Thursday, 12th December 2024

ಅಷ್ಟಕ್ಕೂ ಮೊಯ್ಲಿಯವರಿಗೆ ಜ್ಞಾನಪೀಠ ಸಿಕ್ರೇನು ಪ್ರಾಬ್ಲಮ್ಮು ?

ಶಿಶಿರ ಕಾಲ

ಶಿಶಿರ‍್ ಹೆಗಡೆ

shishirh@gmail.com

ಕರಾವಳಿಯಲ್ಲಿ, ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ಒಂದೇ ಸಮನೆ ನೆಲ ಕಪ್ಪೆಗಳ ಆರ್ಭಟ ಶುರುವಾಗುತ್ತದೆ. ಗೊಯ್ಕ ಗೊಯ್ಕ ಎನ್ನುವ ಕಾರಣಕ್ಕಾಗಿಯೇ ಇರಬೇಕು, ನಮ್ಮ ಕಡೆ ಅದಕ್ಕೆ ಗೋಂಕರ ಕಪ್ಪೆ ಎಂದೇ ಹೆಸರು. ಈ ಗೋಂಕರ ಕಪ್ಪೆಯ ಕೂಗಿನಿಂದಲೇ ಮಳೆಗಾಲ ಆರಂಭವಾಗುತ್ತದೆಯೇನೋ ಎಂಬಂತೆ. ಪ್ರತಿ ವರ್ಷ ಒಂದು ನಾಲ್ಕು ದಿನ ಇದರ ಗಲಾಟೆ ಜೋರು.

ಆಮೇಲೆ ಅಷ್ಟಕ್ಕಷ್ಟೆ. ಈ ರೀತಿಯ ವಾರ್ಷಿಕ ಪ್ರಕ್ರಿಯೆಯನ್ನು ಗ್ರಹಿಸುವುದು ಮತ್ತು ಆ ಮೂಲಕ ಜೀವ ಜಗತ್ತು ಒಂದು ಹೊಸ ಮೂಡ್‌ಗೆ ಸ್ವಿಚ್ ಆಗುವುದು ಪ್ರಕೃತಿ ಯನ್ನು ಸೂಕ್ಷವಾಗಿ ನೋಡುವವರಿಗೆ ಪ್ರತಿವರ್ಷ ಬೆರಗನ್ನು ಹುಟ್ಟಿಸುತ್ತದೆ. ಈ ರೀತಿ ಕಾಲಕ್ಕೆ ತಕ್ಕಂತೆ ಅದೆಷ್ಟೋ ವಾರ್ಷಿಕ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಇನ್ನು ಸಮಾಜದಲ್ಲಿ ಕೂಡ ಹಾಗೆಯೆ. ಕೆಲವೊಂದು ವಿಚಾರಗಳು ವರ್ಷದಲ್ಲಿ ಒಂದಷ್ಟು ದಿನ ಅಥವಾ ಒಂದು ಸೀಮಿತ ಕಾಲದಲ್ಲಿ ಸದ್ದು ಮಾಡಿ ಆಮೇಲೆ ಜನಮಾನಸದಿಂದ ನೇಪಥ್ಯಕ್ಕೆ ಸರಿದುಬಿಡುವಂಥವು. ಚುನಾವಣೆ ಐದು ವರ್ಷಕ್ಕೊಮ್ಮೆ, ಒಲಿಂಪಿಕ್, ವರ್ಲ್ಡ್‌ಕಪ್‌ಗಳು – ಇವೆಲ್ಲ ನಾಲ್ಕು ವರ್ಷಕ್ಕೊಮ್ಮೆ.
ಐಪಿಎಲ್, ವ್ಯಾಲಂಟೈನ್ ಡೇ, ಅಮ್ಮ, ಅಪ್ಪ, ಅಜ್ಜ, ಮುತ್ತಜ್ಜರ ದಿನ ಇವೆಲ್ಲ ವಾರ್ಷಿಕ. ಇದೆಲ್ಲದರ ಜತೆ ವಾರ್ಷಿಕವಾಗಿ ಬರುವವು ಸ್ವಾತಂತ್ರ್ಯೋತ್ಸವ, ಗ್ರಾಮಿ,
ಆಸ್ಕರ್, eನಪೀಠ, ನೊಬೆಲ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಹೀಗೆ ಹತ್ತಾರು.

