Friday, 13th December 2024

ಮರೆಯುವ, ಮರುಕಳಿಸುವ ಮಮಕಾರ

ಅವಲೋಕನ

ಸುಮಾವೀಣಾ

ಕವಿ ಹರಿಹರ ತನ್ನ ಇಳೆಯಾಂಡ ಗುಡಿಮಾರನ ರಗಳೆ’ಯಲ್ಲಿ ಶಿವ ತನ್ನ ಭಕ್ತನನ್ನು ಪರೀಕ್ಷಿಸುವ ರೀತಿ,
ತಾಯಿಯೊಬ್ಬಳು ಮಗುವನ್ನು ಕಳೆದುಕೊಂಡ ಸಂಕಟ, ಜಂಗಮರನ್ನು ಸತ್ಕರಿಸುವ ಭಾವ ಚೆನ್ನಾಗಿ ಮೂಡಿ ಬಂದಿದೆ.

ಸಾಮಾಜಿಕ ಮೌಲ್ಯಗಳು ಇತ್ತೀಚಿಗೆ ಕುಸಿಯುತ್ತಿದೆಯೇನೋ? ಮರೆಯಾಗುತ್ತಿದೆಯೇನೋ? ಎಂಬ ಆತಂಕ ಕಾಡಲಾರಂಭಿಸಿದೆ. ಕೆಟ್ಟ ಮಕ್ಕಳಿರುತ್ತಾರೆ. ಕೆಟ್ಟ ತಾಯಂದಿರು ಇರುವುದಿಲ್ಲ ಎಂಬ ಮಾತಿದೆ.

ಆದರೀಗ ಪರಿಸ್ಥಿತಿಯ ವಿಷಮತೆಗೆ ಒಳಗಾಗಿ ಹೆತ್ತ ಮಕ್ಕಳನ್ನು ಬಲಿಕೊಡುತ್ತಿರುವ ತಾಯಿಯ ಕುರಿತ ಸುದ್ದಿ ಆಘಾತಕಾರಿಯೇ ಹೌದು. ಜತೆಗೆ ಇನ್ನು ಪರಿಪೂರ್ಣವಾಗಿ ಬೆಳೆಯದೇ ಇರುವ ಭ್ರೂಣವನ್ನು ಮನೆಯ ಹೂಕುಂಡದಲ್ಲಿ ಸಂಸ್ಕಾರ ಮಾಡುವ
ತಾಯಿಯ ಸುದ್ದಿ ಮನಕಲುಕುವಂತಿದೆ.

‘ಮಕ್ಕಳ ಕೊಡು ಶಿವನೆ ಬಂಧನಾ ಪಡಲಾರೆ ಬಂಜೆಂಬ ಶಬುದವ ಹೊರಲಾರೆ ಎಂಬ’ ಜಾನಪದ ಮಾತಿನಲ್ಲಿ ಮಕ್ಕಳಿಗೆ ಹಂಬಲಿಸುವ ತಾಯಿಯ ಕರುಳ ಕರೆ ಅಡಗಿದೆ. ರಗಳೆ ಕವಿ ಹರಿ ಹರ ತನ್ನ ಇಳೆಯಾಂಡ ಗುಡಿಮಾರನ ರಗಳೆ’ಯಲ್ಲಿ ಶಿವ ತನ್ನ ಭಕ್ತನನ್ನು ಪರೀಕ್ಷಿಸುವ ರೀತಿ, ತಾಯಿಯೊಬ್ಬಳು ಮಗುವನ್ನು ಕಳೆದುಕೊಂಡ ಸಂಕಟ, ಹಾಗೆ ಬಂದ ಜಂಗಮರನ್ನು
ಸತ್ಕರಿಸುವ ಭಾವ ಚೆನ್ನಾಗಿ ಮೂಡಿ ಬಂದಿದೆ.

