Tuesday, 10th December 2024

Mohan Vishwa Column: ಕಾಶ್ಮೀರಿಗಳ ಆಸ್ತಿ ಲೂಟಿ ಮಾಡಿದ್ದು ಯಾರು ?

ವೀಕೆಂಡ್‌ ವಿತ್‌ ಮೋಹನ್‌

ವೀಕೆಂಡ್‌ ವಿತ್‌ ಮೋಹನ್

ಮೋಹನ್‌ ವಿಶ್ವ

ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಬಾಬಾಸಾಹೇಬರ ಇಚ್ಚೆಗೆ ವಿರುದ್ಧವಾಗಿ ಪರಿಚ್ಛೇದ 370 ನ್ನು ಜಾರಿಗೆ ತಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಒಂದು ದೇಶದಲ್ಲಿ ಎರಡೆರಡು ಸಂವಿಧಾನ ಇರಬಾರದೆಂದು ಹಲವು ನಾಯಕರು ನೆಹರೂವಿಗೆ ಹೇಳಿದ್ದರೂ, ಕಾಂಗ್ರೆಸ್ ಪಕ್ಷ ಅಬ್ದುನನ್ನು ಓಲೈಸಲು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದಿಂದ ಅಲ್ಲಿನ ನಾಗರೀಕರಿಗೆ ಯಾವ ಅನುಕೂಲವೂ ಆಗಲಿಲ್ಲ. ಬದಲಾಗಿ ವಿಶೇಷ ಸ್ಥಾನಮಾನವನ್ನೇ ಬಳಸಿಕೊಂಡು ಸಾವಿರಾರು ಕೋಟಿಯಷ್ಟು ಸರಕಾರಿ ಜಾಗಗಳನ್ನು ಅಬ್ದು ಮತ್ತು ಮುಫ್ತಿ ಕುಟುಂಬಗಳು ಕಬ್ಜ ಮಾಡಿಕೊಂಡವು.

೨೦೧೯ ರಲ್ಲಿ ಭಾರತೀಯ ಜನತಾ ಪಕ್ಷ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕುವ ಮೂಲಕ ಬಾಬಾಸಾಹೇಬರ ಮೂಲ ಆಶಯವನ್ನು ಸಾಕಾರಗೊಳಿಸಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ ಶಾಂತಿ ಮರುಸ್ಥಾಪಿಸುವ
ಮೂಲಕ ವಿವಿಧ ಕಂಪನಿಗಳು ಕಣಿವೆ ರಾಜ್ಯದಲ್ಲಿ ವ್ಯವಹಾರ ಪ್ರಾರಂಭಿಸುವಂತೆ ಮಾಡಲಾಯಿತು. ಸೈನಿಕರ ವಾಹನಗಳಿಗೆ ಕಲ್ಲು ತೂರುತ್ತಿದ್ದ ಯುವಕರ ಕೈಗೆ ಕೆಲಸ ನೀಡಲಾಯಿತು.

ಶ್ರೀನಗರದಲ್ಲಿ ಜಿ-20 ಸಮ್ಮೇಳನ ನಡೆಸಲಾಯಿತು, ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು.
ವಿಶೇಷ ಸ್ಥಾನಮಾನ ರದ್ಧತಿಯಾದ ನಂತರ ಮೊದಲ ಬಾರಿಗೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಚುನಾವಣೆ ಎದುರಿಸುತ್ತಿದೆ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಪಿ.ಡಿ.ಪಿ ಮತ್ತು ನ್ಯಾಷನಲ್ ಕಾನರೆ ಪಕ್ಷಗಳು ಚುನಾವಣಾ ಕಣದಲ್ಲಿವೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಅಧಿಕಾರಕ್ಕೆ ಬಂದರೆ ವಿಶೇಷ ಸ್ಥಾನಮಾನ ವನ್ನು ಕಣಿವೆ ರಾಜ್ಯಕ್ಕೆ ಮತ್ತೊಮ್ಮೆ ನೀಡುವುದಾಗಿ ಹೇಳಿದ್ದಾರೆ.

