Sunday, 15th December 2024

ಮೊಸಾದ್ ದಾರಿ ಹಿಡಿದಿದೆಯೇ ರಾ ಗುಪ್ತಚರ ಸಂಸ್ಥೆ ?

ಶಿಶಿರ ಕಾಲ

shishirh@gmail.com

ಮೊಸಾದ್, ಇಸ್ರೇಲಿ ಬೇಹುಗಾರಿಕಾ ಸಂಸ್ಥೆ. ಇಸ್ರೇಲ್ ಹುಟ್ಟಿದಾಗಿನಿಂದ ಇಲ್ಲಿಯವರೆಗಿನ ಇತಿಹಾಸವನ್ನು ಹೇಳುವಾಗ ಪ್ರತಿಯೊಂದು ಮುಖ್ಯ ಘಟನೆಯಲ್ಲೂ ಮೊಸಾದ್ ಹೆಸರು ಕೇಳಿಬಂದೇತೀರುತ್ತದೆ. ಹೋಲೋಕಾಸ್ಟ್- ಯೆಹೂದಿಗಳ ಸಾಮೂಹಿಕ ಮಾರಣಹೋಮ, ಎರಡನೇ ಮಹಾಯುದ್ಧ ಇವೆಲ್ಲದರ ತರುವಾಯ, ಬ್ರಿಟಿಷರು ಮಾಡಿದ ಕೆಲವು ಎಡವಟ್ಟು ನಿರ್ಧಾರಗಳಿಂದಾಗಿ ಶುರುವಾದ ಇಸ್ರೇಲ್‌ನ ಅಸ್ತಿತ್ವದ ಹೋರಾಟ ಇಂದಿಗೂ ಮುಂದುವರಿದಿದೆ. ಆ ಕಾರಣಕ್ಕೇ ಮೊಸಾದ್ ಹೊರತುಪಡಿಸಿ ನೋಡಿದರೆ ಇಸ್ರೇಲಿನ ಇತಿಹಾಸವು ಅಪೂರ್ಣ.

ಕಳೆದ ಐವತ್ತು ವರ್ಷದಲ್ಲಿ ಮಧ್ಯ ಪ್ರಾಚ್ಯದಲ್ಲಿ ಏನೇನೆಲ್ಲ ಭಾನಗಡಿ ಬೆಳವಣಿಗೆಗಳು ನಡೆದಿವೆ, ಅದೆಲ್ಲದರ ಹಿಂದೆ ಒಂದಿಲ್ಲೊಂದು ರೀತಿಯಲ್ಲಿ ಈ ಸಂಸ್ಥೆಯ
ಕೈವಾಡ, ಶಂಕೆ ಇದ್ದೇ ಇದೆ. ಇಸ್ರೇಲ್ ಹುಟ್ಟಿದ್ದು ೧೯೪೮ರಲ್ಲಿ. ಅಂದಿನಿಂದ ಇಂದಿನವರೆಗೆ ಮೊಸಾದ್ ಇಸ್ರೇಲಿ ಶತ್ರುಗಳನ್ನು ಅನ್ಯನೆಲದಲ್ಲಿ, ದೇಶದಲ್ಲಿ ಒಳಹೊಕ್ಕು ಕೊಲ್ಲುತ್ತಲೇ ಬಂದಿದೆ. ಜೋರ್ಡನ್ ಮತ್ತು ಈಜಿಪ್ಟ್- ಇಸ್ರೇಲ್ ದೇಶವನ್ನು ನಾಮಾವಶೇಷ ಮಾಡಬೇಕೆಂದೇ ನಿಂತ ದೇಶಗಳು ಇವು. ಅಷ್ಟೇ ಅಲ್ಲ, ಎಲ್ಲ ಆಜುಬಾಜು ಮುಸ್ಲಿಂ ದೇಶಗಳೂ ಅಷ್ಟೆ. ಈಗ ಯುದ್ಧ ನಡೆಯುತ್ತಿರುವ ಗಾಜಾ ಪಟ್ಟಿಯಲ್ಲಿ ೧೯೪೮ ರಿಂದ ೧೯೬೭ರವರೆಗೂ ಈಜಿಪ್ಟ್ ಆಡಳಿತವಿತ್ತು.

ಇಸ್ರೇಲಿನ ಶತ್ರುಗಳ ಪಟ್ಟಿಯಲ್ಲಿ ಈಜಿಪ್ಟ್ ಮೊದಲನೆಯದು. ೧೯೫೫- ೫೬ರ ಸಮಯದಲ್ಲಿ ಇಸ್ರೇಲ್ ಅನ್ನು ಉಡಾಯಿಸಿಬಿಡುವ ಇರಾದೆ ಈಜಿಪ್ಟ್‌ಗೆ ಇತ್ತು. ಈಜಿಪ್ಟ್‌ನ ಸೈನ್ಯ, ಅದರ ಅಧಿಕಾರಿಗಳು ಇಸ್ರೇಲಿನ ಮೇಲೆ ತೀರಾ ವ್ಯವಸ್ಥಿತ ದಾಳಿಯನ್ನು ಮಾಡುವವರಿದ್ದರು. ಅದಕ್ಕೆ ಬೇಕಾದ ರಾಕೆಟ್, ಬಾಂಬು ಇತ್ಯಾದಿ ಯನ್ನು ಶೇಖರಿಸುವ ಕೆಲಸವನ್ನು ಈಜಿಪ್ಟ್ ಸೈನ್ಯಾಧಿಕಾರಿಗಳು ಮಾಡುತ್ತಿದ್ದರು. ೧೯೫೬ರ ಜುಲೈ. ಈಜಿಪ್ಟ್ ಸೈನ್ಯದ ಲೆಫ್ಟಿನೆಂಟ್ ಕರ್ನಲ್ ಗಾಜಾದಲ್ಲಿದ್ದ. ಇನ್ನೊಬ್ಬ ಅಧಿಕಾರಿ ಜೋರ್ಡನ್‌ನ ಅಮಾನ್‌ನಲ್ಲಿದ್ದ. ಒಂದು ದಿನದ ಅಂತರದಲ್ಲಿ ಪಾರ್ಸೆಲ್ ಬಾಂಬ್‌ನಿಂದ ಅವರಿಬ್ಬರನ್ನೂ ಮೊಸಾದ್ ಕೊಂದಿತ್ತು. ಅಂದಿನ ಕಾಲದಲ್ಲಿ ಬಹಳ ಸುದ್ದಿಯಾದ ಕಥೆಯದು.

