ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಅನ್ಯದೇಶವೊಂದು ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾದರೆ ಅದನ್ನು ಎಲ್ಲ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿ ‘ಸರಕಾರದೊಂದಿಗೆ ನಾವಿದ್ದೇವೆ’ ಎಂಬ ಸಂದೇಶವನ್ನು ರವಾನಿಸಬೇಕಿತ್ತು. ಆದರೆ ‘ಇಂಡಿಯ’ ಮೈತಿಕೂಟದ ಪಕ್ಷಗಳು ಇದನ್ನು ದೇಶದ ಗೌರವದ ಪಶ್ನೆಯೆಂದು ಭಾವಿಸಿದಂತೆ ಕಾಣಲೇ ಇಲ್ಲ.
ಕಳೆದ ೯ ವರ್ಷದಲ್ಲಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ ಅವರ ವಿರೋಧಿಗಳು ಅತಿರೇಕವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ಚುನಾವಣೆ ಸಮೀಪ ವಾಗುತ್ತಿರುವಂತೆ ಈ ವಿರೋಧ ಎಲ್ಲ ಗಡಿಯನ್ನು ದಾಟಿ ದೇಶದ ಹಿತಕ್ಕೂ ಧಕ್ಕೆ ತರುತ್ತಿದೆ. ಅಯೋಧ್ಯೆಗೆ ತೆರಳಿದ್ದ ಕರಸೇವಕರು ಹಿಂದಿರುಗಿ ಬರುವಾಗ ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಅವರಿದ್ದ ಬೋಗಿಗೆ ಬೆಂಕಿ ಹಚ್ಚಲಾಗುತ್ತದೆ. ಈ ದುಷ್ಕೃತ್ಯದಲ್ಲಿ ಹತ್ತು ಮಕ್ಕಳು ಸೇರಿ ೫೯ ಜನರ ಸಜೀವ ದಹನ ವಾಗುತ್ತದೆ. ಇದಕ್ಕೆ ಪ್ರತಿಯಾಗಿ ಗುಜರಾತಿನಲ್ಲಿ ನಡೆದ ಹಿಂದು-ಮುಸ್ಲಿಂ ಗಲಭೆಗೆ ನೂರಾರು ಜನರು ಆಹುತಿಯಾದರು.
ಢೋಂಗಿ ಜಾತ್ಯತೀತವಾದಿಗಳು ಗುಜರಾತ್ ಗಲಭೆಯನ್ನು ಟೀಕಿಸಿದರೇ ವಿನಾ, ಗೋಧ್ರಾ ಘಟನೆಯು ನಡೆದೇ ಇಲ್ಲದಹಾಗೆ ವರ್ತಿಸಿದರು. ಗುಜರಾತಿನ ಗಲಭೆಯ ಮೂಲವನ್ನು ಹುದುಗಿಡುವುದು ಇವರ ಉದ್ದೇಶವಾಗಿತ್ತು. ಗುಜರಾತ್ ಗಲಭೆಯ ತರುವಾಯ ಈ ಢೋಂಗಿಗಳಿಗೆ ತಮ್ಮ ಕಪಟ ಜಾತ್ಯತೀತ ನಿಲುವಿನ ಬದ್ಧತೆಯ ಪ್ರದರ್ಶನಕ್ಕೆ ಮೋದಿ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಭಾರತಕ್ಕೆ ಬೇಕಾಗಿದ್ದ ಖಲಿಸ್ತಾನಿ ಉಗ್ರವಾದಿ ಹರ್‌ದೀಪ್‌ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂಬ ಆರೋಪವನ್ನು ಕೆನಡಾದ ಪ್ರಧಾನಿ ಜಸ್ಟೀನ್ ಟ್ರೂಡೋ ಅವರು ಕೆನಡಾ ಸಂಸತ್ತಿನಲ್ಲಿ ಮಾಡಿ, ಭಾರತ ದೊಂದಿಗೆ ಅಕ್ಷರಶಃ ರಾಜತಾಂತ್ರಿಕ ಯುದ್ಧವನ್ನೇ ಘೋಷಿಸುತ್ತಾರೆ.
ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದ ಅವರು ಈ ಗಂಭೀರ ಆರೋಪವನ್ನು ಮಾಡುತ್ತಾರೆ. ಅನ್ಯದೇಶದಲ್ಲಿ ಹತ್ಯೆ ಕೈಗೊಂಡ
ಆರೋಪ ಎದುರಿಸುವ ದೇಶಕ್ಕೆ ಇದೊಂದು ಬಹುದೊಡ್ಡ ಕಪ್ಪುಚುಕ್ಕೆ. ಆಪಾದಿತ ದೇಶವು ಅಂತಾರಾಷ್ಟ್ರೀಯ ಸ್ತರದಲ್ಲಿ ಅಸ್ಪೃಶ್ಯನಾಗಿ ಆರ್ಥಿಕ
ನಿರ್ಬಂಧಗಳನ್ನು ಎದುರಿಸಬೇಕಾದ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಆದರೆ, ಬದಲಾದ ಭಾರತ ಇಂದು ಇಂಥ ಆರೋಪಗಳಿಗೆ ತಕ್ಕ ಪ್ರತಿಕ್ರಿಯೆ ನೀಡಿ ಅಂತಾ ರಾಷ್ಟ್ರೀಯ ಸಮುದಾಯವನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಕೆನಡಾ ಮಾಡಿದ ಆರೋಪಕ್ಕಿಂತ ಸ್ವದೇಶದ ವಿರೋಧ ಪಕ್ಷಗಳು ಪ್ರತಿಕ್ರಿಯಿಸಿದ ರೀತಿಯೇ ಹೆಚ್ಚು ಆಘಾತಕಾರಿಯಾಗಿತ್ತು. ಅನ್ಯ ದೇಶವೊಂದು ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾದರೆ ಅದನ್ನು ಎಲ್ಲ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಖಂಡಿಸ ಬೇಕಿತ್ತು ಮತ್ತು ‘ಸರಕಾರದೊಂದಿಗೆ ನಾವಿದ್ದೇವೆ’ ಎಂಬ ಸಂದೇಶವನ್ನು ರವಾನಿಸಬೇಕಿತ್ತು.
ಆದರೆ ‘ಇಂಡಿಯ’ ಮೈತ್ರಿಕೂಟದ ಪಕ್ಷಗಳು ಇದನ್ನು ದೇಶದ ಗೌರವದ ಪ್ರಶ್ನೆಯೆಂದು ಭಾವಿಸಿದಂತೆ ಕಾಣಲೇ ಇಲ್ಲ. ಯಥಾಪ್ರಕಾರ ಮೋದಿ
ವಿರುದ್ಧದ ನಿಲುವುಗಳೇ ಇವರಿಗೆ ಮಹತ್ತರವಾದವು. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಗೆ ಪಂಜಾಬಿನಲ್ಲಿ ಸಿಖ್ಖರ ಮತಕ್ಕೆ ಧಕ್ಕೆಯಾಗುವ ಭೀತಿ,
ಹೀಗಾಗಿ ಅವು ಈ ವಿವಾದದಿಂದ ದೂರವೇ ಉಳಿದವು. ‘ಇಂಡಿಯ’ ಮೈತ್ರಿಕೂಟದವರಿಗೆ ಈ ವಿವಾದದಿಂದ ಮೋದಿಯವರು ಇಕ್ಕಟ್ಟಿಗೆ ಸಿಲುಕಲಿ
ಎಂಬುದೇ ಮಹದಾಶಯವಾಗಿತ್ತು ಎಂದರೆ ತಪ್ಪಾಗ ಲಾರದು. ೧೯೯೪ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾರತವು ಕಾಶ್ಮೀರ ಪರವಾದ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಾದ ಸವಾಲು ಎದುರಾದಾಗ, ಅಂದಿನ ಪ್ರಧಾನಿ ನರಸಿಂಹ ರಾಯರು ವಿಪಕ್ಷ ನಾಯಕರಾಗಿದ್ದ ವಾಜಪೇಯಿ ನೇತೃತ್ವದಲ್ಲಿ ನಿಯೋಗವನ್ನು ಕಳಿಸಿದರು. ಆಂತರಿಕ ರಾಜಕಾರಣಕ್ಕಿಂತ ದೇಶದ ಹಿತ ಮುಖ್ಯ ಎಂದು ನಂಬಿದ್ದ ಕಾಲವದು.
ಪ್ಯಾಲೆಸ್ತೀನಿನ ಹಮಾಸ್ ಭಯೋತ್ಪಾದಕ ಸಂಘಟನೆಯು ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ದಾಳಿಮಾಡಿತು. ಇಸ್ರೇಲ್ ಗಡಿಭಾಗಕ್ಕೆ ನುಗ್ಗಿದ ಹಮಾಸ್ ಉಗ್ರರು ಹಿಟ್ಲರನೂ ನಾಚುವಂಥ ಅಮಾನುಷ ಕೃತ್ಯಗಳಲ್ಲಿ ತೊಡಗಿದರು. ಇದಕ್ಕೆ ಇಸ್ರೇಲ್ ನೀಡಬಹುದಾದ ಉಗ್ರ ಪ್ರತ್ಯುತ್ತರದ ಬಗ್ಗೆ ಅರಿವಿದ್ದರೂ ಹಮಾಸ್ ಉಗ್ರರು ಇಂಥ ಹುಚ್ಚು ಸಾಹಸಕ್ಕೆ ಕೈಹಾಕಿದ್ದರು. ನಿರೀಕ್ಷೆಯಂತೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಅಧಿಕೃತವಾಗಿ ಯುದ್ಧ
ಘೋಷಿಸಿತು. ಇಸ್ರೇಲ್ ಪ್ರಧಾನಿ ನೆತನ್ಯಾಹು, ‘ಯುದ್ಧ ನಾವು ಆರಂಭಿಸಿಲ್ಲ, ಆದರೆ ಅದನ್ನು ನಾವು ಮುಗಿಸುತ್ತೇವೆ’ ಎಂದು ಮುಂದಿನ ಕ್ರಮಗಳಿಗೆ
ಮುನ್ನುಡಿ ಬರೆದರು. ಅಕ್ಟೋಬರ್ ೮ರಿಂದ ಇಸ್ರೇಲ್ ಭಯಂಕರ ಪ್ರತಿದಾಳಿಯನ್ನು ಆರಂಭಿಸಿತು. ಗಾಜಾ ಪ್ರದೇಶದ ಮೇಲೆ ವೈಮಾನಿಕ ದಾಳಿಯ ಮೂಲಕ ಬಾಂಬ್‌ಗಳ ಸುರಿಮಳೆಯಾಯಿತು.
ದೊಡ್ಡ ದೊಡ್ಡ ಕಟ್ಟಡಗಳು ತರಗೆಲೆಯಂತೆ ಉದುರಿದವು, ಸಾವಿರಾರು ಜನ ಹತರಾದರು, ಲಕ್ಷಾಂತರ ಜನ ನಿರ್ವಸಿತರಾದರು. ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತವು ಇಸ್ರೇಲ್ ನೊಂದಿಗೆ ತಾನಿರುವುದಾಗಿ ಸಂದೇಶ ನೀಡಿತು. ತದನಂತರ ಭಾರತವು ಪ್ಯಾಲೆಸ್ತೀನ್‌ನ ಸ್ವಯಮಾಧಿಕಾರ ವನ್ನು ಬೆಂಬಲಿಸಿತು ಮತ್ತು ಸಮಸ್ಯೆಗಳನ್ನು ಪರಸ್ಪರ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿ ಪ್ಯಾಲೆಸ್ತೀನ್ ವಿಚಾರದಲ್ಲಿ ತನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿತು.
ಹಮಾಸ್ ಉಗ್ರರ ದಾಳಿಯ ಬಗ್ಗೆ ಕಾಂಗ್ರೆಸ್ ಪಕ್ಷವು ತಿಪ್ಪೆ ಸಾರಿಸಿದ ಹಾಗೆ ಖಂಡಿಸುತ್ತದೆ. ಆ ನಂತರ ಕಾಂಗ್ರೆಸ್ ಕಾರ್ಯಕಾರಿಣಿ ನಿರ್ಣಯದಲ್ಲಿ
ಪ್ಯಾಲೆಸ್ತೀನ್ ಸ್ವಯಮಾಽಕಾರಕ್ಕೆ ಮತ್ತು ಅವರ ಹಕ್ಕುಗಳಿಗೆ ಬೆಂಬಲಿಸುತ್ತದೆ, ಆದರೆ ಹಮಾಸ್ ಉಗ್ರರು ನಡೆಸಿದ ಮಾರಣಹೋಮವನ್ನು ಖಂಡಿ
ಸುವ ಎದೆಗಾರಿಕೆ ತೋರುವುದಿಲ್ಲ. ‘ಇಂಡಿಯ’ ಮೈತ್ರಿಕೂಟದ ಸದಸ್ಯರು ಮಣಿಶಂಕರ್ ಅಯ್ಯರ್ ನೇತೃತ್ವದಲ್ಲಿ ಪ್ಯಾಲೆಸ್ತೀನ್ ದೂತಾವಾಸಕ್ಕೆ ಭೇಟಿನೀಡಿ ತಮ್ಮ ಬೆಂಬಲ ಸೂಚಿಸುತ್ತಾರೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಹೋರಾಟದ ವಿಷಯದಲ್ಲಿ ಯಾರ ಪಕ್ಷ ವಹಿಸಬೇಕು ಎಂಬುದಕ್ಕೂ ಮತಬ್ಯಾಂಕ್ ದೃಷ್ಟಿಕೋನವೇ ಆಧಾರವಾಗುತ್ತದೆ.
