ರಾಷ್ಟ್ರೀಯ ದಾಖಲೆ ಬರೆದ ಅತ್ಯಂತ ಜನಪ್ರಿಯ ಕ್ವಿಜ್ ಶೋದ ಕೀರ್ತಿ ಪಡೆದ ಡಾ.ನಾ ಸೋಮೇಶ್ವರ
- ರಾಜೇಂದ್ರ ಭಟ್ ಕೆ.
ಸ್ಫೂರ್ತಿಪಥ ಅಂಕಣ: ಚಂದನ ವಾಹಿನಿಯಲ್ಲಿ (Chandana Vahini) ವರ್ಷಾನುಗಟ್ಟಲೆ ಪ್ರಸಾರವಾದ ಅತ್ಯಂತ ಜನಪ್ರಿಯ ಕ್ವಿಜ್ ಶೋ (Quiz show) ಆದ ‘ಥಟ್ ಅಂತ ಹೇಳಿ’ (that antha Heli) ನೋಡದವರು ಯಾರಾದರೂ ಕರ್ನಾಟಕದಲ್ಲಿ ಇರಲು ಸಾಧ್ಯವೇ ಇಲ್ಲ! ಲಿಮ್ಕಾ ಬುಕ್ ಆಫ್ ರೆಕಾರ್ಡ್ಸನಲ್ಲಿ (Limca Book Of Records) ಸ್ಥಾನ ಪಡೆದ ಈ ಕ್ವಿಜ್ ಶೋ ಜನಪ್ರಿಯತೆಗೆ (Motivation) ಕಾರಣ ಅದರ ನಿರೂಪಕರು!
ಡಾ.ನಾ.ಸೋಮೇಶ್ವರ – ಆ ಶೋದ ಯಶಸ್ವೀ ನಿರೂಪಕರು.
ಚಂದನ ವಾಹಿನಿಯಲ್ಲಿ 2002ರಿಂದ ನಿರಂತರವಾಗಿ ವಾರಕ್ಕೆ 5 ದಿನ ಪ್ರಸಾರವಾಗುತ್ತಿರುವ ‘ಥಟ್ ಅಂತ ಹೇಳಿ’ ಜನಪ್ರಿಯ ಟಿವಿ ಕಾರ್ಯಕ್ರಮದ ಮೋಡಿಗೆ ಒಳಗಾಗದವರು ಯಾರೂ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಅದರ ರೂವಾರಿ, ಕ್ವಿಜ್ ಮಾಸ್ಟರ್ ಡಾ. ನಾರಪ್ಪ ಸೋಮೇಶ್ವರ ಅವರು.
ಡಾ.ಸೋಮೇಶ್ವರ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ (14 ಮೇ 1955). ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು ಅವರು ಎದುರಿಸಿದ್ದರು. ಅದಕ್ಕೆ ಅವರು ಕಂಡುಕೊಂಡ ಪರಿಹಾರಗಳು ಎರಡು. ಪತ್ರಿಕೆಗೆ ವಿಜ್ಞಾನದ ಲೇಖನಗಳನ್ನು ಮತ್ತು ಚಿತ್ರಗಳನ್ನು ಬರೆಯುವುದು ಒಂದು ಪರಿಹಾರ. ಇನ್ನೊಂದು ತನಗಿಂತ ಕೆಳಗಿನ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುವುದು. ಅವರು MBBS ಪದವಿಯನ್ನು ಸಂಪಾದನೆ ಮಾಡಿದ್ದು ಪ್ರತಿಷ್ಠಿತವಾದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ. ವೈದ್ಯರಾಗಿ ಅವರ ಪ್ರಾಕ್ಟೀಸ್ ಚೆನ್ನಾಗಿಯೇ ಇತ್ತು. ಅದರ ಜೊತೆಗೆ ಬಿಡುವಿನ ಅವಧಿಯಲ್ಲಿ ಅವರು ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯಲು ಆರಂಭಿಸಿದರು.