ನಂತರ ೧೯೬೨ರಲ್ಲಿ, ಜರ್ಮನಿಯ ವಿಜ್ಞಾನಿಯೊಬ್ಬ ಈಜಿಪ್ಟ್‌ನ ಮಿಸೈಲ್ ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಇದ್ದದ್ದು ಜರ್ಮನಿಯಲ್ಲಿ. ಅವನನ್ನು
ಲ್ಯಾಬ್‌ನಿಂದ ಅಪಹರಿಸಲಾಯಿತು. ನಂತರ ಆತನ ಹೆಣ ಕೂಡ ಸಿಗಲೇ ಇಲ್ಲ. ಯೆಹೂದಿಗಳ ಮಾರಣಹೋಮ ಹೋಲೋಕಾಸ್ಟ್‌ಗೆ ಕಾರಣವಾದ, ಭಾಗಿಯಾದ ಬಹಳಷ್ಟು ಮಂದಿ ಅಂದು ದಕ್ಷಿಣ ಅಮೆರಿಕ ಮತ್ತು ಉಳಿದ ದೇಶಗಳಲ್ಲಿ ಆಶ್ರಯ ಪಡೆದಿದ್ದರು.

ಫ್ರಾನ್ಸ್, ಲೆಬನಾನ್, ನಾರ್ವೆ, ಉರುಗ್ವೆ, ಇಟಲಿ, ಸೈಪ್ರಸ್, ಜರ್ಮನಿ, ಬ್ರೆಜಿಲ್, ಟ್ಯುನೀಸಿಯಾ, ಬೆಲ್ಜಿಯಂ ಹೀಗೆ ಏನಿಲ್ಲವೆಂದರೂ ಇನ್ನೊಂದಿಪ್ಪತ್ತು ದೇಶಗಳಲ್ಲಿದ್ದ, ನರಮೇಧಕ್ಕೆ ಕಾರಣವಾದವರನ್ನು ಕೊಂದುಹಾಕಿತು ಮೊಸಾದ್-ಇಸ್ರೇಲ್. ಇಲ್ಲಿಯವರೆಗೆ ಸುಮಾರು ಸಾವಿರಕ್ಕಿಂತ ಜಾಸ್ತಿ ಮಂದಿಯನ್ನು, ಇಸ್ರೇಲಿ ಶತ್ರು ಗಳನ್ನು ‘ಟಾರ್ಗೆಟೆಡ್ ಅಸಾಸಿನೇಷನ್’ ಮಾಡಿದೆ ಮೊಸಾದ್. ಇನ್ನು ಗಾಜಾಪಟ್ಟಿಯಲ್ಲಿ, ಪ್ಯಾಲೆಸ್ತೀನ್ ಭಯೋತ್ಪಾದಕರನ್ನು ಕೊಂದ ಲೆಕ್ಕ ಪ್ರತ್ಯೇಕ.

