Sunday, 24th November 2024

ಮೊಸಾದ್ ಮಾದರಿ ನೆನಪಿಸಿದ ಉಗ್ರ ಹತ್ಯೆ

ವೀಕೆಂಡ್ ವಿತ್ ಮೋಹನ್

camohanbn@gmail.com

ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್‌ನ ಪರಮಾಪ್ತನನ್ನು ಅನಾಮಿಕನೊಬ್ಬ ಪಾಕಿಸ್ತಾನದ ರಸ್ತೆಯಲ್ಲಿ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ. ಕೆನಡಾದಲ್ಲಿ ಖಲಿಸ್ತಾನಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಗುರುದ್ವಾರದ ಬಳಿ ಮತ್ತು ಖಲಿಸ್ತಾನಿ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾರ್ ಪಾಕಿಸ್ತಾನದ ಲಾಹೋರ್‌ನಲ್ಲಿ ಅನಾಮಿಕರ ಗುಂಡಿಗೆ ಬಲಿಯಾಗಿದ್ದಾರೆ.

ಖಲಿಸ್ತಾನ್ ಲಿಬರೇಷನ್ ಫೋರ್ಸ್‌ನ ಸದಸ್ಯ ಅವತಾರ್‌ಸಿಂಗ್ ಖಂಡ, ಬ್ರಿಟನ್ನಿನ ಬರ್ಮಿಂಗ್‌ಹ್ಯಾಂ ಆಸ್ಪತ್ರೆಯಲ್ಲಿ ಜೂನ್ ೧೫ರಂದು ನಿಧನನಾದ. ಈತ, ಲಂಡನ್‌ನಲ್ಲಿನ ಭಾರತೀಯ ದೂತಾವಾಸ ಕಚೇರಿಯ ಮೇಲೆ ಖಲಿಸ್ತಾನಿ ಗಳು ನಡೆಸಿದ್ದ ದಾಳಿಯ ಮುಂದಾಳತ್ವ ವಹಿಸಿದ್ದ. ಏರ್ ಇಂಡಿಯಾ ಬಾಂಬ್ ದಾಳಿ ಪ್ರಕರಣದಲ್ಲಿ ೨೦೦೫ರಲ್ಲಿ ಖುಲಾಸೆಯಾಗಿದ್ದ ರಿಪುದಮನ್ ಸಿಂಗ್ ಮಲಿಕ್ ತನ್ನ ಮನೆಯ ಮುಂದೆಯೇ ಗುಂಡಿಗೆ ಬಲಿಯಾದ. ಇದಾದ ಸುಮಾರು ೧ ವರ್ಷದ ನಂತರ ನಿಜ್ಜರ್ ನ ಹತ್ಯೆಯಾಗಿದೆ.

ಕಳೆದ ೧೯ ತಿಂಗಳಲ್ಲಿ ೧೬ ಉಗ್ರರು ವಿದೇಶದಲ್ಲಿ ಅನಾಮಿಕರ ಗುಂಡಿಗೆ ಬಲಿಯಾಗಿದ್ದಾರೆ. ಇದನ್ನು ಕಂಡು ಪಾಕಿಸ್ತಾನ ಮತ್ತು ಕೆನಡಾದಲ್ಲಿ ನೆಲೆಸಿರುವ ಭಾರತ-ವಿರೋಧಿ ಉಗ್ರರಿಗೆ ಭಯ ಶುರುವಾಗಿದೆ. ಪಾಕ್‌ನಲ್ಲಿ ಆಶ್ರಯ ಪಡೆದಿರುವ ದಾವೂದ್ ಇಬ್ರಾಹಿಂಗೆ ತನ್ನ ಮೇಲೂ ಯಾವಾಗ ಬೇಕಿದ್ದರೂ ಅನಾಮಿಕರ ಗುಂಡಿನ ದಾಳಿಯಾಗಬಹುದೆಂಬ ದಿಗಿಲು ಶುರುವಾಗಿದೆ. ಈತನನ್ನು ಐಎಸ್‌ಐ ಮುಖ್ಯಸ್ಥನನ್ನಾಗಿಸಲು ಪಾಕಿಸ್ತಾನ ಆಲೋಚಿಸಿದೆ ಎನ್ನಲಾಗುತ್ತಿದೆ. ಹಫೀಜ್ ಸಯೀದ್‌ನ ಪರಮಾಪ್ತನನ್ನೇ ಮುಗಿಸಿರುವ ಅನಾಮಿಕರು ದಾವೂದ್‌ ನನ್ನು ಬಿಡುವುದಿಲ್ಲವೆಂಬ ಸತ್ಯ ಪಾಕಿಗಳಿಗೆ ತಿಳಿದಿದೆ. ಉಗ್ರರು ತಮ್ಮ ಸ್ಲೀಪರ್ ಸೆಲ್ ಮೂಲಕ ದೇಶದಲ್ಲಿ ಉಗ್ರಕೃತ್ಯಗಳಿಗೆ ಚಾಲನೆ ನೀಡಿ ‘ಟಾರ್ಗೆಟ್ ಕಿಲ್ಲಿಂಗ್’ ಮಾಡುತ್ತಿದ್ದರು.

ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದಾದ ನಂತರ ಗಡಿಯೊಳಗೆ ನುಸುಳಿ ಉಗ್ರ ಚಟುವಟಿಕೆಗಳನ್ನು ನಡೆಸಲಾಗದ್ದಕ್ಕೆ ಪಂಡಿತರನ್ನು ಗುರಿಯಾಗಿಸಿ ಕೊಲ್ಲುತ್ತಿದ್ದರು. ನಂತರ, ಕೆಲಸ ಅರಸಿ ಬಂದ ಅನ್ಯರಾಜ್ಯಗಳ ವಲಸಿಗರನ್ನು ಗುರಿಯಾಗಿಸಿಕೊಂದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಈ ಕುಕೃತ್ಯಗಳೇ ಅವರಿಗೀಗ ತಿರುಗುಬಾಣ ವಾಗಿವೆ. ಅನಾಮಿಕ ಶೂಟರ್‌ಗಳು ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹಣಿಯುತ್ತಿದ್ದಾರೆ. ಈ ಗುಂಡಿನ ದಾಳಿಗಳು, ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ ‘ಮೊಸಾದ್’ ನಡೆಸಿದ್ದ ‘ಆಪರೇಷನ್ ರಾತ್ ಆ- ಗಾಡ್’ ಕಾರ್ಯಾಚರಣೆಯನ್ನು ನೆನಪಿಸುತ್ತವೆ.

‘ರಾತ್ ಆಫ್ ಗಾಡ್’ ಎಂದರೆ ‘ದೇವರ ಕೋಪ’ ಎಂದರ್ಥ. ೧೯೭೨ರ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಪ್ಯಾಲಿಸ್ತೇನಿ
ಉಗ್ರರು ನಡೆಸಿದ್ದ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರ ಹತ್ಯೆಗೆ ಮೊಸಾದ್ ನಿರ್ದೇಶಿಸಿದ್ದ ರಹಸ್ಯ ಕಾರ್ಯಾಚರಣೆ ಇದಾಗಿತ್ತು. ಇದರ ಮುಖ್ಯ ಟಾರ್ಗೆಟ್ ಪ್ಯಾಲಿಸ್ತೇನಿ ಸಶಸ್ತ್ರ ಉಗ್ರಗಾಮಿಗಳ ಗುಂಪು, ಪ್ಯಾಲಿಸ್ಟೈನ್ ಲಿಬರೇಷನ್ ಆರ್ಗನೈಸೇಷನ್‌ನ (ಪಿಎಲ್‌ಒ) ಪ್ರಮುಖ ಕಾರ್ಯಕರ್ತರು. ಸುಮಾರು ೨೦ ವರ್ಷ ಮುಂದುವರಿಯಿತೆನ್ನಲಾದ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪ್ಯಾಲಿಸ್ತೇನಿ ಉಗ್ರರನ್ನು ಮೊಸಾದ್ ಹುಡುಕಿ ಕೊಂದಿತ್ತು.

