ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಒಂದು ಹಳ್ಳಿಯ ಹೊರ ವಲಯದಲ್ಲಿ ಒಬ್ಬರು ಸನ್ಯಾಸಿ ಇದ್ದರು. ಅವರ ಪ್ರವಚನ ಮತ್ತು ಮಾತನಾಡುವ ಶೈಲಿ ತುಂಬಾ ಹಿತಕರವಾಗಿತ್ತು ಮತ್ತು ಆತನ ಮಾತನ್ನು ಕೇಳಿ ಒಬ್ಬ ಯುವಕ ಸನ್ಯಾಸಿಯ ಶಿಷ್ಯನಾಗಲೂ ಇಷ್ಟಪಟ್ಟ.
ಗುರೂಜಿ, ನಾನು ಅಧ್ಯಾತ್ಮ ಪಥವನ್ನು ಅನುಸರಿಸಲು ತಮ್ಮ ಆಶೀರ್ವಾದ ಬೇಕು. ಎಂದು ವಿನಂತಿ ಮಾಡಿದ. ಸರಿ, ಒಳ್ಳೆಯ ವಿಚಾರ. ಯಾವಾಗಿನಿಂದ ನೀನು ಅಧ್ಯಾತ್ಮ ಪಥವನ್ನು ಅನುಸರಿಸಲು ಇಷ್ಟಪಡುತ್ತೀಯ? ಎಂದು ಸಂನ್ಯಾಸಿ ವಿಚಾರಿಸಿದರು. ನಮ್ಮ ಮನೆಯಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಯುವಕ ಹಳ್ಳಿಗೆ ಹಿಂತಿರುಗಿದ. ಒಂದು ತಿಂಗಳ ನಂತರ ಆಶ್ರಮಕ್ಕೆ ಆ ಯುವಕ ಬಂದು, ಗುರುಗಳೇ, ನಮ್ಮ ಹಳ್ಳಿಯ ಶ್ರೀಮಂತ ಸಾಹುಕಾರರು ತನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಲು ಇಚ್ಛಿಸಿದ್ದಾರೆ. ಮದುವೆಯಾದ ನಂತರ ಅಧ್ಯಾತ್ಮ ಪಥ ಅನುಸರಿಸುತ್ತೇನೆ ಎಂದ.
ಗುರುಗಳು ನಸುನಕ್ಕರು. “ಇದಕ್ಕೆ ನಿಮ್ಮ ತಂದೆ-ತಾಯಿ ಒಪ್ಪಿಗೆಯೇ? ನಿನಗೂ ಒಪ್ಪಿಗೆಯೇ?” ಎಂದು ಕೇಳಿದರು. ಹೌದು. ಮದುವೆಯಾದ ನಂತರ ಖಂಡಿತ ನಾನು ಇಲ್ಲಿಗೆ ಬಂದು, ಅಧ್ಯಾತ್ಮ ಪಥ ಅನುಸರಿಸುತ್ತೇನೆ ಎಂದು ಯುವಕ ಗುರುಗಳಿಗೆ ನಮಸ್ಕರಿಸಿದ. ಗುರುಗಳು ಆಶೀರ್ವದಿಸಿ, ಸರಿ ಮಗು ನಿನಗೆ ಒಳ್ಳೆಯ ದಾಗಲಿ. ಆದರೆ, ಬೊಕ್ಕತಲೆಗೆ ಸುವಾಸಿತ ಗಂಧದಿಂದ ಏನು ಪ್ರಯೋಜನ? ಎಂದು ಉದ್ಗರಿಸಿ ನಸು ನಕ್ಕರು. ಯುವಕನ ತಲೆಯಲ್ಲಿ ತುಂಬಾ ಕಪ್ಪು ಕೂದಲು ಇತ್ತು ಮತ್ತು ಅದರ ಬಗ್ಗೆ ಆತನಿಗೆ ಬಹಳ ಮೋಹವಿತ್ತು. ಆದರೆ ಗುರುಗಳು ಹೇಳಿದ ಮಾತಿನ ಅರ್ಥ ಆತನಿಗೆ ಗೊತ್ತಾಗಲಿಲ್ಲ.