ಇವೆಲ್ಲವೂ ವರ್ಷಕ್ಕೊಮ್ಮೆ ಬರಲೇ ಬೇಕು, ಒಂದಿಷ್ಟು ಗಲಾಟೆ, ವಿವಾದಗಳು, ಒಂದಿಷ್ಟು ಖುಷಿ, ಒಂದಿಷ್ಟು ಬೇಸರ, ಜಾಗ್ರತೆ, ಚರ್ಚೆ ಹೀಗೆ ಬೇರೆ ಬೇರೆ ತೆರನಾದ ಸುದ್ದಿಗಳನ್ನು ಮಾಡಿ ಆಮೇಲೆ ನೇಪಥ್ಯಕ್ಕೆ ಸರಿಯಬೇಕು. ಇವೆಲ್ಲವೂ ನಮ್ಮೂರಿನ ಗೋಂಕರ ಕಪ್ಪೆಯ ಗೋಂಕಾರದಂತೆಯೆ. ಒಂದಿಷ್ಟೇ ಸಮಯದ ಆವಾಜು – ಆಮೇಲೆ ಸ್ತಬ್ಧ. ಇವೆಲ್ಲದರಲ್ಲಿ ವಾರ್ಷಿಕ ಕೊಡಮಾಡುವ ಪ್ರಶಸ್ತಿಗಳು ಹುಟ್ಟಿ ಹಾಕುವ ಚರ್ಚೆಗಳು ಸ್ವಲ್ಪ ಸಮಯ ಎಲ್ಲರ ಗಮನ ಸೆಳೆಯುತ್ತವೆ. ಈಗ ಈ ವಾರ ಮಹಾಕಾವ್ಯ ರಚನೆಕಾರ ವೀರಪ್ಪ ಮೊಯ್ಲಿಯವರ ಹೆಸರು ಜ್ಞಾನಪೀಠ ಪ್ರಶಸ್ತಿಗೆ ಶಿಫಾರಸ್ಸು ಆದದ್ದನ್ನು, ಆಮೇಲಿನ ಚರ್ಚೆ ಇವೆಲ್ಲವನ್ನೂ ಈ ಸಮಯದಲ್ಲಿ ನೆನೆಸಿಕೊಳ್ಳಲೇ ಬೇಕು.

ಅದೆಲ್ಲಕ್ಕಿಂತ ಮೊದಲು ಭೈರಪ್ಪನವರಿಗೆ ಸರಸ್ವತಿ ಸಮ್ಮಾನ ಬರುವಲ್ಲಿಯವರೆಗೆ ನನಗಂತೂ ಅಂಥದ್ದೊಂದು ಪ್ರಶಸ್ತಿ ಇದೆ ಎಂದೇ ಗೊತ್ತಿರಲಿಲ್ಲ. ಆ ಪ್ರಶಸ್ತಿಗೆ ಮೊದಲು ಎಷ್ಟು ಪ್ರಾಶಸ್ತ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಅದು ಭೈರಪನವರಿಗೆ ಲಭಿಸಿದಾಗ ದೊಡ್ಡದೇ ಇದ್ದಿರಬಹುದು ಎಂದು ಆ ಪ್ರಶಸ್ತಿಯ ಬಗ್ಗೆ ಒಂದಿಷ್ಟು ಓದಿ ಕೊಳ್ಳುವಂತಾಯಿತು. ಆಮೇಲೆಲ್ಲ ಭೈರಪ್ಪನವರನ್ನು ಯಾರೇ ಪರಿಚಯಿಸುವಾಗ ಅವರ ಗುರುತಿಗೆ ಲಗತ್ತಿಸಿದ ಉಪಮೆಯಾಗಿಯೇ ಈ ಪ್ರಶಸ್ತಿ ಇರುತ್ತಿತ್ತು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನಮ್ಮ ಅಣ್ಣಾವ್ರಿಗೆ ಬಂದಾಗ ಕೂಡ ಹಾಗೆಯೇ ಆಗಿದ್ದು. ಆಗಲೇ ಆ ಪ್ರಶಸ್ತಿಗೆ ನಮ್ಮೆಲ್ಲರ ಮನದಲ್ಲಿ ಒಂದು ಶ್ರೇಷ್ಠ ಸ್ಥಾನ ಸಿಕ್ಕಿದ್ದು. ಆದರೆ ಹೇಗೆ ಮೇಲೆ ಹೋಯ್ತೋ ಹಾಗೆಯೇ ಕೆಳಗೆ ಬಿದ್ದ ಪ್ರಶಸ್ತಿಯ ಬೆಲೆಗೆ ಉದಾಹರಣೆ ಅದೇ ಸರಸ್ವತಿ ಸಮ್ಮಾನವನ್ನು ಶ್ರೀಯುತ ಮೊಯ್ಲಿ ಸಾಹೇಬ್ರು ಪಡೆದುಕೊಂಡಾಗ. ಈಗ ಅದೇ ಹೆಸರು ಜ್ಞಾನಪೀಠ ಪ್ರಶಸ್ತಿಯ ಜತೆ ಕೇಳಿದಾಗ ಅದೇ ಆಘಾತ ಇನ್ನೊಮ್ಮೆ.

ನಮ್ಮ ಕನ್ನಡಿಗರೆಲ್ಲರ ಪುಣ್ಯ, ‘ವಿಶ್ವವಾಣಿ’ ಅದನ್ನು ಪ್ರಕಟಿಸಿ ಆಗಿ ಹೋಗಬಹುದಾಗಿದ್ದ ಅನಾಹುತದ ಬಗ್ಗೆ ಪ್ರಾಜ್ಞ ವರ್ಗವನ್ನು ಎಚ್ಚರಿಸಿತು. ಅಬ್ಬಾ, ಸದ್ಯ ಜ್ಞಾನಪೀಠ ಪ್ರಶಸ್ತಿ ಬದುಕಿಕೊಂಡಿತು. ಈಗಾಗಲೇ ನಮ್ಮ ದೇಶದಲ್ಲಿ ಅದೆಷ್ಟೋ ಪ್ರಶಸ್ತಿಗಳ ಬೆಲೆ ಹಳ್ಳ ಹಿಡಿದು ಹೋಗಿಯಾಗಿದೆ. ಗೌರವ ಡಾಕ್ಟರೇಟ್ ಎಂದ್ರೆ
ಎಷ್ಟು ರೇಟ್ ಎಂದಾಗಿ ಕಾಲವೇ ಸರಿದಿದೆ. ಇದೆಲ್ಲದರಿಂದಾಗಿ ಅದೆಷ್ಟೋ ಅರ್ಹರು ಇಂತಹ ಪ್ರಶಸ್ತಿಯನ್ನೇ ತಿರಸ್ಕರಿಸಿ ತಮ್ಮ ಮರ್ಯಾದಿ ಉಳಿಸಿಕೊಂಡಿzರೆ- ಅಂತಹ ಪರಿಸ್ಥಿತಿ.