‘ಜೀವ ನಾಡಿ’ಎಂಬ ವೈದ್ಯಕೀಯ ವಿಜ್ಞಾನದ ಜನಪ್ರಿಯ ಮಾಸ ಪತ್ರಿಕೆಯನ್ನು ಪ್ರಧಾನ ಸಂಪಾದಕರಾಗಿ ಅವರು ಮುನ್ನಡೆಸಿದರು. ವೈದ್ಯಕೀಯ ವಿಜ್ಞಾನದ ಜ್ಞಾನವನ್ನು ಜನಸಾಮಾನ್ಯರ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅವಿರತ ಪ್ರಯತ್ನ ಅವರದ್ದು! ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನದ 41 ಪುಸ್ತಕಗಳನ್ನು ಅವರು ಈಗಾಗಲೇ ಬರೆದಿದ್ದಾರೆ. ಇನ್ನೂ ಐದು ಪುಸ್ತಕಗಳು ಪ್ರಕಾಶನದ ಹಂತದಲ್ಲಿವೆ. ಅವರ ಸಾವಿರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೈದ್ಯಕೀಯ ವಿಷಯಗಳ ಬಗ್ಗೆ 1200 ಟಿವಿ ಲೈವ್ ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ. 75 ರೇಡಿಯೋ ಕಾರ್ಯಕ್ರಮ ನೀಡಿದ್ದಾರೆ. ಕನ್ನಡ ನಾಡಿನಾದ್ಯಂತ ಸಂಚರಿಸಿ ಸಾವಿರಾರು ವೇದಿಕೆಗಳಲ್ಲಿ ಕನ್ನಡ ಸಾಹಿತ್ಯ ಮತ್ತು ವೈದ್ಯಕೀಯ ವಿಜ್ಞಾನದ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ.
ನೂರಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು
ಅವರಿಗೆ ಅತ್ಯುತ್ತಮ ವೈದ್ಯರಿಗೆ ನೀಡುವ ಡಾಕ್ಟರ್ ಬಿ. ಸಿ. ರಾಯ್ ಪ್ರಶಸ್ತಿಯು ದೊರೆತಿದೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರೆತಿದೆ. ಕರ್ನಾಟಕದ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಅವರಿಗೆ ದೊರೆತಿದೆ. ‘ಏಳು ಸುತ್ತಿನ ಕೋಟೆ ಯಲ್ಲಿ ಎಂಟು ಕೋಟಿ ಬಂಟರು’ ಮತ್ತು ‘ಜ್ಞಾನೇಂದ್ರಿಯಗಳು ಮತ್ತು ನಮ್ಮ ಒಡಲಿನ ವಿಸರ್ಜನಾ ಅಂಗಗಗಳು’ ಅವರ ಅತ್ಯಂತ ಜನಪ್ರಿಯವಾದ ಪುಸ್ತಕಗಳು. ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಖಂಡಿತವಾಗಿಯೂ ಡಾಕ್ಟರ್ ನಾ. ಸೋಮೇಶ್ವರ ಅವರಿಗೆ ದೊರೆಯಬೇಕು. ಕನ್ನಡ ಸಾಹಿತ್ಯವನ್ನು ತುಂಬಾ ಚೆನ್ನಾಗಿ ಓದಿಕೊಂಡಿರುವ ಅವರಿಗೆ ಕನ್ನಡದ ಭಾಷೆಯ ಮೇಲಿರುವ ಹಿಡಿತ ಅದ್ಭುತ ಎಂದೇ ಹೇಳಬಹುದು.
