ತಿಳಿರು ತೋರಣ
srivathsajoshi@yahoo.com
ಅಮೃತಕಾಲ ಎಂದು ಪುಸ್ತಕದ ಹೆಸರು. ಅದನ್ನು ಪರಿಚಯಿಸುವ ಮೊದಲು ಪುಸ್ತಕದ ಲೇಖಕ ರಾಹುಲ್ ಅಶೋಕ ಹಜಾರೆಯ ಬಗೆಗೆ ಒಂದೆರಡು ಮಾತು. ಏಳು ವರ್ಷಗಳ ಹಿಂದೆ, ೨ ಏಪ್ರಿಲ್ ೨೦೧೭ರಂದು ನಾನು ಫೇಸ್‌ಬುಕ್ ನಲ್ಲಿ ಬರೆದಿದ್ದ ‘ನೋಡಿ ಕಲಿ ಮಾಡಿ ತಿಳಿ ಎಂಬುದೇ ಈ ಹುಡುಗನ ಮಂತ್ರ!’ ಶೀರ್ಷಿಕೆಯ ಒಂದು ಪೋಸ್ಟ್ ಬಹುಶಃ ಉತ್ತಮ ಪೀಠಿಕೆಯಾಗಬಲ್ಲದು.
ಅದರ ಸಾರಾಂಶವನ್ನಿಲ್ಲಿ ಕೊಡುತ್ತಿದ್ದೇನೆ: ಈ ಹುಡುಗನ ಹೆಸರು ರಾಹುಲ್ ಹಜಾರೆ. ನನ್ನ ಫೇಸ್‌ಬುಕ್ ಪೋಸ್ಟುಗಳಿಗೆ ಆಗಾಗ ಚಿಕ್ಕ-ಚೊಕ್ಕ ಪ್ರತಿಕ್ರಿಯೆ ಗಳನ್ನು ಬರೆಯುತ್ತಾನೆ. ‘ನಿಮ್ಮ ಬರಹಗಳನ್ನು ಗಮನವಿಟ್ಟು ನೋಡುತ್ತಿರುತ್ತೇನೆ. ಲೇಖನ ಬರೆಯುವುದು ಹೇಗೆಂದು ಕಲಿತುಕೊಳ್ಳುತ್ತಿದ್ದೇನೆ’ ಎಂದು ಒಮ್ಮೆ ಬರೆದಿದ್ದನು. ಒಳ್ಳೆಯದಾಗಲಿ ಎಂದು ನಾನು ಶುಭ ಹಾರೈಸಿದ್ದೆ. ಬೇರೆ ಅಷ್ಟೇನೂ ಇಂಟರಾಕ್ಷನ್ ಇಲ್ಲ. ವಿಜಯಪುರ ಜಿಲ್ಲೆಯ ಇಂಡಿ ಹುಟ್ಟೂರು, ಶ್ರವಣಬೆಳಗೊಳದಲ್ಲಿ ಶಿಕ್ಷಣ, ಮಂಗಳೂರಿನಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ- ಇದಿಷ್ಟನ್ನು ಬಿಟ್ಟರೆ ಈ ಹುಡುಗನ ಬಗ್ಗೆ ನನಗೆ ಹೆಚ್ಚಿನ ವಿವರಗಳು ಗೊತ್ತಿಲ್ಲ.
ಈತನ ಬರವಣಿಗೆ ಆಸಕ್ತಿ ಕುರಿತು ಸಹನಾ ವಿಜಯಕುಮಾರ್ ಒಮ್ಮೆ ನನ್ನಲ್ಲಿ ಪ್ರಸ್ತಾವಿಸಿದ್ದರು. ಬಹುಶಃ ಅವರ ಲೇಖನಗಳನ್ನೋದಿ ಅವರ ಬಳಿಯೂ ಈತ ಹೀಗೆಯೇ ಹೇಳಿರಬೇಕು. ಫೇಸ್‌ಬುಕ್‌ನಲ್ಲಿ, ಕನ್ನಡ ಪೋರ್ಟಲ್‌ಗಳಲ್ಲಿ, ರಾಹುಲ್ ಹಜಾರೆಯ ಚಿಕ್ಕಪುಟ್ಟ ಆದರೆ ಸತ್ತ್ವಯುತ ಬರಹಗಳನ್ನು ಗಮನಿಸಿದ್ದೇನೆ. ಮೊನ್ನೆ ವಿಶ್ವವಾಣಿಯ ಸಂಪಾದಕೀಯ ಪುಟದಲ್ಲೇ ಒಂದು ಲೇಖನವನ್ನೋದಿದೆ. ‘ಯೋಗಿ ಯೋಗ್ಯ ಮುಖ್ಯಮಂತ್ರಿ ಎನ್ನಲು ಇಷ್ಟು ಸಾಕಲ್ಲವೇ?’ಎಂಬ ಶೀರ್ಷಿಕೆಯದು. ರಾಹುಲ್ ಹಜಾರೆ ಈ ಲೇಖನವನ್ನು ಅಚ್ಚುಕಟ್ಟಾಗಿ ಬರೆದಿರುವ ರೀತಿ ನನಗೆ ತುಂಬ ಇಷ್ಟವಾಯಿತು.
