Sunday, 8th September 2024

ವಿರೋಧಿಗಳ ತಾಪ ಏರಿಸಿದ ಮೋದಿ ಜಪ

ವೀಕೆಂಡ್ ವಿತ್ ಮೋಹನ್

camohanbn@gmail.com

೨೦೨೪ ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯುತ್ತಿದೆ, ಕಳೆದ ಎರಡುವರೆ ತಿಂಗಳಿಂದ ಹಗಲು ರಾತ್ರಿಯೆನ್ನದೆ ದೇಶ ದಾದ್ಯಂತ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಮೋದಿಯವರು ಧ್ಯಾನಕ್ಕಾಗಿ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಬಂಡೆಗೆ ತೆರಳಿದ್ದಾರೆ.

ಒಲ್ಲದ ಗಂಡನಿಗೆ ಮೊಸರಲ್ಲೂ ಕಂಬಂತೆ ಮೋದಿ ವಿರೋಽಗಳು ಅವರ ಧ್ಯಾನವನ್ನೂ ವಿರೋಧಿಸುವಲ್ಲಿ ತೊಡಗಿದ್ದಾರೆ. ಮೋದಿಯವರು ಏನು ಮಾಡಿದರು ತಪ್ಪು ಎಂಬ ಹುಚ್ಚು ಆಲೋಚನೆ ವಿರೋಧಪಕ್ಷಗಳಲ್ಲಿದೆ, ಅವರು ಕೂತರು ತಪ್ಪು,ನಿಂತರೂ ತಪ್ಪು, ಮಾತನಾಡಿದರೂ ತಪ್ಪು, ಮೌನ ವಾಗಿದ್ದರೂ ತಪ್ಪು. ಸಂಘಟಿತವಾಗಿ ವಿರೋಧ ಪಕ್ಷದ ಕೆಲಸ ಮಾಡುವ ಬದಲು ಕೇವಲ ಮೋದಿಯವರನ್ನೇ ಗುರಿಯನ್ನಾಗಿಸಿಕೊಂಡು ಇಲ್ಲಸಲ್ಲದ ತಪ್ಪುಗಳನ್ನು ಹುಡುಕುತ್ತಿರುತ್ತಾರೆ.

೧೮೯೨ ರಲ್ಲಿ ಸ್ವಾಮಿ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ದೇಶವನ್ನು ಸುತ್ತಿ, ಕೊನೆಗೆ ಕನ್ಯಾಕುಮಾರಿಯಲ್ಲಿ ದೇಶದ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಾ ಧ್ಯಾನದಲ್ಲಿ ತೊಡಗಿದ್ದರು.ನರೇಂದ್ರ ಮೋದಿಯವರು ಹೇಳಿದ ಹಾಗೆ ೨೦೨೪ ರ ಚುನಾವಣೆ ಭಾರತದ ಮುಂದಿನ ೧೦೦೦ ವರ್ಷಗಳ ದೃಷ್ಟಿಕೋನವನ್ನು ಬದಲಾಯಿಸಲಿದೆ. ಮೋದಿಯವರು ದೇವರ ಧ್ಯಾನಕ್ಕೆ ಕೂರುವುದನ್ನು ಕೋಮುವಾದಕ್ಕೆ ಹೋಲಿಸುವ ಹೊಲಸು
ಮನಸ್ಥಿತಿಗೆ ಮೋದಿ ವಿರೋಽಗಳು ತಲುಪಿರುವುದು ವಿಪರ್ಯಾಸವೇ ಸರಿ.