ಬಾಬಾ ಸಾಹೇಬರ ಸಂವಿಧಾನವನ್ನು ಕೈಯಲ್ಲಿ ಹಿಡಿದು ಭಾಷಣ ಮಾಡುವ ರಾಹುಲ, ಬಾಬಾಸಾಹೇಬರ ಇಚ್ಚೆಗೆ ವಿರುದ್ಧ ವಾಗಿ ಕಾಶ್ಮೀರಕ್ಕೆ ಬೇರೆಯದ್ದೇ ಸಂವಿಧಾನವನ್ನು ಮತ್ತೊಮ್ಮೆ ನೀಡುವುದಾಗಿ ಹೇಳುತ್ತಾರೆ. ಕಾಶ್ಮೀರಿಗಳ ಹಕ್ಕನ್ನು ಕಿತ್ತುಕೊಳ್ಳ ಲಾಗಿದೆ ಎಂದು ಹೇಳುತ್ತಾರೆ. ಕಾಶ್ಮೀರಿಗಳಿಗೆ ಸೇರಿದ ಆಸ್ತಿಯನ್ನು ಕಿತ್ತುಕೊಳ್ಳಲಾಗಿದೆ ಎಂಬ ಸುಳ್ಳನ್ನು ಹೇಳುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಬಳಸಿಕೊಂಡು ಅಲ್ಲಿನ ಜನರಿಗೆ ಸೇರಿದ ಆಸ್ತಿಯನ್ನು
ಲಪಟಾಯಿಸಿದ್ದು ತಮ್ಮದೇ ಪಕ್ಷದ ನಾಯಕರು, ಅಬ್ದುನ ಕುಟುಂಬದವರು ಮತ್ತು ಮುಫ್ತಿ ಕುಟುಂಬದವರು, ಎಂಬುದನ್ನು ರಾಹುಲ್ ಮರೆತಂತಿದೆ. ದಶಕಗಳಿಂದ ರಾಜ್ಯವನ್ನಾಳಿದ ಮೂರು ಪಕ್ಷದವರು ವಿಶೇಷ ಸ್ಥಾನಮಾನ ವನ್ನೇ ಬಳಸಿಕೊಂಡು ಲಪಟಾಯಿಸಿದ ಭೂಮಿಯ ಬೆಲೆ ಸಾವಿರಾರು ಕೋಟಿಯಷ್ಟಿದೆ.

ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ವಿದೇಶಕ್ಕೆ ಕಳುಹಿಸಿ. ಕಣಿವೆ ರಾಜ್ಯದ ಬಡ ಮಕ್ಕಳಿಗೆ ಬಂದೂಕು ನೀಡಲು ಕುಮ್ಮಕ್ಕು ನೀಡುತ್ತಿದ್ದರು. ಕಾಶ್ಮೀರಿ ಪ್ರತ್ಯೇಕತಾವಾದಿಗಳ ಜೊತೆ ಕೈಜೋಡಿಸಿ ತಾವು ಲಪಟಾಯಿಸಿದ ಸರಕಾರೀ ಭೂಮಿಯ ಕಾವಲುಗಾರರನ್ನಾಗಿಸಿಕೊಂಡಿದ್ದರು, ಜಮ್ಮುವಿನಲ್ಲಿ ‘ರೋಷನಿ ಕಾಯ್ದೆ’ ಅಡಿಯಲ್ಲಿ ಸಾವಿರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಮೂರೂ ಪಕ್ಷದವರು ಲಪಟಾಯಿಸಿದ್ದರು. 2001 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಫಾರೂಕ್ ಅಬ್ದು ನೇತೃತ್ವದ ಸರಕಾರ ಒಂದು ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯನ್ವಯ ಅಕ್ರಮವಾಗಿ ಸರಕಾರಿ ಜಾಗವನ್ನು ಆಕ್ರಮಿಸಿಕೊಂಡಿರುವ ನಾಗರೀಕರು ಸರಕಾರಕ್ಕೆ ಇಂತಿಷ್ಟು ಹಣವನ್ನು ಪಾವತಿ ಮಾಡಿ ಸಕ್ರಮ ಮಾಡಿಕೊಳ್ಳಬಹುದಾಗಿತ್ತು.