ಟ್ರೆಂಡ್ ಸೆಟ್ಟರ್ ಟಿವಿ ಕ್ವಿಝ್ ಶೋ – ‘ಥಟ್ ಆಂತ ಹೇಳಿ’
ಚಂದನ ವಾಹಿನಿಯಲ್ಲಿ ರಾತ್ರಿ 9-30ಕ್ಕೆ ಪ್ರಸಾರವಾಗುವ ಈ ಕ್ವಿಜ್ ಕಾರ್ಯಕ್ರಮವು 2002 ಜನವರಿ 4ರಂದು ಆರಂಭವಾಯಿತು. ಪ್ರತೀ ವಾರವೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಪ್ರೈಮ್ ಸಮಯದಲ್ಲಿ ಪ್ರಸಾರವಾಗುವ ಕ್ವಿಜ್ ಕಾರ್ಯಕ್ರಮ ಇದು. ಪ್ರತೀ ದಿನ ಮೂವರು ಸ್ಪರ್ಧಿಗಳು ರಾಜ್ಯದ ಮೂಲೆ ಮೂಲೆಗಳಿಂದ ಈ ಶೋದಲ್ಲಿ ಭಾಗವಹಿಸುತ್ತಾರೆ. ಶಿಕ್ಷಣ, ಸಂಸ್ಕೃತಿ, ವಿಜ್ಞಾನ, ಒಗಟು, ಪದಬಂಧ, ತಂತ್ರಜ್ಞಾನ, ನಾಡು ನುಡಿ, ಕನ್ನಡ ಸಾಹಿತ್ಯ ಮೊದಲಾದ ಹತ್ತು ಕ್ಷೇತ್ರಗಳ ಪ್ರಶ್ನೆಗಳು ಇರುತ್ತವೆ. ಆಡಿಯೋ ಮತ್ತು ವಿಡಿಯೋ ಸುತ್ತುಗಳು ಇರುತ್ತವೆ. ಸರಿ ಉತ್ತರ ಕೊಟ್ಟವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಉತ್ತಮ ಪುಸ್ತಕವನ್ನು ಬಹುಮಾನವಾಗಿ ನೀಡುವುದು ಈ ಕ್ವಿಜ್ ಕಾರ್ಯಕ್ರಮದ ವೈಶಿಷ್ಟ್ಯ. ಇದರಲ್ಲಿ ಬೇರೆ ಯಾವುದೇ ನಗದು ಬಹುಮಾನ ಇರುವುದಿಲ್ಲ. ಯಾವುದೇ ಪ್ರಾಯೋಜಕರು ಇಲ್ಲದೇ ನಡೆಯುವ ಟಿವಿ ಕಾರ್ಯಕ್ರಮ ಇದು.
ಕ್ವಿಜ್ ಮಾಸ್ಟರ್ ಆಗಿ ಡಾಕ್ಟರ್ ನಾ. ಸೋಮೇಶ್ವರ ಅವರ ನಿರೂಪಣೆಯೇ ಈ ಕಾರ್ಯಕ್ರಮದ ಜೀವಾಳ. 2012ರಲ್ಲಿ 1756 ಸಂಚಿಕೆಗಳನ್ನು ಪೂರ್ತಿ ಮಾಡುವ ಮೂಲಕ ಈ ಕ್ವಿಜ್ ಶೋ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಸ್ಥಾನವನ್ನು ಪಡೆಯಿತು! ಭಾರತದಲ್ಲಿ ಅದುವರೆಗೆ ಯಾವ ಟಿವಿ ಕ್ವಿಜ್ ಕಾರ್ಯಕ್ರಮವು ಇಷ್ಟೊಂದು ದೀರ್ಘ ಅವಧಿಗೆ ನಡೆದಿಲ್ಲ ಎನ್ನುವುದು ಅದರ ಜನಪ್ರಿಯತೆಗೆ ಸಾಕ್ಷಿ. ಸೋಮೇಶ್ವರ ಅವರು ನಗು ನಗುತ್ತಾ ನಿರೂಪಿಸುವ ಈ ಕಾರ್ಯಕ್ರಮದಲ್ಲಿ ಅವರು ಸ್ಪರ್ಧಿಗಳಿಗೆ ಧೈರ್ಯ ತುಂಬುವ ರೀತಿ, ಅತ್ಯಂತ ಸರಳವಾದ ಮತ್ತು ಹೃದ್ಯವಾದ ಭಾಷೆ, ಉತ್ತರಗಳ ಜೊತೆಗೆ ಅವರು ನೀಡುವ ಪೂರಕ ಮಾಹಿತಿಗಳು, ಎಲ್ಲರನ್ನೂ ಪುಸ್ತಕಗಳ ಓದಿನ ಕಡೆಗೆ ಕರೆದುಕೊಂಡು ಹೋಗುವ ರೀತಿ, ಎಲ್ಲಾ ಸ್ಪರ್ಧಿಗಳಿಗೆ ಸಮಾನವಾಗಿ ಅವಕಾಶ ನೀಡುವ ಮನೋಭಾವ, ತಪ್ಪು ಉತ್ತರ ಕೊಟ್ಟವರನ್ನೂ ಅಣಕಿಸದೆ ಬೆನ್ನು ತಟ್ಟುವ ರೀತಿ… ಇವೆಲ್ಲವೂ ಆ ಟಿವಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿವೆ. ಅವರ ಸ್ಥಳದಲ್ಲಿ ಬೇರೆ ಯಾರನ್ನೂ ಊಹೆ ಮಾಡಲೂ ಸಾಧ್ಯವಿಲ್ಲ ಎನ್ನುವುದು ಸೋಮೇಶ್ವರ ಅವರ ಖದರು!
4000+ ಶೋಗಳನ್ನು ದಾಟಿ ಮುಂದುವರೆದಿದೆ!
‘ಥಟ್ ಆಂತ ಹೇಳಿ ‘ ಕ್ವಿಜ್ ಕಾರ್ಯಕ್ರಮವು ಇತ್ತೀಚೆಗೆ 4000+ ಕಂತುಗಳನ್ನು ಪೂರೈಸಿ ಮುನ್ನಡೆದಿದೆ. ಭಾಗವಹಿಸಿದ ಸ್ಪರ್ಧಿಗಳ ಸಂಖ್ಯೆಯು ಅಂದಾಜು 12,000! ಕೇಳಿದ ಪ್ರಶ್ನೆಗಳ ಸಂಖ್ಯೆಯೇ 40,000ಕ್ಕಿಂತ ಅಧಿಕ! ಬಹುಮಾನವಾಗಿ ನೀಡಿದ ಪುಸ್ತಕಗಳ ಸಂಖ್ಯೆಯೇ ಹತ್ತಿರ ಹತ್ತಿರ 50,000! ಇದುವರೆಗೆ ಒಂದೇ ಒಂದು ವಿವಾದ, ತಪ್ಪು ಮಾಹಿತಿ ನುಸುಳದ ಶೋ ಅದು ಅನ್ನುವುದು ಅದರ ಇನ್ನೊಂದು ಹರಹು!
ಯಾವ ರೀತಿಯಿಂದ ನೋಡಿದರೂ ಅದು ದಾಖಲೆಯ ಶೋ ಅನ್ನುವುದು ನಿಜ. ಡಾ. ನಾ ಸೋಮೇಶ್ವರ ಅವರು ಕನ್ನಡದ ನಾಡು, ನುಡಿಯ ಅಭಿವೃದ್ಧಿಗೆ, ವೈದ್ಯಕೀಯ ವಿಜ್ಞಾನದ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡಿಗರ ಜ್ಞಾನವನ್ನು ವಿಸ್ತರಿಸುತ್ತಿರುವ ಅವರಿಗೆ ನಮ್ಮ ನಮನಗಳು.
ಹಾಗೆಯೇ ವಯಸ್ಸು 69 ದಾಟಿರುವ ಅವರು ಶತಕದ ಕಡೆಗೆ ಮುನ್ನಡೆಯಲಿ ಎನ್ನುವುದು ಕೂಡ ನಮ್ಮ ಪ್ರಾರ್ಥನೆ.
ಇದನ್ನೂ ಓದಿ: Motivation: ಸ್ಫೂರ್ತಿಪಥ ಅಂಕಣ: ಕಂಫರ್ಟ್ ವಲಯದಿಂದ ಹೊರಬನ್ನಿ!