ರಸ್ತೆಯಲ್ಲಿ ನಮಾಜ್ ಮಾಡುವುದಕ್ಕೆ ತುಟಿ ಬಿಚ್ಚದವರು ಧ್ಯಾನದ ವಿಷಯ ಬಂದಾಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರತೀ ಬಾರಿ ರಾಹುಲ್ ಗಾಂಧಿ ಚುನಾವಣೆ ಮುಗಿದ ನಂತರ ವಿದೇಶಕ್ಕೆ ಹೋಗಿ ಬರುವು ಸಂಸ್ಕೃತಿಯನ್ನು ಮೋದಿಯೂ ಪಾಲಿಸಬೇಕೆಂಬುದು ವಿರೋಧಿಗಳ ಆಶಯವಿರ ಬಹುದು. ಕಳೆದ ಎರಡೂವರೆ ತಿಂಗಳಿಂದ ಪ್ರತಿನಿತ್ಯ ದೇಶದ ಮೂಲೆ ಮೂಲೆಗಳಲ್ಲಿ ಸಾರ್ವಜನಿಕ ಸಭೆಗಳು, ಪಕ್ಷದ ಸಭೆಗಳು, ರೋಡ್ ಶೋಗಳು, ಮಾಧ್ಯಮಗಳಿಗೆ ಸಂದರ್ಶನ ನೀಡುವುದು ಕೇವಲ ಮೋದಿಯಂತಹ ಅಪರೂಪದ ವ್ಯಕ್ತಿಯಿಂದ ಮಾತ್ರ ಸಾಧ್ಯ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಯವರು ೭೫ ದಿನಗಳ ಕಾಲ ಬಿಡುವಿಲ್ಲದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು, ದಿನವೊಂದಕ್ಕೆ ಸರಾಸರಿ ೩ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ ೧೫ ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಪ್ರಚಾರ ಸಭೆಗಳು
ಮೇ ೩೦ ರಂದು ಪಂಜಾಬಿನಲ್ಲಿ ಕೊನೆಗೊಂಡಿದೆ. ಸುದೀರ್ಘ ಪ್ರಚಾರದ ನಡುವೆ ದೇಶ, ವಿದೇಶಗಳ ಸುದ್ದಿ ಸಂಸ್ಥೆಗಳಿಗೆ ೮೦ ಸಂದರ್ಶನ ನೀಡಿದ್ದಾರೆ. ಮೋದಿಯವರು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲವೆಂದು ನಾಲಿಗೆ ಹರಿಬಿಡುತ್ತಿದ್ದ ಮಂದಿ, ಈಗ ತಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದಾರೆ.

ಉತ್ತರಪ್ರದೇಶದಲ್ಲಿ ೩೧, ಬಿಹಾರದಲ್ಲಿ ೨೦, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ೧೮ ಪ್ರಚಾರ ಸಭೆಗಳಲ್ಲಿ ಮೋದಿ ಭಾಗಿಯಾಗಿದ್ದರು. ಒಡಿಶಾ, ಮಧ್ಯಪ್ರದೇಶದಲ್ಲಿ ತಲಾ ೧೦, ಜಾರ್ಖಂಡ್‌ನಲ್ಲಿ ಏಳು, ರಾಜಸ್ಥಾನದಲ್ಲಿ ಐದು, ಛತ್ತೀಸ್ಗಢದಲ್ಲಿ ೪ ಪ್ರಚಾರ ಸಭೆಗಳನ್ನು ನಡೆಸಿzರೆ. ದಕ್ಷಿಣ
ಭಾರತದ ರಾಜ್ಯಗಳಲ್ಲಿ ಮೋದಿಯವರು ೩೫ ಪ್ರಚಾರ ಸಭೆಗಳನ್ನು ನಡೆಸಿzರೆ, ತಮ್ಮ ತವರು ರಾಜ್ಯ ಗುಜರಾತಿನಲ್ಲಿ ಮೋದಿಯವರು ಐದು ಪ್ರಚಾರ ಸಭೆಗಳನ್ನು ನಡೆಸಿದ್ದರು. ಈ ನಡುವೆ ಸುದ್ದಿಸಂಸ್ಥೆಗಳು ಕೇಳಿದ ಸುಮಾರು ೧೦೦೦ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡುವ ಮೂಲಕ ವಿರೋಧ ಪಕ್ಷಗಳ ಬುಡಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಒಂದು ವಾರ ಕಚೇರಿಯಲ್ಲಿ ಎಂಟು ತಾಸಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಿ ಬಿಟ್ಟರೆ, ಎರಡು ವಾರ ವಿದೇಶಕ್ಕೆ ತೆರಳಿ ಮೋಜು ಮಾಡುವವರಿರುವ ನಡುವೆ ನರೇಂದ್ರ ಮೋದಿ ಕಳೆದ ೨೪ ವರ್ಷಗಳಿಂದ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಮಂತ್ರಿಯಾಗಿ ಸತತವಾಗಿ ಕೆಲಸ ಮಾಡುತ್ತಿದ್ದಾರೆ, ೨೦೧೪ ರ ಚುನಾವಣಾ ಪ್ರಚಾರದ ನಂತರ ಪ್ರತಾಪಗಢಕ್ಕೆ ಮೋದಿ ತೆರಳಿದ್ದರು, ೨೦೧೯ರ ಪ್ರಚಾರದ ನಂತರ ಕೇದಾರನಾಥದ ಗುಹೆಯಲ್ಲಿ ಧ್ಯಾನದಲ್ಲಿ ತೊಡಗಿದ್ದರು, ಈಗ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳಕ್ಕೆ ತೆರಳಿದ್ದಾರೆ.