ಕಾರ್ಯಾಚರಣೆಯಲ್ಲಿ ೧೫ ಜನರನ್ನು ೫ ತಂಡಗಳಾಗಿ ವಿಂಗಡಿಸಲಾಗಿತ್ತು. ಮೊದಲ ತಂಡ ‘ಅಲೆಫ್’ನಲ್ಲಿ ಇಬ್ಬರು ಪರಿಣತ ಷೂಟರ್‌ಗಳು, ೨ನೇ ತಂಡ ‘ಬೆಟ್’ನಲ್ಲಿ ಷೂಟರ್ ಗಳಿಗೆ ಇಬ್ಬರು ಕಾವಲುಗಾರರು, ೩ನೇ ತಂಡ ‘ಹೆಟ್’ನಲ್ಲಿ ಹೋಟೆಲ್ ಕೊಠಡಿ, ಅಪಾರ್ಟ್‌ಮೆಂಟ್, ಕಾರುಗಳನ್ನು ಬಾಡಿಗೆಗೆ ನೀಡುವ ಮೂಲಕ ಉಳಿದವರಿಗೆ ರಕ್ಷಣೆ ಸ್ಥಾಪಿಸುವ ಇಬ್ಬರು ಏಜೆಂಟ್‌ಗಳಿದ್ದರು; ೪ನೇ ತಂಡ ‘ಅಯಿನ್’ಗೆ ಕಾರ್ಯಾಚರಣೆಯ ಬೆನ್ನೆಲುಬಾಗಿ ಏಜೆಂಟ್‌ಗಳ ನಡುವೆ
ಟಾರ್ಗೆಟ್ ನಿಗದಿ ಮಾಡುವ ಹಾಗೂ ‘ಅಲೆಫ್’ ಮತ್ತು ‘ಬೆಟ್’ ತಂಡಗಳಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಸ್ಥಾಪಿಸುವ ಹೊಣೆ ವಹಿಸಲಾಗಿತ್ತು.

೫ನೇ ತಂಡ ‘ಕೋಫ್ ’ನಲ್ಲಿ ವಿವಿಧ ಭಾಷೆಗಳ ಸಂವಹನದಲ್ಲಿ ಪರಿಣತರಾಗಿದ್ದ ಇಬ್ಬರು ಏಜೆಂಟ್‌ಗಳಿದ್ದರು. ಪಿಎಲ್‌ಒ ಪ್ರತಿನಿಧಿಯಾಗಿದ್ದ ವೇಲ್ ಜ್ವೈಟರ್, ೧೯೭೨ರ ಅಕ್ಟೋಬರ್ ೧೬ರಂದು ಇಟಲಿಯ ರೋಮ್ ನಗರದಲ್ಲಿ ಮೊದಲು ಹತನಾದ. ಆತ ರಾತ್ರಿಯೂಟ ಮುಗಿಸಿ ಹಿಂದಿರು ಗುವುದನ್ನೇ ಕಾಯುತ್ತಿದ್ದ ಮೊಸಾದ್ ಏಜೆಂಟರು, ಆತ ಸಿಗು ತ್ತಿದ್ದಂತೆ ೧೨ ಬಾರಿ ಗುಂಡು ಹಾರಿಸಿದರು. ಫ್ರಾನ್ಸ್ ನಲ್ಲಿದ್ದ ಪಿಎಲ್‌ಒ ಪ್ರತಿನಿಧಿ ಮಹಮೂದ್ ಹಂಶರಿ ಮೊಸಾದ್‌ನ ೨ನೇ ಗುರಿ. ಇಟಾಲಿಯನ್ ಪತ್ರಕರ್ತನಂತೆ ಸೋಗುಹಾಕಿದ್ದ ಮೊಸಾದ್ ಏಜೆಂಟ್, ಪ್ಯಾರಿಸ್‌ನಲ್ಲಿನ ಆತನ ಅಪಾರ್ಟ್‌ಮೆಂಟಿನ ಡೆಸ್ಕ್ ಟೆಲಿಫೋನ್ ಅಡಿಯಲ್ಲಿ
ಬಾಂಬ್ ಇಟ್ಟಿದ್ದ. ೧೯೭೨ರ ಡಿಸೆಂಬರ್ ೮ರಂದು ಈ ಏಜೆಂಟ್ ಹಂಶರಿಯ ಅಪಾರ್ಟ್‌ಮೆಂಟ್‌ಗೆ ಫೋನ್ ಮಾಡಿ ತನ್ನನ್ನು ಪರಿಚಯಸಿ ಕೊಂಡ ನಂತರ ಇತರ
ಸಹೋದ್ಯೋಗಿಗಳಿಗೆ ಸಂಜ್ಞೆ ನೀಡಿದ. ಅವರು ಟೆಲಿಫೋನ್ ಲೈನ್ ಮೂಲಕ ಸ್ಪೋದ ಸಂಕೇತ ವನ್ನು ಕಳಿಸಿದ್ದಕ್ಕೆ ಬಾಂಬ್ ಸ್ಪೋಗೊಂಡು ಹಂಶರಿ ಮಾರ ಣಾಂತಿಕವಾಗಿ ಗಾಯಗೊಂಡ. ಹಲವು ವಾರಗಳ ನಂತರ ಆಸ್ಪತ್ರೆಯಲ್ಲಿ ಅಸುನೀಗಿದ (ಮ್ಯೂನಿಕ್ ಒಲಿಂಪಿಕ್ ಒತ್ತೆಯಾಳು ಬಿಕ್ಕಟ್ಟಿನ ಒಂದು ದಿನದ ನಂತರ ಈತ ಸಂದರ್ಶನ ನೀಡಿ, ತನ್ನ ಜೀವದ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿ ಕೊಂಡಿದ್ದ).

