Thursday, 12th December 2024

ಹ್ಯಾಟ್ರಿಕ್ ಗೆಲುವಿನತ್ತ ಮೋದಿ ಪಡೆಯ ಚಿತ್ತ

ಚರ್ಚಾ ವೇದಿಕೆ

ಡಾ.ಸತೀಶ್ ಕೆ.ಪಾಟೀಲ್

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಯಾರಿಗೆ ಜೈಕಾರ ಹಾಕುತ್ತಾರೆ ಎಂಬು ದನ್ನು ಅವಲೋಕಿಸಿದಾಗ, ಈ ಸಲವೂ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ. ಕಳೆದ ಸಲ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ನಡೆಸಿ ರಾಷ್ಟ್ರೀಯ ಭದ್ರತೆಯ ವಿಷಯವನ್ನು ಪ್ರತಿಪಾದಿಸಿ ಅಧಿಕಾರ ಪಡೆದದ್ದು ಈಗ ಇತಿಹಾಸ.

ಈ ಸಲ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಅನುಕೂಲವಾಗಬಲ್ಲ ಅಂಶಗಳತ್ತ ಗಮನಿಸಿದಾಗ, ಮೋದಿಯವರ ಜನಪ್ರಿಯತೆ ಆ ಪೈಕಿ ಎದ್ದುಕಾಣುತ್ತದೆ. ಮತದಾರರನ್ನು ಆಕರ್ಷಿಸುವ ಅವರ ವ್ಯಕ್ತಿತ್ವವು ಈ ಸಲದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಅಂಶವನ್ನೇ ಬಿಜೆಪಿಯೂ ಬಲವಾಗಿ ನೆಚ್ಚಿಕೊಂಡಿದೆ. ಇನ್ನು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ರಚಿಸುವುದಕ್ಕೆ ಮೋದಿಯವರು ಮುಂದಾಗಿದ್ದು ಮಹಿಳೆಯರಿಗೆ ಸಂತಸ ತಂದಿದೆ.

ಸರಿ ಸುಮಾರು ಶೇ.೫೦ರಷ್ಟಿರುವ ಮಹಿಳಾ ಮತದಾರರ ಪೈಕಿ ಹೆಚ್ಚಿನವರಿಂದ ಮತ ಸೆಳೆಯುವಂತಾಗಲು ಈ ಹೆಜ್ಜೆ ಅನುಕೂಲಕರವಾಗಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ. ಇನ್ನು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗಬೇಕೆಂಬ ಭಾರತೀಯ ಹಿಂದೂ ಸಮಾಜದ ೫೦೦ ವರ್ಷಗಳ ಕನಸು, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅವಽಯಲ್ಲಿ ನನಸಾಗಿದ್ದು, ಇದರ ಸಂಪೂರ್ಣ ಶ್ರೇಯವನ್ನು ತನ್ನದಾಗಿಸಿ ಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಈ ಅಂಶವನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಬಲವಾಗಿ ಪ್ರತಿಪಾದಿಸಲು ಮತ್ತು ತನ್ಮೂಲಕ ಭಾವನಾತ್ಮಕವಾಗಿ ಜನರ ಗಮನ ಸೆಳೆದು ಅದರ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷವು ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿ ತಪ್ಪು ಮಾಡಿತು ಎನ್ನುವ ಅಭಿಪ್ರಾಯವಿದೆ.