ಎಷ್ಟು ಹಣವನ್ನು ಕಟ್ಟಬೇಕೆಂಬುದನ್ನು ಅಂದಿನ ಸರಕಾರವು ನಿರ್ಧರಿಸಿತ್ತು, ಹಣದ ಜೊತೆಗೆ ಒಂದಷ್ಟು ನಿಯಮಾ ವಳಿಗಳನ್ನು ತಂದಿತ್ತು. ಈ ನಿಯಮದಡಿಯಲ್ಲಿನ ಅರ್ಹರು ಸರಕಾರಕ್ಕೆ ಅರ್ಜಿ ಹಾಕಿ ಸರಕಾರವು ನಿಗದಿ ಪಡಿಸಿದ ಶುಲ್ಕವನ್ನು ಕಟ್ಟಿ ಭೂಮಿ ಪಡೆಯಬಹುದಿತ್ತು. ಫಾರೂಕ್ ಅಬ್ದು ಸರಕಾರದಲ್ಲಿ ತಂದಂತಹ ಈ ಕಾನೂನಿನನ್ವಯ, 1990ರ ವರೆಗೂ ಸರಕಾರೀ ಜಾಗಗಳನ್ನು ಆಕ್ರಮಿಸಿಕೊಂಡಿರುವವರು ತಮ್ಮ ಜಾಗವನ್ನು ಸಕ್ರಮ ಮಾಡಿಕೊಳ್ಳ ಬಹುದಿತ್ತು. 1991 ರಿಂದ 2001 ರ ವರೆಗಿನ ಅಕ್ರಮವನ್ನು ಸಕ್ರಮ ಮಾಡಲು ಅವಕಾಶ ವಿರಲಿಲ್ಲ.

೨೦೦೧ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್‌ಶಕ್ತಿಯ ಬರವಿತ್ತು. ಈ ಬರವನ್ನು ನೀಗಿಸಲು ಬೃಹತ್ ವಿದ್ಯುತ್
ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಈ ಬೃಹತ್ ಯೋಜನೆಗಳಿಗೆ ಬೇಕಾದ ಹಣ ಹೊಂದಿಸಲು 2001ರಲ್ಲಿ ಅಕ್ರಮ ಸಕ್ರಮ ಕಾಯ್ದೆಯನ್ನು ಜಾರಿಗೆ ತರಲಾಯಿತು. ವಿದ್ಯುತ್ ಬರ ನೀಗಿಸುವ ಸಲುವಾಗಿ ತಂದಂತಹ ಕಾನೂನಾ ಗಿದ್ದರಿಂದ ಇದನ್ನು ರೋಷನಿ ಕಾಯ್ದೆ ಎಂದು ಕರೆಯಲಾಯಿತು. ಈ ಕಾಯ್ದೆಯಿಂದ ಸುಮಾರು 25000 ಕೋಟಿ ರು.ರಷ್ಟು ಆದಾಯವನ್ನು ಫಾರೂಕ್ ಅಬ್ದು ನೇತೃತ್ವದ ಸರಕಾರ ನಿರೀಕ್ಷಿಸಿತ್ತು. ಈ ಕಾಯ್ದೆಯಡಿ ಯಲ್ಲಿ ಅಂದಾಜು ಒಂದು ಲಕ್ಷ ಹೆಕ್ಟೇರ್ ಭೂಮಿಯನ್ನು ಸಕ್ರಮ ಮಾಡಲು ನಿರ್ಧರಿಸಲಾಗಿತ್ತು. ಒಂದು ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು 75000 ಹೆಕ್ಟೇರ್‌ನಷ್ಟು ಭೂಮಿಯನ್ನು ಜಮ್ಮುವಿನಲ್ಲಿ, 25000 ಹೆಕ್ಟೇರ್ ಭೂಮಿ ಯನ್ನು ಕಾಶ್ಮೀರದಲ್ಲಿ ಸಕ್ರಮ ಮಾಡಲು ಯೋಜಿಸಲಾಗಿತ್ತು.

ಅಂದುಕೊಂಡಂತೆ ಆಗಲಿಲ್ಲ, ಕೇವಲ 30000ಹೆಕ್ಟೇರ್ ಭೂಮಿಯ ಒಡೆತನವನ್ನು ಮಾತ್ರ ವರ್ಗಾವಣೆ ಮಾಡಲು
ಅನುಮೋದಿಸಲಾಯಿತು. ಅನುಮೋದನೆ ದೊರೆತದ್ದು 30000 ಹೆಕ್ಟೇರಿಗೆ, ಆದರೆ ನಿಜವಾಗಿಯೂ ಭೂಮಿಯ ಒಡೆತನದ ವರ್ಗಾವಣೆಯಾದದ್ದು ಸುಮಾರು 17000 ಹೆಕ್ಟೇರ್ ಮಾತ್ರ. ಈ 17000 ಹೆಕ್ಟೇರ್‌ನಲ್ಲಿ ಶೇ.90 ಕ್ಕಿಂತಲೂ ಹೆಚ್ಚಿನ ಭಾಗ ಜಮ್ಮುವಿನಲ್ಲಿರುವ ಭೂಮಿಯಾಗಿತ್ತು. ತಾವು ಅಂದುಕೊಂಡಂತೆ ಮಾಡಲಾಗುತ್ತಿಲ್ಲ ವೆಂದು ತಿಳಿದ ಫಾರೂಕ್ ಅಬ್ದು ನೇತೃತ್ವದ ಸರಕಾರ, ತಾನು ನಿರೀಕ್ಷಿಸುತ್ತಿದ್ದಂತಹ 25000 ಕೋಟಿಯ ಶುಲ್ಕದ ಗುರಿಯನ್ನು ಕೇವಲ 317 ಕೋಟಿಗೆ ಇಳಿಸಿತು, ಆದರೆ ಅಷ್ಟು ಹಣವೂ ಬರಲಿಲ್ಲ ಕೊನೆಗೆ ಕೇವಲ 76 ಕೋಟಿ ಶುಲ್ಕ ಮಾತ್ರ ಸರಕಾರಕ್ಕೆ ಬಂದಿತ್ತು.

ಕೇವಲ 76 ಕೋಟಿಗೆ ಸುಮಾರು 17000ಹೆಕ್ಟೇರ್ ಭೂಮಿಯನ್ನು ಸಕ್ರಮ ಮಾಡಲಾಗಿತ್ತು. ಈ ಕಾಯ್ದೆಯನ್ವಯ ಹಂಚಿಕೆಯಾದ ಭೂಮಿಯ ಒಡೆತನದ ಮೇಲೆ ಎರಡು ರೀತಿಯ ಅನುಮಾನಗಳು ಕಾಡತೊಡಗಿದ್ದವು. ಹಿಂದೂಗಳು ಹೆಚ್ಚಿರುವ ಜಮ್ಮುವಿನಲ್ಲಿ ಯಾಕೆ ಅಷ್ಟೊಂದು ಭೂಮಿಯನ್ನು ಸಕ್ರಮ ಮಾಡಲಾಯಿತು? ಕಾಶ್ಮೀರದಲ್ಲಿ ಕೇವಲ ಶೇ.10 ಭೂಮಿಯಾದರೆ, ಜಮ್ಮುವಿನಲ್ಲಿ ಶೇ.90 ಭೂಮಿಯನ್ನು ಸಕ್ರಮ ಮಾಡಲಾಗಿತ್ತು. ಜಮ್ಮುವಿನಲ್ಲಿ ಹಂಚಿಕೆ ಯಾದಂತಹ ಭೂಮಿಯನ್ನು ಅತೀ ಹೆಚ್ಚು ಸಕ್ರಮ ಮಾಡಿಕೊಂಡಂತಹ ಜನರ ಧರ್ಮ ಯಾವುದು? ಜಮ್ಮುವಿನ ದೊಡ್ಡ ಭೂಭಾಗವನ್ನು ಕಾಶ್ಮೀರ ದಂತೆ ಮುಸಲ್ಮಾನ್ ಧರ್ಮಕ್ಕೆ ಸೀಮಿತ ಮಾಡುವ ಹುನ್ನಾರ ನಡೆದಿತ್ತೇ? ಈ ಕಾಯ್ದೆಯಿಂದ ಜಮ್ಮುವಿನಲ್ಲಿ ನಡೆದಿರುವ ಸಾವಿರಾರುಹೆಕ್ಟೇರ್ ಭೂಮಿಯ ಮಾಲೀಕತ್ವದ ವರ್ಗಾವಣೆಯನ್ನು ಗಮನಿಸಿದರೆ ಕಾಶ್ಮೀರಿ ಪ್ರತ್ಯೇಕತಾವಾದಿಗಳು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದೊಂದಿಗೆ ಸೇರಿಸುವ ಹುನ್ನಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿತ್ತು.