ಈ ಹತ್ಯೆಯು ಫ್ರಾನ್ಸ್‌ನಲ್ಲಿ ನಡೆದ ಮೊಸಾದ್ ನ ಉದ್ದೇಶಿತ ಸರಣಿಹತ್ಯೆಯಲ್ಲಿ ಮೊದಲನೆಯದಾಗಿತ್ತು. ೧೯೭೩ರ ಜನವರಿ ೨೪ರ ರಾತ್ರಿ, ಸೈಪ್ರಸ್‌ನ ಪ್ಯಾಲಿಸ್ತೇನಿಗಳ ಪ್ರತಿನಿಧಿಯಾಗಿದ್ದ ಜೋರ್ಡಾನ್‌ನ ಹುಸೇನ್ ಅಲ್ ಬಶೀರ್‌ನನ್ನು, ನಿಕೋಸಿಯಾದಲ್ಲಿನ ಒಲಿಂಪಿಕ್ ಹೋಟೆಲ್ ಕೋಣೆ ಯಲ್ಲಿ ದೀಪಗಳನ್ನು ಆರಿಸಿದ ಕೆಲವೇ ಕ್ಷಣಗಳಲ್ಲಿ ಅವನ ಹಾಸಿಗೆಯ ಕೆಳಗಿರಿಸಿದ್ದ ಬಾಂಬನ್ನು ರಿಮೋಟ್ ನಿಂದ ಸೋಟಿಸಿ ಕೊಂದು, ಕೋಣೆಯನ್ನು ಧ್ವಂಸಗೊಳಿಸಲಾಯಿತು. ಸೈಪ್ರಸ್‌ನಲ್ಲಿದ್ದುಕೊಂಡು ನಡೆಸಿದ ಮ್ಯೂನಿಕ್ ಒಲಿಂಪಿಕ್ ಹತ್ಯಾಕಾಂಡ ಕಾರ್ಯಾಚರಣೆಯ ಮುಖ್ಯಸ್ಥ ನೀತ ಎಂದಿತ್ತು ಇಸ್ರೇಲ್.

