Thursday, 19th September 2024

ಸ್ಫೂರ್ತಿಪಥ ಅಂಕಣ: ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟರವರೆಗೆ!

ನಾಡಿನ ಎಲ್ಲ ಮಹಾಗುರುಗಳಿಗೆ ಅವರದೇ ದಿನದ ಶುಭಾಶಯಗಳು

  • ರಾಜೇಂದ್ರ ಭಟ್‌ ಕೆ.

ಸ್ಫೂರ್ತಿಪಥ ಅಂಕಣ: ಗುರು ಎಂದರೆ ಭಾರ ಎಂದರ್ಥ. ಭೂಮಿಗೆ ಗುರುತ್ವ ಇರುವುದರಿಂದ ಭೂಮಿಯ ಮೇಲಿನ ಎಲ್ಲ ವಸ್ತುಗಳಿಗೆ ತೂಕ ಬಂದಿರುವುದು! ಹಾಗೆಯೇ ಸೌರವ್ಯೂಹದ ದೊಡ್ಡ ಗ್ರಹವೂ ಗುರುವೇ. ಹಾಗೆ ಗುರು ಅಂದರೆ ದೊಡ್ಡವನು ಎಂದು ಕೂಡ ಅರ್ಥ ಇದೆ.

ಅಹಂ ಭೋ ಅಭಿವಾದಯೆ!

ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿ ಆಗುವುದಕ್ಕಿಂತ ಮೊದಲು ಇದ್ದದ್ದೇ ಗುರುಕುಲ ಶಿಕ್ಷಣ ಪದ್ಧತಿ. ಅದರ ಮಹತ್ವದ ಬಗ್ಗೆ ಹಲವು ಲೇಖನಗಳನ್ನು ನಾನು ಹಿಂದೆ ಬರೆದಿದ್ದೇನೆ. ಪುರಾಣ ಕಾಲದಲ್ಲಿ ಪ್ರತೀಯೊಬ್ಬನ ಪರಿಚಯವು ಆರಂಭ ಆಗುತ್ತಿದ್ದದ್ದೇ – ನಾನು ಇಂಥಹವನ ಶಿಷ್ಯ ಎಂದು! ಉದಾಹರಣೆ ರಾಮ ತನ್ನ ಪರಿಚಯವನ್ನು ರಾಮಾಯಣದಲ್ಲಿ ಮಾಡುವುದು – ಅಹಂ ದಶರಥ ಪುತ್ರ ತಥಾ ವಿಶ್ವಾಮಿತ್ರ ಶಿಷ್ಯ ಇತಿ! ಶ್ರೀಕೃಷ್ಣ ದೇವರಿಗೂ ಒಬ್ಬ ಗುರು ಇದ್ದರು. ಅವರ ಹೆಸರು ಸಾಂದೀಪನಿ. ಭಾರತದ ಎಲ್ಲ ಮಹಾಪುರುಷರ ವಿಳಾಸ ಆರಂಭ ಆಗುತ್ತಿದ್ದದ್ದೆ ಒಬ್ಬ ಶ್ರೇಷ್ಠ ಗುರುವಿನ ಅಭಿದಾನದಿಂದ. ರಾಜಕುಮಾರ, ಮಂತ್ರಿಯ ಮಗ, ಸೇನಾಧಿಪತಿಯ ಮಗ ಎಲ್ಲರೂ ಏಳು ವರ್ಷಗಳ ಕಾಲ ಗುರುಕುಲದಲ್ಲಿ ಕಲಿತು ಬಂದವರೇ ಆಗಿರುತ್ತಿದ್ದರು!

ಗುರುಕುಲ ಶಿಕ್ಷಣ ಪದ್ಧತಿಯು ಜಗತ್ತಿನ ಅತೀ ಅದ್ಭುತವಾದ ಶಿಕ್ಷಣ ಪದ್ಧತಿ ಎಂದು ಅನೇಕ ವಿದೇಶದ ವಿದ್ವಾಂಸರು ಕೊಂಡಾಡಿದ್ದಾರೆ. ಜಗತ್ತಿನ ಅತ್ಯಂತ ಪುರಾತನ ಜ್ಞಾನದ ಕೇಂದ್ರಗಳಾದ ತಕ್ಷಶಿಲಾ, ನಳಂದಾ ಎಲ್ಲವೂ ಇದ್ದದ್ದು, ಬೆಳಗಿದ್ದು ಭಾರತದಲ್ಲಿಯೇ! ಅದೇ ರೀತಿ ಜಗತ್ತಿನ ಶ್ರೇಷ್ಠ ಗಣಿತಜ್ಞರಾದ ಆರ್ಯಭಟ, ವರಾಹಮಿಹಿರ, ಮಹಾವೀರ, ಭಾಸ್ಕರ ಇಂತಹವರ ಸಾಧನೆಯ ತೂಕವೇ ಇನ್ನೊಂದು ಮಟ್ಟ!

ಜ್ಞಾನದಲ್ಲಿ ಭಾರತಕ್ಕೆ ಸ್ಪರ್ಧೆಯೇ ಇರಲಿಲ್ಲ. ಹಾಗೆಯೇ ಭಾರತದ ಗುರುಪರಂಪರೆಗೆ ಆಕಾಶವೇ ಮಿತಿಯಾಗಿತ್ತು!

ಮಹಾಗುರುವಿಗೆ ಸಾಮ್ರಾಜ್ಯ ಕಟ್ಟುವ ಶಕ್ತಿ ಇತ್ತು!

ಭಾರತದ ಮಹಾ ಸಾಮ್ರಾಜ್ಯಗಳ ಇತಿಹಾಸಗಳನ್ನು ಗಮನಿಸಿದಾಗ ಅಲ್ಲೊಬ್ಬ ಹೊಳೆಯುವ, ದಾರಿ ತೋರುವ ಶಕ್ತಿಶಾಲಿ ಗುರು ನಮ್ಮ ಗಮನಕ್ಕೆ ಬರುತ್ತಾನೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ವಿದ್ಯಾರಣ್ಯರು ಪ್ರೇರಣೆ ನೀಡಿದ ಹಾಗೆ! ಶಿವಾಜಿಗೆ ಹಿಂದವೀ ಸಾಮ್ರಾಜ್ಯ ಸ್ಥಾಪನೆಗೆ ಸಮರ್ಥ ರಾಮದಾಸರು ಮಾರ್ಗದರ್ಶನ ಮಾಡಿದ ಹಾಗೆ! ಈ ಶ್ರೇಷ್ಠ ಗುರುಪರಂಪರೆಯು ಭಾರತದಲ್ಲಿ ಹಲವು ಸುವರ್ಣ ಸಾಮ್ರಾಜ್ಯಗಳನ್ನು ಸ್ಥಾಪಿಸಿತು. ಚಾಣಕ್ಯನಂತಹ ಗುರುಗಳು ತಮ್ಮ ಸಂಕಲ್ಪ ಮಾತ್ರದಿಂದ ಭಾರತದ ಇತಿಹಾಸವನ್ನು ಬೆಳಗಿದರು.

ಗುರುಶಿಷ್ಯ ಪರಂಪರೆಯಿಂದ ಕಲೆ, ಸಂಸ್ಕೃತಿಗಳು ಅರಳಿದವು.

ಭಾರತದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ಜಾನಪದ, ಆಧ್ಯಾತ್ಮ ಎಲ್ಲವೂ ಹರಿದುಬಂದದ್ದು ಶ್ರೇಷ್ಟವಾದ ಗುರುಶಿಷ್ಯ ಪರಂಪರೆಯಿಂದ! ಗುರುವಿನ ಆಶ್ರಯ ಮತ್ತು ತಿದ್ದುವಿಕೆಯಿಂದ ಮಾತ್ರ ಶಿಷ್ಯನ ಶಿಕ್ಷಣ ಪೂರ್ತಿ ಆಗುತ್ತದೆ ಎಂದು ನಂಬಿದವರು ನಮ್ಮ ಹಿರಿಯರು. ಕನ್ನಡ, ಸಂಸ್ಕೃತದ ಮಹಾಕವಿಗಳೆಲ್ಲರೂ ತಾವು ಇಂತಹವನ ಶಿಷ್ಯ ಎಂದು ಬಿಗುಮಾನವಿಲ್ಲದೇ ಘೋಷಿಸಿಕೊಂಡಿದ್ದಾರೆ. ಸಂಗೀತ, ನೃತ್ಯ ವಿದ್ವಾಂಸರು ತಾವು ಇಂತಹವರ ಶಿಷ್ಯ ಎಂದೇ ಇಂದಿಗೂ ಹೆಮ್ಮೆಯಿಂದ ಕರೆದುಕೊಳ್ಳುವವರು. ಹಿಂದುಸ್ತಾನಿ ಸಂಗೀತ ವಿದ್ವಾಂಸರು ತಾವು ಇಂತಹ ಘರಾಣೆಯಿಂದ ಬಂದವರು ಎಂದೇ ಎದೆಯುಬ್ಬಿಸಿ ಹೇಳಿಕೊಳ್ಳುತ್ತಾರೆ.

