ರೇಷ್ಮೆ ಹುಳದಿಂದ ನಾವು ಕಲಿಯಬೇಕಾದ ಜೀವನ ಪಾಠ!
- ರಾಜೇಂದ್ರ ಭಟ್ ಕೆ.
ಸ್ಫೂರ್ತಿಪಥ ಅಂಕಣ: ನನ್ನ ಯುವ ಗೆಳೆಯನೊಬ್ಬ ನನ್ನ ಬಳಿ ಬಂದು ನನಗೆ ನಿಮ್ಮ ಸಲಹೆ (Motivation) ಬೇಕು ಎಂದ. ಯಾವುದರ ಬಗ್ಗೆ? ಎಂದು ಕೇಳಿದೆ.
ಅವನು ನನ್ನ ಕೆರಿಯರ್ (Career) ಕಟ್ಟುವ ಬಗ್ಗೆ ಗೊಂದಲ ಇದೆ. ನೀವೇ ಪರಿಹಾರ ಮಾಡಬೇಕು ಅಂದ. ಏನು ಗೊಂದಲ? ಎಂದು ಕೇಳಿದೆ. ಅವನು ತನ್ನ ಕತೆಯನ್ನು ಹೇಳುತ್ತಾ ಹೋದ.
ಸರ್, ನಾನು MBA ಮಾಡಿದ್ದೇನೆ. ಒಳ್ಳೆ ಮಾರ್ಕ್ಸು ಇದೆ. ನನಗೆ ಹಲವು ಕಂಪೆನಿಗಳ ಆಫರ್ ಇದೆ. ಒಳ್ಳೆ ಪ್ಯಾಕೆಜ್ ಕೂಡ ಇದೆ. ಆದರೆ ನನ್ನ ಅಪ್ಪ ಯಾವ ಕಂಪೆನಿ ಜಾಬ್ ಮಾಡುವುದು ಬೇಡ, ನಮ್ಮ ಬಿಸಿನೆಸ್ ನೋಡಿಕೊಂಡರೆ ಸಾಕು. ನಮಗೆ ಆನುವಂಶೀಯವಾಗಿ ಬಂದಿರುವ ವ್ಯಾಪಾರ ಇದೆ. ಅದನ್ನು ನೋಡಿಕೋ ಸಾಕು ಎನ್ನುತ್ತಾರೆ. ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಅಂದನು.
ನಾನು ಅವನನ್ನು ನನ್ನ ಮುಂದೆ ಕೂರಿಸಿ ಅವನಿಗೆ ರೇಷ್ಮೆ ಹುಳದ ಕತೆಯನ್ನು ಹೇಳುತ್ತಾ ಹೋದೆ.
ರೇಷ್ಮೆ ಹುಳವು ಕಲಿಸುವ ಜೀವನ ಪಾಠ
ಒಂದು ರೇಷ್ಮೆ ಹುಳವು ತನ್ನ ಇಡೀ ಜೀವನದಲ್ಲಿ ಹಿಪ್ಪು ನೇರಳೆ ಸೊಪ್ಪು ತಿಂದು ಕೊಬ್ಬುತ್ತ ಹೋಗುತ್ತದೆ. ಒಮ್ಮೆ ಗರಿಷ್ಠ ಗಾತ್ರ ತಲುಪಿದ ನಂತರ ಇನ್ನು ತಿನ್ನುವುದು ಸಾಕು ಎಂದು ನಿರ್ಧಾರ ಮಾಡುತ್ತದೆ.
ಆಗ ತನ್ನ ದೇಹದಿಂದ ಹೊರಬರುವ ಒಂದು ನೂಲಿನಿಂದ ಒಂದು ಸುಂದರವಾದ ಗೂಡನ್ನು ತನ್ನ ಸುತ್ತಲೂ ನೇಯಲು ಆರಂಭ ಮಾಡುತ್ತದೆ. ಗೂಡು ಪೂರ್ತಿ ಆದ ನಂತರ ಆ ಗೂಡಿನ ಒಳಗೆ ಕೂತು ಮೈಯನ್ನು ಮಡಚಿ ಸುಂದರವಾದ ಕನಸು ಕಾಣುತ್ತದೆ. ಅದು ಕಂಫರ್ಟ್ ಝೋನ್.
ಆ ರೇಷ್ಮೆ ಹುಳದ ಹತ್ತಿರ ಈಗ ಎರಡು ಆಯ್ಕೆಗಳು ಇವೆ. ಒಂದು ಅದೇ ಗೂಡಿನ ಒಳಗೆ ಉಸಿರು ಕಟ್ಟಿಕೊಂಡು ಕನಸು ಕಾಣುತ್ತಾ ಇರುವುದು. ಆಗ ಆ ಕೋಶವನ್ನು ಬಿಸಿ ನೀರಿಗೆ ಹಾಕಿ ಹುಳವನ್ನು ಸಾಯಿಸುತ್ತಾರೆ. ಆ ನೂಲಿನಿಂದ ರೇಷ್ಮೆ ಸೀರೆ ನೇಯುತ್ತಾರೆ. ಆ ಸೀರೆ ಪಡೆಯಬೇಕಾದರೆ ಹುಳವು ಸಾಯಲೇ ಬೇಕು! ಇದು ಒಂದು ಆಯ್ಕೆ.
ಎರಡನೇ ಆಯ್ಕೆ ಎಂದರೆ ಆ ಗೂಡನ್ನು ಒಡೆದು ಹುಳವು ಹೊರಬರುವುದು. ಆ ಶಕ್ತಿಯು ಖಂಡಿತವಾಗಿ ರೇಷ್ಮೆ ಹುಳಕ್ಕೆ ಇದೆ. ಹೊರಬರುವಾಗ ಅದು ಹುಳ ಆಗಿರುವುದಿಲ್ಲ. ಅದು ಸುಂದರವಾದ ಬಣ್ಣ ಬಣ್ಣದ ರೇಷ್ಮೆ ಚಿಟ್ಟೆ ಆಗಿರುತ್ತದೆ. ಇದು ಎರಡನೇ ಆಯ್ಕೆ ಎಂದೆ.
ಉದಾಹರಣೆಯನ್ನು ಮುಗಿಸಿ ನಾನವನಿಗೆ ಕೇಳಿದೆ – ನಿನ್ನ ಆಯ್ಕೆ ಯಾವುದು?
ಅವನು ಹೇಳಿದ ನನ್ನ ಆಯ್ಕೆ ಎರಡನೆಯದು ಎಂದು!
ಕಂಫರ್ಟ್ ವಲಯದಿಂದ ಹೊರಬನ್ನಿ
ಈಗ ನಾನು ಹೇಳುತ್ತಾ ಹೋದೆ – ನನ್ನ ಪ್ರೀತಿಯ ಹುಡುಗಾ, ನಿನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ನಿನ್ನ ಕಂಫರ್ಟ್ ವಲಯದಿಂದ ಹೊರಬರಬೇಕು. ಈಗ ನಿನ್ನ ಅಪ್ಪನ ಬಿಸಿನೆಸ್ ಅದು ಕಂಫರ್ಟ್ ಝೋನ್. ರಿಸ್ಕ್ ಕಡಿಮೆ. ನೀನು ಸುಮ್ಮನೆ ಕೂತರೂ ಬಿಸಿನೆಸ್ ರನ್ ಆಗುತ್ತದೆ. ನೀನು ಹೆಚ್ಚೆಂದರೆ ಇನ್ನೊಂದೆರಡು ಮಳಿಗೆ ಜೋಡಿಸಿ ಅದನ್ನು ವಿಸ್ತರಿಸಬಹುದು. ಆದರೆ ಅದು ಅಪ್ಪ ಮಾಡಿದ್ದು. ಅದು ನಿನ್ನ ಸಾಧನೆ ಆಗುವುದಿಲ್ಲ!