೧೯೭೩ರ ಏಪ್ರಿಲ್ ೬ರಂದು, ಅಮೆರಿಕನ್ ಯೂನಿ ವರ್ಸಿಟಿ ಆಫ್ ಬೈರೂತ್‌ನಲ್ಲಿ ಕಾನೂನು ಪ್ರಾಧ್ಯಾಪಕನಾಗಿದ್ದ ಬೇಸಿಲ್ ಅಲ್-ಕುಬೈಸ್ಸಿ, ಈ ಹತ್ಯಾಕಾಂಡಕ್ಕೆ ಶಸಾಸ ಒದಗಿ ಸುತ್ತಿದ್ದ ಮತ್ತು ಇತರ ಪ್ಯಾಲಿಸ್ತೇನಿಗಳು ನಡೆಸಿದ್ದ ಹತ್ಯಾ ಕಾಂಡದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಆತ ಮನೆಗೆ ಮರಳುವಾಗ ಪ್ಯಾರಿಸ್‌ನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಹಿಂದಿನ ಹತ್ಯೆಗಳಂತೆ ಇಬ್ಬರು ಮೊಸಾದ್ ಏಜೆಂಟರು ೧೨ ಬಾರಿ ಈತನ ಮೇಲೆ ಗುಂಡು ಹಾರಿಸಿದ್ದರು. ಫ್ರೆಂಚ್ ಪೊಲೀಸರ ಪ್ರಕಾರ, ಈ ಗುಂಡುಗಳು ಆತನ ಹೃದಯ ಮತ್ತು ತಲೆ ಭಾಗಕ್ಕೆ ಕರಾರುವಾಕ್ಕಾಗಿ ನುಗ್ಗಿದ್ದವು.

ಮೊಸಾದ್ ಟಾರ್ಗೆಟ್ ಪಟ್ಟಿಯಲ್ಲಿದ್ದ ಮೂವರು ಉಗ್ರರು ಲೆಬನಾನ್‌ನಲ್ಲಿ ಹಿಂದಿನ ಹತ್ಯಾವಿಧಾನಗಳ ವ್ಯಾಪ್ತಿ ಮೀರಿದ, ಭಾರಿ ಕಾವಲಿನ ಮನೆಗಳಲ್ಲಿ ವಾಸಿಸು ತ್ತಿದ್ದರು. ಅವರ ಹತ್ಯೆಗೆಂದು ‘ಆಪರೇಷನ್ ಸ್ಟ್ರಿಂಗ್ ಆಫ್ ಯೂತ್’ ಎಂಬ ಉಪ-ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ೧೯೭೩ ಏಪ್ರಿಲ್ ೯ರ ರಾತ್ರಿ ಇಸ್ರೇಲಿ ನೌಕಾಪಡೆಯ ವೇಗದ ದೋಣಿಗಳಲ್ಲಿ ಕಮಾಂಡೋ ಮತ್ತು ಪ್ಯಾರಾಟ್ರೂಪರ್‌ಗಳ ಪಡೆ ಲೆಬನಾನ್ ಕರಾವಳಿಯಲ್ಲಿ ಬಂದಿಳಿದಿತ್ತು. ಮೊಸಾದ್ ಏಜೆಂಟರು ಅವರನ್ನು ಭೇಟಿಯಾಗಿ ಬಾಡಿಗೆ ಕಾರುಗಳಲ್ಲಿ ಉಗ್ರರ ನೆಲೆಗಳತ್ತ ಕರೆದೊಯ್ದರು.

ಕಮಾಂಡೋಗಳು ನಾಗರಿಕರಂತೆ ಮತ್ತು ಮಹಿಳೆಯರಂತೆ ವೇಷ ಧರಿಸಿದ್ದರು. ಬೈರೂತ್‌ನಲ್ಲಿ ಪ್ಯಾಲಿಸ್ತೇನಿ ಉಗ್ರರಿರುವ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿಮಾಡಿ, ಮುಹಮ್ಮದ್ ಯೂಸುಫ್ ಅಲ್-ನಜ್ಜರ್ (ಒಲಿಂಪಿಕ್ ಹತ್ಯಾಕಾಂಡ ಕಾರ್ಯಾಚರಣೆಯ ನಾಯಕ), ಕಮಲ್ ಅಡ್ವಾನ್ (ಪಿಎಲ್‌ಒನಲ್ಲಿನ ಕಾರ್ಯಾಚರಣೆಗಳ ಮುಖ್ಯಸ್ಥ) ಮತ್ತು ಕಮಲ್ ನಾಸರ್‌ನನ್ನು (ಪಿಎಲ್‌ಒ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ವಕ್ತಾರ) ಕೊಂದರು. ಕಾರ್ಯಾಚರಣೆಯ
ವೇಳೆ ಲೆಬನಾನಿನ ಇಬ್ಬರು ಪೊಲೀಸ್ ಅಽಕಾರಿಗಳು, ಒಬ್ಬ ಇಟಾಲಿಯನ್ ಪ್ರಜೆ, ನಜ್ಜರ್ ಪತ್ನಿ ಹತರಾದರು. ಪಿಎಲ್‌ಒ ಪ್ರಧಾನ ಕಚೇರಿಯಾಗಿ ಕಾರ್ಯಾ ಚರಿಸುತ್ತಿದ್ದ ಆರಂತಸ್ತಿನ ಕಟ್ಟಡದ ಮೇಲೆ ಪ್ಯಾರಾಟ್ರೂಪರ್‌ಗಳ ದಾಳಿಯಾಯಿತು.

