Saturday, 14th December 2024

Mohan Vishwa Column: ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಗಳು !

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಅಫ್ಘಾನಿಸ್ತಾನ್ ಮೇಲೆ ಕಳೆದ ಇನ್ನೂರು ವರ್ಷಗಳಲ್ಲಿ ಜಗತ್ತಿನ ಸೂಪರ್ ಪವರ್ ದೇಶಗಳಾದ ಬ್ರಿಟನ್, ರಷ್ಯಾ, ಅಮೆರಿಕ ಯುದ್ಧ ಮಾಡಿವೆ. ಅಮೆರಿಕವಂತೂ ಲಾಡೆನ್ ಹುಡುಕಾಟದಲ್ಲಿ ತನ್ನ ಮಿಲಿಟರಿಯ ಮೇಲೆ ಖರ್ಚು ಮಾಡಿದ ಹಣದಿಂದಾಗಿ ಅತೀ ಹೆಚ್ಚು ಸಾಲ ಮಾಡುವಂತಾಯಿತು. ಸತತವಾಗಿ ಎಂಟು ವರ್ಷಗಳ ಕಾಲ ಅಫ್ಘನ್ ನೆಲದಲ್ಲಿ ಬೇರೂರಿದ್ದ ಅಮೆರಿಕಕ್ಕೆ ಕೊನೆಗೆ ಲಾಡೆನ್ ಸಿಕ್ಕಿದ್ದು ಪಾಕಿಸ್ತಾನದಲ್ಲಿ.

1836ರ ವರೆಗೂ ಅಫ್ಘಾನಿಸ್ತಾನದ ಮೇಲೆ ದಾಳಿಗಳು ನಡೆದಿರಲಿಲ್ಲ. ಮುಸಲ್ಮಾನ್ ಆಚರಣೆಗಳ ಮೂಲಕ ತನ್ನದೇ ಆದ ಕಾನೂನಿನೊಂದಿಗೆ ಆಡಳಿತ ನಡೆಸುತ್ತಿದಂತಹ ದೇಶ ಅಫ್ಘಾನಿಸ್ತಾನ. ಈ ದೇಶದ ಮೇಲೆ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ಕಣ್ಣು ಬಿತ್ತು, ಹತ್ತೊಂಬತ್ತನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ತನ್ನ ಸಾಮ್ರಾಜ್ಯಶಾಹಿ ವಿಸ್ತರಣಾ ಮನೋಭಾವದೊಂದಿಗೆ ಸಿಕ್ಕ ಸಿಕ್ಕ ದೇಶಗಳನ್ನು ಆಕ್ರಮಿಸಿಕೊಂಡು ಬಂದ ಬ್ರಿಟಿಷರಿಗೆ ಭಾರತದ ಪಕ್ಕದಲ್ಲಿದ್ದ ಅಫ್ಘಾನಿಸ್ತಾನದ ಮೇಲೆ ಕಣ್ಣು ಬಿತ್ತು.

