Saturday, 14th December 2024

ಮೋದಿ ಸೋತರೆ ಅದು ನಮ್ಮದೇ ಸೋಲು

ವಿಶ್ಲೇಷಣೆ

ನರೇಂದ್ರ ಎಸ್.ಗಂಗೊಳ್ಳಿ

ಮೋದಿಯವರ ಈವರೆಗಿನ ಆಡಳಿತಾವಽಯಲ್ಲಿ ಯಾವ ಹಗರಣಗಳೂ ನಡೆದಿಲ್ಲ. ಅವರು ತಮಗಾಗಲೀ ತಮ್ಮ ಪರಿವಾರದವರಿಗಾಗಲೀ ಯಾವ ಆಸ್ತಿಯನ್ನೂ ಮಾಡಿಟ್ಟುಕೊಂಡಿಲ್ಲ. ಒಬ್ಬ ನಿಜವಾದ ಕರ್ಮಯೋಗಿಗೆ, ತಪಸ್ವಿಗೆ ಮಾತ್ರವೇ ಸಾಧ್ಯವಾಗುವಂಥ ಸಾಧನೆಯಿದು.

ಕಳೆದ ಹತ್ತು ವರ್ಷಗಳಿಂದ ನೀವು ಖಂಡಿತಾ ಗಮನಿಸಿಕೊಂಡು ಬಂದಿರುತ್ತೀರಿ. ಭಾರತದ ಬಹುತೇಕ ವಿಪಕ್ಷ ನಾಯಕರು ಹೇಳುತ್ತಿರುವುದು ‘ನಾವು ಮೋದಿಯನ್ನು ಸೋಲಿಸಬೇಕು’ ಎಂಬ ಒಂದೇ ಮಾತನ್ನು! ‘ಸರಿ, ರಾಜಕೀಯ ಎಂದ ಮೇಲೆ ಎದುರಾಳಿಗಳನ್ನು ಸೋಲಿಸುವ ಕುರಿತು ತಂತ್ರ ಹೂಡುವುದು ಹೊಸದೇನಲ್ಲ; ಆದರೆ ಮೋದಿಯವರನ್ನು ಯಾಕೆ ಸೋಲಿಸಬೇಕು ಎನ್ನುವುದಕ್ಕೆ ಒಂದಾದರೂ ಕಾರಣ ನೀಡಿ’ ಎಂದು ಇಂಥವರನ್ನು ಕೇಳಿದರೆ, ‘ಮೋದಿ ದೇಶವನ್ನು ಮಾರುತ್ತಿದ್ದಾರೆ, ಅವರದ್ದು ಏಕಚಕ್ರಾಧಿಪತ್ಯ.

ಅವರು ಸಂವಿಧಾನ ಬದಲಿಸುತ್ತಾರೆ’ ಹೀಗೆ ಅದೇ ಸವಕಲು ಡೈಲಾಗುಗಳನ್ನು ಉದುರಿಸುತ್ತಾರೆ. ‘ನೀವು ಹೇಳಿದ್ದಕ್ಕೆ ಒಂದಾದರೂ ಸಾಕ್ಷಿ ಕೊಡಿ’ ಎಂದಾಗ ಮಾತ್ರ ಇಂಥವರ ತಲೆ ಅವರದ್ದೇ ಜಾಹೀರಾತಿನ ಖಾಲಿ ಚೊಂಬಿಗಿಂತ ಕಡೆಯಾಗಿ ಪಾಚಿಗಟ್ಟಿಬಿಟ್ಟಿರುತ್ತದೆ. ಇದಕ್ಕೆ ಕಾರಣ ಇಷ್ಟೇ- ಮೋದಿಯವರ ಮೇಲೆ ಇವರು ಮಾಡುತ್ತಿರುವ ಯಾವ ಆರೋಪಗಳಿಗೂ ಇವರ ಬಳಿ ಸಾಕ್ಷಿಗಳಿಲ್ಲ; ಅದೆಲ್ಲವೂ ಸುಳ್ಳಿನ ಮೂಟೆಗಳಷ್ಟೇ.