ಭಾರತ ಸರಕಾರದ ನಿಲುವು ಮೋದಿಯವರ ಸ್ವಂತ ನಿರ್ಣಯವೆಂಬಂತೆ ಪರಿಭಾವಿಸುವ ಅವರ ವಿರೋಽಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹಮಾಸ್‌ಗಳ ದುಷ್ಕೃತ್ಯವನ್ನು ಸಮರ್ಥಿಸಿಕೊಳ್ಳಲು ಹಿಂಜರಿಯುವುದಿಲ್ಲ. ಮೋದಿಯವರು ಹಮಾಸ್ ದಾಳಿಯನ್ನು ಖಂಡಿಸಿದರೆ ಅದಕ್ಕೆ ಪ್ರತಿಯಾಗಿ, ‘ಮೋದಿಯವರು ಮಣಿಪುರದ ಹಿಂಸಾಚಾರವನ್ನು ಖಂಡಿಸುವುದಿಲ್ಲ; ಆದರೆ ಸಾವಿರಾರು ಕಿ.ಮೀ. ದೂರದ ಇಸ್ರೇಲ್ ಬಗ್ಗೆ ಟ್ವೀಟ್ ಮಾಡುತ್ತಾರೆ’ ಎಂದು ಕುಹಕವಾಡುವ ಹಾಗೂ ಮಣಿಪುರದ ಜನಾಂಗೀಯ ಹಿಂಸಾಚಾರವನ್ನು ಪ್ಯಾಲೆಸ್ತೀನ್ ಹಿಂಸಾಚಾರದೊಂದಿಗೆ ಸಮೀಕರಿಸಿ ಹಮಾಸ್ ಭಯೋತ್ಪಾದನೆಗೆ ತಡೆಗೋಡೆ ಕಟ್ಟುವ ಪ್ರಯತ್ನವೂ ನಡೆಯುತ್ತದೆ.
ಪ್ಯಾಲೆಸ್ತೀನನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ದೇಶ ಇಸ್ರೇಲ್ ಎಂದು ಆರೋಪಿಸಿ, ಹಮಾಸ್‌ನ ಅಮಾನುಷ ದಾಳಿಯ ಸಮರ್ಥನೆಗೂ ಹಿಂಜರಿಯುವುದಿಲ್ಲ. ಇದೇ ಗುಂಪು, ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರ ಮತ್ತು ಅವರನ್ನು ಕಣಿವೆಯಿಂದ ಹೊರದೂಡಿದ ಘೋರಕೃತ್ಯದ ಬಗ್ಗೆ ಚಕಾರವೆತ್ತುವುದಿಲ್ಲ. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಮತಾಂತ ರದ ಬಗ್ಗೆ ಬಾಯಿ ತೆರೆಯುವುದಿಲ್ಲ.
ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಪರಾಭವಗೊಳಿಸಿದಾಗ, ಮೋದಿ-ವಿರೋಧಿಗಳು ಪಾಕಿಸ್ತಾನೀಯರಿಗಿಂತ ತಮಗೇ ಹೆಚ್ಚು ದುಃಖ,
ನೋವು ಆದಹಾಗೆ ವರ್ತಿಸಿದರು. ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದು ಇವರ ಟೀಕೆ ಮತ್ತು ಆಕ್ಷೇಪಗಳಿಗೆ
ಮತ್ತಷ್ಟು ಬಲ ತುಂಬಿತ್ತು. ಪಂದ್ಯ ಆರಂಭವಾಗುತ್ತಿದ್ದ ಹಾಗೆ ಪತ್ರಕರ್ತ ರಾಜ್‌ದೀಪ್ ಅವರು, ‘ಬಬ್ಬರ್ ಅಜಾಂ ಮಾತನಾಡುವಾಗ ಪ್ರೇಕ್ಷಕರು ಬೊಬ್ಬೆ
ಹಾಕಿದರು, ಇದು ಸರಿಯಲ್ಲ’ ಎಂದು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆಯುತ್ತಾರೆ. ಅಲ್ಲಿಂದ ಸಣ್ಣ ಸಣ್ಣ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲು ಮೋದಿ-ವಿರೋಧಿಗಳಿಗೆ ಆಹಾರವಾದವು.
ಪಾಕಿಸ್ತಾನಿ ಕ್ರಿಕೆಟಿಗ ಮಹಮ್ಮದ್ ರಿಜ್ವಾನ್ ಹೈದರಾಬಾದ್‌ನಲ್ಲಿ ಶ್ರೀಲಂಕಾ ಪಂದ್ಯದ ವೇಳೆ ಮೈದಾನದಲ್ಲೇ ನಮಾಜ್ ಮಾಡುತ್ತಾರೆ. ಅಂದಿನ
ಶ್ರೀಲಂಕಾ ವಿರುದ್ಧದ ಗೆಲುವನ್ನು ಗಾಜಾ ಜನರಿಗೆ ಅರ್ಪಿಸಿ ಹಮಾಸ್ ಭಯೋತ್ಪಾದಕರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿ, ಕ್ರೀಡೆಯಲ್ಲಿ ಧರ್ಮ
ಮತ್ತು ರಾಜಕೀಯ ಎರಡನ್ನೂ ಬೆರೆಸುತ್ತಾರೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಮಹಮ್ಮದ್ ರಿಜ್ವಾನ್ ಔಟಾಗಿ ಪೆವಿಲಿಯನ್‌ಗೆ ಹಿಂದಿರುಗಿದಾಗ
ಕೆಲವು ಯುವಕರು ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದ್ದು ಮೋದಿ-ವಿರೋಧಿಗಳಿಗೆ ಯುದ್ಧದ ಕೂಗಿನ ಹಾಗೆ ಕೇಳಿಸುತ್ತದೆ. ಡಿಎಂಕೆ ನಾಯಕ ಉದಯನಿಽ ಸ್ಟಾಲಿನ್, ‘ಜೈ ಶ್ರೀರಾಮ್ ಎಂದು ಕೂಗಿದ್ದು ಖಂಡನೀಯ ಮತ್ತು ಕೆಳಮಟ್ಟದ ವರ್ತನೆ’ ಎಂದು ಟೀಕಿಸುತ್ತಾರೆ.
ಆದರೆ ಈ ಪೂರ್ವ ಗ್ರಹಪೀಡಿತರಲ್ಲಿ ಒಬ್ಬರೂ ‘ಮಹಮ್ಮದ್ ರಿಜ್ವಾನ್ ನಡವಳಿಕೆಯು ತಪ್ಪು’ ಎಂದು ಹೇಳುವುದಿಲ್ಲ. ಪ್ರೇಕ್ಷಕರ ವರ್ತನೆಯ ವಿರುದ್ಧ ಐಸಿಸಿಗೆ ದೂರು ಸಲ್ಲಿಕೆಯಾಗಿ ಮುಂದಿನ ಪಂದ್ಯಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬಾರದು ಎಂಬ ದುರುದ್ದೇಶವು ಇವರ ಸತತ ಟೀಕೆಗೆ ಕಾರಣವಾಗಿದ್ದರೂ ಆಶ್ಚರ್ಯವಿಲ್ಲ. ನಮ್ಮವರೇ ಪಾಕಿಸ್ತಾನದ ಪರವಾಗಿ ದೂರುಗಳ ಸುರಿಮಳೆ ಮಾಡಿದ ತರುವಾಯ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೌನವಾಗಿರಲು ಹೇಗೆ ಸಾಧ್ಯ? ಹೀಗಾಗಿ ಅಹಮದಾಬಾದ್ ಪ್ರೇಕ್ಷಕರ ವರ್ತನೆಯ ವಿರುದ್ಧ ಪಾಕಿಸ್ತಾನವು ಐಸಿಸಿಗೆ ಅಧಿಕೃತವಾಗಿ ದೂರು ಸಲ್ಲಿಸಿತು.
