Monday, 9th December 2024

ಮಾತೃಭಾಷೆ ಶಿಕ್ಷಣಕ್ಕೆ ಒತ್ತು ಅವಶ್ಯಕ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

adarsh.shetty207@gmail.com

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಮತ್ತು ನೈತಿಕ ಶಿಕ್ಷಣದ ಬದಲಾಗಿ ವ್ಯಾಪಾರೀಕರಣದ ದೃಷ್ಟಿಕೋನವೇ ಪ್ರಮುಖ ಪಾತ್ರ ವಹಿಸುತ್ತಿದೆ. ಮತ್ತೊಂದೆಡೆ ಪ್ರತಿಷ್ಠೆ ವಿಚಾರವಾಗಿಯೂ ಮಾರ್ಪಾಡುಗೊಳ್ಳುತ್ತಿದೆ. ಶಿಕ್ಷಣವೆಂಬುವುದನ್ನು ಕೇವಲ ಅಂಕ ಗಳಿಕೆಯ ಸರಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಂದರ್ಥದಲ್ಲಿ ವಿದ್ಯಾರ್ಥಿಗಳನ್ನು ಒತ್ತಡದ ಬಲೆಗೆ ಬೀಳಿಸಿ ಅವರ ಸ್ವಾತಂತ್ರ್ಯವನ್ನು ಪೋಷಕರು, ಶಿಕ್ಷಣ ಸಂಸ್ಥೆಗಳು ಕಸಿದುಕೊಳ್ಳುವ ವಿದ್ಯಮಾನಗಳು ಕೂಡ ನಮ್ಮ ಕಣ್ಣ ಮುಂದಿವೆ.

ಮತ್ತೊಂದೆಡೆ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮರೆಯಾಗುವಲ್ಲಿ ಶಾಲೆಗಳಲ್ಲಿ ದೊರಕುವ ಮಾತೃಭಾಷೆ ಶಿಕ್ಷಣದ ಕೊರತೆಗಳು ಕೂಡ ಒಂದು ಕಾರಣವಾದರೆ, ಇತ್ತೀಚೆಗೆ ಆಡಂಬರಕ್ಕೆ, ವೈಭೋಗದ ಕಾರಣಕ್ಕಾಗಿ ಮಾತೃಭಾಷೆಯನ್ನು ಕೀಳಾಗಿ ಕಾಣುವ, ಶಾಲಾ ಪಠ್ಯ ಚಟುವಟಿಕೆಗಳಲ್ಲಿ ತಾತ್ಸಾರ ಭಾವನೆಯಿಂದ ಕಾಣುವ ವಿದ್ಯಮಾನಗಳಿವೆ. ಶಾಲೆಗಳಲ್ಲಿ ನೀಡುವ ಶಿಕ್ಷೆಯ ಪ್ರಮಾಣಗಳು ಇಂದು ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ಅಪರಾಧ ಪ್ರಕರಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹದಿಹರೆಯದ ಯುವಕರೇ ಪೋಲಿಸ್ ಠಾಣೆಯ ಮೆಟ್ಟಿಲೇರುವ ಪ್ರಸಂಗಗಳು ಎದುರಾಗುತ್ತಿವೆ.

ಕೆಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಂತೂ ಕನ್ನಡ ಓದಲು ಬರೆಯಲು ಪಡುವ ಭವನೆಗಳು ಅಷ್ಟಿಷ್ಟಲ್ಲ. ಪೋಷಕರು ಅಷ್ಟೇ ತಮ್ಮ ಮಕ್ಕಳು ಇಂಗ್ಲಿಷ್ ಓದುವುದು ಮಾತನಾಡುವುದೆಂದರೆ ಏನೋ ತಮ್ಮ ಘನತೆ ಹೆಚ್ಚೇ ಬಿಟ್ಟಿತು ಅನ್ನುವಷ್ಟರ ಮಟ್ಟಿಗೆ ಹಿಗ್ಗಿ ಬಿಡುತ್ತಾರೆ. ಆದರೆ ಯಾವತ್ತೂ ಒಬ್ಬ ವಿದ್ಯಾರ್ಥಿ ತನ್ನ ಮೂಲ ಮಾತೃಭಾಷೆಯಲ್ಲಿ ಮಾತನಾಡುವುದು, ವ್ಯವಹರಿಸುವುದನ್ನು ಮರೆತನೆಂದರೆ ಅಲ್ಲಿ ತಮ್ಮ ಬಂಧು ಬಳಗ, ಪೋಷಕರ ನಡುವಿನ
ಸಂಬಂಧದಲ್ಲಿ ವ್ಯತ್ಯಾಸ ಹೊಂದಿದಂತೆಯೇ ಸರಿ. ಒಂದು ಸಮಧಾನಕರ ಸಂಗತಿಯೆಂದರೆ ದೇಶದ ಯುಡಿಎಸ್‌ಐಇ ವರದಿಯಂತೆ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಮಾತೃಭಾಷೆ ಶಿಕ್ಷಣದಲ್ಲಿ ಕರ್ನಾಟಕ ಒಂದನೆಯ ಸ್ಥಾನದಲ್ಲಿ ಬಂದು ನಿಂತಿದೆ.

ಈ ವರದಿಯ ಪ್ರಕಾರ ಕರ್ನಾಟಕದಲ್ಲಿ ಶೇ.೫೩.೫ರಷ್ಟು ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿzರೆ. ಮಾತೃಭಾಷೆ ಶಿಕ್ಷಣ ಮತ್ತು ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಕಡೆ ಸೆಳೆಯುವಂತೆ ಮಾಡಬೇಕಾದ ಮಹತ್ತರವಾದ ಹೊಣೆಗಾರಿಕೆಯಿದೆ. ದಿನಗಳು ಕಳೆದಂತೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ, ಮೂಲಭೂತ ಸೌಕರ್ಯಗಳು ಸೇರಿದಂತೆ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳುವ ಕಡೆ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ.