Thursday, 12th December 2024

ಗದಾಶೀರ್ಷ ಶಿಲೀಂಧ್ರದ ಸಾವು ನೋವುಗಳು

ಹಿಂದಿರುಗಿ ನೋಡಿದಾಗ

ಕ್ರಿ.ಪೂ.9000 ವರ್ಷಗಳ ಹಿಂದೆ, ಮೆಸೊಪೊಟೋಮಿಯದಲ್ಲಿ ಕೃಷಿಯು ಮೊದಲ ಬಾರಿಗೆ ಆರಂಭವಾಯಿತು. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ಮೆಕ್ಕಲು ಮಣ್ಣಿನ ಬಯಲು ಪ್ರದೇಶ. ಅಲ್ಲಿ ಆಯ್ದ ಕಾಡು ಹುಲ್ಲುಗಳನ್ನು ಬೆಳೆದರು. ಅವುಗಳ ಬೀಜವನ್ನು ಆಹಾರಕ್ಕಾಗಿ ಬಳಸಲಾರಂಭಿಸಿದರು. ಇಂತಹ ಹುಲ್ಲು ಬೀಜಗಳಲ್ಲಿ ಗೋಧಿ ಮತ್ತು ಕಿರುಗೋಧಿ ಮುಖ್ಯ ವಾದವು. ಅಸ್ಸೀರಿಯನ್ ಮತ್ತು ಬ್ಯಾಬಿಲೋನಿಯನ್ ಸಂಸ್ಕೃತಿಗಳು ತ್ವರಿತವಾಗಿ ಪ್ರವರ್ಧಮಾನಕ್ಕೆ ಬಂದವು. ಹಾಗೆಯೇ ಅವರ ನೆಮ್ಮದಿಯನ್ನು ಕದಡುವಂತಹ ಕೆಲವು ಅನಿರೀಕ್ಷಿತ ಘಟನೆಗಳು ಆರಂಭವಾದವು.

ಕಿರುಗೋಧಿಯ ಮೇಲೆ ಕ್ಲಾವಿಸೆಪ್ಸ್ ಪರ್ಪ್ಯೂರ ಎಂಬ ಶಿಲೀಂಧ್ರವು ದಾಳಿ ಮಾಡಿತು. ದಾಳಿಗೊಳಾದ ಕಿರು ಗೋಧಿಯನ್ನು ತಿನ್ನುತ್ತಿರುವಂತೆಯೇ, ಮನುಕುಲವು ಅದುವರೆಗು ಕೇಳರಿಯದ ನಾನಾ ರೋಗಗಳಿಗೆ ತುತ್ತಾಗ ಲಾರಂಭಿಸಿತು. ಕ್ಲಾವಿಸೆಪ್ಸ್ ಪರ್ಪ್ಯೂರ ಎನ್ನುವ ಶಿಲೀಂಧ್ರವು, ಕಿರುಗೋಧಿಯ ತೆನೆಯ ಮೇಲೆ ಮೇಲೆ ಆಶ್ರಯ ವನ್ನು ಪಡೆಯುವುದರ ಮೂಲಕ ತನ್ನ ಪರಾವಲಂಬೀ ಬದುಕನ್ನು ಆರಂಭಿಸಿತು. ತೆನೆಯಲ್ಲಿ ಆಶ್ರಯವನ್ನು ಪಡೆದು, ತೆನೆಯನ್ನೇ ತಿಂದು, ತೆನೆಯಲ್ಲಿಯೇ ತನ್ನ ಸಂತಾನವರ್ಧನಾ ಕಾರ್ಯವನ್ನು ನಡೆಸಲು ಕಲಿಯಿತು. ಶಿಲೀಂಧ್ರವು ತನ್ನ ಆತ್ಮರಕ್ಷಣೆಗಾಗಿ ತನ್ನ ಒಡಲಿನಲ್ಲಿ ಹಲವು ಅಪಾಯಕಾರಿ ರಾಸಾಯನಿಕಗಳನ್ನು ಸಂಚಯ ಗೊಳಿಸಿಕೊಂಡಿತು.