ಮೋದಿಯವರನ್ನು ವಿರೋಧಿಸುವ ಭರದಲ್ಲಿ ವಿರೋಧಿಗಳು ಹೊಲಸು ರಾಜಕೀಯಕ್ಕಿಳಿದು, ಇಡೀ ಸನಾತನ ಧರ್ಮವನ್ನೇ ವಿರೋಧಿಸುತ್ತಿದ್ದಾರೆ. ಕೇಸರಿ ಬಣ್ಣ ಕಂಡರೆ ಸಾಕು ಪ್ಯಾಂಟಿನೊಳಗೆ ಜಿರಳೆ ಬಿಟ್ಟುಕೊಂಡವರಂತಾಡುತ್ತಾರೆ, ೧೯ ನೇ ಶತಮಾನದ ಬಿರುಗಾಳಿಯ ಸಂತ ಸ್ವಾಮಿ ವಿವೇಕಾನಂದ ಸನಾತನ ಧರ್ಮದ ಪ್ರಾಮುಖ್ಯತೆಯ ಬಗ್ಗೆ ಚಿಕಾಗೊ ನಗರದಲ್ಲಿ ಇಡೀ ಜಗತ್ತು ಬೆರಗಾಗುವಂತೆ ಭಾಷಣ ಮಾಡಿದ್ದರು. ಅಂದು ಸ್ವಾಮೀಜಿಗಳ ಮಾತನ್ನು ಕೇಳಲು ಪಶ್ಚಿಮದ ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಸೇರಿದ್ದರು, ಸ್ವಾಮೀಜಿ ಯಾರ ಮುಲಾಜಿಗೂ ಅಂಜದೆ ಪಾಶ್ಚಿಮಾತ್ಯರ ಮುಂದೆ ಸನಾತನ ಧರ್ಮದ ಮಹತ್ವದ ಬಗ್ಗೆ ಮಾತನಾಡಿದ್ದರು. ಪಾಶ್ಚಿಮಾತ್ಯ ಧರ್ಮದ ಹೇರಿಕೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಸ್ಪಷ್ಟವಾಗಿ ನೆರೆದಿದ್ದವರ ಮುಂದೆ
ಹೇಳಿದ್ದರು, ಸ್ವಾಮಿ ವಿವೇಕಾನಂದರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಇಂದು ಸನಾತನ ಧರ್ಮ ವಿರೋಿಗಳ ದರ್ಬಾರ್ ನಡೆಯುತ್ತಿದೆ.

ಮೂರು ದಶಕಗಳ ಕಾಲ ಸನಾತನ ಧರ್ಮ ವಿರೋಧಿ ಕಮ್ಯುನಿ ಸರಕಾರ ಪಶ್ಚಿಮ ಬಂಗಾಳದಲ್ಲಿತ್ತು, ಅವರ ಚಾಳಿಯನ್ನೇ ಮಮತಾ ಬ್ಯಾನೆರ್ಜಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳಕ್ಕೆ ಮೋದಿ ಹೋದರೆ, ಅದರಲ್ಲಿಯೂ ಜಾತ್ಯಾತೀತ ವಿರೋಧಿ ಭಾವನೆಯನ್ನು ಹುಡುಕುವ ಹೊಸಲು ಮನಸ್ಥಿತಿ ಅವರ ವಿರೋಧಿಗಳದ್ದು. ಸನಾತನ ಸಿಂಹ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಗೆ ಬಂದು
ಧ್ಯಾನ ಮಾಡಿದ್ದ ರಾಜ್ಯದಲ್ಲಿ, ಸನಾತನ ಧರ್ಮವನ್ನು ಮಾರಣಾಂತಿಕ ಕಾಯಿಲೆಗೆ ಹೋಲಿಸುವ ನಾಯಕರು ಇಂದು ಆಡಳಿತ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಮಸೀದಿಗೆ ತೆರಳಿ ನಮಾಜ್ ಮಾಡುವುದನ್ನು ಹೊಗಳುವವರು, ಮೋದಿಯವರ ಕಾಶಿ ವಿಶ್ವನಾಥನ ಸನ್ನಿಧಿಯ ಭೇಟಿಯನ್ನು ವಿರೋಧಿಸುತ್ತಾರೆ, ಅಯೋಧ್ಯ ರಾಮಮಂದಿರ ಭೇಟಿಯನ್ನು ವಿರೋಧಿಸುತ್ತಾರೆ, ಮಥುರಾ ಶ್ರೀಕೃಷ್ಣನ ದೇಗುಲ ಭೇಟಿಯನ್ನು ವಿರೋಧಿಸುತ್ತಾರೆ, ಈಗ ಅವುಗಳ ಸಾಲಿಗೆ ನೂತನ ಸೇರ್ಪಡೆ ಮೋದಿಯವರ ಸ್ವಾಮಿ ವಿವೇಕಾನಂದರ ಕನ್ಯಾಕುಮಾರಿಯ ಧ್ಯಾನ ಸ್ಥಳದ ಭೇಟಿ.

