ಅಭಿಮತ
ಚೈತನ್ಯ ಕಾರಂತ
ಸಿನಿಮಾ ಒಂದರಲ್ಲಿ ಅದ್ಭುತವಾಗಿ ನಟಿಸಿ ಅದರ ಯಶಸ್ಸಿಗೆ ಕಾರಣವಾದ ಒಬ್ಬ Supporting Artist ಕೊನೆಗೂ ಆ ಸಿನಿಮಾಕ್ಕೆ sacrificial lamb, ಅಂದರೆ ಬಲಿಯ ಕುರಿ. ಇಂದು ಆ ಕುರಿಗೆ ಕಟುಸತ್ಯವನ್ನು ಹೇಳಬೇಕಿದೆ. ನಿನ್ನ ಹಕ್ಕನ್ನು ಮತ್ತು ಸಮಾನತೆ ಯನ್ನು ಕೇಳಿ ಪಡೆ, ಇಲ್ಲವಾದಲ್ಲಿ ನಿನ್ನ ಉದರದ ಹುಳು ಕೂಡ ಒಂದು ದಿನ ನಿನ್ನನ್ನಾ ಬೇಕಾದಂತೆ ಬಳಸಿಕೊಳ್ಳುತ್ತದೆ.
ಯಾವ ವಿಷಯ ಮತ್ತು ಯಾರ ಬಗ್ಗೆ ನಾನೀ ಮಾತುಗಳನ್ನಾಡುತ್ತಿದ್ದೇನೆ ಎಂದು ಕೇಳಿದಿರಾ? ಈ ಕಥೆ ಕೇಳಿ, ನಿಮಗೆ ಅರ್ಥ ವಾಗುತ್ತದೆ. ಒಂದು ಮನೆಯಲ್ಲಿ 5 ಜನ ಇದ್ದಾರೆ. ಆದರೆ ನಾಲ್ಕೇ ನಾಲ್ಕು cake piece ಇದೆ . ಆವಾಗ ಬರುವ ಶಬ್ದ ನಾನು ಕೇಕ್ ತಿನ್ನೋದಿಲ್ಲ. ಯಾರಿರಬಹುದು ಆ ಮಹಾನ್ ಉದಾರ ಜೀವಿ? ಇದು cake ಗೆ ಮಾತ್ರ ಸೀಮಿತ ಅಲ್ಲ, ಹಿಟ್ಟು ಮುಗಿದು ಹೋಗಿ ಕೊನೆಯ ಒಂದೇ ದೋಸೆ ತಿಂದು, ಪುಡಿ ಪುಡಿಯಾಗಿ ಉಳಿದ ಹೋಳಿಗೆ ತಿಂದ, ಮೊದಲ ಬಂಡಿಯ ಸೀದು ಹೋದ ಬಜೆಯೋ ಬೋಂಡಾ ತಿಂದು ನನಗೆ ಇಷ್ಟು ಸಾಕು ನಂಗೇನ್ ಬೇಕಿಲ್ಲ ನೀವು ತಿನ್ನಿ’ ಎನ್ನುವ ದಾನಶೂರೆ ಇನ್ನ್ಯಾರು? ಅದು ಅಮ್ಮ.
ಅವಳೊಂದೇ ಅಲ್ಲ, ಬೆಳೆದ ನನ್ನ ಅಕ್ಕ, ಮದುವೆಯಾದ ನಿಮ್ಮ ತಂಗಿ, ಅವರ ಚಿಕ್ಕಮ್ಮ, ಇವರ ಅಜ್ಜಿ, ಇನ್ಯಾರದೋ ಸೊಸೆ ಇದೇ ಮಾತು ಹೇಳಿದ್ದನ್ನು ಅದೆಷ್ಟೋ ಸಲ ಕೇಳಿದ್ದೇವೆ ಮತ್ತು ಅದೇನು ಸರ್ವೇಸಾಮಾನ್ಯ ಅಂತಲೂ ಅಂದುಕೊಂಡಿದ್ದೇವೆ. ಆದರೆ ವಿಪರ್ಯಾಸವೋ, ಪುರುಷಪ್ರಧಾನ ವ್ಯವಸ್ಥೆಯ ಹೇಯವೋ ಇಂದಿಗೂ ನಮಗೆ ಅವರುಗಳು ಹಾಗೆ ತ್ಯಾಗಿಯಾಗುವುದು
ಯಾಕಾಗಿ? ಅದು ಸರಿಯೇ? ಎನ್ನುವ ಪ್ರಜ್ಞೆ ಬೆಳೆಯಲಿಲ್ಲವಲ್ಲ.
