Sunday, 15th December 2024

ಯುದ್ದದ ನಡುವೆ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದೇಕೆ ?

ಸಂಗತ

ಡಾ.ವಿಜಯ್ ದರಡಾ

ಅತ್ತ ಮೋದಿ ಉಕ್ರೇನ್ ಪ್ರವಾಸದಲ್ಲಿರುವಾಗ ಇತ್ತ ದೇಶದಲ್ಲಿ ಲೈಂಗಿಕ ಶೋಷಣೆಗೆ ಸಂಬಂಽಸಿದ ಇನ್ನೊಂದು ಭೀಕರ ಕಾಂಡ ಹೊರಗೆ ಬಂದಿದೆ. ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ದೈಹಿಕ ಶೋಷಣೆಗೆ ಒಳಗಾಗದೆ ಉಳಿಯಲು ಸಾಧ್ಯವೇ ಇಲ್ಲ ಎಂಬ ಸಂಗತಿ ನಿಜಕ್ಕೂ ನಾಚಿಕೆಗೇಡಿನದು. ಸರಕಾರವೇ ಕ್ರಿಮಿನಲ್‌ಗಳನ್ನು ರಕ್ಷಿಸುತ್ತಿದೆ ಎಂಬ ಅನುಮಾನ ಇನ್ನೂ ಭೀಕರವಾಗಿದೆ.

ಒಂದೂವರೆ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಸರಿಯಾಗಿ ಅದೇ ದಿನ ರಷ್ಯಾದ ಸೇನಾಪಡೆಯು ಉಕ್ರೇನ್‌ನ
ಮಕ್ಕಳ ಆಸ್ಪತ್ರೆಯ ಮೇಲೆ ಅಮಾನುಷ ದಾಳಿ ನಡೆಸಿತ್ತು. ಆ ಬಾಂಬ್ ದಾಳಿಯಲ್ಲಿ ಅನೇಕ ಮಕ್ಕಳು ಜೀವ ಕಳೆದುಕೊಂಡಿದ್ದರು. ಅಮೆರಿಕದಿಂದ ಹಿಡಿದು ಯುರೋಪಿನವರೆಗೆ ಪ್ರತಿಯೊಂದು ದೇಶವೂ ಅದರ ಬಗ್ಗೆ ಆಘಾತ ವ್ಯಕ್ತಪಡಿಸಿದ್ದವು.

ಅಷ್ಟೇ ಅಲ್ಲ, ಆ ದೇಶಗಳೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಗೂ ಅತೃಪ್ತಿ ವ್ಯಕ್ತಪಡಿಸಿದ್ದವು. ಉಕ್ರೇನ್ ನ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ನಾಯಕರು ಜಗತ್ತಿನ ಅತ್ಯಂತ ಘೋರ ರಕ್ತಪಿಪಾಸು ಕ್ರಿಮಿನಲ್‌ನನ್ನು ಮಾಸ್ಕೋದಲ್ಲಿ ತಬ್ಬಿಕೊಂಡಿರುವುದು ಜಾಗತಿಕ ಶಾಂತಿ ಸ್ಥಾಪನೆಯ ಉದ್ದೇಶಕ್ಕೆ ಉಂಟಾದ ಬಹುದೊಡ್ಡ ಹಿನ್ನಡೆ’ ಎಂದು ನೇರವಾಗಿ ಹೇಳಿದ್ದರು.

ಆ ಘಟನೆ ನಡೆದು ಸರಿಯಾಗಿ ಒಂದೂವರೆ ತಿಂಗಳಿಗೆ, ಮೊನ್ನೆಯ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಅಲ್ಲಿನ ಅಧ್ಯಕ್ಷ ಜೆಲೆನ್ ಸ್ಕಿಯನ್ನು ತಬ್ಬಿಕೊಂಡಿದ್ದಾರೆ. ಬಳಿಕ, ಯುದ್ಧದಲ್ಲಿ ಮೃತಪಟ್ಟ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ. ಮೋದಿ
ಉಕ್ರೇನ್‌ಗೆ ಭೇಟಿ ನೀಡಿದ ಸಮಯ ಕೂಡ ಮಹತ್ವದ್ದಾಗಿದೆ. ಈ ಭೇಟಿಯ ವೇಳೆಯಲ್ಲೇ ಉಕ್ರೇನ್‌ನ ಸೇನಾಪಡೆಯು ರಷ್ಯಾದ ಕರ್ಸ್ಕ್ ಪ್ರದೇಶದ ಮೇಲೆ ಭಾರಿ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿದೆ. ಇದನ್ನೆಲ್ಲ ನೋಡಿದಾಗ ಜಗ ತ್ತಿನ ನಾನಾ ಕಡೆಗಳಿಂದ ಒಂದು ಪ್ರಶ್ನೆ ಕೇಳಿಬರುತ್ತಿದೆ.