ಇದು ಈ ಚುನಾವಣೆಯ ಪ್ರಮುಖ ವಿಷಯವಾಗುವುದರಲ್ಲಿ ಸಂದೇಹವಿಲ್ಲ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯನ್ನು ಕೇಂದ್ರ ಸರಕಾರ ರದ್ದು ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ ಯಿರಿಸಿದ್ದು ಗೊತ್ತಿರುವ ಸಂಗತಿಯೇ. ಇದು ಕೂಡ ಈ ಸಲದ ಚುನಾವಣೆ ಯಲ್ಲಿ ಬಿಜೆಪಿಯ ಸಾಧನೆಗೆ ಪೂರಕವಾಗಿ ಪರಿಣಮಿಸಲಿದೆ. ಇನ್ನು, ಮುಸ್ಲಿಂ ಸಮಾಜದಲ್ಲಿ ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಕ್ ಪದ್ಧತಿಯನ್ನು ರದ್ದುಗೊಳಿಸಿದ ಕ್ರಮದಿಂದಾಗಿ ಬಿಜೆಪಿಯು ಮುಸ್ಲಿಂ ಮಹಿಳೆಯರ ಒಲವನ್ನು ದಕ್ಕಿಸಿಕೊಂಡಿದೆ. ಇದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಕೊಂಚ ಲಾಭವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಚಂದ್ರಯಾನ-೩ ಕಾರ್ಯಾಚರಣೆಯು ಯಶಸ್ವಿಯಾಗಿದ್ದು ಇಡೀ ಭಾರತ ದೇಶವು ಹೆಮ್ಮೆ ಪಡುವಂಥ ಸನ್ನಿವೇಶವನ್ನು ಸೃಷ್ಟಿಸಿತೆನ್ನಬೇಕು. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ವಿಜ್ಞಾನಿಗಳ ಸಾಧನೆಯಾದರೂ, ಹಿಂದಿನ ಕಾರ್ಯಾಚರಣೆ ವಿಫಲವಾದಾಗಲೂ ಧೃತಿಗೆಡಬೇಡಿರೆಂದು ವಿಜ್ಞಾನಿಗಳ ಬೆನ್ನು ತಟ್ಟಿ ಈ ಬಾರಿಯ ಯೋಜನೆಗೆ ಪ್ರಧಾನಿ ಮೋದಿ ಹುರುಪು ತುಂಬಿದ್ದನ್ನು ದೇಶ ಕಂಡಿದೆ. ಚಂದಯಾನ-೩ ಯೋಜನೆಯ ಯಶಸ್ಸಿನ ಲಾಭವನ್ನೂ ಬಿಜೆಪಿ ಪಡೆಯಲು ಯತ್ನಿಸಿದರೆ ಅದರಲ್ಲೇನೂ ಅಚ್ಚರಿಯಿಲ್ಲ. ಜಾಗತಿಕ ಇಕ್ವಿಟಿ ಮಾರುಕಟ್ಟೆ ಯಲ್ಲಿ ಇತ್ತೀಚೆಗೆ
ಭಾರತವು ಹಾಂಕಾಂಗ್ ದೇಶವನ್ನು ಹಿಂದಿಕ್ಕಿ ನಾಲ್ಕನೆಯ ಸ್ಥಾನವನ್ನು ಅಲಂಕರಿಸಿದ್ದು, ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾನು ಕೈಗೊಂಡಿರುವ ಉಪಕ್ರಮಗಳೇ ಈ ಸಾಧನೆಗೆ ಕಾರಣ ಎಂದು ಬಿಜೆಪಿ ಸಮರ್ಥಿಸಿ ಕೊಳ್ಳಬಹುದು.

ಕಳೆದ ೧೦ ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿಯ ವರು ಹತ್ತು ಹಲವು ವಿನೂತನ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ಬಡವರಿಗೆ ಉಚಿತ ವಾಗಿ ಅಕ್ಕಿ ನೀಡಿದ್ದು, ಕಿಸಾನ್ ಸಮ್ಮಾನ್, ಜಲಜೀವನ ಮಿಷನ್, ಜನಧನ, ಮೇಕ್ ಇನ್ ಇಂಡಿಯಾ ಮೊದಲಾದ ಯೋಜನೆಗಳ ಸಮರ್ಪಕ ಅನುಷ್ಠಾನ, ಇ-ಆಡಳಿತದ ಮೂಲಕ ಪಾರದರ್ಶಕತೆ ತರುವ ಪ್ರಯತ್ನ ಮಾಡಿದ್ದು ಜನರ ಗಮನ ಸೆಳೆದಿವೆ. ಮಿಕ್ಕಂತೆ, ಸ್ವಚ್ಛ ಭಾರತ್, ನಿರ್ಮಲ್ ಭಾರತ್, ಗ್ರಾಮೀಣ ರಸ್ತೆಗಳು ಮತ್ತು ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಹೊಸ ಐಐಟಿಗಳ ಸ್ಥಾಪನೆ, ಕೋವಿಡ್ ಪಿಡುಗು ಅಪ್ಪಳಿಸಿದಾಗ ದೇಶದ ಜನರಿಗೆ ಉಚಿತ ಲಸಿಕೆ ನೀಡಿದ್ದು, ದೇಶದ ವಿವಿಧ ವಲಯಗಳಲ್ಲಿ ವಂದೇ ಭಾರತ್ ರೈಲುಗಳ ಓಡಾಟಕ್ಕೆ ಅನುವುಮಾಡಿಕೊಟ್ಟಿದ್ದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ,
ನಗರಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಉಪಕ್ರಮಗಳು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕೈಹಿಡಿಯಲಿವೆ ಎಂಬ ಎಣಿಕೆಯಲ್ಲಿದೆ ಬಿಜೆಪಿ.

ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ರಾಷ್ಟ್ರೀಯ ಭದ್ರತೆಗೆ ಆದ್ಯತೆ ದಕ್ಕಿರುವುದನ್ನು ತಳ್ಳಿಹಾಕಲಾಗದು. ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿ ತನ್ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಲಗಾಮು ಹಾಕಿದ ಶ್ರೇಯ ಬಿಜೆಪಿ ಸರಕಾರಕ್ಕಿದೆ. ಮಾತ್ರವಲ್ಲ, ದಶಕಕ್ಕೂ ಹಿಂದಿನ ಸ್ಥಿತಿಗತಿ
ಯೊಂದಿಗೆ ತುಲನೆ ಮಾಡಿದಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಾಗಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳು ಮತ್ತು ಸಂಘಟನೆ ಗಳೊಂದಿಗೆ ಉತ್ತಮ ಬಾಂಧವ್ಯವನ್ನು ಭಾರತ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಜತೆಗೆ ಪರಿಣಾಮಕಾರಿ ವಿದೇಶಾಂಗ ನೀತಿಯನ್ನು ಜಾರಿ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸ ಬಹುದು.

ಅದೂ ಅಲ್ಲದೆ, ಕೇಂದ್ರದಲ್ಲಿ ಕಳೆದ ೧೦ ವರ್ಷ ಗಳಿಂದ ಗದ್ದುಗೆಯಲ್ಲಿರುವ ಬಿಜೆಪಿ ಸರಕಾರಕ್ಕೆ ಪ್ರಬಲ ಆಡಳಿತ-ವಿರೋಧಿ ಅಲೆಯೇನೂ ಅಷ್ಟಾಗಿ ಕಾಣಿಸುತ್ತಿಲ್ಲ. ಇದರಿಂದ ಸಹಜವಾಗಿಯೇ ಬಿಜೆಪಿಯಲ್ಲಿ ಆತ್ಮವಿಶ್ವಾಸದ ಮಟ್ಟ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಸಂಪನ್ನಗೊಂಡ ಪಂಚರಾಜ್ಯಗಳ ವಿಧಾನ
ಸಭಾ ಚುನಾವಣೆಗಳಲ್ಲಿ ಉತ್ತರದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೊಮ್ಮಿದ ಫಲಿತಾಂಶವು ಬಿಜೆಪಿಯ ಉತ್ತಮ ಹಿಡಿತವಿರುವುದನ್ನು ಸಾಬೀತು ಪಡಿಸಿದ್ದು, ಅದು ಲೋಕಸಭಾ ಚುನಾವಣೆಯಲ್ಲೂ ಮರುಕಳಿಸುವ ಸಾಧ್ಯತೆಯಿದೆ.

ದೇಶದ ಅರ್ಧಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದು ಈ ನಿಟ್ಟಿನಲ್ಲಿ ಪೂರಕವಾಗಿ ಪರಿಣಮಿಸಬಲ್ಲದು. ಸಾಲ ದೆಂಬಂತೆ, ಬಿಜೆಪಿಗೆ ತಳಮಟ್ಟದ ಪ್ರಬಲ ಕಾರ್ಯ ಕರ್ತರ ಪಡೆಯ ಜತೆಗೆ, ಸಹಜವಾಗಿ ಆರೆಸ್ಸೆಸ್ ಮತ್ತು ಹಿಂದೂ ಸಂಘಟನೆಗಳ ಬೆಂಬಲವೂ ಇರುವುದರಿಂದ ಚುನಾವಣೆಯಲ್ಲಿ ಅದು ವರವಾಗಿ ಪರಿಣಮಿಸಲಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಎದುರಾಳಿಯಾಗಿ ಪ್ರಬಲ ಮೈತ್ರಿಕೂಟವೊಂದು ಇಲ್ಲದಿರುವುದು ಕೇಸರಿ ಪಾಳಯಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಬಿಜೆಪಿಯೆದುರು ತೊಡೆ ತಟ್ಟಲು ಹುಟ್ಟಿಕೊಂಡಿದ್ದ ‘ಇಂಡಿಯ’ ಮೈತ್ರಿಕೂಟದಲ್ಲಿ ದಿನ ಗಳೆದಂತೆ ಭಿನ್ನಮತ ಹೆಚ್ಚುತ್ತಿರುವುದು, ಸಹವರ್ತಿ ಪಕ್ಷಗಳು ಒಂದೊಂದಾಗಿ ಮೈತ್ರಿಕೂಟದಿಂದ ನಿರ್ಗಮಿಸುತ್ತಿರುವುದು ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ
ಪಕ್ಷ ಮತ್ತು ಮಾಯಾವತಿಯವರ ಬಹುಜನ್ ಸಮಾಜವಾದಿ ಪಕ್ಷ, ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವುದು ಈಗಾಗಲೇ ಜಗಜ್ಜಾಹೀರು.