ಏಕೆಂದರೆ ಅವರು ಹಾಗೆ ಹೇಳಲು ಕಾರಣ ಹೆಣ್ಣು ತ್ಯಾಗಮಯಿ! ಆಕೆಗೆ ಆ cake, ದೋಸೆ, ಹೋಳಿಗೆ ತಾನು ತಿನ್ನದೇ ತನ್ನ ಮಕ್ಕಳಿಗೆ, ಗಂಡನಿಗೆ, ಮನೆಯವರಿಗೆ ತಿನ್ನಿಸಬೇಕಾದ ಹಂಬಲ ಮತ್ತು ಅದರಲ್ಲಿ ಇದೆ ಎನ್ನಲಾದ ಸಾರ್ಥಕತೆ. ತುಂಬಾ ಸಂದರ್ಭ ಗಳಲ್ಲಿ ಆಕೆಗೆ ತನ್ನ ಪಾಲನ್ನು ಕೇಳುವ ಪ್ರಮೇಯವೇ ಇರುವುದಿಲ್ಲ. ನಾಲ್ಕೇ ಇದೆ, ಅಮ್ಮ ಹೇಗೂ ತಿನ್ನಲ್ಲ ಬಿಡು’ ಎಂದಿರುತ್ತಾರೆ ಮನೆಮಂದಿ.
ಒಮ್ಮೆ ಈ ದೃಶ್ಯವನ್ನು ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಪ್ರತಿವರ್ಷ ಮನೆಗಳಲ್ಲಿ ಐದು ದಿನ ಗಣೇಶ ಚತುರ್ಥಿ ಆಚರಿಸುತ್ತಾರೆ. ನೂರಾರು ಮಂದಿ ನೆಂಟರಿಷ್ಟರು, ಪರಿಚಯದವರು, ಗೆಳೆಯರು ಗಣಪನ ದರ್ಶನಕ್ಕಾಗಿ ಬಂದು ಹೋಗುತ್ತಾರೆ. ಇನ್ನು, ಮಧ್ಯಾಹ್ನ ಅಥವಾ ರಾತ್ರಿ ಊಟದ ಸಮಯಕ್ಕೆ ಬಂದರೆಂದರೆ ಊಟ ಮಾಡಿಸಿಯೇ ಕಳಿಸುತ್ತಾರೆ. ಈ ಮನೆಯ ಹೆಣ್ಣು ಬೆಳಗ್ಗೆ 4.30ಕ್ಕೆ ಎದ್ದು ರಾತ್ರಿ 12.30ಕ್ಕೆ ಮಲಗುತ್ತಾಳೆ. ಏನಪ್ಪಾ ಈ 4.30 ರಿಂದ12.30 ರವರೆಗೆ ಕೆಲಸ ಅಂದಿರಾ? ಏನಿ, ಮನೆಯವರಿಗೆ ಮತ್ತು ಬಂದವರಿಗೆ ಗಣಪನ ಹೆಸರಲ್ಲಿ ಮಾಡಿ ಬಡಿಸುವುದು ಅಷ್ಟೆ. ಈಗ ನೀವೆನ್ನಬಹುದು ಅದರಲ್ಲೇನಿದೆ? ವರ್ಷಕ್ಕೆ ಐದೇ ದಿನ ತಾನೇ ಆಕೆ ತನ್ನ ಇಷ್ಟದಂತೆ ಮಾಡಿ ಅದರಲ್ಲಿ ಖುಷಿಪಡುತ್ತಾಳೆ ಎಂದು.