ಮೊಸಾದ್‌ನ ಹತ್ಯೆಗಳ ಕಥೆಗಳಿರುವ ಜಿoಛಿ Zb ಓಜ್ಝ್ಝಿ ಊಜ್ಟಿoಠಿ, Z oಛ್ಚ್ಟಿಛಿಠಿ eಜಿoಠಿಟ್ಟqs ಟ್ಛ ಐoZಛ್ಝಿೞo ಠಿZಜಛಿಠಿಛಿb ZooZooಜ್ಞಿZಠಿಜಿಟ್ಞo ಎಂಬ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ಪ್ರತಿಯೊಂದು ಉದ್ದೇಶಿತ ಹತ್ಯೆಯೂ ಒಂದೊಂದು ಚಲನಚಿತ್ರವಾಗಿಸುವಷ್ಟು ರೋಚಕ. ೨೦೧೦-ದುಬೈ. ಹಮಾಸ್‌ನ ಕಮಾಂಡರ್ ಒಬ್ಬನನ್ನು ದುಬೈನ ಹೋಟೆಲ್ ಒಂದರಲ್ಲಿ ಹತ್ಯೆ ಮಾಡಲಾಗಿತ್ತು. ಇದೆಲ್ಲವನ್ನು ಮಾಡಿದ್ದು ಒಬ್ಬ ವ್ಯಕ್ತಿ. ಆತ ಪ್ರವಾಸಿಗನಂತೆ ಹೋಟೆಲ್‌ನ ಚೆಕ್-ಇನ್ ಮಾಡುವ ಮೊಗಸಾಲೆಯಲ್ಲಿ ಕಾದು ನಿಂತು, ಹಿಂಬಾಲಿಸಿ, ಆತ ತಂಗಿದ್ದ ರೂಮಿನಲ್ಲಿ ಹೊಕ್ಕು ಕೊಂದದ್ದು ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅದೇ ವರ್ಷ ಬೇರೆ ಬೇರೆ ದೇಶದಲ್ಲಿ ಹಮಾಸ್‌ನ ಸುಮಾರು ಹತ್ತು ಭಯೋತ್ಪಾದಕ ಮುಖಂಡರನ್ನು ಇಸ್ರೇಲ್ ಕೊಂದಿದೆ. ನಂತರ ಇರಾನಿನ ಅಣ್ವಸ್ತ್ರ ವಿಜ್ಞಾನಿ ಮೋಹಸೇನ್ -ಕ್ರಜಾದೇಹ್‌ನನ್ನು ಟ್ರಕ್ ಒಂದರಲ್ಲಿ ರಿಮೋಟ್ ಕಂಟ್ರೋಲ್ ಬಂದೂಕನ್ನು ಇಟ್ಟು, ಮಾರ್ಗಮಧ್ಯೆ ಕೊಂದಿದ್ದರ ರೋಚಕ ಕಥೆಯನ್ನು ಹಿಂದೆ
‘ಶಿಶಿರಕಾಲ’ದಲ್ಲಿ ಒಂದು ಲೇಖನವಾಗಿ ಬರೆದಿದ್ದೆ. ಇಸ್ರೇಲಿಗೆ ಈ ವಿಷಯದಲ್ಲಿ ಯಾವುದೇ ಮುಲಾಜಿಲ್ಲ, ಸಂಕೋಚವೂ ಇಲ್ಲ. ಈ ದೇಶ ಇಂಥ ಹತ್ಯೆ ಮಾಡಿದ ನಂತರ ಯಾವುದೇ ಪುರಾವೆ ಬಿಡುವುದಿಲ್ಲ. ಆದರೆ ಇದನ್ನು ಇಸ್ರೇಲ್ ದೇಶವೇ ಮಾಡಿದ್ದು ಎಂಬ ಆರೋಪ ಬರುವಂತೆ ನೋಡಿಕೊಳ್ಳುತ್ತದೆ. ಪರೋಕ್ಷವಾಗಿ ತಾನೇ ಕೊಂದದ್ದು ಎಂಬ ಸಂದೇಶ ಜಗತ್ತಿಗೆ ಮುಟ್ಟುವಂತೆ ಮಾಡುತ್ತದೆ. ಈ ದೇಶ ಹತ್ಯೆಯನ್ನು ತಾನೇ ಮಾಡಿದ್ದು ಎಂದು ಒಪ್ಪುವುದೂ ಇಲ್ಲ, ನಿರಾಕರಿಸುವುದೂ ಇಲ್ಲ.

ಹೀಗೆಯೇ ಒಂದು ಹತ್ಯೆಯನ್ನು ಮೊಸಾದ್ ಮಾಡಿದಾಗ, ಪತ್ರಕರ್ತರು ಅದರ ಮುಖ್ಯಸ್ಥನ ಎದುರು ಪ್ರಶ್ನಿಸಿ ಮೈಕ್ ಹಿಡಿದಿದ್ದರು. ಅದಕ್ಕೆ ಆತ ‘ನೀವು ಜೇಮ್ಸ್‌ ಬಾಂಡ್ ಚಲನಚಿತ್ರವನ್ನು ಈಗೀಗ ಬಹಳ ನೋಡುತ್ತಿದ್ದೀರಿ. ಅದನ್ನು ಕಡಿಮೆ ಮಾಡಿ’ ಎಂದು ಹೇಳಿ ಹೊರಟು ಬಿಟ್ಟಿದ್ದ. ದೇಶದ ಶತ್ರುಗಳನ್ನು ಹೊರದೇಶದಲ್ಲಿ, ಇನ್ನೊಂದು ಸಾರ್ವಭೌಮ ನೆಲದಲ್ಲಿ ಹತ್ಯೆಮಾಡಿ ದಕ್ಕಿಸಿಕೊಳ್ಳುವುದು ಯಾವುದೇ ದೇಶಕ್ಕೆ ಸುಲಭದ ಕೆಲಸವಲ್ಲ. ಹಾಗೊಮ್ಮೆ ಅದು ಸಾಬೀತಾದರೆ, ಒಂದೇ ಒಂದು ಹತ್ಯೆ ದೇಶಗಳ ನಡುವಿನ ಸಂಬಂಧವನ್ನು ಬಿಗಡಾಯಿಸಿಬಿಡುತ್ತದೆ. ಮುಂದೆ ಯುದ್ಧಕ್ಕೆ ಕೂಡ ನಾಂದಿಯಾಗಬಹುದು. ಸೌದಿ ಅರೇಬಿಯಾ ತನ್ನ ನಾಗರಿಕ ಜಮಾಲ್ ಕಶೋಗ್ಗಿ ಎಂಬ ಪತ್ರಕರ್ತನನ್ನು ತುರ್ಕಿಯೆ ದೇಶದಲ್ಲಿರುವ ಸೌದಿ ದೂತಾವಾಸ ಕಚೇರಿಯ ಒಳಗೇ ಕೊಂದಿತ್ತು.

ಅದು ಭೀಕರ ಹತ್ಯೆ. ದೇಹವನ್ನು ತುಂಡು ತುಂಡಾಗಿಸಿ, ಭಾಗಗಳನ್ನು ರುಬ್ಬಿ ಅಲ್ಲಿನ ಟಾಯ್ಲೆಟ್‌ನಲ್ಲಿ -ಶ್ ಮಾಡಿ ಅವನನ್ನು ಮಂಗಮಾಯ ಮಾಡಲಾಯಿತು.
ಇದೆಲ್ಲವನ್ನೂ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮಾಡಿಸಿದ್ದು ಎಂಬುದನ್ನು ಇಂದು ಪ್ರತ್ಯೇಕವಾಗಿ ಸಾಬೀತುಪಡಿಸಬೇಕಿಲ್ಲ. ಜಮಾಲ್  ಕಶೋಗ್ಗಿ ಅಮೆರಿಕದ ಶಾಶ್ವತ ನಿವಾಸಿಯಾಗಿ ಪರವಾನಗಿ ಪಡೆದಿದ್ದ. ಇನ್ನು ಕೆಲವೇ ತಿಂಗಳಲ್ಲಿ ಆತ ಅಮೆರಿಕನ್ ಪ್ರಜೆಯಾಗಿ ಪೌರತ್ವ ಪಡೆಯುವವನಿದ್ದ. ಸೌದಿ ರಾಜಕುಮಾರನ ವಿರುದ್ಧ ಧ್ವನಿಯೆತ್ತಿದ ಎಂಬ ಒಂದೇ ಕಾರಣಕ್ಕೆ ಆತನನ್ನು ಅಷ್ಟು ಅಮಾನವೀಯವಾಗಿ ಕೊಲ್ಲಲಾಯಿತು. ಆತ ಅಷ್ಟರೊಳಗೆ ಅಮೆರಿಕದ ಪೌರತ್ವ
ಪಡೆದಿದ್ದಿದ್ದರೆ ಈ ಹತ್ಯೆ ಅಷ್ಟು ಸುಲಭವಾಗುತ್ತಿರಲಿಲ್ಲ. ಒಬ್ಬ ವ್ಯಕ್ತಿ ಯಾವುದೇ ದೇಶದಲ್ಲಿ ಹುಟ್ಟಿರಲಿ, ಬೆಳೆದಿರಲಿ, ಆತ ಇನ್ನೊಂದು ದೇಶದ ಪೌರತ್ವ ಪಡೆದನೆಂದರೆ ಆತನನ್ನು ಆ ದೇಶ ತನ್ನ ಉಳಿದ ನಾಗರಿಕರಂತೆಯೇ ಪರಿಗಣಿಸಬೇಕು.

ಅಮೆರಿಕ ಮೊದಲಾದ ದೇಶಗಳು ತಮ್ಮ ನಾಗರಿಕರ ಮೇಲೆ ಜಗತ್ತಿನ ಯಾವುದೇ ಮೂಲೆಯಲ್ಲಿ ದಾಳಿಯಾದರೂ ಅದನ್ನು ಆ ದೇಶದ ಮೇಲೆ ನಡೆದ ದಾಳಿಯೆಂದೇ ಪರಿಗಣಿಸುತ್ತವೆ. ಪೌರತ್ವ ಇವೆಲ್ಲದಕ್ಕೆ ಬೇರೆಯದೇ ಬಣ್ಣವನ್ನು ತುಂಬುತ್ತವೆ. ಈ ರೀತಿ ಉದ್ದೇಶಿತ ಹತ್ಯೆಯನ್ನು ಒಂದು ದೇಶ ಇನ್ನೊಂದು ಸಾರ್ವಭೌಮ ದೇಶದ ನೆಲದಲ್ಲಿ ಮಾಡುವುದನ್ನು ಎಲ್ಲ ಪಾಶ್ಚಿಮಾತ್ಯ ದೇಶಗಳು ಖಂಡಿಸುತ್ತವೆ. ಮಾನವ ಹಕ್ಕು ಎಂಬಿತ್ಯಾದಿ ಬೊಬ್ಬೆಯಿಡುತ್ತವೆ. ಆದರೆ ಅವೇ ದೇಶಗಳು ಅದೇ ಕೆಲಸವನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡುತ್ತವೆ. ಅದಕ್ಕೆ ಆತ್ಮರಕ್ಷಣೆ, ಭಯೋತ್ಪಾದನೆಯ ನಿರ್ಮೂಲ ಎಂಬಿತ್ಯಾದಿ ಹೆಸರು ಕೊಡುತ್ತವೆ.

ನೀವು ಅಂತಾರಾಷ್ಟ್ರೀಯ ಸುದ್ದಿಯನ್ನು ಹಿಂಬಾಲಿಸುವವರಾಗಿದ್ದಲ್ಲಿ ಇಂಥ ಹತ್ಯೆಗಳ ಸುದ್ದಿ, ಅದು ನಂತರದಲ್ಲಿ ಬೇರೆ ಬೇರೆ ರೂಪಗಳನ್ನು ಪಡೆದು ಠುಸ್ ಪಟಾಕಿಯಾಗುವುದು ಸಾಮಾನ್ಯ ಎಂಬುದರ ಅರಿವಾಗುತ್ತದೆ. ಅಮೆರಿಕ, ರಷ್ಯಾ, ಇಸ್ರೇಲ್, ಚೀನಾ ಈ ಕೆಲವು ದೇಶಗಳು ಈ ಕೆಲಸವನ್ನು ನಿರಂತರವಾಗಿ ಮಾಡಿಕೊಂಡೇ ಬಂದಿವೆ. ಅಮೆರಿಕದಂಥ ಬಲಿಷ್ಠ ದೇಶಗಳು ಇಂಥ ಹತ್ಯೆಗಳನ್ನು ಮಾಡಿ, ತಾವೇ ಮಾಡಿದ್ದು ಎಂದು ಹೇಳಿ ದಕ್ಕಿಸಿಕೊಂಡ ಅದೆಷ್ಟೋ ಉದಾ ಹರಣೆಗಳಿವೆ. ಒಸಾಮ ಬಿನ್ ಲಾಡೆನ್‌ನನ್ನು ಅದು ಹತ್ಯೆ ಮಾಡಿದ್ದು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ನೆಲದಲ್ಲಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ಇಂಥ ಸುದ್ದಿ ಓದುವಾಗಲೆಲ್ಲ ನಮ್ಮ ಭಾರತ ದೇಶ ಏಕೆ ಇಂಥದ್ದನ್ನೆಲ್ಲ ಮಾಡುವುದಿಲ್ಲ ಎಂದೆನಿಸಿದ್ದಿದೆ.

ಅನ್ಯದೇಶದಲ್ಲಿ ನೆಲೆ ಪಡೆದ ಕ್ರಿಮಿನಲ್‌ಗಳು, ಭಯೋತ್ಪಾದಕರನ್ನು ನಮ್ಮ ದೇಶವೇಕೆ ಈ ರೀತಿ ಮುಗಿಸುವುದಿಲ್ಲ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇಂಥ ಹತ್ಯೆಯು ಮಾನವೀಯ ಕಾರಣಗಳಿಗೆ ಸರಿ ಯಲ್ಲ ಎಂಬಿತ್ಯಾದಿ ವಾದ ಒಂದು ಕಡೆ. ಇಂಥವರಿಂದ ಆಗ ಬಹುದಾದ ಅನಾಹುತಗಳು, ಸಾವು ನೋವುಗಳು, ಗಲಭೆ ಅಶಾಂತಿಗಳನ್ನು ಅಂದಾಜಿಸಿದರೆ ಇವೆಲ್ಲ ಸರಿ ಎಂದೆನಿಸುತ್ತದೆ. ದಾವೂದ್ ಇಬ್ರಾಹಿಂ ಆದಿಯಾಗಿ ನಮ್ಮ ದೇಶಕ್ಕೆ ಶತ್ರುಗಳಾದ ಅದೆಷ್ಟೋ ಭಯೋತ್ಪಾದಕರು, ಕ್ರಿಮಿನಲ್ಲುಗಳು ಪಾಕಿಸ್ತಾನ, ಕೆನಡಾ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿರುವಾಗ ಅವರ ನ್ನೆಲ್ಲ ಸರಕಾರ ಮುಗಿಸಿಬಿಡಬೇಕು ಎಂದೆನಿಸುವುದು ಸಹಜ.

ಅದು ವಿಕೃತಿಯಲ್ಲ, ಅಮಾನವೀಯವೂ ಅಲ್ಲ. ದೊಡ್ಡ ಚಿತ್ರಣದಲ್ಲಿ ಅಂಥವರು ಸತ್ತರೇ ದೇಶಕ್ಕೆ ಒಳ್ಳೆಯದು. ಹೀಗಿರುವಾಗ ನಮ್ಮ ದೇಶ ಉಳಿದ ದೇಶಗಳಂತೆ ಏಕೆ ಈ ಕೆಲಸಕ್ಕೆ ಇಳಿಯುವುದಿಲ್ಲ? ಎಂಬ ಪ್ರಶ್ನೆ ಸಹಜ. ಇಂಥ ಕೆಲಸ ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಮುಂಚೆ ಆ ದೇಶ ಪ್ರಪಂಚದಲ್ಲಿ ಪ್ರಬಲವಾಗಿರಬೇಕು. ಇಂದು ಅಂಥ ದೇಶಗಳು ಕೆಲವೇ ಕೆಲವು. ತೀರಾ ಇತ್ತೀಚಿನವರೆಗೆ ಭಾರತ ಆ ಪಟ್ಟಿ ಯಲ್ಲಿರಲಿಲ್ಲ. ಹಾಗಂತ ಭಾರತ ಅನ್ಯನೆಲದಲ್ಲಿ ಈ ಹಿಂದೆ ಉದ್ದೇಶಿತ ಹತ್ಯೆ ಮಾಡಿಸಿಯೇ ಇಲ್ಲವೆಂದೇನಲ್ಲ. ಸಾಕಷ್ಟು ಉದಾಹರಣೆಗಳು ಇರಬಹುದು. ಆದರೆ ಅದನ್ನು ಮಾಡಿ ಜೀರ್ಣಿಸಿಕೊಳ್ಳಲಿಕ್ಕೆ ಕಲಿತದ್ದು ಮಾತ್ರ ತೀರಾ ಇತ್ತೀಚೆಗೆ.
ಭಾರತವು ಜಾಗತಿಕ ಮಟ್ಟದಲ್ಲಿ ಪ್ರಭಾವಿ ದೇಶವಾಗಿ ಬದಲಾಗಿರುವುದು ಈಗೊಂದು ದಶಕದಿಂದೀಚೆಗೆ. ಅದರಲ್ಲಿಯೂ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ. ಅಲ್ಲಿಯವರೆಗೆ ನಮ್ಮ ದೇಶವೆಂದರೆ ಅದಕ್ಕೊಂದು ಸ್ವತಂತ್ರ ಧ್ವನಿಯಿರಲಿಲ್ಲ. ನಮ್ಮ ಬೆಂಬಲಕ್ಕೆ ಬೇರೆ ದೇಶಗಳು ಆಗಿಬರಬೇಕಿತ್ತು. ಆದರೆ ದೇಶ ಬಲಿಷ್ಠವಾದಂತೆ ಇದೆಲ್ಲ ಬದಲಾಗಿರುವುದು ಕಣ್ಣೆದುರಿಗೆ ಕಾಣಿಸುತ್ತಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕಾಟ ಭಾರತಕ್ಕೆ ಹೊಸತಲ್ಲ. ೧೯೮೧ರಲ್ಲಿ, ತಲವಿಂದರ್‌ಸಿಂಗ್ ಪರ್ಮಾರ್ ಎಂಬ ಭಯೋತ್ಪಾದಕ ಕೆನಡಾದಲ್ಲಿಯೇ ಕೂತು ಪಂಜಾಬಿನ ಇಬ್ಬರು ಪೊಲೀಸರ ಹತ್ಯೆಯಾಗುವಂತೆ ನೋಡಿಕೊಂಡಿದ್ದ. ಅಂದಿನ ಪ್ರಧಾನಿ ಇಂದಿರಾಗಾಂಽ ಅಂದಿನ ಕೆನಡಾ ಪ್ರಧಾನಿ ಪೀಯರ್ ಟ್ರುಡೊಗೆ ಪತ್ರ ಬರೆದು ಅವನನ್ನು ಹಸ್ತಾಂತರಿ ಸಲಿಕ್ಕೆ ಕೋರಿದ್ದರು (ಪೀಯರ್ ಟ್ರುಡೊ ಇಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಂದೆ). ಇದಕ್ಕೆ ಪೀಯರ್ ಟ್ರುಡೊ ಒಪ್ಪಲಿಲ್ಲ, ಹಸ್ತಾಂತರಿಸಲಿಲ್ಲ. ನಂತರ ಗೋಲ್ಡನ್ ಟೆಂಪಲ್- ಆಪರೇಷನ್ ಬ್ಲೂಸ್ಟಾರ್ ಪ್ರಕರಣ, ಅದಾದ ನಂತರ ಇಂದಿರಾ ಗಾಂಧಿ ಹತ್ಯೆಯಾಗಿಹೋಯಿತು. ಅಲ್ಲಿಂದ ಮುಂದೆ ಕೆನಡಾದಲ್ಲಿ ಸಿಖ್ಖರ ರಾಜಕೀಯ ಪ್ರಾಬಲ್ಯ ಹೆಚ್ಚಿ ಈ ಉಪಟಳ ಇನ್ನಷ್ಟು ಹೆಚ್ಚಿತು. ನಂತರದಲ್ಲಿ ಇದೇ ಪರ್ಮಾರ್ ನೇತೃತ್ವದ ಬಬ್ಬರ್ ಖಾಲ್ಸಾ ಭಯೋತ್ಪಾದಕರ ಗುಂಪು ಭಾರತದ ಏರ್ ಇಂಡಿಯಾ ವಿಮಾನವನ್ನು ಆಕಾಶದಲ್ಲಿ ಬಾಂಬ್‌ನಿಂದ ಸ್ಫೋಟಿಸಿತು.