‘ಇಷ್ಟೊಂದು ತೀಕ್ಷ್ಣ ಯುದ್ಧ ನಡೆಯುತ್ತಿರುವ ಸಮಯದಲ್ಲೇ ಮೋದಿ ಏಕೆ ಉಕ್ರೇನ್‌ಗೆ ಭೇಟಿ ನೀಡಿದರು? ಮೋದಿಯೇನಾದರೂ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿಸ್ಥಾಪನೆ ಮಾಡುವ ಕಾರ್ಯದಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೆಯೇ?’. ಈ ಪ್ರಶ್ನೆಗಳಿಗೆ ಖಚಿತ ಉತ್ತರ ಹುಡುಕುವುದು ಈ ಸಂದರ್ಭ ದಲ್ಲಿ ಸ್ವಲ್ಪ ಕಷ್ಟವಿದೆ. ಆದರೆ, ಪ್ರಶ್ನೆಯನ್ನು ತಳ್ಳಿಹಾಕುವುದಕ್ಕೂ ಸಾಧ್ಯವಿಲ್ಲ. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸಲು ಮೋದಿ ಪ್ರಯತ್ನಿಸುತ್ತಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವೇ ಇಲ್ಲ. ಏಕೆಂದರೆ, ಉಕ್ರೇನ್‌ಗೆ ತಲುಪುವುದಕ್ಕೂ ಸ್ವಲ್ಪ ಮೊದಲಷ್ಟೇ ಅವರು ಪೋಲೆಂಡ್‌ನಲ್ಲಿ ಮಾತನಾಡಿ, ಯುದ್ಧಭೂಮಿಯಲ್ಲಿ ಯಾವುದೇ ಸಂಘರ್ಷವನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಇದೇ ಸಂಗತಿಯನ್ನು ಅದಕ್ಕೂ ಮೊದಲು ಅವರು ಮಾಸ್ಕೋದಲ್ಲಿ ಸ್ವತಃ ರಷ್ಯಾದ ಅಧ್ಯಕ್ಷ ಪುಟಿನ್‌ಗೂ ಹೇಳಿದ್ದರು. ೨೦೨೨ರ ಫೆಬ್ರವರಿಯಲ್ಲಿ ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಆರಂಭಿಸಿತು. ಅಂದಿನಿಂದಲೂ ಭಾರತದ ನಿಲುವು ಈ ವಿಷಯದಲ್ಲಿ ಬಹಳ ಸ್ಪಷ್ಟವಾಗಿತ್ತು. ಯುದ್ಧ ಬೇಡ, ಮಾತುಕತೆ ಬೇಕು ಎಂಬುದೇ ಭಾರತದ ಏಕೈಕ ಸಲಹೆಯಾಗಿತ್ತು. ಭಾರತಕ್ಕೆ ರಷ್ಯಾ ಬಹಳ ಹಳೆಯ ನಂಬಿಕಸ್ಥ ಸ್ನೇಹಿತ. ಹೀಗಾಗಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧ ವನ್ನು ಭಾರತ ಖಂಡಿಸಲಿಲ್ಲ. ಹಾಗೆಯೇ, ವಿಶ್ವಸಂಸ್ಥೆಯಲ್ಲಿ ನಾನಾ ದೇಶಗಳು ಸೇರಿ ರಷ್ಯಾದ ವಿರುದ್ಧ ಮಂಡಿಸಿದ ನಿಲುವಳಿಯನ್ನು ಭಾರತ
ಬೆಂಬಲಿಸಲೂ ಇಲ್ಲ.

