Thursday, 12th December 2024

Motivation: ರಾಜೇಂದ್ರ ಭಟ್‌ ಅಂಕಣ: ಕಲ್ಪನೆಗೂ ಮೀರಿದ ಹೋರಾಟದ ಬದುಕು ಸಾಗಿಸಿದ ವೋಲೆ ಸೋಯಿಂಕಾ

Wole Soyinka

ಸ್ಫೂರ್ತಿಪಥ ಅಂಕಣ: ನೈಜೀರಿಯಾ ದೇಶದ ಈ ದಮನಿತ ಲೇಖಕನ ಬಯೋಪಿಕ್ ಸಿನೆಮಾ ಆತನೇ ಇನ್ನೂ ನೋಡಿಲ್ಲ!

Rajendra Bhat K
  • ರಾಜೇಂದ್ರ ಭಟ್ ಕೆ.

Motivation: ಅಕಿನ್ ವಾಂಡೆ ಒಲುವಿಲೇ ಸೊಯೀಂಕಾ (Wole Soyinka) ಯಾರು ಎಂದು ಗೂಗಲ್ ಸರ್ಚ್ ಮಾಡಿ. ನಿಮಗೆ ಥಟ್ಟನೆ ದೊರೆಯುವ ಉತ್ತರ ನೊಬೆಲ್ ಬಹುಮಾನ (Nobel Award) ಪಡೆದ ಮೊಟ್ಟಮೊದಲನೇ ಕಪ್ಪು ವರ್ಣದ ಸಾಹಿತಿ ಎಂದು! ಆತನ ಬದುಕು ಆತನ ಬರವಣಿಗೆಯಷ್ಟೇ ಪ್ರಖರವಾಗಿದೆ ಮತ್ತು ಹೋರಾಟಗಳಿಂದ ಕೂಡಿದೆ.

ಆತನು ನೈಜೀರಿಯಾ ಸೆರೆಮನೆಯಲ್ಲಿ ಉಸಿರುಗಟ್ಟುತ್ತಿದ್ದ!

ಕಪ್ಪು ಚರ್ಮದವರು ಹೋರಾಟ ಮಾಡುವುದು, ಹೋರಾಟಕ್ಕೆ ಪ್ರಚೋದನೆ ಕೊಡುವುದು ಇದನ್ನು ಯಾವುದೇ ಸರ್ವಾಧಿಕಾರಿ ಆಫ್ರಿಕನ್ ಸರಕಾರ ಸಹಿಸಿಕೊಂಡ ಉದಾಹರಣೆ ಇದೆಯಾ? ದಶಕಗಳ ಹಿಂದೆ ನೈಜೀರಿಯಾದಲ್ಲಿ ಕ್ಷೋಭೆ ಭುಗಿಲೆದ್ದಾಗ ಆತನು ಶೋಷಿತರ ಪರವಾಗಿ ನಿಂತದ್ದೆ ತಪ್ಪು ಎಂದಿತು ನೈಜಿರಿಯಾ ಸರಕಾರ! ಪರಿಣಾಮವಾಗಿ ಆತನಿಗೆ ರಾಜಕೀಯ ಖೈದಿಯ ಹಣೆಪಟ್ಟಿ. 22 ತಿಂಗಳು ಜೈಲುವಾಸ.

ಆ ಜೈಲಿಗೆ ಕಿಟಕಿ ಕೂಡ ಇರಲಿಲ್ಲ. ಪೂರ್ತಿ ಕತ್ತಲೆಯ, ಉಸಿರುಗಟ್ಟುವ ಕೋಣೆಯಲ್ಲಿ ಆತನನ್ನು ಸರಕಾರ ಬಂಧಿಸಿತ್ತು. ಬರೆಯಲು ಪೆನ್, ಪುಸ್ತಕ ಬೇಕು ಅಂದಾಗ ಸರಕಾರ ನಿರಾಕರಣೆ ಮಾಡಿತ್ತು. ಆತನ ಒಳಗಿರುವ ಬೆಂಕಿಯನ್ನು ತಣಿಸುವ ಹಟ ಸರಕಾರಕ್ಕೆ!

ಆದರೆ ಅತ್ಯಂತ ಕ್ರಿಯಾಶೀಲವಾದ ಮನಸ್ಸು ಕೇಳಬೇಕಲ್ಲ?