ಗುಡಿ ಮಾರನನ್ನು ಪರೀಕ್ಷಿಸಲೆಂದೇ ಸಮಸ್ತ ಭೂಮಂಡಲವೇ ಮುಳುಗಿ ಹೋಗುವಂಥ ಮಾಯಾ ಮಳೆ ತರಿಸಿದ ಶಿವ ಹಣ್ಣು ಹಣ್ಣು ಮುದುಕನ ವೇಷದಲ್ಲಿ ಜೋರಾಗಿ ಒಮ್ಮೆ ಗಾಳಿ ಬೀಸಿದರೂ ಉಸಿರೇ ನಿಂತು ಹೋಗುತ್ತದೆ ಯೇನೋ ಎಂಬಂತೆ ತೀವ್ರ ಚಳಿಗೊಂಡವನಂತೆ, ಹಸಿದು ಹಣ್ಣಾದವನಂತೆ ಬರುತ್ತಾನೆ. ಅದಾಗಲೇ ಮಾಯಾ ಮಳೆಗೆ ತಿನ್ನಲೂ ಧವಸವಿಲ್ಲದೆ ತತ್ತರಿಸಿ
ಹೋಗಿದ್ದ ಗುಡಿಮಾರ ದಂಪತಿಗಳಿಗೆ ತಮ್ಮ ನಿತ್ಯ ದಾಸೋಹ ಸಂಕಲ್ಪವನ್ನು ಹೇಗೆ ಪೂರೈಸುವುದು? ಎಂದು ತೋಚದಾಗುತ್ತದೆ. ಆ ಸಂದರ್ಭದಲ್ಲಿ ಗುಡಿಮಾರನ ಹೆಂಡತಿ ಗದ್ದೆಯಲ್ಲಿ ಬಿತ್ತಿದ ಭತ್ತವನ್ನೇ ಆಯ್ದು ತರಬೇಕೆಂದು ಗುಡಿಮಾರನಿಗೆ ಸಲಹೆ
ಕೊಡುತ್ತಾಳೆ ಅದರಂತೆ ಅವನು ತನ್ನ ಮಗನೊಂದಿಗೆ ಮಯಾಮಳೆಯನ್ನು ಲೆಕ್ಕಿಸದೆ ಬಿತ್ತಿದ ಗದ್ದೆಗೆ ಬಿದಿರಿನ ಬುಟ್ಟಿಯನ್ನು ಹಿಡಿದು ಹೋಗುತ್ತಾನೆ.

ಗದ್ದೆಯೊಳಿದ್ದ ಮೊಳೆವಿತ್ತನೆತ್ತಿದಂ
ರಾಗದಿಂ ತಂದವಂ ಗೂಡೆಯೊಳಗಿಕ್ಕಿದಂ
ತಿರುಗಿ ಬರಿತಿರ್ದಂ ಹರಂ ಹಸಿದನೆಂದೆನುತೆ
ಉರವಣಿಸಿ ಬರುತಿರ್ದ ಬಳಲ್ದ ನೀಶ್ವರನೆನುತ

ಮಗನೊಂದಿಗೆ ಗದ್ದೆಯೊಳಗಿಳಿದು ಮೊಳಕೆ ಬಂದ ಭತ್ತದ ಕಾಳುಗಳನ್ನು ಒಂದೊಂದೆ ಆಯ್ದು ಮನೆಗೆ ಬಂದಿರುವ ಅತಿಥಿಗಳು ತುಂಬಾ ಹಸಿವೆಯಿಂದ ಇದ್ದಾರೆ, ಬೇಗ ಅಡುಗೆ ಆಗಲಿ. ಅವರು ಏನೆಂದು ಕೊಳ್ಳುವರೋ ಎಂಬ ಧಾವಂತದಿಂದ ಅವಸರ
ಅವಸರದಿಂದ ಮನೆಗೆ ಬರುತ್ತಾನೆ.