ಇಲ್ಲಿರುವ ಪ್ರಶ್ನೆ ಇಷ್ಟು ಕೆಲಸ ಮಾಡಿ ಹೋಗಿ ಬರುವವರಿಗೆಲ್ಲ ಮಾಡಿ ಬಳಿದ ಆಕೆ ಉಣ್ಣುವುದು ಎರಡು ಕಾಳು ಕೊನೆಯಲ್ಲಿ, ಅದೂ ಉಳಿದರೆ ಮಾತ್ರ! ಈ ಬೆಳಗಿನ 4.30 ರಿಂದ ರಾತ್ರಿ 12.30ರವರೆಗೆ ಅಡುಗೆಮನೆಯೇ ಆಕೆಯ ಪ್ರಪಂಚ. ಆದರೆ ಮನೆಯ ಗಂಡಸರು ಅಲ್ಲಿ ಇಣುಕಿ ಸಹ ನೋಡುವುದಿಲ್ಲ. ಮನೆಗಂಡಸರೆಲ್ಲ ಜಗುಲಿಯಲ್ಲಿ ಕುಳಿತು ಹರಟೆ ಹೊಡೆಯುತ್ತ ‘ಏ, ಇವರು ಬಂದ್ರು ಅವರಿಗೆ ಚಹಾ ಕೊಡು, ಅವರು ಹೊರಟರು, ಅವರಿಗೆ ಪ್ರಸಾದ ಕಟ್ಟಿಕೊಡು, ಇನ್ಯಾರೋ ಬಂದವರು ಊಟ ಮಾಡಿಯೇ ಹೋಗುತ್ತಾರೆ ’ಎಂಬ ಆಜ್ಞೆ ಕೊಟ್ಟರೆ, ಅತ್ತ ಪಾಪ ಮಡಿಸೀರೆಯುಟ್ಟ ರೋಬೋಟ್ ಆ ಆಜ್ಞೆಯನ್ನು ನಗುಮುಖದಿಂದ ಸ್ವೀಕರಿಸುತ್ತದೆ. ಇನ್ನು ಆ ರೋಬೋಟ್‌ನ ಕಥೆ ಕೇಳಬೇಡಿ, ಅಡುಗೆ ಮನೆಯನಾದರೂ ಎಸಿ ಇರುತ್ತದೆಯೇ? ಇರುವ ಫ್ಯಾನ್ ಕೂಡ ಹಾಕುವ ಹಾಗಿಲ್ಲ.
ಹಾಕಿದರೆ ಒಲೆಯ ಬೆಂಕಿ ಆರಿಹೋಗುತ್ತದೆ ಮತ್ತು ಮಾಡಿದ ಅಡುಗೆ ತಣ್ಣಗಾಗುತ್ತದೆ. ನೀವು ಗಮನಿಸಿರಬಹುದು, ಜಾಹಿರಾತಿ ನಲ್ಲಿಯೂ ಕೂಡ ಮನೆಮಂದಿಯೆಲ್ಲ ಡೈನಿಂಗ್ ಹಾಲ್‌ನಲ್ಲಿ ಜತೆಗೆ ಕುಳಿತು ಅಮ್ಮ ತರುವ ಬಿಸಿ ಬಿಸಿ ಚಪಾತಿಗಾಗಿ ಕಾಯುತ್ತಿರು ತ್ತಾರೆ. ಪಾಪ, ಜಾಹಿರಾತಿನಲ್ಲಿ ಕೂಡ ಆಕೆಗೆ ಒಟ್ಟಿಗೆ ಎಲ್ಲರೊಂದಿಗೆ ಕುಳಿತು ಊಟ ಮಾಡುವ ಯೋಗವಿಲ್ಲ. ಇನ್ನು, ಅಡುಗೆಮನೆ ಯಲ್ಲಿ ಒಬ್ಬರು ತರಕಾರಿ ಕೊಚ್ಚಿದರೆ ಇನ್ನೊಬ್ಬರು ಪಾತ್ರೆ ತೊಳೆಯುತ್ತಾರೆ, ಇನ್ನೊಬ್ಬರು ಬಡಿಸುತ್ತಿರುತ್ತಾರೆ.