ಹಾಗಂತ, ಉಕ್ರೇನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ನಡೆಸುತ್ತಿರುವ ಮಾನವೀಯ ನೆಲೆಯ ಪರಿಹಾರ ಕಾರ್ಯಾಚರಣೆಯಿಂದ ದೂರ ಉಳಿಯಲೂ ಇಲ್ಲ. ಸ್ವತಃ ಭಾರತ ೧೩೫ ಟನ್‌ಗಳಷ್ಟು ನೆರವಿನ ಸಾಮಗ್ರಿಗಳನ್ನು ಉಕ್ರೇನ್‌ಗೆ ಕಳುಹಿಸಿತು. ಅದರಲ್ಲಿ ಔಷಧ ಗಳು, ಚಾದರ, ಟೆಂಟ್‌ಗಳು, ವೈದ್ಯಕೀಯ ಉಪಕರಣಗಳು, ಜನರೇಟರ್‌ಗಳು ಕೂಡ ಸೇರಿದ್ದವು. ಹೀಗಾಗಿ ಯುದ್ಧದ ವಿಷಯದಲ್ಲಿ ಅದು ರಷ್ಯಾವನ್ನು ಬೆಂಬಲಿಸದೆ, ವಿರೋಧಿಸದೆ,
ಬದಲಿಗೆ ತಟಸ್ಥ ನಿಲುವು ತಾಳಿ, ಯುದ್ಧದಲ್ಲಿ ನಷ್ಟ ಅನುಭವಿಸುತ್ತಿದ್ದ ಉಕ್ರೇನ್‌ಗೆ ಮಾನವೀಯ ನೆರವು ನೀಡುವ ಮೂಲಕ ತನ್ನ ಆದ್ಯತೆ ಏನು ಎಂಬು ದನ್ನು ಸೂಚ್ಯವಾಗಿ ತಿಳಿಸಿತ್ತು. ಅದರ ಜತೆಗೇ, ಜಾಗತಿಕ ವೇದಿಕೆಯಲ್ಲಿ ಎಲ್ಲೇ ಅವಕಾಶ ಸಿಕ್ಕರೂ ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಪದೇಪದೆ ಹೇಳಿತು.

ಇದರ ನಡುವೆ ಚೀನಾ ಮತ್ತು ಬ್ರೆಜಿಲ್ ದೇಶಗಳು ತಾವು ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಸ್ಥಾಪನೆಯ ಮಾತುಕತೆ ನಡೆಸುವುದಕ್ಕೆ ಮಧ್ಯಸ್ಥಿಕೆ ದಾರರ ಪಾತ್ರ ವಹಿಸಲು ಸಿದ್ಧ ಎಂದು ಮುಂದೆ ಬಂದವು. ಅದಕ್ಕೂ ಮೊದಲು ೨೦೨೨ರ ಮಾರ್ಚ್‌ನಲ್ಲೇ ಟರ್ಕಿ ದೇಶವು ರಷ್ಯಾ ಮತ್ತು ಉಕ್ರೇನ್ ನಡುವೆ ಸಂಧಾನ ಸಭೆ ಏರ್ಪಡಿಸಿತ್ತು. ಆದರೆ ಆ ಸಭೆಯಲ್ಲಿ ಯಾವುದೇ ಪರಿಹಾರ ಲಭಿಸಲಿಲ್ಲ. ಇನ್ನು, ಚೀನಾ ಮತ್ತು ಬ್ರೆಜಿಲ್ ಮಧ್ಯಸ್ಥಿಕೆ ವಹಿಸುವುದಕ್ಕೆ ಬೇರೆಯದೇ ಸಮಸ್ಯೆಯಿದೆ. ಮೊದಲನೆಯದಾಗಿ, ಚೀನಾವನ್ನು ಯಾವ ದೇಶದವರೂ ನಂಬುವುದಿಲ್ಲ. ಎರಡನೆಯದಾಗಿ, ಬ್ರೆಜಿಲ್‌ಗೆ ಎರಡು ದೇಶಗಳ ನಡುವಿನ ಯುದ್ಧ ನಿಲ್ಲಿಸುವಷ್ಟು ಪ್ರಭಾವ ಇಲ್ಲ. ಆದರೆ, ಭಾರತದ ವಿಷಯದಲ್ಲಿ ಹಾಗಲ್ಲ. ಭಾರತವನ್ನು ರಷ್ಯಾ ಸಂಪೂರ್ಣ ನಂಬುತ್ತದೆ.