ಜೈಲಿನ ಅನ್ನದಲ್ಲಿ ಹುದುಗಿದ್ದ ಮಾಂಸದಲ್ಲಿ ಇದ್ದ ಎಲುಬಿನ ತುಂಡುಗಳೇ ಆತನಿಗೆ ಲೇಖನಿ ಆಯ್ತು! ಅದರಿಂದಲೇ ತಯಾರಾದ ಕೃತಕ ಬಣ್ಣಗ್ಗಳೇ ಶಾಯಿ ಆಯಿತು! ಟಾಯ್ಲೆಟ್ ಬಳಕೆಗೆ ಇಟ್ಟಿದ್ದ ಟಿಶ್ಯೂ ಪೇಪರ್ ಕಾಗದ ಆಯ್ತು! ಇಷ್ಟನ್ನೇ ಬಳಕೆ ಮಾಡಿಕೊಂಡು ಆತ ದಿನವೂ ಟಿಪ್ಪಣಿಗಳನ್ನು ಮಾಡುತ್ತಾ ಹೋದನು. ಆ ಟಿಪ್ಪಣಿಗಳನ್ನು ಜೈಲು ಅಧಿಕಾರಿಗಳ ಕಣ್ಣಿಂದ ತಪ್ಪಿಸಿಕೊಳ್ಳುವ ಸವಾಲು ಸಣ್ಣದಾಗಿರಲಿಲ್ಲ. ಸೆರೆಮನೆಯಿಂದ ಹೊರಬಂದ ನಂತರ ಆ ಟಿಪ್ಪಣಿಗಳೇ ಪುಸ್ತಕದ ರೂಪ ಪಡೆದವು.

THE MAN DIED: THE PRISON DIARY, ಈಗ ಜಗತ್ತನ್ನು ಗೆದ್ದ ಪುಸ್ತಕ!

ಜೈಲಿನ ಒಳಗಿನ ಟಿಪ್ಪಣಿಗಳ ಒಟ್ಟು ಸಾರಾಂಶವೇ ಮೇಲಿನ ಪುಸ್ತಕ! ಅದೀಗ ಜಗತ್ತಿನ ಬೆಸ್ಟ್ ಸೆಲ್ಲರ್ ಪುಸ್ತಕಗಳಲ್ಲಿ ಒಂದು!

ಆ ಕೃತಿಯಲ್ಲಿ ಇರುವ ಪ್ರತೀ ಅಕ್ಷರದಲ್ಲಿ ಆ ಲೇಖಕನ ಆಕ್ರೋಶದ ಬೆಂಕಿ ಇದೆ! ದಮನ ಮಾಡಲು ಹೊರಟ ಸರಕಾರ ಮತ್ತು ಪ್ರಭುತ್ವಗಳ ವಿರುದ್ಧ ಗಟ್ಟಿ ಧ್ವನಿ ಇದೆ! ಕಪ್ಪುವರ್ಣದವರ ಬದುಕಿನ ಸಂಸ್ಕೃತಿಯ ವೈಭವೀಕರಣ ಇದೆ! ಸೋಯೀಂಕ ಎಂಬ ಶ್ರೇಷ್ಟ ಲೇಖಕನ ಸೃಜನಶೀಲ ಬರವಣಿಗೆ ಇದೆ.

ಇದೀಗ ಅದೇ ಪುಸ್ತಕವು ಅದೇ ಹೆಸರಿನಲ್ಲಿ ಸಿನೆಮಾ ಆಗಿ ಬಂದಿದೆ. ಅದು ಜಗತ್ತಿನಾದ್ಯಂತ ಸಂಚಲನದ ಅಲೆಗಳನ್ನು ಸೃಷ್ಟಿ ಮಾಡುತ್ತಿದೆ. ಆ ಕಥೆಯ ಲೇಖಕರಾದ ಸೊಯೆಂಕ ಆ ಪುಸ್ತಕದ ಮೂಲಕ ಲೋಕವಿಖ್ಯಾತಿ ಪಡೆದಿದ್ದಾರೆ.

ಅವರ ಸಿನಿಮಾ ಅವರೇ ನೋಡಿಲ್ಲ, ಯಾಕೆ?

ನನ್ನ ಬದುಕಿನ ಹೋರಾಟದ ಸಿನೆಮಾ ನಾನು ನೋಡಲು ಬಯಸುವುದಿಲ್ಲ ಎಂದವರು ಹೇಳಿದ್ದಾರೆ. ಏಕೆಂದರೆ ನನ್ನ ಬದುಕಿನ ಕ್ರೂರ ದಿನಗಳು ನನ್ನ ಕಣ್ಣ ಮುಂದೆ ಹಾದುಹೋಗುವುದನ್ನು ನಾನು ಸಹಿಸುವುದಿಲ್ಲ ಎನ್ನುವುದು ಅವರು ಕೊಡುವ ಕಾರಣ.

ನೈಜೀರಿಯಾದ ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬ ಶಿಕ್ಷಕನ ಮಗನಾಗಿ ಹುಟ್ಟಿದ ಸೋಯೆಂಕ ಅವರು ಎರೂಬಾ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಇಬುದನ್ ವಿವಿಯ ಮೂಲಕ ಅವರು ಇಂಗ್ಲೀಷ್ ಸಾಹಿತ್ಯವನ್ನು ಚಂದವಾಗಿ ಅಧ್ಯಯನ ಮಾಡಿವರು. ರಂಗಭೂಮಿಯ ಶಿಕ್ಷಣ ಕೂಡ ಪಡೆದವರು. ಅದರ ಪ್ರಭಾವದಿಂದ ಅವರು A Stamp Dwellars, A Lion and the Jewels, A dance of the forest ಪ್ರಮುಖವಾದ ನಾಟಕಗಳನ್ನು ಬರೆದರು. ಎಲ್ಲವೂ ನೈಜೀರಿಯಾ ಸರಕಾರದ ಮುಖವಾಡವನ್ನು ಕಳಚಿ ನಿವಾಳಿಸಿ ಎಸೆಯುವ ವಿಡಂಬನೆಯನ್ನು ಹೊಂದಿವೆ! ಸರ್ವಾಧಿಕಾರಿ ಸರಕಾರದ ಭ್ರಷ್ಟ ಮಂತ್ರಿಗಳಿಗೆ ತಪರಾಕಿ ಇದೆ!