ಆರಂಭ, ವಿಷಯ ಮಂಡನೆ, ಲೇಖನದ ಹರಿವು, ಉಪಸಂಹಾರ ಎಲ್ಲವೂ ಅಚ್ಚುಕಟ್ಟು. ಕಳೆದವಾರ ಇದೇ ವಿಷಯದ ಬಗ್ಗೆ (ಯೋಗಿ ಆದಿತ್ಯನಾಥ್‌ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸುತ್ತ ಪ್ರತಾಪ್ ಭಾನು ಮೆಹ್ತಾ ಎಂಬ ದೆಹಲಿಯ ಥಿಂಕ್‌ಟ್ಯಾಂಕ್ ಒಬ್ಬರ ಇಂಗ್ಲಿಷ್ ಲೇಖನದ ಕನ್ನಡಾನುವಾದ) ವಿಶ್ವವಾಣಿಯಲ್ಲೇ ಪ್ರಕಟವಾಗಿದ್ದಕ್ಕೆ ಪ್ರತ್ಯುತ್ತರವಾಗಿ ರಾಹುಲ್ ಹಜಾರೆ ಈ ಲೇಖನ ಬರೆದಿದ್ದಾನೆ.
ಎಲ್ಲೂ ಅನಗತ್ಯವಾದ ಉದ್ವೇಗ ಆಕ್ರೋಶ ಇಲ್ಲ. ಹೇಳಬೇಕಾದ್ದೆಲ್ಲವನ್ನೂ ತಣ್ಣಗೆ ಸರಳ ಸ್ವಚ್ಛ ಭಾಷೆಯಲ್ಲಿ ಹೇಳಿ, ಸಮರ್ಥ ರೀತಿಯಲ್ಲಿ ಉತ್ತರ ಕೊಟ್ಟಿದ್ದಾನೆ. ಖುಷಿ ಏನೆಂದರೆ, ಲೇಖನಕಲೆ ಕಲಿತುಕೊಳ್ಳುತ್ತಿದ್ದೇನೆ ಎಂದು ಈ ಹುಡುಗ ಹಿಂದೊಮ್ಮೆ ಹೇಳಿದ್ದರಲ್ಲಿ ಪ್ರಾಮಾಣಿಕತೆ ಇತ್ತೆಂದು ನನಗೀಗ ಗೊತ್ತಾಗಿದೆ. ನಿಷ್ಠೆಯಿಂದ ಕಲಿತು ಇಷ್ಟು ಒಳ್ಳೆಯ ಲೇಖನ ಬರೆಯುವ ಸಾಮರ್ಥ್ಯ ಗಳಿಸಿರುವುದು ಒಳ್ಳೆಯ ಸಾಧನೆಯಾಗಿ ಕಾಣಿಸುತ್ತಿದೆ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ನನಗಾದರೆ ಇಷ್ಟು ಚೆನ್ನಾಗಿ ಬರೆಯಲಿಕ್ಕೆ ಬರುವುದಿಲ್ಲ. ರಾಹುಲ್ ಹಜಾರೆ ಅದನ್ನು ಸಲೀಸಾಗಿ ನಿಭಾಯಿಸಿದ್ದಾನೆ.
ಈ ಹುಡುಗ ಒಳ್ಳೆಯ ಲೇಖಕ ಆಗಬಲ್ಲ ಎನ್ನಲು ಇಷ್ಟು ಸಾಕಲ್ಲವೇ? ಅದಾದ ಬಳಿಕ ರಾಹುಲ್ ಹಜಾರೆ ಒಂದಾದ ಮೇಲೊಂದು ಲೇಖನ ಬರೆಯುತ್ತ, ಅವೆಲ್ಲ ಬೇರೆಬೇರೆ ಪತ್ರಿಕೆಗಳಲ್ಲಿ/ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತ, ಒಬ್ಬ ಪ್ರಬುದ್ಧ ಲೇಖಕನಾಗುವ ದಿಸೆಯಲ್ಲಿ ಸಾಗಿದನು. ಆತ್ಮವಿಶ್ವಾಸ ಮತ್ತು
ಓದುಗರ ಪ್ರೀತಿ ಗಳಿಸುತ್ತ ಮುನ್ನಡೆದನು. ಪ್ರಕಟಿತ ಲೇಖನಗಳು ಮತ್ತು ಕೆಲವು ಬಿಡಿ ಬರಹಗಳನ್ನು ಸೇರಿಸಿ ೨೦೨೦ರಲ್ಲಿ ‘ಅವನಿ’ ಎಂಬ ಹೆಸರಿನ ಪುಸ್ತಕವನ್ನೂ ಸಿದ್ಧಪಡಿಸಿದನು. ಪ್ರಕಾಶಕರಲ್ಲಿ ಗೋಗರೆಯುವ ಬದಲಿಗೆ ತನ್ನದೇ ಜಯಲಕ್ಷ್ಮೀ ಪ್ರಕಾಶನ ಆರಂಭಿಸಿ ಪುಸ್ತಕ ಹೊರತಂದನು. ಅದು ಸಾಕಷ್ಟು ಜನಮನ್ನಣೆ ಗಳಿಸಿತು. ಪಕ್ಷಾತೀತವಾಗಿ ರಾಷ್ಟ್ರಪ್ರೇಮದಿಂದ, ದೇಶದ ಹಿತವೊಂದನ್ನೇ ಬಯಸಿ ಬರೆದ ಲೇಖನಗಳಾದ್ದರಿಂದ ಪುಸ್ತಕವನ್ನು
ಓದಿದವರೆಲ್ಲರೂ ಸಹಜವಾಗಿಯೇ ಇಷ್ಟಪಟ್ಟರು.
ಪ್ರಸ್ತುತ ಕನ್ನಡದ ಪ್ರಗಾಢ ಓದುಗರೆಂಬ ಖ್ಯಾತಿಯ ಪ್ರಶಾಂತ ಭಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿದರು: ‘ರಾಹುಲ್ ಹಜಾರೆ ಬರಹಗಳೆಂದರೆ ನನಗೆ ಇಷ್ಟ.