ಫಾರೂಕ್ ಅಬ್ದು ನಂತರ ಬಂದಂತಹ ‘ಮುಫ್ತಿ ಮೋಹಮ್ಮದ್ ಸಯೀದ್’ ಸರಕಾರ 2005ರಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ 1990ರ ವರೆಗೆ ಇದ್ದಂತಹ ನಿಬಂಧನೆಯನ್ನು ಸಡಿಲಗೊಳಿಸಿ 2004 ರವರೆಗೂ ವಿಸ್ತರಿಸಿತು. ಈ ತಿದ್ದುಪಡಿಯಿಂದ 1990 ಹಾಗೂ 2004ರ ನಡುವೆ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಂತಹ ಸರಕಾರಿ ಜಾಗಗಳನ್ನು ಸಕ್ರಮ ಮಾಡಲಾಯಿತು. ಈ ತಿದ್ದುಪಡಿಯಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ 2001 ರಲ್ಲಿ ತಂದಂತಹ ಕಾಯ್ದೆಯಲ್ಲಿ ಒಮ್ಮೆ ಹಳೆಯ ಅಕ್ರಮಗಳನ್ನು ಸಕ್ರಮಗೊಳಿಸಲಾಯಿತು. ಆದರೆ ಕೇವಲ ಮೂರು ವರ್ಷಗಳ ನಂತರ ತಿದ್ದುಪಡಿಯ ಮೂಲಕ 2001 ರಿಂದ 2004ರ ನಡುವೆ ಅಕ್ರಮ ನಡೆಯದಂತೆ ತಡೆಯುವ ಬದಲು, ಮತ್ತಷ್ಟು ಅಕ್ರಮಗಳನ್ನು ಪೋಷಿಸಲಾಗಿತ್ತು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದರ ಪರಿಣಾಮ ಇವರನ್ನು ಕೇಳುವವರು ಇರಲಿಲ್ಲ, ಅವರದ್ದೇ ಸ್ವಂತ ಸಂವಿಧಾನದಂತಿದ್ದ ನೆಹರು ನೀಡಿದ್ದ ಪರಿಚ್ಛೇದ 370 ರ ಅಡಿಯಲ್ಲಿ ಇಷ್ಟೆ ಅಕ್ರಮಗಳನ್ನು ಮಾಡಲಾ ಗಿತ್ತು. ಅಕ್ರಮದ ಕಥೆ ಇಲ್ಲಿಗೂ ಮುಗಿಯಲಿಲ್ಲ ಕಾಂಗ್ರೆಸ್ ಪೋಷಿತ ಸರಕಾರವನ್ನು ನಡೆಸುತ್ತಿದ್ದ ಗುಲಾಮ್ ನಭಿ ಅಜಾದ್ 2007ರಲ್ಲಿ ಮತ್ತೊಂದು ತಿದ್ದುಪಡಿಯನ್ನು ಮಾಡಿ ದಿನಾಂಕವನ್ನು 2004 ರಿಂದ 2007ಕ್ಕೆ ಏರಿಸಿದ್ದರು. ಈ ತಿದ್ದುಪಡಿಯ ಪರಿಣಾಮವಾಗಿ ಮತ್ತೆ ಮೂರು ವರ್ಷದದ ಅಕ್ರಮಗಳನ್ನು ಸಕ್ರಮಗೊಳಿಸಲಾಯಿತು.