ಅಫ್ಘಾನಿಸ್ತಾನ ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟನ್ ಹಾಗು ಕಮ್ಯುನಿ ರಷ್ಯಾ ನಡುವಿನ ತಂತ್ರಗಾರಿಕೆಯ
ದೇಶವಾಗಿತ್ತು. ರಷ್ಯನ್ನರಿಗೆ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡರೆ ಬ್ರಿಟಿಷ್ ಆಡಳಿತದ ಬಹುದೊಡ್ಡ ದೇಶ ವಾಗಿದ್ದ ಭಾರತವನ್ನು ತಲುಪುವುದು ಸುಲಭವೆಂಬ ಮಾನಸಿಕತೆ, ಹಾಗಾಗಿ ರಷ್ಯನ್ನರು ಅಫ್ಘಾನಿಸ್ತಾನದ ಮೇಲೆ ಕಣ್ಣಿಟ್ಟಿದ್ದರು. ’ಖಿಖಖ್ಕ’ಅಡಿಯಲ್ಲಿ ಈಗಿನ ಹಲವಾರು ರಾಷ್ಟ್ರಗಳಿದ್ದವು, ಬ್ರಿಟನ್ ಹಾಗು ಖಿಖಖ್ಕ ಮಧ್ಯೆ ಇದ್ದಂತಹ ದೇಶ ಅಫ್ಘಾನಿಸ್ತಾನ. ಬ್ರಿಟಿಷರು ಅಫ್ಘನ್‌ನನ್ನು ಆಕ್ರಮಿಸಿಕೊಂಡರೆ ರಷ್ಯಾದವರು ಭಾರತದ ಮೇಲೆ ಆಕ್ರಮಣ ಮಾಡುವುದನ್ನು ನಿಲ್ಲಿಸಬಹುದೆಂದು ಯೋಚಿಸಿ 1836ರಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ ದರು. ಆದರೆ ಕೇವಲ ಗುಡ್ಡಗಾಡುಗಳಿಂದ ಕೂಡಿದ್ದ ಅಫ್ಘಾನಿಸ್ತಾನದ ವಾಸ್ತವ ಪರಿಸ್ಥಿತಿಗಳ ಬಗ್ಗೆ ಅವಲೋಕನ ವಾಗಬೇಕಿತ್ತು. ಅಲ್ಲಿನ ಪರಿಸ್ಥಿತಿಯನ್ನು ತಿಳಿಯಲು ಬ್ರಿಟಿಷ್ ಪರಿಶೋದಕ ಅಲೆಕ್ಸಾಂಡರ್ ಬರ್ನ್ಸ್ ನನ್ನು ಕಳುಹಿಸಲಾಯಿತು.

ಆತ ಸುಮಾರು ಹನ್ನೆರಡು ತಿಂಗಳುಗಳ ಕಾಲ ಭಾರತದಿಂದ, ಕಾಬುಲ್ ಮೂಲಕ ಉತ್ತರ ಅಫ್ಘಾನಿಸ್ತಾನದ ಬುಕಾರದವರೆಗೂ ಪ್ರಯಾಣ ಮಾಡಿದ. ತನ್ನ ಪ್ರಯಾಣ ಮುಗಿಸಿ ಬಂದ ನಂತರ ಈತ ‘ಟ್ರಾವೆಲ್ ಟು ಬುಕಾರ’ ಎಂಬ ಪುಸ್ತಕ ಬರೆದ. ತನ್ನ ಪುಸ್ತಕದಲ್ಲಿ ಆಫ್ಘನ್ನಿನ ಸಂಸ್ಕೃತಿ, ಅಲ್ಲಿನ ಜನರ ಉಡುಗೆ ತೊಡುಗೆಗಳು, ಅಲ್ಲಿನ ಸುಂದರ ಉದ್ಯಾನವನಗಳು, ಆಚರಣೆಗಳ ಬಗ್ಗೆ ತುಂಬಾ ಸುಂದರವಾಗಿ ಬರೆದ.

ತನ್ನನ್ನು ಕಳುಹಿಸಿದ ಬ್ರಿಟಿಷ್ ಅಧಿಕಾರಿಗಳಿಗೆ ಅಫ್ಘಾನಿಸ್ತಾನದ ಬಗ್ಗೆ ಒಳ್ಳೆಯ ಚಿತ್ರವನ್ನೇ ಮುಂದಿಟ್ಟ, ಅಲ್ಲಿನ ಜನರು ಮುಗ್ಧರು ಏನು ಮಾಡುವುದಿಲ್ಲ, ತುಂಬಾ ಹಿಂದುಳಿದವರು, ಅವರನ್ನು ಹಾಗೆಯೆ ಸುಮ್ಮನೆ ಬಿಟ್ಟರೆ ಉತ್ತಮವೆಂದು ಹೇಳಿದ. ಅಲೆಕ್ಸಾಂಡರ್ ಬರ್ನ್ಸ್ ಬರೆದ ಪುಸ್ತಕ ಓದಿದ ನಂತರ ರಷ್ಯನ್ನರೂ ಸಹ ತನ್ನ ಪತ್ತೇದಾರಿಯೊಬ್ಬನನ್ನು ಕಳುಹಿಸಿದರು, ಈ ವಿಚಾರ ಬ್ರಿಟಿಷರು ಅಫ್ಘಾನಿಸ್ತಾನದ ಮೇಲೆ ಬಹುಬೇಗ ಮುಗಿ ಬೀಳಲು ಕಾರಣವಾಯಿತು.