ನಾನು ಬರೆಯೋದು ಜೀವನದ ಅನುಭವಗಳಿಂದ, ಕಲ್ಪಿಸಿಕೊಂಡು ಅಲ್ಲ!

ಈ ಮುದುಕ ಹೇಳಿದ ಸ್ಟ್ರಾಂಗ್ ಮಾತಂದರೆ ಇದು! ಅವರ ವಯಸ್ಸೀಗ 92 ವರ್ಷ. ಒಮ್ಮೆ ಕ್ಯಾನ್ಸರ್ ಬಂದರೂ ಅವರನ್ನು ಹಿಡಿದು ಅಲುಗಾಡಿಸಲು ಆಗಲಿಲ್ಲ. ಈಗಲೂ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಅವರು ತನ್ನ ಜನರನ್ನು ಮೇಲಕ್ಕೆತ್ತಲು ದಿನವೂ ಶ್ರಮಿಸುತ್ತಿದ್ದಾರೆ. ಭಾರತದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಾಡಿದ್ದನ್ನೇ ಅವರದೇ ಮಿತಿಯಲ್ಲಿ ಆ ಶ್ರೇಷ್ಠ ಲೇಖಕ ನೈಜೀರಿಯಾದಲ್ಲಿ ಮಾಡಿದ್ದಾರೆ. ಅವರಿಗೆ ಈಗ ನೂರಾರು ಆರೋಗ್ಯದ ಸಮಸ್ಯೆಗಳು ಇವೆ. ಒಂದು ಸಣ್ಣ ಹಳ್ಳಿಯಲ್ಲಿ ತನ್ನ ಮೊಮ್ಮಕ್ಕಳ ಜೊತೆಗೆ ಬದುಕುತ್ತಿರುವ ಈ ಅಜ್ಜ ಹೇಳಿದ ಈ ಕೆಳಗಿನ ಮಾತುಗಳು ಎಲ್ಲರಿಗೂ ಅರ್ಥ ಆದರೆ ಸಾಕು.

ಕಪ್ಪು ಜನರು ಕ್ಷಮಾಶೀಲರು!

ಕಪ್ಪು ಜನರು ಸಂತೆಯಲ್ಲಿ ಪಶುಗಳ ಹಾಗೆ ಮಾರಾಟ ಆಗುವುದನ್ನು ಯಾರೂ ಸಹಿಸಲು ಸಾಧ್ಯವೇ ಇಲ್ಲ. ಅವರಿಗೆ ಸ್ವಾಭಿಮಾನದ ಬದುಕು ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಅದು ನೀವು ನೀಡುವ ಭಿಕ್ಷೆ ಅಲ್ಲ. ಇದನ್ನು ಹೇಳುವಾಗ ನನ್ನ ಸ್ವರ ನಡುಗುವುದಿಲ್ಲ. ನಾನು ಈ ದೌರ್ಜನ್ಯವನ್ನು ನನ್ನ ಅಜ್ಜನ ಕಾಲದಿಂದಲೇ ನೋಡುತ್ತಾ ಬರುತ್ತಿದ್ದೇನೆ. ನಾನು ನನ್ನ ನಾಟಕ, ಕಾವ್ಯ, ಕಾದಂಬರಿಗಳ ಮೂಲಕ ಅದನ್ನೇ ಜಗತ್ತಿಗೆ ಹೇಳಲು ಹೊರಟಿದ್ದೇನೆ. ಸತ್ಯವು ನಾನು ಆರಿಸಿಕೊಂಡ ದಾರಿ. ಸತ್ಯವು ಎಂದಿಗೂ ಸೋಲಲು ಸಾಧ್ಯವೇ ಇಲ್ಲ ಎಂದು!

ಸೋಯೀಂಕ ಅವರ ಹೋರಾಟಕ್ಕೆ ಒಂದು ಜೈ ಹೇಳಿ ಅವನ ಬಯೋಪಿಕ್( The Man died – The prison dairy) ಖಂಡಿತವಾಗಿ ನೋಡಿ ಆಯ್ತಾ.

ಇದನ್ನೂ ಓದಿ: ರಾಜೇಂದ್ರ ಭಟ್‌ ಅಂಕಣ: ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ ಗುಂಡಪ್ಪ ವಿಶ್ವನಾಥ್!