ಒಬ್ಬರಿಗಂತೂ ಯಾರಿಗೆ ಏನು ಬೇಕಿದೆ? ಯಾವ ಪದಾರ್ಥ ಅವರು ತಿಂದು ಮುಗಿಸಿದ್ದಾರಾ? ಮತ್ತು ಯಾವುದಕ್ಕಾಗಿ ಕಾಯು ತ್ತಿದ್ದಾರೆ? ಎಂಬುದನ್ನು ತಿಳಿದು ಬಡಿಸುವರಿಗೆ ವರದಿ ಒಪ್ಪಿಸುವ ಕೆಲಸ. ಯಾಕೆಂದರೆ ಅವರ ಊಟದ ಬಾಳೆ ಖಾಲಿ ಇರದ ಹಾಗೆ ನೋಡಿಕೊಳ್ಳುವುದು ಮನೆಯ ಹೆಣ್ಣಿನ ಕರ್ತವ್ಯ. ಆದರೆ ಇಷ್ಟು ಕೆಲಸ ಮಾಡುತ್ತಿರುವ ಆ ಹೆಂಗಸರು ಏನಾದರು ತಿಂದಿದ್ದಾರಾ? ಅವರಿಗೆ ಏನಾದರು ಆಯಾಸವಾಗಿದೆಯಾ? ಎಂಬ ಯಾವ ಚಿಂತೆ ಇಲ್ಲದೆ ಇನ್ನು ಎರಡು ಮೂರು ಸಲ ಇದು ಚೆನ್ನಾಗಿದೆ, ಅದು ಚೆನ್ನಾಗಿದೆ ಎಂದು ಕೇಳಿ ಕೇಳಿ ಹಾಕಿಸಿಕೊಂಡು ಉಂಡು ಕೈತೊಳೆಯುವ ಸಂಭ್ರಮ ಗಂಡಸರಿಗೆ.
ಆದರೆ ಅನಿರೀಕ್ಷಿತವಾಗಿ ಬಂದ ಅತಿಥಿಗಳು ಅಥವಾ ಚೆನ್ನಾಗಿದೆ ಎಂದು ಕೇಳಿ ಕೇಳಿ ಹಾಕಿಸಿಕೊಂಡಾಗ ಕೊನೆಗೆ ತಮಗೆ ಒಂದು ಕಾಳು ಮಾಡಿದ ಅಡುಗೆ ಇರದಿದ್ದರೂ ಆಕೆ ಬಡಿಸಿ ಮತ್ತೆ ತ್ಯಾಗಮಯಿ ಎನಿಸಿಕೊಳ್ಳುತ್ತಾಳೆ. ಇಷ್ಟೆಲ್ಲ ಆದ ಮೇಲೆ ಈ ಹೆಂಗಸರು ಮೂರೋ ನಾಲ್ಕೋ ಗಂಟೆಗೆ ಅಡುಗೆ ಮನೆಯ ಮೂಲೆಯಲ್ಲಿ ಅಳಿದುಳಿದ ತಣ್ಣಗಾದ ಅಡುಗೆಯನ್ನು ಅನಾಥರಂತೆ ಊಟ ಮಾಡುತ್ತಿದ್ದರೆ, ಮನೆಯ ಗಂಡಸರು ಚಹಾ ಕುಡಿದು ವೀಳ್ಯ ಸಹ ತಿಂದು ಕಂಡ ಕಂಡಲ್ಲಿ ಚಾಪೆ ಹಾಕಿ ತಲೆಗೆ ಮೆತ್ತಗಿನ ತಲೆದಿಂಬು ಇಟ್ಟು ಗೊರಕೆ ಹೊಡೆಯುತ್ತಿರುತ್ತಾರೆ.
ಅತ್ತ ಹೆಂಗಸರು ಅಡುಗೆಮನೆಯಲ್ಲಿ ಎಲ್ಲಾ ಪಾತ್ರ ತೊಳೆದು, ಸ್ವಚ್ಛ ಮಾಡಿ ಸಂಜೆಯ ಸಮಾರಾಧನೆಗೆ ಅಣಿಯಾಗುತ್ತಾರೆ.