ಅಲೆಕ್ಸಾಂಡರ್ ರ್ನ್ಸ್ ಹೇಳಿದ ಮಾತನ್ನು ಬ್ರಿಟಿಷರು ಗಂಭೀರವಾಗಿ ಪರಿಗಣಿಸಲಿಲ್ಲ ಆ ದೇಶವನ್ನು ರಷ್ಯನ್ನರು ಆಕ್ರಮಿಸಿಕೊಳ್ಳುತ್ತಾರೆಂಬ ಆತಂಕದೊಂದಿಗೆ, ಅಫ್ಘಾನಿನಲ್ಲಿ ತಮ್ಮ ಆಡಳಿತ ನೀತಿಯನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದರು. ಬ್ರಿಟಿಷರು ಅಫ್ಘಾನಿಸ್ತಾನದ ರಾಜ ದೋ ಮೊಹಮ್ಮದ್ ನನ್ನು ಕೆಳಗಿಳಿಸಿ ಭಾರತದಲ್ಲಿ ತಾವು ಹೇಳಿದಂತೆ ಕೇಳುತ್ತಿದ್ದ ಶಾಹ್ ಶುಜಾನನ್ನು ಪಟ್ಟಕ್ಕೇರಿಸಲು ಸಿದ್ಧತೆ ನಡೆಸಿದರು. ದೋಸ್ತ್ ಮೊಹಮ್ಮದ್‌ನ ಮೇಲೆ ರಾಜದ್ರೋಹದ ಆರೋಪ ಮಾಡಲಾಯಿತು. 1836ರಲ್ಲಿ ಸುಮಾರು ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬ್ರಿಟಿಷರು ಅಫ್ಘಾನಿಸ್ತಾನದ ಕಬೂಲ್ ಕಡೆಗೆ‌ ಹೊರಟರು. ಎಂದಿನಂತೆ ತಮ್ಮ ಕೆಂಪು ಕೋಟ, ಕುದುರೆಗಳು, ಆನೆಗಳನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆಮ ಮಾಡುತ್ತ ಅಫ್ಘಾನಿಸ್ತಾನದ ಒಳಗೆ ಬಂದರು.

ಅಫ್ಘಾನಿನ ಜನರಿಗೆ ತಮ್ಮ ಊರಿನಲ್ಲಿ ಏನಾಗುತ್ತಿದೆಯೆಂದು ತಿಳಿಯಲಿಲ್ಲ, ಎಲ್ಲರೂ ಸುಮ್ಮನೆ ನೋಡುತ್ತಿದ್ದರು, ಅವರಲ್ಲಿ ಕೇವಲ ಮೌನವಿತ್ತು. ಹೀಗೆ ಸುಮಾರು ಮೂರು ವರ್ಷ ಕಳೆಯಿತು, ಬ್ರಿಟಿಷರು ನಿಧಾನವಾಗಿ ತಮ್ಮ ಕುಟುಂಬ ಸದಸ್ಯರನ್ನು ಅ-ನಿಸ್ತಾನಕ್ಕೆ ಕರೆತರಲು ಶುರು ಮಾಡಿದರು. ಯೂರೋಪಿನ ಬಿಳಿ ಬಣ್ಣದ ಹೆಂಗಸರು, ಪುಟ್ಟ ಮಕ್ಕಳು ಕಾಬುಲ್‌ಗೆ ಬಂದರು. ಅಲ್ಲಿಯವರೆಗೂ ಸುಮ್ಮನಿದ್ದ ಅಫ್ಘಾನಿಗರಿಗೆ ಯಾವಾಗ ಬ್ರಿಟಿಷ್ ಕುಟುಂಬ ಗಳು ಬರಲಾರಂಭಿಸಿದವೋ, ಬ್ರಿಟಿಷರ ತಂತ್ರಗಾರಿಕೆ ಅರ್ಥವಾಯಿತು.