2014ರಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯನೀಡಿದ ವರದಿಯಲ್ಲಿ, ರೋಷನಿ ಕಾಯ್ದೆ
ಯಡಿಯಲ್ಲಿ ನಡೆದಂತಹ ಅಕ್ರಮಗಳನ್ನು ಪರಿಶೀಲಿಸಿ‌ ಅಂದಾಜು 25000 ಕೋಟಿ ರುಪಾಯಿಯ ಹಗರಣವನ್ನು
ಹೇಳಲಾಗಿತ್ತು. ಈ ಕಾಯ್ದೆಯಡಿಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು, ಸರಕಾರಿ ಜಮೀನನ್ನು ಅಕ್ರಮ ಮಾಡುವ ಸಲುವಾಗಿ ಸಾವಿರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಹಲವು ರಾಜಕೀಯ ನಾಯಕರುಗಳಿಗೆ, ಸರಕಾರಿ ಆಡಳಿತಾಧಿಕಾರಿಗಳಿಗೆ, ಸರಕಾರಿ ನೌಕರರಿಗೆ, ಬಂಡವಾಳಶಾಹಿಗಳಿಗೆ ನೀಡಲಾಗಿದೆ ಯೆಂದು ವರದಿಯಲ್ಲಿ ಉಖಿಸುವ ಮೂಲಕ ದೊಡ್ಡದೊಂದು ಹಗರಣವನ್ನು ಬಯಲಿಗೆಳೆಯಲಾಯಿತು. ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋದರೆ ಬಹುತೇಕರು ಗುಲ್ ಮಾರ್ಗ್‌ಗೆ ಹೋಗಿರುತ್ತೀರಿ, ಈ ಕಣಿವೆಯಲ್ಲಿರುವ ಸಾವಿರಾರು ಎಕರೆಯ ಸರಕಾರಿ ಜಾಗವನ್ನು ಕೆಲವು ಐಎಎಸ್ ಅಽಕಾರಿಗಳು ತಮ್ಮ ಪ್ರಭಾವ ಬಳಸಿ ಸರಕಾರ ವಿಧಿಸಿದ್ದಂತಹ ಮಾನದಂಡವನ್ನು ಪಾಲಿಸದೆ ಈ ಕಾಯ್ದೆಯಡಿಯಲ್ಲಿ ಹಲವರಿಗೆ ಸಕ್ರಮ ಮಾಡಿಕೊಡಿಸಿರುವ ಬಗ್ಗೆ ದೂರು ದಾಖಲಾಯಿತು.

ಗುಲ್ ಮಾರ್ಗ್ ಹಗರಣವೆಂದು ಕುಖ್ಯಾತಿ ಪಡೆದಿರುವ ಈ ಹಗರಣದಲ್ಲಿ ಸರಕಾರಿ ಅಧಿಕಾರಿ ಬಸೀರ್ ಅಹ್ಮದ್ ಖಾನ್ ಹೆಸರು ಕೇಳಿ ಬಂತು. ಈತನ ಅವಧಿಯಲ್ಲಿ ಗುಲ್ ಮಾರ್ಗ್ ಅಭಿವೃದ್ಧಿ ಪ್ರಾಧಿಕಾರ ದಡಿಯಲ್ಲಿ ಹಲವು ಪ್ರಭಾವಿ ಗಳಿಗೆ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸಕ್ರಮ ಮಾಡಲಾಗಿತ್ತು.