ಮೊಳೆವಿತ್ತನಾನಂದದಿಂದಂ ಹುರಿದು

ಅಮೃತಮಯವೆನಿಸಿವೋಗರವ ನಲವಿಂ ಮಾಡಿ

ಸಮೆದ ಕೀರೆಯೊಳ್ ಮೇಲೋಗರ ಮುಮಂ ಮಾಡಿ

ಅನುಮಿಸಿತೆ ಭಕ್ತರಾಗೋಣಗೆ ನಲಿನಲಿದು

ತನಯನಂ ಕದಳೀದಳಕ್ಕೆ ಕಳುಪಲ್ಬಂದು

ನಿಂದಿರ್ದು ಬಾಳೆ ಯೆಲೆಯಂ ಕೊಯ್ವತಿರಲಲ್ಲಿ

ಇಂದುಧರನಾಜ್ಞೆಯೊಂದುರಗಂ ಪಿಡಿಯಲಲ್ಲಿ

ಮಲಗಿದೊರಗಿದಂತಲ್ಲಿ ದೀರ್ಘನಿದ್ರೆ ಯೊಳಿರಲು

ಹೆಂಡತಿಯೂ ಮೊಳಕೆ ಬಂದ ಭತ್ತದ ಕಾಳುಗಳನ್ನೆ ಹುರಿದು, ಕೀರೆ ಸೊಪ್ಪಿನ ಮೇಲೋಗರವನ್ನು ಮಾಡಿ ಮನೆಗೆ ಬಂದ ಶರಣರಿಗೆ ಬಡಿಸಬೇಕು ಎನ್ನುವ ಕಾರಣಕ್ಕೆ ಮಗನನ್ನು ಕರೆದು ಹಿತ್ತಲಲ್ಲಿ ಬಾಳೆ ಎಲೆಯನ್ನು ತರಲು ಕಳುಹಿಸಿದರೆ ಮತ್ತೆ ಶಿವನ ಮಾಯಾಶಕ್ತಿಯಿಂದ ಸರ್ಪವೊಂದು ಕಚ್ಚಿದಂತಾಗಿ ಅ ಮಲಗುತ್ತಾನೆ.

ಹೊರಗೆ ಶಶಿಧರನಿತ್ತ ಹಸಿದೆನೆಂದೆನುತಿರಲು ತಡೆದೆನಿಂದಿಲೆಯಾಂಡಗುಡಿಮಾರನಾರ್ಬಂದು ಹಿಡಿದುರಗನಿಂ ಮಡಿದ ಮಗ ನೀಕ್ಷಿಸುತಂದು ಇತ್ತ ಶಿವ ಹಸಿವು! ಹಸಿವು! ಎಂದು ಚಡಪಡಿಸುತ್ತಿರುತ್ತಾನೆ. ಗುಡಿಮಾರ ಬಾಳೆ ಎಲೆ ತರಲು ಹೋದ ಮಗನನ್ನು ಹುಡುಕಿಕೊಂಡು ಹೋದರೆ ಅಲ್ಲಿ ಸರ್ಪದಿಂದ ಮಡಿದ ಬಾಲಕನನ್ನು ನೋಡುತ್ತಾ ನಿಲ್ಲುತ್ತಾನೆ.

ಹೆತ್ತಕರುಳು ಅನುಭವಿಸಿದ ಸಂಕಟವನ್ನು ವಿವರಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಅದಕ್ಕೆ ಪದಪುಂಜಗಳೆ ಇಲ್ಲವೇನೋ ಅನ್ನಿಸುತ್ತದೆ.

ತಂದೆ ಮಕ್ಕಳ್ ಕುಳ್ಳಿರ್ಪುದೆನೆ ಕೇಳ್ದು

ನೊಂದು ಶಶಿವನುಣಲೊಲ್ಲನಿನ್ನೇವೆನೆನುಗತೆಳ್ದು

ಮಗನಿಲ್ಲದಿರ್ದೊಡುಣ ಲೊಲ್ಲನೇವೆಂ ಭವನೆ

ಕರೆದು ನೋಡುವೆನೇಳದಿರ್ದೊಡಂತಭವಂಗೆ ಎನುತೆ

ತಂದೆ ಮಕ್ಕಳು ನನ್ನ ಎದುರಿಗೆ ಇಲ್ಲದಿದ್ದರೆ ನಾನು ಪ್ರಸಾದ ಸ್ವೀಕರಿಸುವುದಿಲ್ಲ ಎಂದಿರುವ ಶಿವಭಕ್ತರು ಮಗನೇ ಇಲ್ಲ ಎಂದರೆ ಊಟ ಮಾಡುವರೇ? ಹೇಳಿದರೆ ಒಂದು ಹೇಳದಿದ್ದರೆ ಇನ್ನೊಂದು ಮನದಲ್ಲಿ ಇಳೆಯಾಂಡಗುಡಿಮಾರ ಪರಿತಪಿಸುತ್ತಾ ಇರುತ್ತಾನೆ.