ಅವರು ಪ್ಯಾಲಿಸ್ತೇನಿಗಳ ಬಲವಾದ ಪ್ರತಿರೋಧದಿಂದಾಗಿ ಇಬ್ಬರು ಸೈನಿಕರನ್ನು ಕಳೆದುಕೊಂಡರೂ, ಕಟ್ಟಡವನ್ನು ನಾಶಮಾಡುವಲ್ಲಿ ಯಶಸ್ವಿಯಾದರು. ಕಮಾಂಡೋಗಳು, ಪ್ಯಾರಾಟ್ರೂಪರ್‌ಗಳು ಪಿಎಲ್‌ಒ ಶಸ್ತ್ರಾಸ್ತ್ರ ತಯಾರಿಕಾ ಸೌಲಭ್ಯ ಮತ್ತು ಇಂಧನ ಶೇಖರಣಾ ಘಟಕಗಳ ಮೇಲೆ ದಾಳಿ ಮಾಡಿ ಸುಮಾರು ೧೨ ಮಂದಿಯನ್ನು ಕೊಂದರು. ೧೯೭೯ರ ಡಿಸೆಂಬರ್ ೧೫ರಂದು, ಅಲಿ ಸಲೇಮ್ ಅಹ್ಮದ್ ಮತ್ತು ಇಬ್ರಾಹಿಂ ಅಬ್ದುಲ್ ಅಜೀಜ್ ಎಂಬಿಬ್ಬರು ಪ್ಯಾಲಿಸ್ತೇನೀಯರು ಸೈಪ್ರಸ್‌ನಲ್ಲಿ ಹತರಾದರು. ಪೊಲೀಸರ ಪ್ರಕಾರ ಇವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ೧೯೮೨ರ ಜೂನ್ ೧೭ರಂದು, ಇಟಲಿ ಯಲ್ಲಿ ಇಬ್ಬರು ಹಿರಿಯ ಪಿಎಲ್‌ಒ ಸದಸ್ಯರು ಪ್ರತ್ಯೇಕ ದಾಳಿಯಲ್ಲಿ ಕೊಲ್ಲಲ್ಪಟ್ಟರು.

ಪಿಎಲ್‌ಒನ ರೋಮ್ ಕಚೇರಿ ಯಲ್ಲಿ ನಜೆ ಮೇಯರ್ ಎಂಬ ಪ್ರಮುಖ ವ್ಯಕ್ತಿಗೆ ಅವನ ಮನೆಯ ಹೊರಗೆ ಗುಂಡಿಕ್ಕಲಾಯಿತು. ಕಚೇರಿಯ ಉಪ ನಿರ್ದೇಶಕ
ಕಮಲ್ ಹುಸೇನ್, ಮೇಯರ್ ಮನೆಗೆ ಭೇಟಿಯಿತ್ತ ೭ ಗಂಟೆಗಳ ನಂತರ ಮನೆಗೆ ಮರಳುವಾಗ ಅವನ ಕಾರಿನ ಹಿಂದಿನ ಸೀಟಿನಡಿ ಇರಿಸಿದ್ದ ಬಾಂಬ್‌ನಿಂದ ಕೊಲ್ಲಲ್ಪಟ್ಟ. ೧೯೮೨ರ ಜುಲೈ ೨೩ರಂದು, ಪ್ಯಾರಿಸ್‌ನಲ್ಲಿನ ಪಿಎಲ್‌ಒ ಕಚೇರಿಯ ಉಪನಿರ್ದೇಶಕ ಫಡ್ಲ್ ಡ್ಯಾನಿ ತನ್ನ ಕಾರಿನಲ್ಲಿ ರಿಸಿದ್ದ ಬಾಂಬ್‌ನಿಂದ ಹತನಾದ. ೧೯೮೩ರ ಆಗಸ್ಟ್ ೨೧ರಂದು ಅಥೆನ್ಸ್‌ನಲ್ಲಿ ಪಿಎಲ್‌ಒ ಅಧಿಕಾರಿ ಮಾಮೂನ್ ಮೆರೈಶ್ ನನ್ನು, ಮೋಟಾರ್‌ಬೈಕ್‌ನಲ್ಲಿ ಬೆನ್ನತ್ತಿ ಬಂದ ಮೊಸಾದ್‌ನ ಇಬ್ಬರು ಕಾರ್ಯಕರ್ತರು ಗುಂಡಿಟ್ಟು ಕೊಂದರು.