‘ವೈರ್’ ಮಾಧ್ಯಮದ ವರದಿಗಾರ್ತಿ ಆಜಂ ಖಾನಂ ಶೇರ್ ವಾನಿಯವರು, ‘ಭಾರತವು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಂದ್ಯಗಳ ಆಯೋಜನೆಗೆ ಸೂಕ್ತವಿಲ್ಲ. ಪಾಕಿಸ್ತಾನದ ಕ್ರಿಕೆಟಿಗರ ವಿರುದ್ಧದ ಟೀಕೆಯಿಂದ ನನಗೆ ಭಾರತೀಯಳು ಎಂದು ಹೇಳಿಕೊಳ್ಳುವುದಕ್ಕೂ ಅಪಮಾನವಾಗುತ್ತದೆ’ ಎಂದು
‘ಎಕ್ಸ್’ನಲ್ಲಿ ಬರೆದುಕೊಳ್ಳುವ ಮೂಲಕ ಮೋದಿಯವರ ಮೇಲಿನ ದ್ವೇಷವು ಯಾವ ಮಟ್ಟವನ್ನು ತಲುಪಿದೆ ಎಂದು ತೋರಿಸಿದ್ದಾರೆ. ‘ಇಸ್ರೇಲ್ ಮತ್ತು
ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಮೋದಿಯವರು ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಾರೆ, ಆದಕಾರಣ ನಮ್ಮ ಬೆಂಬಲ ಹಮಾಸ್ ಪರವಾಗಿದೆ.
ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟೆಂಬುದು ಮೋದಿ ಮತ್ತು ಟ್ರೂಡೋ ನಡುವಿನ ಸಮಸ್ಯೆ. ಹೀಗಾಗಿ ದೇಶದ ಪರ ನಿಲ್ಲಲು ನಾವು
ತಯಾರಿಲ್ಲ. ಮಹಮ್ಮದ್ ರಿಜ್ವಾನ್ ಕ್ರೀಡೆಯಲ್ಲಿ ರಾಜಕೀಯ ಮತ್ತು ಧರ್ಮವನ್ನು ಬೆರೆಸಬಹುದು, ಆದರೆ ಅಹಮದಾಬಾದ್ ಪ್ರೇಕ್ಷಕರು ‘ಜೈ
ಶ್ರೀರಾಮ್’ ಎಂದು ಕೂಗಿದ್ದು ಮಹಾಪರಾಧ.
ಹೀಗಾಗಿ ರಿಜ್ವಾನ್ ವರ್ತನೆಯನ್ನು ಟೀಕಿಸುವುದಿಲ್ಲ’ ಎಂಬುದು ಇಂಥ ಮೋದಿ-ವಿರೋಧಿಗಳ ಸಮರ್ಥನೆಯಾಗಿದ್ದಿರಬಹುದು. ‘ಇಂಡಿಯ’ ಮೈತ್ರಿ ಕೂಟದ ನಾಯಕರುಗಳು ದೇಶದ ಹಿತವನ್ನು ನಿರ್ಲಕ್ಷಿಸಿ, ಮೋದಿಯವರ ಜನಪ್ರಿಯತೆಯನ್ನು ಕುಗ್ಗಿಸಲು ಕೈಗೊಳ್ಳುತ್ತಿರುವ ತರ್ಕರಹಿತ ನಿಲುವುಗಳ ಮೂಲಕ ದೇಶದ ಹಿತಕ್ಕೆ ಪೆಟ್ಟು ನೀಡುತ್ತಿದ್ದಾರೆ. ಈ ನಡವಳಿಕೆಯು ದ್ವೇಷದ ಮತ್ತು ಅಹಿತಕರ ರಾಜಕೀಯಕ್ಕೆ ನಾಂದಿ ಹಾಡುತ್ತಿರುವುದು ಆತಂಕದ ವಿಷಯವಾಗಿದೆ.
(ಲೇಖಕರು ಬಿಜೆಪಿಯ ಮಾಜಿ
ಮಾಧ್ಯಮ ಸಂಚಾಲಕರು)