ನಡೆತಂದು ತ್ತಸುತನ ಹತ್ತಿರೆ ನಿಂದು
ತನುಜ ಏಳ್ಮಗನೆ ಹರನುನುಣಲೊಲ್ಲ ನೆನನುತಂದು
ಕಲರೆಯಲಾಗಹಳೆ ನಿದ್ರೆ ತಿಳಿದೇಳ್ವರಂದದಿಂ
ಚರಿತದಿಂದೆಳ್ದ ಮಗನಂ ಕಂಡು ರಾಗದಿಂ

ಹಾಗೆ ಬಂದು ಶಿವಭಕ್ತರು ಮಗನನ್ನು ಕರೆ ಎನ್ನುತ್ತಿದ್ದೆರೆ. ಬಾರದ ಲೋಕಕ್ಕೆ ತೆರಳಿರುವ ಮಗನನ್ನು ಕರೆದರೆ ಮತ್ತೆ ಬರುವನೇ? ಎನ್ನುತ್ತಾ ಶೋಕದಿಂದಲೇ ಮಗನೇ ಎಂದರೆ ಗಾಢ ನಿದ್ರೆ  ಯಿಂದ ಪ್ರಯಾಸದಿಂದ ಏಳುವಂತೆ ಮಗ ಎದ್ದು ಬರುತ್ತಾನೆ. ಅದನ್ನು ಕಂಡು ಗುಡಿಮಾರ ದಂಪತಿಗಳಿಗೆ ಬಹಳ ಸಂತೋಷ ವಾಗುತ್ತದೆ. ಒಳಗೆ ಬಂದು ನೋಡಿದರೆ ಶಿವ ತನ್ನ ನಿಜಸ್ವರೂಪದಲ್ಲಿ ಅಭಯ ಹಸ್ತದಿಂದ ಆಶೀರ್ವದಿಸುತ್ತಾನೆ.

ಇದು ಹರಿಹರನ ಇಳೆಯಾಂಡ ಗುಡಿಮಾರ ರಗಳೆಯಲ್ಲಿ ಹರಿಹರ ಚಿತ್ರಿಸಿರುವ ಶಿವಭಕ್ತಿ ಮತ್ತು ಪುತ್ರವಾತ್ಸಲ್ಯದ ಪಾರಮ್ಯವೇ. ಈ ಬರಹದ ದೃಷ್ಟಿಯಿಂದ ಇಲ್ಲಿ ಪ್ರಮುಖವಾಗಿ ತಗೆದುಕೊಳ್ಳಬೇಕಾಗಿರುವುದು ಮಕ್ಕಳ ಮೇಲಿನ ಪಿತೃಪ್ರೇಮ ಮತ್ತು ಮಾತೃಪ್ರೇಮ. ಇದು ಸಹಜವೇ ಪುತ್ರ ಶೋಕಂ ನಿರಂತರ’ ಎಂಬಂತೆ ಶೋಕವನ್ನು ಅನುಭವಿಸುತ್ತಾರೆ.

ನಮ್ಮ ಪರಂಪರೆಯ ಹಬ್ಬಗಳಲ್ಲಿ ಸಿರಿಯಾಳ ಷಷ್ಠಿ ಹಬ್ಬವನ್ನು ಗಂಡು ಮಕ್ಕಳು ಇರುವ ತಾಯಂದಿರು ಆಚರಿಸುತ್ತಾರೆ. ಜಾತಕ ದಲ್ಲಿ ಗಂಡು ಮಕ್ಕಳ ಸಂತತಿಗೆ ದೋಷ ಇದ್ದರೆ, ಗಂಡು ಮಕ್ಕಳು ಹುಟ್ಟಿ ಮರಣ ಹೊಂದುತ್ತಿದ್ದರೆ ಅಂಥವರು ಈ ಸಿರಿಯಾಳ ಷಷ್ಠಿ ದಿನ ಭಕ್ತ ಸಿರಿಯಾಳನ ಪೂಜೆ ಮಾಡಿ ಹಸಿ ತರಕಾರಿ ಗಳನ್ನುದಾನ ಮಾಡುವುದು ವಾಡಿಕೆಯಲ್ಲಿದೆ. ಇಲ್ಲಿ ಮಕ್ಕಳ ಏಳಿಗೆಗೆ ಮಾಡುವ ಆಚರಣೆ ಅಂದರೆ ಮಕ್ಕಳ ಮೇಲಿನ ಮಮಕಾರ ಇಲ್ಲಿ ಮುಖ್ಯವಾಗಿದೆ.