ಮೊನ್ನೆ ಈ ಮೊಯ್ಲಿಯವರನ್ನು (ಏಕೈಕ) ಕನ್ನಡದಿಂದ ಜ್ಞಾನಪೀಠಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಶಿಫಾರಸ್ಸು ಮಾಡಿದ ಸುದ್ದಿ ಕೇಳಿದ ಕೆಲವು ಫೇಸ್‌ಬುಕ್ ಸ್ನೇಹಿತರು ಅಲ್ಲಿಗೆ ಬಂದು ಅವರಿಗೆ ಅದು ಕೊಡುವುದಾದರೆ ನನಗೆ ನೊಬೆಲ್ ಕೊಡಿ ಎಂದು ಹೇಳಿದ್ದು ಕಾಣಿಸಿತು. ತೀರಾ ಸಮಂಜಸ ಟಾಂಟ್ ಅದು. ಆಸ್ಕರ್, ಗ್ರ್ಯಾಮಿ, ನೊಬೆಲ್, ಭಾರತ ರತ್ನ, ಖೇಲ್ ರತ್ನ ಇವೆಲ್ಲ ಜನಮಾನಸದಲ್ಲಿ ಇನ್ನೂ ಒಂದಿಷ್ಟು ಮರ್ಯಾದಿ ಉಳಿಸಿಕೊಂಡಿವೆ. ಅದಕ್ಕೆ ಕಾರಣ ಆ ಪ್ರಶಸ್ತಿಯನ್ನು ಯಾರು, ಎಲ್ಲಿ, ಹೇಗೆ ಕೊಡುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಇಲ್ಲಿಯವರೆಗೆ ಯಾರ‍್ಯಾರಿಗೆ ಯಾವ ಯಾವ ಕಾರಣಕ್ಕೆ ಕೊಡಲಾಗಿದೆ ಎನ್ನುವುದು. ಎಲ್ಲ
ಪ್ರಶಸ್ತಿಯ ಬೆಲೆಯನ್ನು ಅದರ ಉದ್ದೇಶಕ್ಕಿಂತ ಹೆಚ್ಚು ಅದರ ಇತಿಹಾಸ ನಿರ್ಧರಿಸುತ್ತದೆ.

ಅದನ್ನು ಹಿಂದೆ ಪಡೆದವರು ಅದರ ಘನತೆಯನ್ನು ಹೆಚ್ಚಿಸುತ್ತ ಹೋಗುತ್ತಾರೆ, ಮುಂದೆ ಪಡೆಯುವವರ ಅರ್ಹತಾ ಮಾಪಕ ಆ ಮೂಲಕ ಹೆಚ್ಚುತ್ತಾ ಹೋಗುತ್ತದೆ. ಪ್ರಶಸ್ತಿಯೆಂದರೆ ಹಾಗೆಯೇ ಇರಬೇಕು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನಮ್ಮೂರ ನಾಟಕದಲ್ಲಿ ಒಮ್ಮೆ ಸೈಡ್ ಪಾತ್ರ ಮಾಡಿದ ಬೊಮ್ಮನಿಗೆ ಕೊಟ್ಟರೆ
ಹೇಗಾಗಬಹುದು? ಅಲ್ಲವೇ? ಅದೆಲ್ಲದರ ಇತಿಹಾಸದಲ್ಲಿ ಒಮ್ಮೆ ಒಂದು ಕಪ್ಪು ಚುಕ್ಕಿ ಬಂದರೆ ಅಲ್ಲಿಗೇ ಮುಗೀತು ಆ ಪ್ರಶಸ್ತಿಯ ಕಥೆ. ಒಂದು ಪ್ರಶಸ್ತಿಯನ್ನು, ಅದನ್ನು ಹಿಂದೆ ಪಡೆದವರನ್ನು ಹೀಗೆ ಒಟ್ರಾಶಿ ಎಲ್ಲರನ್ನು ಒಮ್ಮೆಯೇ ಅವಮಾನಿಸಲು ಅದನ್ನು ಒಬ್ಬ ಅನರ್ಹನಿಗೆ ಕೊಟ್ಟುಬಿಟ್ಟರೆ ಆಯ್ತು. ತಾಪಡ್ತೊಪ್ ಅದು ದೇವರ ತಲೆಯ ಮೇಲಿನ ಹೂವು ಚರಂಡಿ ಸೇರಿದಂತಾಗಿಬಿಡುತ್ತದೆ.

ಇರಲಿ – ನಮ್ಮ ಜನ ಮಾನಸದಲ್ಲಿ ಇನ್ನೂ ದೊಡ್ಡದು ಎಂದುಕೊಳ್ಳುವ ಕೆಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಹಕೀಕತ್ತು ಏನು ಹಾಗಾದರೆ? ಮೊದಲಿಗೆ ಈ ವಾರವಷ್ಟೇ ಘೋಷಿತವಾದ ನೊಬೆಲ್ ಅನ್ನೇ ತೆಗೆದುಕೊಳ್ಳೋಣ.