ಕಳೆದ ೧೦ ವರ್ಷಗಳಲ್ಲಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತವು ಸರ್ವಾಂಗೀಣ ಪ್ರಗತಿ ಸಾಧಿಸಿರುವುದನ್ನು ಇಡೀ ಜಗತ್ತೇ ಅಚ್ಚರಿ ಪಡುವ ರೀತಿಯಲ್ಲಿ ನೋಡಿ, ‘ಮೋದಿಯವರಂಥ ಪ್ರಧಾನಿಯನ್ನು ಪಡೆಯಲು ಭಾರತೀಯರು ಪುಣ್ಯ ಮಾಡಿದ್ದಿರಬೇಕು’ ಎಂಬರ್ಥದಲ್ಲಿ ಹಾಡಿ ಹೊಗಳುತ್ತಿದೆ. ಕಣ್ಣೆದುರಿಗಿರುವ ಎಲ್ಲಾ ಅಂಕಿ- ಅಂಶಗಳು ಮೋದಿಯವರ ಆಡಳಿತದ ಸಾಧನೆಗಳನ್ನು ನಮ್ಮೆದುರು ನಿಖರವಾಗಿ ತೆರೆದಿಡುತ್ತಿವೆ. ಇಂದು ಭಾರತವು
ವಿಶ್ವದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಸಮರ್ಥವಾಗಿ ನೆಲೆ ನಿಂತಿದೆ. ಪಾಕಿಸ್ತಾನದಂಥ ವೈರಿ ದೇಶಗಳ ಜನರು ಕೂಡ ‘ನಮಗೂ ಮೋದಿಯವರಂಥ ನಾಯಕನಿರಬೇಕಿತ್ತು’ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಜನಸಾಮಾನ್ಯರ ಜೀವನಮಟ್ಟದ ಸುಧಾರಣೆಯೂ ಸೇರಿದಂತೆ ಮಿಲಿಟರಿ, ಕೃಷಿ, ರಫ್ತು, ಬಾಹ್ಯಾಕಾಶ ಹೀಗೆ ವಿವಿಧ ರಂಗಗಳಲ್ಲಿ ಯಾರೂ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಭಾರತವು ಅದ್ಭುತ ಎನಿಸುವಂಥ ಸಾಧನೆಗಳನ್ನು ಮಾಡುತ್ತಾ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ನಿಮಗೆ ಗೊತ್ತಿರಲಿ, ಮೋದಿಯವರ ಈವರೆಗಿನ ಆಡಳಿತಾವಧಿಯಲ್ಲಿ ಯಾವ ಹಗರಣಗಳೂ ನಡೆದಿಲ್ಲ. ಅದಕ್ಕಿಂತ ಹೆಚ್ಚಾಗಿ, ಕಳೆದ ೧೦ ವರ್ಷಗಳಲ್ಲಿ ಮೋದಿಯವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ, ತಮಗಾಗಲೀ ತಮ್ಮ ಪರಿವಾರದವರಿಗಾಗಲೀ ಯಾವ ಆಸ್ತಿಯನ್ನೂ ಮಾಡಿಟ್ಟುಕೊಂಡಿಲ್ಲ.

ಮುಂದೆ ಕೂಡ ಮಾಡುವುದಿಲ್ಲ ಎಂದು ವಿಶ್ವಾಸದಿಂದಲೇ ಹೇಳಬಹುದು. ಒಬ್ಬ ನಿಜವಾದ ಕರ್ಮಯೋಗಿಗೆ, ತಪಸ್ವಿಗೆ ಮಾತ್ರವೇ ಸಾಧ್ಯವಾಗುವಂಥ ಸಾಧನೆಯಿದು. ೨೦೪೭ರಲ್ಲಿ ಭಾರತ ಹೇಗಿರಬೇಕು ಎನ್ನುವುದರ ಬಗೆಗೆ ಅತ್ಯಂತ ಸ್ಪಷ್ಟವಾದ ಗುರಿಯೊಂದಿಗೆ ಯೋಜನೆಗಳನ್ನು ಹಾಕಿಕೊಂಡು, ಅದಕ್ಕೆ ತಕ್ಕ ತಯಾರಿಗಳನ್ನು ಮಾಡಿಕೊಂಡು ಮುನ್ನುಗ್ಗುತ್ತಿರುವ ನಾಯಕ ಮೋದಿ. ಮಾತ್ರವಲ್ಲದೆ, ಕಳೆದೊಂದು ದಶಕದಲ್ಲಿ ಭಾರತಕ್ಕೆ ಅತ್ಯಂತ ಬಲಿಷ್ಠವಾದ
ಮತ್ತು ವಿಶ್ವವೇ ಮೆಚ್ಚುವಂಥ ಆಡಳಿತವನ್ನು ನೀಡಿದ, ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಯೊಂದನ್ನೇ ತಮ್ಮ ಸಂಕಲ್ಪವನ್ನಾಗಿಸಿಕೊಂಡಿರುವ ಮೋದಿಯವರು, ತಾವು ಮಾಡಿದ ಉತ್ತಮ ಕೆಲಸಗಳು ಭಾರತೀಯರ ಮನಸ್ಸಿನಲ್ಲಿ ಖಂಡಿತ ಉಳಿದಿವೆ ಎಂಬ ಭರವಸೆಯಿಟ್ಟುಕೊಂಡಿದ್ದಾರೆ.