ಹಾಗೆಯೇ, ಭಾರತವನ್ನು ನಂಬದೆ ಇರುವುದಕ್ಕೆ ಉಕ್ರೇನ್‌ಗೆ ಯಾವ ಕಾರಣವೂ ಇಲ್ಲ. ಇದನ್ನು ಜಾಗತಿಕ ಯುದ್ಧ ತಜ್ಞರು ಬಹಿರಂಗವಾಗಿಯೇ ಹೇಳುತ್ತಿ ದ್ದಾರೆ. ಹೀಗಾಗಿ ಉಕ್ರೇನ್ ಮತ್ತು ಭಾರತದ ನಡುವೆ ಒಳಗೊಳಗೇ ಗಂಭೀರವಾದ ಮಾತುಕತೆ ನಡೆಯುತ್ತಿದೆ ಎಂಬ ಗುಸುಗುಸು ಜಾಗತಿಕ ಮಟ್ಟ ದಲ್ಲಿದೆ. ಅದಕ್ಕೆ ಪುಷ್ಟಿ ನೀಡುವುದಕ್ಕೋ ಎಂಬಂತೆ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಭಾರತಕ್ಕೆ ಬಂದು ಹೋಗಿದ್ದಾರೆ.

ನಂತರ ಹೇಳಿಕೆ ನೀಡಿದ ಅವರು, ‘ಯುದ್ಧದ ಬಳಿಕ ಉಕ್ರೇನ್ ಈ ಜಗತ್ತಿನ ಅತಿ ದೊಡ್ಡ ನಿರ್ಮಾಣ ಭೂಮಿಯಾಗಲಿದೆ. ಅದರಲ್ಲಿ ಪಾಲ್ಗೊಳ್ಳಲು ಭಾರತೀಯ ಕಂಪನಿಗಳಿಗೂ ಮುಕ್ತ ಆಹ್ವಾನವಿದೆ’ ಎಂದು ಹೇಳಿದ್ದಾರೆ. ಯುದ್ಧ ಆರಂಭವಾಗುವುದಕ್ಕೂ ಮುನ್ನ ಉಕ್ರೇನ್‌ನಲ್ಲಿ ೧೯,೦೦೦ ಭಾರತೀಯ
ವಿದ್ಯಾರ್ಥಿಗಳು ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದೂ ಅವರು ನೆನಪಿಸಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಉಕ್ರೇನ್‌ಗೆ ಶಾಂತಿ ಸ್ಥಾಪನೆಯಾಗಬೇಕಿದೆ ಮತ್ತು ಭಾರತ ಅದರಲ್ಲಿ ಪಾಲ್ಗೊಳ್ಳಲಿ ಎಂಬ ಬಯಕೆಯಿದೆ!

ಆದರೆ ರಷ್ಯಾ ಹಟಮಾರಿ. ಅದರ ಅಧ್ಯಕ್ಷ ಪುಟಿನ್ ಇನ್ನೂ ಹಟಮಾರಿ. ಕರ್ಸ್ಕ್‌ನಲ್ಲಿ ಉಕ್ರೇನ್ ಮೇಲುಗೈ ಸಾಧಿಸಿದ ಬಳಿಕ ಅವರು ಇನ್ನು ಮುಂದೆ
ಯಾವುದೇ ಶಾಂತಿ ಒಪ್ಪಂದಕ್ಕೆ ಅವಕಾಶವಿಲ್ಲ ಎಂದಿದ್ದಾರೆ. ಆದರೆ ಇದು ಮೇಲು ಮೇಲಿನ ಹೇಳಿಕೆಯಷ್ಟೆ. ಯುದ್ಧದಿಂದ ರಷ್ಯಾಕ್ಕೂ ಒಳಗೊಳಗೇ ಭಾರಿ
ನಷ್ಟವಾಗುತ್ತಿದೆ. ಹೀಗೇ ಯುದ್ಧ ನಡೆಸುತ್ತ ಬಹುಕಾಲ ಮುಂದುವರಿಯಲು ಆ ದೇಶಕ್ಕೆ ಸಾಧ್ಯವಿಲ್ಲ. ಯುದ್ಧ ನಿಲ್ಲಿಸುವಂತೆ ರಷ್ಯಾದೊಳಗೆ ಈಗಾಗಲೇ ಪುಟಿನ್ ಮೇಲೆ ಸಾಕಷ್ಟು ಒತ್ತಡವಿದೆ. ಇಂಥ ಸನ್ನಿವೇಶದಲ್ಲಿ ಭಾರತವೇನಾದರೂ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಕೈಹಾಕಿದರೆ ಅದಕ್ಕೆ ಹೆಚ್ಚು ಮಹತ್ವ
ಸಿಗಲಿದೆ.