ಮೋದಿಯವರು ವಿವೇಕಾನಂದರ ಬಂಡೆಗೆ ಭೇಟಿ ನೀಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಎಂದು ವಿರೋಧ ಪಕ್ಷಗಳು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿವೆ, ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪಕ್ಷದಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಳ್ಳಲು ಆಗಾಗ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಬಿಹಾರದ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಮೋದಿ
ಯವರ ಕನ್ಯಾಕುಮಾರಿ ಭೇಟಿಯನ್ನು ಮಾರ್ಕೆಟಿಂಗ್ ಎಂದು ಹೇಳುತ್ತಾರೆ, ಮಾಧ್ಯಮವನ್ನು ಅಲ್ಲಿಗೆ ಬಿಡಬಾರದಂತೆ, ಫೋಟೋ ತೆಗೆಯಲು ಬಿಡಬಾರದಂತೆ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬಾರದಂತೆ, ಮೋದಿಯವರು ಮಾಧ್ಯಮದವರಿಗೆ ಆಹ್ವಾನ ನೀಡಿ ಕನ್ಯಾಕುಮಾರಿಗೆ ಹೋಗಿಲ್ಲ ಮಾಧ್ಯಮದ ಕ್ಯಾಮರಾಗಳು ಅವರು ಹೋದ ಹಿಂಬಾಲಿಸುತ್ತವೆ.

ಮೋದಿಯವರಲ್ಲಿರುವ ನಿಸ್ವಾರ್ಥ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡವರಿಗೆ ಅವರನ್ನು ಟೀಕಿಸಬೇಕೆಂದು ಅನಿಸುವುದಿಲ್ಲ, ವಿರೋಧ ಪಕ್ಷಗಳು
ಪರಿವಾರವಾದಕ್ಕೆ ಗಂಟುಬಿದ್ದು ತಮ್ಮ ಪರಿವಾರದ ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ದೇಶದ ಒಳಿತಿಗಾಗಿ ಅಲ್ಲ.ತನ್ನ ಕುಟುಂಬದವರನ್ನು ಒಂದೇ ಒಂದು ದಿವಸ ಆಡಳಿತ ಯಂತ್ರದೊಳಗೆ ಸೇರಿಸಿಕೊಳ್ಳದ ಮೋದಿಯ ಗುಣಗಳನ್ನು ಅಳವಡಿಸಿಕೊಂಡಿರುವ
ಒಂದೇ ಒಂದು ವಿರೋಧ ಪಕ್ಷದ ಉದಾಹರಣೆಯಿಲ್ಲ. ರಾಜೀವ್ ಗಾಂಧಿ ಸೋನಿಯಾ ಗಾಂಧಿಯ ಜೊತೆಗೆ ನಿಂತು ಐಸ್ ಕ್ರೀಮ್ ತಿನ್ನುವ ಫೋಟೋ ತೆಗೆದು ಮಾರ್ಕೆಟಿಂಗ್ ಮಾಡಬಹುದು, ಇಂದಿರಾ ಗಾಂಧಿ ರಾಯ್ ಬರೇಲಿಯ ಹಳ್ಳಿಗಳಿಗೆ ಭೇಟಿ ನೀಡುವ ಫೋಟೋಗಳನ್ನು ತೆಗೆದು ಮಾರ್ಕೆಟಿಂಗ್ ಮಾಡಬಹುದು, ಆದರೆ ಮೋದಿಯ ಹಿಂದೆ ಮಾದ್ಯಮದವರು ಹೋದರೆ ತಪ್ಪೆನ್ನುವುದು ವಿರೋಧ ಪಕ್ಷಗಳ ದ್ವಂಧ್ವ ನೀತಿ.