ಜಾನುವಾರಗಳಿಗೂ ಹಾಗೂ ಮನುಷ್ಯರು, ಶಿಲೀಂಧ್ರ ದಾಳಿಗೆ ಒಳಗಾಗಿದ್ದ ತೆನೆ/ಕಾಳುಗಳನ್ನು ತಿಂದವು. ಆಗ ಕ್ಲಾವಿಸೆಪ್ಸ್ ಪರ್ಪ್ಯೂರ ಉತ್ಪಾದಿಸಿದ ವಿಷಗಳು ಜಾನುವಾರು ಹಾಗೂ ಮನುಷ್ಯರಲ್ಲಿ ಕಾಯಿಲೆಗಳನ್ನು ಉಂಟು ಮಾಡಿದವು. ಮುಂದೆ ಇದನ್ನು ಅರ್ಗಟ್ ವಿಷವೇರಿಕೆ ಎಂದು ಕರೆದರು. ಕ್ಲಾವಿಸೆಪ್ಸ್ ಪರ್ಪ್ಯೂರ ಎನ್ನುವುದು ಕಿರುಗೋಧಿಯ ಮೇಲೆ ಪರಾವಲಂಬಿಯಾಗಿರುವ ಶಿಲೀಂಧ್ರದ ವೈಜ್ಞಾನಿಕ ನಾಮ ಧೇಯ. ಕ್ಲಾವ ಎನ್ನುವ ಪದಕ್ಕೆ ಲ್ಯಾಟಿನ್ ಭಾಷೆಯಲ್ಲಿ ಗದೆಯಂತಹ ಎಂಬ ಅರ್ಥವಿದೆ. ಸೆಪ್ಸ್ ಎಂದರೆ ತಲೆ ಅಥವ ಶೀರ್ಷ. ಪರ್ಪ್ಯೂರ ಎಂದರೆ ನೇರಳೆ ಅಥವ ಊದಾ ಬಣ್ಣ. ಹಾಗಾಗಿ ಈ ಶಿಲೀಂಧ್ರವನ್ನು ನೇರಳೆ ಬಣ್ಣದ ಗದಾಶೀರ್ಷ ಶಿಲೀಂಧ್ರ (ಪರ್ಪಲ್ ಕ್ಲಬ್ ಹೆಡೆಡ್ ಫಂಗಸ್) ಎಂದು ಕರೆದರು. ಸರಳ ವಾಗಿ ಗದಾಶೀರ್ಷ ಶಿಲೀಂಧ್ರ ವೆಂದು ಹೇಳಬಹುದು.

ಅರ್ಗಾಟ್ ವಿಷವೇರಿಕೆಯ ಮೊದಲ ಪ್ರಕರಣವು ಬಹುಶಃ ಕ್ರಿ.ಪೂ.೬೦೦ರಷ್ಟು ಹಿಂದಿನ ದಾಖಲೆಯಲ್ಲಿ ಲಭಿಸುತ್ತದೆ. ಅಸ್ಸೀರಿಯನ್ ಸಂಸ್ಕೃತಿಗೆ ಸೇರಿದ ಕ್ಯೂನಿಫಾರಂ ಜೇಡಿಮಣ್ಣಿನ ಹಲಗೆಯ ಮೇಲೆ ಧಾನ್ಯದ ತೆನೆಯಲ್ಲಿ ಹಾನಿಕಾರಕ ಕುರು (ನಾಕ್ಷಿಯಸ್ ಪಸ್ಟ್ಯೂಲ್ ಇನ್ ದಿ ಇಯರ್ ಆಫ್ ಗ್ರೇನ್) ಎಂಬ ವಿವರಣೆಯಿದೆ. ಕ್ರಿ.ಪೂ. ೪೦೦- ಕ್ರಿ.ಪೂ.೩೦೦ರ ನಡುವೆ ರಚನೆಯಾದ ಪಾರ್ಸಿಗಳ ಧರ್ಮಗ್ರಂಥದಲ್ಲಿ ಹಾನಿಕಾರಕ ಹುಲ್ಲು, ಗರ್ಭವತಿಯರ
ಗರ್ಭಪಾತಕ್ಕೆ ಕಾರಣವಾಗಿ, ಅವರನ್ನು ಕೊಲ್ಲುತ್ತದೆ ಎಂಬ ವಿವರಣೆಯನ್ನು ನಾವು ಕಾಣಬಹುದಾಗಿದೆ. ರೋಮನ್ನರು ಕಿರುಗೋಧಿಯನ್ನು ಕೀಳು ಧಾನ್ಯ ಎಂದು ಪರಿಗಣಿಸಿದರು.