ಭಾರತೀಯರು ತಮ್ಮಲ್ಲಿಟ್ಟಿರುವ ವಿಶ್ವಾಸವನ್ನೇ ನಂಬಿಕೊಂಡು ದೇಶವನ್ನು ಮತ್ತಷ್ಟು ಭದ್ರ ಹಾಗೂ ಶ್ರೀಮಂತವಾಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂಥ ಮೋದಿಯವರನ್ನು ಸೋಲಿಸಿ ಎಂದು ಹೇಳುವ ವಿರೋಧ ಪಕ್ಷಗಳ ನಾಯಕರು, ನೇರವಾಗಿಯೇ ದೇಶದ ಅಭಿವೃದ್ಧಿಯ ವಿರುದ್ಧ ನಿಂತಿದ್ದಾರೆ ಎನ್ನುವುದರಲ್ಲಿ ಯಾವ ಸಂದೇಹಗಳೂ ಉಳಿದಿಲ್ಲ. ಮೋದಿಯವರಿಗಿಂತ ಚೆನ್ನಾಗಿ ತಾವು ಹೇಗೆ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳುವುದಕ್ಕೆ ಅವರಿಗೆ ಬಲ ತುಂಬ ಬಲ್ಲ ಯಾವ ಯೋಜನೆಯೂ ಅವರ ಬಳಿಯಿಲ್ಲ.

ಬಿಟ್ಟಿ ಭಾಗ್ಯಗಳನ್ನು ಕೊಡುವುದರಿಂದಲೇ ದೇಶದ ಜನ ಉದ್ಧಾರವಾಗು ತ್ತಾರೆ ಎಂದು ಭಾವಿಸಿರುವ ಇವರ ಆಲೋಚನಾವಿಧಾನವೇ ಹಾಸ್ಯಾಸ್ಪದ. ಒಂದು ಕಾಲಕ್ಕೆ ಅತ್ಯಂತ ಶ್ರೀಮಂತ ದೇಶ ವೆನಿಸಿದ್ದ ವೆನಿಜುವೆಲಾ, ಬಿಟ್ಟಿ ಭಾಗ್ಯಗಳನ್ನು ನೀಡಿ ದಿವಾಳಿಯ ಹಂತದಲ್ಲಿದೆ, ಅಲ್ಲಿನ ಜನರು ತುತ್ತು ಊಟಕ್ಕೆ ಅಂಗಲಾಚು ವಂತಾಗಿದೆ. ಈ ಸತ್ಯವು ಕಣ್ಣೆದುರು ಇದ್ದರೂ ವಿಪಕ್ಷಗಳಿಗೆ ಅರ್ಥವಾದಂತಿಲ್ಲ. ಬಿಟ್ಟಿ ಭಾಗ್ಯಗಳಿಂದಾಗಿ ಗ್ರೀಸ್, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಪರಿಸ್ಥಿತಿ ಯಾವ ತರಹ ಕೈಮೀರಿ ಹೋಗಿದೆ ಎನ್ನುವುದರ ಕನಿಷ್ಠ ಪರಿಜ್ಞಾನವಾದರೂ ಇವರಿಗೆ ಇರಬೇಕಲ್ಲವೇ? ಹೋಗಲಿ, ತಾವು
ನೀಡಿರುವ ಗ್ಯಾರಂಟಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಅಸಾಧ್ಯ ಎನ್ನುವ ಅರಿವೂ ವಿಪಕ್ಷಗಳಿಗಿಲ್ಲವೇ?

