Thursday, 19th September 2024

Motivation: ಸ್ಫೂರ್ತಿಪಥ ಅಂಕಣ: ಬೊಮನ್ ಇರಾನಿ ಬದುಕು ಆತನ ಸಿನಿಮಾಗಳಿಗಿಂತ ಹೆಚ್ಚು ರೋಚಕ!

boman irani

ಮುನ್ನಾಭಾಯಿ MBBS, ತ್ರೀ ಈಡಿಯಟ್ಸ್ ಸಿನೆಮಾಗಳ ಎವರ್‌ಗ್ರೀನ್‌ ಕ್ಲಾಸಿಕ್‌ ಅಭಿನಯಗಳ ಹಿಂದಿದೆ ಕಷ್ಟಕೋಟಲೆ!

Rajendra Bhat K
  • ರಾಜೇಂದ್ರ ಭಟ್‌ ಕೆ.

ಬೊಮನ್ ಇರಾನಿ (Boman Irani) ಯಾರಿಗೆ ಗೊತ್ತಿಲ್ಲ ಹೇಳಿ? 3 ಈಡಿಯಟ್ಸ್ (3 idiots movie) ಸಿನೆಮಾದಲ್ಲಿ ಆತನು ಮಾಡಿದ ಎಡಬಿಡಂಗಿ ಶಿಕ್ಷಕ ವೈರಸ್ (ವೀರೂ ಸಹಸ್ರ ಬುದ್ಧೆ) ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ! ಅಂತಹ ಸವಾಲಿನ ಪಾತ್ರಗಳನ್ನು ಆಪೋಶನ ಮಾಡಿಕೊಂಡ ಹಾಗೆ ಅಭಿನಯಿಸುವ ಈ ಮಹಾನಟನ ಆರಂಭದ ಬದುಕು ಎಷ್ಟೊಂದು ಹೋರಾಟದಿಂದ (Motivation) ಕೂಡಿತ್ತು ಗೊತ್ತಾ?

ಓದುತ್ತಾ ಹೋಗಿ…

ಮುಂಬಯಿಯ ಒಂದು ಪಾರ್ಸಿ ಕುಟುಂಬದಲ್ಲಿ (1959) ಹುಟ್ಟಿದ್ದ ಇರಾನಿ ಹುಟ್ಟಿನಲ್ಲಿಯೇ ದುರದೃಷ್ಟವನ್ನು ಹೊದ್ದುಕೊಂಡು ಬಂದಿದ್ದರು ಅನ್ನಿಸುತ್ತೆ. ಅವರು ತಾಯಿಯ ಹೊಟ್ಟೆಯಲ್ಲಿ ಇದ್ದಾಗಲೇ ಅಪ್ಪನ ಸಾವು ಸಂಭವಿಸಿತ್ತು! ಅಮ್ಮ ಸಣ್ಣ ಸಣ್ಣ ಮಕ್ಕಳನ್ನು ತನ್ನ ಎದೆಗೆ ಅವುಚಿಕೊಂಡು ಮುಂಬೈಯಲ್ಲಿ ಒಂದು ಸಣ್ಣ ಬೇಕರಿ ಶಾಪ್ ನಡೆಸುತ್ತಿದ್ದರು. ಈ ನತದೃಷ್ಟ ಹುಡುಗ ಕೂಡ ಅಮ್ಮನ ಜೊತೆ ಸೇರಿ ಉಪ್ಪು, ಬ್ರೆಡ್, ಬನ್ನುಗಳನ್ನು ಮಾರಬೇಕಾಯಿತು.

ಬಾಲ್ಯದಲ್ಲಿ ಎದುರಾಗಿತ್ತು ಡಿಸ್ಲೆಕ್ಸಿಯಾ ಮತ್ತು ತೊದಲು ಮಾತು ಸಮಸ್ಯೆ!