ಹಾಗಾಗಿ ಅವರು ಕಿರುಗೋಧಿಯನ್ನು ಹೆಚ್ಚು ತಿನ್ನುತ್ತಿರಲಿಲ್ಲ. ರೋಮನ್ ಇತಿಹಾಸಕಾರ ಲ್ಯೂಕ್ರೀಷಿಯಸ್. ಎರಿಸಿಪೆಲಸ್ ಎಂಬ ಚರ್ಮ ಕಾಯಿಲೆಯಲ್ಲಿ ಕಂಡುಬರುವ ಉಗ್ರ ಸ್ವರೂಪದ ಉರಿಯನ್ನು ಪವಿತ್ರ ಬೆಂಕಿ (ಇಗ್ನಸ್ ಸೇಸರ್) ಎಂದು ಕರೆದ. ಇದೇ ಹೆಸರನ್ನೇ ಮಧ್ಯಯುಗದ ಜನರು ಅರ್ಗಟ್ ವಿಷವೇರಿಕೆಗೂ ಬಳಸಿದರು. ಗ್ಯಾಲನ್ ತನ್ನ ಬರಹಗಳಲ್ಲಿ, ಕಿರುಗೋಧಿಯನ್ನು ಕೀಳುಧಾನ್ಯವೆಂದು ಕರೆಯುವುದರ ಜೊತೆಗೆ, ಅದರ ರುಚಿ ಬಹಳ ಕೆಟ್ಟದಾಗಿದೆ ಎಂದು ಬರೆದಿದ್ದಾನೆ. ಬಹುಶಃ ಇವರಿಗೆ ಅರ್ಗಟ್ ವಿಷ ಲಕ್ಷಣಗಳ ಪರಿಚಯವಿದ್ದಿರಬೇಕು.

ಕಿರುಗೋಧಿಯು ಸಾಮಾನ್ಯವಾಗಿ ತೇವಾಂಶ ಭರಿತ ಪ್ರದೇಶದಲ್ಲಿ ಬೆಳೆಯುತ್ತದೆ. ಇಂತಹುದೇ ಪರಿಸರದಲ್ಲಿ ಗದಾಶೀರ್ಷ ಶಿಲೀಂಧ್ರವೂ ವಾಸಿಸುತ್ತದೆ. ಹಾಗಾಗಿ ಗದಾಶೀರ್ಷ ಶಿಲೀಂಧ್ರವು ಕಿರುಗೋಧಿಯ ಮೇಲೆ ಸುಲುಭವಾಗಿ ಆಕ್ರಮಣವನ್ನು ನಡೆಸುತ್ತದೆ. ಮೊದಲು ಗದಾಶೀರ್ಷ ಶಿಲೀಂಧ್ರದ ಬೀಜಕಗಳು (ಸ್ಪೋರ್ಸ್) ಗಾಳಿಯ ಮೂಲಕ ಎಲ್ಲೆಡೆ ವ್ಯಾಪಿಸುತ್ತದೆ. ಹೀಗೆ ಗಾಳಿಯಲ್ಲಿ ತೇಲಿಬರುವ ಬೀಜಕವು ಕಿರುಗೋಧಿಯ ಹೂವಿನ ಮೇಲೆ ಬೀಡು ಬಿಡುತ್ತದೆ. ನಂತರ ಹಳದಿ ಬಣ್ಣದ ಲೋಳೆರೂಪಿ ಸಿಹಿ ದ್ರವವನ್ನು ಉತ್ಪಾದಿಸುತ್ತದೆ.

ಈ ದ್ರವಕ್ಕೆ ಕೀಟಗಳು, ಹಾತೆಗಳು, ಕಣಜಗಳು ಆಕರ್ಷಿತಗೊಳ್ಳುತ್ತವೆ. ಈ ಲೋಳೆಯನ್ನು ಕುಡಿಯಲು ಬರುವ ಸೋಂಕುವಾಹಕ ಜೀವಿಗಳು,
ಶಿಲೀಂಧ್ರದ ಬೀಜಕಗಳನ್ನು ಕಿರುಗೋಧಿಯ ತೆನೆಯಲ್ಲಿರುವ ಇತರ ಹೂವುಗಳಿಗೆ ಹರಡುತ್ತವೆ. ಬೀಜಕವು ಮೊಳಕೆಯೊಡೆದು, ನೇರವಾಗಿ ಹೂವಿನ ಅಂಡಾಶಯವನ್ನು ತಲುಪುತ್ತದೆ. ಗೋಽಯ ಕಾಳು ಬಲಿಯಲೆಂದು ಗಿಡವು ಪೂರೈಸುವ ಎಲ್ಲ ಪೋಷಕಾಂಶಗಳನ್ನು ಶಿಲೀಂಧ್ರವು ಸ್ವೀಕರಿಸಿ ಚೆನ್ನಾಗಿ ಬೆಳೆಯುತ್ತದೆ. ಗಟ್ಟಿಯಾದ ಒಂದು ಕಾಯಕವಚವನ್ನು (ಸ್ಕ್ಲೀರೋಶಿಯಂ) ರೂಪಿಸುತ್ತದೆ. ತೆನೆಯಲ್ಲಿ ಕಾಳುಗಳು ಮೂಡುವ ವೇಳೆಗೆ ಈ ಕಾಯ ಕವಚವು ಬಲಿತು ಗಾಢವರ್ಣವನ್ನು ತಳೆಯುತ್ತದೆ. ಈ ಕಾಯಕವಚವು ಆಕಾರದಲ್ಲಿ, ಕೋಳಿ ಕಾಳಗದಲ್ಲಿ ಭಾಗವಹಿಸುವ ಕೋಳಿಯ ಕಾಲಿಗೆ ಕಟ್ಟುವ ಕಿರುಗತ್ತಿಯನ್ನು ಹೋಲುತ್ತದೆ (ಕಾಕ್ಸ್ ಸ್ಪರ್).

ಈ ಕಾಯ ಕವಚದೊಳಗೆ ಎಲ್ಲ ಅಪಾಯಕಾರಿ ಆಲ್ಕಲಾಯ್ಡುಗಳೆಂಬ ವಿಷ ರಾಸಾಯನಿಕಗಳು ಸಂಗ್ರಹವಾಗಿರುತ್ತವೆ. ಕಾಯಕವಚವು ನೆಲಕ್ಕೆ ಬೀಳುತ್ತದೆ. ಚಳಿಗಾಲವು ಮುಗಿಯುವವರಿಗು ಮಣ್ಣಿನಲ್ಲಿಯೇ ಸುಪ್ತವಾಗಿರುತ್ತದೆ. ವಸಂತ ಋತುವು ಬರುತ್ತಿರುವಂತೆಯೇ, ಶಿಲೀಂಧ್ರವು ಕಾಯಕವಚ ವನ್ನು ಭೇದಿಸಿಕೊಂಡು ಹೊರಬರುತ್ತದೆ. ೧೫-೬೦ ಬಿಳಿಯ ಬಣ್ಣದ, ಅಣಬೆಯನ್ನು ಹೋಲುವ -ಲ ಕಾಯಗಳನ್ನು ರೂಪಿಸುತ್ತದೆ. ಈ -ಲಕಾಯಗಳಿಗೆ ದಪ್ಪವಾಗಿರುವ ತಲೆ ಹಾಗೂ ನೀಳ ಹಿಡಿಯಿರುವಂತೆ ಕಾಣುವ ಕಾರಣ, ಮೇಲು ನೋಟಕ್ಕೆ ಗದೆಯ ಹಾಗೆ ಕಾಣುತ್ತವೆ. ಹಾಗಾಗಿ ಇವನ್ನು ಕ್ಲಾವಿಸೆಪ್ಸ್-ಗದಾಶೀರ್ಷ- ಎಂದು ನಾಮಕರಣವನ್ನು ಮಾಡಿದರು. ಈ -ಲಕಾಯಗಳು ಬಲಿಯುತ್ತಿರುವಂತೆಯೇ ಬಿರಿಯುತ್ತದೆ.