ಅಡಿ ಮೂರೀಯೆನಲೀ ಯನೇ ಬಲಿನೃಪಂ ಮೂಲೋಕಮಂ ದೇಹಮಂ

ಕಡದೀಯೆಂದೆನೆ ಪಕ್ಕಗೀಯನೆ ನೃಪಂ ತನ್ನಂಗವಾದ್ಯಂತಂ

ಮೃಡಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ

ಕೊಡುವರ್ತಾವುದು ದೊಡ್ಡಿತೈ ಹರಹರಾ ಶಚೆನ್ನಾ ಸೋಮೇಶ್ವರಾ||

ಇದು ಪುಲಿಗೆರೆಯ ಸೋಮೇಶ್ವರನ ಶತಕದ ಸಾಲುಗಳು. ಇಲ್ಲಿಯೂ ಭಕ್ತ ಸಿರಿಯಾಳನ ನಿಷ್ಠೆ ಮತ್ತು ಪುತ್ರಪ್ರೇಮ ಅನಾವರಣ
ವಾಗಿದೆ. ವಾಮನನು ಮೂರು ಹೆಜ್ಜೆಯನಷ್ಟು ನೆಲವನ್ನು ಬೇಡಲು ಬಲಿಚಕ್ರವರ್ತಿಯು ಮೂರು ಲೋಕವನ್ನೂ ಕೊಡಲಿಲ್ಲವೇ?

ಗಿಡಗದ ರೂಪದಿಂದ ಬಂದ ದೇವೇಂದ್ರನು ಶಿಬಿ ಚಕ್ರವರ್ತಿಯ ದೇಹದಿಂದ ಮಾಂಸವನ್ನು ಕೊಯ್ದು ಕೊಡೆಂದು ಕೇಳಲು ಆತನು ತನ್ನ ದೇಹವನ್ನು ಕೊಟ್ಟು ಬಿಡಲಿಲ್ಲವೇ? ಈಶ್ವರನು ತನ್ನ ಆಹಾರಕ್ಕಾಗಿ ಸಿರಿಯಾಳನ ಮಗನ ಮಾಂಸವನ್ನು ಕೇಳಲಾಗಿ
ಸಿರಿಯಾಳನು ಅದನ್ನು ಒದಗಿಸಲಿಲ್ಲವೇ? ಆದುದರಿಂದ ತ್ಯಾಗಿಗಳಿಗೆ ದಾನ ಮಾಡುವ ವಿಷಯದಲ್ಲಿ ಯಾವುದೂ ಹೆಚ್ಚಲ್ಲ.

ಇಲ್ಲಿಯೂ ಸಿರಿಯಾಳ ಮಗನ ಮಾಂಸವನ್ನು ಶಿವಭಕ್ತವೇಷಧಾರಿ ಶಿವನಿಗೆ ಮಾಡಿ ಬಡಿಸುತ್ತಾನೆ. ಇಲ್ಲಿ ಭಕ್ತಿಯ ಪರಾಕಾಷ್ಟತೆ ಯನ್ನು ನೋಡಬಹುದು. ಇಲ್ಲಿ ಗುಡಿಮಾರ ಮತ್ತು ಸಿರಿಯಾಳ ಶ್ರೇಷ್ಠ ಭಕ್ತರೆಂದು ಸಾಬೀತಾಗುತ್ತದೆ.

ಸತ್ತ ಬಾಲಕರು ಮರಳಿ ಬದುಕುತ್ತಾರೆ. ಈ ಸಂದರ್ಭ ಗಳನ್ನು ಸಾಹಿತ್ಯದ ಉಖದೊಂದಿಗೆ ಪುತ್ರ ಪ್ರೇಮಕ್ಕೆ ಸಾಕ್ಷಿಯಾಗಿ ತೆಗೆದು ಕೊಳ್ಳಬಹುದು.