ಅವರು ಎಲ್ಲೂ ಅಪಶಬ್ದ ಬಳಸುವುದಿಲ್ಲ. ಅನಗತ್ಯ ವಿಚಾರಗಳನ್ನು ತಂದು ತುರುಕುವುದಿಲ್ಲ. ಹೇಳಬೇಕಾದ ವಿಚಾರವನ್ನು ಅಂಕಿಅಂಶಗಳ ಸಹಿತ ಸರಳವಾಗಿ ಬರೆಯುತ್ತಾರೆ. ಈ ಪುಸ್ತಕ ಹಲವು ವಿಚಾರಗಳಿಂದ ಇಷ್ಟವಾಗುತ್ತದೆ. ಸನಾತನ, ಆದರ್ಶ, ಕಾಳಜಿ, ಅಚ್ಛೇದಿನ್ ಎಂಬ ನಾಲ್ಕು ಭಾಗಗಳಲ್ಲಿ ಲೇಖನಗಳಿವೆ. ಶೀರ್ಷಿಕೆಗಳೇ ಹೂರಣವನ್ನು ತೆರೆದಿಡುತ್ತದೆ. ಮುಖಪುಟ ಮತ್ತು ಮುದ್ರಣ ಸಹ ಚೆನ್ನಾಗಿದೆ. ಮೋದಿ ಸರಕಾರದ ನಡೆಗಳ, ಮಾಡಿದ ಕಾರ್ಯಗಳ ಕುರಿತಂತೆ ಚಿಕಿತ್ಸಕ ನೋಟ ಇಲ್ಲಿದೆ. ಬಹಳ ಖುಷಿ ಕೊಟ್ಟ ಓದು. ನೀವೂ ಓದಿ.’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡರು.
೨೦೨೦ರಲ್ಲಿ ಕೋವಿಡ್ ಮಹಾಮಾರಿಯು ಜಗತ್ತನ್ನೆಲ್ಲ ಅಯೋಮಯ ಮಾಡಿದಾಗ, ಚಿಕ್ಕ ಮಕ್ಕಳಿಗೆ ಸಾಂಪ್ರದಾಯಿಕ ರೀತಿಯ ಶಾಲೆ ಇಲ್ಲದೆ ಗೃಹಬಂಧನದಲ್ಲಿ ಆನ್‌ಲೈನ್ ತರಗತಿಗಳ ಅನಿವಾರ್ಯತೆ ಬಂದಾಗ ರಾಹುಲ್‌ನಿಂದ ಒಂದು ಹೊಸ ಯೋಜನೆ. ಮಕ್ಕಳ ಬೌದ್ಧಿಕ ವಿಕಸನಕ್ಕೆ ಅವಕಾಶ, ಜೊತೆಯಲ್ಲೇ ರಾಷ್ಟ್ರೀಯತೆಯ ಬೀಜವನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತುವ ಸದುದ್ದೇಶದಿಂದ ಅವನಿ ಪುಸ್ತಕಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಮೂರು ಸ್ಪರ್ಧೆಗಳ ಏರ್ಪಾಡು. ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ.
ಪ್ರತಿ ಸ್ಪರ್ಧೆಗೂ ಇಬ್ಬಿಬ್ಬರು ತೀರ್ಪುಗಾರರನ್ನು ಗೊತ್ತುಮಾಡಿ, ಅತ್ಯಂತ ಪಾರದರ್ಶಕ ರೀತಿಯಲ್ಲಿ ಸ್ಪರ್ಧೆಗಳ ನಿರ್ವಹಣೆ. ರಾಜ್ಯಾದ್ಯಂತ ಮಕ್ಕಳಿಂದ ಒಳ್ಳೆಯ ಸ್ಪಂದನ. ಬಹುಮಾನ ವಿಜೇತರ ಹೆಸರು ಘೋಷಿಸುವ ಕೆಲಸವನ್ನು ನಾನು ಫೇಸ್‌ಬುಕ್ ನಲ್ಲಿ ಫಲಿತಾಂಶ ಪ್ರಕಟಿಸುವುದರ ಮೂಲಕ ಮಾಡಬೇಕೆಂದು ರಾಹುಲ್‌ನ ಕೋರಿಕೆ. ನಾನದನ್ನು ಸಂತೋಷದಿಂದಲೇ ನೆರವೇರಿಸಿದ್ದೆ. ಇನ್ನಷ್ಟು ಪುಸ್ತಕಗಳು ರಾಹುಲ್‌ನಿಂದ ಬರಲಿ, ಓದಿನ
ಅಭ್ಯಾಸ ಬೆಳೆಯುವುದಕ್ಕೆ ಉತ್ತೇಜನ ಸಿಗಲಿ ಎಂದು ಹಾರೈಸಿದ್ದೆ. ಅಂತಹ ರಾಹುಲ್ ಹಜಾರೆಗೆ ನವೆಂಬರ್ ೨೦೨೧ರಲ್ಲಿ ಮದುವೆಯೂ ಆಯಿತು (ಪತ್ನಿಯ ಹೆಸರು ಪದ್ಮಶ್ರೀ) ಎಂದು ಫೇಸ್‌ಬುಕ್‌ನಿಂದಲೇ ನನಗೆ ತಿಳಿಯಿತು. ಹಾಗಾಗಿ ಇನ್ನುಮುಂದೆ ಈ ಲೇಖನದಲ್ಲಿ ಏಕವಚನದ ಬದಲಿಗೆ ಬಹುವಚನ ಬಳಸುತ್ತೇನೆ.