ನೊಬೆಲ್ ಅಷ್ಟು ನೊಬ ? ನೊಬೆಲ್‌ನದು ನೂರಿಪ್ಪತ್ತು ವರ್ಷದ ಇತಿಹಾಸ. ಸ್ವೀಡನ್ ನ ಕೈಗಾರಿಕೋದ್ಯಮಿ ಆಲ್ರೆಡ್ ನೊಬೆಲ್ ತನ್ನ ಉಯಿಲಿನಲ್ಲಿ ಇಂಥದ್ದೊಂದು ಪ್ರಶಸ್ತಿಯನ್ನು ಕೊಡಬೇಕಾಗಿ ಬರೆದಿಟ್ಟು ಸತ್ತ ನಂತರ ವಾರ್ಷಿಕ ನೊಬೆಲ್ ಪ್ರಶಸ್ತಿ ಕೊಡುವ ವ್ಯವಸ್ಥೆಯಾಯಿತು. ಇದು ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಮೆಡಿಸಿನ್, ಸಾಹಿತ್ಯ ಮತ್ತು ಶಾಂತಿಗಾಗಿ ಅಂತೆಯೇ ಅರ್ಥಶಾಸ್ತ್ರಕ್ಕೆ ಜೀವಮಾನದ ಸಾಧನೆಗೆ ಕೊಡಮಾಡುವ ಪ್ರಶಸ್ತಿಯಾಯಿತು. ಇದು ಯಾವುದೋ ಒಂದು
ಆವಿಷ್ಕಾರಕ್ಕಿಂತ ಜೀವಮಾನದ ಸಾಧನೆಗೆ ಕೊಡುವ ಪ್ರಶಸ್ತಿ.

ಇಲ್ಲಿನ ಮಾನದಂಡ ಇವರ ಆವಿಷ್ಕಾರ ಮನುಷ್ಯ ಸಮಾಜಕ್ಕೆ ಹೇಗೆ ಸಹಾಯಕವಾಗಿದೆ ಎನ್ನುವುದು. ಇಲ್ಲಿ ಅನ್ವೇಷಣೆ ಮತ್ತು ಆವಿಷ್ಕಾರಕ್ಕೆ ಮೊದಲ ಆದ್ಯತೆ. ಭೌತ ಶಾಸ್ತ್ರ ತೆಗೆದುಕೊಂಡರೆ ನೊಬೆಲ್ ಶೇ.೭೭ ಅನ್ವೇಷಣೆಗೆ ಹೋದರೆ ಕೇವಲ ಶೇ.೩೩ ಮಾತ್ರ ಆವಿಷ್ಕಾರಕ್ಕೆ ಪ್ರಶಸ್ತಿ ಸಂದಿದೆ. ಗುರುತ್ವಾಕರ್ಷಣೆ – ಅದು ಅನ್ವೇಷಣೆ – ಅದು ಇತ್ತು – ಇದೆಯೆಂದು ಆಗ ತಿಳಿಯಿತು. ವಿಮಾನ ಆವಿಷ್ಕಾರ. ಹೀಗೆ. ಈ ರೀತಿಯ ಚಿಕ್ಕಪುಟ್ಟ ಅಸಮಾನತೆಯ ಬಗ್ಗೆ ವಿಜ್ಞಾನಿ ವರ್ಗದಲ್ಲಿ ಯಾವತ್ತೂ ಒಂದಿಷ್ಟು ತಕರಾರಿದೆ. ಆದರೆ ಅದು ಇಲ್ಲಿ ಹೇಳಬೇಕಾದ ತಕರಾರಲ್ಲ.

ನೊಬೆಲ್ ಪ್ರಶಸ್ತಿಯ ವಿವಾದಗಳ ಮೊದಲ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಇದನ್ನು 1918 ರಲ್ಲಿ ಪಡೆದ ರಾಸಾಯನತಜ್ಞ ಎರಿಟ್ಜ್ ಹರ್ಬೆ. ಎರಿಟ್ಜ್‌ನ ಅವಿಷ್ಕಾರ ದಿಂದಲೇ ಇಂದು ಜಗತ್ತಿನಲ್ಲಿ ಆಹಾರದ ಲಭ್ಯತೆ ಈ ಪ್ರಮಾಣದಲ್ಲಿ ಸಾಧ್ಯವಾಗಿದ್ದು. ಏಕೆಂದರೆ ಆತನ ಅವಿಷ್ಕಾರವೇ ರಾಸಾಯನಿಕ ಗೊಬ್ಬರ ತಯಾರಿಸುವಲ್ಲಿ ಮುಖ್ಯ ಪಾತ್ರವಹಿಸುವಂಥದ್ದು. ಆತ ಅದನ್ನು ಅಂದು ಆವಿಷ್ಕರಿಸದಿದ್ದಲ್ಲಿ ಅದ್ಯಾವತ್ತೋ ಆಹಾರದ ಕೊರತೆ ಜಗತ್ತಿನಲ್ಲ ಕಾಣಿಸಿಕೊಂಡು ಅದೆಷ್ಟೋ ಹಸಿವಿನ ಸಾವಿಗೆ ಕಾರಣವಾಗಬಹುದಿತ್ತೇನೊ. ಆತನ ಆವಿಷ್ಕಾರ ಅಂಥದ್ದೊಂದು ದುರಂತ ತಪ್ಪಿಸಿದ್ದು ನಿಜ. ಆವಿಷ್ಕಾರದ ಹೆಸರು ಹರ್ಬೆ-ಬೊಷ್ ಪ್ರೊಸೆಸ್.