ಇತ್ತೀಚಿಗೆ ಹೆಣ್ಣೊಬ್ಬಳು ಆಕ್ಸಿಜನ್ ನಳಿಕೆಯನ್ನು ಮೂಗಿನಲ್ಲಿಟ್ಟುಕೊಂಡೇ ಅಡುಗೆ ಮಾಡುತ್ತಿರುವ ಚಿತ್ರ ತಾಯಿ ತನ್ನ ಕೆಲಸಕ್ಕೆ ಯಾವತ್ತೂ ರಜೆ ತೆಗೆದುಕೊಳ್ಳುವುದಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆ ಚಿತ್ರ ನಿಜವಾದದ್ದೇ ಅಥವಾ ಸುಳ್ಳೋ ಎಂಬ ಪ್ರಶ್ನೆ ಬದಿಗಿರಲಿ, ಹೆಣ್ಣಿಗೆ ವಿಶ್ರಾಂತಿ ಬೇಕು ಮತ್ತು ಈ ತರಹದ ತಾಯ್ತನದ ವಿಷಪೂರಕ ವೈಭವೀಕರಣ ಬೇಡ ಎಂದು ಕೂಗು ಸಹ ಕೇಳಿಬಂದಿತ್ತು, ಆದರೆ ತ್ಯಾಗ, ಮಮತೆ, ಹೆಣ್ತನ ಎಂದು ಹೆಣ್ಣನ್ನ ಶತಮಾನಗಳಿಂದ ವೈಭವೀಕರಿಸಿ ಅತಿಯಾಗಿ ದುಡಿಸಿಕೊಂಡ ಈ ಸಮಾಜ ಅಷ್ಟು ಸುಲಭಕ್ಕೆ ತನ್ನ ತಪ್ಪನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಯಾಕೆಂದರೆ ಶತಮಾನಗಳಷ್ಟು ಹಳೆಯದಾದ ಗೊಡ್ಡು ಸಂಪ್ರದಾಯ, ಅನಾದಿಯಿಂದಲೂ ಹೀಗೆ ನಡೆದು ಬಂದದ್ದು, ಅದು
ಹೆಣ್ಣಿನ ಕರ್ತವ್ಯ’ ಎಂಬ ಧೋರಣೆ. ಆದರೆ ಹೆಚ್ಚಿನ ಹೆಣ್ಣುಮಕ್ಕಳು, ಅದರಲ್ಲೂ ಈ ಹಿಂದಿನ ತಲೆಮಾರಿನ ಹೆಣ್ಣುಮಕ್ಕಳು ತಮ್ಮಅಸ್ತಿತ್ವವನ್ನು ಭದ್ರಪಡಿಸಿಕೊಂಡಿದ್ದು ಮತ್ತು ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದ ರೀತಿಯೇ ಅಡುಗೆಮಾಡಿ, ಮನೆಯನ್ನು ಒಪ್ಪವಾಗಿಟ್ಟು, ತನ್ನ ಗಂಡ-ಮಕ್ಕಳು ಮತ್ತು ಮನೆಯವರ ಯೋಗಕ್ಷೇಮ ನೋಡಿಕೊಂಡು, ತನ್ನ ಯಾವ ಬೇಕು ಬೇಡಗಳ ಬಗ್ಗೆ ಚಕಾರವೆತ್ತದಿದ್ದುದು ಮತ್ತು ತಾನು ಎಲ್ಲಿ ಇವೆ ಮಾಡದೆ ಹೋದರೆ ತನ್ನ ಮನೆಯೇ ಮುಳುಗಿ ಹೋಗುತ್ತದೆ ಎಂಬ ಭ್ರಮೆಯಲ್ಲಿ ಬದುಕಿದ್ದು.