2020ರ ಡಿಸೆಂಬರ್ 12ರಲ್ಲಿ ಕೊಲ್ಕೋತಾದಲ್ಲಿ ನಡೆದ ಒಂದು ವಿಚಿತ್ರ ಸನ್ನಿವೇಶವೊಂದನ್ನು ಉಲ್ಲೇಖಿಸುತ್ತಿದ್ದೇನೆ. ಅದು ಮಗನ ತಲೆ ಜಜ್ಜಿ, ತುಪ್ಪ, ಕಾರದ ಪುಡಿ ಹಾಕಿ ಬೇಯಿಸಿದ ಹತಾಶಾ ತಾಯಿಯ ವ್ಯಥೆ. ತಾಯಿಯೇ ದೇವರು ಎನ್ನುತ್ತಾರೆ. ಹೀಗೆ ಮಾಡ ಬಹುದೇ? ಇದು ಸಾಧ್ಯವೇ? ಹೇಗೆ? ಎಂಬೆ ಪ್ರಶ್ನೆಗಳು ಕಾಡುತ್ತವೆ. ಇಲ್ಲಿ ಅಪ್ಪ ಅಮ್ಮ ಎರಡು ಮಕ್ಕಳ ಕುಟುಂಬದಲ್ಲಿ ಮೊದಲ ಮಗ ಅರ್ಜುನ್‌ಗೆ 25 ವರ್ಷವಾಗಿರುತ್ತದೆ.

ಕಾರಣಾಂತರ ಗಳಿಂದ ತಂದೆ ಮನೆ ಬಿಟ್ಟು ಹೋಗಿ ವರ್ಷವಾಗಿರುತ್ತದೆ. ಒತ್ತಡಕ್ಕೆ ಸಿಕ್ಕ ತಾಯಿ ಮಗನಿಗೆ ಗ್ರೈಂಡರ್ ಕಲ್ಲಿನಿಂದ ಹೊಡೆದು ಕೊಂದು ಆ ತಲೆಯನ್ನು ಜಜ್ಜಿ ತುಪ್ಪ, ಉಪ್ಪು ಖಾರ ಹಾಕಿ ಬೇಯಿಸಿ ಉಳಿದ ದೇಹವನ್ನು ಮನೆಯ ಮೂಲೆಯಲ್ಲಿ ಟವಲ್‌ನಲ್ಲಿ ಸುತ್ತಿಡುತ್ತಾಳೆ.

ತುಂಬಾ ದಿನಗಳ ನಂತರ ಮಗ ಕಾಣುತ್ತಿಲ್ಲ ಎಂಬ ಸುದ್ದಿ ತಿಳಿದು ತಂದೆ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ನಡೆದ ಕೊಲೆ ವಿಚಾರ ತಿಳಿದಿದೆ. ತಕ್ಷಣ ತಾಯಿ ಮತ್ತು ತಮ್ಮ ವಿಧುರನನ್ನು ಪೊಲೀಸರು ಕರೆದೊಯ್ದಿದ್ದಾರೆ.

ಎಂಥ ತಾಯಿ? ಎನ್ನುವ ಹಾಗಾಗುತ್ತದೆ. ಬಹುಶಃ ತಾಯಿ ಮಾನಸಿಕ ಒತ್ತಡ ಸಹಿಸದೆ ಜೀವನದಲ್ಲಿನ ಹತಾಶೆ ತಾಳಲಾರದೆ ಹೀಗೆ ಮಾಡಿರಬಹುದು. ಆ ತಪ್ಪನ್ನು ಮುಚ್ಚಲು ತಲೆಯನ್ನು ವಾಸನೆ ಬರುತ್ತದೆ ಎಂದು ಬೇಯಿಸಿದ್ದಾಳೆ. ತಪ್ಪಿಗೆ ಪ್ರತಿ ತಪ್ಪು, ಸುಳ್ಳಿಗೆ ಪ್ರತಿ ಸುಳ್ಳು, ಅಪರಾಧಕ್ಕೆ ಪ್ರತಿ ಅಪರಾಧಗಳು ಇಲ್ಲಿ ಆಗಿವೆ. ಇದಕ್ಕೆ ಹೊಣೆ ಹೊರಬೇಕಾಗಿರುವುದು ಆ ತಾಯಿಯೇ? ಕೋಪಕ್ಕೆ ಬುದ್ಧಿ ಕೊಟ್ಟರೆ ಆಗುವ ಅನಾಹುತ ಇದು, ಬಡತನ ಇರಬಹುದು, ಗಂಡನಿಂದ ಪ್ರತ್ಯೇಕವಾದ ಪರಿತ್ಯಕ್ತ ಮನೋಭಾವ.