1841ರ ಹೊತ್ತಿಗೆ ರಾಜ ಶಾಹ್ ಶುಜಾ ಬ್ರಿಟಿಷರ ಆಟದ ಗೊಂಬೆಯೆಂದು ತಿಳಿಯಿತು. ನಿಧಾನವಾಗಿ ಅಫ್ಘಾನಿ ನಾದ್ಯಂತ ಬ್ರಿಟಿಷರು ತಮ್ಮ ಹೆಂಗಸರ ಮೇಲೆ ಕಣ್ಣು ಹಾಕುತ್ತಿದ್ದರೆಂಬ ವದಂತಿಗಳು ಹರಡಲು ಶುರುವಾಯಿತು, ಆಗ ಅಫ್ಘನ್ನರಿಗೆ ಬ್ರಿಟಿಷರ ಮೇಲೆ ಮತ್ತಷ್ಟು ಕೋಪ ಬಂದಿತ್ತು. ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಲು ಬಂದಿದ್ದಾರೆಂದು ಅವರ ವಿರುದ್ಧ ತಿರುಗಿ ಬೀಳಲು ನಿರ್ಧರಿಸಿದರು. ಇತ್ತ ದೋಸ್ತ್‌ ಮೊಹಮ್ಮದ್ ಅಫ್ಘಾನ್‌ದಾದ್ಯಂತ ಜನರು ಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಮೊಟ್ಟ ಮೊದಲ ಬಾರಿಗೆ ಜಿಹಾದ್‌ಗೆ ಕರೆ ನೀಡಿದನು.

ನವೆಂಬರ್ 1841 ರಾತ್ರಿಯಲ್ಲಿ ಅಲೆಕ್ಸಾಂಡರ್ ಬರ್ನ್ಸ್ ಕಾಬುಲ್ ನಲ್ಲಿ ತನ್ನಮನೆಗೆ ಬಂದಾಗ, ತಾನು ಈ ಹಿಂದೆ
ಪ್ರವಾಸ ಮಾಡಿದ್ದಾಗ ಕಾಣದ ಅಫ್ಘಾನಿಸ್ತಾನಿಯರನ್ನು ಕಂಡನು. ಆತನನ್ನು ಕೊಲ್ಲಲು ನೂರಾರು ಜನರು ಅವನ
ಮನೆಯ ಮುಂದೆ ಬಂದು ನಿಂತಿದ್ದರು. ಅವರಿಂದ ತಪ್ಪಿಸಿಕೊಂಡು ಮನೆಯೊಳಗೆ ಬಂದು, ಬ್ರಿಟಿಷರಿಗೆ ವಿಷಯ
ಮುಟ್ಟಿಸಿ, ತ್ವರಿತವಾಗಿ ತನಗೆ ದೊಡ್ಡದೊಂದು ಬ್ರಿಟಿಷ್ ಸೈನ್ಯದ ಅಗತ್ಯವಿದೆಯೆಂದು ಹೇಳಿದ. ಆದರೆ ಬ್ರಿಟಿಷ್
ಸೈನ್ಯವು ಬರುವ ಮುನ್ನವೇ ಆತನನ್ನು ಅಫ್ಘಾನಿಗಳು ಕೊಂದು, ತಲೆಯನ್ನು ಊರ ಮುಂದಿನ ಕಂಬವೊಂದಕ್ಕೆ
ನೇತು ಹಾಕಿದ್ದರು. ಮುಂದಿನ ಮೂರು ದಿನಗಳಲ್ಲಿ ಬ್ರಿಟಿಷರ ಮೇಲೆ ಮುಗಿಬಿದ್ದ ಜಿಹಾದಿಗಳು ಸಿಕ್ಕ ಸಿಕ್ಕವರನ್ನು ಕೊಂದರು. ಇವರ ಆಕ್ರಮಣದಿಂದ ಬೆಚ್ಚಿದ ಬ್ರಿಟಿಷರು ಅಫ್ಘಾನಿಸ್ತಾನಕ್ಕೆ ಶರಣಾಗತಿಯಾಗಲು ನಿರ್ಧರಿಸಿದರು. ಮಧ್ಯ ಏಷ್ಯಾದಲ್ಲಿ ಸೋಲನ್ನೇ ಕಾಣದ ಬ್ರಿಟಿಷರಿಗೆ ಅಫ್ಘಾನಿನ ಜಿಹಾದಿಗಳು ಸೋಲಿನ ರುಚಿ ತೋರಿಸಿದ್ದರು.

ಬ್ರಿಟಿಷರು ಶರಣಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ವಾಪಾಸ್ ಆಗಬೇಕಿತ್ತು, ಆದರೆ ಅಫ್ಘಾನಿಗಳು ಬ್ರಿಟಿಷರನ್ನು
ಬಿಟ್ಟು ಕಳುಹಿಸಲು ಷರತ್ತೊಂದನ್ನು ಹಾಕಿದರು. ಬ್ರಿಟಿಷರು ತಂದಿರುವ ಆಯುಧಗಳನ್ನು ಇಲ್ಲಿಯೇ ಬಿಟ್ಟು ಹೋದರೆ ಮಾತ್ರ ಅವರಿಗೆ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡುತ್ತೇವೆಂದು ಹೇಳಿದರು, ವಿಽಯಿಲ್ಲದೆ ಬ್ರಿಟಿಷರು ಅವರ ಮಾತು ಕೇಳಬೇಕಾಯಿತು. ತಮ್ಮ ಕುಟುಂಬಗಳೊಂದಿಗೆ ಬ್ರಿಟಿಷರು ಒಂಬತ್ತು ದಿನಗಳ ಕಾಲ ಲಾಲಾ ಬಾದ್ ಕಡೆಗೆ ಹೊರಟರು, ಅಫ್ಘಾನಿಸ್ತಾನದ ಬೆಟ್ಟಗಳ ಕಣಿವೆಗಳ ನಡುವೆ ಮೂರು ಅಡಿಯಷ್ಟಿದ್ದ ಹಿಮದ ಮೇಲೆ ಬ್ರಿಟಿಷರು ಸಾಗುತ್ತಿದ್ದರು. ಅವರಿಗೆ ತಮ್ಮ ಪ್ರಾಣವನ್ನು ಉಳಿಸಿಕೊಂಡು ತಮ್ಮ ನೆಲೆಗಳಿಗೆ ವಾಪಾಸ್ ಹೋದರೆ ಸಾಕಾಗಿತ್ತು, ಅಫ್ಘಾನಿಸ್ತಾನಿಗಳನ್ನು ನಂಬಲಾಗುವುದಿಲ್ಲವೆಂಬ ಸತ್ಯ ಅವರಿಗೆ ತಿಳಿದಿತ್ತು.

ಆಫ್ಘಾನ್ನರಿಗೂ ಅಷ್ಟೆ ಬ್ರಿಟಿಷರ ಮೇಲೆ ನಂಬಿಕೆಯಿರಲಿಲ್ಲ, ಭಯದ ವಾತಾವರಣದಲ್ಲಿ ಬ್ರಿಟಿಷರು ಸಾಗುತ್ತಿರು ವಾಗ ಬ್ರಿಟಿಷರ ಮೇಲೆ ಜಿಹಾದಿಗಳು ಮನಬಂದಂತೆ ಗುಂಡು ಹಾರಿಸಿದರು, ಗುಡ್ಡಗಳ ಮೇಲೆ ಕುಳಿತು ಕಣಿವೆಯ ಎರಡೂ ಕಡೆಯಿಂದಲೂ ಬ್ರಿಟಿಷರ ಮೇಲೆ ಸಿಕ್ಕ ಸಿಕ್ಕಂತೆ ದಾಳಿ ಮಾಡಿದರು. ಅಫ್ಘಾನಿಸ್ತಾನದಲ್ಲಿ ಇಪ್ಪತ್ತು ಸಾವಿರದಷ್ಟು ಬುಡಕಟ್ಟು ಜನಾಂಗವಿರುವ ಹಳ್ಳಿಗಳಿವೆ, ಇವರೆಲ್ಲರೂ ಬೆಟ್ಟ ಗುಡ್ಡಗಳ ಮೇಲೆ ತಮ್ಮ ನೆಲೆ ಕಂಡುಕೊಂಡಿದ್ದಾರೆ.

ಜಿಹಾದಿಗಳು ಶೇ.90ರಷ್ಟು ಬ್ರಿಟಿಷ್ ಸೈನ್ಯವನ್ನು ಕೊಂದು ಮುಗಿಸಿದ್ದರು, 17000 ಜನರು ಕಾಬೂಲಿನಿಂದ ಹೊರಟಿ ದ್ದರು, ಆದರೆ ಕೊನೆಯಲ್ಲಿ ಒಬ್ಬ ಮಾತ್ರ ಜೀವಂತವಾಗಿ ಜಲಾಲಾಬಾದ್ ಸೇರಿದ್ದ. ಬ್ರಿಟಿಷರಿಗೆ ಜಗತ್ತಿನಲ್ಲಿ ಆದಂತಹ ಅತೀ ದೊಡ್ಡ ಅವಮಾನ ಇದಾಗಿತ್ತು, ಕಾಬುಲ್‌ನಲ್ಲಿ ಬ್ರಿಟಿಷ್ ಅಧಿಕಾರಿಯ ಹೆಂಡತಿಯಾಗಿದ್ದ ಸೈಲ ತನ್ನ ಡೈರಿ ಯಲ್ಲಿ ಬ್ರಿಟಿಷ್ ಹಾಗೂ ಜಿಹಾದಿಗಳ ಯುದ್ಧದ ಬಗ್ಗೆ ಕೂಲಂಕಷವಾಗಿ ಬರೆದಿದ್ದಳು.

ಇವಳ ಈ ಡೈರಿಯಿಂದ ತಮ್ಮ ಮರ್ಯಾದೆ ಹೋಗುತ್ತದೆಯೆಂಬ ಕಾರಣದಿಂದ ಈಕೆಯನ್ನು ಸಮಾಧಾನ ಪಡಿಸಿ
ಬ್ರಿಟನ್ನಿನ ರಾಣಿ ವಿಕ್ಟೋರಿಯ ಈಕೆಗೆ ಸನ್ಮಾನ ಮಾಡಿ ಕಿರೀಟವನ್ನಿತ್ತಳು. ಇವಳ ಹೆಸರನ್ನು ಬ್ರಿಟನ್ನಿನ ಹಡಗಿಗೆ
ಇಟ್ಟರು, ಆಸ್ಟ್ರೇಲಿಯಾದ ಒಂದು ನಗರಕ್ಕೆ ಈಕೆಯ ಹೆಸರಿಡಲಾಯಿತು. ಜಗತ್ತಿನ ಮುಂದೆ ಬ್ರಿಟಿಷರಿಗೆ ಏನೂ
ಆಗಿಲ್ಲವೆಂಬಂತೆ ನೋಡಿಕೊಂಡರು. ಬ್ರಿಟಿಷರಿಗಾದ ಈ ಅವಮಾನವೇನಾದರೂ ತಮ್ಮ ವಸಾಹತಿನಲ್ಲಿರುವ ದೇಶ ಗಳಿಗೆ ತಿಳಿದರೆ, ಅವರೂ ಸಹ ತಮ್ಮ ಮೇಲೆ ಮುಗಿಬೀಳುತ್ತಾರೆಂಬ ಭಯ ಅವರಿಗಿತ್ತು. 1841ರ ಅವಮಾನದ ನಂತರ ಬ್ರಿಟಿಷರು ತಮ್ಮ ವಶದಲ್ಲಿದ್ದ ದೋಸ್ತ್ ಮೊಹಮ್ಮದ್‌ನನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದರು, ಆದರೆ ನೀವು ಮಿಲಿಟರಿ ಯುದ್ಧದಲ್ಲಿ ನಮ್ಮನ್ನು ಗೆದ್ದಿಲ್ಲ ಹಾಗಾಗಿ ನಾವು ಮತ್ತೆ ಯಾವಾಗ ಬೇಕಾದರೂ ನಿಮ್ಮ ಮೇಲೆ ಆಕ್ರಮಣ ಮಾಡಬಹುದೆಂದು ಹೇಳಿ ಕಳುಹಿಸಿದ್ದರು.