ಪಾಶ್ಚಿಮಾತ್ಯರ ಆಕರ್ಷಣೆಗೆ ಮರುಳಾಗಿ ಭಾರತದ ಅನೇಕ ಸಂಸ್ಕೃತಿಗಳು ಮರೆಯಾಗಿದ್ದವು, ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಹೇಳಿಕೊಡುವ ಪದ್ಧತಿ ಹಲವು ಕಡೆಗಳಲ್ಲಿ ಇರಲಿಲ್ಲ. ಮೋದಿಯವರು ಪ್ರಧಾನಮಂತ್ರಿಯಾದ ನಂತರ ಯೋಗದಿನದ ಆಚರಣೆಯನ್ನು ಜಾರಿಗೆ ತಂದರು. ದೇಶದ ಪ್ರಧಾನ ಮಂತ್ರಿಗಳು, ಯೋಗ ಮಾಡುವ ಮೂಲಕ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿ ಯೋಗದ ಮಹತ್ವದ ಜೊತೆಗೆ ಭಾರತದ ಮಹತ್ವವನ್ನು ತಿಳಿಸಿದ್ದರು.

ಜಗತ್ತಿನ ಅನೇಕ ದೇಶಗಳಲ್ಲಿ ಯೋಗವನ್ನು ತಮ್ಮ ದಿನನಿತ್ಯದ ಚಟುವಟಿಕೆಯನ್ನಾಗಿ ಅನೇಕ ಮಂದಿ ಪಾಶ್ಚಿಮಾತ್ಯರು ಅಳವಡಿಸಿಕೊಂಡಿದ್ದಾರೆ. ಪ್ರಧಾನಿಗಳ ಯೋಗವನ್ನೂ ವಿರೋಧ ಪಕ್ಷಗಳು ಠೀಕೆ ಮಾಡಿದ್ದವು, ಯೋಗದಲ್ಲಿಯೂ ಕೋಮುವಾದವನ್ನು ಕಂಡಂತಹ ಮಹಾನುಭಾವರು ಭಾರತದಲ್ಲಿದ್ದಾರೆ. ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ನವಿಲು ಆಗಮಿಸಿದ್ದನ್ನೂ ಸಹ ವಿರೋಧ ಪಕ್ಷಗಳು ಟೀಕಿಸಿದ್ದವು, ಷಣ್ಮುಖನ ವಾಹನವೆಂದು ಸನಾತನ ಧರ್ಮದಲ್ಲಿ ನವಿಲನ್ನು ಕಾಣಲಾಗುತ್ತದೆ.

ಮೋದಿಯವರ ರಾಜಕೀಯ ನಿಲುವುಗಳಲ್ಲಿ ಅಧ್ಯಾತ್ಮವನ್ನು ಸ್ಪಷ್ಟವಾಗಿ ಕಾಣಬಹುದು. ಅಧ್ಯಾತ್ಮವೆಂಬುದು ಇಂದು ನೆನ್ನೆಯದಲ್ಲ, ಪ್ರಕೃತಿಯಲ್ಲಿರುವ ಸಕಲ ಜೀವಿಗಳಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಸನಾತನ ಧರ್ಮದಲ್ಲಿ ಮಾತ್ರ ಕಾಣಬಹುದು. ಸಾವಿರಾರು ವರ್ಷಗಳಿಂದ ಅನೇಕ ಋಷಿ ಮುನಿ
ಗಳು, ಸನ್ಯಾಸಿಗಳು, ಸ್ವಾಮೀಜಿಗಳು ಆಧ್ಯಾತ್ಮಕ್ಕೆ ಮೊರೆ ಹೋಗಿದ್ದಾರೆ. ದೈನಂದಿನ ಬದುಕಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇಂಗ್ಲಿಷರ ಮಾತ್ರೆಗಳು ತಾತ್ಕಾಲಿಕವಾಗಿ ಮಾತ್ರ ಉಪಯೋಗಕ್ಕೆ ಬರುತ್ತವೆ, ಆದರೆ ಧ್ಯಾನವೆಂಬುದು ದೀರ್ಘಾವಧಿಯ ಔಷದಿ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುವಾಗ ಅವರಿಗೆ ಭವ್ಯ ಭಾರತದ ಭವಿಷ್ಯ ಕಂಡಿತ್ತು, ತರುಣ ಪಡೆಯನ್ನು ಕಟ್ಟಿಕೊಂಡು ಸದೃಢ ಭಾರತವನ್ನು ಕಟ್ಟುವ ಭವಿಷ್ಯ ಅವರ ಮುಂದಿತ್ತು.