ತಮ್ಮದೇ ವಿಶೇಷ ಸಂವಿಧಾನದಡಿಯಲ್ಲಿ ಅಧಿಕಾರ ನಡೆಸಿಕೊಂಡು ಬಂದಂತಹ ಅಬ್ದು ಹಾಗು ಮುಫ್ತಿಯ ಸಂತಾನ ಸಾವಿರಾರುಹೆಕ್ಟೇರ್ ಸರಕಾರಿ ಭೂಬಾಗವನ್ನು ಕೊಳ್ಳೆಹೊಡೆಡಿದ್ದರು. ಈ ಕಾಯ್ದೆಯಡಿಯಲ್ಲಿ ಹಂಚಿಕೆಯಾಗಿರುವ ಬಹುಪಾಲು ಭೂಮಿಯನ್ನು ಕೊಳ್ಳೆ ಹೊಡೆದವರು ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನರೆ ಪಕ್ಷದ ನಾಯಕರು ಹಾಗೂ ಅಧಿಕಾರಿಗಳು. 25000 ಕೋಟಿಯ ನಿರೀಕ್ಷೆಯಲ್ಲಿದ್ದ ಸರಕಾರವು ಕೇವಲ 76 ಕೋಟಿ ರು.ಯನ್ನು ಮಾತ್ರ ಗಳಿಸುತ್ತದೆಯೆಂದರೆ ಅಲ್ಲಿ ನಡೆದಿರುವ ಅಕ್ರಮದ ಪರಮಾವಧಿಯನ್ನು ಸಾಮಾನ್ಯ ನಾಗರೀಕನೂ ಅರ್ಥ ಮಾಡಿಕೊಳ್ಳಬಹುದು.

ಕಾಶ್ಮೀರದಲ್ಲಿನ ಹಿಂದುಗಳನ್ನು ಓಡಿಸಿದಷ್ಟು ಸುಲಭವಾಗಿ ಜಮ್ಮುವಿನ ಹಿಂದುಗಳನ್ನು ಓಡಿಸಲು ಸಾಧ್ಯವಿಲ್ಲ ವೆಂದು ಅರಿತ ಪ್ರತ್ಯೇಕತಾವಾದಿಗಳು ಜಮ್ಮುವಿನಲ್ಲಿ ರೋಷನಿ ಕಾಯ್ದೆಯ ಮೂಲಕ ಲ್ಯಾಂಡ್ ಜಿಹಾದ್ ನಡೆಸಿದ್ದರು. ಹಿಂದುಗಳಿರುವ ಪ್ರದೇಶಗಳಲ್ಲಿ ಹೆಚ್ಚು ಮುಸಲ್ಮಾನರಿಗೆ, ಅಕ್ರಮ ಜಾಗಗಳನ್ನು ಸಕ್ರಮ ಮಾಡಿಸಿ ಕೊಟ್ಟರೆ ಮುಸಲ್ಮಾನರ ಪ್ರಾಬಲ್ಯ ಹೆಚ್ಚಾಗಿ ಜಮ್ಮುವುನಲ್ಲಿರುವ ಹಿಂದುಗಳನ್ನು ಅಲ್ಪಸಂಖ್ಯಾತರನ್ನಾಗಿಸಿ ಬಿಡಬಹುದೆಂಬ ದುರಾಲೋಚನೆ ಪ್ರತ್ಯೇಕತಾವಾದಿಗಳದ್ದಾಗಿತ್ತು. ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಅಲ್ಲಿನ ಜನರಿಗೆ ಸೇರಿದ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ದಶಕಗಳಿಂದ ಲೂಟಿ ಮಾಡಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳೆಂಬ ಸತ್ಯವನ್ನು ಹೇಳಬೇಕು.