ಹೈಡ್ರೋಜನ್ ಅನ್ನು ವಾತಾವರಣದಲ್ಲಿರುವ ನೈಟ್ರೋಜನ್ ಜತೆ ಉನ್ನತ ಒತ್ತಡದಲ್ಲಿ ಜತೆಯಾಗಿಸಿ ಅಮೋನಿಯಾ ತಯಾರಿಕೆ = ಮಾಡುವ ವಿಧಾನ ಆತನ ಆವಿಷ್ಕಾರ. ಇಂದಿಗೂ ಜಗತ್ತಿನ ಮೂಲೆ ಮೂಲೆಯಲ್ಲಿ ಬಳಕೆಯಾಗುವ ರಾಸಾಯನಿಕ ಗೊಬ್ಬರಕ್ಕೆ ಇದೇ ಆವಿಷ್ಕಾರ ಆಧಾರ. ಅಂಥದ್ದನ್ನು ಕಂಡುಹಿಡಿದ ಆತ ನೊಬೆಲ್‌ಗೆ ಅರ್ಹ ಅಲ್ಲವೇ? ಆದರೆ ಅಸಲಿಯತ್ತು ಏನೆಂದರೆ ಆತ ಆವಿಷ್ಕರಿಸಲು ಹೊರಟದ್ದು ರಾಸಾಯನಿಕ ಯುದ್ಧಕ್ಕೆ ಬೇಕಾಗುವ ಕೆಮಿಕಲ್‌ಅನ್ನು. ಮೊದಲ ವಿಶ್ವಯುದ್ಧದಲ್ಲಿ ಜರ್ಮನಿಯ ಕ್ಯಾಪ್ಟನ್ ಹುದ್ದೆಯಲ್ಲಿದ್ದ ಎರಿಟ್ಜ್ ಕ್ಲೋರಿನ್ ಅನಿಲವನ್ನು ಅಭಿವೃದ್ಧಿ ಪಡಿಸುವ ಮತ್ತು ಆ ಮೂಲಕ ಜನರನ್ನು ಕೊಲ್ಲುವ
ಕಾರ್ಯಕ್ರಮದ ಮುಖ್ಯಸ್ಥನಾಗಿದ್ದ. ಆತನ ಆವಿಷ್ಕಾರ ಒಂದು ಕಡೆ ರಾಸಾಯನಿಕ ಗೊಬ್ಬರದ ಹುಟ್ಟಿಗೆ ಕಾರಣವಾದರೆ ಅದಕ್ಕಿಂತ ಮುಂಚೆಯೇ ಉದ್ದೇಶವಿದ್ದದ್ದು
ಜನರನ್ನು ಸಮೂಹದಲ್ಲಿ ಕೊಲ್ಲಲು. ಆತ ತನ್ನ ಆವಿಷ್ಕಾರವನ್ನು ಬಳಸಿದ್ದು ರಾಸಾಯನಿಕ ಶಾಸ್ತ್ರಕ್ಕಾಗಿ.

ಆತನನ್ನು -ದರ್ ಒ- ಕೆಮಿಕಲ್ ವಾರ್ -ರ್ ಎಂದೇ ಇಂದಿಗೂ ಕರೆಯಲಾಗುತ್ತದೆ. ಅಂಥವನಿಗೆ ನೊಬೆಲ್ ಕೊಡಲಾಗಿತ್ತು. ಇದು ಗಾಯ್ತೆಂದರೆ ಆನೆಯನ್ನು ದೂರ ಓಡಿಸುವ ಹುಲಿಯನ್ನು ಅಟ್ಟಿ ಓಡಿಸಿದ್ದಕ್ಕೆ ಹುಲಿ ಸಂರಕ್ಷಕ ಎಂದು ವೀರಪ್ಪನ್‌ಗೆ ಪ್ರಶಸ್ತಿ ಕೊಟ್ಟಂತೆ. ಉದ್ದೇಶವೇ ಒಂದು – ಆಗಿದ್ದೇ ಇನ್ನೊಂದು. ಎಗಾಸ್ ಮುನಿಜ್ ; ಈತನನ್ನು ಲುಬೋಟೊಮಿಯ ಪಿತಾಮಹ ಎನ್ನಲಾಗುತ್ತದೆ. ಮಾನಸಿಕ ಸಮಸ್ಯೆ ಇರುವವರನ್ನು ಮೆದುಳಿನ ಭಾಗವನ್ನು ಕತ್ತರಿಸಿ, ಸ್ಕ್ರೆಪ್ ಮಾಡಿ ತೆಗೆಯುವುದರ ಮೂಲಕ ಗುಣಮಾಡಬಹುದು ಎನ್ನುವದು ಆತನ ಆವಿಷ್ಕಾರ. ಇದನ್ನು ಸಾಧಿಸಲು ಅದೆಷ್ಟೋ ಮಾನಸಿಕ ರೋಗಿಗಳ ಶಾಶ್ವತ ಘಾಸಿಗೆ
ಕಾರಣವಾದದ್ದು ಮುನಿಜ್. ಈತನ ವಾದವನ್ನು ಅಮೆರಿಕ ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಲ್ಲಿನ ವೈದ್ಯರು ಒಪ್ಪಿ ಎರಡು ದಶಕಗಳ ಕಾಲ ಅದೆಷ್ಟೋ ಮಂದಿಯ ಮೆದುಳಿನ ಭಾಗವನ್ನೇ ಕಿತ್ತು ತೆಗೆದರು. ಇದರಿಂದಾಗಿ ಅದೆಷ್ಟೋ ಲೆಕ್ಕಕ್ಕೆ ಸಿಕ್ಕದಷ್ಟು ಹುಚ್ಚರು ಶಾಶ್ವತ ದೈಹಿಕ ಊನಕ್ಕೊಳಗಾದರು.