ಮೋದಿಯವರು ಈಗಾಗಲೇ ತಮ್ಮ ಮೂರನೇ ಅವಧಿಯಲ್ಲಿನ ಮೊದಲ ೧೨೫ ದಿನಗಳ ಯೋಜನೆಗಳ ನೀಲನಕ್ಷೆಯನ್ನು ತಯಾರಿಸಿದ್ದಾರೆ, ಅದರಲ್ಲಿ
೨೫ ದಿನಗಳು ಯುವಕರ ಯೋಜನೆಗಳಿಗೆ ಮೀಸಲಿಟ್ಟಿದ್ದೇ ನೆಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಯುವಕರನ್ನು ಬಳಸಿಕೊಂಡು ಸದೃಢ ದೇಶ ಕಟ್ಟುವ ಯೋಚನೆಯಲ್ಲಿ ಮೋದಿಯವರು ಕನ್ಯಾಕುಮಾರಿಯಲ್ಲಿ ಧ್ಯಾನದಲ್ಲಿ ತೊಡಗಿದ್ದಾರೆ. ಮೋದಿಯವರ ಧ್ಯಾನದಲ್ಲಿ ಹಲವು ವಿಷಯಗಳ ಚಿಂತನೆಗಳಿವೆ, ತಮ್ಮ ಆಡಳಿತದ ಮೊದಲ ಐದು ವರ್ಷಗಳಲ್ಲಿ ಹಿಂದಿನ ಸರಕಾರ ಮಾಡಿದ ಕೊಳೆಯನ್ನು ತೊಳೆದದ್ದು,ನೋಟು ಅಮಾನೀಕರಣ, ಜಿಎಸ್‌ಟಿ ಯಂತಹ ಪ್ರಮುಖ ನಿರ್ಧಾರಗಳು, ಎರಡನೇ ಅವಧಿಯಲ್ಲಿ ತೆಗೆದುಕೊಂಡಂತಹ ಐತಿಹಾಸಿಕ ನಿರ್ಧಾರವಾದ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ, ಕರೋನ ಮಹಾಮಾರಿಯನ್ನು ನಿಯಂತ್ರಿಸಿದ ಪರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಹಲವು ಬೆಳವಣಿಗೆಗಳು, ಮಹಿಳೆಯರ ಮೀಸಲಾತಿ, ವಿಶ್ವದ ಆರ್ಥಿಕತೆಯಲ್ಲಿ ಭಾರತದ ಐದನೇ ಸ್ಥಾನದಲ್ಲಿ ನಿಂತಿರುವುದು.

ಮೂರನೇ ಅವಧಿಯಲ್ಲಿ ಭಾರತದವನ್ನು ಜಗತ್ತಿನ ಮೂರನೇ ಆರ್ಥಿಕತೆಗೆ ತೆಗೆದೆಕೊಂಡು ಹೋಗುವುದು, ಒಂದು ದೇಶ ಒಂದು ಚುನಾವಣೆ, ಏಕರೂಪ ನಾಗರೀಕ ಸಂಹಿತೆ ಹೀಗೆ ಹತ್ತು ಹಲವು ವಿಷಯಗಳ ಪರಾಮರ್ಶೆ ಮತ್ತು ನೂತನ ಯೋಜನೆಗಳಿವೆ. ವಿವೇಕಾನಂದರು ಸದೃಢ ದೇಶ ಕಟ್ಟುವ ನಿಟ್ಟಿನಲ್ಲಿ ಧ್ಯಾನ ಮಾಡಿದ ಜಾಗದಲ್ಲಿ ಮೋದಿಯವರು ಧ್ಯಾನ ಮಾಡುವುದನ್ನೂ ರಾಜಕೀಯ ಮಾಡುವ ವಿರೋಧ ಪಕ್ಷಗಳಿಗೆ, ಕಾಮಾಲೆ ಕಣ್ಣಿಗೆ ಕಂಡಿದ್ದೇ ಹಳದಿಯಂತಾಗಿದೆ. ಒಟ್ಟಿನಲ್ಲಿ ಮೋದಿಯವರ ಕನ್ಯಾಕುಮಾರಿಯ ಬಂಡೆಯ ಮೇಲಿನ ‘ಜಪ’ ವಿರೋಧಿಗಳ ಬುಡದ ‘ತಾಪ’ವನ್ನು ಹೆಚ್ಚಿಸಿರುವುದಂತೂ ನಿಜ.

Leave a Reply

Your email address will not be published. Required fields are marked *

error: Content is protected !!