ಬಿರಿದ ಕಾಯದಿಂದ ಹೊರಬರುವ ಅಸಂಖ್ಯ ಬೀಜಕಗಳು ಗಾಳಿಯಲ್ಲಿ ಬೆರೆಯುತ್ತವೆ. ಕಿರುಗೋಧಿ ಗಿಡಗಳ ತೆನೆಯನ್ನು ಹುಡುಕಿಕೊಂಡು ಹೋಗುತ್ತವೆ. ಹೀಗೆ ಗದಾಶೀರ್ಷ ಶಿಲೀಂಧ್ರವು ತನ್ನ ಜೀವನ ಚಕ್ರವನ್ನು ಪೂರೈಸುತ್ತದೆ. ಕಿರುಗೋಧಿಯ ಕಾಳು ಬಲಿಯುವ ವೇಳೆಗೆ ಕಾಯಕ ವಚಗಳು ಬಲಿತಿರುತ್ತವೆ ಎಂದೆವು. ಜಾನುವಾರಗಳು ಕಿರುಗೋಧಿ ಕಾಳುಗಳನ್ನು ಕಾಯಕವಚಗಳ ಸಮೇತ ತಿನ್ನುತ್ತಿದ್ದವು. ಮನುಷ್ಯರೂ ಸಹ ಕಾಯಕವಚಗಳ ಸಮೇತ ತೆನೆಗಳನ್ನು ಕಟಾವು ಮಾಡುತ್ತಿದ್ದರು. ಅವರಿಗೆ ಕಾಯಕವಚಗಳ ಮಾರಕ ಗುಣಗಳ ಬಗ್ಗೆ ಪರಿಚಯವಿರಲಿಲ್ಲ. ಸಾಮಾನ್ಯವಾಗಿ ಕಿರುಗೋಽಯನ್ನು ಬಡವರು ಮಾತ್ರ ತಿನ್ನುತ್ತಿದ್ದರು.

ಅದರಲ್ಲೂ ಬರಗಾಲವು ಬಂದಾಗ, ಅವರಿಗೆ ಕಿರುಗೋಧಿಯನ್ನು ಬಿಟ್ಟು ತಿನ್ನಲು ಮತ್ತೇನೂ ದೊರೆಯುತ್ತಿರಲಿಲ್ಲ. ಕಾಯಕವಚಗಳ ಸಮೇತ ಕಿರು ಗೋಧಿಯನ್ನು ಬೀಸಿ, ಹಿಟ್ಟು ಮಾಡಿ, ಚಪಾತಿ ಇಲ್ಲವೇ ಬ್ರೆಡ್ ಮಾಡಿದಾಗ, ಕಾಯಕವಚದೊಳಗಿದ್ದ ಆಲ್ಕಲಾಯ್ಡ್ ಹೊರಬಂದು ಅರ್ಗಟ್ ವಿಷಲಕ್ಷಣ ಗಳನ್ನು ಉಂಟು ಮಾಡುತ್ತಿದ್ದವು. ಅರ್ಗಾಟ್ ವಿಷವೇರಿಕೆಯ ಲಕ್ಷಣಗಳನ್ನು ವಿಶಾಲವಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಒಣ ಅಂಗಕ್ಷಯದ ಲಕ್ಷಣಗಳು (ಡ್ರೈ ಗ್ಯಾಂಗ್ರಿನ್). ಅರ್ಗಟ್ ವಿಷವೇರಿಕೆಗೆ ತುತ್ತಾಗುತ್ತಿದ್ದ ಗರ್ಭವತಿಯರಲ್ಲಿ ಗರ್ಭಸ್ರಾವವು ಕಂಡುಬರುತ್ತಿದ್ದವು. ದೀರ್ಘಕಾಲ ಮುಟ್ಟು ನಿಲ್ಲುತ್ತಿತ್ತು. ತಾಯಂದಿರಲ್ಲಿ ಹಾಲು ಒಣಗಿಹೋಗುತ್ತಿತ್ತು.