ಬೊಮನ್ ಇರಾನಿಗೆ ಬಾಲ್ಯದಲ್ಲಿ ಕಲಿಕೆಯ ಅಸಾಮರ್ಥ್ಯದ ಡಿಸ್ಲೆಕ್ಸಿಯಾ (Dyslexia) ತೊಂದರೆ ಕಾಣಿಸಿಕೊಂಡಿತ್ತು. ಅದರ ಜೊತೆಗೆ ಮಾತು ತೊದಲುತ್ತಿತ್ತು! ಈ ಸಮಸ್ಯೆಗಳಿಂದ ಹುಡುಗ ತನ್ನ ಓರಗೆಯ ಹುಡುಗರಿಂದ ತುಂಬಾ ಅಪಮಾನಕ್ಕೆ ಒಳಗಾಗುತ್ತಿದ್ದನು. ಅದರ ಜೊತೆಗೆ ನಾಚಿಕೆ ಸ್ವಭಾವದ ಇರಾನಿಯಲ್ಲಿ ಆತ್ಮವಿಶ್ವಾಸ ತುಂಬಾ ಕಡಿಮೆ ಇತ್ತು. ಅಮ್ಮ ಇಡೀ ಕುಟುಂಬದ ಹೊಟ್ಟೆಪಾಡಿನ ಸವಾಲುಗಳ ನಡುವೆ ಈ ಹುಡುಗನ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ತುಂಬಾ ಆತಂಕ ಪಡುತ್ತಿದ್ದರು.

ತೊದಲು ಮಾತು ನಿವಾರಣೆಗೆ ಹುಡುಗನನ್ನು ಸಂಗೀತ ತರಗತಿಗೆ ಸೇರಿಸಲಾಯಿತು. ನಿಧಾನಕ್ಕೆ ಆ ಸಮಸ್ಯೆ ಪರಿಹಾರ ಆಯ್ತು. ಆತನು ಹಾಡುವಾಗ ಸಭಾಂಗಣದಲ್ಲಿ ಬೀಳುತ್ತಿದ್ದ ಚಪ್ಪಾಳೆಗಳನ್ನು ಅಮ್ಮ ರೆಕಾರ್ಡ್ ಮಾಡಿಕೊಂಡು ಬಂದು ಮಗನಿಗೆ ಪದೇ ಪದೇ ಕೇಳಿಸುತ್ತಿದ್ದರು. ಇದರಿಂದ ಹುಡುಗನ ಆತ್ಮವಿಶ್ವಾಸವು ವೃದ್ಧಿಯಾಯಿತು. ಅಮ್ಮನ ನೆರವಿನಿಂದ ಮುಂದೆ ಇರಾನಿ ಡಿಸ್ಲೆಕ್ಸಿಯಾ ಸಮಸ್ಯೆಯನ್ನು ಕೂಡಾ ಗೆದ್ದರು ಅಂದರೆ ಅದು ದೊಡ್ಡ ಸಾಧನೆ!

ಅಮ್ಮನ ನೆರವಿಗೆ ಹತ್ತಾರು ಸಣ್ಣ ಸಣ್ಣ ಉದ್ಯೋಗ

ಅಮ್ಮನನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಇರಾನಿ ಆಕೆಗೆ ಸಹಾಯ ಮಾಡಲು ನಿರ್ಧರಿಸಿ ಹತ್ತಾರು ಉದ್ಯೋಗಗಳನ್ನು ಮಾಡುತ್ತಾನೆ. ಬ್ರೆಡ್, ಬನ್ನು, ಟೀ ಮಾರುವುದರ ಜೊತೆಗೆ ತಾಜ್ ಹೋಟೆಲಿನಲ್ಲಿ ವೈಟರ್ ಆಗಿ ಆತ ಕೆಲಸ ಮಾಡಬೇಕಾಯಿತು. ಒಂದು ಸಣ್ಣ ಕ್ಯಾಮೆರಾ ಖರೀದಿ ಮಾಡಿ ಫೋಟೋಗ್ರಾಫರ್ ಆಗಿ ಕೂಡ ಒಂದಷ್ಟು ದುಡಿಯುವ ಪ್ರಯತ್ನ ನಡೆಯಿತು. ಈ ಮಧ್ಯೆ ಅಮ್ಮ ಅಪಘಾತವಾಗಿ ಆಸ್ಪತ್ರೆಗೆ ಸೇರಿದಾಗ ಎಲ್ಲ ಉದ್ಯೋಗಗಳನ್ನು ಬಿಟ್ಟು ಮತ್ತೆ ಅಮ್ಮನ ಬೇಕರಿ ನಡೆಸುವ ಹೊಣೆಯನ್ನು ಇರಾನಿ ಹೊರಬೇಕಾಯಿತು.