ಅಲ್ಲದೇ ಈಗ ನಾನು ಪರಿಚಯಿಸಲಿಕ್ಕಿರುವ ಅತ್ಯುತ್ತಮ ಪುಸ್ತಕವನ್ನು ಬರೆದ ಪ್ರತಿಭಾವಂತ ಲೇಖಕನಿಗೆ ಅದರ ಉತ್ಕೃಷ್ಟತೆಗಾಗಿಯಾದರೂ ಬಹುವಚನದ ಗೌರವ ಕೊಡಲೇಬೇಕು. ಎರಡು ವಾರಗಳ ಹಿಂದೆ ರಾಹುಲ್ ಹಜಾರೆ ನನಗೊಂದು ವಾಟ್ಸ್ಯಾಪ್ ಮೆಸೇಜು ಕಳುಹಿಸಿದ್ದರು. ಮೋದಿ ಸರಕಾರದ ಹತ್ತು ವರ್ಷಗಳ ಮುಖ್ಯ ಸಾಧನೆಗಳ ಬಗ್ಗೆ ಒಂದೊಂದು ಲೇಖನ ಬರೆದು ಅವುಗಳ ಗುಚ್ಛವನ್ನು ‘ಅಮೃತಕಾಲ’ ಎಂಬ ಹೆಸರಿನ ಪುಸ್ತಕವಾಗಿ ಪ್ರಕಟಿಸುವವನಿದ್ದೇನೆ. ಎಲ್ಲ ಸಿದ್ಧವಾಗಿದೆ. ಕರಡುಪ್ರತಿಯ ಪಿಡಿಎಫ್ ಕಳುಹಿಸಿದರೆ ಒಮ್ಮೆ ಓದಿ ನೋಡುತ್ತೀರಾ? ತಿದ್ದುಪಡಿಗಳಿದ್ದರೆ ತಿಳಿಸುತ್ತೀರಾ? ನೀವೇ ಒಂದು ಮುನ್ನುಡಿಯನ್ನೂ ಬರೆದರೆ ಮತ್ತೂ ಸಂತೋಷ ಎಂದು ಅದರ ಒಕ್ಕಣೆ. ಖಂಡಿತ ಓದುತ್ತೇನೆ, ತಿದ್ದುಪಡಿಗಳಿದ್ದರೆ ತಿಳಿಸುತ್ತೇನೆ, ಆದರೆ ದಯವಿಟ್ಟು ಮುನ್ನುಡಿ ಬೇಡ.
ಅಲ್ಲದೇ ನಿಮ್ಮ ಪುಸ್ತಕಕ್ಕೆ ಮುನ್ನುಡಿ ಏಕೆ? ಮಧ್ಯವರ್ತಿಯ ಮಾತುಗಳಿಲ್ಲದೆ ನೇರವಾಗಿ ನಿಮ್ಮ ಮಾತುಗಳೇ ಓದುಗರ ಎದೆತಟ್ಟಲಿ ಎಂದು ಹೊಗಳುತ್ತಲೇ, ಮುನ್ನುಡಿ ಬರೆವ ಒತ್ತಡದಿಂದ ಪಾರಾದೆ. ಆದರೆ ಪಿಡಿಎಫ್ ತರಿಸಿಕೊಂಡು ತತ್‌ಕ್ಷಣವೇ ಓದಿಗೆ ಶುರುಹಚ್ಚಿದೆ. ಹಿಂಬದಿಯ ರಕ್ಷಾಪುಟ ಕ್ಕೆಂದು ರಾಹುಲ್ ಗೊತ್ತುಮಾಡಿಟ್ಟಿದ್ದ ಭಾಗವನ್ನು ಓದಿದಾಗಲೇ ಆಸಕ್ತಿ ಅಭಿಮಾನ ಉಕ್ಕಿಬಂತು.
ಆ ಟಿಪ್ಪಣಿ ಹೀಗಿತ್ತು: ‘ಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಳ್ಳುತ್ತ ವೈಶ್ವಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದು. ಎಲ್ಲರೊಂದಿಗೂ ಒಂದೇ ರೀತಿ ವರ್ತಿಸುವ ಅಲಿಪ್ತ ನೀತಿಯ ಜಡತ್ವದಿಂದ ಭಾರತ ಹೊರ ಬಂದಿದೆ. ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ರೂಢಿಸಿಕೊಂಡ ಚಲನಶೀಲ ರಾಷ್ಟ್ರವಾಗಿದೆ. ಪ್ರೀತಿಯಿಂದ ಬಂದರೆ ಮೈಯೆಲ್ಲ ಹೃದಯವಾಗುವ ಈ ದೇಶ, ಹಗೆಯಿಟ್ಟು ಬರುವವರನ್ನು ಸುಟ್ಟು ಹಾಕುವ ಮುಕ್ಕಣ್ಣ. ಗ್ಲೋಬಲ್
ಸೌಥ್ ಎಂಬ ಗುಬ್ಬಚ್ಚಿಗಳಿಗೆ ತಂಗಲು ಕಾನಾದ ಭಾರತವೇ ಪಾಕಿಸ್ತಾನದಂಥ ಕಾರ್ಕೋಟಕಗಳಿರುವ ಕಾಡನ್ನೇ ಸುಡಬಲ್ಲ ಕಾಳ್ಗಿಚ್ಚು. ಈ ಮೊದಲಿನ ನಾಯಕರೆಲ್ಲಾ ನಮ್ಮನ್ನು ಅಲ್ಪತೃಪ್ತರನ್ನಾ ಗಿಸಿದ್ದರೆ ಮೋದಿ ನಮ್ಮ ಆಶಾವಾದವನ್ನೇ ಉದ್ದೀಪಿಸಿದರು.