ವಿಪರೀತ ಸೊಂಟ ನೋವು ಕಂಡುಬರುವ ಕಾರಣ, ಚಟುವಟಿಕೆಯು ಬಹುಪಾಲು ಸ್ಥಗಿತವಾಗುತ್ತಿತ್ತು. ಮೀನಖಂಡಗಳಲ್ಲಿ ತೀವ್ರ ನೋವು ಕಂಡು ಬರುತ್ತಿದ್ದವು. ಕೈಕಾಲುಗಳ ಬೆರಳುಗಳು ಊದಿಕೊಳ್ಳುತ್ತಿದ್ದವು. ಚರ್ಮದದಲ್ಲಿ ಉರಿಯೂತವುಂಟಾಗಿ ಬೊಬ್ಬೆಗಳೇಳುತ್ತಿದ್ದವು. ಬೆರಳುಗಳು ಕೆಲವು ಸಲ ಬೆಂಕಿಯಂತೆ ಸುಡುತ್ತಿದ್ದರೆ, ಒಮ್ಮೊಮ್ಮೆ ಮಂಜಿ ನಂತೆ ತಣ್ಣಗೆ ಕೊರೆಯುತ್ತಿದ್ದವು. ಬೆರಳುಗಳ ಬಣ್ಣ ಕ್ರಮೇಣ ಗಾಢವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದವು. ನೋವು ಮತ್ತು ಸ್ಪರ್ಶ ಸಂವೇದನೆಗಳು ಮಾಯವಾಗುತ್ತಿದ್ದವು. ಕೊನೆಗೆ ಒಣ ಬೆರಳುಗಳು ತಮಗೆ ತಾವೇ ಉದುರಿ ಬೀಳುತ್ತಿದ್ದವು.

ಇವರಲ್ಲಿ ಕಾಮಾಲೆಯು ಕಂಡುಬಂದು, ವಿಪರೀತ ಭೇದಿಯಾಗಿ ಸಾವು ಸಂಭವಿಸುತ್ತಿತ್ತು. ಒಣ ಅಂಗಕ್ಷಯದ ಮೊದಲ ವರ್ಣನೆಯು ಕ್ರಿ.ಶ.೮೫೭ರ ಕಾಲದ ಜರ್ಮನಿಯ ಅನಲ್ಸ್ ಕ್ಸಾಂಟೆನ್ಸಸ್‌ನಲ್ಲಿ ದೊರೆಯುತ್ತದೆ. ಇದರ ಎರಡನೆಯ ಗುಂಪಿನಲ್ಲಿ, ಮಿದುಳು ಮತ್ತು ನರಮಂಡಲಕ್ಕೆ ಸಂಬಂಧ ಪಟ್ಟ ರೋಗಲಕ್ಷಣಗಳು ಪ್ರಧಾನ ವಾಗಿ ಕಂಡುಬರುತ್ತಿದ್ದವು. ವಿಪರೀತ ಸುಸ್ತು, ಚರ್ಮ ಸಂವೇದನೆಗಳು ಏರು ಪೇರು, ಚರ್ಮದ ಕೆಳಗೆ ಇರುವೆ, ಜಿರಲೆ, ಹಾವು ಹಲ್ಲಿಗಳು ಸಂಚರಿಸುತ್ತಿವೆಯೇನೋ ಎಂಬ ಭ್ರಮೆ,ವಿಪರೀತ ವಾಕರಿಕೆಯಾಗಿ ವಾಂತಿಯಾಗುತ್ತಿತ್ತು.