ಆತನ ಒಳಗಿದ್ದ ಕಲಾವಿದ ಹೊರಬರಲು ದಾರಿ ಹುಡುಕುತ್ತಿದ್ದ!

ಮನೆಯ ನೂರಾರು ಸಮಸ್ಯೆಗಳ ಮಧ್ಯೆ ಕೂಡ ಆತನ ಒಳಗಿದ್ದ ಕಲಾವಿದನು ಹೊರಬರಲು ದಾರಿಗಳನ್ನು ಹುಡುಕುತ್ತಲೇ ಇದ್ದ ಅನ್ನಿಸುತ್ತದೆ. ಈ ಸಾಂಸಾರಿಕ ಜಂಜಡಗಳ ನಡುವೆ ಆತ ನೂರಾರು ಜಾಹೀರಾತುಗಳಲ್ಲಿ ಬಿಡುವು ಮಾಡಿಕೊಂಡು ಅಭಿನಯಿಸಿದ. ಡಬ್ಬಿಂಗ್ ಕಲಾವಿದನಾಗಿ ಗುರುತಿಸಿಕೊಂಡ. ಸಣ್ಣ ಬಜೆಟಿನ ಶಾರ್ಟ್ ಫಿಲಮಗಳಲ್ಲಿ ಕೂಡ ಅಭಿನಯಿಸಿದನು.

ಅಂತಹ ಒಂದು ಶಾರ್ಟ್ ಫಿಲಂನಲ್ಲಿ ಬೊಮನ್ ಇರಾನಿಯ ಅಭಿನಯವನ್ನು ಮೆಚ್ಚಿಕೊಂಡ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಆತನನ್ನು ಆಡಿಶನಗಾಗಿ ಕರೆದನು. ಬೊಮನ್ ಇರಾನಿ ಸಲೀಸಾಗಿ ಅಭಿನಯ ಮಾಡುವುದನ್ನು ಕಂಡು ತನ್ನ ಮುಂದಿನ ಹಿಂದೀ ಸಿನೆಮಾ ‘ಲಗೆ ರಹೋ ಮುನ್ನಾಭಾಯಿ ‘ಯಲ್ಲಿ ಬಹಳ ಮುಖ್ಯವಾದ ಮೆಡಿಕಲ್ ಕಾಲೇಜಿನ ಡೈರೆಕ್ಟರ್ ಪಾತ್ರವನ್ನು ನೀಡಿದರು. ಆ ಪಾತ್ರವು ಇರಾನಿಯವರಿಗೆ ಹೇಳಿ ಮಾಡಿಸಿದ ಹಾಗಿತ್ತು ಮತ್ತು ಭಾರೀ ಪ್ರಸಿದ್ಧಿ ತಂದುಕೊಟ್ಟಿತು. ಮುಂದೆ ತೆರೆಗೆ ಬಂದದ್ದು 3 ಈಡಿಯಟ್ ಸಿನೆಮಾದ ವೈರಸ್ ಪಾತ್ರ, ಅದು ಜಗತ್ತನ್ನೇ ಗೆದ್ದಿತ್ತು.

ಮೊದಲ ಸಿನೆಮಾ ಮಾಡುವಾಗ ಬೊಮನ್ ವಯಸ್ಸು 42 ದಾಟಿತ್ತು!

ಬಾಲ್ಯ ಮತ್ತು ಯೌವ್ವನವನ್ನು ಸಮಸ್ಯೆಗಳ ನಡುವೆಯೇ ಕಳೆದ ಬೊಮನ್ ಇರಾನಿ ಮೊದಲ ಸಿನೆಮಾದಲ್ಲಿ ಅಭಿನಯಿಸುವಾಗ ವರ್ಷ 42 ದಾಟಿತ್ತು! ಆತ ಮೊದಲ ಸಿನೆಮಾ ಮುನ್ನಾಭಾಯಿ MBBSಗೆ ಪಡೆದ ಸಂಭಾವನೆಯು ಕೇವಲ 2 ಲಕ್ಷ ಅಂದರೆ ನಂಬೋದು ಕಷ್ಟ ಆದೀತು!