ಭಾರತ ಯಾವತ್ತೂ ಶಾಂತಿಯ ಪರವಾಗಿಯೇ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಾ ಬಂದಿದೆ. ನಮ್ಮ ನೆಲದಲ್ಲಿ ಜನಿಸಿದ ಭಗವಾನ್ ಬುದ್ಧ, ಭಗವಾನ್ ಮಹಾವೀರ ಮತ್ತು ಮಹಾತ್ಮ ಗಾಂಧೀಜಿ ಹೇಗೆ ಯಾವಾಗಲೂ ಶಾಂತಿಗಾಗಿ ತುಡಿಯುತ್ತಿದ್ದರು ಎಂಬುದನ್ನು ಹೆಮ್ಮೆಯಿಂದ ಉಲ್ಲೇಖಿಸುತ್ತಾ ಬಂದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದಲ್ಲಿ ತುಂಬಾ ವಿಶಾಲ ದೃಷ್ಟಿಕೋನ ಹೊಂದಿದ್ದಾರೆ. ಜಗತ್ತಿನಲ್ಲಿ ಶಾಂತಿಯನ್ನು ಹರಡಲು ಅವರು ಸದಾ ಒಂದು ಹೆಜ್ಜೆ ಮುಂದಿರುವ ನಾಯಕನಾಗಿಯೇ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಆದರೆ, ಜಗತ್ತಿನ ಇನ್ನಿತರ ದೊಡ್ಡ ದೊಡ್ಡ ಆರ್ಥಿಕ ಶಕ್ತಿಗಳಿಗೆ ನಿಜವಾಗಿಯೂ ಶಾಂತಿ ಬೇಕಿದೆಯೇ ಎಂಬುದು ಮೂಲಭೂತ ಪ್ರಶ್ನೆ.

ಅವರೇನಾದರೂ ಪ್ರಾಮಾಣಿಕವಾಗಿ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಕೈಹಾಕಿದರೆ ತಮ್ಮ ಶಸ್ತ್ರಾಸ್ತ್ರಗಳನ್ನು ಯಾರಿಗೆ ಮತ್ತು ಎಲ್ಲಿ ಮಾರಾಟ ಮಾಡು ತ್ತಾರೆ? ಒಂದು ಭಯಾನಕ ವರದಿ! ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಹೇಮಾ ಅವರು ಕೆಲ ವರ್ಷಗಳ ಹಿಂದೆಯೇ ಮಲಯಾಳಂ ಚಿತ್ರರಂಗದ ಬಗ್ಗೆ ಸಲ್ಲಿಸಿರುವ ವರದಿಯೊಂದು ಈಗ ಬೆಳಕಿಗೆ ಬಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಹೇಗೆ ಲೈಂಗಿಕ ಶೋಷಣೆ ರಾಜಾರೋಷವಾಗಿ ನಡೆಯುತ್ತಿದೆ ಎಂಬುದನ್ನು ಅವರು ತಮ್ಮ ವರದಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನಿಜಕ್ಕೂ ಭಯಾನಕ ವರದಿಯಿದು. ಕೇರಳದ ಚಿತ್ರರಂಗದಲ್ಲಿ ಮಹಿಳೆಯರಿಗೆ ಕೆಲಸ ಬೇಕು ಅಂತಾದರೆ ಅದಕ್ಕೆ ಪ್ರತಿಯಾಗಿ ಲೈಂಗಿಕ ಶೋಷಣಯನ್ನು ಒಪ್ಪಿಕೊಳ್ಳಲೇಬೇಕು ಎಂಬ ಪರಿಸ್ಥಿತಿಯಿದೆ ಎಂದು ಅವರು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈ  ‘ಕ್ಯಾಸ್ಟಿಂಗ್ ಕೌಚ್’ನದ್ದೊಂದು ದೊಡ್ಡ ಸಮಸ್ಯೆ. ಇದು ಆಳವಾಗಿ ಬೇರುಬಿಟ್ಟಿದೆ. ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ದಂಧೆ ಮಾಫಿಯಾ ರೀತಿಯಲ್ಲಿ ಬೆಳೆದು ನಿಂತಿದೆ ಮತ್ತು ಆರ್ಥಿಕ ವಾಗಿಯೂ ರಾಜಕೀಯವಾಗಿಯೂ ತುಂಬಾ ಪ್ರಭಾವಶಾಲಿಯಾಗಿದೆ!