ಸುಮಾರು ಮುನ್ನೂರಕ್ಕಿಂತ ಜಾಸ್ತಿ ಮಂದಿಯ ಹತ್ಯೆಗೆ ಕಾರಣವಾಯಿತು. ನಂತರ ಈ ಪರ್ಮಾರ್ ಎಂಬ ಭಯೋತ್ಪಾದಕ ಹೋಗಿ ಸೇರಿದ್ದು ಪಾಕಿಸ್ತಾನಕ್ಕೆ. ಇವನನ್ನು ಕೆನಡಾ ದೇಶವೇ ಸಾಗಹಾಕಿತು ಎಂಬ ಆರೋಪವಿದೆ. ನಂತರ ಆತ ಭಾರತ ಹೊಕ್ಕ ಸುದ್ದಿ ತಿಳಿದ ಬೇಹುಗಾರಿಕಾ ಸಂಸ್ಥೆ ಆತನನ್ನು ಇಲ್ಲಿಯೇ ಮುಗಿಸಿಬಿಡುತ್ತದೆ. ಇವೆಲ್ಲ ಇತಿಹಾಸ. ಅಲ್ಲಿಂದ ನಂತರ ಸಿಖ್ಖರ ರಾಜಕೀಯ ಪ್ರಾಬಲ್ಯ ಕೆನಡಾ ದಲ್ಲಿ ಹೆಚ್ಚಿದಂತೆ ಇವರ ಉಪಟಳ ಹೆಚ್ಚಿತು. ಇದೆಲ್ಲ ತಾರಕಕ್ಕೇರಿದ್ದು ಮೋದಿ ಸರಕಾರ ಅಽಕಾರಕ್ಕೆ ಬಂದ ನಂತರ. ಅಲ್ಲಿಯವರೆಗೆ ಪಂಜಾಬ್ ಮತ್ತು ದೇಶದ ಇತರ ಭಾಗಗಳಿಗೆ ಪಾಕಿಸ್ತಾನದ ಮೂಲಕ ಡ್ರಗ್ಸ್ ಸರಬರಾಜಿಗೆ ಬೆನ್ನೆಲುಬಾಗಿ ಐಎಸ್‌ಐ ಜತೆ ನಿಂತದ್ದೇ ಈ ಖಲಿಸ್ತಾನಿ ಭಯೋತ್ಪಾದಕರು. ಇದು ಕೋಟಿಯ ಲೆಕ್ಕದ ವ್ಯವಹಾರ. ಅಷ್ಟೇ ಅಲ್ಲ ದೇಶವನ್ನು
ಹಾಳುಮಾಡಲಿಕ್ಕೆ ಒಳ್ಳೆಯ ದಾರಿ. ಇದೆಲ್ಲದಕ್ಕೆ ಹೊಡೆತ ಬಿದ್ದ ಘಟನೆ- ನೋಟ್‌ಬ್ಯಾನ್. ನೋಟು ಅಮಾನ್ಯೀಕರಣ ದಿಂದಾಗಿ ಈ ಎಲ್ಲ ವ್ಯವಹಾರ ಮುರಿದುಬಿತ್ತು. ಅಲ್ಲದೆ ಬೇಹುಗಾರಿಕೆ ಇನ್ನಷ್ಟು ಬಲಗೊಂಡದ್ದರಿಂದ ಮತ್ತೆ ಚಿಗುರಲು ಸಾಧ್ಯವಾಗಲಿಲ್ಲ.

ಇದೆಲ್ಲದಕ್ಕೆ ಮೋದಿಯೇ ಕಾರಣ ಎಂಬ ಸಿಟ್ಟು ಈ ಭಯೋತ್ಪಾದಕರಿಗೆ. ನೋಟ್‌ಬ್ಯಾನ್, ನಂತರದಲ್ಲಿ ಪಂಜಾಬಿನಲ್ಲಾದ ಕೃಷಿಕರ ಧರಣಿ, ದೆಹಲಿಯಲ್ಲಾದ
ಗಲಾಟೆಗಳು, ಟ್ರಾಕ್ಟರ್ ದಾಳಿ ಇತ್ಯಾದಿಯೆಲ್ಲ ಒಂದಕ್ಕೊಂದು ತಳಕುಹಾಕಿಕೊಂಡಿದೆ. ಈ ಖಲಿಸ್ತಾನಿಗಳು ಬೇರೆಯಲ್ಲ, ಪಾಕಿಸ್ತಾನದ ಐಎಸ್‌ಐ ಬೇರೆಯಲ್ಲ. ಇವೆರಡೂ ಜತೆ ಯಲ್ಲಿಯೇ ಕೆಲಸ ಮಾಡುವುದು. ಇದು ಸ್ಪಷ್ಟವಾಗುತ್ತಿದ್ದಂತೆ ಮೋದಿಯವರು ಸ್ವಚ್ಛ ಭಾರತ ಅಭಿಯಾನವನ್ನು ಹೊರದೇಶಕ್ಕೂ ವಿಸ್ತರಿಸಿದಂತೆ ಕಾಣಿಸುತ್ತಿದೆ.

ಈಗ ಭಾರತ ಇದೆಲ್ಲ ಖಲಿಸ್ತಾನಿ ಭಯೋತ್ಪಾಕರ ನಿರ್ನಾಮಕ್ಕೆ ಇಳಿದಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಇಡೀ ಖಲಿಸ್ತಾನಿ ಭಯೋತ್ಪಾದನೆಯನ್ನು ವ್ಯವಸ್ಥಿತವಾಗಿ ನಿರ್ದೇಶಿಸುತ್ತಿದ್ದ, ರಾಜಕೀಯವಾಗಿ ಜಸ್ಟಿನ್ ಟ್ರುಡೊವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದ ಹರದೀಪ್‌ಸಿಂಗ್ ನಿಜ್ಜಾರ್. ಆತನ ಹತ್ಯೆ ಯಾಯಿತು. ಅದಾದ ಮೇಲೆ ಕೆನಡಾದ ಜತೆಗಿನ ಭಾರತದ ರಾಜತಾಂತ್ರಿಕ ಸಂಬಂಧ ಮುರಿದುಬಿದ್ದದ್ದು ಇವೆಲ್ಲ ನಿಮಗೆ ಗೊತ್ತು. ಸುಖದೋಲ್‌ಸಿಂಗ್ ಗಿಲ್ ಎಂಬ ಖಲಿಸ್ತಾನಿಯ
ಹತ್ಯೆಯೂ ಕೆನಡಾದಲ್ಲಿ ಆಯಿತು. ಹೀಗೆ ಅಲ್ಲಲ್ಲಿ ಒಂದೊಂದೇ ವಿಕೆಟ್ ಬೀಳುತ್ತಿರುವುದು ಕಾಣಿಸಿದಾಗಿನಿಂದ ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತವೇ ಇದನ್ನೆಲ್ಲಾ ನಡೆಸುತ್ತಿದೆ ಎಂದು ಬೊಂಬಡಾ ಹೊಡೆದುಕೊಳ್ಳುತ್ತಿವೆ.

