Wednesday, 9th October 2024

ಮೋಷನ್ ಪಿಕ್ಚರ‍್ ಅಂದ್ರೇನು ?

ತುಂಟರಗಾಳಿ

ಸಿನಿಗನ್ನಡ

ಇತ್ತೀಚಿನ ದಿನಗಳಲ್ಲಿ ಓಟಿಟಿಗಳಲ್ಲಿ ಜನ ತಮ್ಮ ಸಿನಿಮಾ ಬಿಡುಗಡೆ ಮಾಡೋಕೆ ಸಿನಿಮಾ ಮಂದಿ ಕಾಯ್ತಾ ಇರ್ತಾರೆ ಅನ್ನೋದು ಎಲ್ಲರಿಗೂ
ಗೊತ್ತು. ಅದೇ ರೀತಿಯಲ್ಲಿ ದೇಶಾದ್ಯಂತ ವಿವಾದ ಸೃಷ್ಟಿ ಮಾಡಿದ್ದ ಕೇರಳ ಸ್ಟೋರಿ ಸಿನಿಮಾವನ್ನೂ ಓಟಿಟಿಯಲ್ಲಿ ಮಾರಲು ಚಿತ್ರತಂಡ ತುದಿಗಾಲಿನಲ್ಲಿ ನಿಂತಿತ್ತು. ಆದರೆ ಅವರಿಗೆ ಈಗ ನಿರಾಸೆ ಆಗಿದೆ.

ಯಾಕಂದ್ರೆ ಸದ್ಯಕ್ಕೆ ಯಾವ ಓಟಿಟಿಯೂ ಈ ಚಿತ್ರ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲವಂತೆ. ನಮಗೆ ಪೊಲಿಟಿಕಲ್ ಅಜೆಂಡಾ ಇರೋ ಸಿನಿಮಾಗಳು ಬೇಡ. ನಾವು ಆ ರೀತಿಯಲ್ಲಿ ಬ್ರ್ಯಾಂಡ್ ಆಗೋ ದಕ್ಕೆ ಇಷ್ಟ ಪಡೋದಿಲ್ಲ ಅಂತ ಕೆಲವು ಓಟಿಟಿಗಳು ನೇರವಾಗಿ ಹೇಳಿವೆಯಂತೆ. ನಮ್ಮ
ಭಾವನೆಗಳಿಗೆ ಧಕ್ಕೆ ಬಂದಿದೆ ಅಂತ ಸಿನಿಮಾಗಳಿಗೆ ಕೊಕ್ಕೆ ಹಾಕುವ, ಬಾಯ್ಕಾಟ್ ಮಾಡುವ ಮನಸ್ಥಿತಿಯ ಪ್ರೇಕ್ಷಕರನ್ನು ನೋಡಿದ ಮೇಲೆ ಈಗ ಕೇರಳ ಸ್ಟೋರಿ ಚಿತ್ರವನ್ನು ಓಟಿಟಿಗಳು ಅನಧಿ ಕೃತವಾಗಿ ಬಾಯ್ಕಾಟ್ ಮಾಡುತ್ತಿರುವ ಸುದ್ದಿ ಇದು. ಇದಕ್ಕೆ ಕಾರಣ ರಾಜಕೀಯ ಅಂತ ಎಲ್ಲರಿಗೂ ಗೊತ್ತು. ಚಿತ್ರರಂಗದಲ್ಲಿ ಪೊಲಿಟಿಕಲ್ ಸಿನಿಮಾಗಳು ಬರೋದು ಕಾಮನ್. ಆದರೆ ಸಿನಿಮಾಗಳಿಗೇ ಪೊಲಿಟಿಕಲ್ ಆಂಗಲ್ ಬರ್ತಾ ಇರೋದು ಇತ್ತೀಚಿನ ಬೆಳವಣಿಗೆ.

ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡುವ ಮಂದಿ ಈಗ ಏನಾದರೂ ಮಾಡು, ಮೊದಲು ಸಿನಿಮಾನ ಸಿನಿಮಾ ಥರ ನೋಡು ಅಂತ ಹೇಳುತ್ತಿದ್ದಾರೆ. ಸರಿಯೋ ತಪ್ಪೋ, ಸಿನಿಮಾ ಅನ್ನೋದು ನಿರ್ದೇಶಕರ ಸ್ವಾತಂತ್ರ್ಯ, ಅವರಿಗೆ ಇಷ್ಟ ಆಗಿದ್ದನ್ನು ಅವರು ಮಾಡ್ತಾರೆ. ಆದರೆ ತಗೊಳ್ಳೋದು ಬಿಡೋದು ನಮ್ಮಿಷ್ಟ ಅಂತ ಜನ ಹೇಳಬಹುದು. ಆದರೆ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕ ಸಿನಿಮಾವನ್ನ ಚೆನ್ನಾಗಿ ತಗೊಂಡ ಅಂದಮಾತ್ರಕ್ಕೆ ನಾವೂ ತಗೊಳ್ಳಬೇಕು ಅಂತೇನಿಲ್ಲವಲ್ಲ ಅನ್ನೋದು ಓಟಿಟಿಗಳ ವಾದ ಇರಬಹುದು.