ನಾವು ರಾಮಮಂದಿರದ ಚರ್ಚೆಯಾದರೂ ಸಾಕು ಅಂದುಕೊಂಡಿದ್ದೆವು, ಅಯೋಧ್ಯೆಯಲ್ಲೀಗ ಭವ್ಯ ಮಂದಿರದಲ್ಲಿ ರಾಮಲಲ್ಲಾ ವಿರಾಜಿಸಿದ್ದಾನೆ. ಕಾಶಿಯ ಮಂದಿರ ಸ್ವಚ್ಛವಾದರೆ ಸಾಕು ಅಂದುಕೊಂಡಿದ್ದೆವು, ಮೂಲ eನವಾಪಿ ಮಂದಿರದಲ್ಲಿ ಪೂಜೆಯೂ ಶುರುವಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಿದರೆ ಸಾಕು ಅಂದುಕೊಂಡಿದ್ದೆವು, ಆರ್ಟಿಕಲ್ ೩೭೦ ಕಿತ್ತು ಬಿಸಾಕಿದ್ದೂ ಆಯಿತು. ಪಾಕಿಸ್ತಾನ ದಾಳಿ ಮಾಡಿದಾಗೆಲ್ಲಾ ಹೆಚ್ಚೆಂದರೆ ಅವರ ಜೊತೆಗೆ ಕ್ರಿಕೆಟ್ ಆಡುವುದನ್ನು ನಿಲ್ಲಿಸುತ್ತಿದ್ದೆವು. ಈಗ ಪಾಕಿಸ್ತಾನದ ಒಳನುಗ್ಗಿ ಹೊಡೆದದ್ದಲ್ಲದೇ, ಆ ರಾಷ್ಟ್ರವನ್ನೇ ಅಸ್ಥಿರಗೊಳಿಸಿದ್ದೇವೆ. ಸ್ವದೇಶಿ ವಸ್ತುಗಳ ಬಗ್ಗೆ ಚರ್ಚೆ ಮಾತ್ರ ಮಾಡುತ್ತಿದ್ದೆವು. ಭಾರತ ಆತ್ಮನಿರ್ಭರ ಆಗುತ್ತಿದೆಯಲ್ಲದೇ ಹಲವಾರು ವಸ್ತುಗಳನ್ನು ರಫ್ತು ಮಾಡುತ್ತಿದೆ.
ನಮ್ಮ ನಿರೀಕ್ಷೆಗಳಿಗೂ ಮೀರಿ ಮೋದಿಯವರು ಸಾಧಿಸಿದ ಪಟ್ಟಿಯಿದು. ಈ ಪುಸ್ತಕ ತನ್ನ ಪುಟಪುಟದಲ್ಲೂ ಭಾರತದ ಮಹತ್ಸಾಧನೆಗಳನ್ನು ಹೇಳುತ್ತದೆ.
ಭಾರತ ಪ್ರಗತಿಯೆಡೆಗೆ ಸಾಗುತ್ತಿರುವ ಜೈತ್ರಯಾತ್ರೆಯ ಅಕ್ಷರ ರೂಪವಿದು. ನೀವು ಓದಿದ ಬಳಿಕ ಮಕ್ಕಳಿಂದನೂ ಇದನ್ನು ಓದಿಸಿ. ಇದರಿಂದಾಗಿ ಅವರಲ್ಲಿ ಆಜೀವ ರಾಷ್ಟ್ರಪ್ರೇಮ ಮೂಡಿದರೆ ಅದೇ ಈ ಪುಸ್ತಕದ ಸಾರ್ಥಕ್ಯ.’ ವಿಕಾಸ, ವನವಾಸಿ, ವಿಶ್ವಗುರು, ವಿಶ್ವಾಸ, ವಿರೋಧ, ಮತ್ತು ವೈರಾಣು- ಹೀಗೆ ಆರು ವಿಭಾಗಗಳಲ್ಲಿ ಒಟ್ಟು ೨೧ ಲೇಖನಗಳು. ಪ್ರತಿ ವಿಭಾಗದ ಆರಂಭದಲ್ಲೊಂದು ಚಿಕ್ಕ ಪೀಠಿಕೆ. ‘ಮೋದಿಯವರ ಅಧಿಕಾರಾವಧಿಯಲ್ಲಿ ವಿಕಾಸದ ಸ್ಪರ್ಶ ವಿಲ್ಲದ ಕ್ಷೇತ್ರಗಳೇ ಇಲ್ಲ ಎಂಬಂತಾಗಿದೆ.