ಯುವಕನು ಆನಂತರ ಶ್ರೀಮಂತನ ಮಗಳನ್ನು ಮದುವೆಯಾದ. ಅಷ್ಟು ಮಾತ್ರವಲ್ಲ, ಆತ ಇನ್ನೊಬ್ಬ ಹುಡುಗಿಯನ್ನು ಪ್ರೀತಿಸಿ ಎರಡನೆಯ ಮದುವೆಯಾದ! ಆನಂತರ ಸಂತೋಷದಿಂದ ಜೀವನ ಕಳೆಯತೊಡಗಿದ. ಹಲವು ವರ್ಷಗಳು ಕಳೆದವು. ದಟ್ಟವಾಗಿ ಬೆಳೆದಿದ್ದ ಆತನ ಕೂದಲು ಸ್ವಲ್ಪ ತೆಳುವಾಯಿತು. ಒಮ್ಮೆ ಆತ ಹುಷಾರು ಇಲ್ಲದೆ ಮಲಗಿದ. ಎರಡು ಮೂರು ತಿಂಗಳು ಹಾಸಿಗೆಯ ಇರಬೇಕಾಯಿತು. ಆಗ ಆತನ ಇಬ್ಬರೂ ಹೆಂಡಿರು ನಿಷ್ಟೆಯಿಂದ ಆತನ ಸೇವೆ ಮಾಡಿದರು. ಕಿರಿ ಹೆಂಡತಿಯು, ಪ್ರತಿ ದಿನ ಆತನ ತಲೆಯ ಬಿಳಿ ಕೂದಲನ್ನು ಕೀಳುತ್ತಾ ಬಂದಳು.
ತನ್ನ ಗಂಡನ ತಲೆಯಲ್ಲಿ ಕಪ್ಪು ಕೂದಲು ಮಾತ್ರ ಇರಲಿ ಎಂಬ ಆಸೆ ಆಕೆಗೆ. ಆದರೆ ಹಿರಿ ಹೆಂಡತಿಯು, ಆತನ ತಲೆಯಲ್ಲಿದ್ದ ಕಪ್ಪು ಕೂದಲನ್ನು ಪ್ರತಿದಿನ ಒಂದೊಂದಾಗಿ ಕೀಳುತ್ತಿದ್ದಳು. ತನ್ನ ಗಂಡನು ತನಗಿಂತ ಹುಡುಗನ ರೀತಿ ಕಾಣಬಾರದು ಎಂಬ ಇರಾದೆ ಆಕೆಯದು. ಆದರೆ ಇಬ್ಬರು ಹೆಂಡಿರು ಆತನ ಆರೋಗ್ಯವನ್ನು ತುಂಬಾ ಚೆನ್ನಾಗಿ ನೋಡಿಕೊಂಡರು.
ನಾಲ್ಕಾರು ತಿಂಗಳಲ್ಲಿ ಆತ ಗುಣಮುಖನಾದ. ಒಂದು ದಿನ ಕನ್ನಡಿಯಲ್ಲಿ ನೋಡಿದರೆ, ಆತನ ತಲೆಯು ಸಂಪೂರ್ಣ ಬೊಕ್ಕತಲೆಯಾಗಿತ್ತು! ಇದೇನು, ನನ್ನ ಇಬ್ಬರು ಹೆಂಡಿರು ತುಂಬಾ ಪ್ರೀತಿಯಿಂದ ನೋಡಿಕೊಂಡರೂ, ಎಲ್ಲಾ ಕೂದಲುಗಳು ಉದುರಿಹೋಗಿದ್ದು ಹೇಗೆ? ಎಂದು ಆತನಿಗೆ ಬಹಳ ಅಚ್ಚರಿಯಾಯಿತು. ಒಂದೆರಡು ದಿನ ಯೋಚಿಸಿದ ನಂತರ, ಬಹು ಹಿಂದೆ ಸನ್ಯಾಸಿ ಅವರು ಹೇಳಿದ ಮಾತು ನೆನಪಾಯಿತು. ಜತೆಗೆ ತಾನು ಅಧ್ಯಾತ್ಮ ಪಥವನ್ನು ಅನುಸರಿಸುತ್ತೇನೆ ಎಂದು ಅವರಿಗೆ ಹೇಳಿದ್ದು ನೆನಪಾಯಿತು.
ಆತ ತನ್ನ ಬೋಳು ತಲೆಯ ಮೇಲೆ ಕೈಯಾಡಿಸುತ್ತಾ ಹಳ್ಳಿಯಿಂದ ಹೊರವಲಯದಲ್ಲಿದ್ದ ಸನ್ಯಾಸಿಗಳ ಆಶ್ರಮವನ್ನು ಹುಡುಕಿಕೊಂಡು ಹೋದ. ಆದರೆ ಆ ಗುರುಗಳು ಕೆಲವು ವರ್ಷಗಳ ಹಿಂದೆ ಹಿಮಾಲಯದ ಕಡೆ ಹೋದರು ಎಂದು ಅಲ್ಲಿದ್ದ ಆಶ್ರಮವಾಸಿಗಳು ಹೇಳಿದರು. ತಾನು ಆಶ್ರಮದ ಕಡೆ ಪಾದ ಬೆಳೆಸಿದ್ದು ಬಹಳ ವಿಳಂಬವಾಯಿತು ಎಂದು ಈಗ ವ್ಯಕ್ತಿಗೆ ಅರಿವಾಯಿತು.
(ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು ಎಂಬ ಪಾಠ ಈ ಕಥೆಯಲ್ಲಿದೆ)