎರಡೂ ದೇಶಗಳಲ್ಲಿದೆ.

ಒಟ್ಟಾರೆ ಇವೆಲ್ಲ ನಮ್ಮ ಕೆಲವು ಮನುಷ್ಯ ಸಹಜ ಗುಂಪು ಗಾರಿಕೆಯ ಮನೋಭಾವ- ಬೇಸಿಕ್ ಇನ್‌ಸ್ಟಿಂಕ್ಟ್‌ನ ಮುಂದುವರಿದ ಭಾಗ ಎಂದೆನಿಸುತ್ತದೆ. ರಾಜಕೀಯಕ್ಕೆ ಹತ್ತಿರವಾದಾಗ ಅದೊಂದು ಅವ್ಯಕ್ತ ಸುರಕ್ಷತೆ, ಭದ್ರತೆಯ ಭಾವವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಏನು ಗೊತ್ತಾ, ಅಮೆರಿಕ ಮತ್ತು ಭಾರತ ದಲ್ಲಿ ರಾಜಕೀಯ ವ್ಯವಸ್ಥೆಗಳು ಎಷ್ಟೇ ವಿಭಿನ್ನವಿರಬಹುದು, ಆದರೆ ಇಲ್ಲಿನ ಜನಸಾಮಾನ್ಯರು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ, ಅದು ಅವರ ಸಹಜ ಜೀವನವನ್ನು ನಿರ್ದೇಶಿಸುವ ರೀತಿ ಎರಡೂ ಕಡೆ ಒಂದೇ ರೀತಿಯದ್ದಾಗಿದೆ.

ಅಷ್ಟೇ ಅಲ್ಲ, ಎರಡೂ ಕಡೆ ರಾಜಕಾರಣಿಗಳ ಬುದ್ಧಿ, ವ್ಯವಹಾರ ಮತ್ತು ಉದ್ದೇಶಗಳಲ್ಲಿ ಕೂಡ ಪೂರ್ಣ ಸಾಮ್ಯತೆ ಇದೆ. ಒಟ್ಟಾರೆ ಇವೆಲ್ಲವನ್ನೂ ಪ್ರಜಾಪ್ರಭುತ್ವದ ಅನಿವಾರ್ಯ ಉಪೋತ್ಪನ್ನಗಳು ಎಂದೇ ಗ್ರಹಿಸಬೇಕು. ಆಗ ರಾಜಕೀಯ ವನ್ನು ರಾಜಕಾರಣಿಗಳಿಗಿಂತ ಹೆಚ್ಚು ಗಂಭೀರವಾಗಿ ಜನ
ಸಾಮಾನ್ಯರು ಪರಿಗಣಿಸುವುದು, ವೈಯಕ್ತಿಕ ಜೀವನ, ಸಂಬಂಧಗಳು ಅದರಿಂದ ನಿರ್ದೇಶಿತವಾಗುವುದು ಮೊದಲಾದ ಅಸಂಬದ್ಧತೆಗಳು ಕಡಿಮೆಯಾ ಗುತ್ತವೆ.