ಕ್ರೀಡೆ, ಪ್ರವಾಸೋದ್ಯಮ, ರಸ್ತೆಗಳ ನಿರ್ಮಾಣ, ರೈಲ್ವೇಯ ಅಸಾಮಾನ್ಯ ಪರಿವರ್ತನೆ, ಬಾಹ್ಯಾಕಾಶ ಕ್ಷೇತ್ರದ ಪುರೋಗತಿ, ಸೈನ್ಯದ ಉನ್ನತೀಕರಣ, ಒಟ್ಟಾರೆಯಾಗಿ ಆರ್ಥಿಕ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಮ್ಮ ಕಣ್ಮುಂದೆಯೇ ಇದೆ…’ ಎಂಬ ಪೀಠಿಕೆಯೊಂದಿಗೆ ಎಂಟು ಲೇಖನಗಳು ಮೊದಲ ವಿಭಾಗದಲ್ಲಿವೆ. ಬರೀ ಅಂಕಿ-ಅಂಶಗಳನ್ನು ಮಂಡಿಸುವ ವಿಕಿ ಪೀಡಿಯಾ ಬರಹಗಳ ರೀತಿಯಲ್ಲ. ಈಹಿಂದಿನ ‘ಅವನಿ’ ಪುಸ್ತಕ ದಂತೆಯೇ ಇದರಲ್ಲೂ ಚಿಕಿತ್ಸಕ ನೋಟಗಳು. ‘ಹಿಂದೆಲ್ಲ ಕ್ರೀಡೆಗಳಿಗೆ ಬೇರುಮಟ್ಟದ ಪ್ರೋತ್ಸಾಹ ತುಂಬಿ ಮೇಲ್ಪಂಕ್ತಿಗೆ ತರುವ ಕೆಲಸಗಳೇ ನಡೆಯುತ್ತಿರಲಿಲ್ಲ. ಅದನ್ನೀಗ ಖೇಲೋ ಇಂಡಿಯಾ ಯೋಜನೆ ಅತ್ಯಂತ ಸಮರ್ಪಕವಾಗಿ ಮಾಡುತ್ತಿದೆ.
ಶಾಲಾಕಾಲೇಜುಗಳ ಮಟ್ಟದಲ್ಲಿ ನಡೆಯುವ ಫಿಟ್ ಇಂಡಿಯಾ ಸ್ಪರ್ಧೆಗಳು ಫಲಕೊಟ್ಟಿವೆ. ಭಾರತದ ಇತಿಹಾಸದಲ್ಲೇ ಅತಿಹೆಚ್ಚು ಪದಕಗಳು ಏಷ್ಯನ್ ಗೇಮ್ಸ್, ಒಲಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮುಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿವೆಯೆಂದರೆ ಕ್ರೀಡಾಳುಗಳ ಸಾಧನೆಯಷ್ಟೇ ಮುಖ್ಯವಾಗಿ ಅದರ ಹಿಂದಿನ ಪ್ರೋತ್ಸಾಹಕ ವ್ಯವಸ್ಥೆ ಹೇಗೆ ಕೆಲಸ ಮಾಡಿದೆಯೆಂದು ಗೊತ್ತಾಗುತ್ತದೆ’ ರೀತಿಯ ವಿಶ್ಲೇಷಣೆಯ ನುಡಿಗಳು. ಪ್ರತಿ ಲೇಖನದಲ್ಲೂ ಒಂದೆರಡು ಪೂರಕ ಚಿತ್ರಗಳು.
ಭೂಮಿಯಲ್ಲಷ್ಟೇ ಅಲ್ಲ, ಬಾಹ್ಯಾಕಾಶದಲ್ಲಿ ಗೆಲ್ಲೋದೂ ಸತ್ಯ ಮತ್ತು ‘ನಂಬಿ’ಕೆಗಳೇ ಎಂಬ ಶೀರ್ಷಿಕೆಯ ಲೇಖನದಲ್ಲಿ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್‌ರನ್ನು ಅಂದಿನ ಕಾಂಗ್ರೆಸ್ ಸರಕಾರವು ಬೇಹುಗಾರಿಕೆ ಆರೋಪದಡಿ ಬಂಧಿಸಿದಾಗಿನ ಚಿತ್ರ, ಮೋದಿ ಆಡಳಿತದಲ್ಲಿ ಅದೇ ನಂಬಿ ನಾರಾಯಣನ್ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ಪದ್ಮಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರ. ಪರಿವರ್ತನೆಯ ಪರ್ವಕ್ಕೆ ಬೇರೆ ನಿದರ್ಶನ ಬೇಕೇ?
ಚಂದ್ರಯಾನ-೨ ಯೋಜನೆ ವಿಫಲವಾದಾಗ ಇಸ್ರೋದ ಅಧ್ಯಕ್ಷ ಸಿವನ್‌ರನ್ನು ಮೋದಿ ತಬ್ಬಿಕೊಂಡು ಸಮಾಧಾನಿಸಿದ ದೃಶ್ಯವನ್ನಂತೂ ಮರೆಯಲಿಕ್ಕೇ ಸಾಧ್ಯವಿಲ್ಲ. ಇವೆಲ್ಲವನ್ನೂ ಸುಂದರವಾಗಿ ವಿಶ್ಲೇಷಿಸಲಾಗಿದೆ.