ಮೈಯಲ್ಲಿ ಉರಿ ಉರಿ. ಸೆಳವು ಕಂಡುಬರುತ್ತಿತ್ತು. ದೇಹದ ಅರ್ಧಭಾಗಕ್ಕೆ ಲಕ್ವ ಹೊಡೆಯುತ್ತಿತ್ತು. ಹುಚ್ಚಿನ ಲಕ್ಷಣಗಳು ತೀವ್ರವಾಗುತ್ತಿದ್ದವು. ವಿಪರೀತ ಭ್ರಮೆಗೆ ಒಳಗಾಗುತ್ತಿದ್ದರು. ಅವರಿಗೆ ಇಲ್ಲದ ಭೀಕರ ದೃಶ್ಯಗಳು ಕಾಣುತ್ತಿದ್ದವು. ಚಿತ್ತಭ್ರಮಣೆಗೆ ಒಳಗಾಗಿ ಅವರು ರಸ್ತೆಗಳಲ್ಲಿ ಮನಬಂದಂತೆ ಓಡುತ್ತಿದ್ದರು. ವಕ್ರವಕ್ರವಾಗಿ ಕುಣಿದು ಕುಪ್ಪಳಿಸುತ್ತಿದ್ದರು. ಜನರು ಇದನ್ನು ಕುಣಿಯುವ ಪಿಡುಗು ಎಂದು ಕರೆದರು. ಎರಡನೆಯ ಗುಂಪಿನ ವಿಷಲಕ್ಷಣಗಳ ಮೊದಲ ದಾಖಲೆಯು ಕ್ರಿ.ಶ.೯೪೫ರ ಪ್ಯಾರಿಸ್ ನಗರದ ದಾಖಲೆಗಳಲ್ಲಿ ಕಂಡುಬರುತ್ತದೆ.

ಕ್ರಿ.ಶ.೯೯೪ರಲ್ಲಿ ಫ್ರಾನ್ಸಿನಲ್ಲಿ ಕಂಡುಬಂದ ಈ ಪಿಡುಗು ೪೦,೦೦೦ ಜನರನ್ನು ಕೊಂದಿತು. ೧೦೯೫. ಫ್ರಾನ್ಸ್‌ನ ವಿಯನ್ನದಲ್ಲಿ ಸಂತ ಆಂಥೋನಿ
ಯವರ ಚಿಕಿತ್ಸಾಪಾದ್ರಿಗಳು ಆಸ್ಪತ್ರೆಗಳನ್ನು ತೆರೆದರು. ಅರ್ಗಟ್ ವಿಷಪ್ರಾಶನಕ್ಕೆ ತುತ್ತಾಗಿದ್ದ ಜನರು ಅಲ್ಲಿಗೆ ಬರುತ್ತಿದ್ದರು. ಸಂತ ಆಂಥೋನಿಯವರು ಈಜಿಪ್ಟಿನ ಮರುಭೂಮಿಯಲ್ಲಿ ಧ್ಯಾನಸ್ಥರಾಗಿದ್ದಾಗ ಅವರನ್ನು ನಾನಾ ಭೂತಗಳು ವಿಪರೀತವಾಗಿ ಹಿಂಸಿಸಿದವಂತೆ. ಅಲೆಗ್ಸಾಂಡ್ರಿಯದ ಬಿಶಪ್
ಅಥನಾಸಿಯ (ಕ್ರಿ.ಶ.೩೬೦) ಈ ಬಗ್ಗೆ ದಾಖಲಿಸಿರುವರು. ಚಿಕಿತ್ಸಾಪಾದ್ರಿಗಳು ಈ ವಿವರಣೆಯನ್ನು ಅರ್ಗಟ್ ವಿಷವೇರಿಕೆಗೆ ಹೋಲಿಸಿ, ಅದನ್ನು ಸಂತ ಆಂಥೋನಿಯವರ ಪವಿತ್ರ ಬೆಂಕಿ ಎಂದು ಕರೆದರು. ಆ ಹೆಸರು ಪ್ರಸಿದ್ಧವಾಗಿ ಇಂದಿನವರೆಗೂ ಉಳಿದುಬಂದಿದೆ. ಆಸ್ಪತ್ರೆಯಲ್ಲಿ ದಾಖಲಾದ ವಿಷ ಪೀಡಿತರಿಗೆ ಚಿಕಿತ್ಸಾ ಪಾದ್ರಿಗಳು ಮೊದಲು ಸಾಂತ್ವನದ ನುಡಿಗಳನ್ನಾಡಿದರು. ಆಶ್ರಯವನ್ನು ನೀಡಿದರು.