ಇನ್ನು ನಿನ್ನ ಎರಡನೇ ಆಯ್ಕೆ ಕಂಪೆನಿಯ ಜಾಬ್. ಅದು ಇನ್ನೊಂದು ಕಂಫರ್ಟ್ ಝೋನ್! ಏಕೆಂದರೆ ಯಾರದ್ದೋ ಕನಸನ್ನು ಪೂರ್ತಿ ಮಾಡಲು ಜೀವನ ಪೂರ್ತಿ ನೀನು ಮಾಡುವ ಜೀತ ಅದು! ಮುಂದೆ ನಿನ್ನ ಕನಸು ಖಾಲಿ ಮಾಡಿಕೊಳ್ಳುತ್ತೀ! ನಿನಗೆ ನಿನ್ನ ಯೋಚನೆಗಳನ್ನು ಅಲ್ಲಿ ಅನುಷ್ಠಾನ ಮಾಡಲು ಸ್ವಾತಂತ್ರ್ಯ ಇದೆಯಾ? ಖಂಡಿತ ಇಲ್ಲ. ಯಾವುದೋ ಕಂಪೆನಿಯ ಲಾಪ್ ಟಾಪ್ ಮುಂದೆ ಕೂತು ನೀನು ಸಾಧಿಸುವುದು ಏನು? ಎಂದು ಕೇಳಿದೆ. ಅವನು ನನ್ನ ಮುಖ ನೋಡುತ್ತ ಕೂತ.
ಅವನಿಗೆ ಅರ್ಥ ಆಗಲು ಇನ್ನೂ ಎರಡು ಪ್ರಶ್ನೆ ಕೇಳಿದೆ.
ನಿಮ್ಮ ಅಜ್ಜ ಈ ಬಿಸಿನೆಸ್ ಆರಂಭ ಮಾಡಿದಾಗ ಎಷ್ಟು ಮಂದಿಗೆ ಕೆಲಸ ಕೊಟ್ಟಿದ್ದರು? ಅವನೊಂದು ಸಂಖ್ಯೆ ಹೇಳಿದ. ಅವರು ಎಷ್ಟು ಬಂಡವಾಳ ಹಾಕಿದ್ದರು ಎಂದು ಕೇಳಿದೆ? ಅದನ್ನು ಕೂಡ ಹೇಳಿದ.
ನಿಮ್ಮ ಅಜ್ಜನ ನಂತರ ನಿಮ್ಮ ಅಪ್ಪ ಎಷ್ಟು ಮಂದಿಗೆ ಕೆಲಸ ಕೊಟ್ಟರು ಅಂದೆ. ಎಷ್ಟು ಬಂಡವಾಳ ಹಾಕಿದ್ದರು ಎಂದೆ. ಅವನು ಎರಡೂ ಪ್ರಶ್ನೆಗೂ ಇಲ್ಲ ಅಂದ.
ಹಾಗಾದರೆ ನಿನ್ನ ಆಯ್ಕೆ ಯಾವುದು ಎಂದೆ.
ಅವನಿಗೆ ಎಲ್ಲವೂ ಅರ್ಥ ಆಯಿತು
ಅವನು ಬುದ್ದಿವಂತ ಹುಡುಗ. ಅವನಿಗೆ ಈಗ ಎಲ್ಲವೂ ಅರ್ಥ ಆಯಿತು. ಅವನು ಹೇಳುತ್ತಾ ಹೋದ – ಸರ್, ನನ್ನ ಅಜ್ಜ ಸೊನ್ನೆ ಬಂಡವಾಳ ಹಾಕಿಕೊಂಡು ಇಪ್ಪತ್ತು ಮಂದಿಗೆ ಕೆಲಸ ಕೊಟ್ಟು ಒಂದು ಉದ್ಯಮ ಆರಂಭ ಮಾಡಿದ್ದರು. ನನ್ನ ಅಪ್ಪ ನನ್ನ ಅಜ್ಜ ಮಾಡಿದ್ದನ್ನೇ ಬೆಳೆಸಿದರು. ಹೊಸತು ಏನೂ ಮಾಡಲಿಲ್ಲ! ಅದು ಅಜ್ಜನ ಬಿಸಿನೆಸ್. ಅಜ್ಜನ ಕನಸು!