ಸಾಮಾಜಿಕ ನಿಂದನೆಗಳು, ಅಪಮಾನ ಗಳು ಇಲ್ಲಿ ಕಾರಣವಾಗಿರಬಹುದು. ಆದರೆ ಕಟ್ಟಕಡೆಯದಾಗಿ ಆಕೆಯನ್ನು ಅಪರಾಧಿ ಯನ್ನಾಗಿ ಕಾನೂನು ನೋಡುತ್ತದೆ. ಅದಕ್ಕೆ ಸಾಕ್ಷಿಗಳಿವೆ. ಆದರೆ ಆಕೆಯ ತಲ್ಲಣಗಳು, ಸಂವೇದನೆಗಳು ಇಲ್ಲಿ ಗೌಣವಾಗುತ್ತವೆ. ಈ ರೀತಿ ಕೈ ಮೀರುವ ಪರಿಸ್ಥಿತಿ ಮತ್ತೆ ಮತ್ತೆ ನೋಡುವಂಥಾಗಿದೆ. ಕರೋನಾ ಕಾಲದ ವೈರುಧ್ಯಗಳಲ್ಲಿ ಇದೂ ಒಂದು. ಸರಕಾರ ಎನ್‌ಜಿಒಗಳು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

ಈ ರೀತಿಯ ಅಪಸವ್ಯಗಳಲ್ಲಿ ಕಳೆದು ಹೋಗುವ ಮೊದಲಿಗೆ ಇನ್ನೊಂದು ಘಟನೆಯನ್ನು ಹೇಳುತ್ತೇನೆ. ಡಿಸೆಂಬರ್ 15ರ ಸುದ್ದಿ ಬೇಸರದ ಸಂಗತಿ ತನ್ನ 14 ವಾರದ ಭ್ರೂಣದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಹಂಚಿ ಕೊಳ್ಳುತ್ತಾರೆ.

ವೈಯಕ್ತಿಕ ವಿಚಾರದಿಂದ ಹಿಡಿದು ತಮ್ಮ ಯಶಸ್ಸಿನ ತನಕ ಪ್ರತಿಯೊಂದು ವಿಚಾರಗಳನ್ನು ಹಂಚುವ ಈ ಕಾಲದಲ್ಲಿ ತಾನು ಕಳೆದುಕೊಂಡ 14 ವಾರದ ನಿರ್ಜೀವ ಭ್ರೂಣದ ಚಿತ್ರ ಹಂಚಿಕೊಂಡಿದ್ದು ಕ್ರಿಸ್ಟಿಯಾನ ಶಾರ್ನಾನ್. ಈಕೆಗೆ ಗರ್ಭಪಾತ ವಾಗುತ್ತದೆ. ಅದನ್ನು ಕಸ ಎಂದು ಆಸ್ಪತ್ರೆ ಮತ್ತು ಸರಕಾರ ಪರಿಗಣಿಸುತ್ತದೆ. ಆದರೆ ಮಹಿಳೆ ತನ್ನ ಭ್ರೂಣವನ್ನು ಎಸೆಯಲು ನಿರಾಕರಿಸುತ್ತಾಳೆ. ಅಮೆರಿಕಾ ಆ ಭ್ರೂಣದ ಕಾನೂನುಬದ್ಧ ಧಫನಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಕಾರಣ 20 ವಾರಗಳ ಬಳಿಕವೇ ಅದು ಕಾನೂನುಬದ್ಧ ಭ್ರೂಣವಾಗುತ್ತದೆ ಎಂದು. ಶಾರ್ನಾನ್ ಮತ್ತು ಆಕೆಯ ಪತಿ ಮೈಕೆಲ್ ನಿರ್ಜೀವ ಭ್ರೂಣವನ್ನು ಒಂದು ವಾರಗಳವರೆಗೆ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ಬಳಿಕ ಅವರು ತಮ್ಮ ಮನೆಯ ಕೈತೋಟದ ಹೂವಿನ ಕುಂಡದಲ್ಲಿ ದಫನ ಮಾಡಿದರು. ಪ್ರತಿ ವರ್ಷವೂ ಇದು ಬೆಳೆಯುತ್ತಾ ಹೋದಂತೆ ಮಗುವಿನ ನೆನಪು ಮರುಕಳಿಸುವುದು ಎಂಬುದು ಇವರ ಅನಿಸಿಕೆ. ಇಲ್ಲಿ ಪೋಷಕತ್ವದ ಜವಾಬ್ದಾರಿ ನಿಜ ಅರ್ಥದಲ್ಲಿ ಅನಾವರಣ ಆಗಿದೆ.