ಆದರೆ ಮುಂದೆ ಆತ ಅಭಿನಯಿಸಿದ ಪ್ರತೀಯೊಂದು ಸಿನೆಮಾ ಕೂಡ ಬ್ಲಾಕ್ ಬಸ್ಟರ್ ಆದವು! ತನ್ನ ಪ್ರತೀಯೊಂದು ಪಾತ್ರಕ್ಕೂ ಕಾಮಿಕ್ ಟಚ್ ಕೊಡುತ್ತಾ, ತನ್ನ ವಿಶೇಷವಾದ ಬಾಡಿ ಲ್ಯಾಂಗ್ವೇಜ್ ಮೂಲಕ ನಗಿಸುವ, ಭರ್ಜರಿ ಮನರಂಜನೆ ನೀಡುವ ಬೊಮನ್ ಇರಾನಿ ಈ 22 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಹಿಂದಿ, ಮರಾಠಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಸಿನೆಮಾ ನಿರ್ದೇಶನ, ನಿರ್ಮಾಣ ಕೂಡ ಮಾಡಿದ್ದಾರೆ.

ಲಗೆ ರಹೋ ಮುನ್ನಾಭಾಯಿ, ಹೌಸ್ ಫುಲ್, ನೋ ಎಂಟ್ರಿ, ವೀರ್ ಝರಾ, ಖೋಸ್ಲಾ ಕಾ ಘೋಸ್ಲಾ, ಜಾಲಿ LLB , ಪಿಕೆ, ಸಂಜು, ಡಾನ್, ವೀರ್ ಝರಾ, 83….ಹೀಗೆ ಸಾಗುತ್ತದೆ ಅವರು ಅಭಿನಯಿಸಿದ ಸಕ್ಸೆಸ್ ಸಿನೆಮಾಗಳ ಪಟ್ಟಿ. ಪ್ರತೀಯೊಂದು ಪಾತ್ರವನ್ನು ಅದ್ಭುತವಾಗಿ ಕೆತ್ತಿಕೊಡುವ ಶ್ರೇಷ್ಟ ಕಲಾವಿದ ಬೊಮನ್ ಇರಾನಿ ಎಂಬ ಮಾತು ನೂರಕ್ಕೆ ನೂರು ನಿಜ!

ಬೊಮನ್ ಇರಾನಿ ಈಗ ಬಾಲಿವುಡ್‌ನ ಅನಿವಾರ್ಯ ನಟ!

ಪೋಷಕ ನಟ, ಕಾಮಿಡಿ, ವಿಲನ್…ಹೀಗೆ ಎಲ್ಲಾ ಪಾತ್ರಗಳನ್ನು ಸಲೀಸಾಗಿ ಅಭಿನಯಿಸಿ ಗೆದ್ದಿರುವ ಬೊಮನ್ ಇರಾನಿ ಅವರ ವರ್ಥ್ ಈಗ 12 -15 ಮಿಲಿಯನ್ ಡಾಲರ್ ತಲುಪಿದೆ ಎನ್ನುತ್ತದೆ ಮಾಧ್ಯಮಗಳ ವರದಿ. ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಹಾಸ್ಯನಟ ಮೊದಲಾದ ಫಿಲಂ ಫೇರ್ ಪ್ರಶಸ್ತಿಗಳನ್ನು ಕೂಡ ಅವರು ಗೆದ್ದಿದ್ದಾರೆ.

ಈಗ ಹೇಳಿ ಬೊಮನ್ ಇರಾನಿ ಬದುಕು ಆತನ ಸಿನಿಮಾಗಳಿಗಿಂತ ಹೆಚ್ಚು ರೋಚಕ ಆಗಿದೆಯಾ?

ಈ ಬರಹ ಓದಿ: Infosys: ಸ್ಫೂರ್ತಿಪಥ ಅಂಕಣ: ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಯುವಕ ಐಟಿ ಸಾಮ್ರಾಜ್ಯವನ್ನೇ ಕಟ್ಟಿದರು!

Leave a Reply

Your email address will not be published. Required fields are marked *