ಹಾಗಾಗಿ, ಎಲ್ಲ ವರ್ಗಗಳಿಗೂ ಅಲ್ಲದಿದ್ದರೂ ಕೆಲವು ವರ್ಗದ ಜನರಿಗೆ, ಕೆಲವು ರಾಜಕೀಯ ಪಂಗಡಗಳಿಗೆ ಇಷ್ಟ ಆಗಿದ್ದ ಕೇರಳ ಸ್ಟೋರಿ ಓಟಿಟಿಗಳ
ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸದ್ಯಕ್ಕಂತೂ ಇದುವರೆಗೂ ನಮಗೆ ಒಳ್ಳೆಯ ಆಫರ್ ಬಂದಿಲ್ಲ ಅಂತ ಚಿತ್ರದ ನಿರ್ದೇಶಕ ಹೇಳಿzರೆ. ಮುಂದೆ ಏನಾಗುತ್ತೋ ಗೊತ್ತಿಲ್ಲ.

ಲೂಸ್ ಟಾಕ್
ನಳಿನ್ ಕುಮಾರ್ ಕಟೀಲು (ಕಾಲ್ಪನಿಕ ಸಂದರ್ಶನ)
ಏನ್ ಕಟೀಲು ಸಾರ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ರಂತೆ
-ಇನ್ನೇನ್ ಮಾಡೋದು, ನಮ್ಮ ಪಾರ್ಟಿನೇ ಎಲೆಕ್ಷನ್ನಲ್ಲಿ ಎಡವಿಬಿದ್ದ ಮೇಲೆ ಅಧ್ಯಕ್ಷ ಸ್ಥಾನದಲ್ಲಿ ಇದ್ಕೊಂಡು ಏನ್ ಪಿಟೀಲು ಕೊಯ್ಲಾ?

ಅದೂ ಸರಿನೇ, ಸೋಲಿಗೆ ನಾನೇ ಜವಾಬ್ದಾರಿ ಅಂತ ಹೊಣೆ ಹೊತ್ತುಕೊಂಡು ರಾಜೀನಾಮೆ ಕೊಟ್ಟಿದ್ದೀರಂತೆ?
-ಅಯ್ಯೋ, ಹೊಣೆ ಹೊತ್ಕೊಳ್ಳೋಕೆ ಏನ್ ಹಣ ಖರ್ಚಾಗುತ್ತಾ. ಹೇಳೋಕೇನ್ ಕಷ್ಟ

ಅಲ್ವಾ..ಓಕೆ, ಆದ್ರೆ ನಿಮ್ಮ ನಿರ್ಧಾರ ಕೇಳಿ ನಮ್ಮ ಜನ ತುಂಬಾ ಬೇಜಾರ್ ಮಾಡ್ಕೊಂಡಿದ್ದಾರಂತೆ, ನಮಗೆ ಇನ್ಮೇಲೆ ಕಾಮಿಡಿ ಕಮ್ಮಿ ಆಗುತ್ತೆ ಅಂತ
-ಅಯ್ಯೋ ಸುಮ್ನಿರಿ. ಅವೆಲ್ಲ ತಪ್ಪು ಕಲ್ಪನೆ. ಅಧ್ಯಕ್ಷ ಸ್ಥಾನದಲ್ಲಿ ಇದ್ಕೊಂಡೇ ಕಾಮಿಡಿ ಮಾಡಿದೋನು, ಈಗ ಖಾಲಿ ಕೂತಿರುವಾಗ ಬಿಡ್ತೀನಾ?

ಅಂದಂಗೆ ಕಾಂಗ್ರೆಸ್ ಫ್ರೀ ಭಾಗ್ಯ ಕೊಟ್ಟು ಅದಿಕಾರಕ್ಕೆ ಬಂತು, ಮುಂದಿನ ಚುನಾವಣೆಯಲ್ಲಿ ನೀವು ಆ ಥರ ಏನಾದ್ರೂ ಪ್ಲ್ಯಾನ್ ಮಾಡಿದ್ದೀರಾ?
-ಖಂಡಿತಾ ಮಾಡಿದ್ದೀವಿ. ಎಲ್ಲ ಮಹಿಳೆಯರಿಗೂ ಸ್ಟೇಫ್ರೀ ಕೊಡೋಣ ಅಂತಿದ್ದೀವಿ.

ಸರಿಹೋಯ್ತು. ಅದಿರ್ಲಿ ಈಗ ಸದ್ಯಕ್ಕೆ ನಿಮ್ಮ ಮುಂದಿನ ನಡೆ ಏನು?
-ಏನಿಲ್ಲ ಕಟೀಲು ದುರ್ಗಾ ಪರಮೇಶ್ವರಿಗೆ ಅಪೀಲು ಮಾಡಿದ್ದೀನಿ, ಮುಂದಿನ ರಾಜ್ಯಾಧ್ಯಕ್ಷರಾಗಿ ನನ್ನನ್ನೇ ನೇಮಕ ಮಾಡ್ಸಮ್ಮ ಅಂತ.

ನೆಟ್ ಪಿಕ್ಸ್

ಖೇಮುನ ಮಾವ ಪುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್‌ಗಳೂ ಅವರು ಬದುಕೋ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ರು. ಅಲ್ಲದೆ, ಪೇಷೆಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾಕ್ಟರ್ ಕೂಡ ಆಪರೇಷನ್ ಮಾಡಲು ಮುಂದೆ ಬರಲಿಲ್ಲ. ಅಳಿಯ ಖೇಮು ಕೂಡ ಸ್ವತಃ ಡಾಕ್ಟರ್ ಆಗಿದ್ದ. ಹಾಗಾಗಿ ಖೇಮು ಆಗಿzಗ್ಲಿ ಒಂದ್ ಕೈ ನೋಡೇ ಬಿಡೋಣ ಅಂತ ಆಪರೇಷನ್ ಮಾಡಲು ತಯಾರಾದ. ಆಪರೇಷನ್‌ಗೆ ಮುಂಚೆ ಮಂಚದ ಮೇಲೆ ಮಲಗಿದ್ದ ಖೇಮು ಮಾವ ಆಪರೇಷನ್ ಛೇಂಬರ್‌ಗೆ ಬಂದ ಖೇಮುವನ್ನು
ನೋಡಿ ಸನ್ನೆ ಮಾಡಿ ನಿನ್ನ ಬಳಿ ಏನೋ ಹೇಳಬೇಕು ಹತ್ತಿರ ಬಾ ಅಂತ ಕರೆದ್ರು, ಖೇಮು ಹೋದ.

ಖೇಮುನ ಕಿವಿಯಲ್ಲಿ ಅವನ ಮಾವ ಏನೋ ಹೇಳದ್ರು. ಸರಿ ಆಪರೇಷನ್ ಶುರುವಾಯ್ತು, ಸತತ ನಾಲ್ಕು ತಾನು ಆಪರೇಷನ್ ನಡೆಯಿತು. ಏನೇ
ಆದ್ರೂ ರೋಗಿ ಬದುಕೊಲ್ಲ ಅಂದಿದ್ದ ಡಾಕ್ಟಗಳಿಗೆ ಅಚ್ಚರಿ ಎಂಬಂತೆ ಆಪರೇಷನ್ ಸಕ್ಸಸ್ ಫಲ, ಇದೊಂದು ವೈದ್ಯಲೋಕದ ವಿಸ್ಮಯ ಎಂದರು ಅವರೆಲ್ಲ. ಎಲ್ಲರೂ ನಿರಾಳವಾಗಿ ಆಪರೇಷನ್ ಕೋಣೆಯಿಂದ ಹೊರಬಂದ ಖೇಮುವನ್ನು ’ಇದೆ ಹೇಗಾಯ್ತು. ನಿಮ್ಮ ಮಾವ ಆಪರೇಷನ್‌ಗೆ ಮುಂಚೆ ನಿಮ್ಮ ಕಿವಿಯಲ್ಲಿ ಏನೋ ಹೇಳಿದ್ರಂತೆ, ಏನು ಹೇಳಿದ್ರು’ ಅಂತ ಕೇಳಿದ್ರು ಆಸ್ಪತ್ರೆಯ ಸೀನಿಯರ್, ಡಾಕ್ಟರ್ಸ್, ಅದಕ್ಕೆ ಖೇಮು ಹೇಳಿದ ‘ಮಾವ ಹೇಳಿದ್ದು ಇಷ್ಟೆ,