ನಾನು ಕಂಪೆನಿ ಜಾಬ್ ಹಿಡಿದುಕೊಂಡು ನನ್ನ ಕನಸುಗಳನ್ನು ಇನ್ನೊಬ್ಬರಿಗೆ ಮಾರುವುದಿಲ್ಲ. ನನಗೆ ನನ್ನದೇ ಕನಸುಗಳು ಬೇಕು. ಸ್ವಲ್ಪ ರಿಸ್ಕ್ ಇದೆ. ಆದರೆ ರಿಸ್ಕ್ ಈಗ ತೆಗೆದುಕೊಳ್ಳದೆ ಮುಂದೆ ಯಾವಾಗ ತೆಗೆದುಕೊಳ್ಳುವುದು? ನನ್ನ ಅಪ್ಪನ ಬಿಸಿನೆಸ್ ನೋಡಿಕೊಳ್ಳಲು ನನ್ನ ತಮ್ಮ ಇದ್ದಾನೆ. ಆದ್ದರಿಂದ ಅಪ್ಪನಿಗೆ ತೊಂದರೆ ಆಗುವುದಿಲ್ಲ ……ಅವನು ಹೇಳುತ್ತಾ ಹೋದ ಹಾಗೆ ನಾನು ಅವನ ಹೊಳೆಯುತ್ತಿದ್ದ ಕಣ್ಣುಗಳನ್ನೇ ನೋಡುತ್ತಾ ಕೂತೆ.
ಉದ್ಯಮಶೀಲತೆಯ ಮೂಲ ಪಾಠ
ನಾನು ನನ್ನದೇ ಬಂಡವಾಳವನ್ನು ಹೂಡಿಕೆ ಮಾಡಿ ಕನಿಷ್ಠ ಇನ್ನೂರು ಮಂದಿಗೆ ಉದ್ಯೋಗ ನೀಡಬೇಕು ಸರ್. ನನ್ನದೇ ಸಾಮ್ರಾಜ್ಯವನ್ನು ಕಟ್ಟಬೇಕು! ಎಂದು ಹೇಳಿ ಎದ್ದು ನನಗೆ ನಮಸ್ಕಾರ ಮಾಡಿ ಹೊರಟ. ಅವನ ಕಣ್ಣಲ್ಲಿ ಈಗ ಸ್ಪಷ್ಟತೆ ಇತ್ತು.
ಅವನೀಗ ಉದ್ಯಮಶೀಲತೆಯ ತರಬೇತು ಪಡೆದು, ಕೇಂದ್ರ ಸರಕಾರದ ಮುದ್ರಾ ಯೋಜನೆಯ ಲಾಭವನ್ನು ಪಡೆದು ಅವನದೇ ಆದ ಸ್ವಂತ ಉದ್ಯಮವನ್ನು ಆರಂಭಿಸಿದ್ದಾನೆ. ಅವನ ಅಪ್ಪನ ಬಿಸಿನೆಸನ್ನು ಅವನ ತಮ್ಮ ನೋಡಿಕೊಳ್ಳುತ್ತಿದ್ದಾನೆ.
ಆ ಹುಡುಗನಿಗೆ ಒಳ್ಳೆದಾಗಲಿ.
ಇದನ್ನೂ ಓದಿ: Azim Premji: ಸ್ಫೂರ್ತಿಪಥ ಅಂಕಣ: ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು!