Sunday, 15th December 2024

Mohan Vishwa Column: ಕಾಶ್ಮೀರದ ಮತದಾನ: ಪ್ರಜಾಪ್ರಭುತ್ವದ ಗೆಲುವು

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯ ರದ್ದತಿ ನಂತರ ನಡೆದ ಮೊದಲ ಚುನಾವಣೆಯಲ್ಲಿ ಒಮರ್ ಅಬ್ದು ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾ ಡಳಿತ ಪ್ರದೇಶವನ್ನಾಗಿಸಿದ ನಂತರ ನಡೆದ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಕಾಂಗ್ರೆಸ್ ಪಕ್ಷ, ತನ್ನ ಬೆಂಬಲವಿಲ್ಲದೆ ಕಣಿವೆ ರಾಜ್ಯದಲ್ಲಿ ಸರಕಾರ ರಚಿಸುವುದು ಕಷ್ಟವೆಂದು ತಿಳಿದಿತ್ತು.

ಆದರೆ ಚುನಾವಣಾ ಫಲಿತಾಂಶದ ದಿನ ಕಾಂಗ್ರೆಸ್ಸಿನ ಲೆಕ್ಕಾಚಾರ ತಲೆಕೆಳಕಾಗಿತ್ತು. ಒಮರ್ ಅಬ್ದು ನೇತೃತ್ವದ
ಸರಕಾರ ಬಹುಮತದ ಸನಿಹಕ್ಕೆ ತಲುಪಿ ಸ್ವತಂತ್ರ ಅಭ್ಯರ್ಥಿಗಳ ಸಹಾಯದೊಂದಿಗೆ ಸರಕಾರ ರಚಿಸಿದೆ. ಅಧಿಕಾರಕ್ಕೆ
ಬಂದ ಕೆಲವೇ ಗಂಟೆಗಳಲ್ಲಿ ಒಮರ್ ಅಬ್ದು ಕೇಂದ್ರ ಸರಕಾರದೊಂದಿಗೆ ಉತ್ತಮ ಭಾಂದವ್ಯ ಹೊಂದಿ ಜಮ್ಮು
ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿಯ ರದ್ಧತಿಯ ಬಳಿಕ ನಡೆದ ಚುನಾವಣೆಯಲ್ಲಿ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಪ್ರಮುಖ ಚುನಾವಣಾ ವಿಷಯವಾಗಿತ್ತು. 2019 ರಿಂದಲೂ ಕಾಂಗ್ರೆಸ್ಸಿನ ನಾಯಕರು ತಾವು ಅಧಿಕಾರಕ್ಕೆ ಬಂದ ನಂತರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು
ವಾಪಾಸ್ ನೀಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಬಾಬಾಸಾಹೇಬದ ಆಶಯದ ವಿರುದ್ಧ ಅಂದಿನ ಪ್ರಧಾನಿ ನೆಹರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿ ಭಾರತದಲ್ಲಿ ಎರಡು ಸಂವಿಧಾನವಿರುವಂತೆ ಮಾಡಿದ್ದರು.

ಭಾರತೀಯ ಜನತಾ ಪಕ್ಷ, ಜನಸಂಘದ ಕಾಲದಿಂದಲೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ವಿರೋಧಿ ಸುತ್ತಾ ಬಂದಿದೆ. ಶ್ಯಾಮ ಪ್ರಸಾದ್ ಮುಖರ್ಜಿಯವರು ಒಂದು ದೇಶದಲ್ಲಿ ಎರಡು ಸಂವಿಧಾನವಿರ ಬಾರದೆಂದು ಹೇಳಿದ್ದರು. ಬಾಬಾಸಾಹೇಬರ ಆಶಯದಂತೆ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಯವರು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ, ಭಾರತದ ಇತಿಹಾಸದಲ್ಲಿ ನಡೆದಿದ್ದ ದೊಡ್ಡ ಪ್ರಮಾದವನ್ನು ಸರಿಪಡಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದಲ್ಲಿ ರಕ್ತಪಾತವಾಗುತ್ತದೆಯೆಂದು ಹೇಳಿದ್ದವರ ಪುಂಗಿ ಬಂದ್ ಆಗಿತ್ತು.

ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ತಮಗಾದ ಹೀನಾಯ ಸೋಲಿನ ಬಗ್ಗೆ ಮಾತನಾಡದ ಕಾಂಗ್ರೆಸ್,
ಭಾರತೀಯ ಜನತಾ ಪಕ್ಷಕ್ಕೆ ಸಿಕ್ಕ ಮತಗಳ ಬಗ್ಗೆ ಮಾತನಾಡುತ್ತಿದೆ. ಸಂವಿಧಾನದ 370ನೇ ವಿಧಿ ರದ್ದತಿಯನ್ನು
ವಿರೋಧಿಸಿ ಅಲ್ಲಿನ ಜನ ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಿದರೆಂದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಚುನಾವಣೆ ಫಲಿತಾಂಶದ ಬಳಿಕ ಹೇಳಿದವು.

ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಸರ್ವೇ ಸಾಮಾನ್ಯ, ಆದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂದರ್ಭದಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ಚುನಾವಣೆಗಳ ಇತಿಹಾಸವನ್ನು ಗಮನಿಸಬೇಕು. 370 ನೇ ವಿಧಿ ಜಾರಿಯಿದ್ದ ಸಂದರ್ಭದಲ್ಲಿ ಅಲ್ಲಿ ನಡೆದ ಚುನಾವಣೆಗಳಲ್ಲಿ ಹಿಂಸಾಚಾರ ತಾಂಡವವಾಡುತ್ತಿತ್ತು. ಅಲ್ಲಿನ ಜನರು ಮನೆಯಿಂದ ಹೊರಬಂದು ಮತಹಾಕಲು ಹೆದರುತ್ತಿದ್ದರು. ಮತಪೆಟ್ಟಿಗಳನ್ನು ಹೊತ್ತೊಯ್ಯಲಾಗುತ್ತಿತ್ತು, ಬೂತ್‌ಗಳನ್ನು ಬಾಂಬುಗಳಿಂದ ಉಡಾಯಿಸಲಾಗುತ್ತಿತ್ತು, ಮತ ಚಲಾಯಿಸಲು ಬಂದವರ ಮೇಲೆ ಭಯೋತ್ಪಾ ದಕರು ಗುಂಡಿನ ದಾಳಿ ನಡೆಸುತ್ತಿದ್ದರು.

ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆಗಳು ಚುನಾವಣೆಗಳನ್ನು ಬಹಿಷ್ಕರಿಸಿ, ಜನರು ಮನೆಯಿಂದ ಆಚೆ
ಬರದಂತೆ ಮಾಡುತ್ತಿದ್ದವು.ಹಲವು ಕ್ಷೇತ್ರಗಳಲ್ಲಿ ಶೇಕಡಾ 10 ರಷ್ಟು ಮಾತ್ರ ಮತದಾನವಾಗಿದ್ದ ಉದಾಹರಣೆಗಳಿವೆ.
ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ಆದರೆ 370 ರ ರದ್ದತಿಯ ಬಳಿಕ ನಡೆದ ಚುನಾವಣೆ
ಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಜನರು ಉತ್ಸಾಹ ದಲ್ಲಿ ಸರತಿಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು
ಚಲಾಯಿಸಿದ್ದಾರೆ. 60 ವರ್ಷ ದಾಟಿದ ಅನೇಕರು ಮೊದಲ ಬಾರಿಗೆ 2024 ರ ಚುನಾವಣೆಯಲ್ಲಿ ಮತ ಹಾಕಿದ್ದಾರೆ.

ವಿಕಲ ಚೇತನರು ಮತ ಚಲಾಯಿಸಿದ್ದಾರೆ. 100 ವರ್ಷ ದಾಟಿದ ವೃದ್ಧ ಮಹಿಳೆಯೊಬ್ಬರು ’ಬಂಡಿಪೋರಾ’ ಕ್ಷೇತ್ರ
ದಲ್ಲಿ ಮತ ಚಲಾವಣೆ ಮಾಡಿದ್ದರು. ಪ್ರಜಾಪ್ರಭುತ್ವದ ಬಗ್ಗೆ ಘಂಟೆಗಟ್ಟಲೆ ಭಾಷಣ ಮಾಡುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕಣಿವೆ ರಾಜ್ಯದ ಹಲವು ಜನರಿಗೆ ಮತದಾನ ಮಾಡುವ ಹಕ್ಕನ್ನು ಏಳು ದಶಕಗಳ ಕಾಲ ಕಿತ್ತುಕೊಂಡಿದ್ದವು. 370 ನೇ ವಿಧಿಯ ರದ್ದತಿಯ ನಂತರ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮರುಕಳಿಸಿದೆ. ಜನರು ಧೈರ್ಯದಿಂದ ಹೊರಬಂದು ತಮ್ಮ ಹಕ್ಕುಗಳನ್ನು ಚಲಾಯಿಸಿzರೆ. ಚುನಾವಣೆ ಫಲಿತಾಂಶ ಏನೇ ಆಗಿರಬಹುದು, ಆದರೆ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಪುನರ್ ನಿರ್ಮಾಣ ಮಾಡಿ ಅಲ್ಲಿನ ಜನ ತಮ್ಮ ಮೂಲಭೂತ ಹಕ್ಕುಗಳನ್ನು ನಿರ್ಭೀತವಾಗಿ ಚಲಾಯಿಸುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು.

ಫಲಿತಾಂಶದಲ್ಲಿ ಕೊಂಚ ಹಿನ್ನಡೆಯಾದಾಕ್ಷಣ ಅದು 370 ನೇ ವಿಧಿಯ ರದ್ದತಿಯ ವಿರುದ್ಧದ ಫಲಿತಾಂಶವೆಂದು ಹೇಳಲಾಗುವುದಿಲ್ಲ, ಹಾಗಾದರೆ ಕಾಶ್ಮೀರಕ್ಕೆ 370 ನೇ ವಿಧಿಯನ್ನು ನೀಡಿದ್ದ ಕಾಂಗ್ರೆಸ್ ಎಷ್ಟು ಬಾರಿ ಕಣಿವೆ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ? ಕಳೆದ ಏಳು ದಶಕದಲ್ಲಿ ಕೇವಲ ಎರಡು ಬಾರಿ ಮಾತ್ರ ಕಾಂಗ್ರೆಸ್ ಅಧಿಕಾರ ಹಿಡಿದಿದೆ, ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿಯಾಗಿದ್ದ ಗುಲಾಮ್ ನಬಿ ಅಜಾದ್ ಕೂಡ ಈಗ ಕಾಂಗ್ರೆಸ್ ಬಿಟ್ಟಿದ್ದಾರೆ.

370 ನೇ ವಿಧಿ ರದ್ದತಿಯ ನಂತರ ಕಾಶ್ಮೀರದಲ್ಲಿ ಅನೇಕ ಬದಲಾವಣೆಗಳಾಗಿವೆ, ಯುವಕರು ನೂರಾರು ‘ಸ್ಟಾರ್ಟ್
ಅಪ್’ಗಳನ್ನು ಪ್ರಾರಂಭಿಸಿದ್ದಾರೆ ಕಲ್ಲು ಹೊಡೆಯುತ್ತಿದ್ದ ಯುವಕರ ಕೈಗಳಿಗೆ ಕಂಪ್ಯೂಟರ್‌ಗಳು ಬಂದಿವೆ. ವಿದೇಶಿ
ಕಂಪನಿಗಳು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. 2019 ರ ಹಿಂದೆ, ಜಮ್ಮು ಮತ್ತು ಕಾಶ್ಮೀರದ
ಜಿ.ಎಸ್.ಡಿ.ಪಿ ಸುಮಾರು 100000 ಕೋಟಿಯಷ್ಟಿತ್ತು, 370 ನೇ ವಿಧಿ ರದ್ದತಿಯ ಬಳಿಕ ಐದು ವರ್ಷದಲ್ಲಿ
264000 ಕೋಟಿಗೆ ತಲುಪಿದೆ, 370 ನೇ ವಿಧಿಯ ರದ್ದತಿಯ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ
ಸಂಖ್ಯೆ ಸುಮಾರು ಒಂದು ಕೋಟಿ ದಾಟಿದೆ. ಕಲ್ಲು ತೂರಾಟಗಳು ಸಂಪೂರ್ಣವಾಗಿ ನಿಂತಿವೆ, ಭಯೋತ್ಪಾದಕ ದಾಳಿಗಳು ಗಣನೀಯವಾಗಿ ಕಡಿಮೆಯಾಗಿವೆ. ಅಲ್ಲಿನ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಭೀತವಾಗಿ ಪಾಲ್ಗೊಂಡು ಮತ ಚಲಾಯಿಸುವುದು ಪ್ರಜಾಪ್ರಭುತ್ವದ ದೊಡ್ಡ ಗೆಲುವು, ಚುನಾವಣಾ ಫಲಿತಾಂಶಗಳು ಹಲವು ಬಾರಿ ಅಭಿವೃದ್ಧಿಯನ್ನೂ ಮೀರಿದ ವಿಷಯಗಳ ಮೇಲೆ ನಿಂತಿರುತ್ತವೆ. ಭಾರತೀಯ ಜನತಾ ಪಕ್ಷ ಶೇಕಡಾ 25.64 ಮತಗಳನ್ನು ಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 25 ಕ್ಷೇತ್ರದಲ್ಲಿ ಜಯ ಗಳಿಸಿದ್ದ ಭಾರತೀಯ ಜನತಾ ಪಕ್ಷ, ಈ ಬಾರಿ ೨೯ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ಕ್ಷೇತ್ರಗಳನ್ನು ಹೆಚ್ಚಿಸಿಕೊಂಡಿದೆ. ಪ್ರಬಲ ವಿರೋಧಪಕ್ಷವಾಗಿ ಭಾರತೀಯ ಜನತಾ ಪಕ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೂರಲಿದೆ.

2009 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದ ಒಮರ್ ಅಬ್ದುಲ್ಲಾ ಬಾಬಾಸಾಹೇಬರು ರಚಿಸಿದ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮುಂದಿಟ್ಟುಕೊಂಡು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ 2024 ರ ಚುನಾವಣೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊಟ್ಟಮೊದಲ ಬಾರಿಗೆ ಬಾಬಾಸಾಹೇಬರ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಾಬಾಸಾಹೇಬರ ಸಂವಿಧಾನಕ್ಕೆ ಬೆಲೆ ನೀಡದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತವೆ.

ತಾವು ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಮತ್ತೊಮ್ಮೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳುವ ಮೂಲಕ ಭಾರತದ ಸಂವಿಧಾನಕ್ಕೆ ಆಗಾಗ ಅವಮಾನ ಮಾಡುತ್ತಾರೆ. ಸಂವಿಧಾನದ ವಿರುದ್ಧ ನಡೆದುಕೊಂಡು ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಲು ಸಂವಿಧಾನವನ್ನೇ ಮುಂದಿಟ್ಟಿಕೊಂಡು ಮಾತನಾಡುವುದು ಎಡಚರರು ಕಾಂಗ್ರೆಸ್ಸಿಗೆ ಕಲಿಸಿಕೊಟ್ಟ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ. ಭಾರತದ ಸಂವಿಧಾನದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಾಮಾಣವಚನ ಸ್ವೀಕರಿಸಿದ್ದು, ಪ್ರಜಾಪ್ರಭುತ್ವದ ದೊಡ್ಡ ಗೆಲುವು. ಚುನಾವಣಾ ಫಲಿತಾಂಶಕ್ಕಿಂತಲೂ, 370 ನೇ ವಿಧಿ ರದ್ದತಿಯ ಬಳಿಕೆ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ
ಮರುಸ್ಥಾಪನೆಯಾದದ್ದು ಸ್ವತಂತ್ರಾನಂತರ ಭಾರತದ ಬಹುದೊಡ್ಡ ಗೆಲುವು. ದೇಶದ ಮೂಲೆ ಮೂಲೆಗಳಲ್ಲಿ
ನಡೆಯುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೀಸಲಾ ತಿಯ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಜಮ್ಮು
ಮತ್ತು ಕಾಶ್ಮೀರದಲ್ಲಿ ಮೀಸಲಾತಿ ವಂಚಿತರಾದವರ ಬಗ್ಗೆ ಮಾತನಾಡುವುದಿಲ್ಲ.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಪರಿಣಾಮ ಅಲ್ಲಿನ ದಲಿತರು ಮೀಸಲಾತಿಯಿಂದ ವಂಚಿತರಾಗಿದ್ದರು, ಅಲ್ಲಿನ ದಲಿತರಿಗೆ ಮೀಸಲಾತಿ ಸಿಗದಂತೆ ಮಾಡಿದ್ದು ನೆಹರು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಪುನಃ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳುವ ಮೂಲಕ, ತನ್ನ ಮೀಸಲಾತಿ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ. ಚುನಾವಣೆಯನ್ನು ಗೆಲ್ಲುವ ಸಲುವಾಗಿ ಇಬ್ಬಗೆಯ ನೀತಿಗಳನ್ನು ಪ್ರದರ್ಶಿಸುವುದು ಕಾಂಗ್ರೆಸ್ಸಿನ ನಿತ್ಯಕರ್ಮ, ಒಂದೆಡೆ ಮೀಸಲಾತಿಯ ಬಗ್ಗೆ ಮಾತನಾಡಿ ಮತ್ತೊಂದೆಡೆ ಮೀಸಲಾತಿಯ ವಿರುದ್ಧ ಮಾತನಾಡುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಏಳು ಮೀಸಲು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಿದೆ, 370 ನೆ ವಿಧಿ ರದ್ದತಿಯ ಬಳಿಕೆ ಅಲ್ಲಿನ ದಲಿತರಿಗೆ ಸಿಗಬೇಕಾದಂತಹ ನ್ಯಾಯ ಸಿಕ್ಕಿದೆ. ದೇಶದ ಇತರ ರಾಜ್ಯಗಳಂತೆ ಕಣಿವೆ ರಾಜ್ಯದ ದಲಿತರಿಗೂ ಮೀಸಲಾತಿ ಸಿಗಲಿದೆ. ದೇಶದ ವಿವಿಧ ಬಾಗಗಳಲ್ಲಿ ಮೀಸಲಾತಿಯ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಕಾಶ್ಮೀರ ಚುನಾವಣ ಪ್ರಚಾರದಲ್ಲಿ ಮಾತ್ರ ಮೀಸಲಾತಿಯ ಬಗ್ಗೆ ಮಾತನಾಡುವುದಿಲ್ಲ.