ಒಟ್ಟಾರೆ ಇದೆಲ್ಲ ಸುದ್ದಿಯಿಂದ ಭಾರತವು ಈ ರೀತಿ ಉದ್ದೇಶಿತ ಹತ್ಯೆ ಮಾಡುವ ದೇಶವಾಗಿ ಇನ್ನೊಂದು ರೀತಿಯಲ್ಲಿ ತನ್ನ ಪ್ರಾಬಲ್ಯವನ್ನು ಜಗತ್ತಿಗೆ ತೋರಿಸುತ್ತಿದೆ. ಅದನ್ನು ಜೀರ್ಣಿಸಿ ಕೊಳ್ಳುತ್ತಿದೆ ಕೂಡ. ಇದೆಲ್ಲ ಭಾರತವೇ ಮಾಡಿದ್ದು ಎಂಬುದಕ್ಕೆ ಸಾಕ್ಷ್ಯವಿಲ್ಲ. ಇವೆಲ್ಲ ನಡೆಯುವುದೇ ಹೀಗೆ. ಇದೆಲ್ಲದರ ನಡುವೆ ಈಗ ಇನ್ನೊಂದು ಬೆಳವಣಿಗೆಯಾಗಿದೆ, ಇದೆಲ್ಲ ಹೊಸ ತಿರುವು ಪಡೆದಿದೆ. ಅಮೆರಿಕದಲ್ಲಿ ಖಲಿಸ್ತಾನಿ ಯೊಬ್ಬನಿದ್ದಾನೆ. ಆತನ ಹೆಸರು ಗುರ್ ಪತ್ವಂತ್‌ಸಿಂಗ್ ಪನ್ನು.
ಅವನು ಅಮೆರಿಕದ ನಾಗರಿಕ. ಅಲ್ಲಿನ ನ್ಯೂಯಾರ್ಕ್‌ನ ಕೋರ್ಟ್‌ನಲ್ಲಿ ಈಗ ಒಂದು ಕೇಸ್ ದಾಖಲಾಗಿದೆ. ಅದರ ಪ್ರಕಾರ ಭಾರತೀಯ ಅಧಿಕಾರಿಗಳು ಈತನನ್ನು ಹತ್ಯೆ ಮಾಡಲು ಯೋಜನೆ ನಡೆಸಿದ್ದರು, ಹಣಸಂದಾಯ ಮಾಡಿ ದ್ದರು ಅನ್ನುವುದು. ಈ ನಿಮಿತ್ತ ಒಬ್ಬ ವ್ಯಕ್ತಿಯನ್ನು ಜೆಕೊಸ್ಲೊವಾಕಿಯಾ ದೇಶದಲ್ಲಿ ಬಂಽಸಲಾಗಿದೆ, ಆತನನ್ನು ಸದ್ಯದಲ್ಲೇ ಅಮೆರಿಕಕ್ಕೆ ಹಸ್ತಾಂತರಿಸಬಹುದು. ಈ ಬೆಳವಣಿಗೆಯನ್ನು ಇವಿಷ್ಟು ಹಿನ್ನೆಲೆಯಲ್ಲಿಟ್ಟು ನೋಡಬೇಕು. ಒಟ್ಟಾರೆ ಇಂದು ಭಾರತ ಆತ್ಮರಕ್ಷಣೆಗೆ ಅನ್ಯದೇಶದ ನೆಲದಲ್ಲಿ ಉದ್ದೇಶಿತ ಹತ್ಯೆಗಳನ್ನು ಮಾಡಲಿಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂಬ ಸಂದೇಶ ಈಗ ಜಗತ್ತಿಗೆ ಸ್ಪಷ್ಟವಾಗುತ್ತಿದೆ.

ಮೊಸಾದ್, ಸಿಐಎ, ಎಂಐ೬ನ ಸಾಲಿಗೆ ಭಾರತ, ಭಾರತದ ‘ರಾ’ ಗುಪ್ತಚರ ಸಂಸ್ಥೆ ಸೇರಿಕೊಂಡಿದೆ. ಈಗ ಭಾರತಕ್ಕೆ ಇದೆಲ್ಲವನ್ನು ಅರಗಿಸಿಕೊಳ್ಳುವ ಶಕ್ತಿಯಿದೆ. ಅತ್ತ ಪಾಶ್ಚಿಮಾತ್ಯ ಸರಕಾರಗಳು, ಮಾಧ್ಯಮಗಳಿಗೆ ಮಾತ್ರ ಇದು ಜೀರ್ಣವಾಗುತ್ತಿಲ್ಲ. ಹಾಗಾಗಿ ಗಲಾಟೆಯೆಬ್ಬಿಸುತ್ತಿವೆ. ಇದೆಲ್ಲವೂ ಭಾರತ ಇಂದು ಜಾಗತಿಕ ವಾಗಿ ಪ್ರಬಲವಾಗುತ್ತಿರುವ ಲಕ್ಷಣದಂತೆ ಕಾಣಿಸುತ್ತಿರುವುದಂತೂ ಸುಳ್ಳಲ್ಲ