‘ತಾನು ಪ್ರಧಾನಮಂತ್ರಿ ಅಲ್ಲ ಪ್ರಧಾನ ಸೇವಕ ಎಂದವನಿಗೆ ಮಾತ್ರ ತಾನು ನಡೆಯುವ ಹಾದಿ ರಾಜಪಥ ಅಲ್ಲ ಕರ್ತವ್ಯಪಥ ಆಗಿ ಕಾಣಬಲ್ಲದು’ ಎನ್ನುವ ರಾಹುಲ್ ಹಜಾರೆ, ಮೋದಿಯವರು ಹೇಗೆ ಭಾರತೀಯರಲ್ಲಿ ತುಂಬಿಹೋಗಿದ್ದ ವಸಾಹತುಶಾಹಿ ಮನಃ ಸ್ಥಿತಿಯನ್ನು ರಾಷ್ಟ್ರೀಯತೆಯೆಡೆಗೆ ತಿರುಗಿಸಿದರು ಎಂದು ಸೋದಾಹರಣವಾಗಿ ವ್ಯಾಖ್ಯಾನಿಸಿದ್ದಾರೆ. ‘ಬಿಳಿ ಆನೆಯೊಂದು ಹಾಲು ಕೊಡುವ ಹಸುವಾದ ಬಗೆ ಹೇಗೆ?’ ಲೇಖನದಲ್ಲಿ ಏರ್-ಇಂಡಿಯಾ
ಪಾತಾಳಕ್ಕಿಳಿಯಲಿಕ್ಕೆ ಕಾರಣಗಳೇನು, ಮತ್ತೀಗ ಉಚ್ಛ್ರಾಯ ಸ್ಥಿತಿಗೆ ಹೇಗೆ ಬರುತ್ತಿದೆ ಎಂದು ವಿವರಿಸಿದ್ದಾರೆ. ಅಗ್ನಿಪಥ್ ಯೋಜನೆ ಭಾರತದ ಭವಿಷ್ಯಕ್ಕೆ ಜ್ಯೋತಿಯಾಗಬಲ್ಲದೇ? ಬೆಂಕಿಯಾಗಬಲ್ಲದೇ ಎಂದು ಕೇಳಿಕೊಳ್ಳುತ್ತ ವಿಶದೀಕರಿಸಿದ್ದಾರೆ.
ಮೋದಿ ಮುಸ್ಲಿಂ ವಿರೋಧಿಯೇ? ಎಂದು ಕೇಳಿಕೊಳ್ಳುತ್ತ ಹೇಗೆ ಅಲ್ಲ ಎಂದು ಪುರಾವೆಗಳನ್ನೊದಗಿಸಿದ್ದಾರೆ. ರಾಮಜನ್ಮಭೂಮಿ ವಿಮೋಚನೆ,
ಮಂದಿರನಿರ್ಮಾಣದ ಕಥೆಯನ್ನಂತೂ ರೋಚಕವಾಗಿ ಬಣ್ಣಿಸಿದ್ದಾರೆ. ಮಣಿಪುರದ ಮೈತೇಯಿ-ಕುಕ್ಕಿ ಜನಾಂಗಗಳ ದ್ವೇಷ-ದಳ್ಳುರಿ ಅದಕ್ಕೆ ಹೊರಗಿನವರ ಕುಮ್ಮಕ್ಕುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿ ದ್ದಾರೆ. ಕೊರೊನಾ ಸಂಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಿದ್ದು, ಲಸಿಕೆಯೆಂಬ ಸಂಜೀವಿನಿಯನ್ನು ಬಡ ರಾಷ್ಟ್ರಗಳಿಗೆಲ್ಲ ಉಚಿತವಾಗಿ ಒದಗಿಸಿದ್ದು, ಜಿ-೨೦ ಶೃಂಗಸಭೆಯ ಆತಿಥೇಯ ರಾಷ್ಟ್ರವಾಗಿ ಭಾರತದ ಯಶಸ್ಸು… ಎಲ್ಲ ಇದೆ.
ಕಾಶ್ಮೀರಕ್ಕೂ ಬಂತು ಶ್ರಾವಣ ಇದಕ್ಕೆಲ್ಲ ಮೋದಿಯೇ ಕಾರಣ ಶೀರ್ಷಿಕೆಯ ಲೇಖನವೂ ಇದೆ. ಅಂದರೆ ಒಟ್ಟಾರೆಯಾಗಿ ಈ ಪುಸ್ತಕದ ಹೂರಣ ಮೋದಿ ಯವರಿಗೆ ಜೈಕಾರ ಮೋದಿಯವರ ಗುಣಗಾನದ ಅಬ್ಬರ ಇರಬಹುದೆಂದು ಖಂಡಿತ ತಿಳಿಯಬೇಡಿ! ರೈತರ ಚಳುವಳಿ, ಖಲಿಸ್ತಾನಿಗಳ ಅಟ್ಟಹಾಸ ಬಗೆಗಿನ ಲೇಖನದಲ್ಲಿ ‘ಹೋರಾಟ ನಡೆದ ರೀತಿ ನೋಡಿದರೆ ನೇಗಿಲು ಹೊರುವವನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಿದವರೇ ಬೇರೆ. ಯಾರೋ ತಿಂದದ್ದನ್ನು ಇನ್ನಾರದೋ ಮೂತಿಗೆ ಒರೆಸಿದ ಕಥೆಯಿದು. ತಪ್ಪು ಅವರೊಬ್ಬರದ್ದೇ ಅಲ್ಲ, ಬಿಜೆಪಿಯದ್ದೂ, ಮೋದಿ ಸರ್ಕಾರದ್ದೂ ಇದೆ. ಒಂದು ತಂಡವನ್ನು ಮಾಡಿಕೊಂಡು ಕಾಯ್ದೆಯನ್ನು ರೈತ ಮುಖಂಡರ ಮೂಲಕ ರೈತರಿಗೆ ತಿಳಿಹೇಳುವ ಕೆಲಸ ಆಗಲೇ ಇಲ್ಲ’ ಎಂದು ಬರೆಯುವುದಕ್ಕೂ ರಾಹುಲ್ ಹಜಾರೆ ಹಿಂಜರಿಯುವುದಿಲ್ಲ.