೧೯೮೬ರ ಜೂನ್ ೧೦ರಂದು ಪಿಎಲ್‌ಒನ ಮತ್ತೊಂದು ಬಣದ ಕಾರ್ಯದರ್ಶಿ ಜನರಲ್ ಖಲೀದ್ ಅಹ್ಮದ್ ನಜಲ್‌ಗೆ, ಅಥೆನ್ಸ್‌ನ ಹೋಟೆಲ್‌ನ ಹೊರಗೆ ಗುಂಡಿಕ್ಕಲಾಯಿತು. ೧೯೮೬ರ ಅಕ್ಟೋಬರ್ ೨೧ರಂದು, ಹಿರಿಯ ಪಿಎಲ್‌ಒ ನಾಯಕ ಮತ್ತು ಪ್ಯಾಲಿಸ್ಟೇನಿಯನ್ ನ್ಯಾಷನಲ್ ಕೌನ್ಸಿಲ್‌ನ ಸದಸ್ಯ ಮುಂಜುರ್ ಅಬು ಗಜಾಲಾ, ಕಾರು ಚಾಲಿಸುವಾಗ ಬಾಂಬ್‌ನಿಂದ ಹತನಾದ. ೧೯೮೮ರ ಫೆಬ್ರವರಿ ೧೪ರಂದು, ಸೈಪ್ರಸ್‌ನ ಲಿಮಾಸೋಲ್‌ನಲ್ಲಿ ಕಾರ್‌ಬಾಂಬ್ ಸೋಟ
ಗೊಂಡು ಪ್ಯಾಲಿಸ್ತೇನಿನ ಅಬು ಅಲ್‌ಹಸನ್ ಖಾಸಿಮ್ ಮತ್ತು ಹಮ್ದಿ ಅಡ್ವಾನ್ ಸತ್ತರು.

ಹೀಗೆ ಮೊಸಾದ್ ಏಜೆಂಟರು ಕಳೆದ ೨೦ ವರ್ಷಗಳಲ್ಲಿ ತಮ್ಮ ಶತ್ರುಗಳನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಹುಡುಕಿ ಕರಾರುವಾಕ್ಕಾಗಿ ಕೊಂದರು. ಅದೇ ಮಾದರಿಯಲ್ಲಿ, ಕಳೆದ ೧೯ ತಿಂಗಳಿಂದ ೧೬ ಮಂದಿ ಖಲಿಸ್ತಾನಿ ಮತ್ತು ಜಾಗತಿಕ ಉಗ್ರರನ್ನು ಕೆನಡಾ, ಪಾಕಿಸ್ತಾನ ಮತ್ತು ಲಂಡನ್‌ನಲ್ಲಿ ಕೊಂದಿರುವ ಅನಾಮಿಕ ಬಂದೂಕುಧಾರಿಗಳ ಹಿಂದಿರುವ ಸಂಘಟನೆ ಯಾವುದೆಂಬುದು ಇನ್ನೂ ನಿಗೂಢವಾಗಿದೆ!