ಇಲ್ಲಿ ಒಂದಂತೂ ಸ್ಪಷ್ಟ: ಜನರನ್ನು ಮರುಳುಮಾಡುವ ಈ ತಂತ್ರಗಾರಿಕೆ ಮೂಲಕ ಅವರಿಗೆ ಬೇಕಾಗಿರುವುದು ಅಧಿಕಾರ ಮತ್ತು ಪರಿವಾರದವರ ಅಭಿವೃದ್ಧಿ ಮಾತ್ರ. ‘ನಾವು ಅಧಿಕಾರಕ್ಕೆ ಬಂದರೆ ಸಿಎಎ ರದ್ದುಪಡಿಸುತ್ತೇವೆ, ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಕೊಡಿಸಲು ಯತ್ನಿಸುತ್ತೇವೆ’ ಎಂದು ಈಗಾಗಲೇ ಹೇಳುತ್ತಿರುವ ಮೋದಿ- ವಿರೋಧಿಗಳು ತನ್ಮೂಲಕ ಪ್ರತ್ಯಕ್ಷವಾಗಿಯೇ ಈ ದೇಶದ ಭದ್ರತೆಗೆ ಸಂಚಕಾರ ತರುವ ಆಶಯವನ್ನು ಹೊಮ್ಮಿಸಿದ್ದಾರೆ.

ಇದು ನಿಜಕ್ಕೂ ಅಪಾಯಕಾರಿ ಸಂಗತಿ. ಅದಕ್ಕಿಂತ ಹೆಚ್ಚಾಗಿ, ಅಲ್ಪಸಂಖ್ಯಾತರ ಓಲೈಕೆಯ ಭರದಲ್ಲಿ ಭಾರತದ ಬಹು ಸಂಖ್ಯಾತ ಹಿಂದೂಗಳನ್ನು ಕಡೆಗಣಿಸುವ ಇವರ ಮಾನಸಿಕತೆ ಖಂಡನೀಯ. ಮೋದಿಯವರು ದೇಶಕ್ಕಾಗಿ ಇಷ್ಟೆಲ್ಲಾ ಮಾಡುತ್ತಿರುವಾಗ ಅವರ ವಿರೋಧಿಗಳು, ‘ಮೋದಿಯನ್ನು ಗೆಲ್ಲಲು ನಾವು ಬಿಡುವುದಿಲ್ಲ, ಹೇಗಾದರೂ ಮಾಡಿ ಸೋಲಿಸುತ್ತೇವೆ’ ಎಂದರೆ ಅದರ ಅರ್ಥ, ‘ನಾವು ಭಾರತವನ್ನು ಗೆಲ್ಲಲು ಬಿಡುವುದಿಲ್ಲ, ಭಾರತದ ಅಭಿವೃದ್ಧಿ ನಮಗೆ ಬೇಕಾಗಿಲ್ಲ’ ಎನ್ನುವುದೇ ಆಗಿದೆ.

ಅಲ್ಲಿಗೆ, ಇಂಥವರನ್ನು ನಾವು ಬೆಂಬಲಿಸಿದರೆ ಅಥವಾ ಇಂಥವರು ನೀಡುವ ಬಿಟ್ಟಿಭಾಗ್ಯಗಳಿಗೆ ಸ್ವಾಭಿಮಾನಶೂನ್ಯ ರಂತೆ ನಾವು ಮರುಳಾದರೆ ಆಗ ಸೋಲುವುದು ಮೋದಿವರಲ್ಲ, ಅದು ನಮ್ಮದೇ ಸೋಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಸೋಲು ಇಡೀ ವಿಶ್ವದ ಎದುರು ನಮ್ಮ ಸ್ವಾಭಿಮಾನಶೂನ್ಯತೆ
ಯನ್ನು, ದೇಶದ ಬಗೆಗಿನ ನಿರಭಿಮಾನವನ್ನು ತೆರೆದಿಟ್ಟು ನಮ್ಮ ಮರ್ಯಾದೆಯನ್ನೇ ಜಗತ್ತಿನೆದುರು ಹರಾಜಿಗಿಡುವುದು ಸತ್ಯ. ಅಷ್ಟಾದ ಮೇಲೆ ನಮ್ಮ ಸ್ವಾಭಿಮಾನರಹಿತ ಬದುಕಿಗೆ ಬೆಲೆಯೆಲ್ಲಿ?