ಭೀಮಸೇನ್ ಜೋಶಿ ಅವರಂತಹ ಮಹಾನ್ ಕಲಾವಿದ ಅರಳಿದ್ದು ಹುಬ್ಬಳಿಯ ಸವಾಯಿ ಗಂಧರ್ವ ಅವರ ಗರಡಿಯಲ್ಲಿ. ತಮ್ಮ ಗುರುವಿನ ನೆನಪಿಗಾಗಿ ಹುಬ್ಬಳ್ಳಿಯಲ್ಲಿ ‘ಸವಾಯಿ ಗಂಧರ್ವ ಸಂಗೀತ ಮಹೋತ್ಸವ’ ಆರಂಭ ಮಾಡಿ ಮುನ್ನಡೆಸಿದವರು ಜೋಶಿಯವರು! ಅವರು ತಮ್ಮ ಗುರುಗಳನ್ನು ಎಂದಿಗೂ ಮರೆಯಲಿಲ್ಲ. ಬಾಲಮುರಳಿ ಕೃಷ್ಣ ಅಂತಹ ಮಹಾನ್ ಕಲಾವಿದರು ಹೊಸ ರಾಗಗಳನ್ನು ಅನ್ವೇಷಣೆ ಮಾಡಿ ತನ್ನ ಗುರುವಿಗೆ ಗುರುದಕ್ಷಿಣೆ ನೀಡಿದ್ದಾರೆ. ಇಂತಹ ನೂರಾರು ನಿದರ್ಶನಗಳು ನಮಗೆ ಸಾಧನಾ ಕ್ಷೇತ್ರಗಳಲ್ಲಿ ದೊರೆಯುತ್ತವೆ.

ಅಂತಹ ಮಹಾಗುರು ಇಂದು ತರಗತಿ ಕೋಣೆಯ ಮೇಷ್ಟ್ರು ಆದದ್ದು…

ಬ್ರಿಟಿಷ್ ಶಿಕ್ಷಣ ಪದ್ಧತಿಯ ಶಾಲೆಗಳು ಆರಂಭವಾದ ನಂತರ ಅದೇ ಗುರುಗಳು ಮೇಷ್ಟ್ರ ಮಟ್ಟಕ್ಕೆ ಬಂದಿರುವ ಚಿತ್ರಣವು ಇಂದು ನಮ್ಮ ಮುಂದಿದೆ. ಇಂದು ಅದೇ ಗುರು ತನ್ನ ಗುರುತ್ವವನ್ನು ಉಳಿಸಿಕೊಂಡಿದ್ದಾರೆಯೇ ಎಂಬುದನ್ನು ಸಮಾಜವೇ ನಿರ್ಧಾರ ಮಾಡಬೇಕು.

ಇಂದಿನ ಮೇಷ್ಟ್ರಿಗೆ ತಾನು ಬೋಧಿಸುವ ಸಿಲೆಬಸ್ ಆಯ್ಕೆ ಮಾಡುವ ಅಧಿಕಾರ ಇಲ್ಲ! ಪಠ್ಯ ಪುಸ್ತಕ ಯಾರೋ ಬರೆಯುತ್ತಾರೆ. ಬೋಧನೆಯ ವಿಧಾನ, ಪಠ್ಯಕ್ರಮ ಎಲ್ಲವನ್ನೂ ಯಾರೋ ನಿರ್ಧಾರ ಮಾಡುತ್ತಾರೆ. ಅದರಲ್ಲಿಯೂ ಬಡ ಮತ್ತು ಶ್ರೀಮಂತ ಶಾಲೆಗಳು ಎಂಬ ವರ್ಗೀಕರಣ ಬೇರೆ ಇದೆ.

ಬದುಕಿಗೆ ದಾರಿ ತೋರಿಸಬೇಕಾದ ಶಿಕ್ಷಣವು ಇಂದು ಮಗುವನ್ನು ಪರೀಕ್ಷೆಗೆ ಸಿದ್ಧಪಡಿಸಲು ಎಂದೇ ಸಂಕಲ್ಪಿತ ಆದಾಗ ತಮ್ಮ ಜ್ಞಾನ, ಗುರುತ್ವ ಯಾರಿಗೆ ಬೇಕು ಎಂದು ಕೇಳುವ ಮಟ್ಟಕ್ಕೆ ಕೆಲವು ಶಿಕ್ಷಕರೇ ಇಂದು ಬಂದಿದ್ದಾರೆ! ಯಾರ್ಯಾರ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿಯ ಬಗ್ಗೆ ನೊಂದು ನುಡಿಯುತ್ತಾರೆ. ಅಂತಹವರ ಮಧ್ಯೆ ಕೂಡ ಆಶಾವಾದಿಗಳಾದ, ಜ್ಞಾನವನ್ನು ಹರಡುವ, ತರಗತಿ ಕೋಣೆಗಳಲ್ಲಿ ಸಂತಸ ಹುಡುಕುವ ಅನೇಕ ಶಿಕ್ಷಕರು ಇದ್ದಾರೆ ಅನ್ನೋದು ಸಮಾಜದ ಭಾಗ್ಯ.

ಮುಂದೆ….?

ಈ ಅಂಕಣ ಓದಿ: Motivation: ಸ್ಫೂರ್ತಿಪಥ ಅಂಕಣ: ಕ್ರಿಕೆಟ್ ಮತ್ತು ಬದುಕಿನಲ್ಲಿ ಅನಿಶ್ಚಿತತೆಯೇ ಸುಂದರ!

Leave a Reply

Your email address will not be published. Required fields are marked *