ಇಷ್ಟಕ್ಕೂ, ಈಗಾಗಲೇ ಇದು ಜನರಿಗೆ ಗೊತ್ತಿರುವ ಸತ್ಯವೇ ಆಗಿದೆ ಎಂಬುದು ವಿಷಾದಕರ ಸಂಗತಿ. ಜನರು ಊಹಾಪೋಹದ ರೀತಿಯಲ್ಲಿ ಚಿತ್ರರಂಗದ ಬಗ್ಗೆ ಏನನ್ನು ಮಾತನಾಡಿಕೊಳ್ಳುತ್ತಿದ್ದರೋ ಅದು ಸತ್ಯವೆಂದು ನ್ಯಾ. ಹೇಮಾ ಅವರು ಖಚಿತಪಡಿಸಿದ್ದಾರೆ. ಅವರು ಈ ವರದಿಯನ್ನು ಹೆಚ್ಚುಕಮ್ಮಿ ಐದು ವರ್ಷದ ಹಿಂದೆಯೇ ಸರಕಾರಕ್ಕೆ ಸಲ್ಲಿಸಿದ್ದಾರೆ. ಆ ವರದಿ ಈಗ ಬೆಳಕಿಗೆ ಬಂದಿದೆ. ನನ್ನ ಪ್ರಶ್ನೆ ಏನೆಂದರೆ, ಆ ವರದಿಯನ್ನು ಇಟ್ಟುಕೊಂಡು ಕೇರಳದ ಸರಕಾರ ಇಷ್ಟು ದಿನ ಏನು ಮಾಡುತ್ತಿತ್ತು? ಏಕೆ ಆ ವರದಿಯನ್ನು ಕನಿಷ್ಠ ಪಕ್ಷ ಬಿಡುಗಡೆ ಮಾಡುವ ಗೋಜಿಗೂ ಹೋಗಲಿಲ್ಲ? ಯಾರನ್ನಾ ದರೂ ರಕ್ಷಿಸುವ ಹುನ್ನಾರ ಇದರ ಹಿಂದಿದೆಯೇ? ಅಥವಾ ವರದಿಯನ್ನು ಮುಚ್ಚಿಹಾಕಲು ಸರಕಾರಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆಯೇ? ಈ ಅನುಮಾನ ಇನ್ನಷ್ಟು ಬಲವಾಗಲು ಕಾರಣ ಏನೆಂದರೆ, ೨೯೦ ಪುಟಗಳ ವರದಿಯಲ್ಲಿ ೪೦ ಪುಟಗಳು ನಾಪತ್ತೆಯಾಗಿವೆ!

ಸರಕಾರವೇ ಆ ಪುಟಗಳನ್ನು ತೆಗೆದುಹಾಕಿದೆ ಎಂಬ ದೂರುಗಳಿವೆ. ಈ ಪುಟಗಳಲ್ಲಿ, ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ ಗಂಡಸರ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ. ಸರಕಾರವೇ ಹೀಗೆ ಕ್ರಿಮಿನಲ್‌ಗಳ ಹೆಸರನ್ನು ಬಚ್ಚಿಡುವ ಪ್ರಯತ್ನ ಮಾಡುವುದು ಎಂಥಾ ನಾಚಿಕೆಗೇಡಿನ ಸಂಗತಿ! ಇದು ಕೇವಲ ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದ ವರದಿಯಾಯಿತು. ತಮಿಳು, ತೆಲುಗು, ಭೋಜಪುರಿ ಹಾಗೂ ಹಿಂದಿ ಚಿತ್ರರಂಗದ ಕತೆಯೇನು? ಅಲ್ಲಿ ಲೈಂಗಿಕ ಶೋಷಣೆ ನಡೆಯುತ್ತಿಲ್ಲವೇ? ಸತ್ಯ ಹೊರಗೆ ಬರಬೇಕು ಅಂದರೆ ಮಲಯಾಳಂ ಚಿತ್ರರಂಗದಲ್ಲಿ ನಡೆದ ‘ಸಂಶೋಧನೆ’ಯ ರೀತಿಯಲ್ಲೇ ಈ ಚಿತ್ರರಂಗಗಳಲ್ಲೂ ಶೋಧಕಾರ್ಯ ನಡೆಯಬೇಕಿದೆ. ಆಗ ಮಾತ್ರ ನಿಜ ಏನೆಂಬುದು ದೇಶಕ್ಕೆ ಗೊತ್ತಾಗುತ್ತದೆ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)