ಎಷ್ಟೋ ಮಂದಿಯ ಕೈಕಾಲು ಅಲುಗಾಡದಂತಾದವು. ಇನ್ನೆಷ್ಟೋ ಮಂದಿ ಸತ್ತರು – ಇನ್ನೆಷ್ಟೋ ಮಂದಿ ಇಹ ಪರ ತಿಳಿಯದಂತಾದರು. ಇವರೆಲ್ಲ ಮಾನಸಿಕ
ರೋಗಿಗಳಾದದ್ದರಿಂದ ಅಷ್ಟಾಗಿ ಗಲಾಟೆಗಳಾಗಲಿಲ್ಲ. ಮುಗ್ಧಜನರು ಇದೇ ತಮ್ಮ ಪಾಲಿನ ಪಂಚಾಮೃತ ಎಂದು ಸುಮ್ಮನಾದರು. ಇದೆಂತಹ ಕರಾಳ ಮೆಡಿಕಲ್ ಪ್ರೊಸೀಜರ್ ಎಂದು ತಿಳಿಯುವ ಮೊದಲೇ ಆತ ಎಲ್ಲಿಲ್ಲದ ಪ್ರಚಾರಕ್ಕೊಳಗಾಗಿದ್ದ. ಇದೆಲ್ಲ ಆಗುತ್ತಿzಗಲೇ ಮೆದುಳಿಗೆ ಸೋಡಿಯಂ ಐಯೊಡೈಡ್ ಹಾಯಿಸುವ ಮೂಲಕ ನರಮಂಡಲದ ಎಕ್ಸ್ ರೇ ತೆಗೆಯುವುದು ಇದೇ ಯಡಬಿಡಂಗಿ ಪ್ರಯೋಗ ನಡೆಯ ಮುಂದಿನ ಅವಿಷ್ಕಾರವಾ ಗಿತ್ತು. ಇಂದಿನ ಆಂಜಿಯೋಗ್ರಾಫಿ ಎನ್ನುವದು ಹುಟ್ಟಿದ್ದು ಹಾಗೆ. ಆ ಒಂದು ಕಾರಣಕ್ಕೆ ಅದೆಷ್ಟೋ ಜೀವ ಮುಂದೆ ಉಳಿದದ್ದು ನಿಜ. ಆದರೆ ಆತ ನೊಬೆಲ್‌ಗೆ ಅರ್ಹನಿದ್ದನೇ? ಆತ ಈ ಆವಿಷ್ಕಾರದ
ಹಾದಿಯಲ್ಲಿ ತುಳಿದ ಅಮಾನವೀಯ ನಡೆಗಳು ಮುನ್ನೆಲೆಗೆ ಬರುವುದರೊಳಗೇ ಆತನಿಗೆ ನೊಬೆಲ್ ಕೊಟ್ಟು ಆಗಿತ್ತು.

ಆತನ ಈ ಅಮಾನವೀಯ ವೈದ್ಯಕೀಯ ವಿಧಾನ ಮಾನಸಿಕ ರೋಗಕ್ಕೆ ಔಷಧವಾದ ಕ್ಲೋರ್ಪ್ರೋಮೋ ಜಯ್ನ್ ಅವಿಷ್ಕಾರವಾಗುವಲ್ಲಿಯವರೆಗೂ ಮುಂದುವರಿ ಯಿತು. ಆತನ ಈ ಭಾನ ಗಡಿ ಆವಿಷ್ಕಾರದಿಂದ ಆದ ಶಾಶ್ವತ ಅಂಗ ವೈಕಲ್ಯ ಲಕ್ಷದ ಲೆಕ್ಕದಲ್ಲಿ. ಇನ್ನು ನೊಬೆಲ್ ಶಾಂತಿ ಪುರಸ್ಕಾರದ್ದು ಇನ್ನೊಂದು ಕಥೆ.
ಇದು ರಾಜಕೀಯಕ್ಕೆ ಬಳಕೆಯಾಗಿದ್ದೇ ಜಾಸ್ತಿ. ಅದೆಷ್ಟೋ ಮಂದಿ ಶಾಂತಿ ನೊಬೆಲ್ ಪಡೆದವರು ನಂತರದ ವರ್ಷದಲ್ಲಿ ಯುದ್ಧಕ್ಕೆ ಕಾರಣವಾಗಿದ್ದು ಇತಿಹಾಸ ವಾಗಿದೆ. ಬೇರೆ ಎಲ್ಲ ಬಿಡಿ, ಬರಾಕ್ ಒಬಾಮಾಗೆ ನೊಬೆಲ್ ಕೊಟ್ಟದ್ದು ೨೦೦೯ರಲ್ಲಿ.

ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ಒಬಾಮಾಗೆ ಈ ಪ್ರಶಸ್ತಿ ಕೊಟ್ಟದ್ದು ಅವರು ಅಮೆರಿಕದ ಅಧ್ಯಕ್ಷರಾಗಿ ಪದೋನ್ನತಿ ಹೊಂದಿದ ಒಂಭತ್ತು ತಿಂಗಳಲ್ಲಿ. ಅಲ್ಲಿಯವರೆಗೆ ಕೇವಲ ಸೆನೆಟರ್ ಆಗಿದ್ದ ಒಬಾಮ ಶಾಂತಿಗಾಗಿ ಕೆಲಸ ಮಾಡಿದ್ದು ಅಷ್ಟಕ್ಕಷ್ಟೆ. ನೊಬೆಲ್ ಶಾಂತಿ ಪ್ರಶಸ್ತಿಯ ನಂತರದ ಏಳು ವರ್ಷ ಒಬಾಮ ಇರಾಕ್, ಅಫ್ಘಾನಿಸ್ತಾನ್, ಸಿರಿಯಾದಲ್ಲಿ ಶಾಂತಿಯ ಹೆಸರ ಯುದ್ಧ ಮುಂದುವರಿಸಿದರು. ಉಗ್ರರ ಜತೆ ಅದೆಷ್ಟೋ ಅಮಾಯಕರ ಸಾವಿಗೆ ಕಾರಣವಾದದ್ದು ಪ್ರಶ್ನೆಯಾಗಲೇ ಇಲ್ಲ. ಇದು ನೊಬೆಲ್ ಪ್ರಶಸ್ತಿಯನ್ನು ಕೂಡ ಪ್ರಶ್ನಿಸಲಿಲ್ಲ.

ಒಟ್ಟು ಇಲ್ಲಿಯವರೆಗೆ 860 ಮಂದಿಗೆ ನೊಬೆಲ್ ಕೊಡಲಾಗಿದೆ. ಅದರಲ್ಲಿ 394 ಮಂದಿ ಅಮೆರಿಕನ್ನರು. ಈ 860ರಲ್ಲಿ ಸುಮಾರು ಎಂಭತ್ತೈದಕ್ಕೂ ಹೆಚ್ಚು ಮಂದಿ (ಶೇ.10) ಅನರ್ಹರಿಗೆ ಇಲ್ಲವೆ ಅವರಿಗಿಂತ ಅರ್ಹರಿರುವಾಗ ಬೇರೆಯವರಿಗೆ ಬೇರೆ ಬೇರೆ ಕಾರಣದಿಂದ ಈ ಪ್ರಶಸ್ತಿ ಕೊಟ್ಟ ಕುಖ್ಯಾತಿ ನೊಬೆಲ್‌ಗೆ ಇದೆ. ಇದೆಲ್ಲದರ ಮಧ್ಯೆ ತಾವೇ ಅರ್ಹರಲ್ಲ ಅಥವಾ ಅಂದುಕೊಂಡದ್ದು ಸಾಧಿಸಲಾಗಿಲ್ಲ, ಹಾಗಾಗಿ ನಮಗೆ ಬೇಡ ಎಂದ ಕೆಲವೇ ಕೆಲವು ನೊಬೆಲ್ ತಿರಸ್ಕರಿಸಿದ, ಆ ಮೂಲಕ ದೊಡ್ಡವರೆನಿಸಿ ನಂತರ ಮರೆಯಾದವರು ಕೂಡ ಇದ್ದಾರೆ.

ಇನ್ನು ಆಸ್ಕರ್ ಪ್ರಶಸ್ತಿಯ ಕಥೆಯೂ ಅಷ್ಟೆ. ಎಂಥೆಂಥ ಶ್ರೇಷ್ಠ ಸಿನಿಮಾಗಳಿದ್ದರೂ ಕೇವಲ ಅಮೆರಿಕನ್ ಹಾಲಿವುಡ್ ಸಿನಿಮಾಗಳಿಗೆ ಮತ್ತು ವೈಯಕ್ತಿಕವಾಗಿ ಕೊಡಮಾಡುವ ಆಸ್ಕರ್‌ನಲ್ಲಿ ಬಿಳಿಯರಿಗೆ, ಗಂಡಸರಿಗೆ ಈ ಪ್ರಶಸ್ತಿ ದಕ್ಕಿದ್ದೇ ಹೆಚ್ಚು. ಇಲ್ಲಿರುವ ವರ್ಣ, ಲಿಂಗ, ರಾಷ್ಟ್ರ, ಭಾಷೆ ಮೊದಲಾದ ಹತ್ತಾರು ತಾರತಮ್ಯ ಆಗೀಗ ಸದ್ದು ಮಾಡುತ್ತಲೇ ಇರುತ್ತದೆ. ಮೊದಲ ಕಪ್ಪು ಜನಾಂಗದ ಮಹಿಳೆ ಹ್ಯಾಟಿ ಮ್ಯಾಕ್ ಡೇನಿಯಲ್‌ಗೆ ಆಸ್ಕರ್ ಪ್ರಶಸ್ತಿ ಕೊಟ್ಟಾಗ ಗಲಾಟೆಯೆದ್ದು ಹೋಗಿತ್ತು. ಇನ್ನು ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಆಸ್ಕರ್ ಬಂದದ್ದರ ರಾಜಕೀಯ ಹಿನ್ನೆಲೆ ಮತ್ತು ಭಾರತವನ್ನು ತುಚ್ಛವಾಗಿ ತೋರಿಸಿದ್ದಕ್ಕೆ ಎಂದು ಯಾರೂ ಬಾಯಿ ಬಿಟ್ಟು
ಹೇಳದಿದ್ದರೂ ಅದು ಪ್ರಾಜ್ಞರಿಗೆಲ್ಲ ಗೊತ್ತಿದ್ದ ವಿಚಾರವೇ. ಆಸ್ಕರ್ ಪಡೆಯಬೇಕೆಂದರೆ ಒಂದೋ ಅಮೆರಿಕವನ್ನು ಬಿಟ್ಟು ಇನ್ನೊಂದು ದೇಶವನ್ನು ಕೀಳಾಗಿ ತೋರಿಸಬೇಕು ಇಲ್ಲವೇ ಅದು ಅಮೆರಿಕನ್ನರೇ ನಿರ್ಮಿಸಿದ, ನಿರ್ದೇಶಿಸಿದ, ನಟಿಸಿದ ಸಿನಿಮಾ ಆಗಿರಬೇಕು.