ಎಲ್ಲವೂ ಡಿಜಿಟಲ್ ಎಂದು ಹೇಳುವ ಕಾಲದಲ್ಲಿ ಮಕ್ಕಳ ಮಮಕಾರದ ಸಿಂಚನ ಈ ಘಟನೆಯಿಂದ ಆಗಿದೆ ಅಲ್ವೆ! ಒತ್ತಡದ ಬದುಕು, ಆಧುನಿಕ ಜೀವನ ಶೈಲಿ, ಆರೋಗ್ಯದ ಕಾರಣ ದೈಹಿಕ ಕ್ಷಮತೆ ಮೊದಲಾದ ಕಾರಣದಿಂದ ಮಕ್ಕಳನ್ನು ಪಡೆಯಲಾಗದ ಪೋಷಕ ವರ್ಗವೊಂದು ಮಕ್ಕಳಿಗಾಗಿ ಹಂಬಲಿಸುತ್ತಿದ್ದರೆ ಮಕ್ಕಳಿರುವ ಪೋಷಕರು ನಾನಾಕಾರಣಗಳಿಂದ ಏನೂ ಮಾಡಲಾಗದೆ ಮಕ್ಕಳನ್ನೇ ಕಳೆದುಕೊಳ್ಳುತ್ತಿದ್ಧಾರೆ.

ಇವರೆಡೂ ಅಪಾಯವೆ. ಕೆ.ಎಸ್. ನರಸಿಂಹಸ್ವಾಮಿಯವರು ‘ತುಂಗಭದ್ರೆ’ ಕವಿತೆಯಲ್ಲಿ ಮಗುವನ್ನು ಪ್ರೀತಿಯ ಪ್ರತಿಮೆಯನ್ನಾ ಗಿಸಿಕೊಂಡರೆ ಚೆನ್ನವೀರಕಣವಿಯವರು ‘ದೀಪಧಾರಿ’ ಕವಿತೆಯಲ್ಲಿ ಮಗುವನ್ನು ಮನೆಯ ಅಧ್ಯಕ್ಷ ಎನ್ನುತ್ತಾರೆ. ಜಾನಪದ ದಲ್ಲಂತೂ ಕೂಸು ಕಂದಯ್ಯ ಒಳಹೊರಗ ಆಡಿದರೆ ತಂಗಾಳಿ ಸುಳಿದಾವ ಎಂದು ನೆಮ್ಮದಿಯ ಸಂಕೇತವಾದ ತಂಗಾಳಿಗೆ ಹೋಲಿಸುತ್ತಾರೆ.

ಮಕ್ಕಳಿರ ಲವ್ವ ಮನೆ ತುಂಬ ಮನ ತುಂಬ ಎಂಬ ಮಾತು ಇದ್ದೇ ಇದೆ. ಆದರೆ 12ನೆ ಡಿಸೆಂಬರ್ ತಿಂಗಳ ಘಟನೆ ತಂದೆ ತಾಯಿ ಯರ ಮಮಕಾರ ಪರಿಸ್ಥಿತಿಯ ಒತ್ತಡದಿಂದ ಮರೆಯಾಗುತ್ತಿದೆಯೆನೋ ಎಂಬ ಸಂಕಟ ತರಿಸಿ ಮನಸ್ಸಿಗೆ ಬೇಸರ ತರಿಸುತ್ತದೆ.