ಬಿಜೆಪಿಯೊಂದಿಗೆ ಕೂಡಿಕೆ ಮಾಡಿಕೊಂಡು ಬಿಹಾರದಲ್ಲಿ ಮತ್ತೊಮ್ಮೆ ಗದ್ದುಗೆ ಅಲಂಕರಿಸಿದ ನಿತೀಶ್ ಕುಮಾರ್ ಅವರು ‘ಇಂಡಿಯ’ ಮೈತ್ರಿಕೂಟಕ್ಕೆ ಭಾರಿ ಪೆಟ್ಟನ್ನೇ ನೀಡಿದ್ದಾರೆ ಎನ್ನಬೇಕು. ‘ಇಂಡಿಯ’ ಮೈತ್ರಿಕೂಟದಲ್ಲಿನ ಈ ಒಡಕು ಬಿಜೆಪಿಗೆ ವರದಾನವಾಗಲಿರುವುದಂತೂ ಖರೆ. ನರೇಂದ್ರ ಮೋದಿ ಯವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಶ್ನಾತೀತ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ; ಆದರೆ ಈ ವಿಷಯದಲ್ಲಿ ‘ಇಂಡಿಯ’ ಮೈತ್ರಿಕೂಟದಲ್ಲಿ ಈಗಲೂ ಒಮ್ಮತ ಮೂಡಿಲ್ಲ. ‘ಇಂಡಿಯ’ ಮೈತ್ರಿಕೂಟದಲ್ಲಿನ ಇಂಥ ಗೊಂದಲ ಮತ್ತು ಆ ಮೈತ್ರಿಕೂಟದಲ್ಲಿ ಗುರುತಿಸಿ ಕೊಂಡಿದ್ದ ಪಕ್ಷಗಳ ಸ್ವತಂತ್ರ ಸ್ಪರ್ಧೆಯಿಂದಾಗಿ ಅವಕ್ಕೆ ದಕ್ಕುವ ಜಾತ್ಯತೀತ ಮತಗಳ ವಿಭಜನೆಯಾಗುತ್ತದೆ ಮತ್ತು ಅದು ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಯೋಜನಕಾರಿಯಾಗುತ್ತದೆ. ಜತೆಗೆ, ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವ ವಾದವು ರಾಮಮಂದಿರದ ಉದ್ಘಾಟನೆಯ ತರುವಾಯದಲ್ಲಿ ಮತ್ತಷ್ಟು ಬಲವನ್ನು ದಕ್ಕಿಸಿಕೊಂಡಿರುವುದರಿಂದ ಅದು ಮತಗಳಾಗಿ ಪರಿವರ್ತನೆ ಗೊಂಡು ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮೇಲಿನ ಎಲ್ಲಾ ಬೆಳವಣಿಗೆಗಳನ್ನು ವಿಶ್ಲೇಷಿಸಿದಾಗ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ‘ಹ್ಯಾಟ್ರಿಕ್ ಗೆಲುವು’ ದಕ್ಕಿಸಿ ಕೊಳ್ಳುವಲ್ಲಿ ಅನುಮಾನವಿಲ್ಲ ಎನಿಸುತ್ತದೆ.

(ಲೇಖಕರು ಪ್ರಾಧ್ಯಾಪಕರು
ಹಾಗೂ ರಾಜಕೀಯ ವಿಶ್ಲೇಷಕರು)