ನೊಬೆಲ, ಆಸ್ಕರ್, ಭಾರತ ರತ್ನ, ಗ್ರ್ಯಾಮಿ ಹೀಗೆ ಎಲ್ಲ ಶ್ರೇಷ್ಠವೆನ್ನಿಸಿಕೊಂಡ ಪ್ರಶಸ್ತಿಗಳನ್ನು ಪಡೆದವರೆಲ್ಲ ಯೋಗ್ಯರಲ್ಲವೆಂದಲ್ಲ. ಮಹಾನ್ ವ್ಯಕ್ತಿಗಳು ಆಗಾಗ,
ಹೆಚ್ಚಾಗಿ ಈ ಎಲ್ಲ ಪ್ರಶಸ್ತಿಗೆ ಒಂದಿಷ್ಟು ಘನತೆಯನ್ನು ತಂದು ಕೊಟ್ಟಿದ್ದಾರೆ. ಆದರೆ ನೊಬೆಲ್‌ನಿಂದ ಹಿಡಿದು ರಾಜ್ಯ ಪ್ರಶಸ್ತಿ, ಅಲ್ಲಿಂದ ಕೊನೆಗೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊಡುವ ಒಳ್ಳೆಯ ವಿದ್ಯಾರ್ಥಿ ಪ್ರಶಸ್ತಿಯವರೆಗೆ ವಶೀಲಿತನ, ಪ್ರಭಾವ ಆಗಾಗ ಕೆಲಸ ಮಾಡುವುದು ಮತ್ತು ಆ ಮೂಲಕ ಪ್ರಶಸ್ತಿ ಅಯೋಗ್ಯರ (ಎಂದರೆ ಯೋಗ್ಯರಲ್ಲದವರ) ಪಾಲಾಗುವುದು ಆಗೀಗ ನಡೆಯುತ್ತಲೇ ಇರುತ್ತದೆ. ಅದೆಲ್ಲ ಅಲ್ಲಿಗೇ ಬಿಡಿ ಮತ್ತು ಈಗ ಹೇಳಿ – ಮೊಯ್ಲಿ ಸಾಹೇಬರಿಗೆ ಜ್ಞಾನಪೀಠ ಪ್ರಶಸ್ತಿ ಏಕೆ ಕೊಡಬಾರದು? ನನಗೇನೋ ಅವರು ಲಾಬಿ ಮಾಡಿದ ಬಗ್ಗೆ ಸಾಕ್ಷ ಸಿಕ್ಕಿಲ್ಲ.

ಇಷ್ಟಕ್ಕೂ ಅವರು ಅಮೀನ್ ಸದ್ಭಾವನಾ ಪ್ರಶಸ್ತಿ, ದೇವರಾಜ್ ಅರಸ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರೆ ಅಲ್ಲವೇ? ಅದಕ್ಕಿಂತ ಹೆಚ್ಚಾಗಿ ಸರಸ್ವತಿ ಸಮ್ಮಾನ್ ಪಡೆದ ಅವರು ಭೈರಪ್ಪನವರ ಸರಿಸಮಾನರು ಎಂದು ಆ ಪ್ರಶಸ್ತಿ ಸಾರಿ ಆಗಿದೆಯಲ್ಲ. ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಲಿ ಬಿಡಿ. ನಮ್ಮೂರ ನಾಟಕದ ಬೊಮ್ಮನಿಗೂ ಫಾಲ್ಕೆ ಸಿಗಲಿ. ಭೈರಪ್ಪನವರಿಗೆ ಈಗ ಬರಿ ತೊಂಭತ್ತು ವಯಸ್ಸು. ಕನ್ನಡಿಗರಾದ ನಾವು ಇಷ್ಟು ಕಾದಾಗಿದೆ – ಇನ್ನೊಂದು ಹತ್ತು ವರ್ಷ ಕಾದರಾಯಿತು. ಈ ಸರತಿ ಮೊಯ್ಲಿಯವರಿಗೇ eನಪೀಠ ಸಿಕ್ಕಲಿ. ಅವರೂ ನಮ್ಮವರೇ, ಕನ್ನಡಿಗರೇ ಅಲ್ವೆ? ಆ-ರ್ ಆಲ್ ನಮ್ಮಂಥ ಗೋಂಕರ ಕಪ್ಪೆ ಮುಂದಿನ ವರ್ಷ ಕೂಗುವುದು ಇದ್ದೇ ಇದೆ.

So, Why not Mr. Moily?