ದೋಸ್ತ್ ಮೊಹಮ್ಮದ್‌ನಿಗೆ ಬ್ರಿಟಿಷರಿಗೆ ಏನು ಬೇಕೆಂದು ಚೆನ್ನಾಗಿ‌ ತಿಳಿದಿತ್ತು, ಈಗ ಅವನು ಹಳೆಯ ದೋ ಆಗಿರ‌ ಲಿಲ್ಲ, ಬ್ರಿಟಿಷರ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದ. ಬ್ರಿಟಿಷರ ಸೋಲನ್ನು ಅರಿತ ರಷ್ಯನ್ನರು ಅಫ್ಘಾನಿ ಸ್ತಾನವನ್ನು ಆಕ್ರಮಿಸಿಕೊಳ್ಳಲು ನಿರ್ಧರಿಸಿದರು, ಅಫ್ಘಾನಿಸ್ತಾನದಲ್ಲಿ ರಷ್ಯಾ ಹಾಗೂ ಬ್ರಿಟಿಷರ ನಡುವೆ ದೊಡ್ಡದೊಂದು ಯುದ್ಧವೇ ನಡೆಯಿತು. ಪರಿಸ್ಥಿತಿಯ ಗಂಭೀರತೆಯನ್ನರಿತ ಬ್ರಿಟಿಷರು ಮತ್ತೊಮ್ಮೆ ಅಫ್ಘಾನಿ ಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದರು, 1870 ರಲ್ಲಿ ಬರೋಬ್ಬರಿ 40000 ಸೈನಿಕರೊಂದಿಗೆ ಬ್ರಿಟಿಷರು ಕಾಬುಲ್ ಕಡೆಗೆ ಬಂದರು. ಅಲೆಕ್ಸಾಂಡರ್ ಬರ್ನ್ಸ್ ಮಾಡಿದ ತಪ್ಪನ್ನು ಆಗಿನ ಬ್ರಿಟಿಷ್ ಅಧಿಕಾರಿ ಮಾಡಲು ತಯಾರಿರಲಿಲ್ಲ, ತನ್ನ ಕೋಟೆಯ ಸುತ್ತಲೂ ದೊಡ್ಡದೊಂದು ಸೈನ್ಯವನ್ನು ಕಾಯಲು ನೇಮಿಸಿದ್ದ, ಅ-ನಿಸ್ತಾನದ ಹೆಂಗಸರ ತಂಟೆಗೆ ಹೋಗಬಾರದೆಂದು ನಿರ್ಧರಿಸಿದ್ದ.

ಇದರ ಮಧ್ಯೆ ಜಿಹಾದಿಗಳಿಗೆ ತಮ್ಮ ರಾಜ ದೋಸ್ತ್ ಮೊಹಮ್ಮದ್ ಬ್ರಿಟಿಷರೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಸರಿ
ಇಲ್ಲವೆಂಬುದರ ಅರಿಯಾಯಿತು, ಕಾಬುಲ್‌ ನಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಇರಿದು ಕೊಂದುಬಿಟ್ಟರು. ಇದರಿಂದ ಕೆರಳಿದ ಬ್ರಿಟಿಷ್ ಸೈನ್ಯ ಕಾಬುಲ್ ಮೇಲೆ ಸತತವಾಗಿ ನಾಲ್ಕು ದಿನಗಳ ಕಾಲ ದಾಳಿ ಮಾಡಿ, ಇಡೀ ನಗರವನ್ನು ಆಕ್ರಮಿಸಿಕೊಂಡುಬಿಟ್ಟರು.

ನೂರಾರು ಜಿಹಾದಿಗಳನ್ನು ಈತ ನೇಣಿಗೇರಿಸಿದ್ದ, ನಂತರ ಅವನಿಗೆ ಅಲ್ಲಿಂದ ಹೊರಡಲು ಆದೇಶ ನೀಡಲಾಯಿತಾ ದರೂ ಅವನು ಕೇಳಲಿಲ್ಲ. ನಿಧಾನವಾಗಿ ಇಡೀ ಅಫ್ಘಾನಿಸ್ತಾನದಾದ್ಯಂತ ಬ್ರಿಟಿಷರ ಕ್ರೌರ್ಯ ಪಸರಿಸಿತು, ಆದರೆ ಕೇವಲ ನಾಲ್ಕು ವಾರಗಳಲ್ಲಿ ಗುಡ್ಡ ಗಾಡು ಪ್ರದೇಶಗಳಲ್ಲಿ ವಾಸವಿದ್ದ ಅಫ್ಘಾನಿಗಳು ಬ್ರಿಟಿಷರ ವಿರುದ್ಧ ಒಂದಾದರು.