ಮೋದಿಯವರು ಕರ್ನಾಟಕಕ್ಕೆ ಚೊಂಬು ಕೊಟ್ಟರು ಎನ್ನುವ ಜನರಿಗೆ ಕೆಲವೊಂದು ಸತ್ಯಗಳು ಗೊತ್ತಿಲ್ಲವೆನಿಸುತ್ತದೆ- ಮೋದಿ ಆಡಳಿತದಲ್ಲಿಯೇ ನಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆ ಯಲ್ಲಿ, ಅಭಿವೃದ್ಧಿ ಅನುದಾನದಲ್ಲಿ, ನೆರೆ ಮತ್ತು ಬರ ಪರಿಹಾರದ ನೀಡಿಕೆಯಲ್ಲಿ ಮೂರ‍್ನಾಲ್ಕು ಪಟ್ಟು ಹೆಚ್ಚಳವಾದದ್ದು; ರಾಜ್ಯದ ಲಕ್ಷಾಂತರ ರೈತರಿಗೆ ೨೦,೦೦೦ ಕೋಟಿ ರು. ಕಿಸಾನ್ ಸಮ್ಮಾನ್ ನಿಧಿ ದೊರಕಿದ್ದು; ೧.೩೩ ಲಕ್ಷ ಕೋಟಿ ರು. ಬೆಳೆವಿಮೆ ಪರಿಹಾರ ದೊರಕಿದ್ದು; ಕೇಂದ್ರದಿಂದ ಉಚಿತವಾಗಿ ರೇಷನ್ ಅಕ್ಕಿ ಸಿಗುತ್ತಿರುವುದು; ೪೧ ಲಕ್ಷ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ದೊರೆತದ್ದು; ೨.೫ ಲಕ್ಷ ಜನರಿಗೆ ಪಿಎಂ ಆವಾಸ್ ಯೋಜನೆಯಡಿ ಮನೆ ಲಭಿಸಿರುವುದು; ೭ ವಿಮಾನ ನಿಲ್ದಾಣಗಳ ಅಭಿವೃದ್ಧಿ ಯಾಗಿದ್ದು; ವಂದೇ ಭಾರತ್ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗಿದ್ದು; ಕೈಗಾರಿಕೆಗಳು ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಾಗಿದ್ದು.

ಹೀಗೆ ಕೇಂದ್ರದಿಂದ ಕರ್ನಾಟಕಕ್ಕೆ ಲಭಿಸಿರುವ ಅಷ್ಟೂ ಪ್ರಯೋಜನಗಳನ್ನು ಮೋದಿಯವರ ಟೀಕಾಕಾರರು ಒಮ್ಮೆ ಕಣ್ಣುಬಿಟ್ಟು ನೋಡಬೇಕಿದೆ. ಆದರೆ ಇವರೆಲ್ಲ ಉತ್ತಮವಾದುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಒಬ್ಬ ಅಪ್ರತಿಮ ಸಾಧಕ ಪ್ರಧಾನ ಮಂತ್ರಿಯನ್ನೇ ಕಾರಣ ವಿಲ್ಲದೆ ಇವರು ವಿರೋಧಿಸುತ್ತಾರೆ. ಏಕೆಂದರೆ, ಅದರ ಹೊರ ತಾಗಿ ಇವರಿಗೆ ಬೇರೆ ಅಜೆಂಡಾವೇ ಇಲ್ಲ. ಅಂದ ಮೇಲೆ, ಇಂಥವರನ್ನು ಬೆಂಬಲಿಸುವ ಕೆಟ್ಟ ಮನಸ್ಥಿತಿ ನಮ್ಮದಾಗದಿರಲಿ.

(ಲೇಖಕರು ವಾಣಿಜ್ಯಶಾಸ್ತ್ರದ ಉಪನ್ಯಾಸಕರು)