ಕಾರಣ ಸ್ಪಷ್ಟ. ಅವರು ಈ ಲೇಖನಗಳನ್ನು ಬರೆದದ್ದು ಮೋದಿ- ಭಜನೆಯ ರೀತಿಯಲ್ಲಲ್ಲ. ಬಿಜೆಪಿಯ ಪ್ರಚಾರ ಸಾಮಗ್ರಿಯಾಗಿಯೂ ಅಲ್ಲ. ಬದಲಿಗೆ ದೇಶದ ಒಳಿತಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬ ಕಾಳಜಿಯುಳ್ಳ ಅಪ್ಪಟ ರಾಷ್ಟ್ರಪ್ರೇಮದ ದೃಷ್ಟಿಯಿಂದ; ದೇಶದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿ ಜನಸಾಮಾನ್ಯರು ಸುಖಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕು ಎಂಬ ಕಕ್ಕುಲಾತಿಯಿಂದ. ಆತ್ಮನಿರ್ಭರ, ಸ್ವಾವಲಂಬಿ ಸುದೃಢ ದೇಶ ನಮ್ಮದಾಗಬೇಕು ಎಂಬ ಅಭಿಮಾನದ ಆಶಯದಿಂದ.
ಆದ್ದರಿಂದಲೇ ಮೋದಿದ್ವೇಷಿಗಳೂ- ಅವರಿಗೆ ದೇಶಾಭಿಮಾನ ಎನ್ನುವುದು ನಯಾಪೈಸೆಯಷ್ಟಾದರೂ ಇರುವುದು ಹೌದಾದರೆ- ಈ ಪುಸ್ತಕವನ್ನು ಓದಿ ಭಲೇ ಎನ್ನಬಹುದು ಎಂದಿದ್ದು ನಾನು. ಮೋದಿ ಅಭಿಮಾನಿಗಳಂತೂ ಇದನ್ನು ಮುಗಿಬಿದ್ದು ಕೊಳ್ಳುವರು, ಓದುವರು, ಇತರರಿಂದಲೂ ಓದಿಸುವರು. ಪುಸ್ತಕವಿನ್ನೂ ಅಚ್ಚಿನ ಮನೆಯಲ್ಲಿರುವಾಗಲೇ ರಿಯಾಯಿತಿ ದರದಲ್ಲಿ ಪ್ರತಿಗಳನ್ನು ಕೊಳ್ಳಲಿಕ್ಕೆ ಪ್ರಿ-ಆರ್ಡರ್ ಪ್ರಕ್ರಿಯೆ ಆರಂಭವಾಗಿರುವುದೇ ಇದಕ್ಕೆ
ಸಾಕ್ಷಿ. ಅಮೆರಿಕನ್ನಡಿತಿ ಉಮಾ ರಾಮಸ್ವಾಮಿ ಅವರು ೫೦ ಪ್ರತಿಗಳಿಗೆ ಬೇಡಿಕೆ ಸಲ್ಲಿಸಿಟ್ಟಿದ್ದಾರಂತೆ. ಹೀಗೇ ಆಲೋಚಿಸಿದಾಗ ನನಗನಿಸಿದ್ದು- ಈ ಅಮೃತದ ಸತ್ತ್ವವನ್ನು ಅರಿತಿದ್ದೇ ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿದಿರುವ ಬಿಜೆಪಿ ಹುರಿಯಾಳುಗಳಿಗೆ ಇದೊಂದು ರೆಡಿಮೇಡ್ ಪ್ರಚಾರ ಸಾಮಗ್ರಿಯಾಗಿ ಕಂಡು, ಮನೆಮನೆಗೆ ಈ ಪುಸ್ತಕ ತಲುಪಿದರೂ ಆಶ್ಚರ್ಯವಿಲ್ಲ. ನಿಜವಾಗಿಯಾದರೆ ಸರ್ಕಾರದ ಸಾಧನೆಗಳನ್ನು
ಜನಸಾಮಾನ್ಯರಿಗೆ ತಿಳಿಸುವ ಕೆಲಸ ಸಂಸದರು ಮಾಡಬೇಕಿತ್ತು.
ಒಬ್ಬ ಯಃಕಶ್ಚಿತ್ ತರುಣ ಮಾಡುತ್ತಿದ್ದಾನೆ! ತಮಾಷೆಯಲ್ಲ, ಉತ್ಪ್ರೇಕ್ಷೆಯೂ ಅಲ್ಲ. ಭಾರತೀಯ ಭಾಷೆಗಳಿಗೆಲ್ಲ ಅನುವಾದವಾಗಿ ಎಲ್ಲರ ಓದಿಗೂ ಒದಗಿಬರುವ ಪೂರ್ಣ ಅರ್ಹತೆ ಈ ಪುಸ್ತಕಕ್ಕಿದೆ. ಏಕೆಂದರೆ ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭ ದಲ್ಲಿ, ವಿಶ್ವಗುರು ಎಂದೆನಿಸುವ ನಿರ್ಣಾಯಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು-ನೀವು ಅಭಿಮಾನ ಪಡಬೇಕಾದ ವಿಚಾರಗಳೇ ಇದರಲ್ಲಿರುವುದು. ನಿಮ್ಮ ಪ್ರತಿಗಳಿಗಾಗಿ ರಾಹುಲ್ ಹಜಾರೆ ಯವರನ್ನು ಸಂಪರ್ಕಿಸುತ್ತೀರಾದರೆ, ೧೮೦ ರೂ ಮುಖಬೆಲೆಯ ಪುಸ್ತಕ ೧೬೦ ರೂ ರಿಯಾಯಿತಿ ಬೆಲೆಯಲ್ಲಿ ನಿಮಗೂ ಬೇಕಾದರೆ ಸಂಪರ್ಕಿಸಬೇಕಾದ ಸಂಖ್ಯೆ: ೯೧೦೮೫೯೪೨೦೪.