ನೋಡಪ್ಪ ಅಳಿಮಯ್ಯ, ನಾನು ನಿಮ್ಮ ಮಾವ ಅಂತ ನರ್ವಸ್ ಆಗ್ ಬೇಡ. ಧೈರ್ಯವಾಗಿ ನನ್ ಕೆಲಸ ನೀನು ಮಾಡು, ಉಳಿದಿದ್ದು ದೇವರಿಗೆ ಬಿಟ್ಟಿದ್ದು, ಆದ್ರೆ ಒಂದ್ ಮಾತ್ ನೆನಪಿಟ್ಟೋ, ನಿಮ್ಮತ್ತೆಗೆ ನನ್ನ ಬಿಟ್ರೆ ಯಾರೂ ಇಲ್ಲ ನಾನು ಹೆಚ್ಚುಕಮ್ಮಿ ಆಗಿ ಸತ್ತು ಹೋದ್ರೆ, ಅವಳು ನಿಮ್ಮ ಮನೆಯ ಒಂದು ಇರ್ತಾಳೆ, ಅವಳನ್ನ ಚೆನ್ನಾಗಿ ನೋಡ್ಕೊಳಪ್ಪಾ’,

ಲೈನ್ ಮ್ಯಾನ್
ಜಾಪಾಳ ಮಾತ್ರೆ ಹಾಕಿ ಟಾಯ್ಲೆಟ್‌ಗೆ ಕಳಿಸೋದನ್ನೇ ಕಾಮಿಡಿ ಚಿತ್ರಗಳನ್ನು ಏನಂತಾರೆ?
-‘ಮೋಷನ್’ ಪಿಕ್ಚರ್
ಅಮೆರಿಕಾದ ಅಧ್ಯಕ್ಷ ಬಿಡೆನ್ ಅರ ಪತ್ನಿಯ ಕೈ ಹಿಡಿದು ನರೇಂದ್ರ ಮೋದಿ ಹೇಳಿದ್ದೇನು?
-‘ಬಿಡೆನು’ ನಿನ್ನ ಕೈಯಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಳೆ ಬರಲ್ಲವಂತೆ ಯಾಕೆ?
-‘ಮಳೆ ಬಂದ್ರೆ ಆ ಕೆಸರಿನಲ್ಲಿ ಕಮಲ’ ಅರಳಿಬಿಡುತ್ತೆ, ಅದಕ್ಕೇ.

ದೇವೇಗೌಡ್ರು ಯೋಗ ದಿನಾಚರಣೆ ಮಾಡಿದರೆ ಅವರು
-‘ಆಸನ’ದ ಗೌಡ್ರು
ದೀಪಾವಳಿ ವಿಶೇಷ
ಲೈಫಲ್ಲಿ ಯಾರು, ಯಾವಾಗ, ಹೆಂಗ್ ಬತ್ತಿ ಇಡ್ತಾರೆ ಅಂತ ಬೇಕಾದ್ರೂ ಗೆಸ್ ಮಾಡ್ಬೋದು, ಆದ್ರೆ, ರೋಡಲ್ಲಿ ಯಾರು, ಎಲ್ಲಿ ಪಟಾಕಿ ಇಟ್ಟಿರ್ತಾರೆ ಅಂತ ಗೆಸ್ ಮಾಡೋದ್ ಕಷ್ಟ
ಪೊಲಿಟಿಕಲ್ ಡೌಟ್
ದೇಶದ ೧೩೦ ಕೋಟಿ ಜನರ ಪರವಾಗಿ ಕೇಳ್ತಾ ಇದ್ದೀನಿ ಅಂತ ಮಾತಾಡ್ತಾರಲ್ಲ, ಇವ್ರಿಗೆಲ್ಲ ನಮ್ಮನ್ನು ಕೇಳದೇ, ನಮ್ಮ ಪರವಾಗಿ ಮಾತಾಡೋ ಅಽಕಾರ ಕೊಟ್ಟೋರು ಯಾರು?
ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸೋ ನಟ
-ಚತುರ್ಭಾಷಾ ನಟ
ನಾಲ್ಕು ಜನ ಮೆಚ್ಚುವಂಥ ಕನ್ನಡ ಮಾತಾಡೋ ನಟ ಸುಚೇಂದ್ರ ಪ್ರಸಾದ್
-ಚತುರ ಭಾಷಾ ನಟ
ಒಂದೇ ಘಟನೆಯನ್ನು ಮತ್ತೆ ಮತ್ತೆ ತೋರಿಸಿ ಕಿರಿಕಿರಿ ಮಾಡುವ ಟಿವಿ ಚಾನೆಲ್ ಗಳ ವರದಿ
-ಘಟ’ನಾವಳಿ’
ವೆಯ್ಟ್ ಲಿಫ್ಟರ್ ಅಂದ್ರೇನು?
-ತೂಕ ಹೆಚ್ಚಿಸಿಕೊಳ್ಳುವವನು