ಆಕೆಗೆ ಅನಾರೋಗ್ಯವಿದ್ದರೂ, ತಿಂಗಳ ಮುಟ್ಟಿನ ದಿನಗಳ ವಿಪರೀತ ಹೊಟ್ಟೆನೋವಿದ್ದರು, ಅದೆಲ್ಲ ಸಹಜ ಮತ್ತು ಆಕೆ ಆ ತರಹದ ಸ್ಥಿತಿಯಲ್ಲಿಯೂ ಕೊಡ ಕೆಲಸ ಮಾಡಲು ಸಿದ್ಧಳಾಗಿರುತ್ತಾಳೆ. ಯಾಕೆಂದರೆ ಪ್ರಕೃತಿ ಅವೆಲ್ಲವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆಕೆಗೆ ಕೊಟ್ಟಿದೆ’ ಎಂಬ ನಂಬಿಕೆಯನ್ನು ಆಕೆಯ ಮನದ ಆಳದಲ್ಲಿ ಬೇರು ಬಿಡುವಂತೆ ಮಾಡಿದೆ ಈ ಪುರುಷ ಪ್ರಧಾನ ಸಮಾಜ. ಆದರೆ ಹೆಣ್ಣು ಈ ತರಹ ಬಲಿಯ ಕುರಿಯಾದರೆ ಆಕೆಯ ಆತ್ಮಗೌರವವಾಗಲಿ, ಅಮರತ್ವವಾಗಲಿ ಎತ್ತರಕ್ಕೇನು
ಏರುವುದಿಲ್ಲ.
ಬದಲಿಗೆ ತನ್ನ ಗಂಡ, ಮಕ್ಕಳನ್ನು ಅತಿಯಾಗೆ ಪ್ರೀತಿಸಿ ಅವರಾಡಿದಂತೆ ಅವರ ಕೈಗೊಂಬೆಯೋ, ದಾಸಿಯೋ ಆಗಿ ಏನು ಹೇಳ
ಹೊರಟಿzರೆ ಹೆಣ್ಣು ಮಕ್ಕಳು? ನಾವೆ ನೊಡಿದ್ದೇವೆ, ಮಕ್ಕಳು ಹಿರಿಯರನ್ನಾ ಅನುಕರಿಸುತ್ತಾರೆ. ಮಕ್ಕಳು ಮಾತಿಗಿಂತ ಜಾಸ್ತಿ ಕೃತಿಯಿಂದ ಕಲಿಯುತ್ತಾರೆ. ಅದಕ್ಕಾಗಿ ಈ ತರಹ ದಾಸಿಯಂತೆ ಬದುಕುವ ಹೆಣ್ಣು ತನ್ನ ಮುಂದಿನ ಪೀಳಿಗೆಯೂ ಅದೇ ದಾಸ್ಯದ ಬದುಕನ್ನೇ ಬದುಕಲಿ ಎಂದು ಬಯಸುತ್ತಾಳಾ? ಇದೆಲ್ಲವನ್ನು ನೋಡುತ್ತಾ ಬೆಳೆಯುವ ನಿಮ್ಮ ಮಗಳು ಮುಂದೆ ನಿಮ್ಮಂತೆಯೇ ತನ್ನ ಸರ್ವಸ್ವವನ್ನು ತನ್ನ ಗಂಡ – ಮಕ್ಕಳಿಗೇ ಅರ್ಪಿಸಿ ಬದುಕಬೇಕಾ? ನಿಮ್ಮ ಆ ಪುಟ್ಟ ಮಗ ತನ್ನ ಅಪ್ಪನಂತೆ ಮುಂದೆ ತನ್ನ ಹೆಂಡತಿಯಿಂದ ಮುಗಿದಷ್ಟು ತೀರದ, ಕೊಟ್ಟಷ್ಟು ಸಾಕಾಗದ ದಾಸ್ಯವನ್ನು ಬಯಸುತ್ತಾನೆ.
ಯಾಕೆಂದರೆ ಆತ ಬೆಳೆದದ್ದು ಅನಾರೋಗ್ಯವಿದ್ದರೂ, ಅದೆಷ್ಟೇ ಕಷ್ಟವಾದರೂ ಅಪ್ಪನ ಬೇಡಿಕೆ ಪೂರೈಸಿದ ನಿಮ್ಮಂತ ಅಮ್ಮಂದಿ ರನ್ನು ನೋಡಿ. ಮುಂದಿನ ಪೀಳಿಗೆಗೆ ನಿಮ್ಮ ಈ ದಾಸ್ಯ ವೀರ(!) ಹೋರಾಟದ ಕತೆಯಾಗುತ್ತದೆ ಮತ್ತು ಮುಂದಿನ ಹೆಣ್ಣುಮಕ್ಕಳು ಪಾಲಿಸಲೇ ಬೇಕಾದ ಬದುಕಾಗುತ್ತದೆ.
ಬಹುಮುಖ್ಯವಾಗಿ ಹೆಣ್ಣನ್ನು ಅಷ್ಟೊಂದು ಶೋಷಣೆಗೆ ಗುರಿಪಡಿಸಲು ಮುಖ್ಯ ಕಾರಣ – ಮೊದಲ ಒಂದೆರಡು ಸಲ ನಿಮ್ಮ ಆರೋಗ್ಯ ಕೆಟ್ಟಾಗ ಮನೆಯವರು, ಮುಖ್ಯವಾಗಿ ಗಂಡ ಕಷ್ಟವಾಗ್ತಿದೆಯಾ?’ ಎಂದು ವಿಚಾರಿಸಿದಾಗ ಇಲ್ಲ, ನಾನೇ ಮಾಡುತ್ತೇನೆ’
ಎಂದುಬಿಟ್ಟರೆ ಮುಂದೆ ಆತ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂಬುದನ್ನೇ ಮರೆತುಬಿಡುತ್ತಾನೆ. ಆತನ ದೃಷ್ಟಿಯಲ್ಲಿ ನಿಮಗೆ ಎಲ್ಲ ನಿಭಾಯಿಸುವ ಶಕ್ತಿ ಇದೆ ಮತ್ತು ನಿಮ್ಮ ಅನಾರೋಗ್ಯ ಅಂಥ ದೊಡ್ಡದಲ್ಲ ಎಂದು. ಇಂದು ನಾವು ಸ್ವಲ್ಪ ಮೈಬಿಸಿಯಾದಾಗ ಇಡೀ ದಿನ ಹಾಸಿಗೆಯ ಬಿದ್ದು ಎಲ್ಲ ಮಲಗಿದ ಮಾಡಿಸಿಕೊಳ್ಳುವ ಗಂಡಸರನ್ನು ನೋಡಿದ್ದೇವೆ.
ಯಾಕೆಂದರೆ ಅವರು ತುಂಬಾ Delicate ಮತ್ತು ಆ ತರಹದ ವಿಶ್ರಾಂತಿ ಅವರ ಹಕ್ಕು. ಆದರೆ ಹೆಣ್ಣು ಆ ತರಹ ಮಲಗಬಾರದು ಯಾಕೆಂದರೆ, ಆಕೆ ಮನುಷ್ಯಳಲ್ಲ ಅತಿಮಾನುಷಳು. ಆದರೆ ನೆನಪಿರಲಿ ಮನುಷ್ಯಳನ್ನಾಗೆ ನೋಡದ ನಿಮ್ಮನ್ನು ಅತಿಮಾನುಷ ರಾಗಿ ನೋಡುವರಾ? ನಿಮ್ಮ ಮನೆಯವರು? ಹೀಗೊಂದು ಮಾತಿದೆ – ಎಲ್ಲಿಯವರೆಗೆ ನಾವು ನಮ್ಮನ್ನು ಎರಡನೆ ಸ್ಥಾನದಲ್ಲಿ ನೋಡುತ್ತೇವೋ ಅಲ್ಲಿಯವರೆಗೆ ನಾವು ಉಳಿದವರನ್ನಾ ಮೊದಲ ಸ್ಥಾನದಲ್ಲಿಡಲು ಬಯಸುತ್ತೇವೆ.
ಸಾಕು, ನೂರಾರು ಶತಮಾನಗಳಷ್ಟು ಹಳೆಯದಾದ ಈ ಪುರುಷಪ್ರಧಾನ ವ್ಯವಸ್ಥೆ. ಇನ್ನು ನಾವು ಗುಡಿಸಿ ತೊಳೆದು ಶುದ್ಧ ಗೊಳಿಸುವ ಸಮಯ ಬಂದಿದೆ. ಇಲ್ಲಿ ನೂರಾರು ಹೆಣ್ಣುಮಕ್ಕಳ ನೂರಾರು ವರ್ಷಗಳ ಹೋರಾಟವಿದೆ. ಸಮಾನತೆಗಾಗಿ, ಸಮಾನ ಗೌರವಕ್ಕಾಗಿ. ಹೆಣ್ಣು ಎಂದಿಗೂ ಎರಡನೇ ದರ್ಜೆಯ ಜೀವಿ ಅಲ್ಲ. ಅದನ್ನು ಹೆಣ್ಣು ಮೊದಲು ಅರಿಯಬೇಕು. ನಾವು ಮನುಷ್ಯ ರಾಗಿ ಮುಂದಿನ ಪೀಳಿಗೆಗೆ ಹೇಳಬಹುದಾದ ಬಹುದೊಡ್ಡ ಪಾಠ ಪ್ರೀತಿ, ಗೌರವ ,ಕರುಣೆ, ಮನುಷ್ಯತ್ವ ಮತ್ತು ಸಮಾನತೆ.
ಹಾಗಾಗಿ ನಿಮಗೆ ಅನಾರೋಗ್ಯ ಎಂದಾಗ ವಿಶ್ರಾಂತಿ ತೆಗೆದು ಕೊಳ್ಳಬೇಕು. ಏಕೆಂದರೆ ಅದಕ್ಕೆ ನೀವು ಅರ್ಹರು. ಇನ್ನೊಮ್ಮೆ ನಿಮಗೆ ಹೊರಲಾಗದ ಭಾರ ಹೊರುವ ಸಮಯ ಬಂದಾಗ, ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದಾಗ ಧೈರ್ಯದಿಂದ ಮಾತಾಡಿ ಆ
ಭಾರವನ್ನು ಇಳಿಸಿಟ್ಟುಬಿಡಿ. ಮನೆಯಲ್ಲಿ ಎಲ್ಲರೂ ಊಟಕ್ಕೆ ಕೂತಾಗ ನೀವು ನಿಮ್ಮ ತಟ್ಟೆ ಹಿಡಿದು ಎಲ್ಲರೊಂದಿಗೆ ಕೂತು ಊಟ ಮಾಡಿ. ಮನೆಗೆಲಸ, ಅಡುಗೆ ಮಾಡಿ ದಣಿವಾದರೆ ಹೋಗಿ ಸ್ವಲ್ಪಹೊತ್ತು ನಿದ್ದೆ ಮಾಡಿ, ಮನೆಯ ಗಂಡಸರು ಸೌಟು ಹಿಡಿದರೆ
ಮಾರಣಾಂತಿಕ ರೋಗವೇನು ಬರಲಾರದು!
ಎಲ್ಲಕ್ಕಿಂತ ಮುಖ್ಯವಾಗಿ ಮನೆಯ ಹೆಣ್ಣುಮಕ್ಕಳಿಗೆ ಹೇಳಿಕೊಡುವಂತೆ ಅಡುಗೆ ಮತ್ತು ಮನೆಗೆಲಸದ ಪಾಠ ಸಣ್ಣವಯಸ್ಸಿನ ಮನೆಯ ಗಂಡುಮಕ್ಕಳಿಗೂ ಹೇಳಿಕೊಡಿ. ಮುಂದಿನ ಸಲ 4 ಪೀಸ್ ಕೇಕ್ ಇದ್ದಾಗ ಅದನ್ನ 5 ಸಮಪಾಲು ಮಾಡಿ, ನಿಮ್ಮ ಪಾಲನ್ನು ನೀವೇ ತಿನ್ನಿ. ಅಮ್ಮಂದಿರು ನಮ್ಮಂತೆ ತಪ್ಪು ಮಾಡುತ್ತಾರೆ ಯಾಕೆಂದರೆ ಅಮ್ಮಂದಿರು ನಮ್ಮಂತೆ ಮನುಷ್ಯರು
ಅಮ್ಮಂದಿರಿಗೆ ಬೇಕಾದದ್ದು ಗೌರವ ಮತ್ತು ಸಮಾನತೆ ಅದಲ್ಲದೆ ಬದುಕಿದ್ದಾಗಲೇ ಬೇಡವಾದ ದೇವರ ಪಟ್ಟವಲ್ಲ.