ತಿನ್ನಲು ಶುದ್ಧವಾದ ಗೋಧಿಹಿಟ್ಟಿನಿಂದ ಮಾಡಿದ ಬ್ರೆಡ್ ನೀಡಿದರು. ಮುಖ್ಯವಾಗಿ ಉರಿಯುವ ಭಾಗಗಳಿಗೆ ಹಂದಿಕೊಬ್ಬನ್ನು ಸವರಿದರು. ಹಂದಿಯ ಕೊಬ್ಬು ಉರಿಯೂತವನ್ನು ಕಡಿಮೆ ಮಾಡಿ, ಉರಿಯನ್ನು ಕಡಿಮೆ ಮಾಡಿತು. ಉರಿಯು ಕಡಿಮೆಯಾಗುತ್ತಿರುವಂತೆಯೇ, ರೋಗಪೀಡಿತರಿಗೆ ಸಂತ
ಆಂಥೋನಿಯವರ ಮೇಲೆ ಎಲ್ಲಿಲ್ಲದ ವಿಶ್ವಾಸವು ಮೂಡಿತು. ಅಪರೂಪದ ಮೂಲಿಕೆಗಳು, ಮೀನು, ಉಮ್ಮತ್ತಿ, ಮ್ಯಾಂಡ್ರಗೋರ ಮುಂತಾದವುಗಳಿಂದ ಮಾಡಿದ ತಂಪುಕಾರಕ ಟಾನಿಕ್‌ಗಳನ್ನು ಕುಡಿಯಲು ಕೊಡಲಾರಂಭಿಸಿದರು. ಈ ಟಾನಿಕ್ಕುಗಳಲ್ಲಿ ಮ್ಯಾಂಡ್ರಗೋರವಿರುತ್ತಿತ್ತು.

ಮ್ಯಾಂಡರಗೋರದಲ್ಲಿ ಹೊಯಾಸಿನ್ ಮತ್ತು ಹೊಯಾಸಿಮಿನ್ ಎಂಬ ಆಲ್ಕಲಾಯ್ಡುಗಳು ಭ್ರಮೆಯನ್ನು ಉಂಟು ಮಾಡಿ ಗಾಳಿಯಲ್ಲಿ ಹಾರುತ್ತಿರು ವಂತಹ ಅನುಭವವನ್ನು ನೀಡುತ್ತಿದ್ದವು. ಜತೆಗೆ ಅರ್ಗಟನ್ನು ಗೋಧಿ ಹಿಟ್ಟಿನೊಂದಿಗೆ ಬೇಯಿಸಿದಾಗ ಲೈಸರ್ಜಿಕ್ ಆಸಿಡ್ ಡೈಈಥೈಲ್ ಅಮೈನ್
(ಎಲ್‌ಎಸ್‌ಡಿ) ಉತ್ಪಾದನೆಯಾಗಿ ಮತ್ತಷ್ಟು ಭ್ರಮೆಗಳನ್ನು ಉಂಟು ಮಾಡುತ್ತಿತ್ತು. ಕೆಲವು ಸಲ ಮ್ಯಾಂಡ್ರಗೋರವನ್ನು ಅಳತೆ ಮೀರಿ ಬಳಸಿದಾಗ, ಸಾವು ಸದ್ದಿಲ್ಲದೆ ಆವರಿಸುತ್ತಿತ್ತು.

 
Read E-Paper click here