ಕಾಬುಲ್ ನಗರದ ಸುತ್ತಲೂ ಇರುವ ಬೆಟ್ಟಗಳ ಮೇಲೆ 60000 ಕ್ಕೂ ಹೆಚ್ಚು ಜಿಹಾದಿಗಳು ಬ್ರಿಟಿಷರ ಮೇಲೆ ಹೋರಾ ಡಲು ಸಿದ್ಧರಾದರು. ಜಿಹಾದಿಗಳ ಇತಿಹಾಸ ಮತ್ತೆ ಮರುಕಳಿಸಿತ್ತು, ಈ ಬಾರಿ ಬ್ರಿಟಿಷ್ ಸೈನ್ಯಾಧಿಕಾರಿ ಅಲ್ಲಿದ್ದು ಕೊಂಡು ಯುದ್ಧ ಮಾಡಲು ನಿರ್ಧರಿಸಿದ್ದ.ಬ್ಯಾಟಲ್ ಆಫ್ ಮೈವಾಂಡ್ ಎಂದೇ ಪ್ರಸಿದ್ಧಿಯಾಗಿರುವ ಎರಡನೇ ಆಂಗ್ಲೋ ಅಫ್ಘನ್ ಯುದ್ಧ 1880ರಲ್ಲಿ ನಡೆಯಿತು. ಈ ಯುದ್ಧದಲ್ಲಿ ಸಾವಿರಾರು ಬ್ರಿಟಿಷ್ ಸೈನಿಕರನ್ನು ಅಫ್ಘನಿಗಳು ಕೊಚ್ಚಿ ಕೊಂದರು.

ಸಾವಿರಾರು ಸೈನಿಕರ ಸಾವನ್ನು ಕಂಡು ಭಯಗೊಂಡಿದ್ದ ಬ್ರಿಟಿಷ್ ಸೈನ್ಯಾಧಿಕಾರಿ ಅಲ್ಲಿಂದ ಓಡಿ ಹೋಗಲು
ನಿರ್ಧರಿಸಿದ, ಕೊನೆಯಲ್ಲಿ ಅಳಿದುಳಿದ 300 ಜನರ ಸೈನ್ಯದೊಂದಿಗೆ ಸುಡು ಬಿಸಿಲಿನಲ್ಲಿ ಸುಮಾರು 320 ಕಿ.ಮೀಗಳ ದೂರವನ್ನು ಕ್ರಮಿಸಿ ತನ್ನ ನೆಲೆಯನ್ನು ಸೇರಿದ. ಬ್ರಿಟಿಷರಿಗೆ ಅಫ್ಘಾನಿಸ್ತಾನಿಗಳನ್ನು ಎದುರುಹಾಕಿಕೊಳ್ಳಲು ಸಾಧ್ಯ ವಿಲ್ಲವೆನಿಸುತ್ತದೆ, ವಾಪಾಸ್ ಬಂದಂತಹ ಸೈನ್ಯವನ್ನು ತೋರಿಸಿ ತಾವು ಯುದ್ಧವನ್ನು ಗೆದ್ದೇವೆಂದು ಜಗತ್ತಿಗೆ ಸುಳ್ಳು ಹೇಳುತ್ತಾರೆ. ಆದರೆ ಬ್ರಿಟಿಷ್ ಅಧಿಕಾರಿಯೊಬ್ಬ, ಅಫ್ಘಾನಿಗಳನ್ನು ಎಷ್ಟು ದೂರದಿಂದ ನೋಡುತ್ತೀವೋ ಅಷ್ಟು ಒಳ್ಳೆಯದೆಂಬ ಮಾತನ್ನು ಹೇಳುತ್ತಾನೆ.

ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್‌ ಹಿಟ್‌ ಮ್ಯಾನ್‌ʼ