ಕಾಶ್ಮೀರದಲ್ಲಿರುವ ಬಹುಸಂಖ್ಯಾತ ಮುಸ್ಲಿಂ ಸಮುದಾಯವನ್ನು ಓಲೈಸುವ ಸಲುವಾಗಿ, ಅಲ್ಲಿನ ದಲಿತರ
ಮೀಸಲಾತಿಯ ಬಗ್ಗೆ ರಾಹುಲ್ ಗಾಂಧಿ ತುಟಿ ಬಿಚ್ಚುವುದಿಲ್ಲ. ವಿಶೇಷ ಸ್ಥಾನಮಾನದ ನೆಪದಲ್ಲಿ ಕಾಶ್ಮೀರವನ್ನು
ಅಬ್ದು ಮತ್ತು ಮುಫ್ತಿ ಕುಟುಂಬಗಳು ಏಳು ದಶಕಗಳ ಕಾಲ ಲೂಟಿ ಮಾಡಿದ್ದವು, ತಮ್ಮ ಮಕ್ಕಳನ್ನು ವಿದೇಶಕ್ಕೆ
ವ್ಯಾಸಂಗಕ್ಕೆ ಕಳುಹಿಸಿ ಕಾಶ್ಮೀರದ ಮಕ್ಕಳ ಕೈಗೆ ಕಲ್ಲು ನೀಡಿ ದ್ದರು. ಪಂಜರದೊಳಗಿನ ಹಕ್ಕಿಗಳಂತೆ ಕಾಶ್ಮೀರದ ಜನರನ್ನು ಇರಿಸಲಾಗಿತ್ತು, ಅಲ್ಲಿನ ಜನರಿಗೆ ಹೊರಜಗತ್ತಿನ ಜನರೊಂ ದಿಗಿನ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಭಾರತದ ಇತರ ರಾಜ್ಯಗಳಿಗೆ ಅನ್ವಯವಾಗುತ್ತಿದ್ದ ಅನೇಕ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಅನೇಕ ತೆರಿಗೆಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ.

ಆದರೆ ಕಾಶ್ಮೀರದ ಭದ್ರತೆಗಾಗಿ ಪ್ರತಿವರ್ಷ ಸಾವಿರಾರು ಕೋಟಿ ಹಣವನ್ನು ಕೇಂದ್ರ ಸರಕಾರ ಎತ್ತಿಡಬೇಕಿತ್ತು. 370ನೇ ವಿಧಿಯೆಂಬ ಪಂಜರದಿಂದ ಹೊರಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಅಲ್ಲಿನ ಜನರು ನಿರ್ಭೀತಿಯಿಂದ ಹೊರಬಂದು ಮತ ಹಾಕಿ ತಮ್ಮ ಹಕ್ಕನ್ನು ಚಲಾಯಿಸಿರುವ ಪ್ರಜಾಪ್ರಭುತ್ವದ ಗೆಲುವನ್ನು ಭಾರತೀಯರು ಸಂಭ್ರಮಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಶಾಂತಿಯುತ, ನಿರ್ಭೀತ ಮತದಾನ ಬಾಬಾಸಾಹೇಬರ ಸಂವಿಧಾನ ಮೂಲ ಆಶಯಗಳಿಗೆ ಸಂದ ಜಯ.

ಇದನ್ನೂ ಓದಿ: Mohan Vishwa Column: ಅಂದು ಅಣುಬಾಂಬ್‌ ಇಂದು ಪೇಜರ್‌